ಅವಳ ಧ್ಯಾನಕ್ಕೀಗ ಸಮಯದ ಹಂಗಿಲ್ಲ
ಸಿಕ್ಕದೆಲ್ಲವೂ ಸಮಯವೇ.. ನೆಟ್ಟದ್ದೆಲ್ಲವೂ ಏಕಾಗ್ರತೆಯೇ
ಹರಿವ ಜುಳು ಜುಳು ನೀರಿನ ಗತಿಗೆ
ಹಕ್ಕಿ ಕಟ್ಟುತ್ತಿರುವ ಗೂಡಿನ ಸಾಕ್ಷಿಗೆ
ಬೇಲಿಯ ಮೇಲಿನ ಚಿಟ್ಟೆಯ ಹಾರುವಿಕೆಗೆ
ಕಣ್ಣು ಕೀಲಿಸಿ ಕುಳಿತು ಸಾಕ್ಷಿಯಾಗಬಲ್ಲಳು
ಹಕ್ಕಿಯ ಚಿಲಿ ಪಿಲಿ ಕಲರವಕ್ಕೆ
ಅಲ್ಲೆಲ್ಲೋ ಕೇಳುವ ಜೀರುಂಡೆಯ ಕೂಗಿಗೆ
ಕಪ್ಪೆಯ ವಟಗುಟ್ಟುವಿಕೆಗೆ ಈಗ
ಒಂದೇ ತೆರೆನಾದ ಕೇಂದ್ರೀಕರಿಸಿದ ಆಲಿಸುವಿಕೆ
ಬೆಳಗಿನ ತಿಳಿ ಬೆಳಕಿನ ಹಂಗಿಲ್ಲ
ಸಂಜೆಯ ಕೆಂಪಿನ ಸೊಂಪೇ ಆಗಬೇಕಿಲ್ಲ
ಬಿರು ಬಿಸಿಲಲ್ಲೂ ಏಕಾಗ್ರತೆಯಷ್ಟೇ ಹಾದಿ
ಅವಳಿಗೂ ಧ್ಯಾನಕ್ಕೂ ಈಗ ಹೊಸ ನಂಟು
ಧ್ಯಾನಕ್ಕೆ ಕಣ್ಣು ಮುಚ್ಚಿಯೇ ಕೂರಬೇಕಿಲ್ಲ
ಒಳ ಮನಸ್ಸಿನಿಂದ ಪ್ರಶಾಂತತೆಯನ್ನು ಕಾಣುತ್ತಾಳೆ
ಕಿವಿ ತೆರೆದು ಆಲಿಸಿದರೂ ನಿರ್ಲಿಪ್ತೆ
ಮತ್ತೀಗ ಏಕಾಗ್ರತೆಗೆ ಅವಳೇ ಅವಳಿಗೆ ಹಾದಿ
ಓದುತ್ತಾ ಓದುತ್ತಾ ಮುಳುಗಿ ಹೋಗುತ್ತಾಳೆ
ಅದೇನನ್ನೋ ನೋಡುತ್ತಾ ಕಳೆದು ಹೋಗುತ್ತಾಳೆ
ಇನ್ನೇನೋ ಆಲಿಸುತ್ತಾ ಪರವಶಳಾಗುತ್ತಾಳೆ
ಎಲ್ಲದಕ್ಕೂ ಈಗ ಧ್ಯಾನವೆಂದೇ ಹೆಸರಿಸಿದ್ದಾಳೆ
ಅವಳ ಧ್ಯಾನ ರೂಢಿಸಿಕೊಂಡದ್ದಲ್ಲ.. ರೂಢಿಯಾದದ್ದು
ಅವಳು ಧ್ಯಾನಿಯಾದರೂ ಮೌನಿಯಾದರೂ
ಅವಳ ಲೋಕದಲ್ಲಿ ಅವಳು ಸದಾ ಜಾಗೃತೆ
ಮತ್ತೀಗ.. ಧ್ಯಾನಕ್ಕೂ.. ಮೌನಕ್ಕೂ.. ಅವಳಿಗವಳೇ ಸಾಟಿ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ