ಶುಕ್ರವಾರ, ಏಪ್ರಿಲ್ 10, 2026

ರಾವಣಾಂತರಂಗ (ಪುಸ್ತಕ ಯಾನ - 104)


ಪುಸ್ತಕದ ಶೀರ್ಷಿಕೆ : ರಾವಣಾಂತರಂಗ

ಲೇಖಕರು : ಶ್ರೀವಿಜಯ ಹಾಸನ

ಪ್ರಕಾಶಕರು : ಮಂಗಳ ಪ್ರಕಾಶನ

ಪ್ರಥಮ ಮುದ್ರಣ :2010

ಪುಟಗಳು : 142

ಬೆಲೆ : 90 ರೂ. 


ರಾವಣನ ಅಂತರಂಗದ ತುಮುಲಗಳು ಏನಿದ್ದವು ಎಂಬುದನ್ನು ಅರಿಯಲು ರಾವಣಾಂತರಂಗ ಒಂದು ರೀತಿಯಲ್ಲಿ ಕೈಗನ್ನಡಿಯಂತಿದೆ. ಇಲ್ಲಿ ನನಗೆ ಕಂಡ ಅಂಶವೆಂದರೆ ರಾವಣ ತನ್ನ ಹೆಚ್ಚಿನ ಕಾರ್ಯಗಳಿಗೆ ಸಮರ್ಥನೆ ನೀಡಿಕೊಳ್ಳಲಾರ. ಅಲ್ಲದೆ, ಅವನ ಸಬಲತೆ ಹಾಗೂ ದುರ್ಬಲತೆಗಳ ಅರಿವು ಅವನಿಗಿದೆ. ಹಾಗೆಂದು, ಕೈಕಟ್ಟಿಯೂ ಕೂರಲಾರ ಅಥವಾ ತನ್ನ ಕೆಟ್ಟ ಕೆಲಸಗಳಿಗೆ ಪಶ್ಚಾತಾಪವೂ ಇಲ್ಲ. ಇಲ್ಲಿ ರಾಮಾಯಣವನ್ನು ಸಂಕ್ಷಿಪ್ತವಾಗಿ ರಾವಣನ ಮಾತುಗಳ ಮೂಲಕ ಕೇಳುವಂತಿದೆ. ರಾವಣ ಕೆಟ್ಟವನು, ಆತ ರಾಮನ ವೈರಿ ಎಂಬುದನ್ನು ಹೊರತುಪಡಿಸಿ ನಮಗೆ ಅರಿವಿರುವುದು ಆತ ಶಿವನ ಭಕ್ತ ಎಂದು. ಇದರ ಜೊತೆ ಜೊತೆಗೆ ಅರಿವಾಗುವುದು ಅವನೊಳಗಿನ ತುಮುಲಗಳು. ವಿಧಿಯ ಲೀಲೆಗಳಿಗೆ ತಾನೊಂದು ಕೈ ಗೊಂಬೆ ಎಂದು ಆತನಿಗೆ ತಿಳಿದಿದೆ. ಆತ ತನ್ನನ್ನು ತಾನು ಅದರಿಂದ ಅಡಗಿಸಿಕೊಳ್ಳುವ ಅಥವಾ ದೂರ ಇಟ್ಟುಕೊಳ್ಳುವ ಪ್ರಯತ್ನ ಮಾಡದೆ.. ವಿಧಿಯ ನಡೆಯಂತೆ ಕೊನೆಯಾಗಲಿ ಎಂದುಕೊಳ್ಳುತ್ತಾನೆ. 


ಇಲ್ಲಿ ರಾವಣನ ಕಣ್ಣುಗಳಿಂದ ನೋಡುವ ರಾಮಾಯಣದಲ್ಲಿ ಎಷ್ಟೋ ಘಟನೆಗಳು ಮರೆಯಾಗಿರಬಹುದು. ಅಥವಾ ಒಂದೊಂದು ರಾಮಾಯಣ ಅಥವಾ ಮಹಾಭಾರತವೂ ಒಂದೊಂದು ರೀತಿಯಲ್ಲಿ ನಮ್ಮೆದುರಿಗೆ ಇಡಲ್ಪಡುತ್ತದೆ. ಏಕೆಂದರೆ, ಇದು ಬರಹಗಾರರಿಂದ ಬರಹಗಾರರಿಗೆ ವಿಭಿನ್ನ. ಜಾನಪದೀಯ ಮಹಾಕಾವ್ಯಗಳು ಬೆಳೆದು ಬಂದ ಬಗೆಯೂ ಹೌದು. ಈ ಪೌರಾಣಿಕ ಕಾದಂಬರಿಗಳಲ್ಲಿ ಕೆಲವು ಘಟನೆಗಳಿಗೆ ಹೆಚ್ಚಿನ ಹೊತ್ತು ನೀಡಿ ಇನ್ನು ಕೆಲವು ಘಟನೆಗಳನ್ನು ಕುಗ್ಗಿಸಿರುವಂತೆ ಕಾಣುತ್ತದೆ. ಹಾಗೆಂದು, ಯಾವುದನ್ನು ಇಲ್ಲಿ ತಿರುಚಿಲ್ಲ. 


ಮೊದಲಿಗೆ, ರಾವಣ ನಮಗೆ ಪರಿಚಯವಾಗುವುದು ಸೀತಾಪಹರಣದ ನಂತರ ಮಂಡೋದರಿ ಆತನನ್ನು ದೂರವಿಟ್ಟು ನಡೆಸಿಕೊಳ್ಳುತ್ತಿದ್ದರಿಂದ. ಆಕೆಗೆ ನಿಜ ವಿಚಾರವನ್ನು ತಿಳಿಸಲು ಬರುವ ಸಂದರ್ಭ. ಆತನ ಈ ನಡೆಯಲ್ಲಿ ತನ್ನ ಹೆಂಡತಿಯಾದರೂ ತನ್ನನ್ನು ಅರ್ಥ ಮಾಡಿಕೊಂಡರೆ ಬದುಕಿನ ಕ್ಷಣಗಳು ಅದೆಷ್ಟು ಸರಾಗವಾಗುತ್ತವೆ ಎನ್ನುವ ಭಾವ. ಮಂಡೋದರಿಯೊಂದಿಗೆ ಕಳೆದ ರಸ ನಿಮಿಷಗಳು ಹಾಗೂ ಸವಿ ನೆನಪುಗಳನ್ನು ನೆನಪು ಮಾಡಿಕೊಳ್ಳುತ್ತಾ.. ಆಕೆ ತನಗೆ ಸಿಕ್ಕ ಬಗೆಯನ್ನು ನೆನಪಿಸಿಕೊಳ್ಳುತ್ತಾನೆ. 


ರಾಕ್ಷಸ ಶಿಲ್ಪಿಯಾದ ಮಯ ಹಾಗೂ ಹೇಮೆಯ ಮಗಳಾದ ಮಂಡೋದರಿ ತನ್ನ ತಂದೆಯೊಂದಿಗೆ ಕಾಡಿನಲ್ಲಿ ಅಲೆಯುತ್ತಿದ್ದಾಗ ರಾವಣನ ಕಣ್ಣಿಗೆ ಮಂಡೋದರಿ ಬೀಳುತ್ತಾಳೆ. ಹಾಗೆಂದು, ತಕ್ಷಣಕ್ಕೆ ಅವರಿಬ್ಬರ ಮದುವೆಯಾಗುವುದಿಲ್ಲ. ಈ ಮದುವೆಗೆ ಶೂರ್ಪನಖಿ ಅಡ್ಡಿಯಾಗುತ್ತಾಳೆ. ಅಡ್ಡಿಯಾಗುತ್ತಾಳೆ ಎಂದರೆ ಅವಳು ನೇರವಾಗಿ ಅಡ್ಡಿಪಡಿಸುವುದಿಲ್ಲ. ಆದರೆ, ಮನೆಯಲ್ಲಿ ಮಗಳ ಮದುವೆಗಿಂತ.. ಮೊದಲು ಮಗನ ಮದುವೆಯಾಗಲು ಆತನ ತಾತ ಸುಮಾಲಿ ಒಪ್ಪುವುದಿಲ್ಲ. ಅದಕ್ಕಾಗಿ ಶೂರ್ಪನಖಿಗೆ ತಕ್ಕ ವರವನ್ನು ಹುಡುಕಿ ಆತುರಾತುರವಾಗಿ ವಿದ್ಯುಜ್ಜಿಹ್ವನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ನಂತರ, ಯಾವುದೋ ಯುದ್ಧದ ಸಂದರ್ಭದಲ್ಲಿ ಆಕೆಯ ಪತಿಯನ್ನು ತಾನೇ ಸಂಹರಿಸಬೇಕಾಗಿ ಬರುತ್ತದೆ. ನಂತರ, ಶೂರ್ಪನಖಿಯ ಸಂಪೂರ್ಣ ಜವಾಬ್ದಾರಿಯನ್ನು ಅವನೇ ಹೊರುತ್ತಾನೆ.


ಲಕ್ಷ್ಮಣ ವನವಾಸದಲ್ಲಿರುವಾಗ ಶೂರ್ಪನಖಿಯ ಮಗನಾದ ಜಂಬೂ ಕುಮಾರನನ್ನು ಹತ್ಯೆ ಮಾಡುತ್ತಾನೆ. ಅದನ್ನು ತಿಳಿದು ಕೆಂಡಾಮಂಡಲಳಾದ ಶೂರ್ಪನಖಿ ಅವರ ಬಿಡಾರಕ್ಕೆ ಹೋಗಿ ಅವರ ರೂಪಕ್ಕೆ ಕಾಮಿತಳಾಗಿ ವಿವಾಹವಾಗುವ ಇಚ್ಛೆ ತೋರ್ಪಡಿಸುತ್ತಾಳೆ. ಆಗ ರಾಮ ಮಾಡಿದ ತಮಾಷೆ, ಆಕೆಯನ್ನು ಲಕ್ಷ್ಮಣನತ್ತ ಹೋಗುವಂತೆ ಮಾಡುತ್ತದೆ. ಅವರಿಬ್ಬರ ತಿರಸ್ಕಾರದಿಂದ ಕುಪಿತಗೊಂಡ ಅವಳು ಸೀತೆಯನ್ನು ಕೊಲ್ಲಲು ಹೋಗುತ್ತಾಳೆ. ಆದರೆ, ರಾಕ್ಷಸಿಯಾದರೂ.. ಹೆಣ್ಣಾದ ಕಾರಣಕ್ಕೆ ಅವಳನ್ನು ಕೊಲ್ಲಲಾರದೆ.. ಲಕ್ಷ್ಮಣ ಕಿವಿ ,ಮೂಗುಗಳನ್ನು ಕೊಯ್ದು ಕುರೂಪಿಯನ್ನಾಗಿ ಮಾಡುತ್ತಾನೆ. ಈ ಅಪಮಾನದಿಂದ ಆಕೆ ಕುದಿಯುತ್ತಾ ಬಂದದ್ದೇ ರಾವಣನ ಬಳಿಗೆ.


ರಾವಣ ಇದೆಲ್ಲವನ್ನು ನೆನೆಯುತ್ತಾ.. ರಾಮನ ಹುಟ್ಟು, ಲೋಕ ಕಲ್ಯಾಣ ಕಾರ್ಯಗಳು, ಸೀತಾ ಕಲ್ಯಾಣ ಆತನ ವನವಾಸ, ವಾಲಿಯನ್ನು ಕೊಂದು ಸುಗ್ರೀವನ ಸಖ್ಯ ಮಾಡಿದ್ದು.. ಹೀಗೆ ಎಲ್ಲವನ್ನೂ ನೆನೆಯುತ್ತಾನೆ. 


ಅದೇ ಸಮಯಕ್ಕೆ ಆತ ತನ್ನ ಪೌರುಷವನ್ನು ನೆನೆಯುತ್ತಾನೆ. ಅಷ್ಟದಿಕ್ಪಾಲಕರನ್ನು ತಾನು ಸೋಲಿಸಿದರೂ ಸಹಾ ವಾಲಿ, ಬಲಿಚಕ್ರವರ್ತಿ ಹಾಗೂ ಕಾರ್ತವೀರಾರ್ಜುನ ಈ ಮೂವರನ್ನೂ ಸೋಲಿಸಲು ಸಾಧ್ಯವಾಗದೆ.. ಸಖ್ಯ ಬೆಳೆದ ರೀತಿಯನ್ನು ನೆನಪು ಮಾಡಿಕೊಳ್ಳುತ್ತಾನೆ. 


ಅದೇ ಸಂದರ್ಭದಲ್ಲಿ ಮಂಡೋದರಿ ಬಂದಾಗ, ಆತನಿಗೆ ಶಾಪಗಳ ನೆನಪು ಮಾಡಿಕೊಡುತ್ತಾಳೆ. ವೇದವತಿಯ ಶಾಪ, ಅನರಣ್ಯನ ಶಾಪ ಹಾಗೂ ನಳಕೂಬರನ ಶಾಪಗಳು ಆತನನ್ನು ಚುಚ್ಚಿ ಹಿಂಸಿಸುವಂತಾಗುತ್ತದೆ. ಆತನಿಗೆ ರಾಮನೇ ತನ್ನ ಸಾವಿನ ರೂಪ ಎಂಬುದು ತಿಳಿದಿರುತ್ತದೆ. 


ಅದಾದ ನಂತರ ಹನುಮಂತ ಲಂಕೆಗೆ ಬಂದು ಲಂಕೆಯನ್ನೆಲ್ಲಾ ಸುಟ್ಟು ರಾವಣನ ಜೊತೆ ಆಡಿ ಹೋದ ಮಾತುಗಳಿಂದ ಚಿಂತೆಯಾಗುತ್ತದೆ. ಅದೇ ಸಂದರ್ಭದಲ್ಲಿ ವಿಭೀಷಣ ಕೂಡ ಆತನ ಕಾರ್ಯಗಳಿಗೆ ವಿರೋಧಿಸುತ್ತಾನೆ. ಆದರೆ, ಅಷ್ಟರಲ್ಲಾಗಲೇ ಮಗನಾದ ಮೇಘನಾದನನ್ನು ಕಳೆದುಕೊಂಡಾಗಿರುತ್ತದೆ ರಾವಣ.


ಇನ್ನುಳಿದದ್ದೆಲ್ಲವೂ ಯುದ್ಧದ ವಿಚಾರ. ಇಲ್ಲಿ ರಾವಣನ ಅಂತರಂಗ ಹೆಚ್ಚು ತೆರೆದುಕೊಳ್ಳುವುದೇ ಯುದ್ಧದ ಸಮಯದಲ್ಲಿ. ವಿಭೀಷಣನು ತನ್ನ ಪಾಳೆಯನ್ನು ಬಿಟ್ಟು ಹೊರಟ ಸಮಯದಲ್ಲಿ.. ಆತ ವಿಭೀಷಣನನ್ನು ನಿಲ್ಲು ಎಂದು ಹೃದಯದಿಂದ ಹೇಳುವಂಥಾದರೂ.. ಆತನ ಬುದ್ಧಿ ಅದಕ್ಕೆ ಎಡೆ ಮಾಡಿಕೊಡುವುದಿಲ್ಲ. ಏಕೆಂದರೆ, ಆತ ಭವಿಷ್ಯವನ್ನು ತಿಳಿದಿರುವಂತೆ ಆತನೇ ಮುಂದಿನ ಲಂಕಾಧಿಪತಿ ಎಂದು ನಿರ್ಧರಿಸಿಯಾಗಿರುತ್ತದೆ. ನಂತರ, ಯುದ್ಧದಲ್ಲಿ ತನ್ನ ಮಗನಾದ ಇಂದ್ರಜಿತ್ತುವನ್ನು ಕಳೆದುಕೊಂಡು ತನ್ನ ಮತ್ತೋರ್ವ ಪತ್ನಿ ಧ್ಯಾನಮಾಲಿನಿಯ ಮಗನಾದ ಅತಿಕಾಯನನ್ನೂ ಕಳೆದುಕೊಂಡು, ತಮ್ಮ ಕುಂಭಕರ್ಣನನ್ನು ಕಳೆದುಕೊಳ್ಳುತ್ತಾನೆ.


ಇಲ್ಲಿ ಇಂದ್ರಜಿತ್ತುವಿನ ವಧೆಯಾಗುವಾಗ ಆತ ನಿಕುಂಬಿಳಾ ಎನ್ನುವ ಯಾಗವನ್ನು ಮಾಡುತ್ತಿರುತ್ತಾನೆ. ಆತನನ್ನು ಸಂಹರಿಸಲು 14 ವರ್ಷ ಬ್ರಹ್ಮಚರ್ಯವನ್ನು ಪಾಲಿಸಿದ್ದವರೇ ಆಗಬೇಕು ಎನ್ನುವ ಮಾತು ಬರುತ್ತದೆ. ಆದರೆ, ರಾಮ ಲಕ್ಷ್ಮಣರಿಬ್ಬರೂ ಅದನ್ನು ಪಾಲಿಸಿದ್ದರೂ.. ಇಲ್ಲಿ ಕೇವಲ ಲಕ್ಷ್ಮಣನನ್ನು ಮಾತ್ರ 14 ವರ್ಷ ಬ್ರಹ್ಮಚರ್ಯ ಪಾಲಿಸಿದವನು ಎಂದು ಪರಿಗಣಿಸಿ ಆತನಿಗೆ ವಿಭೀಷಣ ಅವನ ವಧೆ ಮಾಡುವಂತೆ ಹೇಳುತ್ತಾನೆ. 


ಇನ್ನೂ ಇದರ ಕಡೆಯ ಅಂಕವೆಂದರೆ ರಾವಣನ ಅವಸಾನ. ಆತನ ಅವಸಾನಕ್ಕೂ ಮುನ್ನ ಆತ ಪೂಜೆಗೆ ಕುಳಿತು ಯುದ್ಧಕ್ಕೆ ಹೋಗಲು ಹಿಂದೇಟು ಹಾಕುತ್ತಿರಲಿಲ್ಲ.. ಆದರೆ, ಇಲ್ಲಿ ಆತ ಯುದ್ಧಕ್ಕೆ ಹೊರಡಲು ಮೀನಾ-ಮೇಷ ಎಣಿಸಿ ಹೋಗುವಂತೆ ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೆ ಆತನ ವಧೆಯಾಗುವಾಗ ಸುತ್ತಲೂ ಆತನ ತಾಯಿ, ಪತ್ನಿ ಕೂಡ ಇರುವಂತೆ ಚಿತ್ರಿಸಲಾಗಿದೆ. 


ಹೀಗೆ ಸಣ್ಣ-ಸಣ್ಣ ಅಂಶಗಳಲ್ಲಿ ವಿಭಿನ್ನತೆ ಕಂಡು ಬಂದರೂ ಸಹಾ 142 ಪುಟಗಳಲ್ಲಿ ಸಂಕ್ಷಿಪ್ತವಾಗಿ ರಾವಣನ ಅಂತರಂಗವನ್ನು ತೆರೆದಿಟ್ಟು ರಾಮಾಯಣವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದ್ದಾರೆ ಲೇಖಕಿ. ಇಲ್ಲಿ ಹಲವಾರು ವಿಚಾರಗಳು ನಮ್ಮ ಮೂಲ ರಾಮಾಯಣದಲ್ಲಿರುವ ವಿಚಾರಗಳು ಮರೆಯಾದಂತೆ ಅನ್ನಿಸುತ್ತವೆ. ದಶರಥನ ಮರಣವಾದದ್ದು, ಭರತ ಮತ್ತೆ ಕಾಡಿಗೆ ಬಂದದ್ದು ಹೀಗೆ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ. ಇದೆಲ್ಲವೂ ನಮಗೆ ಕಾಣದಿರುವುದಕ್ಕೆ ಕಾರಣ.. ಇಲ್ಲಿ ಇವೆಲ್ಲವನ್ನು ರಾವಣನ ಅಂತರಂಗದಿಂದ ಚಿತ್ರಿಸಿರುವ ಬಗೆ. ಆತನಿಗೆ ತಿಳಿದದ್ದಷ್ಟನ್ನೇ ತಿಳಿಸುವಂತೆ ಅಷ್ಟೇ.. 


ಇಲ್ಲಿ ರಾವಣ ಒಳ್ಳೆಯವನಾ ಅಥವಾ ಕೆಟ್ಟವನಾ ಎನ್ನುವ ಜಿಜ್ಞಾಸೆಯನ್ನು ಹುಟ್ಟಿಸದೆ ರಾವಣನಲ್ಲಿ ದುಷ್ಟತನವಿದ್ದರೂ ಒಳ ಮನಸ್ಸಿನಲ್ಲಿ.. ಒಳ್ಳೆಯ ಆಲೋಚನೆಗಳಿಂದ ಆತನಲ್ಲಿಯೂ ತುಮುಲಗಳಿರುವಂತೆ ಚಿತ್ರಿಸಲಾಗಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ