ಪುಸ್ತಕದ ಶೀರ್ಷಿಕೆ : ಭಾಗ್ಯಳ ತಂದೆ
ಲೇಖಕರು : ಇಮೈಯಮ್ (ತಮಿಳು ಮೂಲ)
ಅನುವಾದಕರು : ಕನಕರಾಜ್ ಆರನಕಟ್ಟೆ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ
ಪ್ರಥಮ ಮುದ್ರಣ : 2022
ಪುಟಗಳು : 52
ಬೆಲೆ : 65 ರೂ.
ಇಮೈಯಮ್ ಅವರ 'ಪೆತ್ತವನ್' ಎಂಬ ತಮಿಳಿನ ನೀಳ್ಗಥೆಯು 'ಭಾಗ್ಯಳ ತಂದೆ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ.
ಇಮೈಯಮ್ ರವರು ತಮಿಳು ಸಾಹಿತ್ಯದಲ್ಲಿ 7 ಕಾದಂಬರಿ, ಒಂದು ಕಥೆ ಹಾಗೂ 7 ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. 1964 ರಲ್ಲಿ ಜನಿಸಿದ ಇವರು ವೃತ್ತಿಯಲ್ಲಿ ಅಧ್ಯಾಪಕರು. ಸಣ್ಣ ಕಥೆ ಹಾಗೂ ಕಾದಂಬರಿ ಪ್ರಕಾರಗಳನ್ನು ತಮ್ಮ ಅಭಿವ್ಯಕ್ತಿಯ ಸಾಧನವನ್ನಾಗಿಸಿಕೊಂಡಿದ್ದಾರೆ.
ಕನಕರಾಜ್ ಆರನಕಟ್ಟೆ ಇವರು ಸೌದಿ ಅರೇಬಿಯಾದ ಪ್ರಿನ್ಸ್ ಸತ್ತಾಮ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳಿನಲ್ಲಿಯೂ ಗದ್ಯ ಬರೆಯುವ ಇವರು ಇದುವರೆಗೂ ಎರಡು ಕಾದಂಬರಿಗಳನ್ನು ತಮಿಳಿನಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಮತ್ತು ತಮಿಳು ಕೃತಿಗಳನ್ನು ಎರಡೂ ಭಾಷೆಗಳಿಗೆ ಅನುವಾದಿಸಿದ್ದಾರೆ. 'ಅದಾದ ಮರುದಿನಕೆ', 'ಸಿಲೋನ್ ಸೈಕಲ್' ಇವರ ಪ್ರಕಟಿತ ಕಥಾ ಸಂಕಲನಗಳು.
ಈ ಕಾದಂಬರಿಯ ಶೀರ್ಷಿಕೆಯನ್ನು ನೋಡಿದಾಗ 'ಭಾಗ್ಯಳ ತಂದೆ' ಎನ್ನುವ ವಿಷಯಕ್ಕೆ ಖಂಡಿತ ಇದು ತಂದೆ ಮಗಳ ಭಾಂದವ್ಯದ ಕಥೆ ಎನ್ನುವ ನಿರೀಕ್ಷೆಯಲ್ಲಿ ಈ ಕಾದಂಬರಿಯನ್ನು ಓದಲು ಶುರು ಮಾಡಿದ್ದು.. ಆದರೆ, ಈ ಕಾದಂಬರಿ ಬೆಳಕು ಚೆಲ್ಲುವ ವಿಷಯ ಬಹಳ ಗಂಭೀರವಾದದ್ದು.
ನಾವು ತಂತ್ರಜ್ಞಾನದಿಂದ ಎಷ್ಟೇ ಮುಂದುವರಿದಿದ್ದೇವೆ ಎಂದುಕೊಂಡರೂ.. ನಾವು ಎಷ್ಟು ತಿಳುವಳಿಕೆ ಪಡೆದು ಮಾನವತ್ವವನ್ನು ಮೈಗೂಡಿಸಿಕೊಂಡಿದ್ದೇವೆ ಎಂದುಕೊಂಡರೂ.. ಈಗಲೂ ಮರ್ಯಾದಾ ಹತ್ಯೆಗಳೇನೂ ಸಂಪೂರ್ಣವಾಗಿ ನಿಂತಿಲ್ಲ. ಈ ಮರ್ಯಾದಾ ಹತ್ಯೆಗಳಿಗೆ ಪ್ರಮುಖ ಕಾರಣವಾಗುವುದು ಜಾತಿಯನ್ನು ಮೀರಿದ ಪ್ರೇಮ ಕಥೆಗಳು. ಅದರಲ್ಲೂ ಹುಡುಗಿ ಮೇಲು ಜಾತಿಗೆ ಸೇರಿದ್ದು, ಆಕೆ ಅವರಿಗಿಂತ ಕೆಳ ಜಾತಿಯವನನ್ನು ಪ್ರೀತಿಸಿದಾಗ.. ಮೊದಲು ಅವರ ಪ್ರೇಮಕ್ಕೆ ಕಡಿವಾಣವನ್ನು ಹಾಕಲು ನೋಡುತ್ತಾರೆ. ಅದು ಕೇವಲ ಹುಡುಗ-ಹುಡುಗಿಯ ನಡುವೆ ನಡೆಯುವ ಸಂಘರ್ಷ ಮಾತ್ರವಲ್ಲದೆ, ಎರಡು ಕುಟುಂಬಗಳಲ್ಲಿಯೂ ಆಯಾ ಕುಟುಂಬದ ಸದಸ್ಯರು ಅನುಭವಿಸುವ ಅವಮಾನ, ನೋವು, ದೈಹಿಕ ಹಲ್ಲೆ, ಮಾನಸಿಕ ಯಾತನೆಗಳು ಅಷ್ಟು ಸುಲಭವಾಗಿ ಬೇರೆಯವರಿಗೆ ವೇದ್ಯವಾಗುವುದಿಲ್ಲ. ಇಂತಹಾ ವರ್ತಮಾನದ ಕಟು ವಾಸ್ತವವನ್ನು ಲೇಖಕರು ಇಲ್ಲಿ ಬೆಳಕು ಚೆಲ್ಲಿದ್ದಾರೆ.
ಇಲ್ಲಿ ಭಾಗ್ಯಳ ತಂದೆ ಪಳನಿ ಪಂಚಾಯಿತಿಯ ಎದುರಲ್ಲಿ ಎಲ್ಲರ ಎದುರಿಗೆ ಅವಮಾನ ಅನುಭವಿಸುವ ಸಂದರ್ಭವಿದೆ. ಅದಕ್ಕೆ ಕಾರಣ ಮೂರು ಬಾರಿಯೂ ಅವರು ತಮ್ಮ ಮಗಳನ್ನು ತಮ್ಮ ಕೈಯ್ಯಾರೆ ಕೊಲ್ಲಲು ತಪ್ಪಿ ನಡೆದದ್ದು. ಪಳನಿ ಈಗ ಎಲ್ಲರ ಕಣ್ಣಲ್ಲೂ ಅಪರಾಧಿಯಂತೆ ಕಾಣುತ್ತಿದ್ದ.
ಈ ಬಾರಿ ತಾನೇ ತನ್ನ ಕೈಯ್ಯಾರೆ ತನ್ನ ಮಗಳಿಗೆ ವಿಷ ಕೊಡುವುದಾಗಿ ಎಲ್ಲರ ಮುಂದೆ ಒಪ್ಪಿಕೊಂಡು ಬಂದ ಪಳನಿಯ ಮಾತಿಗೆ ಆತನ ಪತ್ನಿ ಸಾಮಿಯಮ್ಮ ಕೂಡ ಒಪ್ಪಿದ್ದಳು. ಜಿದ್ದು ಕಟ್ಟಿ ನಿಂತಿದ್ದ ಆ ಊರಿನಲ್ಲಿ ಅವರೆಲ್ಲರೂ ಮಾನವಂತರಾಗಿ ಬದುಕಬೇಕಾಗಿದ್ದರೆ ಅದು ಅನಿವಾರ್ಯವೂ ಆಗಿತ್ತು.
ಆದರೆ, ಪಳನಿಯ ತಾಯಿ ತುಳಸಿಯಮ್ಮನಿಗೆ ಇದು ಒಪ್ಪಿಗೆಯಿರಲಿಲ್ಲ. ತನ್ನ ಕೂಸನ್ನು ತಾನೇ ಕೈಯ್ಯಾರೆ ಕೊಲ್ಲುವ ಪಾಪ ತನ್ನ ಮಗನಿಗೆ ಅಂಟಬಾರದೆಂಬ ದೂರಲೋಚನೆ.
ಪಳನಿ ಭಾಗ್ಯಳನ್ನು ಬೆಂಬಲಿಸುತ್ತಿದ್ದ ಎಂದರ್ಥವಲ್ಲ. ಪಳನಿ ಭಾಗ್ಯಳೊಂದಿಗೆ ಮಾತು ಬಿಟ್ಟು ಮೂರು ವರ್ಷವೇ ಆಗಿ ಹೋಗಿತ್ತು. ಆಕೆ ಬಿ.ಎಸ್ಸಿ ಕೊನೆಯ ವರ್ಷದಲ್ಲಿರುವಾಗ ಪೆರಿಯ ಸ್ವಾಮಿಯೊಂದಿಗೆ ಸಿನಿಮಾ ಥಿಯೇಟರ್ ನಲ್ಲಿ ಕುಳಿತಿದ್ದನ್ನು ಯಾರೋ ಸುದ್ದಿ ಮುಟ್ಟಿಸಿದಾಗ ವಿಚಾರಿಸಿದ ಪಳನಿಗೆ ಅವಳ ವರ್ತನೆಯಿಂದಲೇ ಅವಳ ಪ್ರೇಮ ವಿಚಾರ ತಿಳಿದಿತ್ತು. ಅದಾದ ನಂತರ ಆಕೆ ಪರೀಕ್ಷೆ ಬರೆಯಲೂ ಹರಸಾಹಸ ಪಟ್ಟಳು. ಪ್ರೇಮವನ್ನು ಸಫಲಗೊಳಿಸಿಕೊಳ್ಳಲು ಪೆರಿಯ ಸ್ವಾಮಿಯೊಂದಿಗೆ ಓಡಿ ಹೋಗಲು ಯತ್ನಿಸಿದಾಗಲೆಲ್ಲಾ ಸೋಲೇ ಕಾದಿತ್ತು. ಅವಳು ಆತ್ಮಹತ್ಯೆಗೆ ನಡೆಸಿದ ಪ್ರಯತ್ನಗಳೂ ವಿಫಲವಾಗಿತ್ತು.
ಹಲವಾರು ಘಟನೆಗಳು ನಡೆದ ನಂತರ ಬಂತು ಭಾಗ್ಯಳಿಗೂ ಆಕೆಯ ತಂದೆಗೂ ನೇರಾನೇರ ಮಾತುಕತೆಯೇ ನಿಂತು ಹೋಗಿತ್ತು. ಭಾಗ್ಯಳ ತಂಗಿ, ಕುಂಟಿಯಾಗಿದ್ದ ಸೆಲ್ವರಾಣಿಯ ಮೂಲಕವೇ ಅವರಿಬ್ಬರಿಗೂ ಬೇಕಾದ ಮಾತುಕತೆ ನಡೆಯುತ್ತಿದ್ದದ್ದು.
ಪಂಚಾಯಿತಿಯಿಂದ ಬಂದ ನಂತರ ಭಾಗ್ಯಳಿಗೆ ಊಟವನ್ನು ತಂದಿಟ್ಟಿದ್ದ ಆತನ ತಂದೆ ಅದರಲ್ಲಿ ವಿಷ ಹಾಕಿದ್ದನೇ..?? ಸೆಲ್ವರಾಣಿ ಹಾಗೂ ಸಾಮಿಯಮ್ಮ ನಂಬಿಕೊಂಡದ್ದು ನಿಜವಾಗಿತ್ತೇ..?? ಆತ ವಿಷ ನೀಡಿದ್ದರೆ ಅದನ್ನು ಕುಡಿಯಲು ಸಿದ್ಧವಾಗಿದ್ದಳು ಭಾಗ್ಯ. ಅಷ್ಟೇ ಅಲ್ಲದೆ ಮನೆಯವರಿಗೆ ಹೊರೆಯಾಗುವುದಕ್ಕಿಂತ ತನ್ನ ಕಥೆಯನ್ನು ಮುಗಿಸಿಕೊಳ್ಳುವುದೇ ಒಳ್ಳೆಯದು ಎಂಬ ಆಲೋಚನೆಯಲ್ಲಿದ್ದಳು.
ಆಕೆಯ ಪ್ರೇಮಿಯಾಗಿದ್ದ ಪೆರಿಯ ಸ್ವಾಮಿ ಪೊಲೀಸ್ ಕೆಲಸಕ್ಕೆ ಸೇರಲು ತನ್ನ ಪ್ರಯತ್ನಗಳನ್ನೆಲ್ಲ ಮಾಡುತ್ತಿದ್ದನು. ಆದರೆ, ಅಡೆತಡೆಗಳಿಂದ ಆತನ ಮನೆಯವರ ಮೇಲೆ ಏನೆಲ್ಲಾ ವಶೀಲಿಗಳು ನಡೆದವು..?? ಅವರ ಪರಿಸ್ಥಿತಿ ಏನಿತ್ತು..??
ಈ ಕಥೆಯಲ್ಲಿ ಇಂತಹಾ ಕೆಲ ಪ್ರಕರಣಗಳ ಉಲ್ಲೇಖಗಳನ್ನು ಕಥೆಯೊಳಗಿನ ದೃಷ್ಟಾಂತದಂತೆ ಅಲ್ಲಲ್ಲಿ ಹೇಳುತ್ತಾ ಸಾಗುತ್ತಾರೆ.
ಭಾಗ್ಯಳ ಕಥೆ ಏನಾಯಿತು..?? ಭಾಗ್ಯಳ ತಂದೆಗೆ ಮುಖ್ಯವಾದದ್ದು ಮಗಳೋ ಅಥವಾ ಪಂಚಾಯಿತಿಯ ತೀರ್ಮಾನವೋ..?? ಅಷ್ಟಕ್ಕೂ ಭಾಗ್ಯಳ ತಂದೆಯಾಗಿ ಆತ ನಿರ್ಧಾರಗಳನ್ನು ತೆಗೆದುಕೊಳ್ಳಲು ಆತನ ಮನಸ್ಸಿನಲ್ಲಿ ಆಗಿರಬಹುದಾದ ತಳಮಳಗಳೇನು..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಪುಸ್ತಕವನ್ನು.
2022ರ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತವಾಗಿರುವ ಈ ಕೃತಿಯು ಅನುವಾದಿತ ಎಂದು ತಿಳಿಯುವುದು ಕೇವಲ ಪ್ರಾದೇಶಿಕ ಹೆಸರುಗಳಿಂದ ಅಷ್ಟೇ.. ಅನುವಾದ ಎಷ್ಟು ಸಮರ್ಥವಾಗಿ ಮೂಡಿಬಂದಿದೆ ಎಂದರೆ ಹಳ್ಳಿಯಲ್ಲಿನ ಆಡು ಭಾಷೆ, ಕನ್ನಡದ ಗ್ರಾಮ್ಯ ಪದಗಳು ಇದನ್ನು ಇಲ್ಲಿನ ಕಥೆಯೂ ಆಗಿಸಿವೆ. ಇದು ಕೇವಲ ಕಥೆಯಲ್ಲ.. ಬದಲಾಗಿ ವಾಸ್ತವದ ಚಿತ್ರಣವೆಂದೇ ಹೇಳಬಹುದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ