ಪುಸ್ತಕದ ಶೀರ್ಷಿಕೆ : ಕಥೆ ಕೇಳು ಮಗುವೇ....
ಲೇಖಕರು : ಉಮಾ ಸುನಿಲ್
ಪ್ರಕಾಶಕರು : ಅಕ್ಷರ ಪ್ರಿಂಟರ್ಸ್, ಉಜಿರೆ
ಪ್ರಥಮ ಮುದ್ರಣ : 2023
ಪುಟಗಳು : 36
ಬೆಲೆ : 55 ರೂ.
ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಮಕ್ಕಳಿಗಾಗಿ ಕಥೆ ಹೇಳುವುದು, ಅವರ ಬೌದ್ಧಿಕ ಮಟ್ಟದ ಕಥೆಗಳನ್ನು ಹೆಣೆಯುವುದೆಂದರೆ ಅಷ್ಟು ಸುಲಭವಲ್ಲ. ಆ ಕಥೆಗಳಲ್ಲಿ ನೀತಿಯೂ ತುಂಬಿದ್ದು, ಮಕ್ಕಳಿಗೆ ಕಥೆಗಳ ಮೂಲಕ ನೀತಿ ಪಾಠವನ್ನು ಹೇಳುವುದೆಂದರೆ ಸುಲಭವಂತೂ ಅಲ್ಲವೇ ಅಲ್ಲ. ಮಕ್ಕಳಿಗೆ ಭಾಷಾಭಿಮಾನ ಮೂಡಿಸುತ್ತಾ.. ತಮ್ಮ ಪರಿಸರ, ಹಳ್ಳಿಯ ಪರಿಸರ, ಪಟ್ಟಣದ ಪರಿಸರ, ಪ್ರಾಣಿ-ಪಕ್ಷಿಗಳು ವಾಸಿಸುವ ಅರಣ್ಯದ ಪರಿಸರ, ಈ ಕಾಲದ ಹೊಸ ರೀತಿಯ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಕಥಾ ಲೋಕಕ್ಕೆ ಕೊಂಡೊಯ್ದಿದ್ದಾರೆ ಲೇಖಕಿ ಉಮಾ ಸುನಿಲ್ ಅವರು.
ಮಾಮ್ಸ್ ಪ್ರೆಸೊ ಕನ್ನಡ ವೇದಿಕೆಯಲ್ಲಿ ಬ್ಲಾಗರ್ ಆಗಿದ್ದ ಗೆಳತಿ ಉಮಾ ಸುನಿಲ್ ಅವರ ಮೊದಲ ಪ್ರಕಟಿತ ಪುಸ್ತಕ 'ಕಥೆ ಕೇಳು ಮಗುವೇ....' ಮಕ್ಕಳಿಗೆಂದೇ ಇಲ್ಲಿ 10 ಚೆಂದದ ಕಥೆಗಳಿವೆ.
'ಸೋಮಾರಿ ಅಣ್ಣ ಸ್ವಾಭಿಮಾನಿ ತಮ್ಮ' ಕಥೆಯಲ್ಲಿ ವಿದ್ಯೆ ಎಂದೂ ಅಳಿದು ಹೋಗದ ಅಮೂಲ್ಯ ಸಂಪತ್ತು ಎಂದು ಹೇಳುತ್ತಾ.. ವಿದ್ಯೆ ಕಲಿಯದ ಸೋಮಾರಿ ಅಣ್ಣನ ಬದುಕು ಹಾಗೂ ವಿದ್ಯೆ ಕಲಿತ ಸ್ವಾಭಿಮಾನಿ ತಮ್ಮನ ಸ್ವಂತ ದುಡಿಮೆಯ ರಾಜನಂತಹಾ ಬದುಕನ್ನು ಚಿತ್ರಿಸಿದ್ದಾರೆ.
ರಾಜ ಹಾಗೂ ಮಂತ್ರಿಯ ಮಗನ ಮೂಲಕ.. ರಾಜಕುಮಾರ ತಾನು ಕೊಟ್ಟ ಸಂದೇಶ ಸರಿ ಎನ್ನುತ್ತಾ.. ತಪ್ಪು ಸಂದೇಶವನ್ನು ನೀಡುತ್ತಾ ಹೋಗುತ್ತಾನೆ. ಅವನು ನೀಡಿದ 'ತಪ್ಪು ಸಂದೇಶ ತಂದ ದುರ್ಗತಿ'ಯನ್ನು ಹೇಳುತ್ತಾರೆ.
'ಯುವರಾಜ ರಾಹುಲ್' ನನ್ನು ಆತನ ತಾಯಿ ಪಂಜರದಲ್ಲಿನ ಪಕ್ಷಿಯಂತೆ ಮುಚ್ಚಟ್ಟೆಯಾಗಿ ಬೆಳೆಸುತ್ತಾಳೆ. ಅದಕ್ಕೊಂದು ಕಾರಣವೂ ಇದೆ. ಆದರೆ, ಯುವರಾಜನಿಗೆ ಬೇಕಾದ ಅರ್ಹತೆಗಳೇನು ಹಾಗೂ ಆತ ತನ್ನ ಸ್ವಾತಂತ್ರವನ್ನು ಪಡೆದುಕೊಂಡ ಬಗ್ಗೆ, ಹೊರ ಜಗತ್ತಿನ ಮಾಹಿತಿಯನ್ನು ಕಂಡುಕೊಂಡ ರೀತಿಯನ್ನು ಹೇಳುತ್ತಾರೆ. ಅವನಲ್ಲಿ ಉಂಟಾದ ಸಕಾರಾತ್ಮಕ ಬದಲಾವಣೆಗಳನ್ನು ಚಿತ್ರಿಸಿರುವ ಕತೆ ಇದು.
ಹಳ್ಳಿಯ ಮಕ್ಕಳಿಗೆ ಪಟ್ಟಣವೆಂದರೆ ಒಂದು ರೀತಿಯ ಬೆರಗು. ಆದರೆ, ಹಳ್ಳಿಯ ಮುಗ್ಧತೆಯ ಪರಿಸರ ಹಾಗೂ ಪಟ್ಟಣದ ಬದುಕಿನ ವಿಭಿನ್ನತೆಯನ್ನು ಕಂಡುಕೊಳ್ಳಲು ಹೊರಟ 'ಮಣ್ಣಿನ ಮಕ್ಕಳ ಪಟ್ಟಣ ಪಯಣ'ವಿದೆ. ಆ ಪಯಣದಲ್ಲಿ ಅವರು ಕಂಡುಕೊಂಡದ್ದೇನು..??
ಸಾಲುಮರಗಳ ಸ್ನೇಹಿತ ಎಂದೇ ಹೆಸರುವಾಸಿಯಾಗುವ ಪುಟ್ಟ 'ಬಾಲಕನ ಪ್ರಕೃತಿ ಪ್ರೇಮ' ಎಲ್ಲರಲ್ಲೂ ಪ್ರಕೃತಿ ಉಳಿಸುವ ಅರಿವು ಮೂಡಿಸುತ್ತದೆ. ಪ್ರಕೃತಿ ಹಾಗೂ ಮನುಷ್ಯನ ಜೀವ-ಜೀವನದ ಬೆಸುಗೆ ಇಲ್ಲಿದೆ.
"ಕಲ್ಲು ದೇವರ ಪೂಜೆಗಿಂತ ಕಷ್ಟದಲ್ಲಿ ಕೈ ಹಿಡಿದ ಜೀವಂತ ದೇವರ ಪೂಜೆಯೇ ದೊಡ್ಡದಲ್ಲವೇ.??" ಎಂದು ಕಣ್ತೆರೆಸುವ ಬಾಲಕಿ 'ನೈನಾ ಮತ್ತು ಅವಳ ದೇವರು' ಕಾಣುತ್ತಾರೆ.
ಅರಣ್ಯದ ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಮೂಲಕ ಜೀವ ಹಾಗೂ ಸೌಂದರ್ಯದ ನಡುವಿನ ಸಂಪರ್ಕ ಕಲ್ಪಿಸುತ್ತಾ 'ಮುಳುವಾದ ಸೌಂದರ್ಯ'ವನ್ನು ತೋರುತ್ತಾರೆ.
"ನಿಸ್ವಾರ್ಥ ಪ್ರೀತಿಯನ್ನು ತಾಯಿಯೊಬ್ಬಳೇ ನೀಡಬಲ್ಲಳು" ಎಂದು ಹೇಳುತ್ತಾ ಪ್ರಾಣಿಗಳಲ್ಲೂ ಕಂಡು ಬರುವ ಮಾತೃ ಪ್ರೇಮವನ್ನು 'ದಟ್ಟಡವಿಯ ನಡುವೆ' ಚಿತ್ರಿಸಿದ್ದಾರೆ.
"ಒಗ್ಗಟ್ಟಿನಲ್ಲಿ ಬಲವಿದೆ" ಎಂದು ಹೇಳುವ ಪುಟ್ಟ ಕರುವೊಂದು ತನ್ನವರನ್ನೆಲ್ಲಾ ಒಗ್ಗೂಡಿಸಿ ಹುಲಿಯನ್ನೇ ಹೆದರಿಸಿದ ಹಸುಗಳ ಕಥೆ ಇಲ್ಲಿದೆ. ಪುಟ್ಟವರು ತೋರುವ ಜಾಣ್ಮೆ ಮಕ್ಕಳಲ್ಲಿಯೂ ತಮ್ಮ ನಿರ್ಧಾರವನ್ನು ಹೆದರಿಕೆಯಿಲ್ಲದೆ ಹೇಳುವ ಗುಣ ಬೆಳೆಸಿಕೊಳ್ಳಲು ಪ್ರೇರೇಪಿಸುವಂತಿದೆ.
ಅತಿಯಾದ ಸಂಕೋಚಕ್ಕೆ ಒಳಗಾದರೆ ಏನೆಲ್ಲಾ ಪೇಚಾಟಗಳಾಗಬಹುದು ಎಂದು ಗುಂಡೂರಾವ್ ಅವರ ಮೂಲಕ 'ಸಂಕೋಚ ತಂದ ಪಚೀತಿ'ಯಲ್ಲಿ ಹೇಳಿದ್ದಾರೆ.
10 ಕಥೆಗಳಲ್ಲಿ ವಿಭಿನ್ನ ಕಥಾವಸ್ತುಗಳು ಕಂಡುಬರುತ್ತವೆ. ಕೆಲ ನೀತಿ ಪಾಠಗಳು ಸಾರ್ವಕಾಲಿಕ. ಅಂತಹಾ ನೀತಿ ಪಾಠಗಳನ್ನು ಹೇಳುವ ವಿಭಿನ್ನವಾದ ಕಥಾವಸ್ತುವಿನ, ವಿಭಿನ್ನ ಕಥೆಗಳನ್ನು ಹೊಸ ರೀತಿಯಲ್ಲಿ ಮಕ್ಕಳಿಗೆ ತಲುಪಿಸುವ ಪ್ರಯತ್ನ ಮಾಡಿರುವ ಉಮಾ ಸುನಿಲ್ ಅವರ ಲೇಖನಿಯಿಂದ ಮತ್ತಷ್ಟು ಚಂದದ ಮಕ್ಕಳ ಕಥೆಗಳು ಹಾಗೂ ಬೇರೆ ಸಾಹಿತ್ಯ ಪ್ರಕಾರಗಳು ಪುಸ್ತಕ ರೂಪದಲ್ಲಿ ಹೊರಬರಲಿ ಎಂಬ ಶುಭ ಹಾರೈಕೆ ನನ್ನದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ