ಸೋಮವಾರ, ಏಪ್ರಿಲ್ 13, 2026

ಅಂತಃಪುರ (ಪುಸ್ತಕ ಯಾನ - 147)


ಪುಸ್ತಕದ ಶೀರ್ಷಿಕೆ : ಅಂತಃಪುರ
ಲೇಖಕರು : ವಸುಮತಿ ಉಡುಪ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2023
ಪುಟಗಳು : 192
ಬೆಲೆ : 195 ರೂ.

"ಅಂತಃಪುರ" ಎಂಬ ಶೀರ್ಷಿಕೆ ನೋಡಿದ ತಕ್ಷಣ ಸ್ತ್ರೀ ಕೇಂದ್ರಿತ ಕಾದಂಬರಿ ಎನ್ನಿಸಿದರೂ.. ಇದೊಂದು ಕೌಟುಂಬಿಕ ಚಿತ್ರಣವಿರುವ ಕಾದಂಬರಿ. ತಮ್ಮ ವಿಶಿಷ್ಟವಾದ ಶೈಲಿಯಿಂದ ಹಾಗೂ ಸುಲಲಿತವಾಗಿ ಕಥೆ ಹೇಳುವ ರೀತಿಯಿಂದ.. ನನಗೆ ಇಷ್ಟವಾದ ಲೇಖಕಿಯ ಮತ್ತೊಂದು ಕಾದಂಬರಿಯ ಓದು ಮಲೆನಾಡಿನ ಪರಿಸರದಲ್ಲಿ ಚಿತ್ರಿತವಾಗಿದೆ. 

2021ನೆಯ ಫೆಬ್ರವರಿ ತಿಂಗಳಿನಿಂದ ಶುರುವಾಗುವ ಈ ಕಾದಂಬರಿ, ಕೇವಲ ಈ ಕಾಲಮಾನದ ಕಥೆಯನ್ನು ಮಾತ್ರವಲ್ಲದೆ.. ಮೂರು ತಲೆಮಾರುಗಳ ಜೀವನವನ್ನು, ತಲ್ಲಣವನ್ನು, ಅಲ್ಲಲ್ಲಿನ ಕೌಟುಂಬಿಕ ಸ್ಥಿತಿ-ಗತಿಗಳನ್ನು ಸ್ಥೂಲವಾಗಿ ಪರಿಚಯಿಸುತ್ತದೆ. ಕಥೆಯಲ್ಲಿ ಈಗ ಕೊರೊನಾ ಕಾಲಘಟ್ಟದ ಸಮಯ.. ಅಕ್ಕಿ,ಉಪ್ಪು ಎರಡಿದ್ದರೆ ಗಂಜಿ ಬೇಯಿಸಿಕೊಂಡಾದರೂ ತಿನ್ನಬಹುದು ಎಂದುಕೊಂಡಿದ್ದ ಸಮಯದಲ್ಲಿಯೇ.. ಮನೆಯಲ್ಲಿ ಅಕ್ಕಿ ಇಲ್ಲದಿರುವುದು ಗೊತ್ತಾದ ಸೀತಮ್ಮನವರು ಗಂಡ ಶಿವರಾಮನವರನ್ನು ಅಕ್ಕಿ ತರಲು ಕಳುಹಿಸಿ.. ಅದಕ್ಕೆ ಗಂಡ ನೀಡುವ ಪ್ರತಿಕ್ರಿಯೆಯನ್ನು ಮೊದಲೇ ಹೇಳುತ್ತಲೇ.. ಅಕ್ಕಿ ತಂದು ಅಡುಗೆಯಾಗಿ, ವಿಶ್ರಾಂತಿಯ ಸಮಯದಲ್ಲಿ ನೆನಪೆನ್ನುವ ಗುಂಗಿ ಹುಳವನ್ನು ಸವಿಸ್ತಾರವಾಗಿ ಬಿಡಿಸಿಡುತ್ತಾರೆ. 

ಪತಿಯ ನಡವಳಿಕೆಗೆ ಪತ್ನಿ ಜವಾಬ್ದಾರಿ ಆಗಬೇಕೇ..?? ಹಾಗೆ ಜವಾಬ್ದಾರಳಾಗಲು ಆಕೆ ಒಪ್ಪಬೇಕೇ..?? ಎನ್ನುವ ಪ್ರಶ್ನೆಯು ನಮ್ಮನ್ನು ಕಾಡದೇ ಬಿಡುವುದಿಲ್ಲ. ಇಲ್ಲಿ ಸೀತಮ್ಮನವರು ತಾಳಿ ಕಟ್ಟಿಸಿಕೊಂಡ ತಪ್ಪಿಗೆ ಅನುಭವಿಸಿದರೇ ಅಥವಾ ವಿಧಿಯಿಲ್ಲದೆ ಅವರ ನಿರ್ಧಾರಗಳೆಲ್ಲವನ್ನೂ ಬೆಂಬಲಿಸಿ ಅವರನ್ನು ಅನುಸರಿಸಬೇಕಾಗಿ ಬಂತೇ ಎಂಬ ಪ್ರಶ್ನೆಯೂ ಕಾಡತೊಡಗುತ್ತದೆ. 

16ರ ಎಳೆಯ ಪ್ರಾಯದಲ್ಲಿಯೇ ತನಗಿಂತ 10 ವರ್ಷ ದೊಡ್ಡವರಾದ ಶಿವರಾಮನ ಕೈಹಿಡಿದು ನವವಧುವಾಗಿ ಹುಟ್ಟಿ ಬೆಳೆದ ಊರಿನಂತೆಯೇ ಇದ್ದ ಮತ್ತೊಂದು ಹಳ್ಳಿಗೆ ಕಾಲಿಟ್ಟಿದ್ದರು ಸೀತಾಲಕ್ಷ್ಮಿ. ಆ ಕಾಲದಲ್ಲಿ ಎರಡನೆಯ ವಿವಾಹವಾಗದೇ.. ಅಷ್ಟು ವಯಸ್ಸಿನ ಅಂತರವಿರುವ ಗಂಡ ಸಿಕ್ಕಿದರೆ ಅದು ಪುಣ್ಯವೇ. ಸೀತಾಲಕ್ಷ್ಮಿಯ ತಾಯಿಗೆ ಅದು ಮೊದಲ ವಿವಾಹವಾಗಿದ್ದರೂ.. ತಂದೆಗೆ ಅದು ಎರಡನೇ ಸಂಬಂಧ. ಅಲ್ಲದೇ ಅವರಿಬ್ಬರಿಗೂ ಭರ್ತಿ 20 ವರ್ಷಗಳ ವ್ಯತ್ಯಾಸ. ಇಬ್ಬರು ಗಂಡು ಮಕ್ಕಳಿದ್ದರೂ.. ಎಂದಿಗೂ ಮಲತಾಯಿಯ ಧೋರಣೆಯನ್ನು ಅವರು ತೋರದೆ, ಮಗಳಿಗೂ ಹಾಗಿರಲು ಬಿಡದೆ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದ್ದರು ಅವರ ತಾಯಿ. 

ಶಿವರಾಮನ ಮನೆಯಲ್ಲಿ ವಿಧವೆಯಾದ ಮೇಲೆ ಕೇಶಮುಂಡನ ಮಾಡಿಸಿಕೊಂಡ ಅತ್ತೆ ವೆಂಕಮ್ಮ, ಸಕೇಶಿ ಅಕ್ಕ ಕಮಲ, ಮದುವೆಯ ವಯಸ್ಸಿಗೆ ಬಂದ ಮೈದುನ ವೆಂಕಟರಾಮ ಇದ್ದನು. ಅತ್ತೆಯ ಮನೆಯಲ್ಲಿ ಬೇರೆ ಯಾರದ್ದೂ ಸಮಸ್ಯೆಯಾಗದಿದ್ದರೂ ಗಂಡನ ಸಿಟ್ಟು ಸೀತಾಲಕ್ಷ್ಮಿಯನ್ನು ಕಾಡುತ್ತಿತ್ತು. ತವರಿನಲ್ಲಿ ಅದೊಂದು ಸಮಸ್ಯೆಯೇ ಅಲ್ಲ ಎನ್ನುವಂತದ್ದೆಲ್ಲಾ ಗಂಡನ ದೃಷ್ಟಿಯಲ್ಲಿ ದೊಡ್ಡ-ದೊಡ್ಡ ಸಮಸ್ಯೆಯಾಗಿ ಆತನಿಗೆ ಸಿಟ್ಟು ಬರಲು ಕಾರಣವಾಗುತ್ತಿತ್ತು. ಆತನಿಗೆ ಸಿಟ್ಟು ಬರಲು ಇಂಥದ್ದೇ ಕಾರಣ ಎಂದೇನೂ ಇರಲಿಲ್ಲ. ಇಂತಹಾ ಜೋರಿನಲ್ಲಿಯೇ.. ಹೆದರಿಕೆಯಿಂದಲೇ ಬಾಳ್ವೆ ಮಾಡುತ್ತಿದ್ದಳು ಸೀತಾಲಕ್ಷ್ಮಿ.

ಆತನ ಸಿಟ್ಟಿಗೆ ಆತನ ತಾಯಿ ವೆಂಕಮ್ಮ ಕೊಡುತ್ತಿದ್ದ ಕಾರಣಗಳು ಸೀತಾ ಲಕ್ಷ್ಮಿಯನ್ನು ಮೃದುವಾಗಿಸುತ್ತಿತ್ತು. ಅಕ್ಕ ಕಮಲಾಳ ಗಂಡ ಗಟ್ಟಿಮುಟ್ಟಾಗಿದ್ದವನು.. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿಯೇ ಜೇನಿನ ದಾಳಿಗೆ ಒಳಗಾಗಿ ಪ್ರಾಣ ಬಿಟ್ಟಿದ್ದ. ಆಕೆ ತವರು ಸೇರಿದ್ದಳು. ಆದರೆ, ಆಕೆಯ ಮದುವೆಯ ಸಂದರ್ಭದಲ್ಲಿ ಹಾಕಿದ್ದ ನಗ-ನಾಣ್ಯ ಅಲ್ಲಿಯೇ ಉಳಿದಿದ್ದವು. ಆಕೆ ಕೇಶಮುಂಡನ ಮಾಡಿಸಿಕೊಳ್ಳಲು ಒಪ್ಪಿರಲಿಲ್ಲ. ಇದೆಲ್ಲದರ ನ್ಯಾಯ ಪಂಚಾಯಿತಿಗಾಗಿ ಹೋಗಿದ್ದ ಶಿವರಾಮನ ತಂದೆ ತೀರಿಕೊಂಡಿದ್ದರು. ಅದರ ಹಿಂದೆ ಸಂಚಿರಬಹುದೆನ್ನುವ ಸಂದೇಹವಿತ್ತು. ಆಡುವ ವಯಸ್ಸಿನಲ್ಲಿ ಶಿವರಾಮನ ಬೆನ್ನಿಗೆ ಹಲವಾರು ಜವಾಬ್ದಾರಿಗಳು ಏರಿದ್ದರಿಂದ ಆತನ ಸಿಟ್ಟು ಹೆಚ್ಚಾಗಿತ್ತು ಎನ್ನುವುದು ಅಮ್ಮ, ಅಕ್ಕನ ನಂಬಿಕೆ. ಅದನ್ನೇ ನಂಬಿಕೊಂಡಳು ಸೀತಾಲಕ್ಷ್ಮಿ.

ಅಕ್ಕ ಮನೆಯಲ್ಲಿ ಇದ್ದುದರಿಂದಲೋ ಅಥವಾ ಸಿಟ್ಟು ಸೆಡವಿನಿಂದಲೋ ಹೆಂಡತಿಯನ್ನು ತೀರಾ ತಲೆಯ ಮೇಲೆ ಕೂರಿಸಿಕೊಳ್ಳದ ಶಿವರಾಮನಿಗೆ ತನ್ನ ನಂತರ ವಿವಾಹವಾದ ತಮ್ಮ ವೆಂಕಟರಾಮನ ಹಾಗೂ ನಾದಿನಿ ಕನಕಳ ಸಂಸಾರ-ಸಲುಗೆ ಕಣ್ಣು ಚುಚ್ಚುತ್ತಿತ್ತಾ..??

ಸಂಸಾರದಲ್ಲಿ ಒಬ್ಬರು ಜೋರಿದ್ದರೆ ಒಬ್ಬರು ಮೃದುವಾಗಿರಬೇಕು ಅಥವಾ ಅನುಸರಿಸಿಕೊಂಡು ಹೋಗಬೇಕು. ಹಾಗಿದ್ದರೆ ಸಂಸಾರ ದೀರ್ಘಕಾಲ ಬಾಳುತ್ತದೆ. ವೆಂಕಮ್ಮನವರ ಸಂಬಂಧಿಯಾಗಿದ್ದ..  ಶ್ರೀಮಂತರ ಮನೆಯಿಂದ ಬಂದಿದ್ದ ಕನಕಳಿಗೆ ತವರಿನ ಬಲವೂ ಇತ್ತು. ಅಲ್ಲದೆ, ತನ್ನ ಗಂಡ ವೆಂಕಟರಾಮನ ಮೃದು ಸ್ವಭಾವವೂ ಗೊತ್ತಿತ್ತು. ವೆಂಕಟರಾಮನ ಸ್ವಭಾವವೂ ಈ ಕಥೆಯಲ್ಲಿ ಬಹಳ ಸೆಳೆಯುತ್ತದೆ. ಆತ ಸಿಟ್ಟು-ಸೆಡವು ಮಾಡಿಕೊಳ್ಳದೆ, ಕೇವಲ ಹೊರಗಿನ ಕೆಲಸವನ್ನು ಮಾತ್ರವಲ್ಲದೆ.. ಅಡುಗೆಯ ಪ್ರತಿ ವಿಷಯಕ್ಕೂ ಸಹಾಯ ಮಾಡುತ್ತಾ ಅಕ್ಕ, ಅಮ್ಮ ಮಾತ್ರವಲ್ಲದೇ ಅತ್ತಿಗೆಗೂ ಬಹಳ ಬೇಕಾದವನಾಗಿದ್ದ. ಇಂತಹವನಿಗೆ ಜೋಡಿಯಾದ ಕನಕ ಆತನನ್ನು ಬೇಕೆಂದೇ ಬದಲಾಯಿಸಿದಳೇ ಅಥವಾ ಪರಿಸ್ಥಿತಿಯೇ ಹಾಗಿತ್ತಾ...?

ಸೀತಾಲಕ್ಷ್ಮಿ ಗರ್ಭಿಣಿಯಾಗಿ ಇನ್ನೇನು ತವರಿಗೆ ಚೊಚ್ಚಲ ಹೆರಿಗೆಗೆ ಹೋಗಬೇಕಾದ ಸಂದರ್ಭದಲ್ಲಿಯೇ ಕಮಲತ್ತಿಗೆ ಕಾಣೆಯಾಗಿದ್ದಳು. ಆಕೆ ತೀರಿ ಹೋಗಿದ್ದಳೋ ಅಥವಾ ಮತ್ತೇನಾದರೂ ಹಾದಿ ಹಿಡಿದಿದ್ದಳೋ ಎಂಬುದು ಅರಿವಾಗದ ರಹಸ್ಯವಾಗಿ ಉಳಿದಿದ್ದರೂ.. ತನ್ನ ಒಡಲ ಸಂಕಟ, ಜೊತೆಗೆ ಮುಚ್ಚಿಡಲಾರದ ಸತ್ಯವನ್ನು ಸೀತಾಳ ಎದುರು ಕಕ್ಕಿದ್ದ ಶಿವರಾಮ. "ಹೆಣ್ಣಿನ ಬಾಯಲ್ಲಿ ಗುಟ್ಟು ನಿಲ್ಲುವುದಿಲ್ಲ" ಎನ್ನುವ ಮಾತು ಸೀತಾಲಕ್ಷ್ಮಿಯ ಪಾಲಿಗೆ ಸತ್ಯವಾಗಿರಲಿಲ್ಲ. ಆ ರಹಸ್ಯವನ್ನು ಆಕೆ ಕಡೆಯವರೆಗೂ ಯಾರಿಗೂ ಬಾಯಿ ಬಿಡಲಿಲ್ಲ.

ಕಮಲತ್ತಿಗೆ ಹೋದ ನಂತರ, ಸೀತಾಲಕ್ಷ್ಮಿಯೂ ಇಲ್ಲದಾಗ ಕೆಲಸ, ಕಾರುಬಾರು ಕೊಂಚ ಬಾಯಿ ಜೋರಿನ ಹುಡುಗಿ ಕನಕಳ ಸೂಪರ್ದಿಗೆ ಬಂದಿತ್ತು. ಬಾಣಂತನ ಮುಗಿಸಿ ಬರುವಷ್ಟರಲ್ಲಿ ಮನೆ ಎರಡು ಪಾಲಾಗಿತ್ತು. ಪಾಲು ಮಾಡುವಾಗಿನ ಸಂದರ್ಭದಲ್ಲಿ ಬೇರೆಯದ್ದೊಂದು ಹಗರಣವೇ ನಡೆದಿತ್ತು. ವೆಂಕಮ್ಮನವರು ವೆಂಕಟರಾಮುವಿನ ಮನೆಯ ಹಾದಿ ಹಿಡಿದಿದ್ದರು. ಶಿವರಾಮನ ಕೋಪ ಮತ್ತಷ್ಟು ಹೆಚ್ಚಾಗಿತ್ತು. ಅಣ್ಣ-ತಮ್ಮಂದಿರಾಗಿದ್ದವರು ಅದಾಗಲೇ ದಾಯಾದಿಗಳಾಗಿ ಬಿಟ್ಟಿದ್ದರು. ಕೇವಲ ಅದೊಂದೇ ಕಾರಣವಲ್ಲ. 

ವರ್ಷಗಳು ತಮಷ್ಟಕ್ಕೆ ಉರುಳುತ್ತಿದ್ದವು. ಸೀತಾಲಕ್ಷ್ಮಿಗೆ ಪ್ರಸನ್ನ ಹಾಗೂ ಪ್ರದೀಪರೆಂಬ ಇಬ್ಬರು ಗಂಡುಮಕ್ಕಳು. ವೆಂಕಟರಾಮನಿಗೂ ಇಬ್ಬರು ಗಂಡುಮಕ್ಕಳು. ಕೇಶವ ಹಾಗೂ ಮಾಧವ. ಅಣ್ಣ-ತಮ್ಮಂದಿರ ನಡುವಿನ ಪೈಪೋಟಿಯೇ ಹೆಚ್ಚಾಗಿತ್ತು. ಮನೆ ಕಟ್ಟಿಸುವುದು, ಮಕ್ಕಳ ಸಮಾರಂಭಗಳು ಹೀಗೆ ಹಲವಾರು ಪೈಪೋಟಿಗಳು ಅವರಿವರ ಮಧ್ಯಸ್ಥಿಕೆಯಿಂದ ಮತ್ತಷ್ಟು ದ್ವೇಷ ಹೆಚ್ಚಿಸುತ್ತಿದ್ದವು. ಇದಿಷ್ಟರ ನಡುವೆ ಸಮಾಧಾನದ ಸಂಗತಿಯೆಂದರೆ.. ಶಿವರಾಮುವಿನ ಮಕ್ಕಳು ಓದಿನಲ್ಲಿ ಬುದ್ಧಿವಂತರಾಗಿದ್ದರು. ಆದರೆ, ವೆಂಕಟರಾಮನ ಮಕ್ಕಳು ಓದಿನಲ್ಲಿ ಹಿಂದುಳಿದು ತೋಟದ ಕೆಲಸಕ್ಕೆ ಸೀಮಿತರಾದರು. 

ವೆಂಕಮ್ಮನವರು ಮತ್ತೆ ಶಿವರಾಮುವಿನ ಮನೆಗೆ ಬಂದದ್ದರ ಹಿಂದೆ ಕರಾಳ ಛಾಯೆಯೊಂದಿತ್ತು. ವೆಂಕಟರಾಮುವಿನ ಅಸಹಾಯಕತೆ, ಕನಕಳ ನಿರ್ಲಕ್ಷ್ಯ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ತನ್ನನ್ನು ತೊರೆದು ಹೋದ ಅಮ್ಮನನ್ನು ಒಪ್ಪಿಕೊಳ್ಳದೇ ಒಪ್ಪಿದ ಬಗೆಯಿದೆ. ಹಾಗೆಯೇ ಶಿವರಾಮುವಿನ ದುಡುಕುತನದ ಹಿಂದೆ.. ಆತನಿಗಿದ್ದ ಮೃದುತ್ವದ ಭಾವನೆ.. ಮನುಷ್ಯ ಯಾವಾಗ ಬೇಕಾದರೂ ಪಶುತ್ವದಿಂದ ಮನುಷ್ಯತ್ವದ ಕಡೆಗೆ ನಡೆಯುತ್ತಾನೆ ಎನ್ನುವರ್ಥದ ಮಾತೊಂದು ಉಲ್ಲೇಖವಾಗಿದೆ. ಸೀತಾಲಕ್ಷ್ಮಿಯ ಪ್ರೀತಿಯ ಅಮೃತ ಸಿಂಚನದಿಂದ ವೆಂಕಮ್ಮನವರು 'ಒನಕೆ ಚಿಗುರಿತೇನೋ' ಎಂಬಂತೆ ಚೇತರಿಸಿಕೊಂಡರು. ಕಮಲ ಕಾಣೆಯಾದಾಗಿನಿಂದ ಇದ್ದ ಮಂಕುತನ ಕೊಂಚ-ಕೊಂಚವೇ ಹರಿದು ಜಡತ್ವದಿಂದ ಮೇಲೆದ್ದಿದ್ದರು.  

ವೆಂಕಮ್ಮನವರ ಕಾಲವೂ ಮುಗಿದಿತ್ತು. ಪುಣ್ಯಕ್ಕೆ ಸೀತಾ ಲಕ್ಷ್ಮಿಯ ದಯದಿಂದ ಕಡೆಗಾಲ ಚಂದವಾಗಿಯೇ ಮುಗಿದಿತ್ತು ಎಂದರೂ ಅತಿಶಯೋಕ್ತಿಯಾಗಲಾರದು. 

ತಂದೆ-ಮಕ್ಕಳ ನಡುವೆಯೂ ಶಿವರಾಮನ ಕೋಪದಿಂದ ಅಲ್ಲೊಂದು ರೀತಿಯ ಬಿರುಕಿತ್ತು. ಆದರೆ, ತಾಯಿ-ಮಕ್ಕಳ ಬಾಂಧವ್ಯ ಬಹಳ ಚೆನ್ನಾಗಿತ್ತು. ವೆಂಕಟರಾಮುವಿನ ಸ್ವಭಾವವನ್ನೇ ಹೋಲುತ್ತಿದ್ದ, ವಿದ್ಯಾವಂತ ಪ್ರದೀಪ ಅದೊಂದು ದಿನ ಅಚಾನಕ್ಕಾಗಿ ಪ್ರಾಣ ಬಿಟ್ಟಿದ್ದ. ಅದು ಶಿವರಾಮು, ಸೀತಾಲಕ್ಷ್ಮಿಯರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ..ಅವರು ಅಂದು ಕೆಳಗೆ ಬಿದ್ದವರು ಜೀವನದಲ್ಲಿ ಮತ್ತೆಂದೂ ಚೇತರಿಸಿಕೊಳ್ಳದಂತಾಯಿತು. ಪ್ರಾಯದ ಮಗನ ಸಾವು ಅವರ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು.

ಚಿಕ್ಕ ಮಗನ ಸಾವಿನ ನಂತರದ ಪರಿಣಾಮಗಳೇನು..?? ಮಗ ಪ್ರಸನ್ನನು ಒಳ್ಳೆಯವನೇ.. ಆದರೂ ಶಿವರಾಮವಿನ ಜೊತೆ ಹೊಂದಿಕೊಳ್ಳಲಾಯಿತೇ..?? ಸೊಸೆ ಸವಿತಾಳ ಕುರಿತೂ ದೂರುಗಳಿದ್ದವು. "ಆಕೆ ನಾದಿನಿ ಆದರೆ ಈಕೆ ಸೊಸೆ." ಸೊಸೆಯ ಜೊತೆ ಹೊಂದಾಣಿಕೆ ಇಲ್ಲದೆ ಬದುಕಲಾದೀತೇ..??  ಪ್ರಸನ್ನ ಹಾಗೂ ಸವಿತಾರ ಜೀವನದಿಂದ ಇಂದಿನ ಯುವ ಜನಾಂಗದ ಆಲೋಚನೆ, ನಡವಳಿಕೆ ಹಾಗೂ ಅವರ ಜೀವನಕ್ರಮಗಳನ್ನು ಅರಿಯಬಹುದು. ಇಲ್ಲಿಂದ ಮುಂದಕ್ಕೆ ಸೀತಾಲಕ್ಷ್ಮಿ ಹಾಗೂ ಶಿವರಾಮವಿನ ಬದುಕು ಏನಾಯಿತು..?? ಅವರ ಬದುಕು ಅಲ್ಲೋಲಕಲ್ಲೋಲವಾಗಲು ವೆಂಕಟರಾಮವಿನ ಕೈವಾಡವೇನಾದರೂ ಇದ್ದಿತಾ..?? ಕಮಲತ್ತಿಗೆ ಏನಾದರು..?? 

ಕೊರೊನಾ ಕಾಲಘಟ್ಟ ಕೇವಲ ಪ್ರಾರಂಭದಲ್ಲಿ ಮಾತ್ರವಲ್ಲದೇ.. ಕೊರೊನಾದಿಂದ ಉಂಟಾದ ಅಲ್ಲೋಲ-ಕಲ್ಲೋಲಗಳು ಹಾಗೂ ಅದರ ಪ್ರಭಾವಗಳು ಕೂಡಾ ಕಾದಂಬರಿಯಲ್ಲಿ ಚಿತ್ರಿತವಾಗಿವೆ. 

ಈ ಕಾದಂಬರಿಯ ಅಂತ್ಯ ನೆಮ್ಮದಿ ತಂದಿತು. ಅಷ್ಟೇ ಅಲ್ಲದೆ.. ತಂದೆ-ತಾಯಿಯರನ್ನು ಕೇವಲ ಮಕ್ಕಳೇ ನೋಡಿಕೊಳ್ಳಬೇಕು ಎಂಬ ಅಂತ್ಯವಲ್ಲದೆ.. ಬೇರೆಯ ರೀತಿಯ ಅಂತ್ಯ ಕಂಡದ್ದು ಈ ಕಾದಂಬರಿಯ ವಿಭಿನ್ನತೆಯೂ ಹೌದು. ಇಷ್ಟಕ್ಕೂ ಈ ವಿಭಿನ್ನತೆಯಾದರೂ ಏನು ಎಂಬುದನ್ನು ತಿಳಿಯಲು ಕಾದಂಬರಿಯನ್ನು ಓದಿ ನೋಡಿ. 

ಅಂತಃಪುರ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾದ ಸ್ತ್ರೀ ಕೇಂದ್ರಿತ ಕಾದಂಬರಿಯಲ್ಲವೆಂಬುದು ನನ್ನ ಗಾಢವಾದ ಅನಿಸಿಕೆ. ಇಲ್ಲಿ ಸೀತಮ್ಮನವರ ದೃಷ್ಟಿಯಿಂದ ಅವರು ಕಂಡು, ಕೇಳಿದ್ದನ್ನು ಅವರು ಹೇಳಿದ್ದರೂ ಸಹಾ ಹೆಚ್ಚಿನ ಹೆಣ್ಣುಮಕ್ಕಳ ಭಾವನೆ ಇದೇ ಆಗಿರಬಹುದಾ..?? ಎನ್ನಿಸಿತು. ಅಲ್ಲದೇ, ವಯಸ್ಸಿನ ಜೊತೆಗೆ ಮಾಗುವಿಕೆ ಮಾತ್ರವಲ್ಲದೆ, ಭಾಗುವಿಕೆಯೂ ಕಂಡಿತು. ಜೀವನದಲ್ಲಿ ಮಾಡಿಕೊಳ್ಳಬೇಕಾದ ಅನಿವಾರ್ಯ ಬದಲಾವಣೆಗಳು ಗೋಚರಿಸಿದವು. ಈ ಬದಲಾವಣೆಗಳು ಮನಸ್ಸಿನ ನೆಮ್ಮದಿಗೆ ಅನಿವಾರ್ಯ ಮಾತ್ರವಲ್ಲ.. ಅವಶ್ಯಕತೆಯೂ ಹೌದು ಎಂಬ ಸಂದೇಶವೂ ಇದೆ. ಈ ಕಾದಂಬರಿ ಹುಟ್ಟಿಸಿದ ಭಾವವೂ ಅಷ್ಟೇ ಗಾಢವಾದದ್ದು. ಅಲ್ಲದೇ.. ಕೊಟ್ಟ ಸಂದೇಶವು ಅಷ್ಟೇ ತೀವ್ರವಾಗಿ ತಟ್ಟಿತು. ಒಂದೊಳ್ಳೆ ಕಾದಂಬರಿಯ ಓದು ಗಾಢವಾಗಿ ಆವರಿಸಿಕೊಂಡಿತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ