ಶುಕ್ರವಾರ, ಏಪ್ರಿಲ್ 10, 2026

ಬದುಕು ಜಟಕಾಬಂಡಿ (ಪುಸ್ತಕ ಯಾನ - 106)

ಪುಸ್ತಕದ ಶೀರ್ಷಿಕೆ : ಬದುಕು ಜಟಕಾಬಂಡಿ

ಲೇಖಕರು : ಅನಂತ ಕುಣಿಗಲ್

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : ಡಿಸೆಂಬರ್ 2022

ಪುಟಗಳು : 124

ಬೆಲೆ : 140 ರೂ.


ಬದುಕಿಗೆ ಸಂಬಂಧಿಸಿದ ಕಥೆಗಳನ್ನು ಹೊತ್ತು ಈ ಪುಸ್ತಕದ ಬಂಡಿ ನಮ್ಮನ್ನು ಕಥೆಗಳ ಲೋಕಕ್ಕೆ ಕೊಂಡೊಯುತ್ತದೆ. ಜೊತೆಗೆ ಬದುಕಿನ ನೋಡಿರುವ ಹಾಗೂ ನೋಡದಿದ್ದ ಕಿಟಕಿಗಳಿಂದ ಕಥೆಗಳ ಮೂಲಕ ಬದುಕಿನ ದರ್ಶನ ಮಾಡಿಸುತ್ತದೆ. ಈ ಕಥಾಸಂಕಲನದಲ್ಲಿ ಸಣ್ಕತೆಗಳು ಹಾಗೂ ಪುಟ್ಕಥೆಗಳು ಎಂಬ ಎರಡು ವಿಭಾಗಗಳನ್ನು ಮಾಡಿ ತಲಾ ಹತ್ತು ಕಥೆಗಳ ಬಂಡಿಯಲ್ಲಿ ಕರೆದೊಯ್ಯುತ್ತಾರೆ ಅನಂತ್. 


ಕತೆಗಳ ಲೋಕಕ್ಕೆ ಪ್ರವೇಶಿಸುವ ಮುನ್ನ 'ಕತೆ ಅಂದ್ರೆ..' ಎನ್ನುತ್ತಾ ಕತೆಯ ಕುರಿತು ಸಿಂಪಲ್ ಹಾಗೂ ಚೆಂದವಾಗಿ ಹೇಳಿದ್ದಾರೆ. 


ಒಂದು ಹೋರಾಟದ ಕಥೆ : ಕರ್ನಾಟಕದ ಬಯಲು ಸೀಮೆಯ ಪ್ರಾಂತ್ಯದ ಬ್ಯಾಟರಾಯನಪುರದ ಸಾಕವ್ವ ಹಾಗೂ ಅವಳ ಮೊಮ್ಮಗ ಶಿವನ ಸ್ವಾತಂತ್ರ್ಯದ ಹೋರಾಟದ ಕಥೆಯನ್ನು ಹೇಳುತ್ತಲೇ.. ಯಾರಾದರೂ ಬಂಡಾಯವೇಳುವುದಕ್ಕೆ ಕಾರಣ, ಆ ಕಾರಣವೇ ಕಿಚ್ಚಾಗಿ.. ಹೊತ್ತಿ ಉರಿಯುವ ಪರಿಯನ್ನು ಹೇಳುತ್ತಾರೆ. ವೈಯಕ್ತಿಕ ಹಾಗೂ ಸ್ವಾತಂತ್ರ್ಯದ ಕಿಚ್ಚಿನ ಕಿಡಿಗಳು ಮಿಳಿತವಾದ ಚಿತ್ರಣಗಳಿವೆ. ಪ್ರತಿಯೊಬ್ಬರೂ ಸ್ವಾತಂತ್ರ್ಯದ ಕನಸನ್ನು ಕಾಣುವವರೇ.. ಅದು ಸಾಕಜ್ಜಿಯ ಕಣ್ಣುಗಳಲ್ಲಂತೂ ಅದು ಜೀವನ್ಮುಖಿಯಂತೆ ಕಾಣುತ್ತದೆ.


ಬಯಲ ತೊರೆದ ಹಾಡು : ಬಯಲ ತೊರೆದ ಹಾಡು ಎಲ್ಲರಿಗೂ ಕೇಳಬಹುದು ಅಥವಾ ಎಲ್ಲಿಗೋ ಹೊರಟು ಹೋಗಲೂಬಹುದು. ಇಲ್ಲಿ ಬಯಲು ತೊರೆದ ಹಾಡಾಗಿದ್ದು ಯಾರು..?? ಎಂಬುದನ್ನು ತಿಳಿಯಲು ಕಥೆಯನ್ನೇ ಓದಿ. ದಕ್ಷಿಣ ಕರ್ನಾಟಕದ ಗಡಿಭಾಗದ ಪುಟ್ಟ ಹಳ್ಳಿ ಕೆಂಕೆರೆಯಲ್ಲಿ ಮೀನಿನ ಊಟ ಬಹಳ ಪ್ರಸಿದ್ಧವಾಗಿತ್ತು. ಆದರೆ, ಅಲ್ಲಿ ಶುರುವಾದ ಮೀನು ಸಾಕಾಣಿಕೆ ಹಾಗೂ ಅದರಿಂದ ಅಭಿವೃದ್ಧಿಯಾದ ಹಳ್ಳಿ ಹಾಗೂ ಪ್ರವಾಸೋದ್ಯಮ ಅದೇ ಗತಿಯಲ್ಲಿ ಸಾಗಿತೇ..?? ಅಥವಾ ಬೇರೆ ದಾರಿ ಹಿಡಿಯಿತೇ..?? ಈ ಕಥೆಯ ಕುರಿತು ಹೆಚ್ಚೇನೂ ಬಿಚ್ಚಿಡಲಾರೆ. ಕತೆಯ ಹೆಣೆಯುವಿಕೆಯಲ್ಲಿ ನನಗೆ ಇಷ್ಟವಾದ ಕಥೆ ಇದು. 


#ಟ್ಯಾಗ್ : ಸದ್ಯ ವಾಟ್ಸಪ್ ಒಂದರಲ್ಲಿ ಟ್ಯಾಗ್ ಆಪ್ಷನ್ ಇಲ್ಲವೆನ್ನುತ್ತಲೇ ಹೊಸ ಸಾಧ್ಯಾಸಾಧ್ಯತೆಯೊಂದನ್ನು ತೆರೆದಿಡುತ್ತಾ ಹೋಗುವ ಲೇಖಕರು ಇಂದಿನ ಸೋಶಿಯಲ್ ಮೀಡಿಯಾ ಹಾಗೂ ಅದರಿಂದ ಉಂಟಾಗುವ ಪ್ರೀತಿ, ಪ್ರೇಮ, ಸ್ನೇಹ, ದೋಖಾ, ಪ್ರತಿಕ್ರಿಯೆಗಳು ಇವೆಲ್ಲವನ್ನೂ ಒಂದೇ ದಾರದಲ್ಲಿ ಕಟ್ಟಿ ಅಂದರೆ ಒಂದೇ ಟ್ಯಾಗ್ ನಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣವೊಂದನ್ನು ಒಂದು ಹ್ಯಾಶ್ ಟ್ಯಾಗ್ ಮೂಲಕ ಬಿಚ್ಚಿಟ್ಟಿರುವ ಕಥೆ ಇದು.


ದೇಹ ದೇಗುಲ : ಈ ಕಥೆಯಲ್ಲಿ ಸುನೀತಾಳ ಪ್ರಕಾರ 'ಪ್ರತಿ ಹೆಣ್ಣಿನ ದೇಹವೂ ತನ್ನನ್ನು ಅರಸಿ ಬರುವ ಗಂಡಿಗೆ ದೇಗುಲವಿದ್ದಂತೆ'. ಈ ಒಂದು ಸಾಲು ಈ ಕಥೆಯನ್ನು ಬೇರೆಯದ್ದೇ ರೀತಿಯಲ್ಲಿ ನೋಡುವಂತೆ ಮಾಡಿದ ಕಥೆ. ತನ್ನ ದೇಹ ಮಾರಿಕೊಳ್ಳುವುದನ್ನೆ ವೃತ್ತಿ ಮಾಡಿಕೊಂಡವರು ಅಸಹಾಯಕತೆ ಪ್ರದರ್ಶಿಸುತ್ತಲೋ.. ಅಥವಾ ಕಷ್ಟ ಕಣ್ಣೀರು, ನೋವಿನ ಕಥೆಯಾಗುತ್ತದೆ ಎಂದುಕೊಂಡಾಗಲೇ ಬೇರೆಯದ್ದೇ ದಾರಿ ಹಿಡಿದು ಬೇರೆಯವರ ಕಷ್ಟಕ್ಕೂ ನೆರವಾಗುವ ಪರಿಯಿದೆ. ದೇಹವನ್ನು ದೇಗುಲಕ್ಕೆ ಹೋಲಿಸಿದಂತೆಯೇ.. ಆಕೆಯನ್ನು ಆಕೆಯ ಬದುಕು ಹಾಗೂ ಸೋಮುವಿನ ಬದುಕನ್ನು ಹೊಸದೊಂದು ನಿಟ್ಟಿನಲ್ಲಿ ನೋಡುವ ಪರಿ ಇಷ್ಟವಾಯಿತು. 


ಮೇಟ್ಕುಳಿ : ಮೇಟಿಕುಳಿ, ಮೇಟ್ಕುಳಿ ಸೊಪ್ಪು ಅಥವಾ ಮೇಟ್ಕುಳಿ ಹೊಂಬು ಹೀಗೆ ಹಲವಾರು ಹೆಸರಿನಿಂದ ಕರೆಯಲ್ಪಡುವ ಬಳ್ಳಿಯೊಂದನ್ನು ಸಂಕ್ರಾಂತಿಯ ಹಿಂದಿನ ದಿನ ಮೆದೆಯ ಪೂಜೆಗೆ ಬಳಸುತ್ತಾರೆ. ಇಲ್ಲಿನ ಮೇಟ್ಕುಳಿಯ ಕಥೆ ಮುಗಿದರೂ.. ಸಂಕ್ರಾಂತಿಯ ಕಥೆ ಮುಗಿಯುವುದಿಲ್ಲ. ಈ ಕತೆ ಏಕೆ ಮುಗಿಯುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಈ ಕಥೆಯನ್ನು ಓದಿ.


ಸರದಿ : ಪ್ರತಿಯೊಬ್ಬರಿಗೂ ಜೀವನದಲ್ಲಿ ಮರಣಕ್ಕೆ ಒಂದೊಂದು ಸರದಿಯಂತೂ ಇದ್ದೇ ಇದೆ. ಆದರೆ, ಕೆಲವು ಸರ್ಕಸ್ ಗಳಲ್ಲಿ ಜನರನ್ನು ಜೀವಂತ ಸಮಾಧಿ ಮಾಡಿ ಅವರು ಬದುಕಿ ಬರುವ ಸಮಯಕ್ಕಾಗಿ ಕಾಯುತ್ತಾರೆ. ಅದು ಪವಾಡವೇ ಸರಿ ಇಂತಹ ಪವಾಡವನ್ನು ಮಾಡುತ್ತಿದ್ದದ್ದು ತಮ್ಮಣ್ಣ ಎಂಬ ಸರ್ಕಸ್ ಕಂಪನಿಯ ಮಾಲೀಕ. ಆತನ ಸರ್ಕಸ್ ಪರಿವಾರವು ಅವನು ಎದ್ದು ಬರುವ ಕ್ಷಣಕ್ಕಾಗಿ ಕಾಯುತ್ತಿತ್ತು. ಆರನೇ ದಿನದ ನಂತರ ಜೀವಂತ ಸಮಾಧಿ ಯಾಗಿದ್ದ ತಮ್ಮಣ್ಣ ಏನಾದರು ?? ಅಲ್ಲಿದ್ದವರಿಗೆ ಅಚ್ಚರಿ ಪಡುವ ಸರದಿ ಬಂದಿತೋ.. ನೋವಿನದ್ದೋ.. ಸಂತಸದ್ದೋ.. ತಿಳಿಯಲು ಓದುವ ಸರದಿಯಂತೂ ನಿಮ್ಮದೇ.. 


ಎದೆಯೊಳಗಿನ ಯಾಶಿಗೊಂದು ಕ್ಷಮಾಪತ್ರ : ಹದಿಹರೆಯದವರ ಪ್ರೀತಿ ಸೋತಾಗ.. ಆ ಪ್ರೀತಿ ಕಲಿಸುವ ಪಾಠದಿಂದ ಬದಲಾಗುವವರು ಇರುತ್ತಾರೆ. ಅಂತಹಾ ಪಾಠಗಳನ್ನು ಕ್ರೋಢಿಕರಿಸಿ ಚಂದದ ಪ್ರೇಮ ಪತ್ರವೊಂದು ಕ್ಷಮಾಪತ್ರದ ರೂಪದಲ್ಲಿ ಯಾಶಿಗೆ ಬರೆಯಲಾಗಿದೆ. ಮೇಲ್-ಈಗೋಗಳನ್ನೆಲ್ಲಾ ಬದಿಗೆ ಸರಿಸಿ.. ಪ್ರೀತಿಯಲ್ಲಿ ಯಾವುದೇ ರೀತಿಯ ಇಗೋಗಳಿಲ್ಲ ಎಂದು ತೋರುವ ಚಂದದ ಕ್ಷಮಾಪತ್ರ ಇದು.


ವಿಸರ್ಜನೆ : ಬಿ.ಬಿ.ಎಂ.ಪಿ ಯ ಕಸದ ಗಾಡಿಯಲ್ಲಿ ಡ್ರೈವರ್ ಆಗಿದ್ದ ಪಾಪಣ್ಣನಿಗೆ ಮಯೂರ ಒಬ್ಬನೇ ಮಗ. ಹೆಂಡತಿ ಇರಲಿಲ್ಲ. ಮಗ ಕೂಡ ಸಾಮಾನ್ಯ ಮಕ್ಕಳಂತಲ್ಲ.. ಮಗನ ತಲೆಯಲ್ಲಿ ಬೆಳೆಯುತ್ತಿದ್ದ ಗಡ್ದೆಯ ಆಪರೇಷನ್ ಗೆ ಆತನಿಗೆ ನಾಲ್ಕು ಲಕ್ಷ ಹೊಂದಿಸಬೇಕಾಗಿತ್ತು. ಆದರೆ ತಿಂಗಳಿಗೆ 6000 ಬರುವ ಆತ ಹೇಗೆ ತಾನೇ ಅಷ್ಟು ಹಣವನ್ನು ಹೊಂದಿಸಿಯಾನು..?? ಅಷ್ಟೇ ಅಲ್ಲದೆ, ಗಣಪತಿ ಹಬ್ಬದ ಸಂದರ್ಭ ಮಗನಿಗೆ ಗಣಪತಿಯನ್ನು ವಿಸರ್ಜಿಸುವ ಆಸೆ. ಆದರೆ, ಮಗನಿಗೆ ಗಣಪತಿಯನ್ನೂ ತಂದುಕೊಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದ ಪಾಪಣ್ಣ. ಗಣೇಶನ ಹಬ್ಬದ ದಿನ ನಡೆಯುವ ಆ ಘಟನೆಗೆ ಹಿನ್ನೆಲೆ ಕೂಡ ಇಲ್ಲದ್ದಿಲ್ಲ.. ಇಲ್ಲಿ ವಿಸರ್ಜನೆಯಾಗಿದ್ದು ಗಣಪತಿಯೋ ಆತನ ಕನಸುಗಳೋ.. ಆತನ ಮಗನ ಕನಸುಗಳೋ.. ಒಟ್ಟಾರೆ ಎಲ್ಲದಕ್ಕೂ ಮುಕ್ತಿ ಸಿಕ್ಕಿತೇನೋ ಎನ್ನಿಸಿದರೂ ಕಾಡುವ ಕಥೆ ಇದು. 


ಕೆಂಪು ಬಸ್ಸಿನ ನೀಲಿ ಸೀಟು : ಈ ಬಸ್ಸಿನಲ್ಲಿರುವ ತಾತನಂತೆ ಯಾರಾದರೂ ಒಬ್ಬರು ನಮ್ಮ ಬಸ್ಸಿನ ಪ್ರಯಾಣದ ದಿನಗಳಲ್ಲಿ ಕಂಡೇ ಇರುತ್ತಾರೆ. ಅವರ ಮಾತಿಗೂ.. ಕೃತಿಗೂ.. ಒಂದಕ್ಕೊಂದು ತಾಳ-ಮೇಳವೇ ಇಲ್ಲದಿದ್ದರೂ.. ದೂಷಣೆಯಂತೂ ತಪ್ಪುವುದಿಲ್ಲ. ವಾಸ್ತವದ ಕಥೆಯಾದರೂ.. ಬಂಡತನದ ಬದುಕು ಹಾಗೂ ಬಾಯಿ ಇದ್ದವರು ಬದುಕುವ ರೀತಿಯನ್ನು ಒಂದು ರೀತಿಯ ವಿಡಂಬನೆಯಲ್ಲಿ ತೆರೆದಿಟ್ಟಂತೆನಿಸಿತು. 


ಬೆಂಗಳೂರಿಗೆ ಬಂದ ಬೋರೆಗೌಡ : ಬೋರೇಗೌಡ ಎಂಬ ಹೆಸರು ಕೇಳಿದ ತಕ್ಷಣ ಮೊದಲಿಗೆ ಹಳ್ಳಿಯವನು ಪೇಟೆಗೆ ಬಂದು ಎದುರಿಸಿದ ಕಷ್ಟಗಳಿರಬಹುದೇನೋ ಎನಿಸಿತು. ಆದರೆ, ಒಬ್ಬ ಅಮಾಯಕ ಮುಗ್ಧ ಹುಡುಗ ಮೋಸದ ಜಾಲಕ್ಕೆ ಸಿಲುಕಿದ ಕಥೆ ಇಲ್ಲಿದೆ. ಕಥೆಯಲ್ಲಿನ ಕೊನೆ ನಾನು ಊಹಿಸಿದ್ದಕ್ಕಿಂತ ವಿಭಿನ್ನವಾಗಿದೆ. ಆ ಕಥೆಯ ಅಂತ್ಯವನ್ನು ನೀವೇ ಓದಿ. 


ಇಲ್ಲಿ ಇನ್ನೂ 10 ಪುಟ್ಕಥೆಗಳಿವೆ. ಒಂದರಿಂದ ಎರಡು ಪುಟದಷ್ಟಿರುವ ಕಥೆಗಳು ಪದಗಳಿಗಿಂತ ಹೆಚ್ಚಿನ ಸಾರ ಹಾಗೂ ತೂಕವನ್ನು ಹೊಂದಿವೆ ಎನ್ನಿಸಿತು. 


ನಾಳೆ ಬಾ : ನಾಳೆ ಬಾ ಎನ್ನುವ ಎಂದು ಹೇಳುವವರಿಗೆ ನಾನೇ ನಾಳೆ ಬರುತ್ತೇನೆ ಎಂದರೆ ಅವರ ರಿಯಾಕ್ಷನ್ ಹೇಗಿರಬಹುದು..?? 'ಯಾರೋ ಪರಿಚಯವೇ ಇಲ್ಲದವರು ಮಾಡಿದ ಮೋಸಕ್ಕಿಂತ ತನ್ನ ಮಗನ ಕಡೆಗಣಿಸುವಿಕೆ ಎಷ್ಟು ಮೇಲು' ಎನಿಸುವ ವಿಪರ್ಯಾಸವಿದೆ ಇಲ್ಲಿ.


ಪರ್ಫೆಕ್ಷನ್ : ಯಾರೂ ಜೀವನದಲ್ಲಿ 100% ಅಂದು ಪರ್ಫೆಕ್ಟ್ ಆಗಿರಲು ಸಾಧ್ಯವೇ ಇಲ್ಲ. ಪರ್ಫೆಕ್ಟ್ ಪರ್ಫೆಕ್ಟ್ ಎನ್ನುತ್ತಾ ಪರ್ಫೆಕ್ಟ್ ಎನ್ನಿಸಿಕೊಳ್ಳಲು ಬಯಸುವವರಿಗೊಂದು ಪಾಠವಿದೆ ಇಲ್ಲಿ. 


ಹೆಣ್ಣೆಂದರೆ ಅಷ್ಟೇ ಸಾಕೇ ? : 'ಪ್ರತಿಯೊಬ್ಬ ಹೆಣ್ಣಿನಲ್ಲಿ ವೀರ ವನಿತೆಯರಂತೆ ಹೋರಾಡುವ ಸೈನಿಕರು ಇರುತ್ತಾರೆ' ಎನ್ನುವ ಮಾತೊಂದು ಈ ಕಥೆಯಲ್ಲಿ ಬರುತ್ತದೆ. ಅದು ಹೌದು.. ಈಗಿನ ಹೆಣ್ಣು ಮಕ್ಕಳು ಈ ರೀತಿ ಧೈರ್ಯ ತೋರಿದರೆ ತಮ್ಮ ಮೇಲಾಗುವ ದೌರ್ಜನ್ಯದಿಂದ ತಪ್ಪಿಸಿಕೊಳ್ಳಬಹುದು ಹಾಗೂ ಮತ್ತೊಬ್ಬರಿಗೆ ಮಾದರಿಯೂ ಆಗಬಹುದು. ಒಂದೊಳ್ಳೆ ಮೋಟಿವೇಶನ್. 


ಡ್ರೈಫ್ರೂಟ್ಸ್ ದೆವ್ವ : ದೆವ್ವವನ್ನು ಹುಡುಕಿಕೊಂಡು ಹೋಗುವವರು ಅಥವಾ ದೆವ್ವದ ಕಥೆಗಳನ್ನು ಇಷ್ಟಪಡುವವರಿಗೆ ಅಪ್ಡೇಟೆಡ್ ದೆವ್ವದ ಕಥೆ ಇಲ್ಲಿದೆ.


ವಿಜಯಧಾರೆ : ವಿಜಯಧಾರೆ ಎನ್ನುವುದು ಒಂದು ಹೂಕುಂಡದ ವಿಶೇಷ ಕಥೆ. ಇದು ಅತಿಮಾನುಷ ಶಕ್ತಿ ಹಾಗೂ ಇತಿಹಾಸದ ತುಣುಕನ್ನು ಒಗ್ಗೂಡಿಸಿರುವ ಕಥೆ.


ಯದುಗದಾ : ಸೋಲು ಹಾಗೂ ಗೆಲುವು ಎರಡೂ ಸ್ಪರ್ಧೆಗಳಲ್ಲಿ ಸಾಮಾನ್ಯ. ಆದರೆ, ಅದರ ಕುರಿತು ಹೆಚ್ಚಿನ ಆಸ್ಥೆ ಇರುವವರು ಓದಬೇಕಾದ ಕಥೆ ಇದು. ಕಥೆಯ ಆರಂಭ ಬೇರೆಯದ್ದೇ ರೀತಿಯ ಕಥೆಯನ್ನು ಹೇಳುತ್ತದೆ ಎನ್ನಿಸಿದರೂ ಕಥೆಯ ಅಂತ್ಯ ವಿಭಿನ್ನತೆಯನ್ನು ಸೂಚಿಸುತ್ತದೆ.


ಪ್ರಾರ್ಥನೆ :ಬದುಕಿನಲ್ಲಿ ಭರವಸೆ ಇರುವವರು ಪ್ರಾರ್ಥಿಸುತ್ತಾರೆ ಹಾಗೂ ಬದುಕಲು ಯತ್ನಿಸುತ್ತಾರೆ. ಹೀಗೆ ತನ್ನ ಜೀವನೋತ್ಸಾಹವನ್ನು ಕಳೆದುಕೊಳ್ಳದ ಮುಗ್ಧ ಮನದ ಅನುದಿನದ ಪ್ರಾರ್ಥನೆಯೊಂದು ಇಲ್ಲಿದೆ.


ಯಡವಟ್ಟು : ಒಬ್ಬ ರಾಜನ ಆಳ್ವಿಕೆಯ ಕಾಲದಲ್ಲಿ ಉಂಟಾದ ಸೋಂಕಿತ ರೋಗ ಹಾಗೂ ಅದರ ಮುಂದಿನ ಪರಿಣಾಮಗಳ ಕಥೆ.


ಕಾಲ್ಗೆಜ್ಜೆ : ಪ್ರೀತಿಯಲ್ಲಿ ಏನು ಮುಖ್ಯ ಎಂದು ಹೇಳುವಂತಹಾ ಪುಟ್ಕತೆ.


ಅವಳಲ್ಲ ಅವನು : ಮಗನಿಗೆ ತಂದೆ ವಿಭಿನ್ನವಾದ ಪಾಠವನ್ನು ತಮ್ಮ ನಡೆಯ ಮೂಲಕವೇ ಕಲಿಸುತ್ತಾರೆ. ಇದು ತೃತೀಯ ಲಿಂಗಿಯ ಕಥೆಯೇನಲ್ಲ.. ವಿಭಿನ್ನ ಶೀರ್ಷಿಕೆ ಬೇರೆಯದ್ದೇ ಕಾರಣಕ್ಕೆ.  ಏಕೆಂದು ಓದಿ ತಿಳಿಯಿರಿ. 


ಇಷ್ಟೂ ಕತೆಗಳೂ ಬದುಕಿನ ವಿವಿಧ ಮಜಲುಗಳನ್ನು, ವಿವಿಧ ಆಯಾಮವನ್ನು, ವಿವಿಧ ವಯೋಮಾನದವರನ್ನು, ವಿವಿಧ ಮನಸ್ಥಿತಿಯನ್ನು ತೋರಿಸುತ್ತವೆ. ಇಲ್ಲಿ ಎಲ್ಲಾ ಕಾಲಮಾನದ, ಎಲ್ಲಾ ರೀತಿಯ ಕತೆಗಳೂ ಕಾಣಸಿಕ್ಕವು. 'ಬದುಕು ಜಟಕಾಬಂಡಿ'ಯ ಪಯಣ ನನಗಂತೂ ಇಷ್ಟವಾಯಿತು. ಈ ಕಥಾಸಂಕಲನ ಇನ್ನಷ್ಟು ಮುದ್ರಣಗಳನ್ನು ಕಾಣಲಿ ಎನ್ನುವ ಹಾರೈಕೆ ನನ್ನದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ