ಅವಳೆಂದರೆ ಬೆಳಕಿನ ಕುಡಿಯೋ
ಜ್ವಾಲಾಮುಖಿಯೋ , ಅಗ್ನಿಮುಖಿಯೋ
ಬೆಂಕಿಯುಂಡೆಯೋ ಕಂಡವರಾರು
ಅವಳು ಒಬ್ಬೊಬ್ಬರಿಗೆ ಒಂದೊಂದು ಸ್ವರೂಪ
ಮತ್ತೊಬ್ಬರಿಗೆ ದಾರಿ ತೋರುವ
ದೊಂದಿಯಾಗಿ ಬೆಳಗಬಲ್ಲಳು
ತನ್ನಂತರಂಗದ ಬೆಳಕನ್ನು ಪ್ರಜ್ವಲಿಸಿಕೊಂಡು
ಶಾಂತವಾಗಿ ಬೆಳಕಾಗಬಲ್ಲಳು
ತನ್ನವರಿಗಾಗಿ ತನ್ನನ್ನು ತಾನೇ ಸುಟ್ಟುಕೊಂಡು
ಉರಿಯುತ್ತಾ ದೀಪ್ತಿಯಾಗಬಲ್ಲಳು
ತನ್ನವರಿಗೆ ತೊಂದರೆಯಾದ ಸಂಧರ್ಭದಲ್ಲಿ
ಜ್ವಾಲೆಯಾಗಿ ಸುಟ್ಟುಬಿಡಬಲ್ಲಳು
ತನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ತರುವವರಿಗೆ
ಬೆಂಕಿಯುಂಡೆಯಾಗಬಲ್ಲಳು
ತನ್ನ ಸ್ವಾಭಿಮಾನಕ್ಕೆ ಪೆಟ್ಟಾದರೆ
ಕೆಂಡದಂತೆ ಕಮ್ಮಗಿದ್ದವಳು ಹೊತ್ತಿ ಉರಿಯಬಲ್ಲಳು
ಕ್ಷಮಿಸುವವರೆಗೂ ಕ್ಷಮೆ ನೀಡುತ್ತಾ
ತಪ್ಪುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು
ಜ್ವಾಲಾಮುಖಿಯಂತೆ ಕೆಲಕಾಲ ಸುಮ್ಮನಿದ್ದು
ಕೊನೆಗೊಮ್ಮೆ ಸಿಡಿದು ಆಹುತಿ ತೆಗೆದುಕೊಳ್ಳಬಲ್ಲಳು
ತನ್ನಂತೆಯೇ ಹಲವು ವ್ಯಕ್ತಿತ್ವಗಳನ್ನು
ಸೃಷ್ಟಿಸಲು ಜಗಜ್ಯೋತಿಯಾಗಬಲ್ಲಳು
ಸುತ್ತಲೂ ಕತ್ತಲೆಯೇ ಮುತ್ತಿರುವಾಗೆಲ್ಲಾ
ದಾರಿದೀಪವಾಗಿ ತನ್ನಷ್ಟಕ್ಕೆ ತಾನಿರಬಲ್ಲಳು
ಪುಟ್ಟ ಬೆಳಕೆಂದು ಆರಿಸಲು ಹೊರಟರೆ
ಧಗಧಗಿಸಿ ಜ್ವಾಲೆಯಾಗಿ ಸುಟ್ಟು ಬಿಡಬಲ್ಲಳು
ಚಿಕ್ಕ ಹಣತೆ ಎಂದು ಕಡೆಗಣಿಸುವಂತಿಲ್ಲ
ಕತ್ತಲಿರುವಾಗಲೂ ದಿಟ್ಟವಾಗಿ ಇದ್ದಲ್ಲೇ ಪ್ರಕಾಶಿಸಬಲ್ಲಳು
ಕತ್ತಲೆಗೆ ಉರಿಯುತ್ತಲೇ ಪ್ರತ್ಯುತ್ತರ ನೀಡಬಲ್ಲಳು
ಧೈರ್ಯದ ಪ್ರತೀಕವಾಗಿ ಹಿಂಜರಿಯದೇ ನಿಲ್ಲಬಲ್ಲಳು
ನೆಮ್ಮದಿಯ ಜೀವನಕ್ಕೆ ಬಲಿ ಪಡೆಯಲೂಬಲ್ಲಳು
ಸ್ವಸ್ಥ ಬದುಕಿಗೆ ಆಪೋಶನ ತೆಗೆದುಕೊಳ್ಳಬಲ್ಲಳು
ಆಕೆ ದೇವರ ದೀಪವಾಗಿಯೂ ಸೈ
ಹೆಣದ ಮುಂದಿನ ಹಣತೆಯೂ ಹೌದು
ಆಹುತಿ ತೆಗೆದುಕೊಳ್ಳುವ ಜ್ವಾಲೆಯೂ ಸಹಾ
ಎಲ್ಲದಕ್ಕೂ, ಎಲ್ಲಿಯೂ ಸಲ್ಲುವವಳು
ಮಿನುಗುತ್ತಾ, ಬೆಳಕಾಗುತ್ತಾ, ಪ್ರಕಾಶಿಸುತ್ತಾ
ಪ್ರಜ್ವಲಿಸುತ್ತಾ, ದೇದೀಪ್ಯಮಾನವಾಗಿ ಬೆಳಗುತ್ತಾ
ಎಲ್ಲವನ್ನೂ ನುಂಗುತ್ತಾ, ಜ್ವಾಲಾಮುಖಿಯಾಗುತ್ತಾ
ತಡೆಯಲಾರದಂತೆ ಬೆಳಗುತ್ತಾಳೆ, ಉರಿಯುತ್ತಾಳೆ
ಅವಳು ಎಲ್ಲರಿಗೂ ಬೆಂಕಿಯಲ್ಲ.. ಬೆಳಕಾಗಬಲ್ಲಳು
ಹಾಗೆಂದು ಬೆಳಕೇ ಆಗಬೇಕಿಲ್ಲ.. ಜ್ವಾಲೆಯೂ ಹೌದು
ಅವಳು ದಕ್ಕಿಸಿಕೊಂಡವರಿಗೆ ದಕ್ಕಿದಂತೆ
ಅವಳು ಬೆಂಕಿಯುಂಡೆಯೂ.. ಬೆಳಕಿನ ಕುಡಿಯೂ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ