ಪುಸ್ತಕದ ಶೀರ್ಷಿಕೆ : ಮಿಸ್ಟರ್ X ಮತ್ತು ಇತರ ಕತೆಗಳು
ಲೇಖಕರು : ಸಚಿನ್ ತೀರ್ಥಹಳ್ಳಿ
ಪ್ರಕಾಶಕರು : ಸಪ್ನ ಬುಕ್ ಹೌಸ್
ಪ್ರಥಮ ಮುದ್ರಣ : 2021
ಪುಟಗಳು : 87
ಬೆಲೆ : 85 ರೂ.
'ನವಿಲು ಕೊಂದ ಹುಡುಗ' ಕಥಾ ಸಂಕಲನದ ಲೇಖಕರಾದ ತೀರ್ಥಹಳ್ಳಿ ಅವರ ಮತ್ತೊಂದು ಕಥಾ ಸಂಕಲನ 'ಮಿಸ್ಟರ್ X ಮತ್ತು ಇತರ ಕತೆಗಳು'. ಈ ಕಥಾ ಸಂಕಲನದಲ್ಲಿ ಒಟ್ಟು 8 ಕಥೆಗಳಿವೆ .
ಮಿಸ್ಟರ್ X : ಅಕಸ್ಮಾತ್ ಯಾರಾದರೂ ನಮ್ಮ ಕುರಿತು ಅಗತ್ಯಕ್ಕಿಂತ ಹೆಚ್ಚಿನ ಕುತೂಹಲ ತೋರದಿದ್ದಾಗ.. ನಮಗೆ ಅವರ ಕುರಿತು ಒಂದು ಕುತೂಹಲ ಹುಟ್ಟಿ ಬಿಡುವುದಂತೂ ಸತ್ಯ. ಹೀಗೆ ನಮ್ಮ ಒಬ್ಬ ಕಥಾ ನಾಯಕನಿಗೆ ತನ್ನ ಪ್ರೀತಿಯನ್ನು ತಲುಪಲು ಹಲವಾರು ಸಿಮ್ ಕಾರ್ಡ್ ನ ಅವಶ್ಯಕತೆ ಬೀಳುತ್ತಿತ್ತು. ಏಕೆಂದರೆ, ಕೆಲ ಕಾಲದ ಚಾಟಿಂಗ್ ನ ನಂತರ ಆ ನಂಬರ್ ಅವಳಿಂದ ಬ್ಲಾಕ್ ಆಗಿ ಬಿಡುತ್ತಿತ್ತು. ಪದೇ ಪದೇ ಸಿಮ್ ಕೊಳ್ಳಲು ಹೋದರೆ.. ಆತ ಅನೈತಿಕವಾದದ್ದನ್ನೇನನ್ನೋ ಮಾಡುತ್ತಿದ್ದಾನೆ ಎಂದು ಉಳಿದವರಿಗನ್ನಿಸುತ್ತಿದೆ ಎನ್ನಿಸಿದಾಗ ಅಲ್ಲಿಂದ ಸ್ಥಳ ಬದಲಾಯಿಸಿದ. ಆದರೆ, ಅಜ್ಞಾತ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಆತನಿಗೆ ಜೊತೆಯಾಗಿದ್ದರು. ಜೊತೆಯಾಗಿದ್ದರು ಎನ್ನುವುದಕ್ಕಿಂತ ಆತ ಅವರಿಂದ ಎಷ್ಟೇ ಸಿಮ್ ಕೊಂಡುಕೊಂಡರೂ ಆತನನ್ನು ಮುಜುಗರಗೊಳಿಸದಂತೆ.. ಆತನ ಕುರಿತು ಅಗತ್ಯಕ್ಕಿಂತ ಹೆಚ್ಚಿನ ಕುತೂಹಲ ತೋರದಂತೆ ಆ ವ್ಯಕ್ತಿ ಸುಮ್ಮನಿದ್ದಾಗ ಈತನೇ ಅವರಿಗೆ ಹತ್ತಿರವಾಗಲು ಹೊರಟ. ಹಾಗೆ ಹೊರಟ ಆತನಿಗೆ ಮಿಸ್ಟರ್ X ಕುರಿತು ತಿಳಿದದ್ದೇನು..?? ಅಜ್ಞಾತ ವ್ಯಕ್ತಿಯ ರಹಸ್ಯವನ್ನು ಬೇಧಿಸಿಬಿಡುತ್ತೇನೆ ಎಂದು ಹೊರಡುವವನಿಗೆ.. ಆತನ ನಡವಳಿಕೆ ತಿಳಿದದ್ದಾದರೂ ಹೇಗೆ..?? ನಮಗೂ ಅಂತಹದ್ದೇ ಒಂದು ಪುಸ್ತಕದ ಅಂಗಡಿ ಹಾಗೂ ಮಿಸ್ಟರ್ X ಸಿಗಬಹುದಾ..?? ಎನ್ನುವ ಆಸೆಯಂತೂ ಮೂಡುತ್ತದೆ.
ಐಸ್ ಕ್ಯಾಂಡಿ : ಈ ಕಥಾಸಂಕಲನದಲ್ಲಿ ನನಗೆ ಇಷ್ಟವಾದ ಕಥೆ 'ಐಸ್ ಕ್ಯಾಂಡಿ'. ಚಿಕ್ಕಂದಿನ ಸಾರ್ವತ್ರಿಕ ಆಸೆ ಎಂದರೆ ಐಸ್ ಕ್ಯಾಂಡಿ ತಿನ್ನುವುದೇ ಇರಬಹುದಾ..! ನಮ್ಮೆಲ್ಲರ ಬಾಲ್ಯದಲ್ಲಿಯೂ ಇಂತಹಾ ದಿನಗಳು ಇದ್ದಿರಬಹುದು. ಕ್ವಾಟರ್ ಬಾಟಲಿಗಳನ್ನು ತೆಗೆದುಕೊಂಡು ಐಸ್ ಕ್ಯಾಂಡಿ ಮಾರುವವರು ಇದ್ದರು. ಆದರೆ ಮನೆಯಲ್ಲಿ ಕುಡಿಯುವವರೇ ಇಲ್ಲದಿದ್ದಾಗ ಆ ಬಾಟಲಿಗಳು ಸಂಪಾದನೆಯಾಗುತ್ತಿದ್ದು ಹೇಗೆ..?? ಒಂದು ಪುಟ್ಟ ಹುಡುಗನ ಆಸೆ ನೆರವೇರಿದ್ದರ ಜೊತೆಗೆ ಆತನಿಗಿದ್ದ ಭಯ ಕಳಚಿದ್ದು ಹಾಗೂ ಒಂದು ಆಶಿಸಿದವನಿಗೆ ಹೊರಲಾರದಷ್ಟು ಸಿಕ್ಕದ್ದು.. ನಮ್ಮದೇ ಬಾಲ್ಯದ ಕನಸೆಲ್ಲವೂ ನನಸಾದ ಅಂತಹ ಆಪ್ತ ಭಾವ ಮೂಡಿಸುವ ಕಥನ.
ಮುಖಾಮುಖಿ : "ಅವಳನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಅವಳು ಕಣ್ಬಿಟ್ಟು ಇದೆಲ್ಲಾ ಮತ್ತೊಂದು ಕನಸು ಅನ್ನುವ ಕ್ಷಣಕ್ಕಾಗಿ ಕಾಯುತ್ತಾ ಕೂತೆ." ಇದು ಕಥೆಯ ಕೊನೆಯ ಸಾಲು. ಆದರೆ, ಈ ಕಥೆಯಲ್ಲಿ ಮುಖಾಮುಖಿಯಾದ ಅವರಿಬ್ಬರೂ ಅಪರಿಚಿತರು ಎಂದರೆ ನೀವು ನಂಬುತ್ತೀರಾ..?? ಅವರಿಬ್ಬರು ಮುಖಮುಖಿಯಾದದ್ದಾದರೂ ಏಕೆ..?? ಹೇಗೆ..??
ಸ್ಮೋಕಿಂಗ್ ಜೋನ್ : "ಯಾವ ತಿರುವಲ್ಲಿ ಪ್ರೀತಿ ಯಾವೆಲ್ಲ ರೂಪದಲ್ಲಿ ನಮಗಾಗಿ ಕಾಯುತ್ತಿರಬಹುದೋ..??"
ಈ ಮಾತಂತೂ ಅಕ್ಷರಶಃ ಸತ್ಯ. ಆತನಿಗಾಗಿ ಪ್ರೀತಿ ಕಾಯುತ್ತಿತ್ತಾದರೂ.. ಅದು ಯಾವ ರೂಪದಲ್ಲಿ ದೊರೆತ ಪ್ರೀತಿ..?? ಆ ಪ್ರೀತಿಯನ್ನು ಅವನು ತಲುಪುವ ಬಗೆಯಾದರೂ ಹೇಗೆ..?? ಎಲ್ಲಾ ತಿರುವುಗಳಿಗೆ ಮುನ್ನುಡಿಯಾಗಿದ್ದು ಸ್ಮೋಕಿಂಗ್ ಜೋನ್ ನಲ್ಲಿ ನಡೆದ ಮಾತುಕತೆ. ಹಾಗೆ ನಡೆಯುತ್ತಿದ್ದ ಮಾತುಕತೆಯ ಮೂಲ ಹಾಗೂ ಫಲಗಳ ಕಥೆ ಇಲ್ಲಿದೆ.
ಮಿಥುನ ರಾಶಿ ಮೃಗಶಿರಾ ನಕ್ಷತ್ರ : "ಹಣದ ಮೇಲಾಟ, ಜಾತಕದ ದೋಷ, ಕನ್ಯತ್ವದ ಬಗೆಗಿನ ಪ್ರಶ್ನೆಗಳು, ಅಪರಿಚಿತ ಗಂಡಸಿನ ಸ್ಪರ್ಶ, ಪ್ರೀತಿ ಇಲ್ಲದ ನಗು, ನಕಲಿ ಮಾತುಗಳು, ಮದುವೆ ಅನ್ನುವ ಚಕ್ರವ್ಯೂಹ ಹೆಣ್ಣನ್ನು ಪ್ರತಿ ಹಂತದಲ್ಲೂ ನಲುಗಿಸುತ್ತಾ ನರಳಿಸುತ್ತಾ ಹೋಗುತ್ತದೆ." ಎನ್ನುವ ಮಾತನ್ನು ಆರೋಹಿಯ ಮೂಲಕ ಹೇಳಿಸುವ ಕಥೆಗಾರ ಅವಿವಾಹಿತ ಹೆಣ್ಣೊಬ್ಬಳ ಮದುವೆಯ ಮುಂಚಿನ ದಿನಗಳನ್ನು.. ಹೆಣ್ಣಿನ ಮನಸ್ಸಿನ ಮಾತುಗಳ ಮೂಲಕ ತೆರೆದಿಡುವ ಚಿತ್ರಣವಿದೆ. ಅಪ್ಪಟ ಹೆಣ್ಮಸ್ಸಿನ ಭಾವಗಳನ್ನು.. ಬಿಡುಬೀಸಾಗಿ ತೆರೆದಿಟ್ಟ ಪರಿ ಇಷ್ಟವಾಯಿತು. ಅಂದ ಹಾಗೆ ಮಿಥುನ ರಾಶಿ, ಮೃಗಶಿರಾ ನಕ್ಷತ್ರದ ಆರೋಹಿಗೆ ವಿವಾಹವಾಯಿತೇ..?? ಅಷ್ಟಕ್ಕೂ ಅವಳ ವಿವಾಹಕ್ಕಿದ್ದ ಅಡೆ-ತಡೆಗಳೇನು..?? ಓದಿ ನೋಡಿ.
ಲವ್ ಎಟ್ ಲಾಸ್ಟ್ ಸೈಟ್ : ಪ್ರೀತಿಯ ಅಸಹಾಯಕತೆ, ಪ್ರೀತಿಯ ಅರ್ಥ, ಪ್ರೇಮದ ತ್ಯಾಗ, ಆ ಆರ್ದ್ರ ಭಾವ.. ಇವೆಲ್ಲದರ ಜೊತೆಗೆ ಬದುಕಿನ ಆ ಕ್ಷಣಗಳು.. ಬದುಕಿನ ಪ್ರೀತಿಯ ಆ ಕ್ಷಣಗಳನ್ನು ಅಷ್ಟೇ ತೇವವಾಗಿ ಕಾಪಿಡಬಲ್ಲ ಇದು ಪ್ರೇಮ ಕತೆಯಾ..?? ಅಥವಾ ಪ್ರೇಮದ ಭಗ್ನ ಕಥೆಯಾ..?? ಪ್ರೀತಿಯ ಸೋಲು-ಗೆಲುವು, ಅಳಿವು-ಉಳಿವಿನ ಕಥೆ ಇಲ್ಲಿ ಭಾವನೆಗಳ ಮೂಲಕ ಹೊರಹೊಮ್ಮಿದೆ.
ಶ್ರೀ ದುರ್ಗಾಪರಮೇಶ್ವರಿ ಡ್ರೈವಿಂಗ್ ಸ್ಕೂಲ್ : ಶ್ರೀ ದುರ್ಗಾಪರಮೇಶ್ವರಿ ಡ್ರೈವಿಂಗ್ ಸ್ಕೂಲ್ ಗೆ ಬರುವ ಮೇಷ್ಟ್ರು ಕಾರು ಕಲಿಯಲು ಹೊರಟಾಗ ಅವರಿಗೆ ಟ್ರೈನರ್ ಸಿಕ್ಕಿದ್ದು ಅವರದ್ದೇ ಶಿಷ್ಯ. ಪರಮ ತರಲೆ ಶಿಷ್ಯನ ಕುರಿತು ಮೇಷ್ಟ್ರಿಗೆ ಚೆನ್ನಾಗಿಯೇ ನೆನಪಿತ್ತು. ತಾವು ಹೊಡೆದು ಬಡಿದು ಪಾಠ ಹೇಳಿದ ಶಿಷ್ಯ ಅವರ ವೃತ್ತಿ ಬದುಕಿನಲ್ಲಿಯೇ ಕಪ್ಪು ಚುಕ್ಕಿಯಾಗಿ ಉಳಿದಿದ್ದ. ಅಂತಹವನು ಅವರಿಗೆ ಕಾರು ಕಲಿಸುತ್ತಾನಾ..?? ಆ ದಿನಗಳ ನೆನಪಿನಿಂದ ಮತ್ತೇನಾದರೂ ಘಟಿಸುತ್ತದೆಯಾ..?? ಎನ್ನುವುದರ ಜೊತೆಗೆ, ಅಲ್ಲಿ ಚಿಗುರಿದ್ದ ಪ್ರೀತಿ ಆ ಶಿಷ್ಯನ ಪಾಲಿಗೆ ಹಸಿರಾಯಿತಾ ಅಥವ ಮೇಷ್ಟ್ರ ದೆಸೆಯಿಂದ ಅದಕ್ಕೂ ಕಲ್ಲು ಬಿದ್ದಿತಾ..?? ಇಬ್ಬರ ಬದುಕಿನಲ್ಲೂ ಬಹಳಷ್ಟು ಬದಲಾವಣೆಗಳಾಗುತ್ತವೆ. ಅಂತಹಾ ಬದಲಾವಣೆಗಳು ಬಹಳ ಚಂದವಾಗಿದೆ ಚಿತ್ರಿತವಾಗಿವೆ.
ಇಂಡಿಪೆಂಡೆನ್ಸ್ ಡೇ : ಈ ಕತೆಯನ್ನು ಓದಿದಾಗ ಯಾರೋ ಬರೆದುಕೊಟ್ಟ ಭಾಷಣವನ್ನು ಸ್ವಾತಂತ್ರ್ಯ ದಿನದಂದು ಮಾಡಿದ ನಮ್ಮ ಬಾಲ್ಯ ನೆನಪಾಗುತ್ತದೆ. ಆ ಬಾಲಕನ ಜಾಗದಲ್ಲಿ ನಾವಿದ್ದು ಅವನಂತೆಯೇ ಭಾಷಣದ ಚೀಟಿಯ ಬದಲು ಖಾಲಿ ಚೀಟಿ ಕೈಗೆ ಸಿಕ್ಕಿದ್ದರೆ ನಮಗೆ ಏನಾಗುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಿದ್ದಂತೆಯೇ ಆ ಇಕ್ಕಟ್ಟಿನ ಪರಿಸ್ಥಿತಿ ಅಂದಾಜಾಗುತ್ತದೆ. ಅಲ್ಲಿನ ಆ ಖಾಲಿ ಚೀಟಿಯ ರಹಸ್ಯದ ಹಿಂದಿನ ತುಂಟಾಟದ ಜೊತೆಗೆ, ಆತನ ಪ್ರಬುದ್ಧ ಆಲೋಚನೆ ಹಾಗೂ ಆತ ತನ್ನ ತಾತನ ಸ್ವಾತಂತ್ರದ ಹೋರಾಟದ ಕುರಿತು ಹೇಳಿದ ಪರಿ ಈಗಿನ ಮಕ್ಕಳ ಚುರುಕುತನವನ್ನು ತೋರುತ್ತದೆ.
ಚಂದದ ಕಥೆಗಳ ಕಥಾಸಂಕಲನದಲ್ಲಿ ಗಂಡು-ಹೆಣ್ಣಿನ ಮನಸ್ಸಿನ ಭಾವಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿರುವ ಕಥೆಗಾರನ ಕಥೆ ಕಟ್ಟುವ ನಿರೂಪಣಾ ಶೈಲಿ ಇಲ್ಲಿನ ಪ್ಲಸ್ ಪಾಯಿಂಟ್. ಕತೆಯಲ್ಲಿನ ನಿಗೂಢತೆ, ಮುಂದೇನಾಗುತ್ತದೆಯೋ ಎಂದು ಕಾದು ಓದುವಂತೆ ಮಾಡುತ್ತದೆ. 'ಐಸ್ ಕ್ಯಾಂಡಿ' ಹಾಗೂ 'ಇಂಡಿಪೆಂಡೆನ್ಸ್ ಡೇ' ಕಥೆಗಳಂತೂ ಬಾಲ್ಯದ ದಿನಗಳನ್ನು ಬಹಳ ಚಂದವಾಗಿ ನೆನಪಿಸುತ್ತವೆ. ಹದಿಹರೆಯದ ಕಥೆಗಳು ಇಲ್ಲಿವೆ. ಈ ವಯೋಮಾನವನ್ನು ದಾಟಿ ಮುಂದುವರಿದವರ ಮತ್ತಷ್ಟು ಕಥೆಗಳು ಹಾಗೂ ಕಥಾ ಪ್ರಯೋಗಗಳು ಕಥಾ ಸಂಕಲನದ ಮೂಲಕ ನಮ್ಮ ಕೈ ಸೇರಲಿ ಎಂದು ಲೇಖಕರಿಗೆ ಹಾರೈಸುತ್ತೇನೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ