ಭಾನುವಾರ, ಏಪ್ರಿಲ್ 12, 2026

ಕಾಲಾಯ ತಸ್ಮೈ ನಮಃ (ಪುಸ್ತಕ ಯಾನ - 140)


ಪುಸ್ತಕದ ಶೀರ್ಷಿಕೆ : ಕಾಲಾಯ ತಸ್ಮೈ ನಮಃ

ಲೇಖಕರು : ಕೌಶಿಕ್ ಕೂಡುರಸ್ತೆ

ಪ್ರಕಾಶಕರು : ಸ್ನೇಹ ಬುಕ್ ಹೌಸ್

ಪ್ರಥಮ ಮುದ್ರಣ : 2020

ಪುಟಗಳು : 96

ಬೆಲೆ : 100 ರೂ.


ಕೌಶಿಕ್ ಕೂಡುರಸ್ತೆ ಇವರು ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿದ್ದು ಪ್ರವೃತ್ತಿಯಿಂದ ಲೇಖಕರು. ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಡುರಸ್ತೆಯವರು. ಇವರ 'ಇಂತಿ ನಿಮ್ಮ ಆತ್ಮೀಯ' ಎಂಬ ಕಾದಂಬರಿಯನ್ನು ಓದಿದ್ದೆನಾದರೂ ..ಇವರ ಹೆಸರು ಪತ್ತೇದಾರಿ ಕಾದಂಬರಿಗಳಲ್ಲಿ ಮುಂಚೂಣಿಯಲ್ಲಿದ್ದರೂ.. ನಾನು ಓದಿದ ಇವರ ಮೊದಲ ಪತ್ತೇದಾರಿ ಕಾದಂಬರಿ "ಕಾಲಾಯ ತಸ್ಮೈ ನಮಃ". ಇದು ಇವರ ಎರಡನೇ ಕಾದಂಬರಿ ಹಾಗೂ ಮೊದಲ ಪತ್ತೇದಾರಿ ಕಾದಂಬರಿ.


ಪತ್ತೇದಾರಿ ಕಾದಂಬರಿಗಳನ್ನು ರಚಿಸುವುದಂದರೆ ಅಷ್ಟು ಸುಲಭವಲ್ಲ. ಏಕೆಂದರೆ, ಈಗಾಗಲೇ ನಾವು ಸಾಕಷ್ಟು ವೆಬ್ ಸೀರೀಸ್ ಹಾಗೂ ಸಿನಿಮಾಗಳಲ್ಲಿ ಪತ್ತೇದಾರಿ ಕಥೆಗಳನ್ನು ಕಂಡಿರುವುದರಿಂದ, ಕೇಳುತ್ತಿರುವುದರಿಂದ, ಪತ್ತೇದಾರಿ ಕತೆಗಳನ್ನು ಓದಿರುವುದರಿಂದ ನಮ್ಮ ಮೆದುಳಿಗೆ ಕಸರತ್ತು ನೀಡುವಂತಹಾ ವಿಭಿನ್ನ ಶೈಲಿಯ ಪತ್ತೇದಾರಿ ಕಥೆಗಳನ್ನು ಹೊಸ ರೀತಿಯಲ್ಲಿ ನೀಡಬೇಕಾಗಿ ಬರುತ್ತದೆ. ಹಾಗಾಗಿ, ಓದುಗನ ಆಲೋಚನಾ ಶೈಲಿಗಿಂತ ಬಹಳ ವಿಭಿನ್ನವಾಗಿ ಆಲೋಚಿಸಿ ಪತ್ತೇದಾರಿ ಕಥೆಗಳನ್ನು ರಚಿಸಬೇಕು. ಇಲ್ಲವಾದರೆ ಅತ್ಯಂತ ಸಾದಾ ಕತೆ ಎನ್ನಿಸಿ.. ಆದಷ್ಟು ಬೇಗ ಪತ್ತೆ ಮಾಡುವಂತಿದ್ದರೆ.. ಮುಂದಕ್ಕೆ ಆಸಕ್ತಿ ಮೂಡುವುದಿಲ್ಲ. ಆದರೆ, ಇಲ್ಲಿ ಹೀಗಾಗದೇ ಅಂದುಕೊಂಡದ್ದಕ್ಕಿಂತ ವಿಭಿನ್ನವಾದ ಕಥಾ ಹಂದರ ದೊರಕಿತು. ಈ ಪತ್ತೇದಾರಿ ಕಾದಂಬರಿಯನ್ನು ಓದುತ್ತಾ.. ಓದುತ್ತಲೇ ಇದೊಂದು ಸಿನಿಮಾವಾದರೆ ಎಷ್ಟು ಚೆಂದವೆನಿಸಿತು.


ಇನ್ಸ್ಪೆಕ್ಟರ್ ವಿಕ್ರಂ ಹಾಗೂ ಕಾನ್ಸ್ಟೇಬಲ್ ರಾಮಪ್ಪನವರಿಗೆ ಬಂದ ಕೇಸ್ ಒಂದು ವಿಭಿನ್ನ ರೀತಿಯ ಕೇಸ್ ಆಗಿದ್ದಿತ್ತು. ಡಾಕ್ಟರ್ ರಾಧಾಕೃಷ್ಣ ಹಾಗೂ ಪ್ರೊಫೆಸರ್ ರಾಮೇಶ್ವರ ಇಬ್ಬರ ಕೇಸು ನೋಡುವುದಕ್ಕೆ ಸಾದಾ ಕೇಸು ಎನಿಸಿದರೂ.. ಇದನ್ನು ಸುಲಭವಾಗಿ ಬಗೆಹರಿಸಬಹುದು ಎನಿಸಿದರೂ ಸಹಾ ಅದೊಂದು ಸಾದಾ ಕೇಸಂತೂ ಖಂಡಿತವಾಗಿಯೂ ಆಗಿರಲಿಲ್ಲ. 


ಪ್ರೊಫೆಸರ್ ರಾಮೇಶ್ವರ ಅವರು ಮೂರು ತಿಂಗಳಿನ ಹಿಂದೆ "ಬೆಕ್ಕಿನ ಕಣ್ಣು" ಎಂಬ ಸಸ್ಪೆನ್ಸ್ ಥ್ರಿಲ್ಲರ್ ಪುಸ್ತಕವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರೂ.. ಅದು ಅವರ ಡ್ರೀಮ್ ಪ್ರಾಜೆಕ್ಟ್ ಕೂಡಾ ಹೌದು. ಆದರೆ, ಅದಾದ ನಂತರ ಅವರ ಸ್ನೇಹಿತರೊಬ್ಬರು ಫೋನ್ ಮಾಡಿ ತಿಳಿಸಿದ್ದರಿಂದ ಇನ್ನೊಂದು ಪುಸ್ತಕವನ್ನು ತಂದು ಓದಿದ್ದರು. ಅದೇ "ನೀಲಿ ಕಣ್ಣು". ಅದನ್ನು ಬರೆದವರು ಡಾಕ್ಟರ್ ರಾಧಾಕೃಷ್ಣ ಆಗಿದ್ದರು.


ಆದರೆ ಡಾಕ್ಟರ್ ರಾಧಾಕೃಷ್ಣ ಅವರು ಅದನ್ನು ಸಾರಾಸಗಟಾಗಿ ತಳ್ಳಿಹಾಕಿ.. ಅದು ತಮಗೂ ಹೊಳೆದ ಕಥೆ ಎಂದು, ತಾವು ಅದನ್ನು ಶಿವಮೊಗ್ಗದ ಹೋಂ ಸ್ಟೇಯಲ್ಲಿ ಒಬ್ಬರೇ ಕೂತು ಬರೆದದ್ದು ಎಂದು ಹೇಳಿದರು. ಅಲ್ಲಿಯೂ ವಿಚಾರಿಸಲಾಗಿ ಅದು ನಿಜವಾಗಿದ್ದಿತು. ಆದರೆ, ಬರೆದ ನಂತರ ಬಹಳಷ್ಟು ಲೇಟ್ ಆಗಿ ಮುದ್ರಣ ಮಾಡಿದ್ದರ ಕಾರಣವನ್ನು ವಿಚಾರಿಸಲಾಗಿ ಅಲ್ಲಿಯೂ ಸಹಾ ಡಾಕ್ಟರ್ ಹೇಳಿದ ಕಾರಣ ನಿಜವಾಗಿತ್ತು.


ಕಥೆಯನ್ನು ಮೊದಲು ಬರೆದವರು ಯಾರು..?? ಎನ್ನುವ ಸಂದೇಹಕ್ಕೆ ಉತ್ತರ ಅವರ ಕಥೆಯ ಹಸ್ತ ಪ್ರತಿಯಲ್ಲಿ ಸಿಗಬಹುದು ಎನ್ನುವ ರಾಮಪ್ಪನ ಉತ್ಸಾಹ ಮರುದಿನದ ಬೆಳಿಗ್ಗೆಯವರೆಗೂ ಅಷ್ಟೇ ಇದ್ದದ್ದು.. ಏಕೆಂದರೆ, ಪ್ರೊಫೆಸರ್ ಗೆ ದಿನಾಂಕ ಬರೆಯುವ ಅಭ್ಯಾಸವಿದ್ದರೂ ಡಾಕ್ಟರ್ ಆ ಅಭ್ಯಾಸವಿಟ್ಟಿರಲಿಲ್ಲ. ಆದರೆ, "ಇಂಕ್ ಏಜ್ ಡಿಟೆಕ್ಷನ್ ಟೆಸ್ಟ್" ನಿಂದಾಗಿ ಹಸ್ತ ಪ್ರತಿಯಲ್ಲಿ ಆಂಟಿದ ಇಂಕಿನ ಆಯಸ್ಸನ್ನು ತಿಳಿಯಬಹುದೆಂದು ಲ್ಯಾಬಿಗೆ ಪರೀಕ್ಷೆಗೆ ಕಳುಹಿಸಿದರು. ಸಂಜೆವರೆಗೂ ಸಮಯವಿದ್ದುದರಿಂದ ಹಾಗೂ ಪೋಲಿಸ್ ಸ್ಟೇಷನ್ ನಲ್ಲಿ ಬೇರೆ ಕೇಸು ಇಲ್ಲದ್ದರಿಂದ.. ಪ್ರೊಫೆಸರ್ ಬಾಯಲ್ಲಿ ಅವರ "ಬೆಕ್ಕಿನ ಕಣ್ಣು" ಕಥೆ ಕೇಳಲು ಶುರು ಮಾಡಿದರು ವಿಕ್ರಂ ಹಾಗೂ ರಾಮಪ್ಪ.


ಮೇರಿಯ ಮಗಳಾದ ಜೆಸ್ಸಿಕಾ ಫಿಲಂ ಸಿಟಿಗೆ ಸ್ನೇಹಿತರೊಂದಿಗೆ ಹೋಗಿದ್ದವಳು ನಾಪತ್ತೆಯಾಗಿದ್ದವಳು ಪತ್ತೆಯಾಗಿದ್ದು.. ಬೀಚ್ ಬಳಿಯ ಲೈಟ್ ಹೌಸ್ ಪಕ್ಕದಲ್ಲಿ ಆಕೆಯ ಶವದ ಜೊತೆಗೆ ಶವದಿಂದ ತೆಗೆದ ನೀಲಿ ಕಣ್ಣುಗಳು ಪತ್ತೆಯಾಗಿದ್ದವು. ಇನ್ಸ್ಪೆಕ್ಟರ್ ಅರ್ಜುನ್ ವಿಚಾರಣೆ ನಡೆಸಿದ್ದರೂ.. ಆಕೆಯ ಸಾವಿನ ಕಾರಣ ಸಿಕ್ಕಿರಲಿಲ್ಲ. ಅಲ್ಲದೇ.. ಜೆಸ್ಸಿಕಾ ಕೊಲೆಯಾಗಿ ಒಂದು ವರ್ಷವಾಗುತ್ತಾ ಬಂದರೂ ಕೊಲೆಗಾರನು ಇನ್ನೂ ಸಿಕ್ಕಿಲ್ಲದಿದ್ದರಿಂದ ಪ್ರೈವೇಟ್ ಡಿಟೆಕ್ಟಿವ್ ಹಿಮವಂತ್ ಮೊರೆ ಹೋಗಿದ್ದರು. 


ಹಿಮವಂತ್ ಕೊಲೆಯ ಹಿಂದಿನ ಕಾರಣವನ್ನು ತಿಳಿಯಲು ಹೊರಟಾಗ ಆತ ಬಂದು ನಿಂತದ್ದು ಫಿಲಂ ಸಿಟಿ ಬಳಿಗೆ. ಕೊಲೆಯಾದ ದಿನಾನಕಗಳ ಹಿಂದಿನ ಎರಡು ವರ್ಷಗಳ ದಿನಾಂಕದ ಪ್ಯಾಟ್ರನ್ ಹಾಗೂ ಕೊಲೆಗೆ ಏನಾದರೂ ಸಂಬಂಧವಿರಬಹುದಾ ಎಂದು ಯೋಚಿಸುತ್ತಾ.. ಗೆಳೆಯ ಆಹ್ವಾನಿಸಿದ್ದ ಡಿನ್ನರ್ ಪಾರ್ಟಿಗೆ ಹೋದಾಗ ಅಚಾನಕ್ಕಾಗಿ ಸಿಕ್ಕ ಒಂದು ಸುಳಿವನ್ನು ಹಿಡಿದು ಮರೆವಿನ ಕಾಯಿಲೆಯಾದ ಡಿಮೆನ್ಶಿಯಾ ಇರುವವರು ಕೆಲಸ ಮಾಡುವ 'ರೆಸ್ಟೋರೆಂಟ್ ಆಫ್ ಆರ್ಡರ್ ಮಿಸ್ಟೇಕ್' ಎನ್ನುವ ರೆಸ್ಟೋರೆಂಟ್ ಗೆ ಪಯಣ ಬೆಳೆಸುತ್ತಾನೆ.


ಅಲ್ಲಿ ಸುಳ್ಳು ಮಾಹಿತಿ ಕೊಟ್ಟು.. ಆ ಕಾಯಿಲೆ ಇಲ್ಲದಿದ್ದರೂ ಕೆಲಸಕ್ಕೆ ಸೇರಿದ ವೈಟರ್ ಫೋಟೋಗಳನ್ನು ನೋಡಿ ಬೆದರಿದಾಗ, ಆತನ ಬೆನ್ನು ಹತ್ತಿ ಕೊಲೆಗಾರನ ಕೈಯಲ್ಲಿದ್ದ ಹಚ್ಚೆಯ ಸುಳಿವು ಪಡೆಯುತ್ತಾನೆ. ಅದನ್ನರಸಿ ಫಿಲಂ ಸಿಟಿಯ ಜಾದುಗಾರರ ಸುಳಿವನ್ನು ಪಡೆದಾಗ ಸಿಕ್ಕವನೇ ಕ್ರಿಸ್ಟೋಫರ್ ಅಲಿಯಾಸ್ ವಿಪುಲ್ ಚಂದ್.


ಕೊಲೆಗಾರ ಆ ರೀತಿಯ ಕೊಲೆಗಳನ್ನು ಮಾಡಲು ಅವನಿಗೂ ಒಂದು ಮಾನಸಿಕ ಹಿಂಸೆಯ ಕಾರಣವಿದೆ ಎನ್ನುವ ಅಂಶವನ್ನು ಇಟ್ಟು ಕ್ರಿಸ್ಟೋಫರ್ ಹಿಂದಿನ ಪ್ರೀತಿಯ ನೋವಿನ ಕಥೆಯೊಂದನ್ನು ಬಿಚ್ಚಿಡುತ್ತಾರೆ. ವೇಶ್ಯೆಯಾಗಿದ್ದ ಕಾಜಲ್ ಳನ್ನು ಪ್ರೀತಿಸಲು ಹೊರಟವನಿಗೆ ಸಿಕ್ಕದ್ದು ನೋವು. ಹಾಗೆ ಸಿಕ್ಕ ನೋವು ಆತನನ್ನು ಕೊಲೆಗಾರನನ್ನಾಗಿ ಮಾಡಿತು. ಆಕೆಯಂತೆ ಬೆಕ್ಕಿನ ಕಣ್ಣಿನ ಹುಡುಗಿಯರನ್ನು ಪ್ರೀತಿಸಿ ಕೊಲ್ಲುತ್ತಾ ಹೋಗುತ್ತಾನೆ. 


ಇದು ಈ ಪತ್ತೆದಾರಿ ಕತೆಯ ಅರ್ಧ ಭಾಗ. ಇಷ್ಟು ಕಥೆಯನ್ನು ಓದಿದಾಗ ಕಥೆ ಇನ್ನು ಸಾದಾ ಟ್ರ್ಯಾಕ್ ನಲ್ಲಿ ಹೋಗುತ್ತಿದೆಯಲ್ಲಾ ಎಂದುಕೊಳ್ಳುವಷ್ಟರಲ್ಲಿ ಲೇಖಕರು ನಮ್ಮ ಆಲೋಚನೆಯನ್ನು ಮೀರಿ ಕತೆಯನ್ನು ಕೊಂಡೊಯ್ಯುತ್ತಾರೆ.


ಮೇರಿ "ಕೊಲೆಗಾರನನ್ನು ಕಂಡುಹಿಡಿದರೆ ಲಕ್ಷ, ಸಾಯಿಸಿದರೆ ಕೋಟಿ" ಎನ್ನುವ ಮಾತು ನೆನಪಾಗಿ ಆತನನ್ನು ಸಾಯಿಸಲು ಪ್ರಯತ್ನಿಸಿ ಹಿಂಬಾಲಿಸುತ್ತಾನೆ. ಆದರೆ, ಹಾಗೆ ಹಿಂಬಾಲಿಸಿ ಹೊರಟಾಗ ಅಂದು ರಸ್ತೆಯಲ್ಲಿ ಅಘೋರಿಯೊಬ್ಬನ ನಡವಳಿಕೆಗೂ.. ವಿಪುಲ್ ಚಂದ್ ನಡವಳಿಕೆಗೂ ಸಾಮ್ಯತೆಗಳು ಕಂಡುಬರುತ್ತವೆ. ಆ ಸಾಮ್ಯತೆಗಳು ಏನಿರಬಹುದು..?? ವಿಪುಲ್ ಚಂದ್ ನನ್ನು ಅಘೋರಿ ಬಳಸಿಕೊಂಡಿದ್ದಾನೆ. ಅಥವಾ ಆತನಿಗೂ ಈತನಿಗೂ ಏನಾದರೂ ಸಂಬಂಧವಿತ್ತಾ..?? ಅಘೋರಿಯ ಹಿಂದೆ ಹೊರಟು ಯನಗಳ್ಳಿಗೆ ಸೇರುತ್ತಾನೆ ಹಿಮವಂತ್. ಆಘೋರಿಯ ಹಿಂದಿನ ರಹಸ್ಯವೇನಿತ್ತು..?? ಆ ಕೊಲೆಯಾಗುತ್ತಿದ್ದ ದಿನಾಂಕಗಳ ಪ್ಯಾಟರ್ನ್ ರಹಸ್ಯ ಕಂಡುಹಿಡಿದನೇ..?? ಮುಂದೆ ಕೊಲೆಯಾಗಲಿರುವ ಬೆಕ್ಕಿನ ಕಣ್ಣಿನ ಹುಡುಗಿಯನ್ನು ರಕ್ಷಿಸಿದನೇ..?? ನೀಲಿ ಕಣ್ಣಿಗೂ ಒಂದು ಲಿಂಕ್ ಇದೆ. ಆ ಲಿಂಕ್ ಏನು..?? 


ಡಿಟೆಕ್ಟಿವ್ ಹಿಮವಂತ್ ನ ಸಾಹಸಗಾಥೆಗಳ ಮೂಲಕ ಚಾಣಾಕ್ಷತೆಯನ್ನು ನಮ್ಮ ಮುಂದಿಡುತ್ತಾ.. ಪತ್ತೇದಾರಿ ಕತೆಯನ್ನು ರೋಚಕವಾಗಿಸಿದ್ದಾರೆ.


ಇದಿಷ್ಟೇ ಅಲ್ಲ. ಇಲ್ಲಿ ಸಿಗುವ ಕಾರಣಕ್ಕೂ.. ಕೃತಿಚೌರ್ಯದ ಆರೋಪ ಹೊರಿಸಿದ್ದ ಡಾಕ್ಟರ್ ಹಾಗೂ ಪ್ರೊಫೆಸರ್ ಇಬ್ಬರ ಸಮಸ್ಯೆಗೂ ಇಲ್ಲಿಯೇ ಪರಿಹಾರವೂ ಇದೆ. ಎರಡು ಪ್ರಶ್ನೆಗೆ ಒಂದೇ ಉತ್ತರ ಎನ್ನುತ್ತಾರಲ್ಲ.. ಅಂತಹಾ ಒಗಟಿನ ರೀತಿಯ ಉತ್ತರವೇ ಇಲ್ಲಿಯೂ ಇದೆ.


ಪುಸ್ತಕದ ಮುಖಪುಟವನ್ನು ನೋಡಿದಾಗ, ಪೂರ್ಣ ಕಥೆಯನ್ನು ಓದಿ ಮುಗಿಸಿದ ನಂತರ ಬಹಳ ಅರ್ಥಪೂರ್ಣವಾದ ಮುಖಪುಟ ಎನಿಸಿತು. ಇಡೀ ಘಟನೆ ಹಾಗೂ ಪತ್ತೇದಾರಿ ಕಥೆಯನ್ನು ಎಲ್ಲಿಯೂ ಗುಟ್ಟು ಬಿಟ್ಟುಕೊಡದಂತೆ, ಮುನ್ನಡೆಸುತ್ತಾ.. "ಕಾಲಾಯ ತಸ್ಮೈ ನಮಃ" ಎನ್ನುತ್ತಾರೆ ಲೇಖಕರು.


ಮೊದಲ ಪತ್ತೇದಾರಿ ಕಥೆಯಲ್ಲಿ ಇಷ್ಟರ ಮಟ್ಟಿಗಿನ ಚಾಣಾಕ್ಷತೆಯಿಂದ ಕಥೆ ಹೇಳಿರುವ ಇವರು ತೀರ ಕ್ಲಿಷ್ಟವಲ್ಲದ ಸರಳ ನಿರೂಪಣೆಯಿಂದ ಮುಂದಿನ ಪುಸ್ತಕಗಳ ಕಡೆಗೂ ಭರವಸೆ ಮೂಡಿಸುತ್ತಾರೆ. ಇಂದಿನ ಪತ್ತೇದಾರಿ ಕಥೆಗಳಲ್ಲಿ ಇವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತದೆ. ಇವರ ಇನ್ನುಳಿದ ಪತ್ತೇದಾರಿ ಕಾದಂಬರಿಗಳನ್ನು ಓದಬೇಕಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ