ಸೋಮವಾರ, ಏಪ್ರಿಲ್ 13, 2026

ಪದರುಗಳು (ಪುಸ್ತಕ ಯಾನ - 164)


ಪುಸ್ತಕದ ಶೀರ್ಷಿಕೆ : ಪದರುಗಳು

ಲೇಖಕರು : ವಿವೇಕಾನಂದ ಕಾಮತ್ 

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2023

ಪುಟಗಳು : 144

ಬೆಲೆ : 150 ರೂ.


ಮನಸ್ಸಿನ ಪದರುಗಳು ಬಹಳ ಸೂಕ್ಷ್ಮವಾದಂತಹವು. ಅವುಗಳನ್ನು ಬಿಡಿಸಿಡಲು ಅಷ್ಟೇ ಸೂಕ್ಷ್ಮವಾದ ಬರವಣಿಗೆಯು ಬೇಕಾಗುತ್ತದೆ ಹಾಗೂ ಅರ್ಥ ಮಾಡಿಸುವ ರೀತಿಯೂ ನವಿರಾದ್ದಾಗ ಅದು ತಲುಪಿಸುವ ಪರಿಣಾಮವೇ ವಿಭಿನ್ನ. 


ಮನುಷ್ಯನ ಆರೋಗ್ಯವೆಂದಾಗ ಕೇವಲ ದೈಹಿಕ ಆರೋಗ್ಯ ಎಂದು ಭಾವಿಸಲು ಸಾಧ್ಯವಾಗದು. ಜೊತೆಗೆ, ಮಾನಸಿಕ ಆರೋಗ್ಯವೂ..  ಮನಸ್ಸಿಗೂ ಅನಾರೋಗ್ಯ ಕಾಡಿದಾಗ ಅದನ್ನೂ ಸೂಕ್ಷ್ಮವಾದ ಸ್ಥಿತಿ ಎಂದೇ ಪರಿಗಣಿಸಿ, ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದಾಗ ಮಾತ್ರವೇ ಮನುಷ್ಯ ಆರೋಗ್ಯವಂತನಾಗಿರಬಲ್ಲ. ಇಂದು ಹೆಚ್ಚಿನವರು ಖಿನ್ನತೆಯಿಂದಾಗಿ ಬಳಲುತ್ತಿದ್ದಾರೆ. ಅದರಲ್ಲೂ ಯುವ ಜನಾಂಗವೇ ಹೆಚ್ಚು. ಅದಕ್ಕೆ ಕಾರಣ ಓದಿನ ಕುರಿತಾದ ಒತ್ತಡ, ಕೆಲಸದ ಒತ್ತಡ ಕಾರಣವಾಗಿರಬಹುದು ಅಥವಾ ಕುಟುಂಬದಲ್ಲಿ ಅವರು ತೆರೆದುಕೊಳ್ಳುವ ರೀತಿ ಹಾಗೂ ಅವರಿಗೆ ಸಿಗುವ ಪ್ರೀತಿ ಎಲ್ಲದರ ಮೇಲೂ ಇದು ಅವಲಂಬಿತವಾಗಿರುತ್ತದೆ. ಓದು/ ಕೆಲಸದ ಒತ್ತಡ ಹಾಗೂ ಮನೆಯಲ್ಲಿನ ಒತ್ತಡ ಎರಡೂ ಸೇರಿದರೆ ಮನುಷ್ಯನ ಸ್ಥಿತಿ ನಿಜಕ್ಕೂ ಗಂಭೀರ ಹಾಗೂ ಆತಂಕಕಾರಿ. 


ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹೊರ ಹಾಕುವವರಲ್ಲಿ ಹೆಚ್ಚಿನವರು ಹೆಂಗಸರು ಅಥವಾ ಗಂಡಸರು ಎಂದು ಹೇಳಲಾಗದು. ಬದಲಾಗಿ, ಸಮರ್ಥ ವ್ಯಕ್ತಿ, ಸರಿಯಾದ ವಾತಾವರಣ ಸಿಕ್ಕರೆ ಮಾತ್ರವೇ ಗಂಡಾಗಲಿ.. ಹೆಣ್ಣಾಗಲಿ.. ತಮ್ಮ ಮನಸ್ಸನ್ನು ತೆರೆದುಕೊಳ್ಳಬಲ್ಲರು. ಇಲ್ಲವಾದಲ್ಲಿ ಅದು ಅಸಾಧ್ಯ. ತೀರಾ ಹತ್ತಿರದವರಿಗೂ ಹೇಳಿಕೊಳ್ಳಲಾಗದ ಸತ್ಯಗಳು ಬಹಳಷ್ಟಿರಬಹುದು. ಅಂತಹಾ ಸತ್ಯಗಳು ಮನಸ್ಸಿನ ಮೂಲೆಯಲ್ಲಿ ಕುಳಿತು ಆ ವ್ಯಕ್ತಿಯನ್ನು ಭವಿಷ್ಯದಲ್ಲಿ ಯಾವುದೋ ಬಗೆಯಲ್ಲಿ ಹೆದರಿಸಬಹುದು. ಭವಿಷ್ಯದಲ್ಲಿ ದೈತ್ಯಾಕಾರವಾಗಿ ಬೆಳೆಯುವ ಸಮಸ್ಯೆಗೆ ಇಂದಿನ ಯಾವುದೋ ಚಿಕ್ಕ ಘಟನೆಯೂ ಕಾರಣವಾಗಿರಬಹುದು. ಮನಸ್ಸನ್ನು ಹಾಗೂ ಮಾನಸಿಕ ಆರೋಗ್ಯವನ್ನು ಬಹಳ ವಿಸ್ತಾರವಾದ ನೆಲೆಗಟ್ಟಿನಲ್ಲಿ ನೋಡಿದರೂ ಕಾಣದ್ದೇ ಹೆಚ್ಚಿರಬಹುದು. ಆದರೂ ಮನಸ್ಸಿನ ಮೂಲೆಯಲ್ಲೆಲ್ಲೋ.. ಕೆಲವು ಪರಿಣಾಮಕಾರಿ ವಿಚಾರಗಳು ಉಳಿದು ಹೋಗಿರಬಹುದು. ಇಂತಹಾ ಮಾನಸಿಕ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿರುವ ಮನೋವೈಜ್ಞಾನಿಕ ಕಾದಂಬರಿ 'ಪದರುಗಳು'.


ಮಗಳು ಪ್ರತಿ ಬಾರಿ ಬಂದಾಗಲೂ.. ಇದುವರೆಗೂ ಒಂದೇ ಒಂದು ಬಾರಿಯೂ ತಮ್ಮ ಸಂಸಾರದಲ್ಲಿ ಅಪಸ್ವರವಿದೆ ಎಂಬ ಮಾತನ್ನಾಡಿರುವುದನ್ನು ಆಕೆಯ ತಂದೆ-ತಾಯಿ ಕೇಳಿರಲಿಲ್ಲ. ನಿವೇದಿತಾ ಎಂದಿಗೂ ತನ್ನ ಗಂಡನ ಕುರಿತು ಒಂದೇ ಒಂದು ಕಹಿಯನ್ನೂ ಉಳಿಸಿಕೊಂಡಂತಿರಲಿಲ್ಲ. ಆದರೆ, ಆಕೆಯ ಗಂಡ ಪ್ರದೀಪನ ನಡೆ ನಿವೇದಿತಾಳ ತಂದೆ-ತಾಯಿ ಕೇಶವ ಹಾಗೂ ವೀಣಾರನ್ನು ಆತಂಕಕ್ಕೆ ದೂಡಿತ್ತು.


ಪ್ರದೀಪನ ವರ್ತನೆ ಬದಲಾಗಿತ್ತು. ಆತ ತನ್ನ ಮಗಳು ನಿಧಿಯನ್ನು ಬಹಳ ಜೋಪಾನ ಮಾಡುತ್ತಿದ್ದ. ನಿವೇದಿತಾ ತನ್ನ ಮಗು ನಿಧಿಯನ್ನು ಕೊಲ್ಲಲು ನೋಡಿದಳು ಎಂಬ ಆಘಾತಕಾರಿ ಸತ್ಯವನ್ನು ಆಕೆಯ ತಂದೆ-ತಾಯಿಯ ಎದುರಿಗಿಟ್ಟಾಗ ಅವರು ಮೊದಲಿಗೆ ಅನುಮಾನಿಸಿದ್ದು ಅಳಿಯನನ್ನೇ.. ಎಂದಿಗಾದರೂ ತಾಯಿ ತನ್ನ ಮಗುವನ್ನು ತಾನೇ ಕೊಲ್ಲಲು ಸಾಧ್ಯವೇ..??


ಆಕೆಗೆ ಗಂಡು ಮಗು ಇಷ್ಟವಿದ್ದಿರಬೇಕು ಇಲ್ಲವೇ ಮಗುವೇ ಇಷ್ಟವಿರಲಿಲ್ಲವೇನೋ... ಎಂಬ ಅಳಿಯನ ತರ್ಕ ಅರ್ಥವಿಲ್ಲದ್ದು ಎಂದರು ಆ ದಂಪತಿಗಳು. ತಬ್ಬಲಿಯಾಗಿದ್ದ ಪ್ರದೀಪ ಇಷ್ಟಪಟ್ಟು ನಿವೇದಿತಾಳನ್ನು ಮದುವೆಯಾಗಿದ್ದ. ಅವರಿಬ್ಬರ ಆಸೆಯಂತೆಯೇ ಹೆಣ್ಣು ಮಗಳೇ ಹುಟ್ಟಿದ್ದಳು. ಅದಕ್ಕೆ ನಿಧಿ ಎಂದು ಹೆಸರಿಟ್ಟಿದ್ದರು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎನ್ನುವಷ್ಟರಲ್ಲಿ ಈ ಆಘಾತ ಕಾದಿತ್ತು. ಆದರೆ, ವೀಣಾ ಹಾಗೂ ಕೇಶವರು ನಿಧಿ, ನಿವೇದಿತಾಳನ್ನು ಕೆಲ ದಿನಗಳ ಕಾಲ ತಮ್ಮ ಮನೆಗೆ ಕರೆತಂದರು. ಮಗಳಿಗೆ ಅಳಿಯನ ಮನಸ್ಸಿನ ಮಾತುಗಳನ್ನು ಹೇಳಲಿಲ್ಲ. 


ಪ್ರದೀಪನ ಕುರಿತು ಈಗ ನಿವೇದಿತಾ ಕೂಡ ತಕರಾರು ತೆಗೆದಿದ್ದಳು. ಆತನ ಆಫೀಸಿನಲ್ಲಿದ್ದ ಅಂಕಿತಾಳ ಮೇಲೆ ಆಕೆಗೆ ಅನುಮಾನವಿತ್ತು. ಅಲ್ಲದೆ, ಆತನ ಬಿಸಿನೆಸ್ ನಲ್ಲಿಯೂ ನಷ್ಟವಾಗಿರಬಹುದು ಎನ್ನುವ ಸಂದೇಹವನ್ನು ಮುಂದಿಟ್ಟಿದ್ದಳು.


ಪಕ್ಕದ ಮನೆಯ ದಿವಾಕರ ಬಂದು ಮಗುವನ್ನು ಎತ್ತಿಕೊಂಡಾಗಲೂ ನಿವೇದಿತಾ ಸಹಿಸಲಿಲ್ಲ. ವೀಣಾರ ದೊಡ್ಡಪ್ಪನ ಮಗ ಅರವಿಂದ ಅವರ ಪತ್ನಿ ಜಯಲಕ್ಷ್ಮಿ ಹಾಗೂ ವಿದೇಶದಲ್ಲಿ ನೆಲೆಸಿದ್ದ ನಿವೇದಿತಾಳ ವಯಸ್ಸಿನವಳೇ ಆದ ಅವರ ಮಗಳು ಕೃತಿಕಾ ಅವಳ ಮಕ್ಕಳ ಜೊತೆಗೆ ತನ್ನ ಮನೆಗೆ ಬಂದಾಗಲೂ ನಿವೇದಿತಾ ಅದನ್ನು ಸಹಿಸಲಿಲ್ಲ. ಅಂದು ಒಂದು ಆತಂಕಕಾರಿ ಘಟನೆಯೂ ನಡೆದಿತ್ತು. ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಮಗು ಬಟ್ಟೆಯ ಬುಟ್ಟಿಯೊಳಗೆ ಸಿಕ್ಕಿತ್ತು. ಅದರ ಮೇಲೆ ಬಟ್ಟೆಯನ್ನು ಹೇರಿದ್ದರಿಂದ ಮಗುವಿನ ಪ್ರಾಣಕ್ಕೆ ಕುತ್ತು ಬರುವಂತಹಾ ಸಂದರ್ಭ ಬಂದಿತ್ತು.


ಪ್ರದೀಪ ಆಕೆಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋದರೂ ಸಿ.ಸಿ ಟಿವಿಯ ಕಣ್ಗಾವಲಿನಲ್ಲಿತ್ತಿದ್ದ. ಮನೆಗೆ ಪ್ರಭಾವತಿ ಎಂಬ ಸಹಾಯಕಿಯನ್ನೂ ಕರೆತಂದಿದ್ದ. ನಿವೇದಿತಾಳಿಗೆ ಇದು ಸುತಾರಾಂ ಇಷ್ಟವಿರಲಿಲ್ಲ.


ಇಷ್ಟವಿದ್ದೋ.. ಇಲ್ಲದೆಯೋ.. ಇಬ್ಬರ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಮನೋವೈದ್ಯರಾದ ಡಾಕ್ಟರ್ ರೂಪ ಅವರ ಬಳಿ ಬಂದಿದ್ದರು. 


ಈ ಕಾದಂಬರಿ ಕೇವಲ ಕೌಟುಂಬಿಕ ಸಮಸ್ಯೆ ಹಾಗೂ ಅದರ ಪರಿಹಾರದಂತೆ ಕಂಡು ಬರಲಿಲ್ಲ.. ಬದಲಾಗಿ ಮಾನಸಿಕ ಸಮಸ್ಯೆಗೆ ಉತ್ತರ ದೊರಕಿಸಿಕೊಳ್ಳಲು ಹೊರಟವರ ಮಾನಸಿಕ ತುಮಲಗಳು ಹಾಗೂ ಸಮಸ್ಯೆಯ ಮೂಲವನ್ನು ಪದರು ಪದರಾಗಿ ಬಿಡಿಸಿಟ್ಟಿರುವಂತಿದೆ. 


ಮೊದಲಿಗೆ ಇದು ಪ್ರಸವಾ ನಂತರದ ಖಿನ್ನತೆಯ ಕಾರಣವಾಗಿರಬಹುದು ಎಂಬ ಆಲೋಚನೆಯಲ್ಲಿ ಓದುತ್ತಾ ಹೋದೆ. ನಂತರ ಬೈ ಪೋಲಾರ್ ಡಿಸೀಸ್ ಇರಬಹುದಾ ಎನ್ನಿಸಿತು. ಆದರೆ, ಅದೆರಡಕ್ಕೂ ವಿಭಿನ್ನವಾದ ಮಾನಸಿಕ ಸಮಸ್ಯೆಯೊಂದರ ಅನಾವರಣ ಇಲ್ಲಿದೆ. 


ಬಹಳ ಅಧ್ಯಯನ ಹಾಗೂ ಮಾನಸಿಕ ತಜ್ಞರ ಮಾಹಿತಿಗಳನ್ನಾಧರಿಸಿ ರಚಿಸಿರುವ ಮನೋವೈಜ್ಞಾನಿಕ ಕಾದಂಬರಿ ಎಲ್ಲಿಯೂ ಗುಟ್ಟು ಬಿಟ್ಟುಕೊಡದೆ.. ಕೊನೆಯವರೆಗೂ ರೋಚಕವಾಗಿ ಓದಿಸಿಕೊಂಡು ಹೋಗುತ್ತದೆ. ಮನಸ್ಸಿಗೆ ಅಲ್ಲಿ ಬಚ್ಚಿಟ್ಟ ವಿಷಯ ಹೇಳಲು ಇಷ್ಟವಿಲ್ಲದಿರುವಾಗ ಸುಪ್ತಮನಸ್ಸು ಸಹಾ ಆ ಸತ್ಯವನ್ನು ಅಷ್ಟು ಸುಲಭವಾಗಿ ಹೊರಗೆಡವುವುದಿಲ್ಲ. ಅಂತಹದರಲ್ಲಿ ಇಷ್ಟು ಚಂದದ ಕಾದಂಬರಿಯ ಕಥಾಹಂದರವನ್ನು ನಾನು ಹೇಗೆ ಸಂಪೂರ್ಣ ಬಿಚ್ಚಿಡಲಿ..!


ನಿವೇದಿತಾ ಹಾಗೂ ಪ್ರದೀಪ್ ಸಮಸ್ಯೆಗೆ ಕಾರಣವೇನು..?? ಪ್ರದೀಪನ ತಪ್ಪಿತ್ತೇ ಅಥವಾ ಆತ ನಿವೇದಿತಾ ಕುರಿತು ತಪ್ಪಾಗಿ ತಿಳಿದಿದ್ದನೇ..?? ದಿವಾಕರ್  ಹಾಗೂ ಅನಂತ್ ಅವರ ಕುಟುಂಬದ ಜೊತೆಗೆ ನಿವೇದಿತಾ ಅನುಚಿತವಾಗಿ ನಡೆದುಕೊಂಡದ್ದೇಕೆ..??  ನಿಧಿಯ ಭವಿಷ್ಯ ಮುಂದೇನಾಯಿತು..?? ಸಮಸ್ಯೆಗೆ ತಕ್ಕ ಪರಿಹಾರ ಸಿಕ್ಕಿದ್ದು ಯಾರಿಂದ..?? ಎಲ್ಲದಕ್ಕೂ ಉತ್ತರ ತಿಳಿಯಲು ಈ ಕಾದಂಬರಿ ಓದಿ. 


ಕಾಲ ಬದಲಾದರೂ.. ಕೆಲವು ಸಮಸ್ಯೆಗಳು ಬದಲಾಗವೇನೋ.. ಸಮಸ್ಯೆಯ ಸ್ವರೂಪಗಳು ವಿಭಿನ್ನ. ಆ ರೀತಿಯ ವಿಭಿನ್ನ ಮಾನಸಿಕ ತುಮುಲಗಳಿಗೆ ಕೌಟುಂಬಿಕ ರೂಪ ನೀಡಿರುವ ಕಾದಂಬರಿ ಸುಲಲಿತವಾಗಿ ಹಾಗೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅರ್ಥಪೂರ್ಣವಾದ ಮುಖಪುಟ.. ಕಾದಂಬರಿ ಓದಿದ ನಂತರ ಮುಖಪುಟದ ಸ್ಪಷ್ಟ ಚಿತ್ರಣದ ಅರ್ಥವಾಗುತ್ತದೆ.  

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ