ಶುಕ್ರವಾರ, ಏಪ್ರಿಲ್ 10, 2026

ಅವಳನ್ನು ಕಂಡದ್ದು ಹೀಗೆ ಮಾತ್ರವೇ (ಅವಳ ಕವಿತೆಗಳು - 20)


 ಅವಳು ಸಿಡಿಯುತ್ತಾಳೆ ಅಂತೆಯೇ ಮಿಡಿಯುತ್ತಾಳೆ

ವಿಪರ್ಯಾಸವೆಂದರೆ, ಸಿಡಿಯುವುದನ್ನು ಕಾಣುವವರು

ಅದರ ಹಿಂದಿನ ಕಾರಣವ ಅರಿಯುವುದಿಲ್ಲ

ಅವಳ ಮಿಡಿತ ಎಂದಿಗೂ ಗುಪ್ತಗಾಮಿನಿಯೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ಕಲ್ಲಾಗುತ್ತಾಳೆ ಅಂತೆಯೇ ಕರಗುತ್ತಾಳೆ

ವಿಪರ್ಯಾಸವೆಂದರೆ, ಕಲ್ಲಾಗಿದ್ದನ್ನು ಗಮನಿಸಿದವರಿಗೆ

ಅದರ ಹಿಂದಿನ ಕಷ್ಟಗಳ ಅರಿವೇ ಇಲ್ಲ

ಅವಳ ಕರಗುವಿಕೆ ಎಂದಿಗೂ ಏಕಾಂತದಲ್ಲಷ್ಟೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ವಾದಿಸುತ್ತಾಳೆ ಅಂತೆಯೇ ಒಪ್ಪುತ್ತಾಳೆ

ವಿಪರ್ಯಾಸವೆಂದರೆ, ವಾದಿಸುವುದನ್ನು ಜರಿಯುವವರು

ಅವಳ ಯೋಚನಾಲಹರಿಯನ್ನೆಂದೂ ಗಮನಿಸಿಲ್ಲ

ಅವಳ ಒಪ್ಪಿಗೆ ಕೇವಲ ನ್ಯಾಯಬದ್ಧ ತರ್ಕಕ್ಕಷ್ಟೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ಪ್ರತ್ಯುತ್ತರಿಸುತ್ತಾಳೆ ಅಂತೆಯೇ ಮೌನಿಯೂ

ವಿಪರ್ಯಾಸವೆಂದರೆ, ಪ್ರತ್ಯುತ್ತರವನ್ನಷ್ಟೇ ಎತ್ತಿ ತೋರುತ್ತಾರೆ

ಅವಳ ಹಿಂದಿನ ತರ್ಕಬದ್ಧ ನುಡಿಗಳನ್ನಲ್ಲ

ಅವಳ ಮೌನ ಈಗ ಕೇವಲ ಅಸಮ್ಮತಿಗೆ ಮಾತ್ರವೇ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳು ಬದಲಾಗಿದ್ದಾಳೆ ಅಂತೆಯೇ ಬದಲಾಗಿಲ್ಲ

ವಿಪರ್ಯಾಸವೆಂದರೆ, ಬದಲಾವಣೆ ಕಣ್ಣಕಿಸುರಾಗಿದೆ 

ಅವಳ ಗಟ್ಟಿತನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ

ಅವಳ ಬದಲಾಗಿಲ್ಲದಿರುವಿಕೆ ಬದಲಾವಣೆಯೆದುರು ನಗಣ್ಯ

ಅವಳನ್ನು ಕಂಡದ್ದು ಹೀಗೆ ಮಾತ್ರವೇ


ಅವಳನ್ನು ಕಂಡದ್ದು ಹೀಗೆ ಮಾತ್ರವೇ

ಕಂಡದ್ದಷ್ಟೇ ಸತ್ಯವಾಗುವುದಿಲ್ಲ.. ಕೇಳಿದ್ದು, ನೋಡಿದ್ದು..!

ಅವಳನ್ನವಳು ನಿರೂಪಿಸಿಕೊಳ್ಳುವ ಜರೂರೇನಿಲ್ಲ

ಪ್ರತಿ ನಾಯಿಗೂ ಕಲ್ಲು ಬೀರಿದರೆ ಗುರಿ ತಲುಪಲಾಗುವುದಿಲ್ಲ

ಮತ್ತೆ ಅವಳು ಹೇಗೂ ಕಾಣಬಹುದು..!


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ