ಪುಸ್ತಕದ ಶೀರ್ಷಿಕೆ : ನೇರಳೆ ಅಂಚು ಗಿಣಿಹಸಿರು ಸೀರೆ
ಲೇಖಕರು : ರಮ್ಯ ಎಸ್
ಪ್ರಕಾಶಕರು : ಶ್ರೀನಿವಾಸ ಪುಸ್ತಕ ಪ್ರಕಾಶನ
ಪ್ರಥಮ ಮುದ್ರಣ : 2023
ಪುಟಗಳು : 152
ಬೆಲೆ : 170 ರೂ.
'ನೇರಳೆ ಅಂಚು ಗಿಣಿಹಸಿರು ಸೀರೆ' ಕಥಾಸಂಕಲನ ನನ್ನನ್ನು ಶೀರ್ಷಿಕೆಯಿಂದ ಸೆಳೆದದ್ದು ಹೌದಾದರೂ.. ಇನ್ನೂ ಅಪ್ಯಾಯಮಾನವಾದದ್ದು ಅದರ ಮುಖಪುಟ ಹಾಗೂ ಕಥಾವಸ್ತುವಿನಿಂದ. ಪ್ರತಿಲಿಪಿಯಿಂದ ಪರಿಚಿತರಾದ ರಮ್ಯ ಶ್ರೀರಾಜರಾಜೇಶ್ವರಿ ಎಂಬ ಹೆಸರಿನಿಂದ ಬರೆಯುವ ರಮ್ಯ ಎಸ್ ಇವರ ಎರಡನೇ ಪುಸ್ತಕ ಇದು. ಈ ಕಥಾ ಸಂಕಲನವನ್ನು ಆತ್ಮೀಯತೆಯಿಂದ ಕಳುಹಿಸಿ ಕೊಟ್ಟಾಗ 2024ರ ಮೊದಲ ಓದಿಗೆಂದು ಎತ್ತಿಟ್ಟುಕೊಂಡಿದ್ದೆ. ಲೇಖಕಿಯ ಕಥಾಶೈಲಿ ನನಗೆ ಈಗಾಗಲೇ ಚಿರಪರಿಚಿತವಾಗಿದ್ದು.. ಈ ಕಥಾಸಂಕಲನ ಯಾವ ರೀತಿಯಲ್ಲಿಯೂ ನನಗೆ ನಿರಾಸೆ ಮಾಡದೆ ಅಪ್ಯಾಯಮಾನವಾಗುತ್ತದೆ ಎಂಬ ನಂಬಿಕೆ ಇತ್ತು. ನಿರೀಕ್ಷೆ ಮೀರಿ ಇಷ್ಟವಾಯಿತು ಸಹಾ.
ಈ ಕಥಾ ಸಂಕಲನದಲ್ಲಿ ನನಗೆ ಬಹಳ ಸೆಳೆದ ಅಂಶವೆಂದರೆ ಕಥೆಯ ಡೀಟೈಲಿಂಗ್. ಕಥೆಯ ಕಥಾ ಪರಿಸರ ಹಾಗೂ ಕಥಾಪಾತ್ರಗಳ ಚಿಕ್ಕ-ಚಿಕ್ಕ ಅಂಶಗಳನ್ನು ಸಹಾ ಕಣ್ಣಿಗೆ ಕಟ್ಟುವಂತೆ ದಾಖಲಿಸುತ್ತಾ ಹೋಗಿರುವುದು ಕಥೆಯನ್ನು ಕಣ್ಮುಂದೆ ಚಿತ್ರಿಸಿಕೊಳ್ಳುವಂತೆ ಮಾಡುವ ಪಾಸಿಟಿವ್ ಪಾಯಿಂಟ್. ಈ ಕಥಾ ಸಂಕಲನದಲ್ಲಿ 9 ಕಥೆಗಳಿವೆ.
ಆಸೆಯ ಬಳೆ : ರಘುರಾಮ್ ತನ್ನ ಪ್ರೀತಿಯ ಪತ್ನಿ ಜಾಹ್ನವಿ ಆಸೆಪಟ್ಟಂತೆ ಆಕೆಯ ಸೀಮಂತದ ಸಂದರ್ಭದಲ್ಲಿ ಒಂದು ಜೊತೆ ಜೇಡದ ಬಳೆಗಳನ್ನು ಮಾಡಿಸಿಕೊಟ್ಟಿದ್ದ. ಅವುಗಳೆಂದರೆ ಜಾಹ್ನವಿಗೆ ಬಹಳವೇ ಇಷ್ಟ. ಆದರೆ, ರಘುರಾಮ್ ತಂಗಿ ರಾಧಿಕಾಳ ಗಂಡನಿಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡು ಹಣದ ತುರ್ತು ಒದಗಿದಾಗ ಆಕೆ ತನ್ನ ಬಳೆಗಳನ್ನೇ ಕೊಟ್ಟಿದ್ದಳು. 25 ವರ್ಷದಿಂದ ಆಕೆಯೇ ದುಡಿದರೂ ಅಂತಹಾ ಬಳೆಗಳನ್ನು ಕೊಂಡುಕೊಳ್ಳಲಾಗದೇ ಒದ್ದಾಡಿ ಇನ್ನೇನು ತನ್ನ ಆಸೆ ಪೂರೈಸಿಕೊಳ್ಳಲು ಕಾದಿದ್ದಳು. ಕೆಲವೊಮ್ಮೆ ಆಸೆಗಳು ಚಿಕ್ಕದಾಗಿರಬಹುದು. ಆದರೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂಬುದಂತೂ ಸತ್ಯ. ನಿಸ್ವಾರ್ಥ ಮನಸ್ಸಿನ ಸಹೃದಯಿ ಜಾಹ್ನವಿಗೆ ಅವಳು ಆಸೆ ಪಟ್ಟ ಬಳೆಗಳು ಮತ್ತೆ ಕೈಸೇರಿದವೇ..??
ಸಾರ್ಥಕತೆ: ಸರ್ಕಾರಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಆರತಿಗೆ ಇಬ್ಬರು ಮಕ್ಕಳು. ತನ್ಮಯಿ ಹಾಗೂ ಸಮುದ್ಯತಾ. ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆಯಾಗಿದ್ದ ತನ್ಮಯಿಗೆ ತಾಯಿ ಆಯ್ಕೆ ಮಾಡಿದ್ದ ಡಾಕ್ಟರ್ ಚಿರಂತನ್ ಜೊತೆಯಲ್ಲಿ ನಿಶ್ಚಿತಾರ್ಥ ನಡೆಯುವುದಿತ್ತು. ನಿಶ್ಚಿತಾರ್ಥದ ದಿನವೇ ಆರತಿಗೆ ಆಘಾತವೊಂದು ಕಾದಿತ್ತು. 17 ವರ್ಷದ ಹಿಂದೆ ಆಕೆಯಿಂದ ದೂರವಾಗಿದ್ದ ಗಂಡ, ಅತ್ತೆ ಹಾಗೂ ನಾದಿನಿಯ ಕುಟುಂಬವೂ ಬಂದದ್ದು. ತನ್ನ ಮಗಳು ತನ್ಮಯಿಯೇ ತನ್ನನ್ನು ಹೇಳದೆ ಅವರನ್ನು ಕರೆಸಿದ್ದು ಇನ್ನೂ ಆಘಾತವಾಗಿತ್ತು. ಮಕ್ಕಳಿಬ್ಬರೂ ಸೇರಿ ಕಳೆದುಕೊಂಡಿದ್ದ ಕೊಂಡಿಯನ್ನು ಬೆಸೆಯಲು ಹೊರಟರೆ..?? ತನ್ಮಯಿ ಅಪ್ಪ ಹಾಗೂ ಅವರ ಕುಟುಂಬದವರನ್ನು ಅಲ್ಲಿ ಕರೆಸಿದ್ದುದ್ದಕ್ಕೆ ಬೇರೆ ಉದ್ದೇಶವಿತ್ತೇ..?? ಆರತಿಯ ತ್ಯಾಗಕ್ಕೆ ಸಾರ್ಥಕತೆ ಸಿಕ್ಕಿತೇ..??
ಹೆಣ್ಣೆಂದರೆ..!?: ಚಂದ್ರಶೇಖರ್ ಹಾಗೂ ಸುಮಿತ್ರ ದಂಪತಿಗಳ ಒಬ್ಬನೇ ಮಗ ಚಂದನ್ ಗೆ ತಕ್ಕ ಮಡದಿಯಾಗಿ ಅವನ ಕೈ ಹಿಡಿದಿದ್ದಳು ಚಿತ್ರ. 17 ವರ್ಷದ ದಾಂಪತ್ಯವಾದರೂ.. ನವನವೀನ ಭಾವಗಳು. ಸೊಸೆಯನ್ನು ಮಗಳಂತೆ ಆಧರಿಸುವ ಅತ್ತೆ-ಮಾವ. ಪ್ರೀತಿಯ ಪತ್ನಿಯಾಗಿ ಆದರಿಸುವ ಗಂಡ. ಚಿತ್ರ ತನ್ನ ತಮ್ಮ ಗುರುಶಂಕರ್ ಮನೆಯ ಸಮಾರಂಭಕ್ಕೆ ಬಂದಾಗ ಅಲ್ಲಿ ತನ್ನ ದೊಡ್ಡಮ್ಮ ಹಾಗೂ ಇಬ್ಬರು ಅಕ್ಕಂದಿರು ಆಡಿದ ಮಾತುಗಳು ಆಕೆಯನ್ನು ಕುಗ್ಗಿಸಿತು. ಮದುವೆಯ ನಂತರ ದಪ್ಪವಾಗುವ ಹೆಣ್ಣುಮಕ್ಕಳನ್ನು ಹೀಯಾಳಿಸುವ ಮನೋಭಾವದ ಎಷ್ಟು ಹೆಂಗಸರಿಗೆ ತಕ್ಕ ಉತ್ತರದಂತೆಯೂ.. ಪಾಠದಂತೆಯೂ ಇದೆ ಈ ಕಥೆ. ಅಷ್ಟೇ ಅಲ್ಲದೆ, ಸಂಬಂಧಗಳು ಹೇಗಿರಬೇಕು ಹಾಗೂ ಇಬ್ಬರೂ ಸಂಬಂಧಗಳನ್ನು ಉಳಿಸಿಕೊಳ್ಳಲು ಇರಬೇಕಾದದ್ದು ಹೇಗೆ ಹಾಗೂ ಇದರಲ್ಲಿ ಹೆಣ್ಣಿನ ಪಾತ್ರ ಎಷ್ಟಿದೆ ಎಂಬುದನ್ನು ತಾಯಿಯ ಸ್ಥಾನದಲ್ಲಿ ನಿಂತು ಅರ್ಥ ಮಾಡಿಸಿದ ಅತ್ತೆ ಬಹಳ ಇಷ್ಟವಾದರು.
ಮಂಜು ಸರಿದಾಗ : ನನಗೆ ವೈಯಕ್ತಿಕವಾಗಿ ಬಹಳ ಇಷ್ಟವಾದ ಕಥೆ ಇದು. 25 ವರ್ಷಗಳ ದಾಂಪತ್ಯದಲ್ಲಿ ಹೊಂದಾಣಿಕೆ, ಅನುಸರಣೆ ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಸುವುದಷ್ಟೇ ಅಲ್ಲದೆ.. ಹೆಂಡತಿಯ ತ್ಯಾಗ ಎಷ್ಟಿರುತ್ತದೆ ಹಾಗೂ ಅದಕ್ಕೆ ಗಂಡ ತೋರಬೇಕಾದ ಗೌರವವು ಹೇಗಿರಬೇಕು ಎಂಬುದನ್ನು ಹೇಳುವ ಕಥೆ ಇದು. ವಿದ್ಯಾವಂತ ಹಾಗೂ ಸುಸಂಸ್ಕೃತ ಮನೆತನದ ದಂಪತಿಗಳಾದ ರಾಜೇಶ್, ರಶ್ಮಿಯಲ್ಲಿ ಭಿನ್ನಾಭಿಪ್ರಾಯ ಉಂಟಾದದ್ದು ವಿವಾಹ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದಂದೇ ಎನ್ನುವುದು ವಿಪರ್ಯಾಸ. ರಶ್ಮಿ ತನ್ನ ವೈಯಕ್ತಿಕ ಕಾರಣ, ಕಷ್ಟಗಳನ್ನು ಬದಿಗಿಟ್ಟು ಗಂಡನಿಗೆ ನೀಡಿದ ಎಲ್ಲಾ ಸಹಕಾರಗಳನ್ನು ಬಳಸಿಕೊಂಡೇ ರಾಜೇಶ್ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಮೇಲೇರಿದ್ದರು. ಆದರೆ, ರಾಜೇಶ್ ಗೆ ತನ್ನ ತಂದೆ-ತಾಯಿ, ಕುಟುಂಬ ಅಷ್ಟೇನೂ ಗೌರವ ತೋರದಿದ್ದಾಗಲೂ ರಶ್ಮಿ ತೋರಿದ ನಡೆಗಳು ಆಕೆಯ ವ್ಯಕ್ತಿತ್ವವನ್ನು ಬಹಳ ಎತ್ತರಕ್ಕೆ ಏರಿಸಿದವು. ಆದರೆ, ಸಂಬಂಧದ ಭಾವುಕತೆಗೆ ಕಟ್ಟುಬಿದ್ದ ರಾಜೇಶ್ ರಶ್ಮಿಯ ಮೇಲೆ ಹೇರಿದ ಒತ್ತಡ ಹಾಗೂ ಆಕೆ ಸಂಯಮದಿಂದಲೇ ಆ ಸಂದರ್ಭವನ್ನು ನಿಭಾಯಿಸಿದ ರೀತಿ ಮಂಜಿನ ಪೊರೆಯನ್ನು ಸರಿಸಿದ್ದು ಹೌದಾದರೂ.. ಆ ಕವಿದಿದ್ದ ಮಂಜು ಸರಿದ ರೀತಿಯನ್ನು ನೀವು ಓದಿ ಸವಿದರೆ ಚೆನ್ನ.
ಸುಮಧುರ ಅನುಬಂಧ : ಕೆಲವು ಸಂಬಂಧಗಳು ರಕ್ತಸಂಬಂಧದಿಂದ ಮಾತ್ರ ಬೆಸೆದಿರುವುದಿಲ್ಲ. ಬದಲಾಗಿ, ಇಬ್ಬರಲ್ಲೂ ಇರುವ ಭಾವನಾತ್ಮಕತೆ, ತೋರುವ ಪ್ರೀತ್ಯಾಧರಗಳು ಸಂಬಂಧಗಳನ್ನು ಬೆಸೆಯುತ್ತಾ ಹೋಗುತ್ತವೆ. ನಂದಿನಿಗೆ ಅಂತಹದ್ದೇ ಒಂದು ಸಂಬಂಧ ಮತ್ತೆ ಸುಮಧುರ ಅನುಬಂಧವಾಗಲು ಸಿದ್ಧವಿತ್ತಾದರೂ ಅದಕ್ಕೆ ಅವಳ ಮನಸ್ಸು ಸಂಪೂರ್ಣವಾಗಿ ಒಪ್ಪಿಗೆ ನೀಡಿರಲಿಲ್ಲ. ತನ್ನ ಆಪ್ತ ಗೆಳತಿ ಅನುರಾಧಾಳನ್ನು ಬಹಳ ಪ್ರೀತಿಸಿದ್ದ ಹಾಗೂ ತನ್ನ ಜೀವನದಲ್ಲಿ ಅಣ್ಣನ ಸ್ಥಾನವನ್ನು ತುಂಬಿದ್ದ ಉದಯ್ ಮತ್ತೆ ಆಕೆಯನ್ನು ಸಂಧಿಸಲು ಬಂದಾಗ ಆಕೆ ಸವಿಯಾಗಿಯೇನೂ ಆತನನ್ನು ಸ್ವೀಕರಿಸಲಿಲ್ಲ. ಆದರೆ, ಅಣ್ಣ-ತಂಗಿಯರ ಪ್ರೀತಿ ಅಷ್ಟು ಬೇಗ ಕಡಿದು ಹೋಗುವಂತಹದ್ದಲ್ಲ. ಅವರಿಬ್ಬರ ನಂಟು ಮತ್ತೆ ಬೆಸೆಯಲು ಕಾರಣವಾದವರು ಯಾರು..?? ಹಾಗೂ ಹೇಗೆ..?? ಉದಯ್ ಹಾಗೂ ನಂದಿನಿಯ ನಡುವಿನ ಅಂತರಕ್ಕೆ ಕಾರಣವೇನು..??
ಪ್ರೀತಿಯ ಪಾರಿಜಾತ : ಪಾರಿಜಾತದಷ್ಟೇ ನವಿರಾಕಗಿ ಅರಳಿ ತನ್ನ ಘಮಲನ್ನು ಹರಡಿ ಎಲ್ಲರನ್ನೂ ಬೆಸೆಯುವ ಚೆಂದದ ಕಥೆ ಇದು. ರಾಘವ ಹಾಗೂ ಪಾರಿಜಾತರಿಗೆ ಇಬ್ಬರು ಮಕ್ಕಳು. ಅಚಿಂತ್ಯ ಹಾಗೂ ಅಮೂಲ್ಯ. ಅವರಿಬ್ಬರ ಜೊತೆ ಮನೆಮಗಳಂತೆ ಬೆಳೆದದ್ದು ಅಮೃತ. 12 ವರ್ಷದ ಅಚಿಂತ್ಯ ತೆರೆದ ಬಾವಿಯಲ್ಲಿ ಬಿದ್ದಾಗ ಆತನನ್ನು ಉಳಿಸಲು ಹೋದ ರಾಮಣ್ಣ ಜೀವ ಬಿಟ್ಟಿದ್ದರು. ರಾಮಣ್ಣ ಹಾಗೂ ರತ್ನರ ಮಗಳೇ ಅಮೃತ. ಪಾರಿಜಾತಳ ಆಸೆಯಂತೆ ಡಾಕ್ಟರ್ ಡಿಗ್ರಿಯನ್ನು ಪಡೆದದ್ದು ಅಮೃತಾಳೇ. ಅಮೃತಳನ್ನು ಸೊಸೆಯನ್ನಾಗಿಸಿಕೊಳ್ಳಲು ಪಾರಿಜಾತರಿಗೆ ಇಷ್ಟವಿತ್ತಾದರೂ.. ಮಕ್ಕಳ ಮನಸ್ಸಿನಲ್ಲಿ ಏನಿತ್ತು ಎಂಬುದು ಅರಿವಿರಲಿಲ್ಲ. ತನ್ನನ್ನು ಓದಿಸಿದವರು ಎಂದು ಈ ಸಂಬಂಧವನ್ನು ಬಲವಂತದಿಂದ ಒಪ್ಪಿದರೆ ಎಂಬ ಅಳುಕಿದ್ದರೆ.. ಇತ್ತ ಅಚಿಂತ್ಯನಿಗೆ ಅಮೂಲ್ಯಳ ತಂದೆಯ ಸಾವಿಗೆ ತಾನೇ ಕಾರಣವಾಗಿದ್ದೆನೆಂಬ ಕೊರಗಿತ್ತು. ಆದರೆ, ಇದೆಲ್ಲದರ ನಡುವೆ ಪ್ರೀತಿಯ ಪಾರಿಜಾತ ಅರಳಿದ್ದಾದರೂ ಹೇಗೆ..?? ಪಾರಿಜಾತರ ಆಸೆ-ಕನಸುಗಳು ಹಾಗೂ ಮಕ್ಕಳ ಆಸೆಯೂ ಒಂದೇ ಆದ ಕಥೆ ಇಲ್ಲಿದೆ.
ನಾನು ಜಾನಕಿ ಅಲ್ಲವೇ !: 22 ವರ್ಷದ ಮಗಳು ಜಾಹ್ನವಿಗೆ ತನ್ನ ಅಮ್ಮ ಜಾನಕಿಯ ಜೀವನದಲ್ಲಿ ನಡೆದ ಬಿರುಗಾಳಿಯ ಅರಿವಿರಲಿಲ್ಲ. ಜಾನಕಿಯು ಇನ್ನೇನು ಅದನ್ನು ಮರೆತು ನೆಮ್ಮದಿಯಾಗಿದ್ದಳು ಎನ್ನುವಷ್ಟರಲ್ಲಿಯೇ ಜಾಹ್ನವಿ ಕರೆದುಕೊಂಡು ಹೋಗಿದ್ದ ಪಾರ್ಟಿಯಲ್ಲಿ ನೋಡಿದ ಮುಖ ಕಂಡಾಗ ಎಲ್ಲವೂ ನೆನಪಾಗಿತ್ತು. ರಘುರಾಮ್ ಜಾನಕಿಯ ಪತಿ ಹಾಗೂ ಜಾಹ್ನವಿಯ ತಂದೆ. ಆ ಸತ್ಯ ಜಾಹ್ನವಿಗೂ ತಿಳಿದಿರಲಿಲ್ಲ. ಆಗಿನ ಸೀತಾಮಾತೆಯಂತೆ ಈಗಿನ ಜಾನಕಿಯ ಕಷ್ಟಪಟ್ಟಿದ್ದಳು. ಪತಿಯಿಂದ ದೂರವಿದ್ದಳು. ಆದರೆ,ರಘುರಾಮ್ ನಿಜವಾಗಿಯೂ ರಾಮನಂತೆಯೇ ಏಕ ಪತ್ನಿವ್ರತಸ್ಥರೇ..?? ಜಾನಕಿಯ ನಂಬಿಕೆಗೆ ಅರ್ಹರೇ..?? ಅಲ್ಲಿ ಉಂಟಾಗಿದ್ದ ತಪ್ಪು ತಿಳುವಳಿಕೆಗಳಾದರೂ ಏನು..?? ಆಕೆ ಜಾನಕಿಯಂತೆಯೇ ಜೀವನದಲ್ಲಿ ಕಷ್ಟ ಅನುಭವಿಸಿದ್ದಕ್ಕೆ ಕಾರಣವೇನು..?? ಜಾನಕಿಯ ಜೀವನಗಾಥೆ ಇಲ್ಲಿದೆ.
ಪ್ರೀತಿ ಒಂದು ಅನುಭೂತಿ : ಎಷ್ಟೋ ಬಾರಿ ಪ್ರೀತಿ ತ್ರಿಕೋನ ಪ್ರೇಮವಾಗಿಬಿಟ್ಟಿರುತ್ತದೆ. ನಾವು ಇಷ್ಟಪಟ್ಟವರು ನಮಗೆ ದೊರಕದೇ ಹೋದರೂ ನಮ್ಮನ್ನು ಪ್ರೀತಿಸುವವರು ಇದ್ದೇ ಇರುತ್ತಾರೆ. ಅದನ್ನರಿತು ಅವರ ಜೊತೆ ಹೊಂದಿ ಬಾಳಿದಾಗಷ್ಟೇ ಜೀವನ ಸುಮಧುರ. ವಿವೇಕನಿಗೆ ಅಂಜಲಿಯ ಮದುವೆಯಾಗುತ್ತಿದ್ದದ್ದು ಜೀವನದ ಬಹಳ ದೊಡ್ಡ ನಿರಾಸೆಯಂತೆ ಕಾಡಿತ್ತು. ವಿವೇಕ್ ಅಂಜಲಿಯನ್ನು ಬಹಳ ಇಷ್ಟಪಡುತ್ತಿದ್ದ. ಅದಷ್ಟೇ ಆತನಿಗೆ ಗೊತ್ತಿದ್ದ ಸತ್ಯ. ಆತನ ನಡವಳಿಕೆಯನ್ನು ಗಮನಿಸುತ್ತಿದ್ದ ಆತನ ತಾಯಿ ಇದೆಲ್ಲವನ್ನು ತಿಳಿದುಕೊಂಡು, ಆತನಿಗೆ ಇದರಿಂದ ಹೊರಬರಲು ಬಹಳ ಪ್ರಬುದ್ಧವಾದ ಸಲಹೆಯೊಂದನ್ನು ನೀಡಿದ್ದರು. ವಿವೇಕ್ ನನ್ನು ಆರತಿಯಂತೂ ಕಾಯುತ್ತಿದ್ದಳು. ಆದರೆ, ಆಕೆ ತನ್ನನ್ನು ಪ್ರೀತಿಸುತ್ತಿರುವುದರ ಕುರಿತು ಆತನಿಗೆ ಅರಿವಿರಲಿಲ್ಲ. ಈ ಪ್ರೀತಿಯ ಅನುಭೂತಿ ಆತನನ್ನು ತಾಕಿತೇ..??
ನೇರಳೆ ಅಂಚು ಗಿಣಿಹಸಿರು ಸೀರೆ: 21 ವರ್ಷಗಳಿಂದ ಆಸೆ ಪಟ್ಟ ಸೀರೆ ತೆಗೆದುಕೊಳ್ಳಲು ಹೋಗುತ್ತಿದ್ದ ಮೈಥಿಲಿಗೆ ಸಂಭ್ರಮವೋ ಸಂಭ್ರಮ. ಅಷ್ಟಕ್ಕೂ 21 ವರ್ಷದಿಂದ ಆಕೆ ಆ ಸೀರೆಯನ್ನು ತೆಗೆದುಕೊಳ್ಳಲು ಇದ್ದ ಅಡೆ-ತಡೆಗಳೇನು..?? ಆಕೆ ಇಷ್ಟಪಟ್ಟಿದ್ದು ಗಿಣಿಹಸಿರು ಒಡಲಿನ ನೇರಳೆ ಅಂಚಿನ ಮೈಸೂರು ರೇಷ್ಮೆ ಸೀರೆಯನ್ನು. ಮಗಳು ವೃಷಾಲಿಗೆ ಅಮ್ಮನ ಸಂಭ್ರಮವನ್ನು ಕಂಡಷ್ಟೂ ಸಂಭ್ರಮ. ಆದರೆ, ಅಂದಿನ ಸಂಭ್ರಮ ಸಂಜೆಯಷ್ಟರಲ್ಲಿ ಉಳಿಯಲಿಲ್ಲ. ಗಂಡ ರಘುರಾಮ್, ಅತ್ತೆ, ನಾದಿನಿ ಎಲ್ಲರೂ ಬಂದಿದ್ದರಾದರೂ.. ಸೀರೆ ಕೊಂಡುಕೊಳ್ಳಲು ಹೋದರೂ.. ಆಕೆ ತಾನು ಇಷ್ಟಪಟ್ಟ ಸೀರೆಯನ್ನು ಕೊಳ್ಳಲಿಲ್ಲ. ಹೆಣ್ಣಿನ ಪುಟ್ಟ ಆಸೆಗಳು ನೆರವೇರಲು ಎಷ್ಟು ಕಾಲ ಬೇಕಲ್ಲವೇ..?? ಅದಕ್ಕೆ ಅವಳ ಸಂಯಮ, ತ್ಯಾಗಗಳೂ ಅಷ್ಟೇ ದೊಡ್ಡವಾಗಿರುತ್ತವೆ.
ಸೀರೆಯಷ್ಟೇ ನವಿರಾದ ಭಾವಗಳು ಮಿಳಿತಗೊಂಡ ಕಥೆ ಇಲ್ಲಿದೆ. ಇಲ್ಲಿ ಅತ್ತೆ ಅಮ್ಮನಾದ ಪರಿ, ಮಗಳು ದೊಡ್ಡವಳಾಗಿ ಅಮ್ಮನಿಗೆ ಭಾವನಾತ್ಮಕವಾಗಿ ಜೊತೆಯಾಗಿ ನಿಂತು ಆಕೆಯ ಈಷ್ಟಗಳನ್ನು ಅರ್ಥ ಮಾಡಿಸುವ ಪರಿ, ಗಂಡನ ಮೌನವಾದ ಪ್ರೀತಿ ಎಲ್ಲದರ ಸಮ್ಮಿಲನ ಸೀರೆಯಷ್ಟೇ ಇಷ್ಟವಾಯಿತು. ಶೀರ್ಷಿಕೆಯಾಗಿ ಮನಸೆಳೆದಿದ್ದ ಕಥೆಯನ್ನು ಓದಿದಾಗ ಬಹಳ ಇಷ್ಟವಾಯಿತು.
ಇಲ್ಲಿನ ಎಲ್ಲಾ ಕಥೆಗಳಲ್ಲಿಯೂ ಹೆಣ್ಣಿನ ಪ್ರಬುದ್ಧತೆ, ಉದಾತ್ತತೆ ಕಾಣುತ್ತದೆ. ಆಕೆಯ ತ್ಯಾಗ, ಸಂಯಮಗಳು ಕಂಡುಬರುತ್ತವೆ. ಇಲ್ಲಿನ ಹೆಚ್ಚಿನ ಹೆಣ್ಣುಮಕ್ಕಳು ವಿದ್ಯಾವಂತರಾಗಿರುವವರು. ವಿದ್ಯೆ ಹಾಗೂ ವಿನಯ ಎರಡು ಮಿಳಿತವಾಗಿ ರೂಪುಗೊಂಡ ಪ್ರಬುದ್ಧ ಪಾತ್ರಗಳು. ಇಲ್ಲಿ ಪುರುಷ ಪಾತ್ರಗಳ ಹೆಸರಿನಲ್ಲಿ ರಘುರಾಮ್, ರಾಘವರಾಮ್ ಹೀಗೆ ರಾಮನ ಹೆಸರಿನ ಅಂಶವಿದೆ. ಸೀತೆಯ ಅಂಶವಾದ ಮೈಥಿಲಿ, ಜಾನಕಿಯರು ಕಾಣುತ್ತಾರೆ. ಇದಕ್ಕೆ ಕಾರಣವೇನೆಂದು ತಿಳಿಯಲು ನೀವು ಈ ಕಥಾಸಂಕಲನದಲ್ಲಿ ಲೇಖಕಿಯ ಮಾತುಗಳನ್ನೇ ಓದಬೇಕು.
ಇಲ್ಲಿನ ಕಥೆಗಳು ಹಾಗೂ ಕಥೆಗಳ ಅಂತ್ಯ ಸಕಾರಾತ್ಮಕವಾಗಿಯೇ.. ಮತ್ತೊಬ್ಬರನ್ನು ಪ್ರೇರೇಪಿಸುವ ರೀತಿಯಲ್ಲಿದೆ. ಬದಲಾವಣೆಯನ್ನು ಮೂಡಿಸುವಂತಿದೆ. ಹಾಗೆಂದು, ಇಲ್ಲಿನ ಪಾತ್ರಗಳು ಕಾಲ್ಪನಿಕ ಪಾತ್ರದಂತೆಯೂ ಕಾಣುವುದಿಲ್ಲ. ಬದಲಾಗಿ ಅತ್ಯಪರೂಪದ ಪಾತ್ರಗಳು. ನಮ್ಮ ಸುತ್ತಮುತ್ತಲೇ ಇರುವಂತೆ ಭಾಸವಾಗುತ್ತದೆ. ರೇಷ್ಮೆಯ ಸೀರೆಯ ನೇಯ್ಗೆಗೆ ಎಷ್ಟು ಜತನವಾಗಿ ಎಳೆಗಳನ್ನು ನೂಲುತ್ತಾರೋ.. ಅಂತೆಯೇ ಅಷ್ಟೇ ಜೋಪಾನವಾಗಿ ಹಾಗೂ ಅಧ್ಯಯನ ಮಾಡಿ ಕಟ್ಟಿಕೊಟ್ಟ ಕಥೆಗಳು ಇಲ್ಲಿವೆ. .ರಮ್ಯ ಅಕ್ಕ ಇನ್ನಷ್ಟು ಕಥಾ ಸಂಕಲನ ಹಾಗೂ ಕಾದಂಬರಿಗಳನ್ನು ನಿಮ್ಮ ಲೇಖನಿಯಿಂದ ಮೂಡಿಬರಲಿ ಎಂಬ ಶುಭ ಹಾರೈಕೆ ನನ್ನದು
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ