ಪುಸ್ತಕದ ಶೀರ್ಷಿಕೆ : ನೆಟ್ ನೋಟ
ಲೇಖಕರು : ಸುಧೀಂದ್ರ ಹಾಲ್ದೊಡ್ಡೇರಿ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪ್ರಥಮ ಮುದ್ರಣ :ನವೆಂಬರ್ 2021
ಪುಟಗಳು : 160
ಬೆಲೆ :160 ರೂ.
ವಿಜ್ಞಾನ ಲೋಕವನ್ನು ಬಹಳ ಸರಳವಾಗಿ ಪರಿಚಯಿಸುತ್ತಾ ವಿಜ್ಞಾನ, ತಂತ್ರಜ್ಞಾನಗಳು ಹಾಗೂ ಆರೋಗ್ಯದ ಕುರಿತ ಸಂಶೋಧನೆಗಳಿಗೆ ಸರಳವಾದ ರೂಪ ನೀಡಿ, ವಿಸ್ತಾರವಾಗಿ, ಅರ್ಥವತ್ತಾಗಿ ನಿರೂಪಿಸಿರುವ ಪುಸ್ತಕವೇ 'ನೆಟ್ ನೋಟ'. ಮೊದಲಿಗೆ ಈ ಪುಸ್ತಕದ ಶೀರ್ಷಿಕೆಯನ್ನು ನೋಡಿದಾಗ ಇದು ತಂತ್ರಜ್ಞಾನದ ಕುರಿತ ಪುಸ್ತಕವಾಗಿರಬಹುದು ಎಂದೇ ಕೈಗೆತ್ತಿಕೊಂಡದ್ದು. ಆದರೆ, ಇಲ್ಲಿ ವಿಜ್ಞಾನದ ತಂತ್ರಜ್ಞಾನಗಳು ಅಡಕವಾಗಿವೆ. ಇಲ್ಲಿರುವುದು ಕಂಪ್ಯೂಟರ್ ತಂತ್ರಜ್ಞಾನವಲ್ಲ.. ಬದಲಾಗಿ, ಮುಂದುವರಿಯುತ್ತಿರುವ ಜಗತ್ತಿನಲ್ಲಿನ ನ್ಯಾನೋ ತಂತ್ರಜ್ಞಾನದಿಂದ ಹಿಡಿದು ಯುದ್ಧ ವಿಮಾನಗಳವರೆಗಿನ ವಿಜ್ಞಾನ ವಿಷಯಗಳಿವೆ. ವಿಸ್ಮಯಗೊಳಿಸುವಂತಹಾ ಹಲವು ನೋಟಗಳಿವೆ. ವಿಜ್ಞಾನದ ಕುರಿತಾಗಿ ಅವರು ನೆಟ್ಟ ನೋಟದಿಂದ ನಮಗೆ ದೊರೆತ ಈ ಪುಸ್ತಕವೇ "ನೆಟ್ ನೋಟ".
ಪ್ರತಿವಾರ ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ವಿಷಯಗಳನ್ನು ಹೆಕ್ಕಿ ಸರಳವಾಗಿ ಓದುಗರಿಗೆ ತಲುಪಿಸುತ್ತಿದ್ದ ಅಂಕಣಕಾರರಲ್ಲಿ ವಿಜ್ಞಾನಿಗಳಾಗಿದ್ದ ಸುಧೀಂದ್ರ ಹಾಲ್ದೊಡ್ಡೇರಿಯವರು ಪ್ರಮುಖರು. ಈ ಅಂಕಣ 20 ವರ್ಷಗಳ ಕಾಲ ವಿಜಯ ಕರ್ನಾಟಕದಲ್ಲಿ ಪ್ರತಿ ಸೋಮವಾರ ಬಂದಿದೆ. ಈ ಪುಸ್ತಕದ ಎಲ್ಲ ಲೇಖನಗಳು 21ನೇ ಏಪ್ರಿಲ್ 2020 ರಿಂದ 22ನೇ ಜೂನ್ 2001 ರ ವರೆಗೂ ಅಂದರೆ ಸುಧೀಂದ್ರ ಅವರು ಜೀವಿತದ ಕಡೆಯವರೆಗೂ ಬರೆದಿರುವ ಲೇಖನಗಳಾಗಿವೆ. ಈ ಪುಸ್ತಕ ಅವರ ಕೊನೆಯ 30 ಲೇಖನಗಳನ್ನು ಒಳಗೊಂಡಿದೆ. ಇವರ ವಾರದ ಅಂಕಣಗಳೆಂದರೆ.. ಸಾಮಾನ್ಯವಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಬೆಳಕಿಗೆ ಬರುವ ವಿಜ್ಞಾನಗಳ ಕುರಿತ ವಿಚಾರಗಳನ್ನು ಬೆಳಕಿಗೆ ತರುವ ಬರಹಗಳು.
ನನಗೆ ಈ ಪುಸ್ತಕದ ಕುರಿತು ಅನ್ನಿಸಿದೆಂದರೆ.. ಇಲ್ಲಿ ಹೆಚ್ಚಿನ ಲೇಖನ ಲೇಖನಗಳು ಕೊರೋನಾ ಕಾಲಘಟ್ಟದಲ್ಲಿ ಬರೆಯಲ್ಪಟ್ಟವು. ಸಾಂದರ್ಭಿಕ ಲೇಖನಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುವುದರಿಂದ.. ಇದು ಈ ಪುಸ್ತಕದ ಪಾಸಿಟಿವ್ ಕೂಡಾ ಹೌದು. ನೆಗೆಟಿವ್ ಕೂಡಾ ಹೌದು ಎಂದೆನಿಸುತ್ತದೆ. ಏಕೆಂದರೆ, ಕೊರೊನ ವೈರಸ್, ಲಸಿಕೆ, ತಂತ್ರಜ್ಞಾನ ಇವುಗಳು ಹೆಚ್ಚಿನ ಲೇಖನಗಳನ್ನು ಆವರಿಸಿವೆ. ಆ ಕಾಲಘಟ್ಟವನ್ನು ಅನುಭವಿಸಿರುವವರಿಗೆ ಅಥವಾ ಅದನ್ನು ಮತ್ತೆ ಮೆಲುಕು ಹಾಕುವವರಿಗೆ ಈ ಲೇಖನಗಳು ಒಂದು ರೀತಿಯ ವರದಾನವೆನ್ನಿಸುತ್ತವೆ. ಅಲ್ಲದೆ ನಾಲೆಡ್ಜ್ ಜೇಬಲ್ ಕೂಡಾ ಹೌದು. ಆದರೆ ಕೊರೋನಾ ಕಾಲಘಟ್ಟ ಮುಗಿದ ನಂತರ ಅಥವಾ ಮುಂದಿನ ಕೆಲವು ವರ್ಷಗಳ ನಂತರ ಕೊರೋನಾದ ಕುರಿತು ಅಲ್ಪಜ್ಞಾನ ಇರುವವರಿಗೆ ಅಥವಾ ಆ ಕಾಲಘಟ್ಟವನ್ನು ಅಷ್ಟು ಅನುಭವಿಸದೆ ಇರುವವರಿಗೆ ಈ ಲೇಖನಗಳು ಅಷ್ಟು ಕಾಡಲಾರವು. ಅಲ್ಲದೆ, ವಿಜ್ಞಾನದ ಅಂಕಣಗಳು ಎಂದಾಗ ಹೆಚ್ಚು ಕೊರೋನಾ ಕುರಿತೇ ಕಂಡುಬಂದಿತು. ಹಾಗೆಂದು, ಬೇರೆ ಲೇಖನಗಳು ಇಲ್ಲವೆಂದಲ್ಲ. ಆದರೆ, ಮೊದಮೊದಲಿನ, ಕೊನೆಯ ಅಂಕಣಗಳೆಲ್ಲವೂ ಕೊರೋನಾಮಯವೇ ಆಗಿವೆ. ಕೊರೋನಾ ಬಿಟ್ಟರೆ ಅಂಕಣಗಳಲ್ಲಿ ಹೆಚ್ಚು ಕಾಣುವ ಪದ 'ಆತ್ಮನಿರ್ಭರ'. ಇವು 2020-21 ರ ಟ್ರೆಂಡಿಂಗ್ ಅನಿಸಿದ್ದ ಎರಡು ಟಾಪಿಕ್ ಗಳು ಕೂಡಾ ಹೌದು.
ಮೊದಲಿಗೆ ಕೊರೋನಾ ಕುರಿತ ಬರೆದಿರುವ ಲೇಖನಗಳಲ್ಲಿ ಇರುವ ಪ್ರಮುಖ ವಿಚಾರವನ್ನು ಚುಟುಕಾಗಿ ತಿಳಿಸುತ್ತಿದ್ದೇನೆ. ಕೊರೋನಾ ಅಥವಾ ಕೋವಿಡ್ ಎಂದಾಕ್ಷಣ ಮೊದಲಿಗೆ ನೆನಪಾಗುವ ದೇಶವೆಂದರೆ ಚೀನಾ. ಕೊರೋನಾ ಸಮರ ಮುಂದುವರಿಯುತ್ತಿದ್ದ ಕಾಲದಲ್ಲಿ ಲಸಿಕೆಯನ್ನು ಬಳಸಿ ಅದನ್ನು ತಡೆಗಟ್ಟುವುದು, ಅದರಿಂದ ದೇಹದಲ್ಲಿ ಉಂಟಾಗುವ ಪರಿಣಾಮಗಳು, ಕೋ ವಾಕ್ಸಿನ್ ಗೆ ವಿಶ್ವ ಸಂಸ್ಥೆ ಮುದ್ರೆ ಹಾಕದಿದ್ದುದರ ಹಿಂದೆ ಇದ್ದಂತಹಾ ರಾಜಕಾರಣ, ಚೀನಾದ ಹುನ್ನಾರ ಬಯಲಾದದ್ದು, ಕೊರೋನಾ ಕಾಲಘಟ್ಟದಲ್ಲಿ ವೈರತ್ವ ಅಥವಾ ರಾಜಕಾರಣವನ್ನು ಬದಿಗಿಟ್ಟು ವೈರಸ್ ವಿರುದ್ಧ ಸಾಧಿಸಬೇಕಾದಂತಹಾ ವಿಜಯ, ಕೊರೋನಾ ಲಸಿಕೆ ಕಂಡುಹಿಡಿಯುವುದಕ್ಕೆ ಇದ್ದ ಅಡೆತಡೆಗಳು, ಮಾನವನ ಮೇಲೆ ಲಸಿಕೆಯ ಪ್ರಯೋಗ, ವೈಟಮಿನ್ ಡಿ ಬಳಸಿ ಕೊರೋನಾವನ್ನು ತಡೆಗಟ್ಟಬಹುದಾ..? ಕೊರೋನಾ ಲಸಿಕೆಯ ಮೇಲೆ ಇದ್ದ ಸೈಬರ್ ದಾಳಿ ಕೋರರ ಕಣ್ಣು, ಅದರಿಂದ ಆಗಬಹುದಾದಂತಹ ಹಾಗೂ ಆದಂತಹಾ ಅನಾಹುತಗಳು, ಕೋವಿದ್ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಕೋವಿಡ್ ಮುಂದಿನ ದಿನದ ಅಲೆಗಳು, ರಾಜಕೀಯ ದಾಳವಾಗಿ ಬಳಸಲಾದ ಕೋವಿಡ್-19 ವ್ಯಾಕ್ಸಿನ್ ಗಳು, ಬೇರೆ ದೇಶಗಳಲ್ಲಿ ನರಕ ಸೃಷ್ಟಿಸಿ ಚೀನಾ ತನ್ನ ಸ್ವರ್ಗವನ್ನು ಸೃಷ್ಟಿಸಿಕೊಳ್ಳುತ್ತಿರುವ ರೀತಿ ಇದೆಲ್ಲವೂ ಇಲ್ಲಿನ ಲೇಖನಗಳಲ್ಲಿದೆ.
ಚೀನಾಕ್ಕೆ ಸಂಬಂಧಿಸಿದಂತೆ ಮತ್ತೆರಡು ಲೇಖನಗಳಿವೆ. ವಿಜ್ಞಾನದ ಮುಂದುವರಿಕೆಯಲ್ಲಿ ಭಾರತ ಹಾಗೂ ಚೀನಾ ಎರಡರ ಬಳಿಯಲ್ಲಿಯೂ ಅಣ್ವಸ್ತ್ರಗಳು ಇದ್ದರೂ.. ತಾನು ಮೊದಲು ಬಳಸುವುದಿಲ್ಲ ಎಂದು ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆಯಾದರೂ.. ಚೀನಾ ಅಕಸ್ಮಾತಾಗಿ ದಾಳಿ ನಡೆಸಿದಾಗ ನಾವು ಅದನ್ನು ಎದುರಿಸಲು ಸಿದ್ಧರಾಗಿದ್ದೇವೆಯೇ..? ಚಂದ್ರಾನ್ವೇಷಣೆಯತ್ತ ಚೀನಾದ ಹೊಸ ಹೆಜ್ಜೆಗಳು ಹೇಗಿದ್ದವು..? ಎಂಬುದನ್ನು ತಿಳಿಸಿದ್ದಾರೆ.
ಕೊರೋನಾ ಕಾಲಘಟ್ಟದಲ್ಲಿ ಹೆಚ್ಚಿನವರು ಮನೆಯಲ್ಲಿಯೇ ಉಳಿದಿದ್ದರೂ ಬಾಹ್ಯಾಕಾಶ ಇಲಾಖೆಯು ವೆಬಿನಾರ್ ಮೂಲಕ ಎಲ್ಲರನ್ನೂ ಸೇರಿಸಿತ್ತು. ಅಲ್ಲಿ ಮಂಡನೆಯಾದ ಪ್ರಮುಖ ವಿಷಯವೆಂದರೆ.. ಇಸ್ರೋ ಚಟುವಟಿಕೆಯಲ್ಲಿ ಖಾಸಗಿಯವರು ಭಾಗಿಯಾಗಲು ಹೆಚ್ಚು ಅವಕಾಶ ನೀಡುವುದು. ಅದಕ್ಕಾಗಿ 'ಇನ್-ಸ್ಪೇಸ್' ಹಾಗೂ 'ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್' ಕಂಪನಿಗಳ ನಿರ್ದಿಷ್ಟ ಜವಾಬ್ದಾರಿಗಳನ್ನು ಗುರುತಿಸುವುದಾಗಿತ್ತು. ಅದರ ಅವಲೋಕನ ಇಲ್ಲಿದೆ.
ಭಾರತ ಕೊರೋನಾ ಸಮಯದಲ್ಲಿ ಅನುಭವಿಸಿದ ಮತ್ತೊಂದು ಸಮಸ್ಯೆ ಎಂದರೆ ಲೋಕಾಸ್ಟ್ ಮಿಡುತೆಗಳು. ಈ ಮಿಡತೆಗಳ ನಿಯಂತ್ರಣಕ್ಕೆ ಡ್ರೋನ್ ಬಳಸಬಹುದಾದ ರೀತಿಯನ್ನು ವಿವರಿಸಿದ್ದಾರೆ.
'ಆತ್ಮನಿರ್ಭರ' ಎನ್ನುವ ಪದ ಇಸ್ರೋದಲ್ಲಿ ಅಳವಡಿಕೆಯಾಗಿರುವುದರ ಪರಿಯನ್ನು ಹೇಳಿರುವುದರ ಜೊತೆಗೆ ಹೋಮಿ ಬಾಬಾರ ಹಾಗೂ ವಿಕ್ರಂ ಸಾರಾಭಾಯಿಯವರ ಆತ್ಮನಿರ್ಭರ ಕನಸುಗಳ ಕುರಿತು ಹೇಳಿದ್ದಾರೆ.
ಘನ, ದ್ರವ, ಅನಿಲ ಹಾಗೂ ಪ್ಲಾಸ್ಮಾಕ್ಕೂ ಹೊರತಾದ ದ್ರವ್ಯವಿದೆ ಎಂದು ನೂರು ವರ್ಷದ ಹಿಂದೆ ಹೇಳಿದ್ದ ಸತ್ಯೇನ್ದ್ರನಾಥ ಬೋಸ್ ಹಾಗೂ ಆ ದ್ರವ್ಯ ಸ್ಥಿತಿಯ ಲೇಖನವಿದೆ.
ಆಗಸದಲ್ಲಿ ಕಂಡು ಬರುವ ಧೂಮಕೇತುಗಳ ದರ್ಶನವಾಗಲು ಎಷ್ಟೋ ವರ್ಷಗಳು ಬೇಕಾಗುತ್ತವೆ. ಅವುಗಳ ಬಾಲ ನಿರ್ಮಾಣವಾಗುವ ಬಗ್ಗೆ, ಅವುಗಳು ಉಂಟಾಗುವ ಪರಿ, ಯಾವ ರೀತಿಯ ವಸ್ತುಗಳಿಂದ ಧೂಮಕೇತುಗಳು ಉಂಟಾಗುತ್ತವೆ..?? ಇದೆಲ್ಲವನ್ನು ಆಗ ಪ್ರಸ್ತುತವಾಗಿ ಕಂಡುಬಂದಿದ್ದ ಧೂಮಕೇತು 'ನಿಯೋವಿಸ್' ಮುಖೇನ ತೆರೆದಿಟ್ಟಿದ್ದಾರೆ.
ಜಿಲೆಟಿನ್ ಸ್ಪೋಟಗೊಂಡು ಕೆಲವರು ಸತ್ತಾಗ ಜಿಲೆಟಿನ್ ಕುರಿತು ಕುತೂಹಲ ಉಂಟಾಗಿದ್ದು ಹೌದು. ಜಿಲೆಟಿನ್ ಎಂದರೇನು ? ಹೇಗೆ ಸಿಗುತ್ತದೆ..?? ಅದರಿಂದ ಆಗುವ ಅನಾಹುತಗಳು, ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಹಾರುವ ತಟ್ಟೆಗಳು ಇದರ ಕುರಿತಾಗಿ ಹೆಚ್ಚಿನವರಿಗೆ ಕುತೂಹಲವಿತ್ತು. ಹಾರುವ ತಟ್ಟೆಗಳು ಕಂಡುಬಂದವು ಎಂದು ಕೆಲವರು ಹೇಳಿದ್ದ ಸಮಯದಲ್ಲಿ ಬರೆದಿದ್ದ ಲೇಖನ. ಹಾರುವ ತಟ್ಟೆಗಳನ್ನು ಯಾರು ಮೇಲೆ ಹಾರಿಸುತ್ತಾರೆ..?? ಅವುಗಳ ನಿರ್ವಹಣೆ ಹೇಗಿರಬಹುದು ಹಾಗೂ ಅನ್ಯಗ್ರಹ ಜೀವಿಗಳ ಕುರಿತಾದ ಕುತೂಹಲಕ್ಕೊಂಡು ಸಮರ್ಪಕ ಉತ್ತರ ನೀಡಿದ್ದಾರೆ.
ಸೂರ್ಯ, ಚಂದ್ರರ ಹೊರತಾಗಿ ಬರಿಗಣ್ಣಿಗೆ ಗೋಚರವಾಗುವ ಶುಕ್ರ ಗ್ರಹಕ್ಕೆ ನಕ್ಷತ್ರದ ಹೊಳಪಿದೆ. ಈ ಗ್ರಹ ನಮ್ಮೆಲ್ಲರಿಗೂ ಬೆಳ್ಳಿಚುಕ್ಕಿ ಎಂದೇ ಪರಿಚಿತ. ಇಂತಹಾ ಕುತೂಹಲಕಾರಿ ಗ್ರಹದಲ್ಲಿ ಕಂಡು ಬಂದ ಜೀವದಾತುವಿನ ಕುರಿತ ಪರಿಚಯಾತ್ಮಕ ಬರಹವಿದೆ.
ಜೇಡಗಳು ಬಲೆ ಹೆಣೆಯುತ್ತವೆ ಹೌದು. ಆದರೆ ಗುರುತ್ವ ಬಲವಿಲ್ಲದೆಯೇ ಜೇಡ ಬಲೆ ಹೆಣೆಯಬಲ್ಲದಾ..?? ಹಾಗಿದ್ದರೆ, ಅದು ಹೇಗಿರುತ್ತದೆ ? ಜೊತೆಗೆ, ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿಗಳ ಬೆಳವಣಿಗೆ ಹೇಗೆ..?? ಅಲ್ಲಿ ಸೂಕ್ಷ್ಮಜೀವಿಗಳು ಇರುತ್ತವಾ ಎನ್ನುವ ಕುತೂಹಲಕ್ಕೆ ನಡೆದಿರುವ ಪ್ರಯೋಗಗಳನ್ನು ಉದಾಹರಿಸುತ್ತಾ.. ಅಲ್ಲಿನ ಅಡೆ-ತಡೆ ಅವುಗಳನ್ನೆಲ್ಲ ಮೀರಿ ಉತ್ತರ ಕಂಡುಕೊಂಡ ಬಗೆ ಇಲ್ಲಿದೆ.
ಹಮ್ಮಿಂಗ್ ಬರ್ಡ್ ಎನ್ನುವ ಹಕ್ಕಿ ಜಗತ್ತಿನ ಪುಟ್ಟ ಪಕ್ಷಿಯೂ ಹೌದು. ಜೊತೆಗೆ, ಅದು ಹಿಂದು ಮುಂದಾಗಿಯೂ ಹಾರಬಲ್ಲದು. ಇದಕ್ಕೂ ವಿಮಾನ ವಿಜ್ಞಾನಕ್ಕೂ ಏನಾದರೂ ಸಂಬಂಧವಿದೆಯಾ..?? ಎನ್ನುತ್ತಾ ಕುತೂಹಲಕಾರಿ ಶೀರ್ಷಿಕೆಯೊಂದಿಗೆ, ಅದರ ಹಿಂದಿನ ಜೀವವಿಜ್ಞಾನ ಹಾಗೂ ಅಂತರಿಕ್ಷ ವಿಜ್ಞಾನದ ಕೆಲವು ಸಾಮ್ಯತೆಗಳನ್ನು ತೆರೆದಿಟ್ಟಿದ್ದಾರೆ.
ಹೆಚ್ಚಿನವರಿಗೆ ಕಾಫಿ ಕುಡಿಯುತ್ತಾ.. ಕುಡಿಯುತ್ತಾ ಅದು ಚಟವಾಗಿ ಪರಿಣಮಿಸಬಲ್ಲದು. ಮನೆಯಲ್ಲಿ ಕಾಫಿ ಕುಡಿಯುವ ಹಿರಿಯರಿದ್ದರಂತೂ.. ಅವರನ್ನು ತಡೆಗಟ್ಟುವವರೇ ಇಲ್ಲವೇನೋ ಎಂಬಂತೆ ಅದನ್ನು ರೂಡಿಸಿಕೊಳ್ಳುತ್ತಾರೆ. ಇದು ಅನುವಂಶಿಕವಾದ ಚಟವೇ..?? ಅಥವಾ ಸುತ್ತಮುತ್ತ ಕಾಫಿ ಅಂಗಡಿಗಳು ಇದ್ದುದರ ಫಲವಾಗಿ ಅಂದರೆ ಪರಿಸರ ಪ್ರೇರಿತವೇ..?? ಎನ್ನುವ ಕುತೂಹಲಕರ ಪ್ರಶ್ನೆಯೊಂದನ್ನು ಮೂಡಿಸಿ ಅಷ್ಟೇ ಕುತೂಹಲಕರವಾದ ಉತ್ತರವನ್ನೂ ನೀಡುತ್ತಾರೆ.
ಹೀಗೆ ಹೆಚ್ಚಿನ ಕುತೂಹಲಕರ ವಿಚಾರಗಳ ಮೂಲಕ.. ಪ್ರಯೋಗ, ಉದಾಹರಣೆಗಳನ್ನು ನೀಡಿ ಸ್ವಾರಸ್ಯಕರವಾಗಿ.. ಅಷ್ಟೇ ಅರ್ಥವತ್ತಾಗಿ ಅವುಗಳ ಮೂಲಕವೇ ನಮ್ಮ ಕುತೂಹಲವನ್ನು ಕೆದರಿಸುತ್ತಾ.. ಓದಿಸಿಕೊಂಡು ಹೋಗುವಂತೆ ಬರೆದಿದ್ದಾರೆ ಸುಧೀಂದ್ರ ಹಾಲ್ದೊಡ್ಡೇರಿಯವರು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ