ಪುಸ್ತಕದ ಶೀರ್ಷಿಕೆ : ಆರೋಹಣ
ಲೇಖಕರು : ವಿವೇಕಾನಂದ ಕಾಮತ್
ಪ್ರಕಾಶಕರು : ವೀರಲೋಕ ಬುಕ್ಸ್
ಪ್ರಥಮ ಮುದ್ರಣ : 2023
ಪುಟಗಳು : 156
ಬೆಲೆ : 190 ರೂ.
ಮನುಷ್ಯನ ಬದುಕಿನಲ್ಲಿ ಮಹತ್ವಾಕಾಂಕ್ಷೆಗಳು ಬೇಕು. ಆದರೆ, ಅದರ ಬರದಲ್ಲಿ ತಾನು ಕಲಿತ ವಿದ್ಯೆ, ಸಂಸ್ಕಾರಗಳನ್ನು ಮರೆಯದಿರುವುದು ಅಷ್ಟೇ ಅವಶ್ಯಕತೆಯಾಗಿರುತ್ತದೆ. ವಿದ್ಯೆ ವಿನಯವನ್ನು ಕಲಿಸುತ್ತದೆ ಎನ್ನುತ್ತಾರೆ. ಆದರೆ ವಿದ್ಯೆ ಕಲಿತ ನಂತರವೂ ಆ ವಿನಯವನ್ನು ಮೈಗೂಡಿಸಿಕೊಳ್ಳದೇ ಹೋದರೆ ಅಂತಹಾ ವಿದ್ಯೆ ಕಲಿತದ್ದು ಸಹಾ ವ್ಯರ್ಥವೇ ಆಗುತ್ತದೆ. ಅದರಲ್ಲಿಯೂ.. ಆದರ್ಶ ಶಿಕ್ಷಕನೊಬ್ಬನ ಮಗ ಅಧಃಪತನದ ದಾರಿಗಿಳಿದರೆ..?? ಮೊದಲಿಗೆ ತಪ್ಪಾಗಿದ್ದೆಲ್ಲಿ ಎನ್ನುವ ಪ್ರಶ್ನೆ ಮೂಡುತ್ತದೆ. ಎಷ್ಟೋ ವಿದ್ಯಾರ್ಥಿಗಳ ಜೀವನ ರೂಪಿಸಿದ ಗುರು ತಾನು ತಂದೆಯಾಗಿ ಪಾಲಿಸಬೇಕಾದ ಕರ್ತವ್ಯವನ್ನು ಮರೆತನೇ ಅಥವಾ ನಿರ್ಲಕ್ಷಿಸಿ ಬಿಟ್ಟನೇ..?? ಎಂದು ಮೊದಲ ಸಂಶಯ ಮೂಡುತ್ತದೆ. ಹೀಗೆ ಮೂಡುವ ಸಂಶಯಕ್ಕೆ ಕಾರಣವೂ ಇಲ್ಲದಿಲ್ಲ. ದಾರಿ ತಪ್ಪುವ ಮಕ್ಕಳಿಗೆ ಸರಿ ದಾರಿ ತೋರಬೇಕಾದದ್ದು ಹಿರಿಯರಾಗಿ, ತಂದೆಯಾಗಿ, ಗುರುವಾಗಿ ಅವರ ಕರ್ತವ್ಯವೂ ಆಗಿರುತ್ತದೆ. ಇಲ್ಲಿ ಅದೆಲ್ಲವೂ ಆಗಿದ್ದು ರಾಘವೇಂದ್ರರಾಯರು.
ಹಾಗೆಂದು, ತಂದೆಯ ಕಣ್ಣಿಗೆ ಕಾಣುವ ಮಗ ಸಮಾಜದ ಕಣ್ಣಿಗೆ ಕಾಣುವುದಿಲ್ಲ. ಅದಕ್ಕೆ ಸಮಾಜದ ಸಮಕಾಲೀನ ನೋಟಗಳೂ ಆಗಿರಬಹುದಾ..?? ಎಂದು ಯೋಚಿಸಿದರೆ ನಾವೂ ಇಂತಹಾ ಶಿಕ್ಷಣದ ಭಾಗವೇ ಆಗಿ ಹೋಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಹಾಗೂ ಅರಿವಾಗುತ್ತದೆ. ಈ ಕಾದಂಬರಿ ಶುರುವಾಗುವುದು ಕೌಟುಂಬಿಕ ವಾತಾವರಣದಲ್ಲಿಯಾದರೂ.. ಇದು ಕೇವಲ ಕೌಟುಂಬಿಕ ಕಾದಂಬರಿಯಲ್ಲ. ಶೈಕ್ಷಣಿಕ ಕ್ಷೇತ್ರದ ಗಂಭೀರ ಸ್ವರೂಪದ ವಾಸ್ತವವನ್ನು ತೆರೆದಿಟ್ಟಿದೆ.
ತಂದೆ-ತಾಯಿ ಇಬ್ಬರೂ ಇದ್ದಾಗ ಮಕ್ಕಳ ಭವಿಷ್ಯದೆಡೆ ಗಮನ ಹರಿಸುವುದು ಸುಲಭ. ಆದರೆ, ತಾಯಿಯ ಅನುಪಸ್ಥಿತಿ ಮಕ್ಕಳ ಭವಿಷ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆಂದೂ ಕಾಣುತ್ತದೆ.
ಮೌಲ್ಯಗಳನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದ ಸಣ್ಣ ಶಾಲೆಯ ಮೇಷ್ಟರೊಬ್ಬರ ಮಗ ಈಗ ಬದುಕಿನಲ್ಲಿ ಎತ್ತರಕ್ಕೆ ಸಾಗಿ ಮಕ್ಕಳ ಶಿಕ್ಷಣಕ್ಕೆ 'ಆದರ್ಶ ಅಕಾಡೆಮಿ'ಯನ್ನು ಸ್ಥಾಪಿಸಿದ್ದ. ಆತನೇ ವಾಸು. ಅದರಲ್ಲಿ ತನ್ನ ಮಗ ಓದಬೇಕೆಂದು ಆಸೆ ಪಟ್ಟಿದ್ದರೂ.. ಹಣದ ಅಡಚಣೆಯಿಂದ ಮೇಷ್ಟ್ರರನ್ನು ಸಹಾಯ ಯಾಚಿಸಿ ಬಂದಿದ್ದವನು ಅವರ ಶಿಷ್ಯನೇ ಆಗಿದ್ದ, ವಾಸುವಿನ ಸಹಪಾಠಿಯೂ ಆಗಿದ್ದ ಧನಪಾಲ.
ಧನಪಾಲನ ಮಗ ಇಚ್ಛಿಸುವ, ಅಲ್ಲಿ ಕಲಿಯಲು ಕನಸು ಕಾಣುವ ಆದರ್ಶ ಅಕಾಡೆಮಿಯಿಂದ ದೂರ ಉಳಿದರೆ ಸಾಕೆಂದು ಬಯಸುತ್ತಿದ್ದವನು ವಾಸುವಿನ ಒಬ್ಬನೇ ಮಗ ಆದರ್ಶ. ತನ್ನ ನಂತರ ತನ್ನ ಮಗನೇ ಆ ಅಕಾಡೆಮಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಸೆ ಇಟ್ಟುಕೊಂಡು ತನ್ನ ಮಗನಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಒತ್ತಾಯಪಡಿಸುತ್ತಿದ್ದ ವಾಸು. ವಾಸುವಿನ ಹೆಂಡತಿ ಎಲ್ಲದಕ್ಕೂ ಮೂಕ ಪ್ರೇಕ್ಷಕಳಂತೆ.
ಧನಪಾಲನ ಮಗ ಮಾತ್ರವಲ್ಲ ತನ್ನ ಮಗನೂ ಅಲ್ಲಿ ಪ್ರವೇಶ ಪಡೆಯಬೇಕೆಂದರೆ ಅಲ್ಲಿನ ನಿಯಮದಂತೆ ಹಣ ಕಟ್ಟಲೇಬೇಕೆಂದು ಪಟ್ಟು ಹಿಡಿದವನು ವಾಸು. ಹಾಗೆಂದು ಅದು ಶಿಸ್ತಿನ ಪಾಲನೆಯಲ್ಲ. ಬದಲಾಗಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿದ್ದರ ಪರಿಣಾಮ. ಧನಪಾಲನ ಮಗ ಆದರ್ಶ ಅಕಾಡೆಮಿಯನ್ನು ಸೇರಿದ. ಅದು ಹೇಗೆ..??
ಆದರ್ಶನ ಇಷ್ಟವನ್ನೂ ಮೀರಿ ಆತನನ್ನು ವಾಸು ಅದೇ ಅಕಾಡೆಮಿಗೆ ಸೇರಿಸಿದ. ಆದರ್ಶ ಅದಕ್ಕೆ ಮನಸ್ಫೂರ್ತಿ ಒಪ್ಪಲಿಲ್ಲ. ಅವನ ನಡೆಗಳಿಗೆ
ರಾಯರು ಕೊಡುತ್ತಿದ್ದ ಮಾರ್ಗದರ್ಶನ, ಅವರು ಆಗಾಗ ತಿಳಿ ಹೇಳುತ್ತಿದ್ದ ರೀತಿ ಹಾಗೂ ಒತ್ತಡದ ದಿನಗಳಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯತ್ತ ಮುಖ ಮಾಡಿದ್ದನ್ನು ಕಂಡು ಆತಂಕ ಗೊಳ್ಳುವ ಪರಿ ಇಂದಿನ ವಿದ್ಯಾರ್ಥಿಗಳ ಜೀವನವನ್ನು ನೆನಪಿಸುತ್ತದೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಪೈಕಿಯಲ್ಲವೆಂದ ಆದರ್ಶನ ಲೆಕ್ಕಾಚಾರ ಬೇರೆ ಇತ್ತಾ..?? ಒತ್ತಡದ ಶಿಕ್ಷಣದಿಂದ ಆತ ಪಾರಾದನೇ..??
ಇಂದಿನ ಶಿಕ್ಷಣಕ್ಕೆ ಅಷ್ಟು ಒತ್ತಡ ಅನಿವಾರ್ಯವೇ ಎಂಬುದು ನಾವು ನಮಗೆ ಕೇಳಿಕೊಳ್ಳಬೇಕಾದ ಪ್ರಶ್ನೆ. ಇಂದು ವಿದ್ಯೆ ವಿದ್ಯಾರ್ಥಿಗಳ ಆಸಕ್ತಿಯ ಮೇಲೆ ಮಾತ್ರವಲ್ಲದೇ.. ಓಡುತ್ತಿರುವ ಕಾಲಮಾನ ಹಾಗೂ ನಿರೀಕ್ಷಗಳ ಮೇಲೆ ನಿಂತಿದೆಯೇನೋ ಎಂಬಂತೆ.. ಅದಕ್ಕೆ ಹೊಂದಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಅವರ ದೃಷ್ಟಿಯಿಂದ ನೋಡುವುದಾದರೆ ಇಂದಿನ ದಿನಗಳಿಗೆ ಹೊಂದಿಕೊಳ್ಳುವುದಕ್ಕೆ ಆ ಮಟ್ಟದ ಶಿಕ್ಷಣ ಬೇಕೆಂಬುದು ಹೌದಾದರೂ.. ಆ ಕಠಿಣ ಶಿಕ್ಷಣ ಜೀವನಕ್ಕೆ ಬೇಕಾದ ಎಲ್ಲವನ್ನು ಕೊಡುತ್ತದಾ..?? ಅಂತಹಾ ಶಿಕ್ಷಣ ವಿದ್ಯಾರ್ಥಿಗಳನ್ನು ಆತ್ಮಹತ್ಯೆಂತಹಾ ಯೋಚನೆಯಿಂದ ಪಾರು ಮಾಡದಿರುವುದಾದರೂ ಹೇಗೆ..?? ವಿದ್ಯಾರ್ಥಿಗಳು ಅಷ್ಟು ಖಿನ್ನತೆಗೆ ಒಳಗಾಗಲು ಕಾರಣವೇನು..??
ವಿದ್ಯಾರ್ಥಿಗಳನ್ನು ಅವರ ಇಷ್ಟದಂತೆ ಬಿಟ್ಟು ತಿದ್ದದೆ ಸುಮ್ಮನಿರಲಾದರೂ ಸಾಧ್ಯವೇ..?? ಇದೆಲ್ಲದಕ್ಕೂ ಬೇರೆ-ಬೇರೆ ಮಾರ್ಗಗಳು ಇವೆಯಾದರೂ.. ಆದರ್ಶ ಅಕಾಡೆಮಿಯಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆಯ ಘಟನೆಯೊಂದು ಹಿಂದಿನ ವರ್ಷ ಜರಗಿದ್ದು ಮಾತ್ರವಲ್ಲದೆ.. ಆ ವರ್ಷವೂ ಜರುಗಿತ್ತು. ಇದರಿಂದ ಯಾರ ಮೇಲೆ ಯಾವ-ಯಾವ ರೀತಿಯ ಪರಿಣಾಮಗಳು ಉಂಟಾದವು..?? ವಿದ್ಯಾರ್ಥಿಯ ಮನೆಯವರ ಪ್ರತಿಕ್ರಿಯೆ ಹೇಗಿತ್ತು..?? ರಾಯರು ಹಾಗೂ ವಾಸು ವಿದ್ಯಾರ್ಥಿಯ ಮನೆಯವರನ್ನು ಸಾಂತ್ವನಗೊಳಿಸಲು ಹೋದರೂ ಅಲ್ಲಿನ ಪರಿಸ್ಥಿತಿ ಹಾಗೂ ಪ್ರತಿಕ್ರಿಯೆಗಳು ರಾಯರ ಮನಸ್ಸಿನ ಮೇಲೆ ಮೂಡಿಸಿದ ಪರಿಣಾಮಗಳೇನು..?
ಕೆಲವು ಪ್ರಶಸ್ತಿಗಳು ಮನುಷ್ಯನನ್ನು ಬಹಳ ಎತ್ತರಕ್ಕೆ ಏರಿಸಿದರೆ.. ಅದನ್ನು ಪಡೆದುಕೊಳ್ಳಲು ಹೋಗುವ ಮಾರ್ಗ ತಿಳಿದರೆ ಮನುಷ್ಯ ಬಹಳ ಕೆಳಗಿಳಿದುಬಿಡುತ್ತಾನೆ. ಇದೆಲ್ಲದರ ನಡುವೆ ರಾಯರಿಗೆ ರಾಜ್ಯೋತ್ಸವ ಅವಾರ್ಡ್ ಸಹಾ ಬಂದಿತ್ತು. ಅದರ ಹಿಂದೆ ಯಾವುದಾದರೂ ವಶೀಲಿ ಇತ್ತೇ..?? ಅಥವಾ ಸ್ವಾರ್ಥವಿತ್ತೇ..?? ಅಥವಾ ರಾಯರ ನಿಸ್ವಾರ್ಥ ಸೇವೆಗೆ ತಡವಾಗಿ ಸಂದ ಫಲವೇ..??
ರಾಜ್ಯೋತ್ಸವ ಅವಾರ್ಡ್ ಬಂದ ನಂತರ ಆದರ್ಶ ಅಕಾಡೆಮಿಯಲ್ಲೊಂದು ಸಮಾರೋಪ ಸಮಾರಂಭ ಜರುಗಿತ್ತು. ಅಂತೆಯೇ ರಾಯರು ತಾವು ಬೋಧಿಸಿ ನಿವೃತ್ತಿಯಾಗಿದ್ದ ಶಾಲೆಯಿಂದಲೂ ಕಾರ್ಯಕ್ರಮದ ಆಹ್ವಾನ ಬಂದಿತ್ತು. ವಿಶಿಷ್ಟ ಕಾರ್ಯಕ್ರಮದಿಂದ ಹಳೆ ವಿದ್ಯಾರ್ಥಿಗಳ ಸಮ್ಮಿಲನವಾಯಿತು. ಆ ಶಾಲೆಯ ದಿಕ್ಕು ಕೂಡ ಬದಲಾಗಿತ್ತು. ಅಂತಹ ಬದಲಾವಣೆಗೆ ಕಾರಣರು ಯಾರು..?? ವಾಸು ಆ ಕಾರ್ಯಕ್ರಮಗಳಲ್ಲಿ ಭಾಗವಹಿಸದ್ದು ಏಕೆ..?? ಸರ್ಕಾರಿ ಶಾಲೆಗಳ ಪರಿಸ್ಥಿತಿಗೂ ಖಾಸಗಿ ಶಾಲೆಗಳಿಗೂ ಇರುವ ಅಜಗಜಾಂತರ ವ್ಯತ್ಯಾಸಗಳಿಗೆ ಕಾರಣರು ಯಾರು..??
ವಾಸು ತನ್ನ ಜೀವನದಲ್ಲಿ ಮುಚ್ಚಿಟ್ಟ ಸಂಗತಿಗಳೆಲ್ಲವೂ ರಾಯರ ಎದುರಿಗೆ ಬಟಾಬಯಲಾಗಿ ನಿಂತಾಗ ವಾಸು ಹಾಗೂ ರಾಯರ ಮನಸ್ಸಿನ ತುಮುಲಗಳು ಸಮರ್ಪಕವಾಗಿ ಚಿತ್ರಿತವಾಗಿವೆ. ಕಾದಂಬರಿಯ ಅಂತ್ಯ ಸಣ್ಣ ಮಟ್ಟದ ಕ್ರಾಂತಿ ಎಂದರೂ ತಪ್ಪಾಗಲಾರದು. ಆದರೆ, ಅದಕ್ಕಾಗಿ ಬದಲಾದದ್ದೆಷ್ಟು..?? ಪಡೆದದ್ದೆಷ್ಟು..?? ಕಳೆದುಕೊಂಡದ್ದೆಷ್ಟು..??
ಗುರು ಹಾಗೂ ತಂದೆಯ ನಡುವೆ ವ್ಯತ್ಯಾಸವನ್ನು ದ್ರೋಣಾಚಾರ್ಯರು ಅರ್ಜುನ ಹಾಗೂ ಅಶ್ವತ್ಥಾಮನ ಉಲ್ಲೇಖಿಸಿರುವ ಮೂಲಕ ನಿರೂಪಿಸಿರುವ ಪರಿ ಇಷ್ಟವಾಯಿತು.
ಇದು ಮುಖ್ಯವಾಗಿ ಶಿಕ್ಷಣದ ಹಾಗೂ ಮೂರು ತಲೆಮಾರುಗಳ ಮನಸ್ಥಿತಿಯ ಕಥೆಯಾದರೂ ಇಲ್ಲಿ ಬಹಳ ಕಡಿಮೆಯಿದ್ದರೂ ಹೆಚ್ಚು ಸೆಳೆದ ಪಾತ್ರ ರಾಯರ ಸೊಸೆ ಮೀರಾಳದ್ದು. ಬಹಳ ಪ್ರಬುದ್ಧವಾದ ಆಲೋಚನೆಯ, ತಾಳ್ಮೆಯ ಪಾತ್ರದ ಆಕೆಯ ನಿರ್ಧಾರಗಳು ಆದರಣೀಯ. ಮನೆಯಲ್ಲಿ ಹೆಣ್ಣುಮಕ್ಕಳ ಬದಲಾವಣೆಯ ಪಾತ್ರ ಎಷ್ಟು ಮಹತ್ವದ್ದು ಹಾಗೂ ಆ ಬದಲಾವಣೆ ಎಲ್ಲಿಂದ ಶುರುವಾಗಬೇಕು ಹಾಗೂ ಆ ಬದಲಾವಣೆ ಎಷ್ಟು ಸೂಕ್ತ ಎಂಬುದರ ಅರಿವಾಗಿಸುವ ಪಾತ್ರವಿದು.
ಶಿಕ್ಷಣದ ವ್ಯವಸ್ಥೆ ಸಾಗುತ್ತಿರುವ ಹಾದಿಗೆ ಕನ್ನಡಿ ಹಿಡಿದಂತೆಲ್ಲಾ ಇಂದಿನ ವಾಸ್ತವದ ಅರಿವಾಗುತ್ತದೆ. ಸುಲಭವಾಗಿ ನಿರೂಪಿಸಲು ಸಾಧ್ಯವಲ್ಲದ ಹಾಗೂ ಯೋಚಿಸಲೇಬೇಕಾದ ವಿಷಯದ ಕುರಿತ ಕಾದಂಬರಿ ಬಹಳಷ್ಟು ಆಲೋಚನೆಗೊಳಪಡಿಸಿದ್ದೂ ಹೌದು. ನಮ್ಮ ಮುಂದಿನ ಜನರೇಶನ್ ಆದರ್ಶನಂತಾಗಬಹುದಾ ಎನ್ನುವುದರ ಜೊತೆಗೆ ನಾವು ವಾಸುವಿನಂತಾಗಿ ಬಿಟ್ಟಿದ್ದೇವಾ ಎಂಬ ಆಲೋಚನೆಯೂ ಓದುಗರಲ್ಲಿ ಸುಳಿಯದೇ ಇರದು. ಆದರೆ, "ಗುರು ಲಘುವಾಗಲಾರ" ಎಂಬ ನಂಬಿಕೆಯನ್ನು ಉಳಿಸಿಕೊಟ್ಟ ಕಾದಂಬರಿ. ಮುಂದಿನ ಜನರೇಶನ್ ಅನ್ನು ನಾವು ರೂಪಿಸಬೇಕಾದ ಬಗೆಯನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. "ಮನುಷ್ಯ ಮನುಷ್ಯನಾಗುವುದಕ್ಕಿಂತ ದೊಡ್ಡವನಾಗಬೇಕಾಗಿಲ್ಲ" ಎನ್ನುವ ಮಾತಂತೂ ಎಷ್ಟು ಸತ್ಯ. ಆಳವಾದ ಯೋಚನಾಲಹರಿಯನ್ನು ಹಾಗೂ ಇಂದಿನ ವಾಸ್ತವ ಮತ್ತು ಭವಿಷ್ಯದ ಶಿಕ್ಷಣ ವ್ಯವಸ್ಥೆಯ ಜೊತೆಗೆ ಬದಲಾಗುವ ಮನಸ್ಥಿತಿಗಳ ಕಟ್ಟಿಕೊಟ್ಟ ಕಾದಂಬರಿ ಬಹಳ ಇಷ್ಟವಾಯಿತು. ಬದುಕಿನ ಆರೋಹಣದ ಸ್ಪಷ್ಟತೆಯನ್ನು ಹೇಳುವ ಕಾಡುವ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ