ಪುಸ್ತಕದ ಶೀರ್ಷಿಕೆ : ಅಮರ ಪ್ರೇಮದ ಮಧು
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ಪ್ರಥಮ ಮುದ್ರಣ : 1999
ಮೂರನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 167
ಬೆಲೆ : 100 ರೂ.
ಪ್ರೇಮ ಹಾಗೂ ತ್ಯಾಗಗಳು ಜೀವನದ ವಿಭಿನ್ನ ಮಜಲುಗಳಾದರೂ.. ಮತ್ತೊಬ್ಬರ ತ್ಯಾಗದಿಂದ ಪಡೆದ ಪ್ರೇಮ ಒಬ್ಬರ ಪಾಲಿಗೆ ಅಮರ ಪ್ರೇಮವಾದರೆ.. ಮತ್ತೊಬ್ಬರ ಪಾಲಿಗೆ ಜೀವನವಿಡೀ ನೆನಪಿನ ನೋವನ್ನು ಉಳಿಸುತ್ತದೆ. ಅಮರ ಪ್ರೇಮವೊಂದರ ಚೆಂದದ ಕತೆ ಇಲ್ಲಿದೆ.
ತಾಯಿ 22 ವರ್ಷಗಳಿಂದ ಕಂಪನಿಯಲ್ಲಿ ಸ್ಟೆನೋಗ್ರಾಫರ್ ಆಗಿ ದುಡಿಯುತ್ತಿದ್ದರೂ.. ಹೃದಯಾಘಾತವಾಗಿದ್ದಕ್ಕೆ ಆರು ತಿಂಗಳು ಸಂಬಳರಹಿತ ರಜೆ ಹಾಕಿದ್ದಕ್ಕಾಗಿ ಕೆಲಸದಿಂದ ತೆಗೆದು ಹಾಕಿದ್ದಕ್ಕೆ.. ಕೋಪದಿಂದ ತನ್ನಮ್ಮ ವಾಸಂತಿಗೆ ನ್ಯಾಯ ಕೇಳಲು ರಾಜಸಿಂಹನ ಮನೆಗೇ ಬರುತ್ತಾಳೆ ಮಧುಮತಿ. ಆದರೆ, ರಾಜಸಿಂಹನಿಗೆ ಮೇಲ್ನೋಟಕ್ಕೆ ದೊಡ್ಡ ಅಧಿಕಾರವಿದ್ದರೂ.. ಅದನ್ನು ಚಲಾಯಿಸುವಷ್ಟು ಸ್ವತಂತ್ರನಲ್ಲ.
ಶ್ರೀಮಂತೆಯಾದ ಜಯಶ್ರೀಯ ಸ್ನೇಹ ಪ್ರೇಮವಾಗಿ ತಿರುಗಿದಾಗ ಅದೃಷ್ಟವಂತ ಎಂದು ತಿಳಿದಿದ್ದರೂ.. ಶ್ರೀಮಂತಿಕೆಗೆ ಮರುಳಾದದ್ದಕ್ಕೆ ತನ್ನ ಕುರಿತೇ ಪಶ್ಚಾತಾಪವಾಗಿತ್ತು ಆತನಿಗೆ. ರಾಜಸಿಂಹನ ತಾಯಿ ಗಂಡನನ್ನು ಕಳೆದುಕೊಂಡ ನಂತರ.. ಆತ ನಡೆಸುತ್ತಿದ್ದ ಲೇಡೀಸ್ ಕಾರ್ನರ್ ಅನ್ನು ಮುಂದುವರಿಸಿಕೊಂಡು ಹಿಂಭಾಗಕ್ಕೆ ಮನೆಯ ಮುಂಭಾಗಕ್ಕೆ ಅಂಗಡಿಯಾಗಿ ಮಾರ್ಪಡಿಸಿ ಅದರಿಂದ ಬಂದ ಆದಾಯದಲ್ಲಿ ಮಗನನ್ನು ಓದಿಸಿದ್ದರು. ಶ್ರೀಮಂತರ ಒಬ್ಬಳೇ ಮಗಳಾಗಿದ್ದ ಜಯಶ್ರೀಯನ್ನು ವಿವಾಹವಾಗಲು ಅಡ್ಡಿಪಡಿಸಿರಲಿಲ್ಲ.
ಬೇರೆ ಶ್ರೀಮಂತ ತಂದೆಯರಂತೆ ಮಗಳ ಪ್ರೇಮವನ್ನು ವಿರೋಧಿಸಲಿಲ್ಲ ವೆಂಕಟೇಶ್. ಅದಕ್ಕೆ ಕಾರಣ ಅವರ ಅನಾರೋಗ್ಯ. ವಿಶ್ರಾಂತಿ ಬೇಕಾಗಿತ್ತು. ಹಾಗಾಗಿ ಸಮರ್ಥನಾದ ಒಬ್ಬ ಯುವಕನನ್ನು ಹುಡುಕುತ್ತಿದ್ದಾಗ ಸಿಕ್ಕದ್ದು ರಾಜಸಿಂಹ. ವೆಂಕಟೇಶ್ ಹಾಗೂ ಸ್ವರ್ಣರ ಸಂಸಾರವೇನೂ ನೆಮ್ಮದಿಯ ಸಂಸಾರವಲ್ಲ. ಭಿನ್ನಾಭಿಪ್ರಾಯ ಹಾಗೂ ಸ್ವಾತಂತ್ರ್ಯ, ಬ್ಯುಸಿನೆಸ್ ಎಂಬ ಹೆಸರಲ್ಲಿ ಆಕೆ ತಿಂಗಳಲ್ಲಿ ಒಂದು ವಾರ ಮಾತ್ರ ಪತಿ ಹಾಗೂ ಮಗಳ ಜೊತೆಗಿರುತ್ತಿದ್ದರು. ಮಗಳ ಮದುವೆಗೂ ಆಕೆ ಬಂದಿರಲಿಲ್ಲ. ಕನ್ಯಾದಾನ ಮಾಡಿದ್ದು ವೆಂಕಟೇಶ್ ಅವರ ತಂಗಿ ಲಲಿತಮ್ಮ ಹಾಗೂ ಆಕೆಯ ಗಂಡ ಮೋಹನ್ ರಾವ್.
ಅಣ್ಣನ ಮನೆಯ ಸಕಲ ಕಾರುಬಾರು ಲಲಿತಮ್ಮನವರದ್ದೇ.. ವೆಂಕಟೇಶ್ ಅವರು ಸಹಾ ಪರೋಕ್ಷವಾಗಿ ಆ ತಂಗಿಯನ್ನು ಆ ಮನೆಯ ಯಜಮಾನಿಯಂತೆಯೇ ನಡೆಸಿಕೊಳ್ಳುತ್ತಿದ್ದರು. ಸ್ವಂತ ಮನೆ ಇದ್ದರೂ ಮೊದಲಿನಿಂದಲೂ ಅಣ್ಣನ ಮನೆಯಲ್ಲಿಯೇ ಇದ್ದರು. ತಮ್ಮ ಮೊದಲ ಮಗನನ್ನು ಮದುವೆಯಾಗಿ ಜಯಶ್ರೀ ಸೊಸೆಯಾಗುವಳು ಎಂದು ಕನಸು ಕಟ್ಟಿಕೊಂಡಿದ್ದಳು. ಆದರೆ, ಜಯಶ್ರೀ ಒಪ್ಪದೇ ಪ್ರೇಮಿಸಿ ರಾಜಸಿಂಹನನ್ನು ವಿವಾಹವಾಗಿದ್ದಳು. ಅದಾಗಿ 10 ವರ್ಷ ಕಳೆದಿತ್ತು.
ರಾಜಸಿಂಹನ ತಾಯಿಯೂ ಆತನ ಜೊತೆಗಿರಲು ಒಪ್ಪಿದ್ದರು ವೆಂಕಟೇಶ್. ಅಂತೆಯೇ..ವನಜಮ್ಮ ತಮ್ಮನಿಗೆ ಅಂಗಡಿ ಒಪ್ಪಿಸಿ ಮಗನ ಮನೆಯಲ್ಲಿಯೇ ಬಂದು ಕೆಲವು ದಿನ ನೆಲೆಸಿದ್ದರು. ಲಲಿತಮ್ಮನಿಗೂ ಅವರಿಗೂ ಸರಿಯಾಗದೆ ಮತ್ತೆ ಹೊರಟವರು. ರಾಜಸಿಂಹನ ಮೇಲೆಯೂ ಶ್ರೀಮಂತನಲ್ಲವೆಂಬ ಕಾರಣಕ್ಕೆ ಅವರಿಗೆ ತಿರಸ್ಕಾರವಿತ್ತು.
ಮಗನ ಮನೆ ಸರಿಯಾಗದೆಂದು ತಿಳಿದಿದ್ದವರು ತಾತ್ಕಾಲಿಕವಾಗಿ ಅಲ್ಲಿಗೆ ಹೋಗಿದ್ದರು. ತಮ್ಮ ಶ್ರೀನಿವಾಸರಾಯರು ಹಾಗೂ ಅವರ ಹೆಂಡತಿ ಪದ್ಮಾವತಿ ಪಾಲಿಗೆ ವನಜಮ್ಮ ಸಾಕ್ಷಾತ್ ದೇವತೆಯಂತೆಯೇ.. ಅವರ ಮೊದಲ ಮಗಳು ವಿವಾಹವಾಗುವವರೆಗೆ ವನಜಮ್ಮನ ಬಳಿ ಇದ್ದಳು. ವನಜಮ್ಮ ಅಂಗಡಿಯಲ್ಲಿ ವ್ಯಾಪಾರಕ್ಕೆ ಗಮನ ಕೊಟ್ಟಿದ್ದಾಗ ಶ್ರೀನಿವಾಸರಾಯರು ಸಹಾಯ ಮಾಡುತ್ತಿದ್ದರು. ಪದ್ಮಾವತಿ ತಿಂಡಿಯ ವ್ಯವಸ್ಥೆ ಮಾಡುತ್ತಿದ್ದರೆ, ಊಟವನ್ನು ಅವರ ಮಕ್ಕಳು ಯಾರಾದರೂ ವ್ಯವಸ್ಥೆ ಮಾಡುತ್ತಿದ್ದರು. ಇವರ ಎಲ್ಲಾ ಮಕ್ಕಳೂ ದಡ ಸೇರಿದ್ದು ವನಜಮ್ಮನವರಿಂದಲೇ ಎಂದರೆ ತಪ್ಪಾಗಲಾರದು. ಈಗ ಅವರಿಬ್ಬರೂ ವನಜಮ್ಮನ ಮನೆ ತೊರೆದು ಮಕ್ಕಳ ಮನೆಗೆ ಹೊರಟಿದ್ದರು.
ರಾಜಸಿಂಹ ಮಧುಮತಿಯನ್ನು ಅಮ್ಮನ ಬಳಿ ಕೆಲಸಕ್ಕೆಂದು ಕರೆತಂದ. ಅವಳ ಯೋಗ್ಯತೆಯಿಂದ ಕಡಿಮೆ ಕೆಲಸವನ್ನು ಹೇಳಿದಾಗಲೂ ಮನೆಯ ಪರಿಸ್ಥಿತಿಯಿಂದಾಗಿ ಒಪ್ಪಿಕೊಂಡಿದ್ದಳು. ಮಧುಮತಿಯ ತಂಗಿ ಮಾಲಿನಿ ರೂಪವತಿಯಾದರೂ ವಿದ್ಯೆ ಇರಲಿಲ್ಲ. ತಮ್ಮ ಮಾಧವನಿಗೆ ರೂಪವಿರಲಿಲ್ಲ. ತಂದೆಗೂ ಸರಿಯಾದ ಕೆಲಸವಿರದಿದ್ದಾಗ ತಾಯಿಯ ಕೆಲಸವೂ ಹೋಗಿತ್ತು.ವಿದ್ಯೆಗೆ ತಕ್ಕ ಕೆಲಸವಲ್ಲದಿದ್ದರೂ.. ಅಡುಗೆಯನ್ನು, ಮನೆಯನ್ನು ನಿಭಾಯಿಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ವನಜಮ್ಮನವರಿಗೆ ಆತ್ಮೀಯಳಾದಳು.
ರಾಜಸಿಂಹನ ವಿರಸ ದಾಂಪತ್ಯದಲ್ಲಿ ತೃಪ್ತಿ ಇದ್ದದ್ದು ಮುದ್ದಿನ ಮಗಳು ಚಿನ್ನಿಯ ಬಳಿಯೇ... ಆಗಾಗ ತನ್ನಮ್ಮನ ಮನೆಗೂ ರಾಜಸಿಂಹ ಕರೆದೊಯ್ಯುತ್ತಿದ್ದ.ಆದರೆ, ಜಯಶ್ರೀ ಆಕೆಯನ್ನು ತಂದೆ ಅಷ್ಟು ಪ್ರೀತಿ ಮಾಡುವುದನ್ನು ಸಹಿಸದೆ ದೂರದ ಹಾಸ್ಟೆಲ್ ನಲ್ಲಿಟ್ಟು ತಂದೆಯಿಂದ ದೂರ ಮಾಡಿದಳು.
ರಾಜಸಿಂಹ ತನ್ನ ಮಗ ಚಿಂಟುವಿಗೆ ಹತ್ತಿರವಾಗಲಿ ಎಂಬ ಆಸೆ ಜಯಶ್ರೀಯದ್ದು. ಬಹಳ ಉದ್ಧಟನಾದ ಆತನನ್ನು ತಿದ್ದಿ ಬುದ್ದಿ ಕಲಿಸುವಷ್ಟರಲ್ಲಿ ರಾಜಸಿಂಹನಿಗೆ ಬಹಳವೇ ತ್ರಾಸಾಗಿತ್ತು. ಅದಕ್ಕೆ ಲಲಿತಮ್ಮನವರ ಕುತಂತ್ರ ಬುದ್ಧಿ ಹಾಗೂ ಜಯಶ್ರೀಯ ಅತಿಮುದ್ದು ಕಾರಣವಾಗಿತ್ತು. ಜೊತೆಗೆ ಬಾಬ್ರಿಯ ಸ್ನೇಹವೂ.. ರಾಜಸಿಂಹನ ತಾಳ್ಮೆಯಿಂದ ಚಿಂಟು ಬಹಳ ಬೇಗ ಬದಲಾದ. ವನಜಮ್ಮನವರಿಗೆ ಚಿನ್ನಿಗಿಂತ ಚಿಂಟುವೇ ಬಹಳ ಅಚ್ಚುಮೆಚ್ಚಿದ ಮೊಮ್ಮಗವಾದ.
ಮಗಳನ್ನು ನೋಡಲು ಬಿಡದೆ.. ಹಾಸ್ಟೆಲ್ ನಲ್ಲಿ ಇಟ್ಟಿದ್ದವಳು. ತನ್ನ ವೇಷ-ಭೂಷಣವನ್ನು ಸಂಪೂರ್ಣ ವಿದೇಶಿ ಮಾದರಿಗೆ ಬದಲಾಯಿಸಿದ್ದಳು. ಗಂಡ ತನ್ನ ಸೌಂದರ್ಯದ ಆರಾಧಕನಾಗಲಿ ಎನ್ನುವ ಹುಚ್ಚು ಆಸೆ ಅವಳದ್ದು. ಚಿನ್ನಿಯನ್ನು ನೋಡಲು ಒಮ್ಮೆ ಹಾಸ್ಟೆಲ್ ಗೆ ಕರೆದೊಯ್ದಾಗ ರಾಜಸಿಂಹನ ಎದೆಯೇ ಒಡೆದುಹೋದಂತಾಗಿತ್ತು.
ಅಪ್ಪನೆಂದರೆ ಜೀವ ಬಿಡುತ್ತಿದ್ದ ಮಗಳು ಈಗ ಆತನನ್ನು ಯಾರೋ ಅಪರಿಚಿತನಂತೆ ಕಾಣುತ್ತಿದ್ದಳು. ಮುಂಬೈಯಲ್ಲಿ ಸ್ಥಾಪಿಸಿದ್ದ ಹಾಸ್ಟೆಲ್ನಲ್ಲಿ ಅಪಾರ ಶ್ರೀಮಂತರ ಮಕ್ಕಳನ್ನು ನೋಡಿಕೊಳ್ಳಲು ನೇಮಕವಾಗಿದ್ದ ಚಿನ್ನಿಯ ಗೌವರ್ನೆಸ್ ಏಂಜಲಾಳನ್ನು ಜಯಶ್ರೀಗೆ ತಿಳಿಯದಂತೆ ಭೇಟಿಯಾದಾಗ ಆತನಿಗೆ ಅತ್ತೆ-ಮಾವನ ಹಿಂದಿನ ಗುಟ್ಟುಗಳೆಲ್ಲವೂ ಬಯಲಾಗಿತ್ತು.
ಚಿಂಟುವನ್ನೂ ಹಾಸ್ಟೆಲ್ ಗೆ ಸೇರಿಸಲು ಹೊರಟು ಸೇರಿಸಿ ಬಂದಾಗ ಅಲ್ಲಿಂದ ಆತ ಕಾಣೆಯಾದ. ಇತ್ತ ವನಜಮ್ಮ ಮಗನ ಅತಂತ್ರ ಸಂಸಾರವನ್ನು ನೋಡಲಾಗದೆ.. ತನ್ನ ಮೊಮ್ಮಗುವನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಗುಟ್ಟಾಗಿ ಮದುವೆ ಮಾಡಲು ನೋಡುತ್ತಾಳೆ.
ಇದಕ್ಕೆ ಮಧುಮತಿ ಒಪ್ಪಿ ರಾಜಸಿಂಹನನ್ನು ಮದುವೆಯಾಗಿ ಮೊಮ್ಮಗವನ್ನು ನೀಡಲು ಸಿದ್ದನಾಗಿ ತಿರುಪತಿಯಲ್ಲಿ ವಿವಾಹವೂ ನಡೆಯಿತು. ತನ್ನ ತಂದೆ-ತಾಯಿ, ತಂಗಿ-ತಮ್ಮಂದಿರಿಗೆಲ್ಲಾ ಒಂದು ವ್ಯವಸ್ಥೆಯನ್ನು ಮಾಡಿಕೊಟ್ಟಳು. ಆದರೆ, ಜಯಶ್ರೀಯ ಬದುಕಿನಲ್ಲಿಯೂ ಬದಲಾವಣೆಯಾಗಿತ್ತು.
ಜಯಶ್ರೀ ರಾಜಸಿಂಹನ ಪ್ರೀತಿಗೆ ಅಷ್ಟು ಹಂಬಲಿಸುತ್ತಿದ್ದದ್ದು ಏಕೆ..?? ಜಯಶ್ರೀಗಾಗಿ ಆಕೆಯ ತಂದೆ ಮಾಡಿದ್ದ ವಿಲ್ ಏನು..?? ಲಿಜಿ ಜಯಶ್ರೀಯ ಮೇಲೆ ಕಣ್ಣಿಟ್ಟದ್ದು ಏಕೆ..?? ರಾಜಸಿಂಹನಿಗೆ ಅತ್ತೆ-ಮಾವನ ಹಿನ್ನೆಲೆಯ ಕುರಿತು ತಿಳಿದ ರಹಸ್ಯವೇನು..?? ಜಯಶ್ರೀಯ ಮೇಲೆ ಅಷ್ಟು ಪ್ರೀತಿಯಿದ್ದವನು ಮಧುಮತಿಯನ್ನು ವಿವಾಹವಾದದ್ದೇಕೆ..?? ಚಿಂಟು ಮತ್ತೆ ಸಿಕ್ಕನೇ..?? ಚಿನ್ನಿ ಬದಲಾದಳೇ..?? ಜಯಶ್ರೀಯ ಬಳಿ ಅತಿ ಆಪ್ತವಾಗಿ ನಡೆದುಕೊಳ್ಳುತ್ತಿದ್ದ ಮನೋಹರ್ ನ ನಿಜಬಣ್ಣವೇನು..?? ಜಯಶ್ರೀಗೆ ತನ್ನ ತಾಯಿಯ ಬಗ್ಗೆ ತಿಳಿದಿದ್ದೇನು..?? ಮಧುಮತಿಯ ವಿವಾಹ ಮುಂದೇನಾಯಿತು..?? ಮಕ್ಕಳಿಂದ ಜಯಶ್ರೀಗೆ ಮಧುಮತಿಯ ವಿಚಾರ ತಿಳಿಯಿತೇ..?
ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾಧಾದೇವಿಯವರ 'ಅಮರ ಪ್ರೇಮದ ಮಧು' ಕಾದಂಬರಿಯನ್ನು.
ಹೆಚ್. ಜಿ. ರಾಧಾದೇವಿಯವರ ಕಾದಂಬರಿಯಲ್ಲಿ ಬರುವ ತಾಯಿಯ ಪಾತ್ರಗಳೆಲ್ಲವೂ ತೀರಾ ಮಮತಾಮಯಿ ಅಥವಾ ವಾತ್ಸಲ್ಯಮಯಿ ತಾಯಿಯರಲ್ಲ... ಆದರೆ, ಈ ರೀತಿಯ ತಾಯಿಯನ್ನು ಕಂಡದ್ದು ರಾಧಾದೇವಿಯವರ ಇಷ್ಟು ಕಾದಂಬರಿಗಳಲ್ಲಿ ಇದೇ ಮೊದಲು. ತನ್ನ ಭವಿಷ್ಯವನ್ನು ಹಾಳು ಮಾಡಿಕೊಂಡದ್ದು ಮಾತ್ರವಲ್ಲದೆ.. ಮಗಳ ಸಂಸಾರವನ್ನು ನೆಮ್ಮದಿಯಾಗಿರಲು ಬಿಡದೆ ಕಡೆಗೆ ಮೊಮ್ಮಗಳವರೆಗೂ ಕಣ್ಣು ಹಾಕಿದ್ದ ಪಾತ್ರ. ಸ್ತ್ರೀ ಕುಲಕ್ಕೆ ಕಳಂಕವಾದವರ ಪಾತ್ರದಂತೆನಿಸಿತು. ಮಹಿಳೆಯ ಸ್ವೇಚ್ಛಾಚಾರಕ್ಕೂ ಸ್ವಾತಂತ್ರ್ಯಕ್ಕೂ ಇರುವ ವ್ಯತ್ಯಾಸ ತಿಳಿಸುವ ಪಾತ್ರ.
ಕ್ಷೀರದಷ್ಟು ಪವಿತ್ರವಾದ.. ಮಧುಮತಿ ಉಣಿಸಿದ ಪ್ರೇಮದ ಮಧು ಅಮರವಾದದು. ಇದು ಕಾದಂಬರಿ ಮುಗಿದ ನಂತರವೂ ಕಾಡುತ್ತದೆ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ