ಪುಸ್ತಕದ ಶೀರ್ಷಿಕೆ : ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು
ಲೇಖಕರು : ಡಾ|| ಸಿ. ಆರ್. ಚಂದ್ರಶೇಖರ್
ಪ್ರಕಾಶಕರು : ನವಕರ್ನಾಟಕ ಪ್ರಕಾಶನ
ಪ್ರಥಮ ಮುದ್ರಣ : 1987
ಎರಡನೇ ಮುದ್ರಣ : 1989 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 90
ಖಾಯಿಲೆ ಎಂದರೆ ಕೇವಲ ದೈಹಿಕ ಗುಣಲಕ್ಷಣಗಳನ್ನು ಮಾತ್ರ ತೊರಬೇಕಿಲ್ಲ. ಹಾಗೆ ಹೊರಗೆ ಗುಣಲಕ್ಷಣ ತೋರುವ ಖಾಯಿಲೆಗಳನ್ನು ಗುಣಪಡಿಸಬಹುದು. ಆದರೆ, ಮನಸಿನ ಖಾಯಿಲೆ ಹಾಗಲ್ಲ. ಕಾಣದ ಖಾಯಿಲೆಯಾಗಿ ಕಾಡುವುದನ್ನು ಗುಣಪಡಿಸುವುದು ಸುಲಭದ ಮಾತಲ್ಲ. ದೈಹಿಕ ಖಾಯಿಲೆಯಂತೆಯೇ ಮಾನಸಿಕ ಖಾಯಿಲೆಯೂ ಎಂದು ಪರಿಗಣಿಸಿದಾಗಲಷ್ಟೇ ಇದರಿಂದ ಮುಕ್ತರಾಗಲು ಸಾಧ್ಯ. ಈ ರೀತಿಯ ಮಾನಸಿಕ ಖಾಯಿಲೆಯ ಗಂಭೀರತೆ ಈಗ ಅರಿವಾಗುತ್ತಿದೆ. 1982ರಲ್ಲಿಯೇ ಮಹಿಳೆಯರಿಗೆಂದೇ ರಚಿತವಾಗಿರುವ ಈ ಪುಸ್ತಕ ಮಹಿಳೆಯರಿಗೆ ದಾರಿದೀಪವೇ ಸರಿ.
ಗಂಡಿನ ಪ್ರಾಮುಖ್ಯತೆ ಹೆಚ್ಚಾಗಿದ್ದಾಗ ಮನೆಯಲ್ಲಿ ಮಹಿಳೆ ಹೇಳದೆ ಉಳಿಯುವ ತನ್ನ ಸಮಸ್ಯೆಗಳು ಆಕೆಯನ್ನು ಹೇಗೆಲ್ಲಾ ಕಾಡಬಹುದು ಎನ್ನುವ ಚಿತ್ರಣವಿದೆ. ಇತ್ತೀಚೆಗೆ ಹೆಣ್ಣು ಆರ್ಥಿಕ ಸ್ವಾವಲಂಬಿಯಾಗಿ ಹಾಗೂ ಧೈರ್ಯವಂತೆಯಾದರೂ.. ನೆಮ್ಮದಿ, ಸಂತೋಷವನ್ನು ಕಂಡುಕೊಳ್ಳದವರೂ ಇದ್ದಾರೆ. ಮಹಿಳೆಯರ ಮಾನಸಿಕ ಆರೋಗ್ಯದ ಸ್ಥಿತಿ ಅಂದಿಗಿಂತ ಇಂದಿಗೆ ವಿಭಿನ್ನವಾಗಿದೆ ಎಂದುಕೊಂಡರೂ ಮಾನಸಿಕವಾಗಿ ನರಳುವವರು ಇದ್ದೇ ಇರುತ್ತಾರೆ.
ಶಾಲೆ, ಕಾಲೇಜುಗಳಿಗೆ ಹೋಗುತ್ತಿರುವ ಹೆಣ್ಣು ಮಕ್ಕಳಲ್ಲಿ ಕಂಡುಬರಬಹುದು. ತಮ್ಮ ಸಹಪಾಠಿಗಳ ಜೊತೆಗೆ ಇರುವ, ಇದ್ದ ಸಂಬಂಧಗಳು, ಸಮಸ್ಯೆಗಳನ್ನು ತಮ್ಮ ಮನೆಯಲ್ಲಿ ಹಂಚಿಕೊಳ್ಳಲು ಸಾಧ್ಯವಾಗದಿದ್ದಾಗ ಖಿನ್ನತೆ ಕಾಡಬಹುದು.
ಪರಿಸರದ ಯಾವ ಅಂಶವೂ ಇಲ್ಲದೇ.. ಶರೀರದಲ್ಲಿಯೇ ಉತ್ಪತ್ತಿಯಾಗುವ 'ಒಳಜನ್ಯ ಖಿನ್ನತೆ'ಯೂ ಕಾಡಬಹುದು. ಮಹಿಳೆಯರ ಮೆದುಳಿನ ನರಕೋಶದಲ್ಲಿ ಉಂಟಾಗುವ 'ಡೋಪಮಿನ್' ಎಂಬ ನರವಾಹಕದ ಕೊರತೆಯಿಂದ ಮಹಿಳೆಯರ ಮುಟ್ಟು ನಿಲ್ಲುವ ಸಂಧರ್ಭದಲ್ಲಿ ಖಿನ್ನತೆ ಕಾಡಬಹುದು.
ಮನೆಗಳಲ್ಲಿ ಮಹಿಳೆಯರು ತಿಂಗಳಿಗೊಮ್ಮೆ ಬೇಸರ, ಸಿಡುಕುತನ, ನಿರಾಸಕ್ತಿ, ತಲೆನೋವು, ಮೈ-ಕೈ ನೋವುಗಳಿಂದ ಬಳಲುತ್ತಿದ್ದರೆ ಅದು ಅವರ ಋತುಸ್ರಾವದ ಹಿಂದಿನ ಒಂದು ವಾರವಿರಬಹುದು. ಋತುಸ್ರಾವ ಮುಗಿದ ನಂತರವೂ ಒಂದೆರಡು ದಿನ ಈ ಚಿಹ್ನೆಗಳು ಕಾಣಬಹುದು. ಇದು ಋತುಸ್ರಾವದ ಸಮಯದಲ್ಲಿ ಕಾಣಿಸುವ ಖಿನ್ನತೆಯ ಲಕ್ಷಣವೂ ಆಗಿರಬಹುದು. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ತಿಳಿದು ಆಕೆಯನ್ನು ನೋಡಿಕೊಳ್ಳುವ ಬಗೆ, ಆರೈಕೆ ಮಾಡುವ ಬಗೆಗಳಿಂದ ಅವರನ್ನು ಇದರಿಂದ ಆಚೆ ತರಬಹುದು.
ಖಿನ್ನತೆಯ ಚಿಕಿತ್ಸೆ ಹೊರಗಿನಿಂದ ನೀಡಬಹುದಾದರೂ.. ಒಳಗಿನಿಂದಲೂ ಅದನ್ನು ಪರಿಹರಿಸಿಕೊಳ್ಳುವ ಮನಸ್ಥಿತಿ ಇರಬೇಕು. ಅದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವ ಅವಕಾಶ ನೀಡುವುದು ಮನೆಯವರ ಮನಸ್ಥಿತಿಯ ಮೇಲೂ ಅವಲಂಬಿತ.
ಹಿಸ್ಟೀರಿಯಾ - ಉನ್ಮಾದ : ಮೊದಲೆಲ್ಲಾ ಉನ್ಮಾದಕ್ಕೊಳಗಾದ ಮಹಿಳೆಯರನ್ನು ಹೊಡೆಯುವುದು, ಹೆದರಿಸುವುದು, ಬರೆ ಹಾಕುವುದು, ಉಪವಾಸವಿರುವುದು, ಒಂಟಿಯಾಗಿ ಕೋಣೆಯಲ್ಲಿ ಕೂಡಿ ಹಾಕುವುದೆಲ್ಲವನ್ನೂ ಮಾಡುತ್ತಿದ್ದರು. ಕೆಲವರು ಇದಕ್ಕೆ ಪರಿಹಾರ ಕೇವಲ ವಿವಾಹವೆಂದು ನಂಬಿ ಆ ಹೆಣ್ಣುಮಕ್ಕಳಿಗೆ ವಿವಾಹವನ್ನೂ ಮಾಡುತ್ತಿದ್ದರು. ವೈದ್ಯರಿಗೂ ಇದರ ಕುರಿತು ಅರಿವು ಕಮ್ಮಿಯಿದ್ದ ದಿನಗಳ ಚಿತ್ರಣವನ್ನು ಕಟ್ಟಿಕೊಡುತ್ತಲೇ.. ವಿಶ್ವಯುದ್ದದ ಸಂದರ್ಭದಲ್ಲಿ ಸೈನಿಕರು ಅನುಭವಿಸುತ್ತಿದ್ದ ಹಿಸ್ಟೀರಿಯಾ ಕುರಿತು ಅಧ್ಯಯನ ಮಾಡಿದ ಮನೋವಿಜ್ಞಾನದ ಪಿತಾಮಹನೆಂದೇ ಖ್ಯಾತನಾದ 'ಸಿಗ್ಮಂಡ್ ಫ್ರಾಯ್ಡ್' ವೈದ್ಯಕೀಯ ಕೊಟ್ಟ ಜ್ಞಾನದ ಬಗೆಗೂ ಬೆಳಕು ಚೆಲ್ಲುತ್ತಾರೆ.
ಮಹಿಳೆಯರಲ್ಲಿ ಕಾಣುವ ಇನ್ನೊಂದು ಮುಖ್ಯ ಮಾನಸಿಕ ಸಮಸ್ಯೆ ಎಂದರೆ ಬಾಣಂತಿ ಸನ್ನಿ. ಇದಲ್ಲದೇ ಇದೇ ಸಂದರ್ಭದಲ್ಲಿ ಕಂಡುಬರುವ ಹೆರಿಗೆ ನಂತರದ ಮಂಕುತನ, ಚಿತ್ತ ಚಂಚಲತೆ. ಅವುಗಳಿಂದ ಬಾಣಂತಿಯನ್ನು ಹೊರಗೆ ಕರೆತರುವ ಬಗೆಯನ್ನು ಹೇಳುತ್ತಾ ಧೈರ್ಯ ತುಂಬುತ್ತಾರೆ.
ವಯಸ್ಸಾದ ತಾಯಿ ಹಾಗೂ ತಡವಾಗಿ ಜನಿಸಿದ ಮಗುವಿಗೆ ಉಂಟಾಗಬಹುದಾದ ಬುದ್ಧಿಮಾಂದ್ಯತೆಯ ವೈಜ್ಞಾನಿಕ ಕಾರಣವನ್ನು ವಿವರಿಸುತ್ತಾ ತಾಯ್ತನದ ಮೇಲೆ ಉಂಟಾಗುವ ಪರಿಣಾಮದೊಂದಿಗೆ ಅದರ ಪರಿಹಾರವನ್ನೂ ಹೇಳುತ್ತಾರೆ.
ಕೆಲವು ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಕೊಂಚ ಹೆಚ್ಚೇ ಇರುತ್ತದೆ. ಅಂತಹವರಲ್ಲಿ ತೊನ್ನು ಅಥವಾ ಬಿಳಿ ಮಚ್ಚೆ ಕಾಣಿಸಿಕೊಂಡಾಗ ಅವರಲ್ಲಿ ಬದಲಾಗುವ ನಡವಳಿಕೆ, ಅನುಭವಿಸುವ ಕೀಳಿರಿಮೆ ಹಾಗೂ ಯಾರಲ್ಲೂ ಹೇಳಿಕೊಳ್ಳಲಾಗದ ಸಂಧಿಗ್ಧತೆ ಅದರಿಂದ ಉಂಟಾಗುವ ಮಾನಸಿಕ ತುಮುಲಗಳನ್ನೂ ಹೇಳಿದ್ದಾರೆ. ಆ ರೀತಿಯ ಸಮಸ್ಯೆ ಉಂಟಾದಾಗ ಸಂಗಾತಿ ತೋರುವ ನಿರ್ಲಕ್ಷ್ಯ ಅಥವಾ ಅಸಹನೆಯಿಂದ ತೊಳಲುವ ಹೆಣ್ಣು ಮಕ್ಕಳ ಸಂಗತಿಗಳೂ ಇಲ್ಲಿವೆ.
ಹೀಗೆ ಹಲವಾರು ರೀತಿಯ ಮಾನಸಿಕ ಸಮಸ್ಯೆಗಳನ್ನು ಬಿಡಿಸಿಡುವ ಲೇಖಕರು ಸಾಮಾನ್ಯ ಓದುಗರಿಗೆ ಅರ್ಥವಾಗುವಂತಹಾ ಒಂದೊಂದು ಪ್ರಕರಣಗಳನ್ನು ಸಹಾ ಉಲ್ಲೇಖಿಸುತ್ತಾರೆ. ಈ ಪ್ರಕರಣಗಳ ಮೂಲಕ ಸಮಸ್ಯೆಯ ಸ್ವರೂಪವನ್ನು ಪರಿಚಯಿಸಿ ಅದಕ್ಕೆ ಪರಿಹಾರವನ್ನೂ ಹೇಳುವ ಪರಿ ಇಷ್ಟವಾಯಿತು. ಕೇವಲ ವೈದ್ಯಕೀಯ ಅಥವಾ ವೈಜ್ಞಾನಿಕ ವಿಶ್ಲೇಷಣೆ ಇದನ್ನು ಡ್ರೈ ಸಬ್ಜೆಕ್ಟ್ ಮಾಡುತ್ತಿತ್ತೇನೋ.. ಆದರೆ, ಪ್ರಕರಣ ಹಾಗೂ ಸತ್ಯ ಘಟನೆಯಾಧಾರಿತ ಪ್ರಕರಣಗಳು ಪೂರಕವಾಗಿ ವಸ್ತುವಿಷಯವನ್ನು ಮತ್ತಷ್ಟು ಮನಸ್ಸಿಗೆ ಹತ್ತಿರವಾಗಿಸುತ್ತವೆ.
ವೈದ್ಯರ ಮನಕಲಕಿದ ಒಂದಷ್ಟು ಪ್ರಕರಣಗಳನ್ನೂ ಇಲ್ಲಿ ಉಲ್ಲೇಖಿಸುತ್ತಾರೆ. 'ಮನೋವೈದ್ಯನ ಮನಕಲಕಿದ ಮಹಿಳಾ ರೋಗಿಗಳ ಪ್ರಸಂಗಗಳು' ನಮ್ಮ ಮನಸ್ಸನ್ನೂ ಕಲಕುತ್ತವೆ.
ಹಾಗೆಂದು, ಈ ಮಾನಸಿಕ ಅಸ್ವಸ್ಥತೆ ಮಹಿಳೆಯರಲ್ಲಿ ಮಾತ್ರವೇ..?? ಖಂಡಿತಾ ಇಲ್ಲ. ಗಂಡಸರಿಗೂ ಈ ರೀತಿಯ ಮಾನಸಿಕ ಅಸ್ವಸ್ಥತೆ ಕಾಡಬಹುದು. ಆದರೆ, ಮಹಿಳೆಯರಲ್ಲಿ ಇದರ ತೀವ್ರತೆ ಹೆಚ್ಚು. ಅಲ್ಲದೇ, ಆಕೆಯ ದೇಹರಚನೆಯ, ಹಾರ್ಮೋನ್ ಗಳ, ಭಾವ ತೀವ್ರತೆಯ ದೃಷ್ಟಿಯಿಂದಲೂ ನಾವು ಗಮನಿಸಬೇಕಾಗುತ್ತದೆ. ಇದರ ಕುರಿತು ಬೆಳಕು ಚೆಲ್ಲುತ್ತದೆ ಈ ಪುಸ್ತಕ.
ಕೌನ್ಸೆಲಿಂಗ್ ಕುರಿತಾದ ಕತೆಗಳನ್ನು/ಪ್ರಕರಣಗಳನ್ನು ನಾನು ಓದಿದ್ದೇನೆ. ಆದರೆ, ಇಲ್ಲಿ ಕೇವಲ ಅದರ ಉಲ್ಲೇಖ ಮಾತ್ರವಲ್ಲದೇ ವಿಶ್ಲೇಷಣೆ ಕೂಡಾ ಕಂಡು ಬರುತ್ತದೆ. ಇಂದಿನ ಮಹಿಳೆಯರ ಪ್ರಪಂಚ ವಿಸ್ತಾರ, ವಿಶಾಲವಾದಂತೆ ಅವರ ಮಾನಸಿಕ ಸಮಸ್ಯೆ, ತುಮುಲಗಳೂ ವಿಸ್ತಾರವಾಗಿವೆ. ಈ ದಿನಕ್ಕೆ ಬೇಸಿಕ್ ಕೈಪಿಡಿಯಂತಿದೆ ಈ ಪುಸ್ತಕ. ಈ ಮನೋವಿಜ್ಞಾನದ ಲೇಖನ ಹಾಗೂ ಪ್ರಕರಣಗಳನ್ನು ಓದಿ ಇಂದಿನ ಮಾನಸಿಕ ಸಮಸ್ಯೆಗಳ ಕುರಿತು ಓದಿದರೆ ಇನ್ನೂ ಹೆಚ್ಚು ಪರಿಣಾಮಕಾರಿ ಎನ್ನಿಸಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ