ಭಾನುವಾರ, ಏಪ್ರಿಲ್ 12, 2026

ನನ್ನವ್ವನ ಬಯೋಗ್ರಫಿ (ಪುಸ್ತಕ ಯಾನ - 133)


ಪುಸ್ತಕದ ಶೀರ್ಷಿಕೆ : ನನ್ನವ್ವನ ಬಯೋಗ್ರಫಿ

ಲೇಖಕರು : ಜಯರಾಮಾಚಾರಿ

ಪ್ರಕಾಶಕರು : ಬಹುರೂಪಿ 

ಪ್ರಥಮ ಮುದ್ರಣ : 2022

ಪುಟಗಳು : 68

ಬೆಲೆ : 100 ರೂ.


ಬಯೋಗ್ರಫಿ ಎಂದಾಗ ತಟ್ಟನೆ ಜೀವನಚರಿತ್ರೆ ಎಂದು ಕನ್ನಡದ ಅನುವಾದ ಮಾಡಿಬಿಡಬಹುದಾದರೂ.. ಇಲ್ಲಿ ಕೇವಲ ಲೇಖಕರ ಅಮ್ಮನ ಜೀವನಗಾಥೆ ಮಾತ್ರ ಸಿಗದೆ, ಲೇಖಕರ ಭಾವನೆಗಳು, ಅವರ ಜೀವನದ ಕೆಲ ದಿನಗಳ ಚಿತ್ರಣ ಕೂಡಾ ದೊರೆಯುತ್ತದೆ.


ಈ ಪುಸ್ತಕದಲ್ಲಿ ಪಿ. ಲಂಕೇಶ್ ಅವರ 'ಅವ್ವ' ಕವಿತೆಯ


"ನನ್ನವ್ವ ಬದುಕಿದ್ದು

ಕಾಳು ಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;

ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;

ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.


ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು:

ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,

ಮನೆಯಿಂದ ಹೊಲಕ್ಕೆ ಹೋದಂತೆ

ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದ್ದಕ್ಕೆ."


ಎಂಬ ಸಾಲುಗಳ ಉಲ್ಲೇಖವಿದೆ. ಇಲ್ಲಿನ 'ಅವ್ವ' ಕೂಡಾ ಹೀಗೆಯೇ.. ಆದರೆ, ಕೊನೆಯ ದಿನಗಳ ಹೊರತಾಗಿ. ಅವರ ಕೊನೆಯ ದಿನಗಳು ತಣ್ಣಗಿರದೆ.. ಎಷ್ಟು ಯಾತನಾಭರಿತವಾಗಿದ್ದವು ಎನ್ನುವುದನ್ನು ಓದುತ್ತಾ ಕಾಡತೊಡಗುತ್ತದೆ. 


ಅಮ್ಮ ಹಾಗೂ ಅವ್ವ ಎಂದು ಕರೆಯುವಾಗಲೇ ಭಾವಗಳ ವಿಭಿನ್ನತೆ ಅನುಭವಕ್ಕೆ ಬರುತ್ತದೆ. ಆರು ಗಂಡು ಒಂದು ಹೆಣ್ಣು ಮಗುವಿನ ತಾಯಿಯಾದವರ ತಾಯ್ತನ ಹಿರಿದು. ಲೇಖಕರು ಅವರ ಕೊನೆಯ ಮಗ. ತನ್ನ ಅಕ್ಕನ ಮದುವೆಯ ಸಂದರ್ಭದಲ್ಲಿ ತನ್ನ ಅಮ್ಮ ಮೂರು ತಿಂಗಳಾದವರಾಗಿದ್ದು.. ನಾಚಿಕೆಯಿಂದ ಬಾಗಿಲಿನಿಂದ ಹೊರಕ್ಕೆ ಬರದೇ ಅಲ್ಲಿಂದಲೇ ಇಣುಕಿ ಬಂದವರನ್ನು ಮಾತನಾಡಿಸುತ್ತಿದ್ದದ್ದು. ಅವರ ತಾಯಿ ದುಡಿತದ ಜೊತೆ ಹಣ್ಣಾದದ್ದು.. ಇವರ ತಾಯಿಗೂ ಇವರಿಗೂ ವಯಸ್ಸಿನ ಅಂತರದ ಕುರಿತು ಉಳಿದವರು "ಅಜ್ಜಿಯ ಮಗ" ಎಂದು ಕರೆಯುತ್ತಿದ್ದದ್ದು..


ಕಷ್ಟ ಪಡುವ ದಿನಗಳಲ್ಲಿ ಅವ್ವ ಕಷ್ಟಪಟ್ಟ ಬಗೆ.. ದುಡಿಮೆಯ ಬಗ್ಗೆ ಅವರಿಗಿದ್ದ ಮನೋಭಾವ, ಕೂತು ತಿನ್ನದೇ ವಿವಿಧ ರೀತಿಯ ದುಡಿಮೆಗಳನ್ನು ಮಾಡಿದ ರೀತಿ, ಗಂಡನ ಸಾವಿನ ನಂತರ ಬದುಕಿದ ಪರಿ, ದೊಡ್ಡ ಮಗನಿಗೆ ಕುಡಿತಕ್ಕೆ ಪ್ರೀತಿಯಿಂದಲೇ ಕೊಡುತ್ತಿದ್ದ ಕಾಸು, ಅರ್ಥ ಮಾಡಿಕೊಂಡ ಪರಿ, ಕಿವಿ ಸರಿಯಾಗಿ ಕೇಳದೆ ಸೊಸೆಯ ಪಿಸು ಮಾತಿಗಾಗಿ ಪಟ್ಟ ಅನುಮಾನ, ಮೊಮ್ಮಗುವಿನ ಮೇಲಿನ ಪ್ರೀತಿಗೆ ಜಾತಿಯನ್ನು ಧಿಕ್ಕರಿಸಿ ಮದುವೆಯಾದ ಮಗನ ಮನೆಗೆ ಹೋಗಿದ್ದು, ಸೊಸೆಯಂದಿರ ಜೊತೆಗಿನ ಲವ್ ಹೇಟ್ ರಿಲೇಷನ್ ಶಿಪ್, ಬಂಧು-ಮಿತ್ರರ ಜೊತೆಗಿನ ಬಾಂಧವ್ಯ, ಅಣ್ಣಾವ್ರ ಮೇಲಿನ ಅಭಿಮಾನ, ಅವ್ವನ ಆಸ್ತಿಕತೆ ಇವೆಲ್ಲವೂ ಕಂಡವು.


ಅವ್ವ ಕ್ಯಾನ್ಸರ್ ನ ಕೊನೆ ಹಂತದಲ್ಲಿ ಇದ್ದಾಗಿನ ಭಾವತೀವ್ರತೆ, ಅವ್ವನ ನೋವು- ನರಳಾಟ, ಬೆಡ್ ಸೋರ್ ಆಗಿ ನರಳುತ್ತಿದ್ದಾಗಿನ ಪರಿಸ್ಥಿತಿಯಲ್ಲಿ ವಾಟರ್ ಬೆಡ್ ತಂದದ್ದು.. ಈ ನೋವಿನ ದಿನಗಳಲ್ಲಿ ಅವ್ವನನ್ನು ಕಂಡು ನನಗೆ ನೆನಪಾದದ್ದು ನನ್ನ ಅಜ್ಜಿ. ನನ್ನಪ್ಪ ಅವರನ್ನು ಕಾಳಜಿಯಿಂದ ನೋಡಿಕೊಂಡ ದಿನಗಳು. ಇಲ್ಲಿ ಕೆಲವೊಮ್ಮೆ ಅವ್ವನ ಮೇಲೆ ರೇಗಿ ಪರಿತಪಿಸಿದ ನೋವು ಗೋಚರವಾದಾಗ.. "ನಮ್ಮನ್ನು ಹೆತ್ತು ಆಡಿಸಿದ, ಬೆಳೆಸಿದ ಪೋಷಕರು ನಮ್ಮ ಮುಂದೆ ಅಸಹಾಯಕರಾಗಿ ನಿಲ್ಲುವುದು ಬದುಕಿನ ಅತ್ಯಂತ ಕೆಟ್ಟ ಕ್ಷಣ" ಎಂಬ ಸಾಲು ಕಂಡು ಈ ಸಂದರ್ಭ ಬಾರದಿರಲಿ ಎಂದು ಮನಸ್ಸು ಪ್ರಾರ್ಥಿಸಿದ್ದೂ ಹೌದು.


ಲೇಖಕರು ಮೊದಲಿಗೆ ಬಯೋಗ್ರಫಿ ಶುರು ಮಾಡಿದಾಗ ತಾವು ದೂರದಲ್ಲಿದ್ದ ಕ್ಷಣದಲ್ಲಿ ಎದುರಿಸಿದ ಅವ್ವನ ಸಾವಿನ ಸುದ್ದಿ. ಅದನ್ನು ಓದುತ್ತಲೇ ನಾನು ನನ್ನಪ್ಪನ ಸಾವಿನ ಸುದ್ದಿಯನ್ನು ದೂರದಲ್ಲಿದ್ದಾಗ ಕೇಳಿ ಆ ಕ್ಷಣಕ್ಕೆ ಬರಲಾಗದೆ, ಚಡಪಡಿಸಿದ ಕ್ಷಣಗಳು ನೆನಪಾದವು. ನಲಿವುಗಳಲ್ಲಿ ನಾವು ಮತ್ತೊಬ್ಬರನ್ನು ಸಮೀಕರಿಸಿಕೊಳ್ಳಲಾರೆವು. ನಮ್ಮ ಸಂತೋಷ-ಖುಷಿ ಅವರಿಗಿಂತ ಹೆಚ್ಚಿನದ್ದು ಎಂಬ ಭಾವವೋ ಅಥವಾ ನಮಗಿಂತ ಅವರು ಹೆಚ್ಚಿನ ಖುಷಿ ಅನುಭವಿಸುತ್ತಿದ್ದಾರೆ ಎನ್ನುವ ಭಾವವೋ ಕಾಡಬಹುದು. ನೋವುಗಳಲ್ಲಷ್ಟೇ ಅವರ ನೋವು ಹಾಗೂ ನಮ್ಮ ನೋವಿನ ತಾಕಲಾಟಗಳ ಪರಿಸ್ಥಿತಿಯನ್ನು ಸಮಪಾಲು ಮಾಡಿಕೊಳ್ಳುತ್ತೇವೆ. ಇಲ್ಲಿ ಆದದ್ದೂ ಹಾಗೆಯೇ.. 


ಇಲ್ಲಿ ಲೇಖಕರ ಎರಡನೇ ತಾಯಿಯಂತೆ ಪೋಷಿಸಿದ ಗಾಯತ್ರಿ ಮಿಸ್ ಕುರಿತು ಕೂಡಾ ಹೇಳುತ್ತಾರೆ. ವಿಚಿತ್ರ ಎಂದರೆ ಇವರ ತಾಯಿ ಸತ್ತ ಗಳಿಗೆಯಲ್ಲಿ ಗಾಯಿತ್ರಿ ಮಿಸ್ ಮಗ ಕೂಡಾ ಜಿಮ್ ಮಾಡುವ ಸಂಧರ್ಭದಲ್ಲಿ ಸತ್ತದ್ದನ್ನು ಹೇಳುತ್ತಲೇ.. "ನನಗೆ ಮಾತೃ ಶೋಕ, ಅವರಿಗೆ ಪುತ್ರ ಶೋಕ, ಮಾತೃ ಶೋಕಕ್ಕಿಂತ ದೊಡ್ಡ ನೋವು ಪುತ್ರ ಶೋಕ ಅಂತ ಅವರ ಮುಖ ನೋಡಿ ನನಗೆ ಅವತ್ತು ಗೊತ್ತಾಯ್ತು." ಎನ್ನುತ್ತಾರೆ. 

ಮತ್ತೊಬ್ಬರ ನೋವು, ಶೋಕದ ತೀವ್ರತೆ ಹೆಚ್ಚಿನದ್ದು ಎಂದಾಗ ನಮ್ಮ ನೋವು ಅವರಿಗಿಂತ ಪರವಾಗಿಲ್ಲ ಎನ್ನುವ ಭಾವನೆ ಕಾಡುವುದಲ್ಲವಾ.. ಎನ್ನಿಸಿತು. ಆದರೆ, ಅವರು ಅನುಭವಿಸಿದ ಒಂಟಿತನವನ್ನು ಹೇಳುವಾಗ "ಪ್ರೀತಿಸಿ ಜೊತೆ ಇದ್ದು ಏಕಾಏಕಿ ಅವರನ್ನು ಕಳೆದುಕೊಂಡು ಅನಿವಾರ್ಯವಾಗಿ ಬದುಕಲೇಬೇಕಾದ ಕರ್ಮ ಮನುಷ್ಯನದ್ದು, ಎಷ್ಟು ವಿಚಿತ್ರ ಅನಿಸಿತು" ಎಂಬ ಸಾಲು ಬಹುವಾಗಿ ಕಾಡಿತು.


ಖಂಡಿತವಾಗಿ ಲೇಖಕರ ಅವ್ವ ಸತ್ತಿಲ್ಲ. "ಅವ್ವನ ಬಯೋಗ್ರಫಿ" ಮೂಲಕ ಅವರು ಸದಾ ಜೀವಂತ.


ಅತಿ ಭಾವನಾತ್ಮಕವಾಗಿಲ್ಲದೇ ಇದ್ದರೂ.. ಸಮತೋಲನದಿಂದಲೇ ಲೇಖಕರು ಇದೆಲ್ಲವನ್ನೂ ಲೇಖಕರು ನಿರೂಪಿಸಿದ್ದರೂ.. ಪುಸ್ತಕ ಓದಿ ಕೆಳಗಿಡುವಾಗ ಭಾವನಾತ್ಮಕವಾಗಿ ಕಾಡುವ ಪುಸ್ತಕ ಇದು. ಹಾಗೆ ಕೊಂಚವಾದರೂ ಕಾಡದೇ ಹೋದರೆ ನಮ್ಮಲ್ಲಿ ಭಾವನೆಗಳು ಸತ್ತಿದೆ ಎಂದೇ ಅರ್ಥ. ನಾನಿರುವ ಮನಸ್ಥಿತಿಯಲ್ಲಿ ಕೊಂಚ ಹೆಚ್ಚೇ ಆವರಿಸಿ ಭಾವುಕತೆಗೊಳಪಡಿಸಿದ ಪುಸ್ತಕ ಇದು.


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ