ಪುಸ್ತಕದ ಶೀರ್ಷಿಕೆ : ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ
ಲೇಖಕರು : ನಾ. ಡಿಸೋಜ
ಪ್ರಕಾಶಕರು : ಸಾಹಿತ್ಯ ನಂದನ
ಪ್ರಥಮ ಮುದ್ರಣ : 2017
ದ್ವಿತೀಯ ಮುದ್ರಣ : 2022 ( ನನ್ನ ಓದಿಗೆ ಸಿಕ್ಕಿದ್ದು )
ಪುಟಗಳು : 176
ಬೆಲೆ : 100 ರೂ.
ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ ಎಂಬ ಶೀರ್ಷಿಕೆಯೇ ನನ್ನಲ್ಲಿ ಒಂದು ರೀತಿಯ ಕುತೂಹಲ ಮೂಡಿಸಿತ್ತು. ಏಕೆಂದರೆ, ಅವರ ಪರಿವಾರದಲ್ಲಿ ಈ ಹೆಸರಿನವರು ಇರದಿದ್ದ ಕಾರಣ ಕೈತಾನ್ ಎನ್ನುವ ಹೆಸರು ಹಾಗೂ ಗಾಂಧಿಯೆನ್ನುವ ಹೆಸರು ಎರಡೂ ಒಟ್ಟಿಗೆ ಜೋಡಿಸಿದ್ದಕ್ಕೆ ಕಾರಣವೇನಿರಬಹುದು ಎಂಬ ಕುತೂಹಲವಂತೂ ಇದ್ದೇ ಇತ್ತು. ಗಡಿನಾಡ ಗಾಂಧಿ, ಕರುನಾಡ ಗಾಂಧಿ.. ಹೀಗೆ ಗಾಂಧಿ ಎಂಬ ಹೆಸರಿನ ಜೊತೆ ಗುರುತಿಸಿಕೊಂಡಿದ್ದವರ ಕುರಿತಾದ ಚಿತ್ರಣಗಳು ಬಂದುಹೋದವು. ಗಾಂಧಿಯಂತೆಯೇ ಇದ್ದಿರಬಹುದಾದ ಕೈತಾನ್ ಎಂಬ ವ್ಯಕ್ತಿಯ ಸ್ವಾತಂತ್ರ್ಯದ ಹೋರಾಟದ ಕಥೆ ಇರಬಹುದು ಎಂದೆನಿಸಿತ್ತು.
ಈ ಕುರಿತು ಮೊದಲಿಗೆ ಲೇಖಕರ ಹಾಗೂ ಮುನ್ನುಡಿಯ ಮಾತುಗಳನ್ನು ಓದುವಾಗ ತಿಳಿದದ್ದು ಈ ಕೃತಿಯನ್ನು ಶ್ರೀ ಎಲ್.ಎನ್.ಮುಕುಂದರಾಜ್ ಅವರು 'ಮುಳ್ಳಿನ ಕಿರೀಟ' ಎಂಬ ಹೆಸರಿನಲ್ಲಿ ನಾಟಕವಾಗಿಸಿದ್ದಾರೆಂದು. ಲೇಖಕರು ಚುಟುಕಾಗಿ ಈ ಕಾದಂಬರಿಯ ಕುರಿತಾಗಿ ಅವರ ಮಾತುಗಳನ್ನು ಹೇಳುವಾಗ 'ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಂಡಿದ್ದರೇ..?' ಎಂಬ ಪ್ರಶ್ನೆ ಹಾಕುತ್ತಾರೆ. ಮೊದಲಿಗೆ ನಮಗೆ ಎಲ್ಲಾ ವರ್ಗಗಳ ಜನರು ಪಾಲ್ಗೊಂಡಿದ್ದರೇ.. ಎಂದು ಹೇಳುವಂತಹಾ ಪ್ರಶ್ನೆ ಇದಾಗಿದ್ದಿರಬಹುದಾ ಎನ್ನಿಸಿದರೂ.. ಅಸ್ಪಷ್ಟವಾಗಿ ಎಲ್ಲಾ ಧರ್ಮದವರು ಪಾಲ್ಗೊಂಡಿದ್ದರೇ..? ಎಂಬ ಪ್ರಶ್ನೆಯೂ ಒಳಗೊಂಡಿದೆ ಎನ್ನಿಸಿತು. ಜಾತಿ, ಧರ್ಮ, ಪಂಥಗಳ ಆಧಾರದಿಂದ.. ಒಡೆದು ಆಳಿದ ಬ್ರಿಟೀಷರ ನೀತಿಯನ್ನು ಸಮರ್ಥಿಸಿಕೊಂಡ ಪರಿ ಇಲ್ಲಿದೆ. ಈ ಕಾದಂಬರಿಯಲ್ಲಿ ಪ್ರಮುಖವಾಗಿ ಕೈಸ್ತರು ಏಕೆ ಅಧಿಕ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಭಾಗವಹಿಸಲಿಲ್ಲ..?? ಎಂಬುದನ್ನು ಹೇಳುವಂತಹ ಚಿತ್ರಣದ ಜೊತೆಗೆ ಹಾಗೆ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ ಕ್ರೈಸ್ತರ ಮುನ್ನುಗ್ಗುವಿಕೆಯ ಕಥೆಯೂ ಇದೆ.
ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ, ಇಲ್ಲಿನ ಪಾದರಿಗಳಲ್ಲಿ ಹೆಚ್ಚಿನವರಿದ್ದದ್ದು ವಿದೇಶಿಯರೇ. ಫ್ರೆಂಚ್, ಪೋರ್ಚುಗೀಸ್, ಇಂಗ್ಲಿಷ್, ಇಟಾಲಿಯನ್ ಗಳು. ದೇಶೀಯ ಪಾದರಿಗಳು ಅವರ ಜಾಗಕ್ಕೆ ಬಂದದ್ದು ಸ್ವಾತಂತ್ರ್ಯಸಿಕ್ಕ ನಂತರ ಎಂಬುದನ್ನೂ ಗಮನಿಸಬೇಕಾಗುತ್ತದೆ. ವಿದೇಶೀ ಪಾದ್ರಿಗಳು ಜನರ ಮೇಲೆ ಒತ್ತಡ ತಂದು.. ಅವರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳುತ್ತಿದ್ದರೇ..?? ಅಥವಾ ಜನರಿಗೆ ಅದರ ಕುರಿತು ಆಸಕ್ತಿ ಇಲ್ಲವೇ..?? ಮಾಹಿತಿಯ ಕೊರತೆ ಇತ್ತೇ..?? ಎನ್ನುವ ಪ್ರಶ್ನೆಗಳೊಂದಿಗೆ ಮುಂದಕ್ಕೆ ಓದುತ್ತಾ ಹೋದೆ.
ಮೊದಲಿಗೆ ಈ ಕಥೆ ಶುರುವಾಗುವುದು ಉತ್ತರಕನ್ನಡ ಜಿಲ್ಲೆಯ ಬೈಲಕೇರಿ ಎಂಬ ಊರಿನಿಂದ. ಅದುವರೆಗೂ ಆ ಊರಿಗೆ ಕಾಲಿಟ್ಟಿರದ ಲೇಖಕರು ತಮ್ಮ ಹತ್ತಿರದ ಸಂಬಂಧಿಯೊಬ್ಬರ ಮಗಳು ಮದುವೆಯಾದಾಗ.. ಅವರ ಮನೆಯ ಇಗರ್ಜಿ ಹಬ್ಬಕ್ಕೆ ಭಾಗವಹಿಸಲು ಹೋಗಬೇಕಾದಾಗ.. ಗೊತ್ತಿಲ್ಲದೂರಿನಲ್ಲಿ ಅವರ ಮನೆಯ ದಾರಿ ಕೇಳುತ್ತಾರೆ. "ಕೈತಾನ ಗಾಂಧಿ ಆಶ್ರಮ ದಾಟಿದ್ರೆ ಇಗರ್ಜಿ" ಎನ್ನುವ ಮಾತಿಗೆ ಕುತೂಹಲಗೊಂಡು 'ಕೈತಾನ್ ಗಾಂಧಿ ಯಾರು..? ಅವರ ಆಶ್ರಮ ಎಂದರೇನು..?' ಎಂಬ ಸಂಶಯ ತಲೆಯಲ್ಲಿ ಮೂಡುತ್ತದೆ. ಕೈತಾನ ಎಂಬುದು ಕ್ರೈಸ್ತರ ಹೆಸರು. ಆ ಹೆಸರಿಗೆ ಈ ಗಾಂಧಿ ಮತ್ತು ಆಶ್ರಮಗಳು ಎಂಬ ಶಬ್ದಗಳು ಜೊತೆಯಾದದ್ದು ಹೇಗೆ..?? ಎಂದು ಯೋಚಿಸುತ್ತಲೇ ಅಲ್ಲಿಂದ ಹಾದು ಹೋಗುವಾಗ ಆ ಆಶ್ರಮದಲ್ಲಿ ಕಂಡದ್ದು ನೂರಾರು ತೆಂಗಿನ ಮರಗಳು, ಮಾವು, ಹಲಸು, ಗೇರು ಮರಗಳು, ಮಲ್ಲಿಗೆ ಗಿಡಗಳು. ಯುವಕ-ಯುವತಿಯರು, ಉತ್ಸಾಹದಿಂದ ಏನೇನೋ ಕೆಲಸ ಮಾಡುತ್ತಿದ್ದ ಆಶ್ರಮವಾಸಿಗಳು, ದನದ ಕೊಟ್ಟಿಗೆ, ಕೆಲವು ಕಟ್ಟಡಗಳು ಜೊತೆಗೆ ಗಾಂಧಿ ಆಶ್ರಮ ಎಂಬ ಬೋರ್ಡ್.
ಗಾಂಧಿ ಆಶ್ರಮ ಕೈತಾನ ಗಾಂಧಿ ಆಶ್ರಮ ಆದದ್ದು ಹೇಗೆ ಎನ್ನುತ್ತಾ.. ಅದರ ಹಿನ್ನೆಲೆಯ ಕುರಿತು ವಿಚಾರಿಸಿದಾಗ ಅವರಿಗೆ ತಿಳಿದದ್ದು ಅಲ್ಲಿಯ ಜಾಗವೆಲ್ಲ ಈಶ್ವರ ಪೂಜಾರಿಗಳು ಎಂಬುವವರಿಗೆ ಸೇರಿದ ತೆಂಗಿನ ತೋಟ. ಆಶ್ರಮದಲ್ಲಿ ಈಗ ಇರುವುದು ಕೈತಾನ. ಆತನ ತಂದೆ ಇನಾಸ. ಆತ ಈಶ್ವರ ಪೂಜಾರಿಯವರ ತೋಟ ನೋಡಿಕೊಳ್ಳುತ್ತಿದ್ದವನು. ಕೈತಾನ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿ ಹೆಸರು ಮಾಡಿದ್ದು.. ಕೈತಾನ ಗಾಂಧಿ ಎಂದಾಗಿದ್ದು.. ಆಗಿನಿಂದ ಈಗಿನವರೆಗೂ ಆಶ್ರಮ ನಡೆದುಕೊಂಡೇ ಬರುತ್ತಿರುವುದು.. ಈಶ್ವರ ಪೂಜಾರಿಯವರು ತಮ್ಮ ತೋಟವನ್ನು ಆಶ್ರಮಕ್ಕೆಂದೇ ಬಿಟ್ಟುಕೊಟ್ಟದ್ದು.. ಈಗಲೂ ಅಲ್ಲಿ ಒಂದರಿಂದ ಕಾಲೇಜು ಹೋಗುವ ಹುಡುಗರೇ ಇದ್ದು, ಕೈತಾನರೇ ಆಶ್ರಮ ನೋಡಿಕೊಂಡು ಹೋಗುತ್ತಿರುವುದು.. ಎಂಬೆಲ್ಲಾ ವಿಚಾರಗಳು ತಿಳಿದು ಕೈತಾನರು ಬದುಕಿದ್ದಾರೆ ಎಂದು ತಿಳಿದಾಗ.. ಉತ್ಸಾಹದಿಂದ ಅವರೊಡನೆ ಮಾತನಾಡಲು ಹೊರಡುತ್ತಾರೆ.
ಗಾಂಧಿಯ ಅನುಯಾಯಿಗಳೆಂದರೆ.. ಮೊದಲಿಗೆ ನಮಗೆ ಮೂಡುವ ಚಿತ್ರಣವೇ... ಸರಳವಾದ, ಶುಭ್ರವಾದ ಖಾದಿ ಉಡುಪು, ಗಾಂಧಿ ಟೋಪಿ, ಮಗ್ಗುಲಲ್ಲಿ ಚರಕ, ಊರುಗೋಲು, ಒಂದಿಷ್ಟು ಪುಸ್ತಕಗಳು, ಪೆನ್ನು ಹೀಗೆ.. Vಕೈತಾನ ಗಾಂಧಿ ಇವರಿಗೆ ಕಂಡದ್ದು ಕೂಡಾ ಹೀಗೆಯೇ.. ಅದರ ಜೊತೆಯಲ್ಲಿ ಗೋಡೆಯ ಮೇಲಿದ್ದ ಗಾಂಧೀಜಿಯದ್ದೊಂದು ದೊಡ್ಡಪಟ. ಅದಕ್ಕೊಂದು ಖಾದಿ ಹಾರ. ಕೈತಾನರ ಜೊತೆ ಮಾತನಾಡುತ್ತಾ ಹಲವಾರು ವಿಚಾರಗಳು ತಿಳಿಯುತ್ತಾ ಹೋದವು.
ಸ್ವಾತಂತ್ರ್ಯ ಹೋರಾಟದ ಕುರಿತು ಆಸಕ್ತಿಯಿಂದ ಓದಿದರೆ.. ಉತ್ತರಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ.. ಚಳುವಳಿಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸಿತ್ತು ಎಂಬುದರ ಅರಿವಾಗುತ್ತದೆ. ಉತ್ತರಕನ್ನಡದ 'ಅಂಕೋಲಾ' ಕರ್ನಾಟಕದ ಬಾರ್ಡೋಲಿ ಎಂದೇ ಪ್ರಖ್ಯಾತವಾದಂತಹ ಸ್ಥಳ. ಅಲ್ಲಿ ಧ್ವಜ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಎಂಬೆಲ್ಲಾ ಸತ್ಯಾಗ್ರಹಗಳು ನಡೆದಿದ್ದವು. ಅಷ್ಟೇ ಅಲ್ಲ.. ವಿಶೇಷವಾಗಿ ಉತ್ತರಕನ್ನಡ ಜಿಲ್ಲೆ ಕರ ನಿರಾಕರಣಿಯ ಚಳುವಳಿಗೆಂದೇ ಪ್ರಖ್ಯಾತವಾಗಿತ್ತು. ಕರ ನಿರಾಕರಣೆ ಎಂದರೆ ಮತ್ತೇನಲ್ಲ.ಮ್ ಇಂದಿನ ಸರ್ಕಾರದಲ್ಲಿ ನಾವು ಸರ್ಕಾರಕ್ಕೆಂದು ಟ್ಯಾಕ್ಸ್ ಕಟ್ಟುತ್ತೇವಲ್ಲ.. ಆ ರೀತಿ ಆಗ ಮನೆ, ಜಮೀನು.. ಹೀಗೆ ಎಲ್ಲದಕ್ಕೂ ಸುಂಕ/ತೆರಿಗೆ/ಕರ ಕಟ್ಟಬೇಕಿತ್ತು. ಆ ಸಂದರ್ಭದಲ್ಲಿ.. 'ಈ ಸರ್ಕಾರ ನಮ್ಮದಲ್ಲ. ವಿದೇಶಿಯರದ್ದು..' ಎಂದೂ.. 'ನಮಗೆ ಸ್ವಾತಂತ್ರ್ಯ ಬೇಕು' ಎಂದೂ ಅವರದ್ದೇ ರೀತಿಯಲ್ಲಿ ಪ್ರತಿಭಟಿಸುತ್ತಾ.. ಹಣಕಾಸಿನ ನೆರವು ನೀಡದೆ ವಿಭಿನ್ನ ರೀತಿಯಲ್ಲಿ ಸತ್ಯಾಗ್ರಹ ನಡೆಸುತ್ತಿದ್ದರು. ಜನರು ಕಂದಾಯ ಅಥವಾ ಕರ ಕಟ್ಟಲು ನಿರಾಕರಿಸಿದ ಚಳುವಳಿಯೇ ಈ ಕರ ನಿರಾಕರಣೆ ಚಳುವಳಿ.
ಚಳುವಳಿ ಎಂದರೆ ಹೋರಾಟ, ಹೊಡೆದಾಟ ಎಂಬ ವಿಚಾರಗಳು ತಲೆಗೆ ಹೊಕ್ಕರೂ.. ಗಾಂಧೀಜಿಯ ತತ್ವಗಳಿಂದ ಇಲ್ಲಿಯ ಜನರು ಪ್ರಭಾವಿತರಾಗಿದ್ದರು. ಗಾಂಧಿ ತತ್ವಗಳನ್ನು ಇಲ್ಲಿ ಪಸರಿಸಿದಕ್ಕೆ ಮುಖ್ಯ ಕಾರಣಕರ್ತರೂ ಇದ್ದರು. ಈ ರೀತಿ ಬೈಲಕೇರಿ ಹಾಗೂ ಸುತ್ತಲಿನ 40 ರಿಂದ 50 ಗ್ರಾಮಗಳಲ್ಲಿ ಅನಕ್ಷರಸ್ಥರಿಗೂ ಮನಮುಟ್ಟುವಂತೆ ಗಾಂಧಿ ತತ್ವ ಹಾಗೂ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ತಿಳಿಹೇಳಿದ್ದರಲ್ಲಿ ಕೈತಾನರ ಪಾತ್ರ ಪ್ರಮುಖವಾಗಿತ್ತು. ಹಾಗೆಂದು ಕೈತಾನರು ತೀರಾ ಓದಿದವರು, ಅಕ್ಷರಸ್ಥರೇನೂ ಆಗಿರಲಿಲ್ಲ.
ಇಗರ್ಜಿಗೆ ಹೋಗುತ್ತಿದ್ದ.. ದೈವಭಕ್ತರಾಗಿದ್ದ ತಂದೆ-ತಾಯಿಯ ಮಗನಾಗಿದ್ದ ಕೈತಾನ, ಕುಡಿಯುತ್ತಿದ್ದ ತಂದೆಯಿಂದ ಮನೆಗೆ ಉಂಟಾಗುತ್ತಿದ್ದ ತೊಂದರೆಗಳಿಂದ ಹಾಗೂ ತಾಯಿ ಅನುಭವಿಸುತ್ತಿದ್ದ ಪಾಡನ್ನು ಮನಗಂಡು, ತಾಯಿಗೆ ನೆರವಾಗಲು ಮೂರನೇ ತರಗತಿಗೆ ಓದುಬಿಟ್ಟವನು. ಗಟ್ಟಿಮುಟ್ಟಾಗಿದ್ದ ಯುವಕ ಎಲ್ಲಾ ಕೆಲಸದಲ್ಲೂ ನೆರವಾಗುತ್ತಾ ಇಗರ್ಜಿಯ ಪಾದರಿಗಳಿಗೂ ನೆರವಾಗುತ್ತಾ.. ಅವನ ಪಾಡಿಗೆ ಅವನದ್ದೇ ಲೋಕದಲ್ಲಿ ಅವನಿದ್ದ. ಇನ್ನೂ ಆ ಹಳ್ಳಿಗೆ ಅಷ್ಟಾಗಿ ಸ್ವಾತಂತ್ರ ಹೋರಾಟದ ಕಾವು ತಟ್ಟಿರಲಿಲ್ಲ.
ನಿಧಾನವಾಗಿ ಎಲ್ಲವೂ ಬದಲಾಗುತ್ತಿತ್ತು. ಇವರಿದ್ದ ತೋಟದ ಮಾಲೀಕರಾದ ಈಶ್ವರ ಪೂಜಾರಿಯವರಂತೆಯೇ.. ಊರಿನ ಮತ್ತೊಬ್ಬ ಶ್ರೀಮಂತರೆಂದರೆ ರಾಮಕೃಷ್ಣ ಕಾಮತರು. ರಾಮಕೃಷ್ಣ ಕಾಮತರು ಈಗಾಗಲೇ ಗಾಂಧಿಯವರ ತತ್ವದಿಂದ ಪ್ರೇರಿತರಾಗಿ ತಾವು ನಡೆಸುತ್ತಿದ್ದ ಅಂಗಡಿಯಲ್ಲಿ ಗಾಂಧೀಜಿಯವರ ಪಟವನ್ನು ಹಾಕಿಕೊಂಡಿದ್ದರು. ಈಶ್ವರ ಪೂಜಾರಿಗಳು ಈ ಕುರಿತು ಕೇಳಿದ್ದಕ್ಕೆ ಅವರು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹುಟ್ಟಿರುವ ಪರಿಯನ್ನು ವಿವರಿಸಿದ್ದರು. ಆದರೆ, ಈಶ್ವರ ಪೂಜಾರಿಗಳು ಅರಿವಿದ್ದೋ.. ಅರಿವಿಲ್ಲದೆಯೋ.. ಅವರನ್ನು ಬೆಂಬಲಿಸಲು ಒಪ್ಪಲಿಲ್ಲ. ಊರಿನಲ್ಲಿ ಹೆಚ್ಚಿನಂಶದ ಜನರು ಕಾಮತರ ಪರವಾಗಿ ನಿಂತರು. ಆದರೆ, ಹಲವಾರು ಜನರಿಗೆ ಸ್ವಾತಂತ್ರ್ಯ ಹೋರಾಟ ಎಂದಾಗ ನೆನಪಾಗುತ್ತಿದ್ದದ್ದು ಹೋರಾಟದ ಕಿಚ್ಚು ಹೊತ್ತಿಸಿಕೊಂಡು ಜೈಲಿಗೆ ಹೋಗುತ್ತಿದ್ದ ಜನರು.
ಆದರೆ, ಹಳ್ಳಿಯ ಹೆಚ್ಚಿನ ಜನರ ಮನಸ್ಥಿತಿಯಂತೆ ಈಶ್ವರ ಪೂಜಾರಿಗಳ ನಿಲುವು ಕೂಡಾ. "ದೇಶನ ಯಾರು ಆಳಿದ್ರೆ ಏನು..?? ನಮಗೆ ಗಂಜಿ ಊಟ ತಪ್ಪುತ್ತಾ..?? ನಮ್ಮ ರೀತಿ-ರಿವಾಜುಗಳನ್ನು ನಾವು ನೋಡಿಕೊಳ್ಳಬೇಕು" ಎನ್ನುತ್ತಾ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಹೊರಟರು. ಆದರೆ, ಕಾಮತರೂ ಹಾಗೆಯೇ ಇದ್ದವರು. ಆದರೆ, ಅಂಕೋಲೆಗೆ ಹೋಗಿ ಅಲ್ಲಿನ ಸತ್ಯಾಗ್ರಹವನ್ನು ಕಂಡುಬಂದ ನಂತರ ಬದಲಾಗಿದ್ದರು. "ಗಾಂಧೀಜಿಯವರು ಅವರೊಬ್ಬರಿಗಾಗಿ ನಡೆಸಿರುವ ಚಳುವಳಿಯಲ್ಲ.. ದೇಶದ ಎಲ್ಲಾ ಜನ ಹಳ್ಳಿ-ಹಳ್ಳಿಗಳಲ್ಲಿ ಗಾಂಧೀಜಿಯವರಿಗೆ ಬೆಂಬಲವಾಗಿ ನಿಲ್ಲಬೇಕು." ಎನ್ನುತ್ತಾ ಗಾಂಧಿ ತತ್ವವನ್ನು ಪಸರಿಸುತ್ತಾ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೈಲಾದಷ್ಟು ನೆರವಾಗುತ್ತಿದ್ದರು.
ಹೀಗೆ ಅವರ ಕಣ್ಣಿಗೆ ಬಿದ್ದದ್ದು ಕೈತಾನ. ಆತನನ್ನು ಇವರು ಸ್ವಾತಂತ್ರ ಹೋರಾಟಕ್ಕೆಂದು ಎಳೆಯಲಿಲ್ಲ. ಬದಲಿಗೆ ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆದರೆ, ದಿನೇ-ದಿನೇ ಕಾಮತರ ಮನೆಯಲ್ಲಿ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟ, ಗುಂಪು ಚಳುವಳಿಗಳು ಎಲ್ಲವನ್ನು ಕಂಡೂ ದೂರ ಉಳಿದಿದ್ದ. ಆದರೆ, ಒಂದು ದಿನ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷವಾಗಿ ಕಾಮತರ ಕೆಲಸ ಮಾಡಿಕೊಟ್ಟಾಗ.. ಅನಿವಾರ್ಯವಾಗಿ ಭಾನುವಾರದ ಇಗರ್ಜಿಯ ಪೂಜೆ ಹಾಗೂ ಪಾಪ ನಿವೇದನೆಗಳನ್ನು ತಪ್ಪಿಸಿಕೊಂಡಾಗ ಪಾದರಿಯವರು ಕೊಟ್ಟ ಶಿಕ್ಷೆಯಂತೂ ಘೋರವಾಗಿತ್ತು. ಪಾದರಿಗಳು ಮೊದಲೇ ವಿದೇಶದವರು. ಅವರಿಗೆ ಬ್ರಿಟಿಷರು ತಮ್ಮವರೇ ಎಂಬ ಭಾವನೆ. ಕ್ರೈಸ್ತರಲ್ಲೂ ಅದೇ ರೀತಿಯ ಭಾವನೆಯನ್ನು ಬೆಳೆಸಿ ಯಾರಲ್ಲಿಯೂ ಸ್ವಾತಂತ್ರ್ಯ ಹೋರಾಟಕ್ಕೆ ಹೋಗಬಾರದು ಎನ್ನುವ ನಿಲುವು ಬೆಳೆಸಿದ್ದರು. ಆದರೆ, ಕೈತಾನನ ನಡೆ ಪರೋಕ್ಷವಾಗಿ ಅದಕ್ಕೆ ವಿರುದ್ಧವಾಗಿತ್ತು.
ತಪ್ಪು ಮಾಡಿದಾಗ ಕೈತಾನನಿಗೆ ಕೊಟ್ಟ ಶಿಕ್ಷೆಗೆ ಹೆದರಿ ಉಳಿದವರು ಅದರ ಹತ್ತಿರ ಸುಳಿಯುವುದಿಲ್ಲ ಎಂದು ಅವರು ಮಾಡಿದ ಪ್ರಯತ್ನ ವಿಫಲವಾಗಿತ್ತು. ಬೇರೆಯವರಿಗೆ ಅದು ಭಯ ಹುಟ್ಟಿಸಿದರೂ.. ಕೈತಾನ ಸಂಪೂರ್ಣ ವಿರೋಧಿಯಾದ. ಆತ ಇಗರ್ಜಿಗೆ ಬರುವುದನ್ನು ಸಂಪೂರ್ಣ ನಿಲ್ಲಿಸಿದ. ಈಗ, ಆತನಿಗೆ ಶಿಕ್ಷೆ ಕೊಡಲಾಗದ ಅವರು ಆತನ ತಂದೆ-ತಾಯಿಗೆ ಶಿಕ್ಷೆ ನೀಡಿದರು ನಂತರದ ದಿನಗಳಲ್ಲಿ ಕೈತಾನ ಜೈಲಿಗೆ ಹೋಗಬೇಕಾಯಿತು. ಜೈಲಿಗೆ ಹೋಗಿ ಬಂದ ನಂತರ ಅಲ್ಲಿ ನಡೆದ ಎಲ್ಲಾ ಘಟನೆಗಳಿಂದ ಆತ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯ ಕುರಿತು ಅರಿತು ಅದನ್ನು ಬೇರೆಯವರಿಗೂ ಅರ್ಥಪೂರ್ಣವಾಗಿ ತಲುಪಿಸುವಷ್ಟು ಪ್ರೌಢನಾಗಿ ಬದಲಾಗಿದ್ದ. ಕೆಲವೊಮ್ಮೆ ತಪ್ಪಿಲ್ಲದಿದ್ದರೂ.. ಆತನನ್ನು ಗುರಿ ಮಾಡಿ ಹಿಂಸಿಸಲಾಯಿತು. ಅದರಲ್ಲಿ ಪೋಲಿಸಿನವರ ಪಾತ್ರವಿದ್ದಷ್ಟೇ.. ಪಾದರಿಯವರ ಪಾತ್ರವೂ ಇತ್ತು. ಆದರೆ, ಕೈತಾನನ ನಿಲುವು ಬದಲಾಗದೆ.. ದಿನೇ-ದಿನೇ ಆತನ ದೇಶ ಪ್ರೇಮ, ಸ್ವಾತಂತ್ರ್ಯಕ್ಕಾಗಿನ ಹಪಾಹಪಿ ಬೆಳೆಯುತ್ತಲೇ ಹೋಯಿತು.
ಆತನ ಪ್ರೌಢ ಮಾತುಗಳು, ಗಟ್ಟಿತನ.. ಅಲ್ಲದೆ, ತಾನು ಜನರ ಬಳಿ ಗಳಿಸಿದ್ದ ವಿಶ್ವಾಸದಿಂದ ಆತ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದ. ತಂದೆ-ತಾಯಿಯರಿಗೆ ಈಶ್ವರ ಪೂಜಾರಿಯವರ ಸ್ಥಳದಿಂದ ಕಾಮತರ ಸ್ಥಳಕ್ಕೆ ಬರಬೇಕಾದ ಅನಿವಾರ್ಯತೆ ಉಂಟಾಗಿತ್ತು. ದೈವಭಕ್ತಳಾಗಿದ್ದ ಕೈತಾನನ ತಾಯಿಯಲ್ಲಿ ಮೂಡಿದ ತಳಮಳಗಳು, ಅನುಭವಿಸಿದ ವೇದನೆಗಳಂತೂ ಮನಕಲಕುವಂತಿವೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಹೊರಗೆ ಎಷ್ಟು ಹಿಂಸೆ ಅನುಭವಿಸುತ್ತಾನೋ.. ಮನೆಯವರ ಮಾನಸಿಕ ವೇದನೆ ತುಮುಲಗಳು ಅಷ್ಟೇ ಇದ್ದರೂ ಸ್ಪಂದಿಸಲಾಗದ ವೈರುಧ್ಯದ ಮನಸ್ಥಿತಿಗಳು ಕೂಡ ಅಷ್ಟೇ ಸ್ಪಷ್ಟವಾಗಿ ಚಿತ್ರಿತವಾಗಿವೆ.
ಇಗರ್ಜಿಯಲ್ಲಿ ಇಂಗ್ಲೆಂಡ್ ಪಾದರಿಗಳ ಬದಲಾಗಿ ದೇಶೀಯ ಪಾದರಿಗಳೇ ಇದ್ದರೆ ಏನಾಗುತ್ತಿತ್ತು..?? ಎಂಬ ಪ್ರಶ್ನೆಯು ಇದೆ. ಆ ಪ್ರಶ್ನೆಗೂ ಇಲ್ಲಿ ಉತ್ತರ ದೊರಕುತ್ತದೆ. ಬ್ರಿಟೀಷರ ಕ್ರೌರ್ಯ, ದೌರ್ಜನ್ಯದ ಕುರಿತು, ಅದರ ಸಮರ್ಥನೆ ಪಾದರಿಗಳ ಮಾತಿನ ಮೂಲಕ ವ್ಯಕ್ತವಾಗುತ್ತದೆ.
ಕೈತಾನನ ಬದುಕಿನಲ್ಲಿ ನಡೆದ ಅದೊಂದು ದುರ್ಘಟನೆಯಿಂದ ಆತ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಾಗಲಿಲ್ಲ. ಹಾಗೆ ನಡೆದ ಘಟನೆ ಏನು..?? ಆ ಆಶ್ರಮ ನಿರ್ಮಿಸಿದ್ದೇಕೆ..? ಈಶ್ವರ ಪೂಜಾರಿಗಳು ಬದಲಾದದ್ದೇಕೆ..? ಕಾಮತರ ಸ್ಥಳದಿಂದ ಮತ್ತೆ ಆತನ ಬಿಡಾರ ಅಲ್ಲಿಗೆ ಬದಲಾದದ್ದೇಕೆ..? ಕೈತಾನ ಗಾಂಧಿ ತತ್ವಗಳನ್ನು ರೂಢಿಸಿಕೊಂಡನು ಹಾಗೂ ಗಾಂಧಿಯವರಷ್ಟೇ ಪ್ರಸಿದ್ದನೂ ಆದನಾದರೂ.. ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ. ಅವನ ಭಾಗವಹಿಸುವಿಕೆ ನಂತರದ ದಿನಗಳಲ್ಲಿ ಏನಾಯಿತು..?
ಇವೆಲ್ಲವನ್ನೂ ತಿಳಿಯಲು ಈ ಕಾದಂಬರಿ ಓದಿ.
ಈ ಕಾದಂಬರಿಯಲ್ಲಿ ಸ್ವಾತಂತ್ರ್ಯ ಹೋರಾಟ.. ಅದರಲ್ಲಿಯೂ ಹಳ್ಳಿಗಳಲ್ಲಿನ ಪುಟ್ಟ-ಪುಟ್ಟ ಸ್ವಾತಂತ್ರ್ಯದ ಕಿಡಿಗಳು, ಅದರಲ್ಲಿಯೂ.. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದು ಹಾಗೂ ಅವರಿಗೆ ಸಹಾಯ ಮಾಡುವುದರ ಬಗ್ಗೆ ಕ್ರೈಸ್ತರ ಕುರಿತ ಹಾಗೂ ಅವರ ಮನಸ್ಥಿತಿಯ ಸಂಪೂರ್ಣ ಚಿತ್ರಣ ಇಲ್ಲಿದೆ. ಎಲ್ಲರೂ ಕೈತಾನ ಗಾಂಧಿಯಾಗಲು ಸಾಧ್ಯವಿಲ್ಲವಾದರೂ.. ಅವರೆಲ್ಲರೂ ಅಷ್ಟು ಭಯಭೀತರಾಗಿರುವುದಕ್ಕೆ ಕಾರಣ ಪಾದರಿಗಳು ಹಾಗೂ ಅವರ ಮಾತುಗಳು ಮಾತ್ರವಲ್ಲ ಬಡತನ ಕೂಡ ಎಂಬುದು ಇಲ್ಲಿಂದ ಸ್ಪಷ್ಟವಾಗುತ್ತದೆ. ಒಬ್ಬ ಮನುಷ್ಯನ ಮನಸ್ಸಿನ ಮೇಲೆ ಪಾಪಭೀತಿಯ ಪರಿಣಾಮ ಎಷ್ಟು ಸಮರ್ಥವಾಗಿ ಮೂಡಿಸಬಹುದು ಎಂಬುದರ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಎಲ್ಲರೂ ಒಂದೇ.. ಇದು ಎಲ್ಲಾ ಧರ್ಮ-ವರ್ಗಗಳನ್ನು ಮೀರಿ ಭಾರತವಾಗಬೇಕು ಎನ್ನುವ ಆಶಯ ಎಷ್ಟು ಸಮರ್ಪಕವಾಗಿ ದೇಶದ ಮೂಲೆ-ಮೂಲೆಗೆ ತಲುಪಿತ್ತು ಎಂಬ ಪ್ರಶ್ನೆಯೂ ಕಾಡದೇ ಬಿಡದು.
ಸ್ವಾತಂತ್ರ್ಯ ಸುಖಾಸುಮ್ಮನೆ ಸಿಕ್ಕದಂತೂ ಅಲ್ಲ. ಪ್ರಮುಖವಾಗಿ ನಾವು ನೋಡುವ ವ್ಯಕ್ತಿಗಳನ್ನು ಹೊರತುಪಡಿಸಿ ನೋಡದಿರುವ ವ್ಯಕ್ತಿಗಳ ಹಾಗೂ ಅವರು ಇನ್ನಿತರ ಜೊತೆಗಾರರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧಪಡಿಸುವ ಪರಿ, ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಸಿಗುತ್ತಿದ್ದ ಗೌರವಾದರಗಳು, ಬಿಡುಗಡೆಯಾದಾಗ ಊರಿನಲ್ಲಿ ಸಿಗುತ್ತಿದ್ದ ಸಂಭ್ರಮದ ಸುಸ್ವಾಗತ, ಶಾಲೆ-ಕಾಲೇಜಿನಿಂದ ಮಕ್ಕಳು ಪ್ರೇರೇಪಿತವಾಗುತ್ತಿದ್ದದ್ದು, ದೇಶಭಕ್ತಿ ತುಂಬಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುತ್ತಿದ್ದ ಪರಿ.. ಹೀಗೆ ಪ್ರತಿ ಪುಟ್ಟ-ಪುಟ್ಟ ಚಿತ್ರಣಗಳು ಕೂಡಾ ದೇಶಭಕ್ತಿಯ ಹಿರಿಮೆಯನ್ನು ಸಾರುತ್ತಾ.. ಆ ಕ್ಷಣಗಳ ರೋಚಕತೆಯನ್ನು ಕಣ್ಮುಂದೆ ಬರುವಂತೆ ಮಾಡುತ್ತದೆ.
ಉದಾಹರಣೆಗೆ ಯಾವುದಾದರೂ ಒಂದು ಕಟ್ಟಡದ ಮೇಲೆ ಬಾವುಟ ಹಾರಿಸಲು ತೆಗೆದುಕೊಂಡ ತೀರ್ಮಾನವನ್ನು ಬ್ರಿಟೀಷರು ತಡೆಯುತ್ತಿದ್ದದ್ದು ಹೇಗೆ..?? ಅಡೆ-ತಡೆಗಳನ್ನು ಮೀರಿ ಶಾಂತಿಯುತವಾಗಿಯೇ.. ಬಾವುಟವನ್ನು ಹಾರಿಸುತ್ತಿದ್ದದ್ದು ಹೇಗೆ..? ಕರನಿರಾಕರಣೆ ಚಳುವಳಿ.. ಕೆಲವೊಮ್ಮೆ ಶಾಂತಿ ಮಂತ್ರವನ್ನು ಮೀರಿ ಕ್ರಾಂತಿಯತ್ತ ನಡೆದಾಗ ಅವರನ್ನು ಮತ್ತೊಬ್ಬರು ತಿದ್ದುತ್ತಿದ್ದ ಪರಿ, ಬ್ರಿಟೀಷರು ಅಲ್ಲಿ ಎಲ್ಲಿಯಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಬಂದಾಗ ಸ್ಥಳೀಯರಿಂದ ಸಿಗದ ಸಹಕಾರ.. ಹೀಗೆ ಹತ್ತು-ಹಲವು ಚಿತ್ರಣಗಳು ಇಲ್ಲಿವೆ. ಇಲ್ಲಿ ನಮಗೆ ಯಾವುದೇ ಇಸವಿ ಅಥವಾ ದಿನಾಂಕಗಳು ಸಿಗುವುದಿಲ್ಲ. ಇಲ್ಲಿನ ಚಿತ್ರಣ ಕೈತಾನ ಗಾಂಧಿಯ ಹದಿಹರೆಯದ ವಯಸ್ಸಿನದ್ದಾದರೂ.. ಸ್ವಾತಂತ್ರ್ಯ ಬರುವ ಮುಂಚಿನ ಕೆಲವೇ ವರ್ಷಗಳ ತೀವ್ರತೆಯ ಚಿತ್ರಣವನ್ನು ಹೆಚ್ಚಾಗಿ ಕಾಣುತ್ತೇವೆ.
ಇತಿಹಾಸವನ್ನು ಕಥೆಯ ರೂಪದಲ್ಲಿ ಓದುವವರು.. ದಿನಾಂಕ, ಇಸವಿ ಹಾಗೂ ಎಲ್ಲಾ ವ್ಯಕ್ತಿಗಳ ಹೆಸರು, ಸ್ಥಳಗಳ ಹೆಸರು ನಮಗೆ ನೆನಪಿರುವುದಿಲ್ಲ. ಸ್ವಾತಂತ್ರ್ಯ ಚಳುವಳಿಯನ್ನು ಕೇವಲ ಕಥೆಯ ರೂಪದಲ್ಲಿ ಓದಬೇಕು, ತಿಳಿದುಕೊಳ್ಳಬೇಕು ಎನ್ನುವವರು ಓದಬೇಕಾದ ಕಾದಂಬರಿ ಇದು. ಕ್ರೈಸ್ತರೇ ಬಳಸುವಂತಹ ಅವರ ಶಬ್ದಗಳು ಇದ್ದು ಕೊನೆಯಲ್ಲಿ ಬರುವ ಶಬ್ದಾರ್ಥ ಅವುಗಳನ್ನು ನಮಗೆ ಪರಿಚಯಿಸುತ್ತಾ.. ಸಂದೇಹಗಳಿಗೆ ಪರಿಹಾರ ನೀಡುತ್ತದೆ. ದೇಶ-ಧರ್ಮ-ಭಾಷೆ -ವರ್ಗ ಎಲ್ಲವನ್ನೂ ಒಳಗೊಂಡ ಸ್ವಾತಂತ್ರ್ಯ ಚಳುವಳಿ ಕಾಣದಂತೆಯೂ ಕಂಡುಬಂದಂತೆನಿಸುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ