ಸೋಮವಾರ, ಏಪ್ರಿಲ್ 13, 2026

ಬೆಂಕಿಯ ಸುಳಿ (ಪುಸ್ತಕ ಯಾನ - 159)


ಪುಸ್ತಕದ ಶೀರ್ಷಿಕೆ : ಬೆಂಕಿಯ ಸುಳಿ

ಲೇಖಕರು : ಹಾಡ್ಲಹಳ್ಳಿ ನಾಗರಾಜ್

ಪ್ರಕಾಶಕರು : ನಿರಂತರ 

ಪ್ರಥಮ ಮುದ್ರಣ : 2011

ಎರಡನೇ ಮುದ್ರಣ : 2022

ಪುಟಗಳು : 116

ಬೆಲೆ : 100 ರೂ.


ಹಾಡ್ಲಹಳ್ಳಿ ನಾಗರಾಜ್ ಸರ್ ಅವರ 'ಬೆಂಕಿಯ ಸುಳಿ' ಕಾದಂಬರಿಯು 80ರ ದಶಕದಲ್ಲಿ ಸಂಯುಕ್ತ ಕರ್ನಾಟಕದಲ್ಲಿ ಸಣ್ಣಕಥೆಯ ರೂಪದಲ್ಲಿತ್ತು. ತದನಂತರ ಕಾದಂಬರಿ ಆಗಿ ವಿಸ್ತೃತವಾದ ಚಿತ್ರಣ.


'ಬೆಂಕಿಯ ಸುಳಿ' ಎಂಬ ಶೀರ್ಷಿಕೆಯನ್ನು ಕಂಡಾಗ 'ಬೆಂಕಿಯ ಸುಳಿ'ಗೆ ಬೀಳುವ ಹೆಣ್ಣಿನ ನೆನಪಾಯಿತು. ಆದರೆ, ಹೆಣ್ಣು ಮಾತ್ರವೇ ಬೆಂಕಿಯ ಸುಳಿಗೆ ಬಿದ್ದು ಬೇಯುತ್ತಾಳಾ..?? ಖಂಡಿತವಾಗಿಯೂ ಇಲ್ಲ. ಗಂಡು ಕೂಡಾ ಅದರಷ್ಟೇ ಬೇಯಬಲ್ಲನು. ಆತನ ಭಾವತೀವ್ರತೆ, ತುಡಿತ ಹಾಗೂ ಸಂಘರ್ಷಗಳ ಚಿತ್ರಣ ಇಲ್ಲಿದೆ. ಭಾರತೀಸುತ ಅವರ 'ಎಡಕಲ್ಲು ಗುಡ್ಡದ ಮೇಲೆ' ಕಾದಂಬರಿಯನ್ನು ಓದಿದವರಿಗೆ ಅಲ್ಲಿ ಮಾಧವಿಯ ತುಡಿತಗಳು ಹಾಗೂ ಆಕೆಯ ನೋವು ಆಕೆಯನ್ನು ಬೆಂಕಿಯಲ್ಲಿ ಬೇಯಿಸಿದಂತಿದೆ. ಅಲ್ಲಿ ಸ್ತ್ರೀಯ ಮನಸ್ಸಿನ ತುಮುಲಗಳು ಗಾಢವಾಗಿ ಚಿತ್ರಿತವಾಗಿದ್ದರೆ.. ನನಗೆ ಈ ಕಾದಂಬರಿಯಲ್ಲಿ ಬೆಂಕಿಯ ಸುಳಿಯಲ್ಲಿ ಸಿಕ್ಕು ಹೆಚ್ಚು ಒದ್ದಾಡಿದಂತೆ ಕಂಡವನು ರಂಗೇಗೌಡ. 


ಹಳ್ಳಿಯ ಬಡ ಕುಟುಂಬದಿಂದ ಬಂದಿದ್ದ ಅವನು ಬಿ.ಎ ಗೆ ಸೇರಿದಾಗ.. ತನ್ನದೇ ಊರಿನ ಕಡೆಯ ಉಳಿದ ಮೂವರು ಹುಡುಗರೊಡನೆ ಸೇರಿ ರೂಮ್ ಮಾಡಿಕೊಂಡಿದ್ದ. ಬಡಾವಣೆ, ರೂಮು ಚೆನ್ನಾಗಿದ್ದರೂ ಸಹಾ ಆತನೊಂದಿಗಿದ್ದ ಮೂವರು ಗೆಳೆಯರ ಸಂಘ ಆತನಿಗೆ ಒಗ್ಗಿ ಬರಲಿಲ್ಲ. ಅವರ ಇಸ್ಪೀಟಿನ ಚಟ, ಕುಡಿತ, ಸಿಗರೇಟ್, ಹುಡುಗಿಯರ ಹಿಂದೆ ಹೋಗುವ ಅಭ್ಯಾಸ ಇದೆಲ್ಲದರ ನಡುವೆ ರಂಗೇಗೌಡನಿಗೆ ಓದಲು ಕಷ್ಟವಾಗುತ್ತಿತ್ತು. ಎರಡನೇ ವರ್ಷದ ರಜಾ ಬಂದ ಕೂಡಲೇ ಬೇರೆ ರೂಮು ಹುಡುಕಿ ಅಲ್ಲಿಗೆ ಹೋಗಿದ್ದ. 


ಎಲ್ಲವೂ ನಿರಾಳವಾಗಿತ್ತು ಎಂದುಕೊಂಡರೂ.. ರಂಗೇಗೌಡನ ಮನಸ್ಸಿನ ಮೂಲೆಯಲ್ಲಿ.. ರಸ್ತೆಯಲ್ಲಿ ಹೋಗುತ್ತಿದ್ದ ಹಾಲು ಕೆನೆ ಬಣ್ಣದ ಪ್ರೀಮಿಯರ್ ಪದ್ಮಿನಿ ಕಾರು ಕುತೂಹಲದ ಸೆಲೆಯನ್ನು ಮೂಡಿಸುತ್ತಿತ್ತು. ಆತನು ಅದರಿಂದ ತಪ್ಪಿಸಿಕೊಳ್ಳಲು ಎಷ್ಟೇ ಯತ್ನಿಸಿದರೂ.. ಆ ಕಾರಿನಲ್ಲಿರುವವರ ದೃಷ್ಟಿ ತನ್ನ ಮೇಲಿರುವುದನ್ನು ಗಮನಿಸಿಯೇ ಇದ್ದ. ಆದರಲ್ಲಿನ ಸುಂದರ ಯುವತಿ ಈತನನ್ನು ನೋಡಿ ಮುಗುಳ್ನಕ್ಕರೆ, ಅದರಲ್ಲಿನ ಗಂಡಸು ಮಾತ್ರ ಯಾಂತ್ರಿಕವಾಗಿ ಕಾರು ನಡೆಸುತ್ತಿದ್ದರು ಎಂದೆನಿಸುತ್ತಿತ್ತು ಆತನಿಗೆ. 


ಆ ಕಾರಿನಲ್ಲಿದ್ದವರ ಪರಿಚಯವಾಗಿದ್ದು ಕೂಡಾ ಕಾಲೇಜಿನಲ್ಲಿಯೇ. 'ಗೊಮ್ಮಟಗಿರಿ ಕಾಲೇಜ್' ಎಂದೇ ಅನ್ವರ್ಥವಾಗಿದ್ದ ಆ ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ರಂಗೇಗೌಡ ತಾನು ಭಾಗವಹಿಸಬೇಕೆಂದುಕೊಂಡ. ಆತ ವೇದಿಕೇರಿದ ಅತಿಥಿಗಳನ್ನು ಗಮನಿಸಿದಾಗ ಅಲ್ಲಿ ಕಂಡದ್ದು ಪ್ರತಿದಿನವೂ ಪ್ರೀಮಿಯರ್ ಪದ್ಮಿನಿಯಲ್ಲಿ ಹೋಗುವ ಆ ಗಂಡಸು. ಆತನೇ ಮೋಹನ್. ಆತನ ಪತ್ನಿ ವೇದಿಕೆಯ ಮೇಲಿರದಿದ್ದರೂ ಆಕೆಯ ಪರಿಚಯವೂ ಆಗಿತ್ತು. ಅವಳ ಹೆಸರು ತಿಳಿದಿತ್ತು. ಅವಳೇ ರತಿದೇವಿ. ಆತ ಅಂದು ರಚಿಸಿದ್ದ ಭಾವಗೀತೆಯನ್ನು ಹಾಡಿದ್ದ. ಅದರಲ್ಲಿ ಆತನಿಗೆ ಪ್ರಥಮ ಸ್ಥಾನವೂ ಲಭಿಸಿತ್ತು. ರಾಗವಾಗಿ ಹಾಡಿದ ಆ ಭಾವಗೀತೆ ಅಂದಿನಿಂದ ಆತನ ಜೀವನವನ್ನೇ ಬದಲಾಯಿಸಿತ್ತು .


ಕನ್ನಡ ಸಂಘದ ಅಧ್ಯಕ್ಷರೂ ಆಗಿದ್ದ ಗುರು ಸಿದ್ದರಾಮಯ್ಯನವರು ರಂಗೇಗೌಡನನ್ನು ತಮ್ಮ ಕೊಠಡಿಗೆ ಕರೆಸಿ ಮೆಚ್ಚುಗೆ ಸೂಚಿಸಿದರು. ಮುಂದಿನ ಸಾಹಿತ್ಯ ರಚನೆಗೂ ಪ್ರೋತ್ಸಾಹಿಸಿದರು. 


ಸಹಪಾಠಿ ಲೀಲಾ ಆತನ ಕುರಿತು ಪ್ರೇಮ ನಿವೇದನೆ ಮಾಡಿದಾಗ ಆತ ನಿರಾಕರಿಸಿದ್ದ. ಆತನಿಗಾಗಿ ಆತನ ಅಕ್ಕನ ಮಗಳು ಜಾನಕಿ ಈಗಾಗಲೇ ಕಾಯುತ್ತಿದ್ದಳು.


ಬಡ ಕುಟುಂಬದ ಗಂಡಿಗಿರುವಂತೆ ಆತನಿಗೊಂದು ಸುಂದರ ಕನಸಿತ್ತು. ತಂದೆ-ತಾಯಿ, ಅಕ್ಕ-ಭಾವ ಎಲ್ಲರೂ ಹೆಮ್ಮೆಪಡುವಂತೆ ಹಾಗೂ ಗುರು ಸಿದ್ದರಾಮಯ್ಯನವರು ಹೆಮ್ಮೆಪಡುವಂತೆ ಫಲಿತಾಂಶ ಬಂದು ಮುಂದೆ ಮಾನಸಗಂಗೋತ್ರಿಯಲ್ಲಿ ಕನ್ನಡ ಎಂ.ಎ ಯಲ್ಲಿ ಗೋಲ್ಡ್ ಮೆಡಲ್ ಪಡೆದು, ಲೆಕ್ಚರರ್ ಆಗಿ, ನೌಕರಿ ಪಡೆದು ಜಾನಕಿಯೊಡನೆ ವಿವಾಹ ಮಾಡಿಕೊಂಡು ಚೆಂದದ ಸಂತಸದ ಬದುಕು ನಡೆಸಿದಂತೆ.ಆದರೆ ಕಂಡ ಕನಸೆಲ್ಲವೂ ನಿಜವಾಗುವುದೇ..?? 


ರಂಗೇಗೌಡ ಕನಸು ಕಾಣುತ್ತಾ ಹೋಗುತ್ತಿದ್ದ. ಆ ಸಂದರ್ಭದಲ್ಲಿ ಹಾದು ಹೋದ ಕಾರಿನಿಂದ ಬಂದ ನಗುವಿಗೂ ಹಾಗೂ ಹಾಯ್ ಗೆ ತಾನು ಪ್ರತಿಕ್ರಿಯೆ ನೀಡಿದ ನಂತರ ಮೋಹನ್ ಬಾಗಿಲು ತೆಗೆದು ರಂಗೇಗೌಡನನ್ನು ಕಾರು ಹತ್ತಿಸಿಕೊಂಡ. ಅಲ್ಲಿಂದ ಆತನ ಬದುಕಿನ ಪಯಣದ ಹಾದಿಯೇ ಬದಲಾಗುತ್ತದೆ.


ಅವರ ತೋಟದ ಮನೆಯ ಪರಿಚಯವಾಗಿತ್ತು. ಆ ಮನೆಯಲ್ಲಿ ಇದ್ದವರು ಮೋಹನ್, ರತಿದೇವಿ ಹಾಗೂ ಮನೆಯ ಹೆಣ್ಣಾಳು ಸುಬ್ಬಿ ಹಾಗೂ ಆಕೆಯ ಗಂಡ ರಾಬಿನ್. ಅಂದು ರಾತ್ರಿ ನಡೆದ ಘಟನೆ ವಿಲಾಸಭವನದಲ್ಲಿ ರತಿದೇವಿಯ ಮನಸ್ಸನ್ನೇ ಬದಲಾಯಿಸಿತು. ಜಡವಾಗಿದ್ದ ರತಿದೇವಿ ಲವಲವಿಕೆಯ ಚಿಲುಮೆಯಾಗಿದ್ದಳು. 


ಅಂದಿನ ಆ ಘಟನೆಯಿಂದ ತಾನು ಮೋಹನನಿಗೆ ಮೋಸ ಮಾಡಿದೆ ಎಂಬ ಭಾವ ಕಾಡುತ್ತಿದ್ದರೂ.. ರತಿದೇವಿಯ ಸೆಳೆತದಿಂದ ಆತ ಅಲ್ಲಿಗೆ ಮತ್ತೆ-ಮತ್ತೆ ಬರುತ್ತಿದ್ದ. 


ಕಾರು, ಬಂಗಲೆ ಇರುವ ಶ್ರೀಮಂತ ಗಂಡ. ಆದರೆ, ಅವಳ ಇಚ್ಛೆಯಂತೆ ಮಗು ಪಡೆಯುವ ಭಾಗ್ಯ ಅವಳಿಗಿರಲಿಲ್ಲ. ಈಗ ಆಕೆಯಾ ಭಾವನೆಗಳನ್ನು ಅರ್ಥ ಮಾಡಿಕೊಂಡು ಸುಖದ ಹಾದಿಯಲ್ಲಿ ಮುನ್ನಡೆಸುವ ಪ್ರಿಯಕರ ಸಿಕ್ಕಿದ್ದ. 


ರಂಗೇಗೌಡನ ಹಳೆಲೈನ್ ರೂಮಿಗೆ ಪ್ರತಿದಿನವೂ ಪ್ರೀಮಿಯರ್ ಪದ್ಮಿನಿ ಬಂದು ಆತನನ್ನು ಕರೆ ತೊರೆಯುವುದು ಈಗ ಗುಟ್ಟಿನ ವಿಚಾರವೇನೂ ಆಗಿರಲಿಲ್ಲ.  ರತಿದೇವಿಯ ಬದುಕು ಹಸನಾಗುತ್ತಿತ್ತು. ಮೋಹನನಿಗೆ ತನ್ನದಲ್ಲದ ತನ್ನ ಸಂಸಾರವೊಂದು ಸಿಕ್ಕಿತ್ತು. ಆದರೆ, ರಂಗೇಗೌಡನಿಗೆ..???


ಬಡತನವಿದ್ದರೆ ಕಳೆದುಕೊಳ್ಳಲು ಮತ್ತೇನಿರುತ್ತದೆ ಎನ್ನಬಹುದಾದರೂ.. ಕಳೆದುಕೊಂಡ ಸಮಯ, ಕಳೆದುಕೊಂಡ ಗೌರವವಂತೂ ಮರಳಿ ಸಿಗಲು ಸಾಧ್ಯವಿರುವುದಿಲ್ಲ. ಅಲ್ಲವೇ..?? ಓದಬೇಕಿದ್ದ ಸಮಯದಲ್ಲಿ ಆತ ತನ್ನ ಓದನ್ನು ನಿರ್ಲಕ್ಷಿಸಿದ. ಆತನ ಕುರಿತು ಕನಸು ಕಂಡಿದ್ದ ತಂದೆ-ತಾಯಿ, ಅಕ್ಕ-ಭಾವನ ದೃಷ್ಟಿಯಲ್ಲಿಯೂ ಆತ ಕೆಳಗಿಳಿದಾಗಿತ್ತು. ಆತನ ಕುಟುಂಬದ ಹಿನ್ನೆಲೆ ತಿಳಿದಿದ್ದ ಮೋಹನ್ ಸಹಾ ಆತನಿಗೆ ಸಹಾಯ ಮಾಡಲು ಬರಲಿಲ್ಲ. ಅದಕ್ಕೂ ಕಾರಣವಿತ್ತು.


'ಕಾಮ'ವೆನ್ನುವ ಬೆಂಕಿಯಲ್ಲಿ.. ಬೆಂಕಿಯ ಸುಳಿಗೆ ಸಿಕ್ಕಿದ್ದ ಆತ ದಿಕ್ಕು ತಪ್ಪಿದ್ದ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಯ ರೆಕ್ಕೆ ಮುರಿದಂತಾಗಿತ್ತು. ಆತ ಕಂಡಿದ್ದ ಕನಸೆಲ್ಲವೂ ಸುಟ್ಟು ಕರಕಲಾಗಿತ್ತು. ಜಾನಕಿಯ ಮದುವೆ ನಿಶ್ಚಯವಾಗಿತ್ತು. 


ಹಳೆಯದೆಲ್ಲವನ್ನೂ ಮರೆತು, ಬದುಕಿನಲ್ಲಿ ಮರುಹುಟ್ಟು ಪಡೆಯಬೇಕೆಂದುಕೊಂಡ ರಂಗೇಗೌಡ ಅದೆಲ್ಲವನ್ನೂ ಬಿಟ್ಟು.. ಹಳ್ಳಿಯಲ್ಲಿ ತನ್ನ ತಂದೆ ಹೇಳಿದಂತೆ ಕೆಲಸ ಮಾಡಿಕೊಂಡು ಇದ್ದನಾದರೂ ಆತ ಮನಸ್ಸಿನಲ್ಲಿ ಅನುಭವಿಸುತ್ತಿದ್ದ ನರಕ ಉಳಿದವರಿಗೆ ನಿಲುಕುವಂತಹದ್ದಲ್ಲ.


ರತಿದೇವಿಗೆ ಮಗು ಹುಟ್ಟಿದ ವಿಚಾರ ತಿಳಿದು ಅಲ್ಲಿಗೆ ಹೋದಾಗ ಆತನಿಗೆ ಸಿಕ್ಕ ಮರ್ಯಾದೆ ಏನು..?? ಇದೆಲ್ಲವೂ ತಾನಾಗಿಯೇ ನಡೆದದ್ದೇ..?? ಅಥವಾ ಯಾರದ್ದಾದರೂ ಕೈವಾಡವಿತ್ತೇ..?? ರತಿದೇವಿಯ ಮನಸ್ಸಿನ ತುಮುಲಗಳೇನು..??

ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು. 


ಕಾಮದ ತುಡಿತ, ಹಪಾಹಪಿ ಹಾಗೂ ಅದನ್ನು ಪೂರೈಸಿಕೊಳ್ಳಲು ಇಳಿಯುವ ಹಾದಿ ಇದೆಲ್ಲದರ ಜೊತೆಗೆ ಗಂಡೊಬ್ಬನ ಮನಸ್ಸಿನ ತುಮುಲಗಳನ್ನು ಹಿಡಿದಿರುವ ಪ್ರಯತ್ನ ಇಲ್ಲಿದೆ. ಆದರೆ, ಇದೆಲ್ಲದಕ್ಕೂ ಅಚ್ಚರಿ ಮೂಡಿಸುವಂತೆ ಕಾದಂಬರಿಯ ಅಂತ್ಯವಿದೆ. ಇದು ರತಿದೇವಿ ತೆಗೆದುಕೊಳ್ಳುವ ತೀರ್ಮಾನವನ್ನು ಅವಲಂಬಿಸಿದೆ. ಮನುಷ್ಯ ತನಗೆ ಬೇಕಾದ ಸವಲತ್ತನ್ನು ಪೂರೈಸಿಕೊಳ್ಳಲು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಲ್ಲ ಎನ್ನುವ ನಿರ್ದಯತೆಯ ಜೊತೆಗೆ ಆತ ಆ ತೀರ್ಮಾನವನ್ನು ತೆಗೆದುಕೊಳ್ಳಲು ಸಿಲುಕಿದ ಅಸಹಾಯಕತೆಯ ಚಿತ್ರಣವೂ ಇಲ್ಲಿದೆ. 


ಯೌವ್ವನವಿದ್ದರೂ ಸಹಾ ಸಿಗಬೇಕಾದ ಬೆಂಬಲವಿಲ್ಲದಿದ್ದರೆ.. ಗಂಡೊಬ್ಬನನ್ನು ಸಹಾ ಅಸಹಾಯಕತೆಯ ಕೂಪದೊಳಗೆ ತಳ್ಳುವ ಶ್ರೀಮಂತಿಕೆಯ ದರ್ಶನ ಇಲ್ಲಿದೆ. ಕಾಲ್ಪನಿಕ ಎನ್ನಿಸಿದರೂ.. ಬಿಡುಬೀಸಾದ ಇಂತಹಾ ನಡೆಯನ್ನು ಕಲ್ಪಿಸಿಕೊಳ್ಳಲು ಕೊಂಚ ಧೈರ್ಯ ಬೇಕಾಗುತ್ತದೆ. ಇಂತಹಾ ಪರಿಸ್ಥಿತಿಯನ್ನು ಎದುರಿಸುವ, ಹೊರಗೆ ಕಾಣದ ನೋವನ್ನು ಮನಸ್ಸಿನಲ್ಲಿಯೇ ಅನುಭವಿಸುತ್ತಾ.. ಬೆಂಕಿಯ ಕಾವನ್ನು ಅನುಭವಿಸುವ ತಲ್ಲಣವೊಂದು ಕಾಡುತ್ತದೆ. ಅಂತ್ಯ ಹಾಗೂ ದಿಟ್ಟತನದ ಜೊತೆಗೆ ಗಂಡಿನ ಸೂಕ್ಷ್ಮತೆಯನ್ನು ಹಿಡಿದಿಟ್ಟ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ