ಗುರುವಾರ, ಏಪ್ರಿಲ್ 9, 2026

ಅವಳೂ ಮನುಷ್ಯಳೇ.. (ಅವಳ ಕವಿತೆಗಳು - 5)


 ಅಂದದ್ದೆಲ್ಲವನ್ನು ಸಹಿಸುತ್ತಾ ಹೋಗಲು

ಅವಳು ದೇವರಲ್ಲ.. ಅವಳೂ ಮನುಷ್ಯಳೇ..


ಹಾಕಿದಷ್ಟನ್ನು ತಿಂದು ಬಿದ್ದುಕೊಂಡಿರಲು

ಅವಳು ಪ್ರಾಣಿಯಲ್ಲ.. ಅವಳೂ ಮನುಷ್ಯಳೇ..


ಆಸೆ ಆಕಾಂಕ್ಷೆಗಳನ್ನು ಕಟ್ಟಿ ಮೂಲೆಯಲ್ಲಿಡಲು

ಅವಳು ವಿರಾಗಿಣಿಯಲ್ಲ.. ಅವಳೂ ಮನುಷ್ಯಳೇ..


ಭಾವಗಳೇ ಇಲ್ಲದಂತೆ ಬದುಕು ಸಾಗಿಸಲು

ಅವಳು ಮರದ ಕೊರಡಲ್ಲ.. ಅವಳೂ ಮನುಷ್ಯಳೇ..


ಮನೆಯಲ್ಲಿಯೇ ಬಂಧಿಯಾಗಿಸಿಕೊಂಡಿರಲು

ಅವಳು ಪಂಜರದ ಪಕ್ಷಿಯಲ್ಲ.. ಅವಳೂ ಮನುಷ್ಯಳೇ..


ಗಾಯವಾದ ಜಾಗಕ್ಕೆ ಪದೇ ಪದೇ ಗಾಯಗೊಳಿಸಿಕೊಳ್ಳಲು

ಅವಳು ವ್ಯಗ್ರ ಪ್ರಾಣಿಯಲ್ಲ.. ಅವಳೂ ಮನುಷ್ಯಳೇ..


ಪ್ರಪಂಚ ಕಾಣದೆ ಬಿದ್ದಲ್ಲಿಯೇ ಬಿದ್ದುಕೊಂಡಿರಲು

ಅವಳು ರೆಕ್ಕೆ ಮುರಿದ ಹಕ್ಕಿಯಲ್ಲ.. ಅವಳೂ ಮನುಷ್ಯಳೇ..


ಎಲ್ಲರನ್ನೂ ಅರ್ಥೈಸಿಕೊಂಡು ಅರ್ಥವಾಗದಿರಲು

ಅವಳು ಬಂಡೆಯಲ್ಲ.. ಅವಳೂ ಮನುಷ್ಯಳೇ..


ಅವಳನ್ನು ದೇವರಂತೆ ಪೂಜಿಸದಿದ್ದರೂ

ಕೀಳಾಗಿ ಕಾಣದಿರಿ.. ಅವಳೂ ಮನುಷ್ಯಳೇ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ