ಪುಸ್ತಕದ ಶೀರ್ಷಿಕೆ : ಐ ಹೇಟ್ ಮೈ ವೈಫ್
ಲೇಖಕರು : ಜೋಗಿ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : 2021
ಪುಟಗಳು : 210
ಬೆಲೆ :180 ರೂ.
ಇದು ಜೋಗಿಯವರು ಬರೆದಿರುವ ಕೃತಿ. ಲೇಖನ ಹಾಗೂ ಕಥೆಗಳ ಮಿಶ್ರಿತ ರೂಪವೆಂದರೂ ತಪ್ಪಾಗಲಾರದು. ಲೈಫ್ ಈಸ್ ಬ್ಯುಟಿಫುಲ್ ಸರಣಿಯ ಆರನೆಯ ಪುಸ್ತಕ. ಜೋಗಿಯವರ ಪುಸ್ತಕಗಳ ವಿಶೇಷ ಎಂದರೆ ಶೀರ್ಷಿಕೆಯೇ ವಿಭಿನ್ನವಾಗಿದ್ದು ಓದಲು ಓದುಗರನ್ನು ಪ್ರೇರೇಪಿಸುತ್ತದೆ. ಎಷ್ಟೋ ಅನುಮಾನಗಳನ್ನು ಅಡಿಬರಹ ನಿವಾರಿಸಿಬಿಡುತ್ತದೆ. ಪ್ರೀತಿಸದ ಹೊರತು ದ್ವೇಷಿಸಲಾರೆ ಎನ್ನುವ ಅಡಿಬರಹವನ್ನು ಕಂಡ ತಕ್ಷಣ ಹೌದಲ್ಲವಾ ಎಂದೆನಿಸಿಬಿಡುತ್ತದೆ.
ಐ ಹೇಟ್ ಮೈ ಪೇರೆಂಟ್ಸ್, ಐ ಹೇಟ್ ಮೈ ಚೈಲ್ಡ್ ಅಂತಲೋ ಅಥವಾ ಐ ಹೇಟ್ ಮೈ ಹಸ್ಬೆಂಡ್ ಅಂತಲೋ ಶೀರ್ಷಿಕೆ ಯಾಕಿಡಲಿಲ್ಲ ಎನ್ನುವುದಕ್ಕೂ ಉತ್ತರ ದೊರೆಯುತ್ತವೆ.
ಜೋಗಿಯವರೇ ಬರೆದ ಹಾಗೆ
ಕೆಲಸ ಮುಗಿಯುತ್ತದೆ
ಶತ್ರುಗಳು ಮಿತ್ರರಾಗುತ್ತಾರೆ
ಗೆಳೆಯರು ಕಾಲವಾಗುತ್ತಾರೆ
ಬಂಧುಗಳು ನಿರ್ಗಮಿಸುತ್ತಾರೆ
ಮಕ್ಕಳು ದೂರವಾಗುತ್ತಾರೆ
ಕೊನೆಗೆ
ದ್ವೇಷಿಸಲಿಕ್ಕೋ ಪ್ರೀತಿಸಲಿಕ್ಕೋ
ಯಾರು ಉಳಿಯುತ್ತಾರೆ!
ಯಾರನ್ನು ಪ್ರೀತಿಸುತ್ತೀಯೋ
ಅವರನ್ನೇ ದ್ವೇಷಿಸು
ಐ ಹೇಟ್ ಮೈ ವೈಫ್
ದ್ವೇಷಿಸಲಿಕ್ಕೆ ಸಿಗುವ ಏಕೈಕ ವ್ಯಕ್ತಿ ಹೆಂಡತಿಯೋ ಅಥವಾ ಅಷ್ಟು ಪಾಪದ ವ್ಯಕ್ತಿಯೋ ಎಂಬ ಉತ್ತರ ತಿಳಿಯಲು ಓದುತ್ತಾ ಹೋದರೆ ವಿಭಿನ್ನ ಮಜಲುಗಳ ದರ್ಶನವಾಗುತ್ತಾ ಹೋಗುತ್ತದೆ.
ಗಂಡ ಮತ್ತು ಹೆಂಡತಿ ಮಾತ್ರವಲ್ಲ ಮದುವೆಯ ಕುರಿತ ಎಷ್ಟೋ ವಿಚಾರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಮಯೂಖ್ ಮತ್ತು ಸುವ್ರಾ ಇಬ್ಬರ ದಾಂಪತ್ಯದ ಮುಖೇನ ಅನ್ಯೋನ್ಯ ದಾಂಪತ್ಯದ ವಿಚಾರ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ನಿಜಕ್ಕೂ ಅನ್ಯೋನ್ಯ ದಾಂಪತ್ಯ ಎಂಬುದಕ್ಕೆ ಈ ರೀತಿಯ ವಿಚಾರಗಳಿರುತ್ತವೆಯಾ ಎಂದೂ ಅಚ್ಚರಿಯಾಯಿತು. ದಾಂಪತ್ಯ ಎಂಬ ಪರಿಕಲ್ಪನೆ ಒಬ್ಬೊಬ್ಬರಲ್ಲಿ ಒಂದೊಂದು ಬಗೆ.. ಸುಖ, ದುಃಖ, ಪ್ರೀತಿ , ದ್ವೇಷ ಎಲ್ಲವೂ ವಿಭಿನ್ನವೇ
ಒಲವು ತುಂಬುವುದಿಲ್ಲ ತುಂಬಿದರೆ ಒಲವಲ್ಲ
ಎಲ್ಲಿ ಹೋಯಿತು ಹಾಲು ಪಾತ್ರೆ ಬರಿದು
ಎನ್ನುತ್ತಾ ದಾಂಪತ್ಯದ ಸಾರ ಸರ್ವಸ್ವವೂ ಇದೆ ಎಂದೆನ್ನುತ್ತಲೇ ಕೆ.ಎಸ್.ನ ಅವರ ಮಾತನ್ನು ಉಲ್ಲೇಖಿಸುತ್ತಲೇ ಒಲವು ತುಂಬಿದ ಕುಟುಂಬ ಎಂದುಕೊಂಡಿದ್ದವರ ಮನೆಯಲ್ಲಿ ಡೈವೋರ್ಸ್ ಡಿನ್ನರ್ ಮಾಡಿದ್ದನ್ನು ಸಹಾ ಹೇಳುವಾಗ ದಾಂಪತ್ಯ ಎಂದರೆ ಹೀಗೂ ಇರುತ್ತದಾ ಎಂದೆನಿಸಿಬಿಟ್ಟಿತು.
ಅವನು ಮದುವೆಯಾದ
ಅವನ ಕತೆ ಮುಗಿಯಿತು
ಎಂದವರು ಅವನ ಮುಗಿದ ಸ್ವಾತಂತ್ರ್ಯವನ್ನು ಹಾಗೂ ಅವಳ ಶುರುವಾಗುವ ಸ್ವಾತಂತ್ರ್ಯವನ್ನು ಹೇಳುತ್ತಲೇ ಅವನ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ ಭಾಸವಾಗುವ ಅವಳನ್ನು ದ್ವೇಷಿಸುವುದಕ್ಕೆ ಅವಳನ್ನು ದ್ವೇಷಿಸಿಬಿಡುತ್ತನಾ..?? ಗಂಡ ಹೆಂಡತಿಯನ್ನು ದ್ವೇಷಿಸುವುದಕ್ಕೆ ಇರುವಷ್ಟು ಕಾರಣಗಳನ್ನು ಹೆಂಡತಿ ಗಂಡನನ್ನು ದ್ವೇಷಿಸುವುದಕ್ಕೆ ಕೊಡಲಾರಳು. ಅಥವಾ ಹೊಂದಿಕೊಂಡು ಬದುಕುವುದನ್ನು ಕಲಿತುಬಿಟ್ಟಿರುತ್ತಾಳೆ.
ಪ್ರೀತಿಸುವಷ್ಟೇ ಸಲೀಸಾಗಿ ದ್ವೇಷಿಸಬಹುದಾದರೂ ಅಷ್ಟು ಗಾಢ ಮತ್ತು ಸತತವಾಗಿ ಅನ್ನಿಸಬಾರದು ಎಂದೆನಿಸಿಬಿಡುತ್ತದೆ.
ಮಯೂಖ್ ಮತ್ತು ಸುವ್ರಾ ಪ್ರೀತಿಸಿದರೂ ದ್ವೇಷಿಸಿದರಾ..?? ದ್ವೇಷಿಸಿದರೂ ಕಾರಣವೇನಿರಬಹುದು..?? ಅದೆಲ್ಲವನ್ನು ಮೀರಿ ಅವರ ದಾಂಪತ್ಯ ಹೇಗಾಯಿತು..?? ಮಯೂಖ್ ಐ ಹೇಟ್ ಮೈ ವೈಫ್ ಎಂದದ್ದೇಕೆ..?? ನಿಜಕ್ಕೂ ಅವನು ದ್ವೇಷಿಸಿದನೇ..?? ದ್ವೇಷಿಸಿದ್ದು ಯಾರನ್ನು..??
ತಿಳಿಯಲು ತಪ್ಪದೇ ಈ ಪುಸ್ತಕ ಓದಿ. ಏಕತಾನತೆ ಅಥವಾ ಚರ್ವಿತ ಚರ್ವಣಗಳನ್ನು ಮೀರಿ ನಿಂತ ಪುಸ್ತಕ ಎನಿಸಿತು ನನಗೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ