ಪುಸ್ತಕದ ಶೀರ್ಷಿಕೆ : ಪ್ರೇಮ ಸಾಮ್ರಾಜ್ಯ
ಲೇಖಕಿ : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಸುಧಾ ಶಿಶುಸಾಹಿತ್ಯಮಾಲೆ
ಮೊದಲನೇ ಮುದ್ರಣ : 1995
ದ್ವಿತೀಯ ಮುದ್ರಣ : 2007 ( ನನ್ನ ಓದಿಗೆ ಸಿಕ್ಕಿದ್ದು )
ಪುಟಗಳು : 213
ಬೆಲೆ : 75 ರೂ.
ನಾನು ಓದಿದ ರಾಧಾದೇವಿಯವರ ಕಾದಂಬರಿಗಳಲ್ಲೆಲ್ಲಾ ವಿಭಿನ್ನ ಕಥೆಯ ಎಳೆಯನ್ನು ಹೊಂದಿರುವ ಕಾದಂಬರಿ ಇದು ಎನ್ನಿಸಿತು. ನಾಯಕ ಪ್ರಧಾನ ಕಥೆಯಾದರೂ ಹೆಣ್ಣು ಮನಸ್ಸಿನ, ಅಮ್ಮನ ಅಕ್ಕರೆಯ , ವಾತ್ಸಲ್ಯ ಹೊಂದಿರುವ ಕಥಾ ನಾಯಕ. ಜೊತೆಗೆ, ನಾಯಕಿಯ ಹಾಗೂ ಆಕೆಯ ಅತ್ತಿಗೆ, ನಾದಿನಿಯ ಪಾತ್ರವೂ ಬಹಳ ತೂಕದ್ದು ಎಂದೆನ್ನಿಸಿತು. ಪ್ರೀತಿ, ಪ್ರೇಮ ತುಂಬಿದ್ದರೂ ಅಷ್ಟೇ ಧೈರ್ಯ, ಸ್ಥೈರ್ಯದಿಂದ ಮನಸೆಳೆಯುತ್ತದೆ. ಈ ಕಾದಂಬರಿ ಚಲನಚಿತ್ರವಾದರೆ.. ಎಂಬ ಆಲೋಚನೆಯೂ ಮೂಡಿತು. ಕಾದಂಬರಿ ಓದುತ್ತಲೇ ದೃಶ್ಯಗಳು ಕಣ್ಮುಂದೆ ಹಾದು ಹೋದಂತಾಯಿತು.
ಕಾರು ಕೆಟ್ಟು ನಿಂತು ಆರು ಜನ ತರುಣಿಯರು ಚಿಂತಾಕ್ರಾಂತರಾಗಿದ್ದಾರೆ. ಅವರುಗಳೇ.. ಕಾಂತಿ, ವನಿತ, ಮಧುಲತ, ಜಾನಕಿ, ವಿಜಯಲತ ಹಾಗೂ ವಾರಿಣಿ. ವಾರಿಣಿಗೆ ಛಾಯಾಗ್ರಹಣ, ಶಿಲ್ಪಳಿಗೆ ಪತ್ರಿಕೆಗೆ ಬರೆಯುವ ಹವ್ಯಾಸ.ಈ ಗುಂಪಿನಲ್ಲಿ ವಿಭಿನ್ನ ಎಂದರೆ ಕಾಂತಿ. ಕಾಂತಿ ಶ್ರೀಮಂತ ಮನೆತನದಲ್ಲಿ ಇದ್ದರೂ.. ನಾಲ್ಕು ಜನ ಅಣ್ಣಂದಿರ ತಂಗಿಯಾದರೂ ಸರಳ ಹಾಗೂ ಗಂಭೀರ ಸ್ವಭಾವದ ಹುಡುಗಿ. ಒಬ್ಬೊಬ್ಬರೂ ಒಮ್ಮೊಮ್ಮೆ ಪಿಕ್ ನಿಕ್ ಹೊರಡಿಸಿ ಗೆಳತಿಯರ ಗುಂಪನ್ನು ಕರೆದೊಯ್ಯುತ್ತಿದ್ದರು. ಈಗ ಕಾಂತಿಯ ಸರದಿ. ಹಾಸನದ ಬಳಿಯ ಜಾವಗಲ್ ಗೆ ಎಂದು ಬಂದವರು ಅದೇ ರೀತಿಯ ದೇವಾಲಯ, ಶಿಲಾಶಾಸನ ಇದೆ ಎಂದು ಗೊತ್ತಾದಾಗ ವಾರಿಣಿಯ ಹಠ ತಡೆಯಲಾರದೆ ಹೊರಡುತ್ತಾರೆ. ಆದರೆ, ಮರಳುವಾಗ ಕತ್ತಲಾಗಿ, ಕಾರು ಕೆಟ್ಟು ನಿಂತಿತ್ತು. ಜೊತೆಗೆ ಹೊರಗಿನ ಜೋರು ಮಳೆ.
ಆಗಲೇ ಒಬ್ಬ ತರುಣ ಸಿಕ್ಕು ತನ್ನ ಹಳ್ಳಿಗೆ ಕರೆದೊಯ್ಯುತ್ತಾನೆ. ಆತನ ಮನೆ ಚಿಕ್ಕದಾದರೂ.. ಆತನ ಹಾಗೂ ಆತನ ತಂಗಿಯ ಮನಸ್ಸು ಬಹಳ ದೊಡ್ಡದು. ಆತನ ಹೆಸರು ಚಂದ್ರು. ಆತನ ತಂಗಿ ಶಾಂತವ್ವ. ಚಂದ್ರು ಹೋಗಿ ಆ ಊರಿನ ಗೌಡರ ಮಗನನ್ನು ಕರೆ ತಂದ. ಆತನೇ ವಿಶ್ವನಾಥ. ಆತ ಮೆಕ್ಯಾನಿಕ್ ಅನ್ನು ಕರೆಸಿ ಕಾರು ರಿಪೇರಿ ಮಾಡಿಸುವುದಾಗಿ ಹೇಳಿ ತನ್ನ ಮನೆಯಲ್ಲಿ ಸೌಕರ್ಯವಿದೆ ಎಂದು ಆಹ್ವಾನಿಸುತ್ತಾನೆ. ಆದರೆ, ಕಾಂತಿ ಹಾಗೂ ಜಾನಕಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ಆತನ ಜೊತೆಗೆ ಹೊರಟು ಹೋಗುತ್ತಾರೆ. ಕಾಂತಿ ಅಲ್ಲಿಂದ ಹೊರಡುವಷ್ಟರಲ್ಲಿ ಚಂದ್ರುವಿನ ಸದ್ಗುಣಕ್ಕೆ ಮೆಚ್ಚಿ, ಆತನ ಕೆಲಸ ಕಾರ್ಯಗಳನ್ನು ಕಂಡು, ಆತನ ಓದುವಿಕೆಯ ಹಂಬಲ ಹಾಗೂ ದೇವರ ಸೇವೆ, ತಂಗಿಗೆ ತೋರುವ ಅಕ್ಕರೆ ಹೀಗೆ ಬಿಡಿ ಬಿಡಿಯಾಗಿ ಇಡಿಯಾಗಿ ಮನಸ್ಸನ್ನು ಆವರಿಸಿಕೊಳ್ಳುತ್ತಾನೆ. ಕೋಟ್ಯಾಧಿಪತಿಗಳಿಗೂ ಇರಲಾಗದ ಹಿರಿಮೆ ಅವನಲ್ಲಿದೆ ಎನ್ನುವುದನ್ನು ಅರಿಯುತ್ತಾಳೆ. ಜೊತೆಗೆ, ಗೆಳತಿಯರ ರೇಗಿಸುವಿಕೆಯೂ ಸೇರಿ ಆತನಿಗೆ ಮನಸೋಲುತ್ತಾಳೆ.
ಪ್ರೇಮ ಶುರುವಾದದ್ದು ಅವಳಿಗೆ ಮಾತ್ರವಲ್ಲ.. ಚಂದ್ರುವಿಗೂ.. ಆದರೂ, ಆತ ಗಂಭೀರ. ಕಾಂತಿಯ ಮನೆಯ ವಾತಾವರಣದಲ್ಲಿ ಬೆಲೆ ಇದ್ದದ್ದು ಗುಣಕ್ಕಲ್ಲ.. ಹಣಕ್ಕೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಇದ್ದವಳು ವಸುಧಾ. ನಾಲ್ಕನೆಯ ಅತ್ತಿಗೆ ವಸುಧಾ ಜೊತೆಗೆ ಕಾಂತಿ ಸ್ನೇಹದಿಂದ ಇದ್ದಳು. ಆಕೆಯ ಆಲೋಚನೆಗಳು ಉನ್ನತ. ಕಾಂತಿಯ ಪ್ರೇಮ ಹಾಗೂ ಆಯ್ಕೆಯ ಕುರಿತು, ಚಂದ್ರುವಿನ ಸ್ವಾಭಿಮಾನದ ಕುರಿತು ತಿಳಿದಾಗ ಮನೆಯವರೆಲ್ಲರಿಗೂ ವಿರುದ್ಧವಾಗಿ ನಿಂತು ಮದುವೆ ಮಾಡಿಸುತ್ತಾಳೆ. ಇತ್ತ ವಿಶ್ವ ಹಾಗೂ ವಾರಿಣಿಯರ ಪ್ರೇಮ ಬೇರೆಯ ರೀತಿಯಲ್ಲಿ ಮುಂದುವರಿದಿರುತ್ತದೆ. ಕಾಂತಿಯನ್ನು ಮದುವೆ ಮಾಡಿಕೊಳ್ಳುವ ವಿಶ್ವನ ಆಸೆಗೆ ತಣ್ಣೀರೆರೆಚಿದಂತಾಗುತ್ತದೆ.
ನಂತರ ಕಾಂತಿ ಯುವತಿಯಿಂದ , ಗೃಹಿಣಿಯಾಗಿ, ಮಾಗುವ ಹೆಣ್ಣಾಗುವ ಕಾಲ. ಆದರೆ, ಅವರ ಪುಟ್ಟ ಪ್ರೇಮ ಸಾಮ್ರಾಜ್ಯ ನಿಧಾನವಾಗಿ ಬಿರುಕಿನತ್ತ ಸಾಗುತ್ತದೆ. ಮತ್ತೆ, ಪ್ರೇಮ ಸಾಮ್ರಾಜ್ಯ ಗಟ್ಟಿಯಾಗಿ ನಿಲ್ಲುವುದೇ ? ಇಲ್ಲಿನ ಖಳನಾಯಕರಂತೂ ಊಹೆಗೆ ಸಿಲುಕದವರು.. ಅದೆಷ್ಟು ಗೋಮುಖ ವ್ಯಾಘ್ರದ ಮುಖವಾಡಗಳು..
ಇಲ್ಲಿ ಪ್ರೇಮ ಕಥೆಯ ಜೊತೆಗೆ ಗಮನಿಸುವುದಾದರೆ ವಯಸ್ಸಿನ ಅರಿಯದ ಗುಣಗಳಿಂದ ಪ್ರೌಢತೆಗೆ ಸಾಗುವ ಹೆಣ್ಣುಗಳು ಕಾಣುತ್ತಾರೆ.
ಶಾಂತವ್ವ ಚಂದ್ರುವಿನ ತಂಗಿ. ಅಪ್ಪ - ಅಮ್ಮನ ಗೈರು ಹಾಜರಿಯಲ್ಲಿ ಅಣ್ಣನ ಕೈ ಕೆಳಗೆ ಪಳಗುವ ಹೆಣ್ಣು ಅದೆಷ್ಟು ಸೂಕ್ಷ್ಮವಾಗಿ ಆಲೋಚಿಸುತ್ತಾಳೆ ಎನ್ನುವುದಕ್ಕೆ ಪುಟ್ಟ ಉದಾಹರಣೆ ಸಾಕು. ಆಕೆ ಪುಟ್ಟ ಮನೆಯಲ್ಲಿ ಅಣ್ಣ - ಅತ್ತಿಗೆಗೆ ಏಕಾಂತ ಒದಗಿಸಲು ಕಾರಣವೊಡ್ಡಿ ಮನೆಯಿಂದ ಆಚೆ ಹೋಗುವುದು.
ಇನ್ನು ಗೌಡತಿಯ ಅಂದರೆ ವಿಶ್ವನ ಅಮ್ಮನ ಪಾತ್ರ ಕೂಡಾ ತುಂಬಾ ತಾಳ್ಮೆಯಿಂದ ಮನಸೆಳೆಯುವುದು. ಗೌಡರ ಇತರ ಸಂಬಂಧಗಳನ್ನು ಸಹಿಸಿ ಮಕ್ಕಳನ್ನು, ಮನೆಯನ್ನು, ಮನೆತನದ ಗೌರವವನ್ನು ಸುಧಾರಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದಕ್ಕೆ ನಿದರ್ಶನದಂತಿರುವ ಪಾತ್ರ.
ಇನ್ನು ವಸುಧಾ ತನ್ನ ಗಂಡನ ಇಡೀ ಮನೆಯನ್ನು, ಶ್ರೀಮಂತರನ್ನು ಎದುರು ಹಾಕಿಕೊಂಡು ಕಾಂತಿಯ ಮದುವೆಯಾದ ನಂತರ ಮುಂದಿನ ಪರಿಣಾಮಗಳ ಅರಿವಿದ್ದರೂ.. ಅಂದರೆ ಮಗುವಿನ ಸಮೇತ ತವರು ಮನೆ ಸೇರಿದರೂ ಲೆಕ್ಕಿಸದೆ ತಾನು ಓದಿ ಸಾಧಿಸುತ್ತೇನೆ ಎನ್ನುವ ಹಂಬಲದಿಂದ ಓದು ಮುಂದುವರಿಸಿದವಳು. ಬುದ್ಧಿವಂತಿಕೆ ಜೊತೆಗೆ ಧೈರ್ಯದಿಂದ ಎದುರಿಸುವುದನ್ನು ಕಲಿಸುವ ಪಾತ್ರ.
ವಾರುಣಿ ಋಣಾತ್ಮಕವಾಗಿ ಇದ್ದರೂ ನಂತರ ಸಕಾರಾತ್ಮಕವಾಗಿ ಬದಲಾಗುವ ಹೆಣ್ಣು. ಕಾಮ ವಾಂಛೆಯಿಂದ ಏನೆಲ್ಲಾ ಪರಿಣಾಮಗಳಾಗಬಹುದು ಎಂಬುದರ ಸಾಕ್ಷಿಯಂತಿದ್ದಾಳೆ. ಆದರೂ, ಬದಲಾದ ನಂತರ ತನ್ನನ್ನು ಮಾತ್ರವಲ್ಲದೇ ಸುತ್ತಮುತ್ತಲಿನವರನ್ನೂ ಬದಲಾಯಿಸುತ್ತಾ ಬದಲಾವಣೆಗೆ ಸಾಕ್ಷಿಯಾಗುತ್ತಾಳೆ.
ಸದೃಢತೆ, ಬದಲಾವಣೆ, ದೈವಭಕ್ತಿ, ಶ್ರೀಮಂತ - ಬಡತನದ ವಾತವರಣಗಳು, ಸರಳತೆ, ಸ್ವಾಭಿಮಾನ, ಧೈರ್ಯ - ಸ್ಥೈರ್ಯ ಇವೆಲ್ಲದರ ಜೊತೆಗೆ ಪ್ರೇಮ, ಒಲವುಗಳ ಮಿಳಿತವಾಗಿ ತಿರುವುಗಳಿಂದ ಯುವ ಪೀಳಿಗೆಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಒಂದು ಪಾಠದಂತೆ ಸಂದೇಶ ನೀಡುವ ಕಾದಂಬರಿ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ