ಶುಕ್ರವಾರ, ಏಪ್ರಿಲ್ 10, 2026

ಬಣ್ಣದ ಹಸೆಮಣೆ (ಪುಸ್ತಕ ಯಾನ - 109)


ಪುಸ್ತಕದ ಶೀರ್ಷಿಕೆ : ಬಣ್ಣದ ಹಸೆಮಣೆ 

ಲೇಖಕರು : ಹೆಚ್.ಜಿ ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2001

ಎರಡನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)


ಎಷ್ಟೋ ಕಡೆ ನಿಶ್ಚಿತ ವಧು ಅಥವಾ ವರ ಮದುವೆ ಬೇಡವೆಂದು ಮದುವೆಯನ್ನು ಅರ್ಧದಲ್ಲಿಯೇ ತಿರಸ್ಕರಿಸಿದ್ದಿದೆ. ನಿಶ್ಚಿತಾರ್ಥ ನಡೆದ ನಂತರ ತಮ್ಮದೇ ಆದ ಕಾರಣಗಳಿಂದ.. ಉದ್ಯೋಗ,ಹಣಕಾಸು, ಹೊಂದಾಣಿಕೆ ಹೀಗೆ ಸಾಕಷ್ಟು ಕಾರಣಗಳಿಂದ ವಿವಾಹದವರೆಗೂ ಸಾಗುವುದಿಲ್ಲ. ಹೀಗೆ ನಿಶ್ಚಿತಾರ್ಥದ ಹಸೆಮಣೆ ಬಣ್ಣದ ಹಸೆಮಣೆ.. ವಿವಾಹದ ಹಸೆಮಣೆ ಮಾತ್ರವೇ ನೈಜ ಎಂಬರ್ಥದಲ್ಲಿ ರಚಿತವಾದ ರಾಧಾದೇವಿಯವರ ಕಾದಂಬರಿಯಿದು.


ರಾಮರಾಯರು ಹಾಗೂ ಸುಶೀಲಮ್ಮನವರಿಗೆ ಮೂರು ಮಕ್ಕಳು. ಶುಭವಂತಿ, ಸಿರಿವಂತಿ ಹಾಗೂ ಜಯವಂತಿ. ಶುಭವಂತಿಯದ್ದು ಮದುವೆಯಾಗಿದೆ. ಸಿರಿಯದ್ದು ಮದುವೆಯಾಗಿಲ್ಲ. ಆಕೆಯನ್ನು ನೋಡಲು ಬಂದ ಗಂಡುಗಳು ಕೇಳಿದ್ದನ್ನೆಲ್ಲಾ ಬಡತನದಿಂದಾಗಿ ಪೂರೈಸಲಾಗದೆ ಇನ್ನೂ ಆಕೆಯ ವಿವಾಹ ನಿಶ್ಚಿತವಾಗಿಲ್ಲವಾಗಿಲ್ಲ. ಆಕೆ ಪಿ.ಯು.ಸಿ ಅನುತ್ತೀರ್ಣಳಾಗಿ ಓದು ತಲೆಗೆ ಹತ್ತದಿದ್ದರೂ..  ತಾಯಿಗೆ ಸಹಾಯಕಿಯಾಗಿದ್ದ ಗುಣವಂತೆ. ಜಯವಂತಿ ಬುದ್ಧಿವಂತೆ. ಆರು ಸಾವಿರ ಸಂಬಳದ ಕೆಲಸವಿತ್ತು. ಅಕ್ಕನ ಮದುವೆಗಾಗಿ ತಂದೆ-ತಾಯಿಯರು ಎರಡು ಸಾವಿರ ಉಳಿತಾಯಕ್ಕಾಗಿ ಕೇಳಿದರೂ.. ಕೊಡದಂತೆ.. ತನ್ನ ಸ್ವಂತಕ್ಕೆ ಉಳಿಸಿಕೊಳ್ಳುತ್ತಿದ್ದವಳು. ಒಂದು ರೀತಿಯಲ್ಲಿ ಸ್ವಾರ್ಥಿಯೇ.


ರಾಮರಾಯರ ತಂದೆ 80 ವರ್ಷದ ಶಾಮರಾಯರು ಹಾಗೂ ತಾಯಿ ಜಯಮ್ಮನವರಿಗೆ 70 ವರ್ಷ. ಬೆಂಗಳೂರು ಹತ್ತಿರದ ಊರಿನಲ್ಲಿದ್ದವರು. ಅವರಿಗೆ ಮೂವರು ಮಕ್ಕಳು. ದೊಡ್ಡ ಮಗ-ಸೊಸೆ ಅವರ ಊರಿನಲ್ಲಿ ಗದ್ದೆಯನ್ನು ನೋಡಿಕೊಳ್ಳುತ್ತಿದ್ದರು. ರಾಮರಾಯರು ಪಿತ್ರಾರ್ಜಿತವಾದ ಗದ್ದೆಯನ್ನು ಅಣ್ಣನಿಗೆ ಮಾರಿ ತಮ್ಮ ಪಾಲಿನ ಹಣ ಪಡೆದು ಕೋಲಾರಕ್ಕೆ ಬಂದು ಅಲ್ಲಿ ಒಂದು ಸಾಮಾನ್ಯ ಮನೆ ಕೊಂಡುಕೊಂಡು ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಮೂರನೆಯ ಮಗ ಕೃಷ್ಣ ಹಾಗೂ ಅವರ ಹೆಂಡತಿ ರಾಧಾ ಬೆಂಗಳೂರಿನಲ್ಲಿದ್ದರು. ಇದ್ದುದರಲ್ಲಿ ಅವರೇ ಸ್ಥಿತಿವಂತರು. ಎರಡು ವರ್ಷಕ್ಕೊಮ್ಮೆ ಮೂರು ಮನೆಯಲ್ಲಿಯೂ ಆರಾರು ತಿಂಗಳು ವಾಸ್ತವ್ಯ. ಇನ್ನಾರು ತಿಂಗಳು ತೀರ್ಥಯಾತ್ರೆ. ಮಕ್ಕಳ ಮನೆಗೆ ಬರೀ ಕೈಯಲ್ಲಿ ಬರದೇ.. ಅರ್ಧ ಲಾರಿಯಷ್ಟು ಬೇಕಾದ ಸಾಮಾನುಗಳನ್ನೆಲ್ಲ ಹೇರಿಕೊಂಡೇ ಬರುತ್ತಿದ್ದದ್ದು. 


ಈ ಬಾರಿ ಹಾಗೆ ಬಂದವರೇ.. ರಾಧಾ ಸಂಬಂಧಿಕರ ಮದುವೆಗೆ ಹೊರಟು ನಿಂತಿದ್ದರು. ಅಲ್ಲಿಗೆ ಸಿರಿಯನ್ನೂ ಕರೆದುಕೊಂಡು ಹೋದರೆ.. ಯಾವುದಾದರೂ ವರ ಒಪ್ಪಿ ಕೇಳಿದರೆ, ಅವಳ ವಿವಾಹಕ್ಕೆ ಅನುಕೂಲವೆಂಬ ದೂರಲೋಚನೆ ಅವರದ್ದು. ಇದಕ್ಕೆ ತಕ್ಕ ಫಲ ಸಿಕ್ಕು.. ಸಿರಿಗೆ ಒಳ್ಳೆಯ ಇಂಜಿನಿಯರ್ ಗಂಡನಾಗಿದ್ದ. ಈಗ ಉಳಿದದ್ದು ಜಯವಂತಿಯ ವಿಚಾರ.


ಈಗಾಗಲೇಬಜಯವಂತಿ ಹಾಗೂ ಚಂದ್ರುವಿನ ನಿಶ್ಚಿತಾರ್ಥವಾಗಿರುತ್ತದೆ. ಚಂದ್ರು ಇದ್ದದ್ದು ಜಯವಂತಿಯವರ ಮನೆಯ ಮುಂಭಾಗದಲ್ಲಿದ್ದ ಕೋಣೆಯ ಬಾಡಿಗೆಗೆ. ಸಹೋದ್ಯೋಗಿಯಾಗಿದ್ದ ಅವರಿಬ್ಬರಿಗೂ ಪ್ರೀತಿಯಾಗಿ.. ಜಯವಂತಿ ತನ್ನದೇ ಉಳಿತಾಯದ ಹಣ ಕೊಟ್ಟು, ಅವರ ಸೋದರ ಮಾವನ ಮನೆಯಲ್ಲಿಯೇ ನಿಶ್ಚಿತಾರ್ಥದ ಶಾಸ್ತ್ರವನ್ನೂ ಮುಗಿಸಿಕೊಂಡಿದ್ದಳು.


ಚಂದ್ರುವಿನ ತಾಯಿ ಅಚ್ಚಮ್ಮನವರದ್ದು ದೂರದೃಷ್ಟಿ. ಹಾಗಾಗಿಯೇ.. ಅಂದಕ್ಕಿಂತಲೂ.. ಹಣ ತರುವ ಸಂಪಾದಿಸುವ ಸೊಸೆ ಇರಲಿ, ತನ್ನ ಇಬ್ಬರು ಹೆಣ್ಣು ಮಕ್ಕಳ ವಿವಾಹಕ್ಕೂ ಅನುಕೂಲವಾದೀತು ಎಂದು ಅಷ್ಟೇನೂ ಸುಂದರಿಯಲ್ಲದವಳನ್ನು ಒಪ್ಪಿದ್ದರು.  ಚಂದ್ರುವಿಗೂ ಇದೇ ದೃಷ್ಟಿ ಇತ್ತು. ಮನೆಯಲ್ಲಿನ ಇಬ್ಬರು ಹೆಣ್ಣು ಮಕ್ಕಳ ಮದುವೆಯ ಸಾಲಕ್ಕೆ ತನ್ನ ಸಂಬಳ ಖರ್ಚಾದರೂ.. ಜಯವಂತಿಯಿಂದ ತನಗೆ ಹಣಕಾಸಿನ ಸಹಾಯವಾಗುತ್ತದೆ ಎಂದಿತ್ತು.


 ಆದರೆ, ಜಯವಂತಿಗೆ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಹುಡುಗನೀತ. ಈತನ ಅಮ್ಮ ದೂರದಲ್ಲಿರುತ್ತಾರೆ. ನಾವಿಬ್ಬರೇ ಆರಾಮಾಗಿ ಇರಬಹುದೆಂಬ ಕನಸು ಕಂಡಿದ್ದಳು. ಆದರೆ, ಅವಳ ಕನಸೆಲ್ಲವೂ ಚೂರಾಗಿತ್ತು. ತಮ್ಮನ ಮನೆಯಲ್ಲಿದ್ದ ಅಚ್ಚಮ್ಮನವರನ್ನು ತಾನಿದ್ದ ಸ್ಥಳಕ್ಕೆ ಕರೆಸಿಕೊಂಡು ಜಯವಂತಿಯ ಮನೆಗಿಂತ ಪುಟ್ಟ ಮನೆಯನ್ನೂ ಮಾಡಿದ ಚಂದ್ರು. ಚಿಕ್ಕ ಮನೆಯ ಜೊತೆಗೆ ಅತ್ತೆಯ ಕಿರಿಕಿರಿ, ಗೆಳತಿ ಪ್ರಮೀಳಾಳ ಮಾತು ಎಲ್ಲದರಿಂದ.. ದಿನೇದಿನೇ ವಿರಸ ಹೆಚ್ಚಾಗುತ್ತಾ ಹೋಗಿ, ಕೊನೆಗೊಂದು ದಿನ ನಿಶ್ಚಿತಾರ್ಥ ಮುರಿಯಿತು. ಅವಳ ಅಹಂಕಾರದಿಂದ ಎಲ್ಲವನ್ನೂ ಹಾಳುಮಾಡಿಕೊಂಡಿದ್ದಳು.


ಇದರ ನಂತರ ಚಂದ್ರುವಿನ ಬದುಕಿಗೆ ಬಂದದ್ದು ಅಚ್ಚಮ್ಮನವರ ತಮ್ಮನ ಮಗಳಾದ ಶ್ರೀಲಲಿತ. ಅಚ್ಚಮ್ಮನ ಎರಡನೇ ಅಳಿಯನ ಚಿಕ್ಕಪ್ಪ-ಚಿಕ್ಕಮ್ಮ ಅದೇ ಊರಲ್ಲಿದ್ದರು. ಮದುವೆಯ ಓಡಾಟದಲ್ಲಿ ಶ್ರೀಲಲಿತಾಳನ್ನು ಕಂಡು ತಮ್ಮ ಅಂಗಡಿಯಲ್ಲಿ ಇಂತಹಾ ಚುರುಕಾದ ಹುಡುಗಿ ಇದ್ದರೆ ಚೆನ್ನಾಗಿತ್ತೆಂಬ ಇಂಗಿತ ವ್ಯಕ್ತಪಡಿಸಿದ್ದರು. ಅಚ್ಚಮ್ಮನಿಗೆ ಅದೇ ಸಾಕಾಗಿ, ಚಂದ್ರು ಕಣ್ಮುಂದೆ ಶ್ರೀಲಲಿತ ಓಡಾಡುತ್ತಿದ್ದರೆ ಅವನ ಮನಸ್ಸು ಬದಲಾಗಬಹುದು ಉಪಾಯ ಮಾಡಿದ್ದರು. ಬಡವರ ಮನೆಯಲ್ಲಿಯೇ ಇದ್ದರೂ.. ಶ್ರೀಲಲಿತ ನೋಡಲು ಲಕ್ಷಣವಾಗಿಯೇ ಇದ್ದಳು. ಕೆಲಸಕ್ಕೂ ಹೋಗಿ-ಬಂದು ಮನೆಯಲ್ಲಿಯೂ ಅನುಸರಿಸಿಕೊಂಡು ಸಹಾಯ ಮಾಡುತ್ತಾ.. ಆ ಮನೆಯಲ್ಲಿ ಹೊಂದಿಕೊಂಡು ಬಾಳುತ್ತಿದ್ದಳು. ಚಂದ್ರು ಕೂಡಾ ಮನಸ್ಸು ಬದಲಾಯಿಸಿ ಶ್ರೀಲಲಿತಾಳೇ ಆಗಬಹುದು ಎಂದು ಮನಸಾರೆ ಒಪ್ಪದಿದ್ದರೂ.. ಜಯವಂತಿಯ ಮೇಲಿನ ಜಿದ್ದಿಗಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡನು.


ಆದರೆ ನಿಶ್ಚಿತಾರ್ಥದ ನಂತರ ಅಚ್ಚಮ್ಮನವರ ವರಸೆ ಬದಲಾಯಿತು. ಅತಿಯಾಸೆ, ಲಾಲಸೆ, ದರ್ಪ ಎಲ್ಲವೂ ಸೇರಿ ಶ್ರೀಲಲಿತಾಳ ಮೇಲೆ ದಬ್ಬಾಳಿಕೆ ನಡೆಸಿತೊಡಗಿದರು. ಚಂದ್ರುವಿನ ಸ್ವಭಾವವೂ ಬದಲಾಗಿತ್ತು. ಜಯವಂತಿಯ ಮುಂದೆ ವಿನಯದಿಂದ ವರ್ತಿಸುತ್ತಿದ್ದವನು, ಶ್ರೀಲಲಿತಾಳ ಜೊತೆಗೆ ದರ್ಪದಿಂದ ವರ್ತಿಸುತ್ತಿದ್ದ. ಶ್ರೀಲಲಿತಾ ಎಲ್ಲವನ್ನೂ ಗಮನಿಸುತ್ತಿದ್ದಳು. ಮೃದು ಸ್ವಭಾವದವಳಾದರೂ.. ಎಲ್ಲದಕ್ಕೂ ಕುಗ್ಗುವ ಹೆಣ್ಣಾಗಿರಲಿಲ್ಲ. ಎಲ್ಲವೂ ಮೇರೆ ಮೀರಿದಾಗ, ತಾಳ್ಮೆ ಕಳೆದುಕೊಂಡ ಆಕೆ.. ಅವರ ಮನೆಯನ್ನು ತೊರೆದು, ನಿಶ್ಚಿತಾರ್ಥವನ್ನು ಮುರಿದು.. ತಾನು ಕೆಲಸ ಮಾಡುತ್ತಿದ್ದವರ ಮನೆಗೆ ಹೊರಟಳು. ನಂತರ, ಅವಳ ವಿವಾಹವೂ ಆಯಿತು.


ಚಂದ್ರು ಶ್ರೀಲಲಿತಾಳ ಜೊತೆಗೆ ನಿಶ್ಚಿತಾರ್ಥ ಮುರಿದುಕೊಂಡದ್ದಕ್ಕೆ ಮತ್ತೊಂದು ಕಾರಣವೂ ಇತ್ತು. ಅವನ ಬಾಳಲ್ಲಿ ಪ್ರವೇಶಿಸಿದ ಮತ್ತೊಂದು ಹೆಣ್ಣು ಯಾರು..? ಚಂದ್ರು ಜಯವಂತಿಯವನ್ನು ನಿಜಕ್ಕೂ ಪ್ರೇಮಿಸಿದ್ದನೇ..?? ಅಥವಾ ಅವನ ಅನುಕೂಲಕ್ಕಾಗಿನ ಆಟವೇ..?? ಹೂವಿಂದ ಹೂವಿಗೆ ಹಾರುವ ದುಂಬಿಯಂತಿದ್ದ ಚಂದ್ರುವಿನ ವಿವಾಹವಾಯಿತೇ..?? ಅಚ್ಚಮ್ಮನ ಅತಿ ಆಸೆಗೆ ಯಾವ ಫಲ ದೊರಕಿತು..??


ಹೆಣ್ಣಿನ ವಿವಾಹ ಮೊದಲಿಗೆ ನಿಶ್ಚಯವಾಗುವುದೇ ಕಷ್ಟವಾಗಿದ್ದಾಗ.. ಒಂದು ಬಾರಿ ನಿಶ್ಚಿತಾರ್ಥ ಮುರಿದ ಜಯವಂತಿಯ ವಿವಾಹ ಕೂಡಿ ಬರುವುದೇನೂ ಸುಲಭವಾಗಿರಲಿಲ್ಲ. ಅದರಲ್ಲಿಯೂ ಪ್ರಮೀಳಾಳ ಕುತಂತ್ರವೂ ಸೇರಿತ್ತು. ಪ್ರಮೀಳಾ ದೆಸೆಯಿಂದ ಅವಳ ಬಾಳಲ್ಲಿ ಮತ್ತೊಬ್ಬ ಹುಡುಗನ ಪ್ರವೇಶವೂ ಆಗುತ್ತದೆ.  ಅವಳ ವಿವಾಹವಾಯಿತೇ..??


ಚಂದ್ರುವಿನ ಹಾಗೂ ಜಯವಂತಿ ವಿವಾಹದ ಹಸೆಮಣೆ ಏರಿದರೇ..?? ಅಥವಾ, ಅದು ಬಣ್ಣದ ಹಸೆಮಣೆಯೇ ಆಯಿತಾ..?? ಇಲ್ಲಿ ತಪ್ಪು ಯಾರದ್ದು..?? ಜಯವಂತಿಯದ್ದೇ..?? ಚಂದ್ರುವಿನದ್ದೇ..?? ಅಥವಾ ಯಾರದ್ದು..?? ತಿಳಿಯಲು ಓದಿ ಹೆಚ್.ಜಿ. ರಾಧಾದೇವಿಯವರ 'ಬಣ್ಣದ ಹಸೆಮಣೆ' ಕಾದಂಬರಿಯನ್ನು. 


ಇದರಲ್ಲಿ ನನಗೆ ಬಹಳ ಮೆಚ್ಚುಗೆಯಾದ ಪಾತ್ರ ಶೀಲಲಿತಾಳದ್ದು. ಎಲ್ಲದಕ್ಕೂ ಹೊಂದಿಕೊಂಡು ಹೋಗುವ ಹುಡುಗಿಯಾದರೂ.. ತನಗೆ ಅನ್ಯಾಯವಾಗುತ್ತಿದೆ, ತನ್ನ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತಿದೆ ಎಂದಾಗ.. ಅದನ್ನು ಸಹಿಸದೆ, ಸಿಡಿದು ನಿಂತು ಸರಿಯಾದ ಪಾಠ ಕಲಿಸಿ, ತನ್ನ ಬದುಕನ್ನು ನೇರ ಮಾಡಿಕೊಂಡಳು. ಕಷ್ಟ ಪಟ್ಟವರಿಗೆ ಮುಂದೆ ಸುಖವೂ ಸಿಗುತ್ತದೆ ಎಂಬುದು ಶ್ರೀಲಲಿತಾಳ ಮೂಲಕ ಸಾಬೀತಾಯಿತು.


ಹಾಗೆಯೇ ಕಷ್ಟಗಳನ್ನು ಅನುಭವಿಸಿದ್ದ ಜಯವಂತಿಯ ಅಕ್ಕ ಸಿರಿಯ ವಿವಾಹ ಕೂಡ ಚೆನ್ನಾಗಿಯೇ ನಡೆದಿತ್ತು. ಅಲ್ಲದೆ, ಆಕೆ ದೈವಭಕ್ತೆ ಕೂಡ. ಶ್ರೀನಿವಾಸ ಕಲ್ಯಾಣವನ್ನು ಹೇಳಿಕೊಳ್ಳುತ್ತಿದ್ದ ಆಕೆಯ ವಿವಾಹ ನಿಶ್ಚಯವಾದುದು ಅವಳ ದೈವಭಕ್ತಿಯ ಪುಣ್ಯವೇ ಇರಬಹುದು.


ಇಂದಿಗೂ ಸಮಾಜದಲ್ಲಿ ನಾವು ಈ ರೀತಿಯ ಎಷ್ಟೋ ಘಟನೆಗಳನ್ನು ನೋಡಿರುತ್ತೇವೆ. ಕೆಲವು ವಿಚಾರದಲ್ಲಿ ಹೆಣ್ಣಿನ ತಪ್ಪಿದ್ದರೆ, ಕೆಲವೊಂದರಲ್ಲಿ ಗಂಡಿನದ್ದು ಅಥವಾ ಹೊಂದಾಣಿಕೆಯ ಕೊರತೆ ಅಥವಾ ಕುಟುಂಬಗಳ ನಡುವಿನ ಘರ್ಷಣೆ ಮುಂತಾದವು. ಆದರೆ, ಎಲ್ಲವೂ ಕಳೆದು ಹಸೆಮಣೆ ಏರಿದ ನಂತರ ಎಲ್ಲವೂ ಸುಸೂತ್ರ. ಕಾದಂಬರಿಯೂ ಕುತೂಹಲದಿಂದ ಸುಸೂತ್ರವಾಗಿ ಓದಿಸಿಕೊಂಡು ಹೋಗುತ್ತದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ