ಪುಸ್ತಕದ ಶೀರ್ಷಿಕೆ : ಈ ಜನಗಳು ಈ ನರಕ ಈ ಪುಳಕ
ಲೇಖಕರು : ವಾಸುದೇವ ನಾಡಿಗ್
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್
ಮೊದಲನೇ ಮುದ್ರಣ : 2022
ಪುಟಗಳು : 96
ಬೆಲೆ : 130 ರೂ.
ವಾಸುದೇವ ನಾಡಿಗ್ ಸರ್ ಬರೆದಿದ್ದ ಕವಿತೆಗಳನ್ನಷ್ಟೇ ಓದಿದ್ದ ನನಗೆ ಕಥೆಗಳು ಬೇರೆಯದ್ದೇ ಹೊಳಹಿನಂತೆ ಕಂಡವು. ಕವಿತೆಯಷ್ಟೇ ಕಲಾತ್ಮಕವಾಗಿ, ಕಾವ್ಯಾತ್ಮಕವಾಗಿ ಕಾಣುವ ಪದಗಳು, ಕಥೆಯ ಭಾವ...ಎಲ್ಲವೂ ಕಥೆಗೆ ಮೆರುಗು ನೀಡುತ್ತವೆ. ಕಥೆಗಳಲ್ಲಿ ಬಳಸಿರುವ ಬೇರೆ ಕವಿಗಳ ಕಾವ್ಯದ ಸಾಲುಗಳು ಇಷ್ಟವಾದವು. ಈ ಕಥಾಸಂಕಲನದಲ್ಲಿ ಒಟ್ಟು 10 ಕಥೆಗಳಿವೆ
ಇರುಳು ನಕ್ಷತ್ರಗಳ ಬಾಳು :
ತಾವು ಪ್ರೀತಿಸುವ ವ್ಯಕ್ತಿಯೊಬ್ಬರು, ತಮಗಿಂತ ಹೆಚ್ಚಿನವರನ್ನು... ತಮ್ಮ ಜೀವನದಲ್ಲಿ ಪಡೆದುಕೊಂಡಾಗ ಅವರನ್ನು ಹಚ್ಚಿಕೊಂಡಿದ್ದವರಿಗೆ ಅವರು ತಮ್ಮಿಂದ ದೂರ ಹೋಗುತ್ತಿರುವ ನೋವು, ವಿಷಾದ ಸಹಜವೇ.. ಆದರೆ, ಯಾವಾಗಲೂ ಇದ್ದಕ್ಕಿದ್ದಂತೆ ವಿಷಾದವನ್ನು ಮೂಡಿಸಿಕೊಳ್ಳುವವನೇ ಧ್ರುವ. ಧ್ರುವನಿಗೆ ತಂಗಿ ಎಂದರೆ ಬಹಳ ಪ್ರೀತಿ. ಆಕೆ ಮದುವೆಯಾಗಿ ಹೋದ ನಂತರ ಅವಳಿಗೆ ಇನ್ನೂ ಹೆಚ್ಚಿನ ಯೋಗ್ಯತೆ ಇತ್ತು ಎನ್ನುತ್ತಲೇ ವಿಷಾದಕ್ಕೆ ಜಾರುತ್ತಾನೆ. ಆದರೆ, ರೇವತಿಗೆ ಅಂತಹ ಯಾವುದೇ ಆಲೋಚನೆಯಿಲ್ಲ. ಆಕೆ ಇದ್ದುದರಲ್ಲೇ ಸುಖವನ್ನು ಅರಸುವವಳು. ಚಂದ್ರನಿಲ್ಲದಾಗ ಇರುಳು ನಕ್ಷತ್ರಗಳ ಬಾಳು ಹೇಗಿರುತ್ತದೆ..?? ಪ್ರೀತಿಗೆ ಎಂದಿಗೂ ಚಂದ್ರನೇ ಬೇಕಿಲ್ಲ ಎನ್ನುವ ಸತ್ಯವನ್ನು ಧ್ರುವ ಅರ್ಥ ಮಾಡಿಕೊಳ್ಳುತ್ತಾನಾ..?? ರೇವತಿ ಅದಕ್ಕೆ ಕಾರಣವಾಗುತ್ತಾಳಾ..??
ಮತ್ತೆ ಮತ್ತೆ ಸಿದ್ದಾರ್ಥ :
ಬದುಕಿಗೆ ಭಾವುಕತೆ ಬೇಕು. ಆದರೆ, ಭಾವುಕತೆಯೇ ಬದುಕಾದಾಗ ಅದರಿಂದ ಬಿಡುಗಡೆ ಹೊಂದಲು ಹೆಣಗಾಡಬೇಕು. ಹಾಗೆಯೇ ಭಾವುಕತೆಯ ಸುಳಿಗೆ ಸಿಕ್ಕು, ಎಲ್ಲರಿಗೂ ಪರೋಪಕಾರಿಯಾಗಿದ್ದ ಚಿದಾನಂದ ಸ್ನೇಹಿತನ ಮನೆಗೆ ಬಂದಿದ್ದ. ದಿನೇಶ ಹಾಗೂ ಕಾವೇರಿ ಅವನನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. "ಡೋಂಟ್ ಬಿ ಸೆಂಟಿಮೆಂಟ್" ಎನ್ನುವ ಕಾವೇರಿಯನ್ನೂ.. ಯಾರೊಂದಿಗೂ ಹೊಂದಿಕೊಳ್ಳದ ಶಂಕ್ರಯ್ಯನಂತಹಾ ಶಂಕ್ರಯ್ಯನವರನ್ನೇ ಮಾತನಾಡಿಸಿದವನನ್ನು ಭಾವುಕ, ಪರೋಪಕಾರಿ ಎನ್ನಬಹುದಾದರೂ.. ಎಲ್ಲವನ್ನೂ ಕಳಚಿಟ್ಟು ಎದ್ದು ನಡೆಯುವುದು ಅಷ್ಟು ಸುಲಭವಲ್ಲ. ಮತ್ತೆ ಮತ್ತೆ ಸಿದ್ದಾರ್ಥನಾಗಲು ಆತ್ಮಸ್ಥೈರ್ಯವೂ ಬೇಕು. ಅದು ಒಲಿಯಿತಾ ಓದಿ ನೋಡಿ.
ರುರು :
ರುರು ಒಂದು ಪೌರಾಣಿಕ ಕಥೆ. ಚ್ಯವನರ ಮೊಮ್ಮಗನಾದ ಪ್ರಮಾತಿ ಮತ್ತು ಘ್ರುತಾಚಿಯರ ಮಗನಾದ ರುರು ಹಾಗೂ ಪ್ರಮದ್ವತಿಯರ ಪ್ರೇಮ ಪ್ರಸಂಗ ಹಾಗೂ ಮರು ಹುಟ್ಟಿನ ಕಥೆ ಇಲ್ಲಿದೆ. ಗೊತ್ತಿದ್ದ ಕಥೆಯಾದರೂ.. ಕಥೆ ಹೆಣೆದಿರುವ ಶೈಲಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.
ಮೌನ ಕಣಿವೆಯ ಕೋಗಿಲೆ :
ಎಷ್ಟೋ ಬಾರಿ ಕಥೆ ಬರೆಯುವವರು ಎಂದು ಗೊತ್ತಾದಾಗ ಜನರು ಅವರ ಜೀವನದ ಘಟನೆಗಳನ್ನು ಹಂಚಿಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ. ಇದು ಸಹಜವೂ ಹೌದು. ಏಕೆಂದರೆ, ಮತ್ತೊಬ್ಬರ ಕಥೆಯನ್ನು ಓದುವಷ್ಟು ಸರಾಗವಾಗಿ, ತಮ್ಮ ಬದುಕನ್ನು ಬಿಚ್ಚಿಡುವಷ್ಟು ದೊಡ್ಡ ಮನಸ್ಸಿನವರು ಸಿಗುವುದು ಕಷ್ಟವೇ...
ದಯಾನಂದ ಸಂಪಿಗೆ ಕಟ್ಟೆ ಎನ್ನುವ ಯುವ ಕಥೆಗಾರ. ಆತನಿಗೂ..ದಯಾನಂದನಿಗೂ 35 ವರ್ಷದ ಅಂತರವಿದ್ದರೂ.. ಆತ್ಮೀಯವಾದ ಭಾವ ಒಂದು ಬೆಸದಿತ್ತು. ಆದರೂ.. ಇಬ್ಬರಿಗೂ ಹೇಳಿಕೊಳ್ಳುವುದು ಬಹಳಷ್ಟಿದ್ದರೂ, ಸಂಪೂರ್ಣವಾಗಿ ಮನಸ್ಸನ್ನು ಬಿಚ್ಚಿಡಲಾಗಿರಲಿಲ್ಲ. ಪ್ರೀತಿಸಿ ರಿಜಿಸ್ಟರ್ ಮದುವೆಯಾದ ನಮ್ರತಾ, ಮಾತು ಬಾರದೆ ಹೊಲಿಗೆ ಬಟ್ಟೆಗಳ ಮುಂದೆ ಕುಳಿತ ವೇದ, ದುಡಿಯುತ್ತೇನೆ ಎಂಬ ನೆಪದಿಂದ ದೂರ ಉಳಿದ ಮಗ ಇದಿಷ್ಟು ದಯಾನಂದನಿಗೆ ಗೊತ್ತಿತ್ತು. ಆದರೆ, ದಯಾನಂದನ ವೈಯಕ್ತಿಕ ಬದುಕಿನ ಕುರಿತು ಆತ ಎಂದಿಗೂ ವಿಚಾರಿಸಿರಲಿಲ್ಲ.
ದಯಾನಂದನಿಂದ ಬಂದ ಪತ್ರವೊಂದು ಮೌನ ಕಣಿವೆಯಲ್ಲಿದ್ದ ಕೋಗಿಲೆಯನ್ನು ಹಾಡಲು ಪ್ರೇರೇಪಿಸಿತಾ..? ಓದಿ ನೋಡಿ.
ಅರ್ಥವಾಗುತ್ತಿದೆ ಎಲ್ಲ ಮೆಲ್ಲ ಮೆಲ್ಲನೆ :
ಎಷ್ಟೋ ಘಟನೆಗಳಿಗೆ ಕಂಡದ್ದಕ್ಕಿಂತ ಬೇರೆಯದ್ದೇ ಆಯಾಮವಿರುತ್ತದೆ. ಆದರೆ, ಅದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ಬರಬೇಕಷ್ಟೇ.. ಅನೂಪನಿಗೂ ಈಗ ಅಂತಹದ್ದೇ ವಯಸ್ಸು. ಅಂತಹಾ ಸಂದರ್ಭ. ತನ್ನ ಅಕ್ಕ ಸುನಂದಕ್ಕನ ಬದುಕಿನ ಘಟ್ಟಗಳನ್ನು ಮೆಲ್ಲ ಮೆಲ್ಲನೆ ತನಗೆ ಕಂಡಂತೆ ಅರ್ಥೈಸಿಕೊಳ್ಳುತ್ತಾ ನಮಗೂ ದಾಟಿಸುತ್ತಾನೆ. ನಮಗೂ ಅನೂಪನ ಮೂಲಕ ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
ಭೈರವಿರಾಗ :
ಭೈರವಿಯ ರಿಸಲ್ಟ್ ಬಂದ ನಂತರ.. ಆಕೆ ತಾನು ಅಂದುಕೊಂಡದ್ದನ್ನೆಲ್ಲಾ ಮಾಡಬೇಕೆಂಬ, ಜಗತ್ತನ್ನೇ ಗೆದ್ದ ಭಾವ. ಅದಕ್ಕೆ ಕಾರಣ ಅಮ್ಮನ ಬದುಕು. ತನ್ನನ್ನು ಹುಟ್ಟಿಸಿದವನು ಹಾಗೂ ಶೇಖರ್ ಮಾವ ಇಬ್ಬರಿಂದಲೂ ಗಂಡಸರ ಕುರಿತ ಅಸಡ್ಡೆ ಬೆಳೆದಿತ್ತು. ಇದನ್ನು ಬದಲಿಸುವಂತೆ ಕಂಡವರು ಪ್ರಭುದಾಸ್ ಸರ್ ಹಾಗೂ ಸನಾತನ. ಆದರೆ ಎಲ್ಲವೂ ಬದಲಾಗಲು ಎಲ್ಲವೂ ಸರಿ ಇರಬೇಕು. ಭೈರವಿ ರಾಗದ ಆಲಾಪನೆ ಕೇಳಿತೇ..?? ಓದಿ ನೋಡಿ.
ಗಂತವ್ಯ :
ಗಂತವ್ಯ ಎಂದರೆ ಗುರಿ. ಅಭಿರಾಮನ ಎದುರು ಇದ್ದ ಎರಡು ಆಯ್ಕೆಗಳೆಂದರೆ ಅಮ್ಮ ಹಾಗೂ ಅಶ್ವಿನಿ .ಅಮ್ಮನ ಏಕೈಕ ಆಸೆ ಎಂದರೆ ಆಕೆ ಕಷ್ಟಪಟ್ಟು ಓದಿಸಿದ್ದ ಮಗ ದೊಡ್ಡ ವೈದ್ಯನಾಗಬೇಕೆಂಬುದು. ಆದರೆ, ಅಶ್ವಿನಿಯ ಮಾತು ಬೇರೆಯಿತ್ತು. ಅದೆಂದರೆ, ನೀನು ಪ್ರಾಕ್ಟಿಕಲ್ ಆಗಬೇಕು. ಆದರೆ, ಎರಡರ ಒಳ ಮಾತಿನ ಮರ್ಮ ಒಂದೇ ಆಗಿತ್ತು. ಅಭಿರಾಮನ ಬದುಕಿನ ಗುರಿ ಯಾವುದಾಯಿತು..?? ಅವರ ಮಾತಿನ ಒಳ ಮರ್ಮ ಆತನಿಗೆ ತಾಕಿತೇ..?? ಆತ ಆತನ ಗಂತವ್ಯ ತಲುಪಿದನೇ..??
ರೂಹು
ರೂಹು ಎಂದರೆ ರೂಪು. ಈ ಕಥಾ ಸಂಕಲನದಲ್ಲಿ ನನಗೆ ಅತ್ಯಂತ ಆಪ್ತವೆನಿಸಿದ ಕಥೆ ಇದು. ಅತ್ಯಂತ ಚೆಲುವೆಯಾದ ಮಗಳು ಪೃಥೆಯನ್ನು ಕಾಪಾಡುವುದೇ ಸಾಹಸ ಎನ್ನುವಂತಿದ್ದ ಅಪ್ಪ ದ್ವಾರಕಾ. ಹಾಗೂ ಅಪ್ಪನಿಗಿಂತ ಹೆಚ್ಚು ಬೆಳೆದಿದ್ದ ಮಗಳು ಪೃಥೆ. ಅಪ್ಪ-ಮಗಳ ಬಾಂಧವ್ಯದ ಕಥೆ ಇದು. ನನಾಗಿಷ್ಟವಾದ ಕತೆಯ ಕುರಿತು ಗುಟ್ಟು ರಟ್ಟು ಮಾಡಲಾರೆ.
ಶಚೀತೀರ್ಥದಾಳದಲ್ಲಿ :
ಬಿಟ್ಟು ಬಂದರೂ ಬಿಡದ ನೆನಪುಗಳು ಹಾಗೂ ಕಳೆದೇ ಹೋದ ನೆನಪುಗಳು ಮತ್ತೆ ಎಂದಾದರೂ ಧುತ್ತನೆ ಎದುರಾಗಬಹುದು. ಅಥವಾ ಕಳೆದುಕೊಂಡಿದ್ದರಿಂದ ಬೇರೆಯದ್ದೇನೋ ಪಾಠವನ್ನೂ ಕಲಿಯಬಹುದು. ಅಶ್ವಿನಿಯ ಸಾನಿಧ್ಯದಲ್ಲಿ ದಿನಕರನಿಗೆ ಅರಿವಾದದ್ದೇನು..?? ಕಾಡುವ ಮಾನಸಿಯ ನೆನಪಿನಿಂದ ಪಾರಾದನೇ..?? ಭಾವುಕತೆ, ನಿರ್ಲಿಪ್ತತೆ, ಸರಿ-ತಪ್ಪು, ಹಿತ-ಅಹಿತ ಹೀಗೆ ಎಲ್ಲ ಭಾವಗಳನ್ನೂ ತುಂಬಿಕೊಂಡ ಕಥೆ ಇದು.
ಈ ಜನಗಳು ಈ ನರಕ ಈ ಪುಳಕ :
ಈ ಕಥೆಯ ಶೀರ್ಷಿಕೆ ಲಂಕೇಶರ ಕವಿತೆಯ 'ನನ್ನ ಸುತ್ತಾ'ದ ಸಾಲು. ಪುಸ್ತಕದ ಶೀರ್ಷಿಕೆಯೂ ಆಗಿರುವ ಈ ಕಥೆಯಲ್ಲಿ ಯಶವಂತ ಚಿತ್ತಾಲರ ಕಾದಂಬರಿ ಶಿಕಾರಿಯ ನಾಯಕ 'ನಾಗಪ್ಪ', ಶಾಂತಿನಾಥ ದೇಸಾಯಿಯವರ ಕಾದಂಬರಿ ಮುಕ್ತಿಯ ನಾಯಕ 'ಗೌರೀಶ'. ಲಂಕೇಶರ ಕಥೆ ಕಲ್ಲು ಕರಗುವ ಸಮಯ ಇದರ ನಾಯಕ 'ತಿಪ್ಪಣ್ಣ'. ಈ ಮೂವರೂ ನಿಜ ಜೀವನದಲ್ಲಿ ಭೇಟಿಯಾದರೆ ಅಂತಹಾ ಸನ್ನಿವೇಶ ಹೇಗಿರುತ್ತದೆ ಎನ್ನುವುದರ ಕುರಿತಾಗಿದೆ.
10 ಕತೆಗಳ ಓದು 10 ವಿಭಿನ್ನ ಅನುಭವವನ್ನು ನೀಡುವಂತಿದೆ. ಕಾವ್ಯದ ಕಲಾತ್ಮಕ ನೈಪುಣ್ಯ ಕತೆಗಳಲ್ಲಿಯೂ ಕಂಡು ಬರುತ್ತದೆ. ಗಂಡಿನ ಭಾವುಕತೆ, ತೊಳಲಾಟ ಹಾಗೂ ಹೆಣ್ಣಿನ ಗಟ್ಟಿತನಗಳು ಕಾಣುತ್ತವೆ. ಕೇವಲ ಪದಗಳಿಂದಲ್ಲ.. ಭಾವದಿಂದ ಆವರಿಸಿಕೊಂಡು ಹೇಳದೆಯೂ ಕೆಲವೆಲ್ಲವನ್ನು ಹೇಳುವ ಕಥೆಗಳಿವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ