ಪುಸ್ತಕದ ಶೀರ್ಷಿಕೆ : ನಗೆ ನವಿಲು
ಲೇಖಕರು : ಡಾ|| ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್
ಪ್ರಕಾಶಕರು : ನವಕರ್ನಾಟಕ ಪ್ರಕಾಶನ
ಪ್ರಥಮ ಮುದ್ರಣ : 2013
ಪುಟಗಳು : 88
ಬೆಲೆ : 55 ರೂ.
ನಗೆ ನವಿಲು ಇದು ಶ್ರೀಮತಿ ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ರ ಲಘು ಲೇಖನ, ಹರಟೆ, ನಗೆಬರಹಗಳ ಸಂಕಲನ. ಹಾಸ್ಯಕ್ಕೂ.. ವ್ಯಂಗ್ಯಕ್ಕೂ.. ಇರುವುದು ಬಹಳ ತೆಳುವಾದ ಗೆರೆ. ಕೆಲವೊಮ್ಮೆ ಮತ್ತೊಬ್ಬರ ಕುರಿತು ಮಾಡುವ ಹಾಸ್ಯ ಅವರಿಗೆ ವ್ಯಂಗ್ಯವೆಂದು ಅನಿಸಬಹುದು. ಆದರೆ, ನಿಜವಾದ ಹಾಸ್ಯವೆಂದರೆ ವ್ಯಂಗ್ಯದ ಸುಳಿವಿರದೆ ಕೇವಲ ಲಘುವಾದ ಛೇಡಿಸುವಿಕೆ ಮಾತ್ರ ಆಗಿರುತ್ತದೆ. ದಂಪತಿಗಳ ಮಾತುಕತೆಗಳಲ್ಲಿ ಬರುವ ಇಂತಹ ನವಿರಾದ ಹಾಸ್ಯ, ಹಿತವಾದ ಜೀವನಕ್ಕೆ ಬಹಳ ಅವಶ್ಯಕ. ಇವರ ಪತಿ ಕೃಷ್ಣಾನಂದ ಕಾಮತ್ ಅವರು ಕೂಡ ಲೇಖಕರು ನಾನು ಇತ್ತೀಚಿಗಷ್ಟೇ ಓದಿದ 'ಕಾಗೆಯ ಕಾಯಕ' ಎನ್ನುವ ವೈಜ್ಞಾನಿಕ ಬರಹದಲ್ಲಿಯೂ ಸಹ ಎಲ್ಲಿಯೂ ಬೋರ್ ಆಗದಂತೆ ನವಿರಾದ ಹಾಸ್ಯ ಅಲ್ಲಲ್ಲಿ ಸುಳಿಯುವಂತೆ ಬರೆದಿದ್ದಾರೆ. ಮನೆಯಲ್ಲಿನ ವಾತಾವರಣ ಹಾಗೂ ಮಾತುಕತೆಗಳು ಕೂಡಾ ಬರವಣಿಗೆಯಲ್ಲಿ ಬಿಂಬಿಸುತ್ತದೆ ಎನ್ನುವುದಕ್ಕೆ ಈ ದಂಪತಿಗಳ ಪುಸ್ತಕಗಳು ಉತ್ತಮ ಉದಾಹರಣೆ.
ಈ ಪುಸ್ತಕ ಓದಿ ಲೇಖಕಿಯ ಕುರಿತು ಒಂದಿಷ್ಟು ಮಾಹಿತಿ ತಿಳಿಯಬೇಕು ಎಂದುಕೊಂಡಾಗ ನನಗೆ ಸಿಕ್ಕ ಮಾಹಿತಿ ಇವರ ಬೇರೆ ಪುಸ್ತಕಗಳನ್ನು ಓದುವ ಆಸಕ್ತಿ ಮೂಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದ ಜ್ಯೋತ್ಸ್ನಾ ಅವರು ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ನಂತರ, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ನಂತರ ಕೋಲ್ಕೊತ್ತ, ಜೈಪುರ, ಮುಂಬೈ, ಮೈಸೂರು ಮತ್ತು ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿ, 1994ರಲ್ಲಿ ನಿವೃತ್ತಿ ಹೊಂದಿದ್ದರು. ‘ಸಂಸಾರದಲ್ಲಿಸ್ವಾರಸ್ಯ’, ‘ಕರ್ನಾಟಕ ಶಿಕ್ಷಣ ಪರಂಪರೆ’, ‘ಹೀಗಿದ್ದೇವೆ ನಾವು’, ‘ನೆನಪಿನಲ್ಲಿನಿಂತವರು’, ‘ನಗೆ ಕೇದಿಗೆ’ ಹಾಗೂ ‘ನಗೆ ನವಿಲು’, 'ಕಲಕತ್ತಾ ದಿನಗಳು' ಅವರ ಪ್ರಮುಖ ಕೃತಿಗಳು. ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ, ಕನ್ನಡ ಸಾಹಿತ್ಯ ಸಂಶೋಧನೆಗಾಗಿ ಕಿಟೆಲ್ ಪುರಸ್ಕಾರ ಸೇರಿ ಹಲವು ಪುರಸ್ಕಾರಗಳು ಲಭಿಸಿವೆ. 2022 ಆಗಸ್ಟ್ 24ರಂದು ಕ್ಯಾನ್ಸರ್ ನಿಂದ ಬಳಲುತ್ತಿದ್ದವರು ನಿಧನ ಹೊಂದಿದರು. Kamat.com ಎಂಬುದು ಇವರ ಕುಟುಂಬದ ವೆಬ್ ಪುಟ.
ನಗೆ ನವಿಲು ನವಿರಾದ ಹಾಸ್ಯದ ಮೂಲಕ ಅವರ ಜೀವನದ ಪುಟಗಳನ್ನು ತೆರೆದಿಡುತ್ತದೆ. ಇಲ್ಲಿನದ್ದು ಕಾಲ್ಪನಿಕ ಹಾಸ್ಯದ ಘಟನೆಗಳಲ್ಲ. ಬದಲಾಗಿ ಲೇಖಕಿ ಬದುಕನ್ನು ಕಂಡ ಬಗೆ ಚಿತ್ರಿತವಾಗಿದೆ.
ಅವರು ಇಲ್ಲಿನ ಕಥಾ ನಾಯಕನ ಕುರಿತೂ ಹೇಳುತ್ತಾರೆ.
'ಹಾಸ್ಯ ಬರಹಗಳಿಗೊಬ್ಬ ನಾಯಕ ಬೇಕು. ಹಾಸ, ಪರಿಹಾಸ, ವಾಗ್ಬಾಣಗಳ ಚುಚ್ಚಾಟಗಳನ್ನೆಲ್ಲಾ ಮುದ್ರಿತ ರೂಪದಲ್ಲಿ ಸಹಿಸಿಕೊಳ್ಳಲು ಒಬ್ಬ ಗಂಡುಗಲಿ ಬೇಕು ! ಸಿಟ್ಟು, ಸೆಡವು, ನೋವು ಮಾಡಿಕೊಳ್ಳದೆ ಸಹಿಸಿ, ನಕ್ಕುಬಿಡುವ ಸರಸವಿನೋದಿ ಬೇಕು. ಸುದೈವದಿಂದಲೇ ನನ್ನ ಮನೆಯಲ್ಲೇ ಅಂತಹವರು ಇದ್ದರು! ನನ್ನ ಪತಿಯನ್ನೇ ಬರಹದ ನಾಯಕರನ್ನಾದ 'ರಾಯ'ನ್ನಾಗಿಸಿ ಬರೆಯುತ್ತಿದ್ದೆ. ಅವರು ಸ್ವತಃ ಸಹಜವಾದ ತಿಳಿಹಾಸ್ಯವನ್ನು ರೂಢಿಸಿಕೊಂಡವರು' ಎಂಬ ಮಾತುಗಳನ್ನು ಓದಿದಾಗ ದಂಪತಿಗಳ ನಡುವಿನ ಹೊಂದಾಣಿಕೆ ಹಾಗೂ ಹಾಸ್ಯಪ್ರಜ್ಞೆಯ ದರ್ಶನವಾಯಿತು.
ಕನಸಿನ ಮನೆ ಹಾಗೂ ವಿಶ್ರಾಂತಿ ಧಾಮ : ಈ ಎರಡೂ ಬರಹಗಳಲ್ಲಿ ವಿಷಯದ ಸಾಮ್ಯತೆ ಕಂಡರೂ ಹಾಸ್ಯದ ಮೂಲಕದ ಪ್ರಸ್ತುತಿ ವಿಭಿನ್ನವಾಗಿದೆ. ಅಮೆರಿಕಾದಲ್ಲಿದ್ದ ತಮ್ಮ ಮಗನಿಗೆ ಕನಸಿನ ಮನೆ ಕಟ್ಟಲು ಬೇರೆಯವರು ಜಾಗ ನೋಡಿ ವರ್ಣಿಸಿದ್ದರೂ ಅದನ್ನು ನೋಡಿ ಬಂದ ರಾಯರ ನಿಜ ವರ್ಣನೆ ಕೇಳಿದ ದಿಗ್ಭ್ರಮೆಯೂ ಆಯಿತು. ಅಂತಹದ್ದೇ ಸಂಧರ್ಭ ಎದುರಾಗಿದ್ದು ಮಗ ಸ್ವತಃ ವಿಶ್ರಾಂತಿಧಾಮಕ್ಕಾಗಿ ಸ್ಥಳ ಹುಡುಕಲು ಊರಿಗೆ ಬಂದಾಗ. ಸ್ಮಶಾನ, ಕೆರೆ ಪಕ್ಕದ , ಗುಡ್ಡ ಕಾಣುವ ಜಾಗಗಳನ್ನು ನಿಶ್ಶಬ್ಧ, ಪ್ರಕೃತಿ ಸೌಂದರ್ಯದ ಜಾಗಗಳೆಂದು ವರ್ಣಿಸಿ ಬೇಸ್ತು ಬೀಳಿಸುವ ಪರಿ ಹಾಸ್ಯವಾಗಿ ಮೂಡಿಬಂದಿದೆ.
ಕ್ಯಾಮೆರಾ ಜೋಗಿ ! : ಮಕ್ಕಳ ಕಳ್ಳರ ವರ್ಣನೆ ಕಂಡ ಲೇಖಕಿ ಅದು ತಮ್ಮ ಪತಿಗೆ ಹೋಲಿಕೆಯಾದಾಗ ಅವರನ್ನೇ ಕೇಳುತ್ತಾರೆ. ಅದೇ ಸಮಯಕ್ಕೆ ಮನೆಗೆ ಬಂದ ಪೋಲೀಸರು ಬಂದಾಗ ತಿಳಿದದ್ದು ಮಕ್ಕಳ ಫೋಟೋ ತೆಗೆಯಲು ಹೋಗಿ ಅಲ್ಲಿನ ಮುಖಂಡನೊಬ್ಬನ ಕೆಂಗಣ್ಣಿಗೆ ಗುರಿಯಾಗಿ ನಂತರ ಮನೆ ಬಿಟ್ಟು ಹೋದ ಮಕ್ಕಳ ಪತ್ತೆಯೂ ಆಯಿತು.
ಪರೋಪಕಾರಿ: ಎಲ್ಲರಿಗೂ ಪರೋಪಕಾರ ಮಾಡುವ ರಾಯರ ಗುಣದ ಬಗ್ಗೆ ಅವರ ಪತ್ನಿ ಹಾಸ್ಯವಾಗಿ ಸಂದರ್ಶಕರಿಗೆ ಹೇಳಿದ್ದು.. ಜೊತೆಗೆ ಅವರ ಮನೆಯನ್ನು ಹಾಗೂ ಅವರನ್ನೂ ಕುರಿತಾಗಿ ತಿಳಿಯುವ ಸಲುವಾಗಿ ರಾಯರನ್ನೇ ಸಾಕಷ್ಟು ಕೇಳಿ ಪೇಚಿಗೆ ಸಿಲುಕಿದ್ದು.
ರಾಯರ ಹೊಸ ತಾರೀಫು : ಹೊಸ ಪೀಳಿಗೆಗೆ ಸಾಕಷ್ಟು ಕೊಡುಗೆ ನೋಡುವ ಸಲುವಾಗಿ ಹಣ್ಣು-ತರಕಾರಿ ಮಾರುವವರನ್ನು ಕ್ಲಿಕ್ಕಿಸಿದ ರಾಯರು ಪೋಲೀಸ್ ಠಾಣೆ ಅಲೆದ ಪ್ರಸಂಗ ಇಲ್ಲಿದೆ.
ಅಜ್ಞಾತರು : ಅಜ್ಞಾತರಾಗಿ ರಂಗಮಂದಿರದಲ್ಲಿ ಫೋಟೋ ತೆಗೆದಾಗ ಅವರನ್ನು ಕಂಡುಹಿಡಿಯಲು ವಿಫಲರಾಗಿ ಅವರನ್ನೇ ಅಪರಾಧಿಯನ್ನಾಗಿಸಿದ ಕ್ಷಣಗಳು. ಪತ್ನಿಯೇ ಪತಿಯನ್ನು ಗುರುತಿಸುವ ಸಂಧರ್ಭ ಎದುರಾದ ಕ್ಷಣಗಳ ಚಿತ್ರಣ ಇಲ್ಲಿದೆ.
ರಾಯರ ವಾಕ್ ವೈಖರಿ: ರಾಯರ ಮಾತಿನ ಚಾತುರ್ಯದಲ್ಲೇ ನಿಸರ್ಗವನ್ನು ಪತ್ನಿಗೆ ವಿವರಿಸುವ ಪರಿ ಮುಗುಳ್ನಗೆ ಮೂಡಿಸುತ್ತದೆ.
ಎಲ್ಲೆಲ್ಲೂ ಲಭ್ಯ: ಒಮ್ಮೆ ಲೇಖಕಿ ಹುಷಾರು ತಪ್ಪಿ ಮಲಗಿದಾಗ ಬಿಸ್ಕೆಟ್ ತರಲು ಹೊರಟವರು ಪತ್ನಿ ಹೇಳಿದ ಎಲ್ಲೆಲ್ಲೂ ಲಭ್ಯವಿರುವ 'ಟೈಗರ್' ಬಿಸ್ಕೆಟ್ ಹೆಸರನ್ನು ಮರೆತು ಅದನ್ನು ನೆನಪಿಸಿಕೊಂಡು ತರಲು ಊರೆಲ್ಲಾ ಅಲೆದ ಪ್ರಸಂಗವಂತೂ ನಗೆಯುಕ್ಕಿಸುತ್ತದೆ.
ಚಟ್ನಿಪುಡಿ ಪುರಾಣ : ಇನ್ನೇನು ಹಾಳಾಗಲಿದ್ದ ತೆಂಗಿನಕಾಯಿ ಉಪಯೋಗಿಸಿ ಮಾಡಿದ ಚಟ್ನಿಪುಡಿ ಪ್ರಸಿದ್ದವಾಗಿ.. ಅದರ ರೆಸಿಪಿ ಪ್ರಕಟವಾದ ನಂತರವಂತೂ ಅವರಿಗೆ ಎದುರಾದ ಪ್ರಸಂಗಗಳು, ಅದರಿಂದ ತಪ್ಪಿಸಿಕೊಂಡ ಬಗೆ ನಗೆಯುಕ್ಕಿಸುತ್ತದೆ.
ಜವಳಿ ವ್ಯಾಪಾರಿಯ ಸೊಸೆಯಾಗಿ..: ಮದುವೆಯ ಮುಂಚೆ ತಮ್ಮ ಹಾಗೂ ಮನೆಯವರೆಲ್ಲರ ಬಟ್ಟೆಗಳ ಡಿಸೈನ್ ಮಾಡುತ್ತಿದ್ದವರು.. ಮದುವೆಯ ನಂತರ ಗಂಡನ ಆಯ್ಕೆಗಳನ್ನು ಒಪ್ಪಿದರಾದರೂ.. ತಮಗೆ ಸಿಕ್ಕ ಒಂದು ಅವಕಾಶದಲ್ಲಿ ಸೀರೆಗಳನ್ನು ತಂದಾಗ ಮತ್ತೆ ಅಂಗಡಿಗೆ ಕರೆದುಕೊಂಡು ಹೋಗಿ ತಾವು ಜವಳಿ ವ್ಯಾಪಾರಿಯ ಮಗನೆಂದು ನಿರೂಪಿಸುವ ಬಗೆ ನಮ್ಮನ್ನೂ ಕಣ್ತೆರೆಸುವಂತಿದೆ.
ನಾಮಾವಾಂತರ: ದಿವ್ಯಕಾಂತಿ, ಪೀಯೂಷ್ ಕಾಂತಿ ಎಂಬ ಬಂಗಾಲಿಯ ಕಾಂತರು, ಜ್ಯೋತ್ಸ್ನಾ ಬೇರೆಯವರ ಬಾಯಲ್ಲಿ ಬೇರೆಯ ರೀತಿಯಲ್ಲಿ ಉಚ್ಚಾರಣೆಯಾದದ್ದು.. ಗಂಡು-ಹೆಣ್ಣಿನ ಹೆಸರುಗಳಲ್ಲಿನ ತರಹೇವಾರಿ ಅನುಮಾನಗಳು.. ಪ್ರದೇಶವಾರು ವಿಭಿನ್ನತೆ ತಿಳಿಹಾಸ್ಯದಲ್ಲಿಯೇ ವ್ಯಕ್ತವಾಗಿದೆ.
ರೊಮ್ಯಾನ್ಟಿಕ್ ರವಕೆ : ರೂಪ ಬದಲಾದರೂ ರವಿಕೆಗೆ ಸಾವಿಲ್ಲವೆನ್ನುತ್ತಾ ಬದಲಾದ ರವಿಕೆಯ ರೂಪಗಳನ್ನು ವರ್ಣಿಸಿದ್ದಾರೆ.
ನೋ ಟೀ ಎಟ್ ಆಲ್ಟಿನೋ..! : ಚಹಾ ಪ್ರೇಮಿಯಾಗಿದ್ದವರು ಗೋವಾದ ಆಲ್ಟಿನೋ ಎಸ್ಟೇಟ್ ನಲ್ಲಿ ತಂಗಿದ್ದಾಗ ಅಲ್ಲಿ ಚಹಾಕ್ಕಾಗಿ ಪರದಾಡಿದ ಪ್ರಸಂಗದ ಜೊತೆಗೆ ಗೋವಾದವರ ಸೂರ್ಯೋದಯದ ದರ್ಶನವನ್ನೂ ಮಾಡಿಸುತ್ತಾರೆ.
ಡ್ರೆಸ್ ಕೋಡ್! : ಅಮೆರಿಕಾಗೆ ಹೋದಾಗ ಅಲ್ಲಿ ಸೊಸೆಯ ಒತ್ತಾಯಕ್ಕೆ ಸೀರೆಯಿಂದ ವಿವಿಧ ಧಿರಿಸಿಗೆ ಬದಲಾದದ್ದು... ಅಲ್ಲಿನ ನಾಯಿ ಆಗ ಗುರುತಿಸದ್ದು ಹೀಗೆ ತಮ್ಮ ಉಡುಗೆಯ ಬಗ್ಗೆ ತಾವೇ ಹಾಸ್ಯ ಮಾಡಿಕೊಳ್ಳುತ್ತಾರೆ.
ಟ್ರ್ಯಾನ್ಸ್ಫರ್ ಅವಾಂತರ : ಸತತ ಟ್ರಾನ್ಸ್ಫರ್ ಗಳಿಂದ ರಿಟೈರ್ ಮೆಂಟ್ ನಲ್ಲಿಯೂ ಕಣ್ಣೀರು ಬರದಿದ್ದ ಬಗೆಯನ್ನು ಹೇಳುತ್ತಲೇ ಟ್ರಾನ್ಸ್ಫರ್ ನಲ್ಲಿ ವಿವಿಧೆಡೆ ಹೋದಾಗ ಅಲ್ಲಿನ ರೀತಿ-ರಿವಾಜುಗಳು ಪೇಚಿಗೆ ಸಿಲುಕಿಸಿದ ಬಗೆಯನ್ನೂ ಹೇಳುತ್ತಾರೆ.
ಅಧಿಕಾರಿಯ ಅಡಾವುಡಿ : ಆಕಾಶವಾಣಿಯಲ್ಲಿ ಅಧಿಕಾರಿಗಳ ಪಡನಾಮೆಯಿಂದಾಗಿ ಉಂಟಾದ ಗೊಂದಲ, ಅಧಿಕಾರಿಗಳಿಂದ ಗೊಂದಲಕ್ಕೆ ಸಿಲುಕಿದ ಬಗೆ. ತಪ್ಪೆಂದು ತಿಳಿಯದೇ ಮಾಡಿದ ತಪ್ಪುಗಳು ಅರಿವಾದ ನಂತರದ ಉಂಟಾದ ವಿಚಾರಗಳು ವ್ಯಕ್ತವಾಗಿವೆ.
ಮಿಸ್ ಮಾಡದ ಬಸ್ : ಬಸ್ ಮಿಸ್ ಮಾಡಿದರೆ ಎನ್ನುವ ರೂಪಕವನ್ನು ಬಳಸಿ ಬದುಕಿನಲ್ಲಿ ಮಿಸ್ ಆದ ಅವಕಾಶಗಳ ಪರಿಣಾಮಗಳ ಕುರಿತು ಹೇಳುತ್ತಾ ಬದುಕಿನ ಕೊನೆಯ ದರ್ಶನವನ್ನೂ ಮಾಡಿಸುತ್ತಾರೆ.
ಹಾಗೆ, ಓದುತ್ತಾ ಓದುತ್ತಾ ಸಮಯ ಹೋಗಿದ್ದೇ ತಿಳಿಯದೇ ಪುಸ್ತಕದ ಕೊನೆಯೂ ಬಂದಿತ್ತು. ಜೊತೆಗೆ ಅಲ್ಲಲ್ಲಿ ಬರಹಕ್ಕೆ ಸಂಬಂಧಪಟ್ಟ ರೇಖಾಚಿತ್ರಗಳೂ ಅರ್ಥಪೂರ್ಣವಾಗಿ ಮನಸೆಳೆದವು.
ಬದುಕಿನಲ್ಲಿ ನವಿರಾದ ಹಾಸ್ಯದ ಅವಶ್ಯಕತೆ ಇದೆ. ಹಾಗೆ ಸವಿಯುತ್ತಾ ಬದುಕಿನ ಕ್ಷಣಗಳನ್ನು ಸಾರ್ಥಕಗೊಳಿಸಿಕೊಳ್ಳುತ್ತೇವೆ. ನಮ್ಮ ಬದುಕಿನ ಅಂತಹಾ ಕ್ಷಣಗಳನ್ನೂ ಮೆಲುಕು ಹಾಕುತ್ತೇವೆ. ಚೆಂದದ ಓದಿನ ರಿಫ್ರೆಶ್ ಮೆಂಟ್ ಗೆ ಇಂತಹಾ ಪುಸ್ತಕಗಳ ಓದು ಆಗಾಗ ಅವಶ್ಯಕ.
ಹಾಸ್ಯ ಸಾಹಿತ್ಯವನ್ನು ಬಹಳ ಕಡಿಮೆ ಓದುವ ನಾನು ಹಾಸ್ಯ ಸಾಹಿತ್ಯ ಅಭಿಯಾನಕ್ಕಾಗಿ ಈ ಪುಸ್ತಕ ಓದಿದೆ. ಮನಸ್ಸನ್ನು ಹಗುರಾಗಿಸಿದ ಪುಸ್ತಕವಾಗಿ ಬಹಳ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ