ಪುಸ್ತಕದ ಶೀರ್ಷಿಕೆ : ಅದೃಷ್ಟತಾರೆ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ಪ್ರಥಮ ಮುದ್ರಣ : 2002
ಎರಡನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)
ಶಕುಂತಲಾ ದುಷ್ಯಂತರ ಪ್ರೇಮ ಕಥೆಯಂತೆ ಇಲ್ಲಿಯೂ ಒಂದು ಪ್ರೇಮ ಕಥೆಯಿದೆ. ಆದರೆ ಇಲ್ಲಿ ಶಕುಂತಲಾ ಪ್ರೇಮಿ ದುಷ್ಯಂತನಲ್ಲ ಬದಲಾಗಿ ಶ್ರೀಧರ.
ಮಿಡಲ್ ಸ್ಕೂಲ್ ಮಾಸ್ತರರಾಗಿದ್ದ ಶಾಮರಾಯರು ಹಾಗೂ ಸರೋಜಮ್ಮನವರಿಗೆ ನಾಲ್ಕು ಜನ ಹೆಣ್ಣುಮಕ್ಕಳು. ಸೀತಾ, ಸಾವಿತ್ರಿ, ಶಕುಂತಲಾ ಹಾಗೂ ದಮಯಂತಿ. ಮೂರನೆಯವಳು ಶಕುಂತಲಾ. ದಮಯಂತಿ ಟೈಲರಿಂಗ್ ಮಾಡುತ್ತಾ, ಹೇಳಿಕೊಡುತ್ತಾ ತನ್ನ ದುಡಿಮೆಯಲ್ಲಿ ತೊಡಗಿದ್ದಳು. ಸಾವಿತ್ರಿಯನ್ನು ಮದುವೆಯಾಗಲು ಅದಾಗಲೇ ಯುವಕ ಸಿದ್ದನಾಗಿದ್ದ. ಆಕೆ ಶಿಡ್ಲಘಟ್ಟದ ಚಿಕ್ಕಮ್ಮನ ಮನೆಗೆ ಹೋಗಿದ್ದಾಗ ವರ ಸಿಕ್ಕಿದ್ದ. ಸೀತಾಳಿಗೆ ವರಪರೀಕ್ಷೆ ನಡೆಯುತ್ತಿತ್ತು. ಮನೆಯಲ್ಲಿ ಸೀತಾಳದ್ದೇ ಕಾರುಬಾರು. ದಮಯಂತಿ ದುಡಿಯಲು ಹೋಗುತ್ತಿದ್ದುದರಿಂದ ಅವಳಿಗೆ ಮನೆಯಲ್ಲಿ ಹೆಚ್ಚಿನ ಬೆಲೆ. ಉಳಿದ ಇಬ್ಬರು ಹೆಣ್ಣುಮಕ್ಕಳು ಸಾವಿತ್ರಿ ಹಾಗೂ ಶಕುಂತಲಾರಲ್ಲಿ ಸಾವಿತ್ರಿ ವಿವಾಹವಾಗಲು ಸಿದ್ಧವಿದ್ದರಿಂದ, ದಮಯಂತಿಯ ಮೇಲೆ ಎಲ್ಲರ ಕಾರುಬಾರು. ಹೆಚ್ಚಿನ ಕೆಲಸ ಅವಳ ಮೇಲೆಯೇ ಬೀಳುತ್ತಿತ್ತು.
ಶಾಮರಾಯರ ಅಣ್ಣ ಕಾಲೇಜ್ ಲೆಕ್ಚರರ್ ಆಗಿದ್ದವರು. ಅವರ ಪತ್ನಿ ಪದ್ಮಾವತಿ. ಅನುಕೂಲಸ್ಥರ ಮನೆಯವರೇ. ಇದ್ದ ಒಬ್ಬನೇ ಮಗ ಇಂಜಿನಿಯರ್ ಆಗಿ ಕೆಲಸದಲ್ಲಿದ್ದ. ಆತನ ಪತ್ನಿ ಶ್ರೀಮಂತರ ಮನೆಯ ಹುಡುಗಿ ಕುಸುಮ. ಆಕೆಯೂ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದವಳು. ಪಿಂಟು, ಪಿಂಕಿ ಎಂಬ ಪುಟ್ಟ ಹೆಣ್ಣುಮಕ್ಕಳಿದ್ದರು. ಮನೆಯಲ್ಲಿ ಅವರಿಗೆ ಬೇರಾವ ಕೊರತೆಯಿರದಿದ್ದರೂ.. ಕೆಲಸದವರ ಅವಶ್ಯಕತೆ ಇದ್ದಿತ್ತು. ಆದಾಯ,ಹಣ ಎಲ್ಲವೂ ಇದ್ದರೂ ಕೆಲಸದವರು ಸರಿಯಾಗಿ ಬಾರದೇ ಕೆಲಸ ಹೊರೆಯಾಗುತ್ತಿತ್ತು. ಈ ಕುರಿತು ಮನೆಯವರೆಲ್ಲರೂ ವಿಚಾರ ಮಾಡಿ ಶಾಮರಾಯರಿಗೆ ಕಾಗದ ಬರೆದರು.
ಶಾಮರಾಯರು ಹೆಣ್ಣುಮಕ್ಕಳ ಮದುವೆಗೆ ಹಣ ಹೊಂದಿಸುತ್ತಿದುದರಿಂದ ಹತ್ತು ಸಾವಿರ ಕೊಡಲು ಒಪ್ಪಿದರೆ ಶಕುಂತಲಾಳನ್ನು ಕಳುಹಿಸುತ್ತೇನೆಂಬ ಭರವಸೆ ನೀಡಿದರು. ಒಂದು ತಿಂಗಳು ಆಕೆ ಬಂದು ಇಲ್ಲಿದ್ದು.. ಆಕೆಯ ಕೆಲಸ ಇಷ್ಟವಾದರೆ ಹತ್ತು ಸಾವಿರ ಕೊಡುತ್ತೇವೆ. ನಾಲ್ಕು ವರ್ಷ ಅವಳು ನಮ್ಮ ಮನೆಯಲ್ಲಿ ಕೆಲಸ ಮಾಡಿದರೆ ಇಪ್ಪತ್ತು ಸಾವಿರ ಕೊಡುತ್ತೇವೆಂಬ ಮಾತಾಯಿತು.
ಶಕುಂತಲಾಳಿಗೆ ತಮ್ಮ ಮನೆಯ ಬಡತನಕ್ಕಿಂತ ಇಲ್ಲಿಯ ಸಿರಿವಂತಿಕೆಯ ವಾತಾವರಣದಲ್ಲಿ ಕೆಲಸ ಮಾಡಲು ಸುಲಭವಿದ್ದು ಹೊಂದಿಕೊಂಡಳು. ಆದರೆ, ಆಕೆ ತೀರಾ ಮುಗ್ಧಳೇನೂ ಆಗಿರಲಿಲ್ಲ. ತಾನು ಕೆಲಸ ಮಾಡಿದ್ದಕ್ಕೆ ತನಗೇ ಹಣ ನೀಡಬೇಕೆಂದೂ.. ತನ್ನ ತಂದೆಗೆ ಹಣ ನೀಡಬಾರದೆಂದು ಪದ್ಮಾವತಿಯವರ ಬಳಿ ಹೇಳಿದಳು. ಈ ವಿಚಾರವಾಗಿ ಅವಳ ತಂದೆಗೆ ಪತ್ರ ಬರೆದು ಕರೆಸಿಕೊಂಡಾಗ, ಅವರನ್ನೂ ಒಪ್ಪಿಸಿದ್ದಳು ಶಕುಂತಲಾ.
ಆಕೆ ವಾಪಾಸ್ ತವರಿಗೆ ಹೋಗಲು ಸಿದ್ದವಿರಲಿಲ್ಲ. ಅದಕ್ಕೊಂದು ಕಾರಣವಿತ್ತು. ಆದರೆ, ಅಲ್ಲಿಯೇ ಕೆಲಸ ಮುಂದುವರಿಸಲು ಅವಳದ್ದು ಒಂದಷ್ಟು ನಿಬಂಧನೆಗಳಿದ್ದವು. ಅವಳಿಗಾಗಿ ವಿಶ್ರಾಂತಿಯ ಸಮಯ ನೀಡಬೇಕಿತ್ತು. ಅಷ್ಟೇ ಅಲ್ಲದೆ, ಮನೆಯವರಂತಲ್ಲದಿದ್ದರೂ.. ತೀರಾ ಕೆಲಸದವಳಂತೆ ಗಾಣದಿತ್ತಿನ ದುಡಿಮೆ ಮಾಡಿಸಿಕೊಳ್ಳಬಾರದೆಂದು ಹೇಳಿದ್ದಳು. ಅವಳಿಗೆ ಹೊಂದಿಕೊಂಡಿದ್ದ ಕುಸುಮ ಕೂಡ ಅವಳೇ ಮಾತಿಗೆ ಅನುಮೋದಿಸಿದಳು. ಆಗ ಅತ್ತೆ-ಸೊಸೆಯರ ನಡುವೆ ಕೊಂಚ ಮಾತುಕತೆಯೂ ಆಯಿತು. ಬಡವರ ಮನೆಯವಳೆಂದು ದಬ್ಬಾಳಿಕೆ ನಡೆಸುತ್ತಿದ್ದ ಪದ್ಮಾವತಿ ಸೊಸೆಯ ಜೊತೆ ಮಾತನಾಡಿದ ನಂತರ.. ಹೊಂದಿಕೊಂಡು.. ಮನುಷ್ಯರಂತೆ ನೋಡಿಕೊಳ್ಳುತ್ತಾ ಅವಳು ಹೇಳಿದ್ದಕ್ಕೆ ಒಪ್ಪಿ ನಡೆಯುತ್ತಿದ್ದರು.
ಶಕುಂತಲಾಳಿಗೆ ಹೆಚ್ಚಿನ ಆಪ್ತರೇನೂ ಇರಲಿಲ್ಲ. ಆದರೆ, ಅನಸೂಯ ಅವಳ ಗೆಳತಿಯಾಗಿದ್ದಳು. ಅವರ ಪಕ್ಕದ ಮನೆಯಲ್ಲಿ ಬಾಡಿಗೆಯಲ್ಲಿದ್ದ ದಂಪತಿಗಳಿಬ್ಬರೂ.. ಖಾಸಗಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದವರು. ಅವರಿಗೆ ಅನಸೂಯ ಒಬ್ಬಳೇ ಮಗಳು. ಅವಳು ಪಿ.ಯು.ಸಿ ಫೇಲ್ ಆಗಿ ಮನೆಯಲ್ಲಿದ್ದಳು. ಆಕೆಗೆ ಕತೆ, ಕಾದಂಬರಿ ಬರೆದು ತಾನು ಲೇಖಕಿಯಾಗಬೇಕೆಂಬ ಕನಸಿತ್ತು. ಅಂತೆಯೇ ಬಹಳಷ್ಟು ಕಥೆ ,ಕಾದಂಬರಿಗಳನ್ನು ಬರೆಯುತ್ತಿದ್ದಳು. ಸಮಾನ ವಯಸ್ಕರಾದ ಪದ್ಮಾವತಿ ಹಾಗೂ ಅನುಸೂಯ ಇಬ್ಬರು ಸ್ನೇಹಿತೆಯರಾಗಿದ್ದರು.
ಅನಸೂಯಾಳ ಅಪ್ಪನ ಅಣ್ಣನ ಮಗನಾಗಿದ್ದ ಶ್ರೀಧರ ತನ್ನ ಮಲತಾಯಿಯ ಕಾಟದಿಂದ ಬೇಸತ್ತು ಅಲ್ಲಿಯೇ ಒಂದು ಕೆಲಸ ಹುಡುಕಿಕೊಳ್ಳಲು ಬಂದಿದ್ದ. ಅದೇ ಸಂದರ್ಭದಲ್ಲಿ ಆತನಿಗೆ ಅನಸೂಯ ಶಕುಂತಲಾ ಕುರಿತು ಹೇಳಿದ್ದಳು. ರೂಪವತಿಯಾದ ಶಕುಂತಲಾಳನ್ನು ಕಂಡು ಅವಳ ಜೊತೆ ಮಾತನಾಡಿದ ಬಳಿಕ, ಮನಸೋತಿದ್ದ. ಆದರೆ, ಶಕುಂತಲಾ ಶ್ರೀಧರನಿಗೆ ಕೆಲಸ ಸಿಗುವವರೆಗೂ ಕಾಯಬೇಕಿತ್ತು. ಶ್ರೀಮಂತರ ಮನೆಯ ಹುಡುಗನಾದ ಶ್ರೀಧರ ಬಡತನ ಶಕುಂತಲಾಳನ್ನು ಒಪ್ಪಿದ್ದೇಕೆ..??
ಅನಸೂಯಾಳ ಅದೃಷ್ಟ ಆಕೆಯ ಗೆಳತಿ ನರ್ಮದಾಳ ಮೂಲಕ ಒಲಿದು ಬಂದಿತ್ತು. ನರ್ಮದಾಳ ಮೈದುನ ಪ್ರಕಾಶ್ ಆಕೆಯ ಪುಸ್ತಕವನ್ನು ಪ್ರಕಟಿಸಲು ಒಪ್ಪಿದ್ದಷ್ಟೇ ಅಲ್ಲದೆ ಗೌರವಧನವನ್ನು ನೀಡಲು ಒಪ್ಪಿದ್ದರು. ಬಹಳಷ್ಟು ಹೆಣ್ಣುಗಳನ್ನು ನಿರಾಕರಿಸಿದ್ದ.. ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಅವನಿಗೆ ಅನಸೂಯಳ ಸಾಹಿತ್ಯಪ್ರೇಮ ಸೂಜಿಗಲ್ಲಿನಂತೆ ಸೆಳೆದು, ಆಕೆಗೆ ಪ್ರೇಮ ಪ್ರಸ್ತಾಪವನ್ನಿಟ್ಟಿದ್ದ. ಅಂತೆಯೇ.. ಆಕೆಯ ಮುಂಬರುವ ಕಾದಂಬರಿಗಳೆಲ್ಲವೂ ಅದೇ ಪ್ರಕಾಶನದಲ್ಲಿ ಅಚ್ಚಾಗುವ ಭರವಸೆ ನೀಡಿದ್ದ. ಶ್ರೀಮಂತನ ಕೈ ಹಿಡಿದು ಅದೃಷ್ಟತಾರೆಯಾದಳು ಅನಸೂಯ. ಅವಳ ಮೊದಲ ಕಾದಂಬರಿ ಗಂಧರ್ವಗಾನ ಗಂಧರ್ವಲಹರಿಯಾಗಿ ಪ್ರಕಟವಾಗುತ್ತಿತ್ತು.
ಶ್ರೀಧರನಿಂದ ಶಕುಂತಲಾ ಬರೆದ ಪ್ರೇಮಪತ್ರಗಳಿಗೆ ಉತ್ತರ ಬರಲಿಲ್ಲ. ಅದೇ ಸಂದರ್ಭಕ್ಕೆ ಆಕೆಯ ತವರಿನಲ್ಲಿ ಸೀತಾ-ಸಾವಿತ್ರಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಇಲ್ಲಿ ಶಕುಂತಲಾ ಭವಿಷ್ಯ ಅತಂತ್ರ ಸ್ಥಿತಿಯಲ್ಲಿತ್ತು. ಅಷ್ಟೇ ಅಲ್ಲದೆ, ಈಗ ಆಕೆಗೆ ಕೆಲಸದಲ್ಲಿಯೇ ಶ್ರದ್ದೆ ಕಡಿಮೆಯಾಗಿ ಪ್ರೇಮದ ಕಡೆಗೆ ಮನಸ್ಸು ಓಡುತ್ತಿತ್ತು.
ಇತ್ತ ಶ್ರೀಧರನ ತಂದೆ ಜಯರಾಮ್ ತಮ್ಮ ಗೆಳೆಯ ಚಂದ್ರಶೇಖರ್ ಅವರಿಂದ ಕೆಲಸ ಕೊಡಿಸುತ್ತೇನೆಂದು ಹೇಳಿದ್ದರು. ಆದರೆ, ಶ್ರೀಧರನಿಗೆ ಗೊತ್ತಿಲ್ಲದಂತೆ ಶ್ರೀಧರನ ಚಿಕ್ಕಮ್ಮನಿಗೂ ಅವರಿಗೂ ಒಪ್ಪಂದವಾಗಿತ್ತು. ಶ್ರೀಧರ ಅವರ ಮಗಳನ್ನು ಮದುವೆಯಾಗಿ, ಕೆಲಸ ಮಾಡುತ್ತಾ ಇಲ್ಲಿಯೇ ಉಳಿದರೆ.. ಈತನ ತಂದೆ, ಮಲತಾಯಿ ಹಾಗೂ ಅವರ ಮಗಳು-ಅಳಿಯ ಅಲ್ಲಿ ನೆಲೆಸುವುದೆಂಬ ದೂರದ ಕನಸು ಕಟ್ಟಿದ್ದರು ಶ್ರೀಧರನ ಚಿಕ್ಕಮ್ಮ. ಅಂದು ಆ ಹುಡುಗಿಯ ಹುಟ್ಟುಹಬ್ಬಕ್ಕೆ ಶ್ರೀಧರನನ್ನು ಕರೆದುಕೊಂಡು ಹೋಗಲು ಆತನ ತಂದೆ ಸಿದ್ಧವಾಗಿದ್ದರು.
ಆತ ಆ ಹುಡುಗಿ ಹಾಗೂ ಶ್ರೀಮಂತಿಕೆಗೆ ಮರುಳಾಗಿ ವಿವಾಹವಾದನೇ..?? ಅಥವಾ ಪ್ರೇಮಿಸಿದವಳ ಕೈಹಿಡಿದು ಆಕೆಯ ಬದುಕನ್ನು ಹಸನಾಗಿಸಿದನೇ..?? ಅಥವಾ ಶ್ರೀಧರನೂ ಕೈಬಿಟ್ಟು.. ಕುಸುಮ ಹಾಗೂ ಪದ್ಮಾವತಿಯರ ನಿರ್ಲಕ್ಷದಿಂದ ಉಂಟಾದ ತೊಂದರೆ ಹೆಚ್ಚಾಯಿತೇ..?? ನಡುವಿನಲ್ಲಿ ಸೇತುವೆಯಾಗಿದ್ದ ಅನಸೂಯ ಇವರ ಪ್ರೇಮವನ್ನು ಸಫಲಗೊಳಿಸುವಷ್ಟು ಸಬಲಳೇ..?? ಶ್ರೀಧರನ ಪಾಲಿಗೆ ಅದೃಷ್ಟತಾರೆಯಾದಳೇ ಅಥವಾ ಅದೃಷ್ಟತಾರೆಯನ್ನು ತಡೆಯುವ ಧೂಮಕೇತುವಾದಳೇ..?? ಉತ್ತರ ತಿಳಿಯಲು ನೀವೇ ಓದಿ ನೋಡಿ ಹೆಚ್.ಜಿ. ರಾಧಾದೇವಿಯವರ ಅದೃಷ್ಟತಾರೆ ಕಾದಂಬರಿಯನ್ನು.
ಬದುಕಿನಲ್ಲಿ ಎಷ್ಟೇ ಕಷ್ಟಪಟ್ಟರೂ ಕೊಂಚವಾದರೂ ಅದೃಷ್ಟವು ಜೊತೆಗೂಡಿದಾಗ ಮಾತ್ರವೇ ಕಂಡ ಕನಸು ನನಸಾಗುತ್ತದೆ ಅಥವಾ ಅಂದುಕೊಂಡ ಬದುಕು ಸಿಗುತ್ತದೆ. ಈ ಅದೃಷ್ಟ ಎಲ್ಲರ ಪಾಲಿಗೂ ಅಂದುಕೊಂಡ ಮಟ್ಟದಲ್ಲಿ ಸಿಗುವುದು ಕಷ್ಟ. ಆದರೆ, ಸಿಕ್ಕವರು ನಿಜಕ್ಕೂ ಅದೃಷ್ಟತಾರೆಗಳೇ.
ಇದರಲ್ಲಿ ಶ್ರೀಧರನ ಪಾತ್ರ ಇಷ್ಟವಾದಷ್ಟೇ ಇಷ್ಟವಾದ ಪಾತ್ರ ಪ್ರಕಾಶ್ ನದ್ದು. ಬದುಕಿನ ಕುರಿತ ದೂರದೃಷ್ಟಿ ಹಾಗೂ ಬದುಕಿನಲ್ಲಿ ಆತನಿಗಿದ್ದ ಸ್ಪಷ್ಟತೆ ಇಷ್ಟವಾದುದರ ಜೊತೆಗೆ ಅನಸೂಯಾಳ ಕನಸಿಗೆ ಒತ್ತಾಸೆ ನೀಡಿದ ಆಕೆಯ ತಂದೆ-ತಾಯಿಯೂ ಇಷ್ಟವಾದರು. ಹೆಂಡತಿಯ ಕನಸುಗಳಿಗೆ ನೀರೆರೆಯುತ್ತಾ ಹಾಗೂ ಆಕೆಯ ತಂದೆ-ತಾಯಿಯರನ್ನು ತನ್ನ ತಂದೆ-ತಾಯಿಯಂತೆ ಕಾಣುವ ಪ್ರಕಾಶನ ನಿರ್ಧಾರವೂ ಇಷ್ಟವಾಯಿತು. ಚಿಕ್ಕದಾದರೂ ಪ್ರಭಾವ ಬೀರಿದ ಪಾತ್ರವಿದು.
ಶಕುಂತಲಾ ತೀರಾ ಓದಿದವಳಲ್ಲವಾದರೂ, ಸಮಯದ ಗೊಂಬೆಯಾದರೂ.. ಆಕೆಯ ಮುಗ್ಧತೆಗಿಂತ ಆಕೆಯ ಪ್ರಬುದ್ಧತೆ ಹೆಚ್ಚು ಇಷ್ಟವಾಯಿತು. ಎಲ್ಲರೂ ಸ್ವಾರ್ಥಿಗಳಾದಾಗ.. ಅದಕ್ಕೆ ಬಲಿಯಾಗದೇ.. ಮೊದಲು ತನ್ನ ಜೀವನವನ್ನು ರೂಪಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅರಿತು ತೋರಿಸಿ ಕೊಡುವ ಪಾತ್ರ ಆಕೆಯದ್ದು.
ಅದೃಷ್ಟತಾರೆ ಎಂಬ ಶೀರ್ಷಿಕೆಗೆ ಹೊಂದಿಕೆಯಾಗುವ ಕಥಾಹಂದರದ ಕಾದಂಬರಿ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ