ಅವಳೇನು ಕಲ್ಲಲ್ಲ
ಶಾಪಗ್ರಸ್ತ ಅಹಲ್ಯೆಯೂ ಅಲ್ಲ
ಬಿಡುಗಡೆಗೆ ಯಾರಿಗೋ ಕಾಯುವುದಕ್ಕೆ
ಅವಳೇನು ಕಲ್ಲಲ್ಲ
ಉಳಿಪೆಟ್ಟು ತಿಂದು ಶಿಲೆಯಾಗಲು
ಪೆಟ್ಟು ಕೊಟ್ಟರೆ ಸಿಡಿದು ಚೂರಾಗಬಲ್ಲಳು
ಅವಳೇನು ಕಲ್ಲಲ್ಲ
ಅಂದದ್ದನ್ನು ಎದೆಗಂಟಿಸಿಕೊಳ್ಳದಿರಲು
ಅಂದದ್ದನ್ನು ಸಹಸ್ರವಾಗಿಸಿ ಮಾರ್ದನಿಸಬಲ್ಲಳು
ಅವಳೇನು ಕಲ್ಲಲ್ಲ
ಇದ್ದಂತೆಯೇ ಇದ್ದುಬಿಡಲು
ಬಿರುಗಾಳಿಯಂತೆ ಆವರಿಸಿಕೊಳ್ಳಬಲ್ಲಳು
ಅವಳೇನು ಕಲ್ಲಲ್ಲ
ಯಾರು ಬಂದರೂ ತೆಪ್ಪಗಿರಲು
ಅತಿಕ್ರಮಿಸಿದವರನ್ನು ಹೊಡೆದೋಡಿಸಬಲ್ಲಳು
ಅವಳೇನು ಕಲ್ಲಲ್ಲ
ಯಾರ ನೋವೂ ಅರಿವಾಗದಿರಲು
ತನ್ನ ನೋವು ತಿಳಿಯದಂತೆ ನಟಿಸುತ್ತಾಳಷ್ಟೇ
ಅವಳೇನು ಕಲ್ಲಲ್ಲ
ಬಿದ್ದಲ್ಲಿಯೇ ಬಿದ್ದುಕೊಂಡಿರಲು
ಎದ್ದು ನಿಂತರೆ ಕ್ರಾಂತಿಯನ್ನೇ ಮಾಡಬಲ್ಲಳು
ಅವಳೇನು ಕಲ್ಲಲ್ಲ
ದೂರಿದ್ದನ್ನೆಲ್ಲಾ ಕೇಳಿಕೊಂಡಿರಲು
ದೂರಿದವರನ್ನು ಧೂಳೀಪಟಮಾಡಬಲ್ಲಳು
ಅವಳೇನು ಕಲ್ಲಲ್ಲ
ಮೆಟ್ಟಿಲ್ಲನ್ನಾಗಿಸಿ ತುಳಿಯಲು
ದೇವರ ರೂಪದಲ್ಲಿ ಪೂಜಿಸಿಕೊಳ್ಳುತ್ತಾಳೆ
ಅವಳೇನು ಕಲ್ಲಲ್ಲ
ಸತ್ತ ಹಾಗೆ ಜೀವಿಸುತ್ತಿರಲು
ಸದಾ ಜೀವಂತಿಕೆ ತುಂಬಿರುವ ಹೆಣ್ಣವಳು
ಅವಳೇನು ಕಲ್ಲಲ್ಲ
ಎಂದಿಗೂ ಕಲ್ಲಾಗಲಾರಳು
ಕರಗಬಲ್ಲಳು, ಮರುಗಬಲ್ಲಳು, ಮೃತ್ಯುವೂ ಆಗಬಲ್ಲಳು
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ