ಮಂಗಳವಾರ, ಏಪ್ರಿಲ್ 7, 2026

ಅವಳಿನ್ನೂ ಅಲ್ಲೇ ಉಳಿದಿದ್ದಾಳೆ (ಅವಳ ಕವಿತೆಗಳು - 1)


ಅವಳಿನ್ನೂ ಅಲ್ಲೇ ಉಳಿದಿದ್ದಾಳೆ

ಅಲ್ಲಿಯೇ ಉಳಿಯಲೂಬಹುದೇನೋ..


ಮುಖವಾಡ ಹಾಕಲು ಬಾರದಕ್ಕೆ

ಮುಖವಾಡ ಕಳಚಲು ಗೊತ್ತಿಲ್ಲದ್ದಕ್ಕೆ

ಅವಳಿನ್ನೂ ಅಲ್ಲೇ ಉಳಿದಿದ್ದಾಳೆ


ಬಣ್ಣ ಬಣ್ಣದ ಮಾತನಾಡಲು ಕಲಿಯದ್ದಕ್ಕೆ

ಬಣ್ಣದ ಮಾತುಗಳ ಬಂಡವಾಳ ಗೊತ್ತಾಗಿದ್ದಕ್ಕೆ

ಅವಳಿನ್ನೂ ಅಲ್ಲೇ ಉಳಿದಿದ್ದಾಳೆ


ಒಳ್ಳೆಯತನದಲ್ಲಿಯೇ ನಂಬಿಕೆ ಇಟ್ಟಿದ್ದಕ್ಕೆ

ಕೆಟ್ಟತನ ನಾಶವಾಗುವುದೆಂದು ನಂಬಿದ್ದಕ್ಕೆ

ಅವಳಿನ್ನೂ ಅಲ್ಲೇ ಉಳಿದಿದ್ದಾಳೆ


ಪ್ರಾಮಾಣಿಕತೆಯನ್ನೇ ಅನುಸರಿಸಿದ್ದಕ್ಕೆ

ಅಪ್ರಾಮಾಣಿಕತೆಯನ್ನು ದ್ವೇಷಿಸಿದ್ದಕ್ಕೆ

ಅವಳಿನ್ನೂ ಅಲ್ಲೇ ಉಳಿದಿದ್ದಾಳೆ


ಅವಳ ಹಿಂದಿದ್ದವರು ಮುಂದೆ ಹೋದರು

ಅವಳ ಮುಂದಿದ್ದವರು ಮಾಯವಾದರೂ

ಅವಳಿನ್ನೂ ಅಲ್ಲೇ ಉಳಿದಿದ್ದಾಳೆ


ಅವಳಿಗೆ ಅದರ ಕುರಿತು ಬೇಸರವಿಲ್ಲದ್ದಕ್ಕೆ

ಅಡ್ಡಹಾದಿ ತುಳಿಯುವ ಮನಸ್ಸಿಲ್ಲದ್ದಕ್ಕೆ

ಅವಳಿನ್ನೂ ಅಲ್ಲೇ ಉಳಿದಿದ್ದಾಳೆ


ಋತುಗಳೇ ಉರುಳಿದರೂ ಶತಮಾನಗಳೇ ಕಳೆದರೂ

ಅವಳು ಅಲ್ಲೇ ಉಳಿಯಲೂಬಹುದು ಅಜರಾಮರವಾಗಿ

ಅವಳ ನಡೆ ಸತ್ಯವಾಗಿದ್ದಕ್ಕೆ, ಶುದ್ಧವಾಗಿದ್ದಕ್ಕೆ


ಅವಳಿನ್ನೂ ಅಲ್ಲೇ ಉಳಿದಿದ್ದರೂ

ಅವಳಿನ್ನೂ ಅವಳಾಗಿಯೇ ಉಳಿದಿದ್ದಾಳೆ

ಎಂದಿಗೂ ಅವಳು ಅವಳಾಗಿಯೇ ಅಲ್ಲಿಯೇ ಇರುತ್ತಾಳೆ


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ