ಶುಕ್ರವಾರ, ಏಪ್ರಿಲ್ 10, 2026

ಬಯಲಲಿ ತೇಲುತ ತಾನು (ಪುಸ್ತಕ ಯಾನ - 102)


ಪುಸ್ತಕದ ಶೀರ್ಷಿಕೆ : ಬಯಲಲಿ ತೇಲುತ ತಾನು

ಲೇಖಕರು : ಅಕ್ಷಯ್ ಪಂಡಿತ್

ಪ್ರಕಾಶಕರು : ಸಂಕಥನ 

ಪ್ರಥಮ ಮುದ್ರಣ : 2021

ಪುಟಗಳು : 112

ಬೆಲೆ : 100 ರೂ. 


2021ರ ಈ-ಹೊತ್ತಿಗೆ ಕಥಾ ಪ್ರಶಸ್ತಿ ಪಡೆದ ಕೃತಿ ಅಕ್ಷಯ್ ಪಂಡಿತ್ ಅವರ 'ಬಯಲಲಿ ತೇಲುತ ತಾನು'. ಇಲ್ಲಿನ ಹೆಚ್ಚಿನ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಹುಮಾನಿತ ಕಥೆಗಳಾಗಿವ. ಈ ಕಥೆಗಳು ಬಹುಮಾನಿತ ಎನ್ನುವ ಶೀರ್ಷಿಕೆಯಿಂದ ಆಕರ್ಷಿತಳಾಗಿ ಓದಲು ಕುಳಿತೆನಾದರೂ.. ನಿಜಕ್ಕೂ ಸತ್ವಯುತ ಕಥೆಗಳು ಹಿಡಿದಿಟ್ಟವು. ಈ ಕಥಾ ಸಂಕಲನದಲ್ಲಿ 10 ಕಥೆಗಳಿವೆ. 


ಬಯಲಲಿ ತೇಲುತ ತಾನು : 10 ವರ್ಷದ ಹುಡುಗ ಬಸು ಅರ್ಥಾತ್ ಬಸವರಾಜ ಅವನ ಅಪ್ಪ ಬಂಗಾರುಸ್ವಾಮಿಯ ಜೊತೆಗೆ ಊರೂರು ತಿರುಗುತ್ತಾ.. ಜಾತ್ರೆಗಳಲ್ಲಿ ಅಪ್ಪನ ವ್ಯಾಪಾರಕ್ಕೆ ಸಹಾಯ ಮಾಡಲು ಬರುತ್ತಾನೆ. ಈಗ ಸಾಗರದ ಮಾರಿ ಜಾತ್ರೆಗೂ ಹಾಗೆಯೇ ಬಂದದ್ದು. ಅಪ್ಪನದ್ದು ಸಣ್ಣ-ಸಣ್ಣ ಆಟದ ಸಾಮಾನುಗಳ ಪುಟ್ಟ ಅಂಗಡಿಯಾದರೆ.. ಅಲ್ಲೇ ಹತ್ತಿರದಲ್ಲಿ ಪುಟ್ಟ ಹೆಲಿಕ್ಯಾಪ್ಟರ್ ಒಂದನ್ನು ಹಾರಿಸಿ, ಹಿಡಿಯುತ್ತಾ.. ಅದರಿಂದ ಮಕ್ಕಳನ್ನು, ಗ್ರಾಹಕರನ್ನೂ ಆಕರ್ಷಿಸಿ 30 ರೂಪಾಯಿಗೆ ಒಂದರಂತೆ ಮಾರುವ ಕೆಲಸ. ಹಾಗೆ ಬಂದ ಬಸುವಿಗೆ ಆ ಜಾತ್ರೆಯ ಆಕರ್ಷಣೆ  ಎಂದರೆ ಜೆಯಿಂಟ್ ವೀಲ್. ಬಯಲಲ್ಲಿ ಹಾರುವ ಅವನ ಆಸೆಯನ್ನು ಹೆಚ್ಚಿಸಿದ್ದಲ್ಲದೆ, ಅವನನ್ನು ಸೆಳೆದು ತನ್ನ ತೆಕ್ಕೆಗೂ ಎಳೆದುಕೊಂಡಿತು. ಅವನ ಹಾರುವ ಕನಸನ್ನು ಬೇರೆಯದ್ದೇ ರೀತಿಯಲ್ಲಿ ವಿಶ್ಲೇಷಿಸಿತು. ಬಯಲಲ್ಲಿ ಹಾರುವ ಅವನ ಕನಸುಗಳು, ಸ್ವಚ್ಛಂದತೆ, ಭವಿಷ್ಯದ ಪ್ರೀತಿ ಅಂತೆನಿಸಿತು. ಅಲ್ಲೇ ಕೆರೆಯಲ್ಲಿ ಮೂಡುವ ಚಿತ್ರಣಗಳು, ಸಡಗರಗಳು ಕಣ್ಮುಂದೆ ಸುಳಿಯುತ್ತಾ ಸೆಳೆಯುತ್ತವೆ. 


ರೇಖೆಗಳು: ಯಾರೋ ಒಬ್ಬರಿಗೆ ಕಲಾತ್ಮಕವಾಗಿ ಕಾಣುವ ಕೆಲಸ ಮತ್ತೊಬ್ಬರಿಗೆ ಏಕತಾನತೆ ಎನ್ನಿಸಬಹುದು. ಮತ್ತೊಬ್ಬರ ಕನಸ..  ಹಿಂದಿನಿಂದ ಆ ಕೆಲಸ ಮಾಡುತ್ತಿರುವವರಿಗೆ ರೊಟೀನ್ ಎಂದೆನಿಸಬಹುದು. ಆದರೆ, ಕಲೆಗಳನ್ನು.. ಹವ್ಯಾಸಗಳನ್ನು.. ಕಲೆಗಳನ್ನಾಗಿ ಸ್ವೀಕರಿಸಿದಾಗ, ಅದು ಏಕತಾನತೆಯಾದರೆ ಬದುಕಿನ ಅರ್ಥವೇ ಕೆಟ್ಟು ಹೋಗುತ್ತದೆ. ಹಾಗೆ.. ಪ್ರತಿಯೊಂದು ರೇಖೆಗಳು, ಊರಿನಿಂದ ಬೆಂಗಳೂರಿನವರೆಗೂ ಬಂದಾಗ ಆಗುವ ವಿವಿಧ ಭಾವನೆಗಳನ್ನು ವಿವಿಧ ಕೋನಗಳಿಂದ ಸೆರೆಹಿಡಿದ ಕಥೆ ಇಲ್ಲಿದೆ. 


ಎಲ್ಲೂ ಸಲ್ಲದವರು : ಈ ಕಥೆ ಹಳ್ಳಿಯ ಕುರಿತ ಆಸೆ ಹಾಗೂ ಪಟ್ಟಣದ ಕೆಲಸದ, ಹಣದ ಜಂಜಾಟದಲ್ಲಿ ಹಳ್ಳಿಯನ್ನು ಬಿಟ್ಟು ದೂರ ಉಳಿದವರೆಲ್ಲರ ಕಥೆಯೂ ಆಗಬಹುದೆನಿಸಿತು. ಆದರೆ, ತನ್ನ ಹಳ್ಳಿಯ ಕುರಿತ ಪ್ರೀತಿ ಕಾಡುವವರು ಮಾತ್ರ ಹೀಗೆ.. ವಿಶ್ವ 'ಕಮ್ಮರಡಿ'ಯನ್ನು ಮತ್ತೆ ಹುಡುಕಿಕೊಂಡು ಹೊರಟಂತೆ ಹೊರಡಬಹುದು. ಆದರೆ, ವಿಶ್ವನಿಗೆ ಸಿಕ್ಕ ಕಮ್ಮರಡಿ ಮೊದಲಿನಂತೆ ಇದ್ದಿತಾ..?? ಕಂಡ ಬದಲಾವಣೆಗಳು ಹಾಗೂ ವಾಸ್ತವದ ಯಾವುದು ವಿಶ್ವನನ್ನು ಹೆಚ್ಚು ಕಾಡಿತು..? 


ಭಾರತ್ ಸಿಟಿ : ಇನ್ನು ಸ್ವಲ್ಪ ದಿನಗಳ ನಂತರ ಡಿಜಿಟಲೀಕರಣಗೊಂಡ ಸ್ಮಾರ್ಟ್ ನಗರಗಳಲ್ಲಿ ಹೀಗೆ ಇಂತಹದ್ದೇ 'ಭಾರತ್ ಸಿಟಿ' ಕಂಡು ಬರಬಹುದೇನೋ. 'ಆಟೋಮೊಬೈಲ್ ಸಿಟಿ'ಗೆ ಎಂದು ಹೊರಟ ಸಮೀರ, ಮೆಟ್ರೋ ರೈಲಿನಲ್ಲಿ ಕಂಡ ಮುದುಕನನ್ನು ಹಚ್ಚಿಕೊಂಡಷ್ಟು ತನ್ನ ಕೆಲಸವನ್ನು ಹಚ್ಚಿಕೊಳ್ಳಲಿಲ್ಲವೇ..? ಭಾರತ್ ಸಿಟಿ ಸಮೀರನ ಮನಸ್ಸಿನಲ್ಲಿ ಮೂಡಿಸಿದ ಭಾವನೆಗಳೇನು..?? ಟೆಕ್ನಾಲಜಿ ಹಾಗೂ ಭಾವನೆಗಳನ್ನು ಮಿಳಿತವಾಗಿಸಿ ಬರೆದ ಕಥೆ ಇದು ಎಂದೆನಿಸಿತು. ಭವಿಷ್ಯದ ದಿನಗಳು ಇದಕ್ಕಿಂತ ವಿಭಿನ್ನವಾಗಿಯೇನೂ ಇರಲಾರವು. 


ಫ್ರೀ ವೇ : ನೋರ್ವಾಕ್ ಎಂಬ ಸಣ್ಣ ನಗರದ ಮ್ಯಾರಿನೇಟ್ ಹೋಟೆಲ್ ಗೆ ಮುಕುಂದ ಒಂದೆರಡು ಗಂಟೆಗಳಷ್ಟು ದೂರ ಡ್ರೈವ್ ಮಾಡಿಕೊಂಡು ಹೊರಟದ್ದು ನಿವೇದಿತಾಳನ್ನು ಭೇಟಿ ಮಾಡಲಿಕ್ಕಾಗಿ. ಅವನು ಹಾಗೆ ಹೊರಟದ್ದು ಫ್ರೀ ವೇನಲ್ಲಿ. ಅಗಲವಾದ ನೇರ ರಸ್ತೆಗಳು. ಜನರು ಅಡ್ಡ ಬರದ ಹಾದಿ, ಗೇರು ಚೇಂಜ್ ಮಾಡುವ ರಗಳೆಯಿಲ್ಲದ ಕಾರು. ಕಾರೇನೋ ಆಟೋಮ್ಯಾಟಿಕ್. ಆದರೆ, ಆತನ ಬದುಕಿನ ನಿರ್ಧಾರಗಳು ಹಾಗೆಯೇ ಆಗಿದ್ದವಾ..?? ಅಷ್ಟಕ್ಕೂ ಆತ ನಿವೇದಿತಾಳನ್ನು ಭೇಟಿ ಮಾಡಲು ಹೊರಟ್ಟಿದ್ದೇಕೆ..?? ಡ್ರೈವ್ ಮಾಡಿಕೊಂಡು ಹೊರಟಷ್ಟು ನಿರಾಳವಾಗಿ ಬದುಕಿನ ದಾರಿಯಲ್ಲಿಯೂ ಸಾಗಬಹುದಾ..? ನಿವೇದಿತಾಳಂತೆ ಎಲ್ಲವನ್ನು ಅಷ್ಟು ನಿರ್ಭಿಡೆಯಾಗಿ ಹೇಳಿ ಹಗುರಾಗುವುದು ಸುಲಭವಾ..? ಒಂದು ರೀತಿಯಲ್ಲಿ ಕಾಡುವ ಕಥೆ ಎಂದೆನಿಸಿತು. 


ಎಲ್ಲ ಮರೆತಿರುವಾಗ : ಎಲ್ಲವೂ ಮರೆತು ಹೋಗಿರುವಾಗ ಎಷ್ಟೋ ಬಾರಿ ನೆನಪುಗಳು ಅದೆಲ್ಲವನ್ನು ಮತ್ತೆ ಮನಸ್ಸಿನಲ್ಲಿ ಮರುಕಳಿಸುತ್ತಾ.. ನೆನಪಿಸುವಂತೆ ಕಾಣುತ್ತವೆ. ಚಿರಂತ್ ಮರತೇ ಹೋಗಿದ್ದ ತನ್ನ ಗೆಳೆಯ ಸುಧೀರನನ್ನು ನೆನೆಸಿಕೊಂಡ. ಅದಕ್ಕೊಂದು ನೆಪವಾಗಿ ಸಿಕ್ಕದ್ದು ಗಣೇಶನ ಹಬ್ಬದ ಹಾಡು, ಕುಣಿತ. ವಿಭಿನ್ನ ಮನಸ್ಥಿತಿಯ ಗಂಡ ಹೆಂಡತಿ ಇಬ್ಬರ ಭಾವನೆಗಳು ಹಾಗೂ ಕಳೆದೇ ಹೋದ ಗೆಳೆಯ ಸುಧೀರನ ನೆನಪುಗಳು ಹಾಗೂ ಪ್ರತಿಕ್ರಿಯೆಗಳು. ಇವೆಲ್ಲದಕ್ಕೂ ಚಿರಂತ್ ನ ಪ್ರತಿಕ್ರಿಯೆ ಏನಾಗಿತ್ತು..? ಕಥೆಯ ಅಂತ್ಯ ಬಹಳ ಇಷ್ಟವಾಯಿತು. 


ಹೆಂಗೆಂಗಿದ್ಯೋ  ಹಂಗಂಗೇ : ಇದು ಒಂದು ರಿಯಾಲಿಟಿ ಶೋ ಹೆಸರು. ಹಳ್ಳಿಯಲ್ಲಿ ಶುರುವಾದ ಈ ಕಾರ್ಯಕ್ರಮದ ಮೊದಲಿನ ಉದ್ದೇಶವೆಂದರೆ, ಬೆಂಗಳೂರಿನ ದೂರದ ಹಳ್ಳಿಯೊಂದರ ಮುಗ್ಧತೆಯ ಪರಿಚಯ ಮಾಡಿಕೊಡುವುದಾಗಿತ್ತು. ಆದರೆ, ಶುರುವಾದ ಕಾರ್ಯಕ್ರಮ ಟಿ.ಆರ್.ಪಿ ಯ ಹುಚ್ಚಿಗೆ ಏರಲೇಬೇಕಲ್ಲವಾ..? ಹಾಗೆಂದು, ಒಂದು ದಿನ ನಡೆದ ಜಗಳಕ್ಕೆ ಏರಿದ ಟಿ.ಆರ್.ಪಿ ಮತ್ತೆ ಅದೇ ಜಗಳಕ್ಕೆ ಏರುವುದಿಲ್ಲ. ಅದೇ ಊರಿನಲ್ಲಿದ್ದ ಮಾಧವಿಗೂ ತಾನು ಟಿವಿಯಲ್ಲಿ ಬರಬೇಕೆನ್ನುವ ಆಸೆ. ಆಕೆಯ ಗಂಡ ಪ್ರಕಾಶ್ ನಿಗೂ ಇದನ್ನೇ ಹೇಳುತ್ತಿದ್ದಳು. ಆದರೆ, ಪ್ರಕಾಶ್ ಟಿ.ವಿ ಯಲ್ಲಿ ಬಂದ ದಿನ ಮಾಧವಿಯ ಪ್ರತಿಕ್ರಿಯೆ ಏಕೆ ವ್ಯತಿರಿಕ್ತವಾಗಿತ್ತು..?? ಇದಕ್ಕೆ ಕಾರಣವೇನು..? ಎಲ್ಲವೂ ಹೆಂಗೆಂಗಿದ್ಯೋ ಹಂಗಂಗೇ ತೋರುವುದು ಅಷ್ಟು ಸುಲಭವಲ್ಲವೇನೋ.. ಆ ರಿಯಾಲಿಟಿ ಶೋ ಮುಂದಿನ ಪಾಡು ಏನಾಯಿತು ಎಂಬುದನ್ನು ತಿಳಿಯಲು ಈ ಕತೆ ಓದಿ. 


ನೀಲಿ ನಕ್ಷತ್ರ :  ಕೆಲವು ತಂದೆಯರಿಗೆ ಮಕ್ಕಳು ತಮ್ಮಂತೆಯೇ ಆಗಿ ತಮ್ಮದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಆಸೆಯಿದ್ದರೆ.. ಇನ್ನು ಕೆಲವು ಅಪ್ಪಂದಿರು, ಮಕ್ಕಳು ತಮ್ಮಂತಾಗದೆ.. ತಮಗಿಂತ ಇನ್ನೂ ದೊಡ್ಡ ಹುದ್ದೆಗೇರಿ ತಮಗೆ ಹೆಸರು ತರಲಿ ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಎಲ್ಲವೂ ಅವರವರ ವೃತ್ತಿಯ ಮೇಲೆ  ಹಾಗೂ ಅವರವರ ಆಲೋಚನೆಯ ಮೇಲೆ ಅವಲಂಬಿತ. ರಮಾಕಾಂತಗೌಡ ಎನ್ನುವ ಬ್ಲೂ ಸ್ಟಾರ್ ಸೆಕ್ಯೂರಿಟಿಯ ಕನಸುಗಳೇನು..? ಆತ ತನ್ನ ಮಗ ರಮೇಶನ ಕುರಿತು ಅವನು ಕಟ್ಟಿಕೊಂಡಿದ್ದ ಕನಸುಗಳೇನು..?? ಆ ಕನಸುಗಳನ್ನು ರಮೇಶ ಈಡೇರಿಸಿದನೇ..?? 


ಗೋಡೆಗಳ ದಾಟಿ : ಗೋಡೆಗಳನ್ನು ದಾಟಿ ಬಂದಿದ್ದ ಮಗ ಅನಿಕೇತನಿಗೆ ಆತನ ತಂದೆಯಿಂದ ಮೊದಲ ಬಾರಿಗೆ ಒಂದು ಈ-ಮೇಲ್ ಬಂದಿತ್ತು.  ಅಂತರ್ಮುಖಿ ಎನಿಸುವ ಅಪ್ಪನನ್ನು ಹೆಚ್ಚಿನ ಬಾರಿ ಅವನು ಅರ್ಥ ಮಾಡಿಕೊಂಡದ್ದು ಅವರ ಬರಹದ ಮೂಲಕವೇ.. ಈಗ ಬಂದ ಈ-ಮೇಲ್ ಅನಿಕೇತನಿಗೆ, ಆತನ ಅಪ್ಪನ ಬದುಕಿನ, ನಿರ್ಧಾರದ ಯಾವ ಮಗ್ಗುಲನ್ನು ಪರಿಚಯಿಸಿತು..? ಮತ್ತೆ ಈ ಗೋಡೆಗಳನ್ನೆಲ್ಲಾ ಕೆಡವಿ ಆತ ಮರಳಬಲ್ಲನೇ ಅಥವಾ ತನ್ನ ಸುತ್ತ ಗೋಡೆ ಕಟ್ಟಿಕೊಂಡು ಉಳಿಯಬಲ್ಲನೇ..? ಗೋಡೆಗಳನ್ನು ದಾಟಿ ಹೋಗುವುದಾದರೂ ಹೇಗೆ..?  


ಚಿಮಣಿ ಬುಡ್ಡಿ : ವಸ್ತುವೊಂದು ತನ್ನ ಮುಖಾಂತರ ತಾನು ಕಂಡದ್ದನ್ನು ನಿರೂಪಿಸುವ ಕಥೆ ಇದು. ವಿದ್ಯುತ್ ಬಂದ ಮೇಲೆ ಚಿಮಣಿ ಬುಡ್ಡಿ ಅಪ್ರಸ್ತುತವಾದರೂ.. ಭವಾನಮ್ಮ ಹಾಗೂ ರಾಮಭಟ್ಟರಿಗೆ ಅದು ಅಷ್ಟು ಅಪ್ರಸ್ತುತವಾಗಿರಲಿಲ್ಲ. ನಿರಂಜನ ಹಾಗೂ ಅವನ ತಂದೆ-ತಾಯಿಯರ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಲೇ.. ಅವರ ಬದುಕಿನ ತೀರ್ಮಾನವನ್ನು ಚಿಮಣಿ ಬಡ್ಡಿಯ ಮೂಲಕವೇ ಹೇಳಿಸುವಂತಿದೆ ಈ ಕಥೆ. 


ತಂತ್ರಜ್ಞಾನ ಹಾಗೂ ಈಗಿನ ವಾಸ್ತವ, ಭವಿಷ್ಯದ ದಿನಗಳು, ಭಾವುಕತೆ ನಿರ್ಭಿಡೆಯ ಪಾತ್ರಗಳು, ಎಲ್ಲ ಬಂಧನವನ್ನು ಕಳಚಿಟ್ಟು.. ತಾನೇ ತಾನಾಗಿ ಹಗುರಾಗಿ ನಿರ್ಧಾರ ತೆಗೆದುಕೊಳ್ಳುವಂತಹ ಬಯಲಿನಲ್ಲಿ ತೇಲುವಂತಹಾ ಪಾತ್ರಗಳು, ಒಳತುಮುಲಗಳು, ಸಂಬಂಧಗಳ ಸಂಕೀರ್ಣತೆ, ಸೂಕ್ಷ್ಮತೆ, ಮನಸ್ಸುಗಳ ನಡುವಿನ ತಾಕಲಾಟ, ತೊಳಲಾಟ ಇವೆಲ್ಲವೂ ಸೇರಿ ಈ ಕಥಾ ಸಂಕಲನವನ್ನು ಮತ್ತಷ್ಟು ಆಪ್ತವನ್ನಾಗಿಸಿದವು. ಕರ್ಕಿ ಕೃಷ್ಣಮೂರ್ತಿಯವರ ಬೆನ್ನುಡಿ , ನಾ. ಡಿಸೋಜಾ ಅವರು ಬರೆದಿರುವ ಮುನ್ನುಡಿ ಹಾಗೂ ಓ. ಎಲ್ ನಾಗಭೂಷಣ ಸ್ವಾಮಿಯವರ ತೀರ್ಪುಗಾರರ ಟಿಪ್ಪಣಿಯಿಂದ ಬಂದಿರುವ ಮಾತುಗಳು ಕಥಾ ಸಂಕಲನಕ್ಕೆ ಮತ್ತಷ್ಟು ಬೆಳಕು ಚೆಲ್ಲುತ್ತವೆ. ಅಕ್ಷಯ್ ರಿಂದ ಮತ್ತಷ್ಟು ಪುಸ್ತಕಗಳು ಹೀಗೆಯೇ ಬರುತ್ತಿರಲಿ ಎಂಬ ಹಾರೈಕೆ ನನ್ನದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ