ಪುಸ್ತಕದ ಶೀರ್ಷಿಕೆ : ಒಂದೇ ನಿಮಿಷ
ಲೇಖಕರು : ಎಂ. ಕೆ. ಇಂದಿರಾ
ಪ್ರಕಾಶಕರು : ಪ್ರಕಾಶ ಸಾಹಿತ್ಯ
ಪ್ರಥಮ ಮುದ್ರಣ : 1979
ಎರಡನೇ ಮುದ್ರಣ : 2004 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 124
ಬೆಲೆ : 50 ರೂ.
ಬಹಳ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ತನ್ನ ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೊರಟಿದ್ದ ವೀಣಾ ಮಳೆಯ ಕಾರಣದಿಂದ ಸಮಯಕ್ಕೆ ಸರಿಯಾಗಿ ಮನೆ ಸೇರಲು ಸಾಧ್ಯವಾಗಲಿಲ್ಲ. ಅಮ್ಮನಿಗಿಂತ ಹೆಚ್ಚಾಗಿ ತನ್ನನ್ನು ನೋಡಿಕೊಳ್ಳುತ್ತಿದ್ದ ಅತ್ತೆ ಕಲ್ಯಾಣಮ್ಮನವರಿಗೆ ಗಾಬರಿಯಾಗಬಹುದು ಎಂದು ತಮ್ಮ ಮನೆಯಿಂದ ಮೂರನೇ ಮನೆಯಾಗಿದ್ದ ರಾಜಾರಾಯರ ಮನೆಯಿಂದ ಕರೆ ಮಾಡಿ ತಿಳಿಸಿದಳು ವೀಣಾ.
ಅಮ್ಮನ ಅಂತಃಕರಣದ ತಾಯಿ ಕಲ್ಯಾಣಮ್ಮನವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಮೊದಲನೆಯ ಮಗ ಸೌಮ್ಯ, ಎರಡನೆಯವನು ಇಂದುಶೇಖರ, ಮೂರನೆಯವನು ಆದಿತ್ಯ ಹಾಗೂ ಮಗಳು ರಾಣಿ.
ಮೊದಲನೆಯ ಮಗ ಸೌಮ್ಯ ಹಾಗೂ ಆತನ ಪತ್ನಿ ವರದಾ. ಇಬ್ಬರು ಬರೋಡದಲ್ಲಿದ್ದರು. ಎರಡನೆಯ ಮಗ ಇಂದುಶೇಖರ ತನ್ನ ಪತ್ನಿ ಜಮುನಾಳ ಜೊತೆ ನಾಗಪುರದಲ್ಲಿದ್ದ. ಊರಲ್ಲಿ ತಾಯಿಯೊಂದಿಗೆ ಇದ್ದವನು ಆದಿತ್ಯ. ಆದರೆ, ಅವನೊಂದು ದೊಡ್ಡ ವ್ಯಾಪಾರಿ ಸಂಸ್ಥೆಯಲ್ಲಿದ್ದುದರಿಂದ ತಿಂಗಳಲ್ಲಿ ಒಂದೆರಡು ದಿನವಾದರೂ ಹೊರಗಿನ ಪ್ರವಾಸ ಇದ್ದೇ ಇತ್ತು.
ಮೂವರು ಸೊಸೆಯರು ಬಹಳ ಹೊಂದಿಕೆಯ ಸ್ವಭಾವದವರು. ವರದ ಹಾಗೂ ಜಮುನಾ ಇಬ್ಬರು ಶ್ರೀಮಂತರ ಮನೆಯ ಹೆಣ್ಣು ಮಕ್ಕಳು ಜಮುನಾ ಹಾಗೂ ವೀಣಾ ಡಿಗ್ರಿ ಪಡೆದವರಾಗಿದ್ದರೆ.. ವರದಾ ಪಿ.ಯು.ಸಿ ಅಂದರೆ ಆಗಿನ ಇಂಟರ್ ಪಾಸು ಮಾಡಿದವಳು. ಆದರೆ, ವಿದ್ಯೆಯ ಅಹಂ ಇಲ್ಲದೆ.. ಶ್ರೀಮಂತಿಕೆಯ ಸೊಕ್ಕಿಲ್ಲದೇ ಮೂವರು ಸೊಸೆಯರೂ ಬಂಗಾರದಂತೆ ಹೊಂದಿಕೊಂಡು ಹೋಗುತ್ತಿದ್ದರು. ಆದರೆ, ಜಮುನಾಳ ಹಾಸ್ಯಮಿಶ್ರಿತ ಸ್ನೇಹ ಸ್ವಭಾವದಿಂದ ಎಲ್ಲರ ಜೊತೆಯಲ್ಲೂ ಬಹಳ ಹೊಂದಿಕೆಯಿಂದ ಎಲ್ಲರ ಮನ ಗೆಲ್ಲುತ್ತಿದ್ದಳು.
ಮೂವರು ಅತ್ತಿಗೆಯರು ತನ್ನ ನಾದಿನಿ ರಾಣಿಯೊಂದಿಗೆ ಬಹಳ ಪ್ರೇಮದಿಂದ ಇದ್ದವರು. ಆ ಮನೆಯ ಹೆಸರು 'ಆನಂದ ನಿಲಯ' ತನ್ನ ಹೆಸರಿಗೆ ತಕ್ಕಂತೆಯೇ ಇತ್ತು. ವರ್ಷಕ್ಕೆ ಒಂದು ಬಾರಿ ತಂದೆಯ ತಿಥಿಯ ನೆಪದಲ್ಲಿ ಅಣ್ಣತಮ್ಮಂದಿರ ಸಂಸಾರಗಳೆಲ್ಲವೂ ಒಟ್ಟು ಸೇರುತ್ತಿದ್ದರು. ಆಗ ನಾದಿನಿಯ ಜೊತೆಯಲ್ಲಿ ಈ ಅತ್ತಿಗೆಯರು ಮಕ್ಕಳಂತೆ ಕುಂಟೆಬಿಲ್ಲೆ ಆಡುವುದೂ ಇತ್ತು.
ಆದರೆ, ಮೂವರು ಸೊಸೆಯರಲ್ಲಿಯೂ ಒಂದು ಅಗೋಚರ ನೋವಿತ್ತು. ಅದನ್ನು ಅವರ ಮುಖದಲ್ಲಾಗಲಿ.. ಮಾತಿನಲ್ಲಾಗಲಿ.. ತೋರಿಸಿಕೊಳ್ಳುತ್ತಿರಲಿಲ್ಲ. ಅತ್ತೆಯೂ ಯಾವುದನ್ನೂ ಕೆದಕಲು ಹೋಗುತ್ತಿರಲಿಲ್ಲ. ಮೂವರು ದಂಪತಿಗಳೂ ಮಕ್ಕಲಾಗಲಿಲ್ಲವೆಂದು ತಜ್ಞರಲ್ಲಿ ತೋರಿಸಿದಾಗ ಗಂಡಸರಲ್ಲಿ ಮೂವರಿಗೂ ಸಂತಾನ ಶಕ್ತಿ ಇಲ್ಲವೆಂದೇ ತಿಳಿಸಿದರು. ಗಂಡಂದಿರಲ್ಲೇ ತೊಂದರೆ ಇದೆಯೆಂದು ತಿಳಿದಿದ್ದರೂ.. ಹೆಂಡತಿಯರ ಆಸೆ, ಆಕಾಂಕ್ಷೆಗಳು ತಮ್ಮಿಂದ ಮುಕ್ಕಾಗಬಾರದೆಂದು ಅವರು ವಿಚ್ಛೇದನ ನೀಡಲು ಸಿದ್ದರಿದ್ದರೂ ಸಹಾ 21ನೇ ಶತಮಾನದಲ್ಲಿಯೂ ಗಂಡನನ್ನು ತೊರೆದು ಹೊರಡಲಿಲ್ಲ ಮೂವರೂ.
ವೀಣಾಳ ಮದುವೆಯಾಗಿ 6 ವರ್ಷ ಕಳೆದಿತ್ತು. ಮೂವರು ಸೊಸೆಯಂದಿರು ಸಹಾ ತಮಗೆ ಮಕ್ಕಳಾಗದಿದ್ದರೂ ಚಿಂತೆ ಇಲ್ಲ. ನಮ್ಮ ಕಣ್ಣೆದುರಿಗೆ ಅವರು ನಗುನಗುತ್ತಾ ಸುಖವಾಗಿದ್ದರೆ ಸಾಕು. ಇದ್ದುದರಲ್ಲಿ ತೃಪ್ತಿಯಾಗಿರೋಣ. ರಾಣಿಗೆ ಮಕ್ಕಳಾದರೆ, ಅದನ್ನೇ ನಮ್ಮ ಮಗುವೆಂದು ಭಾವಿಸಿ ನೋಡಿಕೊಳ್ಳೋಣ ಎಂಬ ಭಾವನೆಯಲ್ಲಿದ್ದರು. ಹೊರಗಿನಿಂದ ಬಂದವರು ಚುಚ್ಚು ಮಾತನಾಡಿದಾಗಲೂ.. ಅವರಿಗೆ ಇದೇ ಉತ್ತರ ನೀಡುತ್ತಿದ್ದರು ಎಲ್ಲರೂ.
ಜಮುನಾ ಅನಿರೀಕ್ಷಿತವಾಗಿ ಪತ್ರ ಬರೆದಿದ್ದಳು. ತಿಥಿಗೆ ಬಂದು ಹೋಗಿ ಆರು ತಿಂಗಳ ನಂತರ ಆಕೆ ಮತ್ತೊಮ್ಮೆ ಬರುತ್ತಿದ್ದಳು. ಆಕೆ ಬಂದಾಗಲಂತೂ ವೀಣಾಳೆಗೆ ಒಳ್ಳೆಯ ಜೊತೆ ದೊರೆತು ಆಕೆಯ ಮನಸ್ಸಿಗೆ ಬಹಳವೇ ಸಾಂತ್ವನ ದೊರೆಯುತ್ತಿತ್ತು.
ವೀಣಾ ಹಾಗೂ ಆದಿತ್ಯನದ್ದು ಒಂದು ರೀತಿಯಲ್ಲಿ ಪ್ರೇಮ ವಿವಾಹ. ಕಾಲೇಜಿನ ಡಿಬೇಟ್ ಒಂದರಲ್ಲಿ ವೀಣಾಳನ್ನು, ಆಕೆಯ ಮಾತಿನ ಮೋಡಿಯಿಂದ ಇಷ್ಟಪಟ್ಟಿದ್ದ ಆದಿತ್ಯ. ಆದರೆ, ವೀಣಾಳಿಗೆ ಇದಾವುದರ ಅರಿವೂ ಇರಲಿಲ್ಲ. ಮುಂದೆ ಮೂರು ವರ್ಷಗಳ ನಂತರ ಅನಿರೀಕ್ಷಿತ ಹಾಗೂ ಕಾಕತಾಳೀಯ ಎಂಬಂತೆ ಇವನ ವಧುವಾಗಿ ನಿಂತಿದ್ದಳು ವೀಣಾ. ವಿವಾಹದ ನಂತರವೂ ಬಹಳಷ್ಟು ಪ್ರೇಮದಿಂದ ಹೊಂದಿಕೊಂಡು ಬಾಳುತ್ತಿದ್ದರು. ಅವರ ದಾಂಪತ್ಯದಲ್ಲಿ ವಿರಸವೆಂಬುದೇ ಇರಲಿಲ್ಲ.
ಜಮುನಾ ಆಕೆಯ ತಮ್ಮನ ಮದುವೆಗೆ ಬಂದಾಗ ಅವಳ ಜೊತೆ ಮದುವೆಗೆ ಹಿಂಜರಿಕೆಯಿಂದಲೇ ಹೊರಡಲಿಲ್ಲ ವೀಣಾ. ಮಡಿವಂತರ ಸಮಾರಂಭದಲ್ಲಿ ಹೊರಗೆ ಕೂತರೆ..?? ಎನ್ನುವ ಹಿಂಜರಿಕೆ ಅವಳದ್ದು. ಆದರೆ, ಎಲ್ಲಾ ನಿರೀಕ್ಷೆಗಳನ್ನೂ ತಲೆಕೆಳಗು ಮಾಡಿತ್ತು ಅವಳ ದೇಹಪ್ರಕೃತಿ. ಆಕೆ ತಾಯಿಯಾಗುತ್ತಿರುವ ಸಮಾಚಾರ ತಿಳಿದು ಎಲ್ಲರಿಗೂ ಅಚ್ಚರಿಯ ಜೊತೆಗೆ ಸಂತಸವೂ ಆಗಿತ್ತು. ಯಾರೂ ಆಕೆಯ ನಡತೆಯನ್ನು ಅನುಮಾನಿಸಲಿಲ್ಲ. ಏಕೆಂದರೆ, ಅವಳು ಅಂತಹವಳಲ್ಲ ಎಂಬ ನಂಬಿಕೆ. ಅಲ್ಲದೆ, ಕೆಲವೊಮ್ಮೆ ವೈದ್ಯಕೀಯದ ಫಲಿತಾಂಶ ತಪ್ಪಾಗಿಯೂ ಇದ್ದಿರಬಹುದು. ಆದಿತ್ಯನ ವಿಷಯದಲ್ಲಿ ಹಾಗಾಗಿರಬಹುದೆಂದು ನಂಬಿದ್ದರು.
ಪ್ರಕಾಶ ಎಲ್ಲರ ಮೆಚ್ಚಿನ ಮಗನಾಗಿ ಬೆಳೆಯುತ್ತಾ.. ಓದಿನಲ್ಲಿಯೂ ಮುಂದೆ ಸಾಗುತ್ತಾ ಹೋದ. ರಾಣಿಗೂ ಮದುವೆಯಾಗಿ ಇಬ್ಬರು ಗಂಡು ಮಕ್ಕಳೂ ಆದರು. ಆದರೆ, ರಾಣಿಯ ಮಕ್ಕಳನ್ನು ನಮ್ಮಲ್ಲಿ ಬಿಡು ಎಂದು ಯಾರಾದರೂ ಹೇಗೆ ತಾನೇ ಹೇಳಿಯಾರು..??
ಪ್ರಕಾಶ ಬೆಳೆದಂತೆ, ವಿದ್ಯೆಯಲ್ಲಿ ಏರಿದಂತೆ, ಯೌವ್ವನಿಗನಾಗುತ್ತಿರುವಂತೆ ಅವನ ಗುಣ-ಸ್ವಭಾವಗಳೂ ಬದಲಾಗತೊಡಗಿದವು. ಶ್ರೀಮಂತ ಮನೆತನದ ಮೂರು ಗಂಡು ಮಕ್ಕಳಿಗೂ ಒಬ್ಬನೇ ವಾರಸುದಾರ, ರೂಪ, ವಿದ್ಯೆ, ಮುದ್ದಿನಿಂದ ಆತನಿಗೇ ತಿಳಿಯದಂತೆ ಒಂದು ರೀತಿಯ ಅಹಂ ಬೆಳೆಯಿತು.
ಕಾಲ ಬದಲಾಗುತ್ತಿತ್ತು. ಕಲ್ಯಾಣಮ್ಮನವರ ಕಾಲ ಮುಗಿಯಿತು. ಜಮುನಾಳಿಗೂ ವಯೋಸಹಜ ಖಾಯಿಲೆ. ಪ್ರಕಾಶ ಮೆಡಿಕಲ್ ಮುಗಿಸುವ ಸಮಯಕ್ಕೆ ಆದಿತ್ಯನಿಗೆ ನಿವೃತ್ತಿಯಾಯಿತು. ಮೂವರು ಅಣ್ಣ-ತಮ್ಮಂದಿರು ಒಂದೇ ಊರಿನಲ್ಲಿ ನೆಲೆಯಾದರು.
ಆದಿತ್ಯ ಯಾರಿಗೂ ಅಂಟಿಕೊಂಡಿರಲಿಲ್ಲ. ಭಾವನಾತ್ಮಕ ಬೆಸುಗೆ ಕಡಿಮೆಯೇ.. ಆದರೆ, ಡಾ|| ವಸಂತಳ ಕಾರ್ಯದಕ್ಷತೆ, ಪರಿಶ್ರಮ, ಗಂಭೀರ, ಮೌನ, ಶಾಂತ ಸ್ವಭಾವ, ಸೌಂದರ್ಯ ಎಲ್ಲದನ್ನೂ ಇಷ್ಟಪಟ್ಟಿದ್ದ ಪ್ರಕಾಶ. ಮುಂದೆ ವಿವಾಹವೂ ಎಲ್ಲರ ಒಪ್ಪಿಗೆಯ ಮೇರೆಗೆ ಆಯಿತು.
ವೀಣಾ ತಾನು ಬಯಸದಿದ್ದ ಘಟನೆಯೊಂದು ಜರುಗಿ ಆಗಿತ್ತು. ಜಗತ್ತಿನಲ್ಲಿ ಅವಳೊಬ್ಬಳಿಗೆ ಮಾತ್ರ ತಿಳಿದ ಸತ್ಯವೊಂದಿತ್ತು. ಮುಖಕ್ಕೆ ಬೆಲ್ಲ ಸವರಿಕೊಂಡು ಬಾಳಿನುದ್ದಕ್ಕೂ ಬೇವು ತಿಂದವಳ ಗತಿ ಈಗ ಹೇಳತೀರದು. ಅಂತಹಾ ಕಹಿ ಸತ್ಯಕ್ಕೂ.. ಕಾದಂಬರಿಯ ಶೀರ್ಷಿಕೆಗೂ ಇರುವ ನಂಟನ್ನು ನೀವೇ ಓದಿ ತಿಳಿಯಿರಿ.
ಈ ಕಾದಂಬರಿ ಸಿನಿಮಾವಾದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಜಮುನಾಳ ಜೀವನೋತ್ಸಾಹ ಬಹಳ ಇಷ್ಟವಾಯಿತು. ಹಣಕ್ಕಿಂತ ಗುಣಕ್ಕೆ ಹೆಚ್ಚಿನ ಮಹತ್ವ ನೀಡಿರುವ ಪರಿ ಹಾಗೂ ಹೆಣ್ಣು ವಿದ್ಯಾವಂತೆಯಾಗಿದ್ದರೆ ಅವಳ ಆಲೋಚನೆಗಳೆಷ್ಟು ಪ್ರೌಢವಾಗಿರುತ್ತವೆ ಎಂಬ ಅಂಶ ಸೆಳೆಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ