ಮಂಗಳವಾರ, ಏಪ್ರಿಲ್ 7, 2026

ಭುಜಂಗಯ್ಯನ ದಶಾವತಾರಗಳು (ಪುಸ್ತಕ ಯಾನ - 70)


ಪುಸ್ತಕದ ಶೀರ್ಷಿಕೆ : ಭುಜಂಗಯ್ಯನ ದಶಾವತಾರಗಳು

ಲೇಖಕರು : ಶ್ರೀ ಕೃಷ್ಣ ಆಲನಹಳ್ಳಿ

ಪ್ರಕಾಶಕರು : ಐಬಿಎಚ್ ಪ್ರಕಾಶನ

ಮೊದಲನೇ ಮುದ್ರಣ : 1983

ಮೂರನೇ ಮುದ್ರಣ : 2020

ಪುಟಗಳು : 380

ಬೆಲೆ : 350 ರೂ


ಕತೆ ಮೊದಲಾಗುವುದು ಭುಜಂಗಯ್ಯನೆಂಬ ರೈತ ಮಳೆ ಹೋದ ಕಾಲದಲ್ಲಿ ತಾನೇ ಮುಂದಾಳತ್ವ ವಹಿಸಿ ಮಳೆಗಾಗಿ ತನ್ನ ಊರು ಮಾದಳ್ಳಿಯ ದೈವ 'ಹುಲಿ ಕಂತ್ಯಪ್ಪ'ನಿಗೆ 'ಪರ' ಮಾಡಿಸುವುದು. ನಂಬಿಕೆಯಿಂದ ಮಳೆ ಬರಲಾರದು ಎಂಬಂತೆ ಮಳೆ ಹುಯ್ಯಲೇ ಇಲ್ಲ. ಆಗ ಲೋಕಾರೂಢಿಯ ಮಾತಿನಲ್ಲಿ ತೊಡಗಿದ್ದಾಗ ಅಲ್ಲಿನವರ ಮಾತು ಕೇಳಿ ತಾನೂ ಹೋಟೆಲಿಡುವ ಆಲೋಚನೆ ಮಾಡುತ್ತಾನೆ ಭುಜಂಗಯ್ಯ. ಭುಜಂಗಯ್ಯನ ತಾಯಿ ದೇವಿರವ್ವ.. ಹೆಂಡತಿ ಪಾರ್ವತಿ. ಇಬ್ಬರು ಮಕ್ಕಳು. ಪಾರ್ವತಿ ಮೂರನೇ ಬಾರಿ ಗರ್ಭಿಣಿ. ಸುಂದರ ಸಂಸಾರದಲ್ಲಿ ಒಡಕು ಉಂಟಾದದ್ದು ಈ ಹೋಟೆಲಿನ ವಿಚಾರಕ್ಕೆ. ಪಾರ್ವತಿ ಒಳ್ಳೆಯವಳೇ ಆದರೂ, ಕೋಪ ಬಂದಾಗ ಮಾತ್ರ ತನ್ನ ಊರಾದ ಜಕ್ಕಳ್ಳಿಯ ನುಡಿಮುತ್ತುಗಳನ್ನು ಪುಂಖಾನುಪುಂಖವಾಗಿ ಉದುರಿಸುತ್ತಿದ್ದಳು. ಶಿವಾಚಾರದವರಾಗಿ ಎಂದರೆ ವೀರಶೈವ ಮತದವರಾಗಿ ಮತ್ತೊಬ್ಬರ ಎಂಜಲು ತೊಳೆಯುವುದು ಒಪ್ಪದ ಕೆಲಸ. ಅಲ್ಲದೆ, ಪಾರ್ವತಿಯ ತವರಿನವರು ಸಿರಿವಂತರು. ಹಾಗಾಗಿ ಅವಳ ಮಾತುಗಳು ಬಿರುಸು. ಆದರೆ, ಭುಜಂಗಯ್ಯ ಕೊಂಚ ವಿದ್ಯಾವಂತ. ಅವನಿಗೆ ಇದು ಹಿಡಿಸುತ್ತಿರಲಿಲ್ಲ. ಮಾವನ ಮನೆಯವರ ಬಳಿ ಒಂದು ಬಿಡಿಗಾಸನ್ನೂ ಕೇಳಿದವನಲ್ಲ. ಆದರೆ, ಪಾರ್ವತಿಯ ಅಪ್ಪ ಜಕ್ಕಳ್ಳಿಯ ಪರ್ವತಪ್ಪನ ಗತ್ತೇ ಬೇರೆ. ಮಗಳ ಕೋರಿಕೆಯ ಮೇರೆಗೆ ಬಂದ ಪರ್ವತಪ್ಪನ ಮಾತಿಗೂ ಭುಜಂಗಯ್ಯ ಸೊಪ್ಪಾಕದೇ ಹೋದಾಗ ಮಾವನಿಗೆ ಕೋಪ ಉಕ್ಕಿ ಬಂದು ಅಳಿಯನ ಹಿಂದಿನ ಯಾವುದೋ ವಿಚಾರಕ್ಕೆ ಏನೋ ಮಾತು ಬಂದು ವಿರಸ ಮೂಡಿತು.


ಯಾವುದಕ್ಕೂ ಜಗ್ಗದ ಭುಜಂಗಯ್ಯ ಸೇಂದಿ ಮಾರುವ ಅಜ್ಜಯ್ಯನ ಸಲಹೆಯ ಮೇರೆಗೆ, ಆತನ ಜಾಗದಲ್ಲಿ, ಆತನ ಸಹಾಯ ಪಡೆದು ವೀರಶೈವ ಫಲಾಹಾರ ಮಂದಿರವನ್ನು ಸ್ಥಾಪಿಸಿ, ಮಂಜನನ್ನು ಹೋಟೆಲಿನ ಬಾಣಸಿಗನನ್ನಾಗಿಸಿ, ಪುಟ್ಟಸ್ವಾಮಿ(ಪುಂಡ್ರಿ) ಹಾಗೂ ಕರಿಯಪ್ಪರನ್ನು ಸಹಾಯಕರನ್ನಾಗಿಸಿ ವ್ಯಾಪಾರ ಶುರು ಮಾಡಿಯೇ ಬಿಟ್ಟ. ಲಿಂಗಾಜಾಂಬ ಬಸ್ಸಿನ ಸುಬ್ಬಣ್ಣ ಹಾಗೂ ವಿಕ್ಟರ್ ದೆಸೆಯಿಂದ ಹೋಟೆಲ್ ಗೆ ಬಸ್ಸಿನ ಪ್ರಯಾಣಿಕರು ಖಾಯಂ ಆದರು. ಮೂಗು ಮುರಿದವರೆಲ್ಲರೂ ಅವನನ್ನು ಹಾಡಿ ಹೊಗಳಿದರು. ಮನೆಯಲ್ಲಿ ಅವ್ವ, ಮಕ್ಕಳು ರಾಜಿಯಾದರು. ತಾನು ದುಡಿದ ದುಡ್ಡನ್ನು ಪಾರ್ವತಿಯ ಕೈಯ್ಯಲ್ಲಿ ಕೊಡತೊಡಗಿದಾಗ ಹಾಗೂ ಮಳೆ ಬಂದಾಗ ಹೊಲಗೆಲಸವನ್ನು ನಿರ್ಲಕ್ಷ್ಯ ಮಾಡದೇ ಮಾಡತೊಡಗಿದಾಗ ಹೆಂಡತಿಗೂ ಖುಷಿಯಾಯಿತು. ಇದರಲ್ಲಿ ಮಾತ್ರವಲ್ಲದೆ ಭುಜಂಗಯ್ಯ ಎಷ್ಟೋ ವಿಚಾರಗಳಲ್ಲಿಯೂ ಪರಿಣಿತ. ಮಕ್ಕರಿ ಹೆಣೆಯುವುದು, ಬಾವಿಯಲ್ಲಿ ಈಜುವ ಹಾಗೂ ಮುಳುಗುವ ಪರಿಣಿತಿ, ಪಾಕಶಾಸ್ತ್ರ ಪ್ರವೀಣ. ಹಾವು ಹಿಡಿಯುತ್ತಿದ್ದ, ಹಾವು ಕಚ್ಚಿದವರ ವಿಷ ತೆಗೆದು ಪ್ರಾಣ ಉಳಿಸುತ್ತಿದ್ದ. ಹೀಗೆ ಒಮ್ಮೆ ಪ್ರಾಣಪ್ರಿಯರಾಗಿದ್ದ ಕರಿಗೌಡರ ಪ್ರಾಣವನ್ನೂ ಉಳಿಸುತ್ತಾನೆ. 


ಇಸ್ಪೀಟು ಚಟವೂ ಹಾಗೆಯೇ ಅಂಟಿಕೊಂಡಿತ್ತು. ಹಂಪಾಪುರದ ತಂಬೂರಿ ಅಯ್ಯನೋರು ಇಲ್ಲಿಗೆ ಬಂದಾಗಲೆಲ್ಲಾ ಹೋಟೆಲ್ ನಲ್ಲಿ ತಂಗುತ್ತಿದ್ದರು. ದೊಡ್ಡ ಮಠದ ಮಹಾ ಸ್ವಾಮಿಗಳೂ ಭುಜಂಗಯ್ಯನ ದೆಸೆಯಿಂದ ಬಂದು ಹೋದರು. ಪಾರ್ವತಿಯ ಹೆರಿಗೆ ಸುಸೂತ್ರವಾಗಿ ಆಯಿತು. ಅದಕ್ಕಾಗಿ ಜಕ್ಕಳ್ಳಿಯಿಂದ ಅವಳ ತಂಗಿ ಚಿನ್ನಮ್ಮಳು ಕೂಡಾ ಬಂದಿದ್ದಳು. ಮೂರನೇ ಮಗುವಾಗಿ ಗಂಡು ಹುಟ್ಟಿತು. 


ಜಕ್ಕಳ್ಳಿಯಲ್ಲಿ ತನ್ನ ಕುಲದವರೇ ತನ್ನ ಯಶಸ್ಸಿಗೆ ಕರುಬುತ್ತಿದ್ದಾಗ ಹಿತೈಷಿಯಾಗಿದ್ದವರು ಕರಿಗೌಡರು ಹಾಗೂ ಕಾಳವ್ವ. ಅಂತೆಯೇ ಅವರ ತಮ್ಮ ಹುಂಡಿಯಲ್ಲಿ ನೆಲೆಸಿದ್ದ ಅವರ ತಮ್ಮ ಮುದ್ದೇಗೌಡರು ಹಾಗೂ ಪುಟ್ಟಕ್ಕ. ಅವರ ಮಗ ರಾಜ. ಭುಜಂಗಯ್ಯನ ದೆಸೆಯಿಂದ ಮುಂದೆ ಮೈಸೂರಿಗೂ ಸೇರಿ ಕಾಲೇಜು ಕಲಿಯುತ್ತಾನೆ. ಮುದ್ದೇಗೌಡರ ಪ್ರಯತ್ನದಿಂದ ಕೆರೆಯ ಬಳಿ ಹೊಲ ಸಿಕ್ಕಿ ಅಲ್ಲಿಯೂ ಕೃಷಿಗೆ ತೊಡಗಿಕೊಳ್ಳುತ್ತಾನೆ. ನಾಟಕ ಮಾಡಿಸಿ ಪಾರ್ಟು ಮಾಡುತ್ತಾನೆ. ರುದ್ರಪ್ಪ ಜಾತಿಯವನೇ ಆಗಿದ್ದರೂ ಚಿತಾವಣೆ ಮಾಡುತ್ತಾ ಸದಾ ಹಲ್ಲು ಮಸೆಯುವವರ ಪೈಕಿ.


ಆದರೆ, ಇಸ್ಪೀಟಿನ ಚಟ ಅಂಟಿಕೊಳ್ಳುತ್ತದೆ. ಜೊತೆಗೆ, ಬಳೆಸೆಟ್ಟರ ಮಗಳಾದ ಸುಶೀಲಳ ಸೆಳೆತಕ್ಕೂ ಸಿಕ್ಕುತ್ತಾನೆ. ಮಲತಾಯಿಯ ಕಾಟ ತಾಳಲಾಗದೇ ಅಪ್ಪನ ಜೊತೆಗೆ ಬಳೆ ವ್ಯಾಪಾರಕ್ಕೆ ತಿರುಗುತ್ತಿದ್ದ ಸುಶೀಲ ತಂದೆಯ ಜೊತೆಗೆ ಕರಿಗೌಡರ ಜಗುಲಿಯ ಮೇಲೆ ವಾಸ್ತವ್ಯ ಹೂಡುತ್ತಿದ್ದಳು. ಆದರೆ, ಅವರ ಗುಣಕ್ಕೆ ವಿರುದ್ಧವಾಗಿದ್ದ ನಾರಾಯಣನ ದೆಸೆಯಿಂದ ಭುಜಂಗಯ್ಯನ ಹೋಟೆಲ್ ಗಟ್ಟಿಯಾಯಿತು. ನಂತರ, ಅಪ್ಪನ ವಿರೋಧದ ನಡುವೆಯೂ ಜಾತಿ ಮೀರಿ ಸುಶೀಲ ಹಾಗೂ ಭುಜಂಗಯ್ಯನ ವಿವಾಹವೂ ಆಯಿತು. 'ಇಟ್ಟುಕೊಂಡವಳು' ಎಂಬ ಪಟ್ಟದಿಂದ ಮುಕ್ತಳಾಗಲು ಅಷ್ಟು ಸುಲಭವಾಗಿ ಸಾಧ್ಯವಾಗದು. ಭುಜಂಗಯ್ಯನನ್ನು ಜಾತಿಯಿಂದಲೇ ಬಹಿಷ್ಕರಿಸಲು ನೋಡಿದಾಗ ಅವಳಿಗೆ ಲಿಂಗಧಾರಣೆ ಮಾಡಿಸಿ ತನ್ನವಳನ್ನಾಗಿ ಮಾಡಿಕೊಂಳ್ಳುತ್ತಾನೆ. ಪಾರ್ವತಿಯ ಜೊತೆಗಿನ ದಾಂಪತ್ಯ ಬೀದಿ ರಂಪವಾಗಿ, ಮಕ್ಕಳಿಗಾಗಿ ತನ್ನ ಮುಕ್ಕಾಲಂಶದ ಆಸ್ತಿಯನ್ನು ಬರೆದು ಬಿಡುತ್ತಾನೆ. ತಾಯಿಯ ಸಾವು, ಹೆಂಡತಿಯ ಅಸಡ್ಡೆ ಎಲ್ಲದರಿಂದ ಹೋಟೆಲ್ ಹಾಗೂ ಸುಶೀಲ ಇಬ್ಬರೇ ಅವನ ಪ್ರಪಂಚವೆಂಬಂತಾಗುತ್ತದೆ. ಸುಶೀಲ ಗರ್ಭಿಣಿಯಾಗುತ್ತಾಳೆ


ಈ ಖುಷಿ ಬಹಳ ಕಾಲ ನಿಲ್ಲಲಿಲ್ಲ. ಮಾದಳ್ಳಿಯ ಇಂದ್ರಭವನವೇ ಆಗಿದ್ದ ಅವನ ಹೋಟೆಲ್ ತಮ್ಮ ಕುಲದವರ ಪಿತೂರಿಯಿಂದಲೇ ಹೋಟೆಲಿನಲ್ಲಿ ಜಾತಿ ವಿಚಾರಕ್ಕೆ ಅದರಲ್ಲೂ ಹರಿಜನ ಮೇಷ್ಟ್ರು ಒಳ ಬಂದರು ಎಂಬ ವಿಚಾರವೇ ದೊಡ್ಡದಾಗಿ ಬೆಂಕಿಗಾವುತಿಯಾಯಿತು. ಕೋಟೆಯ ಪೊಲೀಸರು ಬರುವಂತಾಗುತ್ತದೆ. ಸುಶೀಲಳ ಮಗುವೂ ಸತ್ತಿತ್ತು. ಗೌಡರ ದೆಸೆಯಿಂದ ಊರಿನ ಮಧ್ಯದಲ್ಲೇ ನೆಲೆಸಿ ಬರಗಾಲದ ಸಮಯದಲ್ಲಿಯೂ ದಿನಸಿ ಅಂಗಡಿ ಇಡುತ್ತಾನೆ. ನಂತರ ಅದೂ ಕೈ ಹಿಡಿಯುವುದಿಲ್ಲ. ನಂತರ, ಕಾಂಟ್ರ್ಯಾಕ್ಟ್ ಕೂಡಾ ಮಾಡುತ್ತಿರುತ್ತಾನೆ. ಆದರೆ, ಶಿವದಾಸಿ ಮೋಸ ಮಾಡಿ ಓಡಿ ಹೋಗುತ್ತಾನೆ. ನಂತರ ಬಾವಿ ತೋಡಿಸಿ ಬೆಳೆ ಬೆಳೆಯುವಲ್ಲಿ ಸಫಲನಾಗುತ್ತಾನೆ. ನಂತರ ಗೌಡರಿಬ್ಬರ ಬಾವಿಯನ್ನೂ ತೆಗೆಸುತ್ತಾನೆ..  ಇದೇ ಅವನ ಮುಂದಿನ ಕಾಯಕವಾಗುತ್ತದೆ. ಅದರಲ್ಲಿ ಇನ್ನೇನು ಯಶಸ್ಸು ಕಾಣಬೇಕು ಎನ್ನುವಾಗ ಡೈನಮೈಟ್ ಸಿಡಿತದಿಂದ ಭುಜಂಗಯ್ಯನ ಕಣ್ಣು ಹೋಗುತ್ತದೆ.


ಬೇರೆ ಪುಟ್ಟ ಸ್ವಂತ ಮನೆ ಮಾಡಿಕೊಂಡಿದ್ದ ಭುಜಂಗಯ್ಯನ ಬದುಕು ಸುಶೀಲಳೊಂದಿಗೆ ಮುಂದೆ ಸಾಗುತ್ತದೆ. ಹೊರಗಿನ ಕಣ್ಣು ಕಳೆದುಕೊಂಡಿದ್ದವನಿಗೆ ಒಳಗಣ್ಣು ತೆರೆದಿರುತ್ತದೆ. ಸಂಸಾರಿಯಿಂದ ನಿಧಾನವಾಗಿ ಆಧ್ಯಾತ್ಮದ ಕಡೆ ಹೊರಳುತ್ತಾನೆ. ಆದರೂ ಕೆಲವು ಮೋಹಗಳನ್ನು ಕಳಚಿಕೊಳ್ಳದೇ ಇರಲಾಗುವುದಿಲ್ಲ. ಕ್ರಮೇಣ ಸುಶೀಲಳ ಬದುಕಲ್ಲಿ ನಡೆದ ಒಂದು ಘಟನೆ ಅವನ ಬದುಕನ್ನೇ ಬದಲಾಯಿಸುತ್ತದೆ. ನಾರಾಯಣನನ್ನು ಬದುಕಿಸುವ ಅವನ ದೊಡ್ಡತನ ಅವನ ಪ್ರಾಣದ ಮೇಲಿನ ಮೋಹವನ್ನೂ ತೊರೆಯುವಂತೆ ಮಾಡುತ್ತದೆ. ಇಲ್ಲಿ ವಿವರಿಸಿರುವುದು ಕೇವಲ ಕತೆಯ ಸ್ಥೂಲ ಚಿತ್ರಣವನ್ನಷ್ಟೇ. ಹೆಚ್ಚಿನ ಪಾತ್ರ ಪರಿಚಯವನ್ನೂ ಮಾಡಿಲ್ಲ. ಓದುತ್ತಾ ಹೋದಂತೆ ನಮಗೆ ದಕ್ಕುವ ಪಾತ್ರ, ಹರಹು ಅಪಾರ. ನಿಜಕ್ಕೂ ಈ ಪುಸ್ತಕದ, ಕತೆಯ ಕುರಿತು ಬರೆಯುವುದು ಎಂದರೆ ಸಮುದ್ರದಲ್ಲಿನ ಒಂದು ಹನಿಯನ್ನಷ್ಟೇ ಪರಿಚಯಿಸಿದಂತಾಗಿದೆ. ಪುಸ್ತಕ ಓದಿ ನೋಡಿ. 


ಕಾದಂಬರಿ ಕುರಿತು ಹೇಳುವುದಾದರೆ.. ಇಲ್ಲಿನ ಪಾತ್ರಗಳ ಹರಹು ವಿಸ್ತಾರ. ಭುಜಂಗಯ್ಯನ ಅವತಾರಗಳು ಅದೆಷ್ಟು.. ಸಣ್ಣ ಪುಟ್ಟ ಪಾತ್ರಗಳೂ ಕೆಲವೊಮ್ಮೆ ನೆನಪಿನಲ್ಲಿ ಉಳಿದು ಹೋಗುತ್ತವೆ. ಕೆಲವು ವಿಚಾರಗಳನ್ನು ಸೂಚ್ಯವಾಗಿ ಹೇಳಲಾಗಿದೆ. ಇದು ತಪ್ಪು.. ಭುಜಂಗಯ್ಯ ಹೀಗೆ ಮಾಡಬಾರದಿತ್ತು ಎನ್ನುವಷ್ಟರಲ್ಲಿ ಮತ್ತೆ ಅವನು ಸ್ಫೂರ್ತಿ ಎಂಬಂತಾಗುತ್ತದೆ. ಪಾತ್ರಗಳಿಗೆ ಬೇಕಾದ ಪೂರಕ ವಿಚಾರಗಳು ಕತೆ ಬೆಳೆಯುತ್ತಾ ಹೋದಂತೆ ಸೇರಿಕೊಂಡಿವೆಯೇನೋ ಎಂಬಂತಾಗುತ್ತದೆ. ಉದಾಹರಣೆಗೆ, ಭುಜಂಗಯ್ಯನ ತಂಗಿ ಹಾಗೂ ಭಾವನ ವಿಚಾರಗಳು, ಸುಶೀಲಳ ಕೌಟುಂಬಿಕ ಹಿನ್ನೆಲೆ, ಹೊಲದ ಕುರಿತು ನೀಡಿರುವ ಮಾಹಿತಿ ಹೀಗೆ.. ಒಮ್ಮೆಲೆ ಇಂಟ್ರೊಡಕ್ಷನ್ ನಂತಿಲ್ಲದೆ ಪ್ರಸಂಗಕ್ಕೆ ತಕ್ಕ ಹಾಗೆ ಬೇಕಾದ ಮಾಹಿತಿಗಳನ್ನು ಸೇರಿಸಿ ಕತೆ ಕಟ್ಟಿ ಕೊಟ್ಟಿದ್ದಾರೆ. ಇಲ್ಲಿ ಜಾತಿ, ರಾಜಕೀಯ, ಮಾನವೀಯತೆ ಎಲ್ಲವೂ ಸೇರಿವೆ. ಗ್ರಾಮೀಣ ಭಾಷೆ ಹಾಗೂ ಅಲ್ಲಲ್ಲಿನ ಮಾತುಕತೆಗಳು, ಪರಿಸರ ಎಲ್ಲವೂ ಘನವಾದ ಕಾದಂಬರಿಯಲ್ಲಿ ಮುಖ್ಯವೆನಿಸುತ್ತವೆ. ಸರಾಗವಾಗಿ ಓದಿಸಿಕೊಂಡು ಹೋದರೂ.. ಮತ್ತೊಮ್ಮೆ ಓದುವಾಗ ಬೇರೆಯದ್ದೇ ತೆರನಾಗಿ ಹದವಾಗಿ ಒಳಗಿಳಿಯುವ ಪಾತ್ರಗಳು ಎಂದೆನಿಸಿತು. 


ಭುಜಂಗಯ್ಯನೇ ಇಲ್ಲಿನ ಮುಖ್ಯ ಪಾತ್ರ. ಅವನ ಹಲವಾರು ಕೆಲಸಗಳು ಹಲವಾರು ಅವತಾರಗಳಂತೆ ಕಾಣುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಆದರೆ, ಇಲ್ಲಿ ಇಷ್ಟವಾಗಿದ್ದು ತನ್ನ ಪ್ರಯತ್ನಗಳು ಹುಸಿ ಹೋದರೂ.. ಸೋಲದೆ ಮತ್ತೆ ಮತ್ತೆ ಹೊಸ ಹೊಸ ಕೆಲಸಗಳಿಂದ, ವಿಭಿನ್ನ ರೀತಿಯಿಂದ ಅಲ್ಲಿಯ ಮಾದಳ್ಳಿ ಹಾಗೂ ಪಕ್ಕದ ಹುಂಡಿಗೂ ಹೊಸ ಸಾಹಸದ ಹರಿಕಾರನಾಗಿ ಸ್ಫೂರ್ತಿಯಾಗಿ ಜನರಿಗೆ ಕಾಣುತ್ತಿದ್ದ ಪರಿ. ರಾಜನ ಮಾತುಗಳಲ್ಲಿಯೂ ಇದನ್ನು ಕಾಣಬಹುದು. ಮನುಷ್ಯ ಬದುಕಿನಲ್ಲಿ ಸಫಲವಾಗಬೇಕಾದರೆ ಶ್ರಮ, ದೈವ ಸಂಕಲ್ಪ, ಅದೃಷ್ಟ ಎಲ್ಲವೂ ಬೇಕು. ಬಹುಶಃ, ಭುಜಂಗಯ್ಯನ ಬದುಕಿನಲ್ಲಿ ಅದೃಷ್ಟವೆಂಬುದು ಆಗಾಗ ಬಂದು ಹೋಗಿ ಮಾಡುವ ಇಣುಕಿ ಹಾಕುವ ಅತಿಥಿಯಂತೆನಿಸಿತು. ಮೊದಲಿನಿಂದಲೂ ಭುಜಂಗಯ್ಯನ ಶಿವಪೂಜೆ, ಶಿವಾಚಾರದ ಆಚರಣೆಗಳ ಕುರಿತು ಕೇಳುತ್ತಿದ್ದರೂ ಆತ ಡಂಬಾಚಾರದಿಂದ ಯಾವುದನ್ನೂ ಮಾಡಿದವನಲ್ಲ. ತಂಬೂರಿ ಅಯ್ಯನವರ ತತ್ವಪದವನ್ನು ಮನಸ್ಸಿನಿಂದ ಅರ್ಥ ಮಾಡಿಕೊಂಡವನು.. ಗಾಂಧಿಯವರನ್ನು, ಗಾಂಧಿ ತತ್ವವನ್ನು ಅರಿತವನು. ಆದರೆ, ಕೆಲವೊಮ್ಮೆ ಜಾತೀಯತೆಯನ್ನೂ ಅನುಸರಿಸಿದ್ದ ನಿದರ್ಶನಗಳು ಕಾಣುತ್ತವೆ. ತನ್ನ ಜಾತಿಯವಳಲ್ಲದ ಸುಶೀಲಳನ್ನೇ ಒಪ್ಪಿಕೊಂಡಿದ್ದಾಗ ಕಾಳಿ ಮುತ್ತುವಿನ ಹೆಂಡತಿಯ ಕೈಯ್ಯಡಿಗೆ ತಿನ್ನಬೇಡ ಎಂದು ಹೆಂಡತಿಗೆ ಹೇಳುವುದು ಬಾಲಿಶವೆನಿಸಿತು. ಅಲ್ಲದೆ, ಐಹಿಕ ಪ್ರಪಂಚದ ಆಸೆಗಳು ಇನ್ನೂ ಹೋಗಿಲ್ಲವೆನ್ನುವುದಕ್ಕೆ ಆತನ ಟೀ ಕುಡಿಯುವ ಚಟ ಬಿಡದೆ ಒದ್ದಾಡುವುದೇ ಸಾಕ್ಷಿ. ಇನ್ನು ಪೇಪರ್ ತರಿಸಿ ಲೋಕಜ್ಞಾನ ಪಡೆಯುವ ಪರಿ ಅನುಕರಣೀಯ. ಪಾರ್ವತಿ ವಿಚಾರದಲ್ಲಿ ತಾನು ಇನ್ನಷ್ಟು ತಾಳ್ಮೆಯಿಂದ ವರ್ತಿಸಬಹುದಿತ್ತು ಎನ್ನಿಸುತ್ತದೆ. ಮೊದಲಿನ ಕೋಪ ತಾಪಗಳು ಕೊನೆಗೆ ಇಲ್ಲವಾದರೂ.. ಮೊದಲೇ ಕೊಂಚ ತಾಳ್ಮೆಯಿಂದ ವರ್ತಿಸಿದ್ದರೆ ಇನ್ನೂ ದೊಡ್ದ ಮನುಷ್ಯನಾಗುತ್ತಿದ್ದನೇನೋ ಎನ್ನಿಸಿತು. ಭುಜಂಗಯ್ಯನ ಹಾಗೆ ಎಷ್ಟೋ ವಿಚಾರಗಳಲ್ಲಿ ಪ್ರಯತ್ನಿಸಿ ಸಫಲವಾಗದೆ ಮತ್ತೇನನ್ನೋ ಪ್ರಯತ್ನಿಸುವವರಲ್ಲಿ ಇರಬೇಕಾದ ನಂಬಿಕೆ, ಶ್ರಮ, ಬಲ ಇಂದಿನ ಪೀಳಿಗೆಯವರಿಗೂ ಅನುಕರಣೀಯ. ಸಣ್ಣ ಪುಟ್ಟ ವಿಫಲತೆಗೂ ಡಿಪ್ರೆಷನ್ ಗೆ ಜಾರುವವರು ಭುಜಂಗಯ್ಯನ ಜೀವನ ಪ್ರೀತಿಯಿಂದ ಕಲಿಯುವುದು ಬಹಳಷ್ಟಿದೆ. 


ಮಂಜ, ಶಿವದಾಸಿ, ಕಾಳಿಮುತ್ತು ಎಲ್ಲರೂ ಮೋಸ ಮಾಡಿದರೂ ಅವರಿಗೆ ಕೇಡು ಬಗೆಯದವನು ಭುಜಂಗಯ್ಯ. ನಾರಾಯಣ ಮುದ್ದಳ್ಳಿ ಗೌಡರ ಮಗನೇ ಆದರೂ ಅವರಿಗೆ ತದ್ವಿರುದ್ಧ. ಅವನಿಗೂ ಕೇಡು ಬಯಸದವರು ಸುಶೀಲ ಹಾಗೂ ಭುಜಂಗಯ್ಯ.


ಸುಶೀಲಳ ತಂದೆ ಬಳೆಸೆಟ್ಟರಿಗೂ.. ಪಾರ್ವತಿಯ ಅಪ್ಪ ಪರ್ವತಯ್ಯನಿಗೂ ಅದೆಷ್ಟು ವ್ಯತ್ಯಾಸ. ಮಗಳ ಬಾಯಾಳಿತನ, ದುಡುಕುತನ ರೇಜಿಗೆ ಹುಟ್ಟಿಸಿದರೂ ಮಗಳ ಮೇಲೆ ಮಮತೆಯಿಟ್ಟು ಅವಳ ಬೆನ್ನಿಗೆ ನಿಂತವರು ಪರ್ವತಪ್ಪ. ಬಳೆಸೆಟ್ಟರೂ ಮಗಳನ್ನು ಅತಿಶಯವಾಗಿ ಪ್ರೀತಿಸಿದರೂ ಭುಜಂಗಯ್ಯನನ್ನು ಮದುವೆಯಾದ ಒಂದೇ ಕಾರಣಕ್ಕೆ ಮಗಳೆನ್ನುವ ಮಮಕಾರವನ್ನೇ ತೊರೆದರು. ತಂದೆಯರಲ್ಲಿಯೂ ಅದೆಷ್ಟು ವ್ಯತ್ಯಾಸ ಎನ್ನಿಸಿತು. ಇಂಥಹಾ ತಂದೆಯರನ್ನು ಇಂದಿಗೂ ಕಾಣಬಹುದು.


ಪಾರ್ವತಿ ಗಂಡನ ಮೇಲೆ ಅತಿಶಯವಾದ ನಂಬಿಕೆ ಇಟ್ಟಿದ್ದವಳು. ಆ ಕಾಲದಲ್ಲಿ ಕೂಡಿಕೆ ಮಾಡಿಕೊಳ್ಳುವುದು ಅಂತಹಾ ತಪ್ಪಲ್ಲದಿದ್ದರೂ ಭುಜಂಗಯ್ಯ ಒಂದು ಕ್ಷಣದಲ್ಲಿ ವಿಚಲಿತನಾದನು ಎಂದು ಪರಿಗಣಿಸಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಂದಾಗಬಹುದಾಗಿತ್ತಾದರೂ.. ಆಸ್ತಿ, ಹಣ, ದರ್ಪದಿಂದ ನೆಮ್ಮದಿಯ ಜೀವನವನ್ನು ಕಳೆದುಕೊಂಡಳೇನೋ ಎನ್ನಿಸಿತು. ಆದರೂ, ಯಾವ ಪ್ರಲೋಭನೆಗೂ ಒಳಗಾಗದೇ ತನ್ನಷ್ಟಕ್ಕೆ ತಾನು ಬದುಕಿದವಳು. ಗೃಹಿಣಿಯಾಗಿ ಅವಳ ನಡೆ ತಪ್ಪಾಗಿ ಕಾಣದಿದ್ದರೂ ಆ ಕಾಲಕ್ಕೆ ಅದು ದರ್ಪ, ಹೆಚ್ಚುಗಾರಿಕೆ ಎನ್ನಿಸುತ್ತದೆ.


ಇನ್ನು ಸುಶೀಲ. ಮೊದಲಿಗೆ ನನಗೆ ಈ ಪಾತ್ರ ಅಷ್ಟು ಇಷ್ಟವಾಗಿರಲಿಲ್ಲ. ಅಪ್ಪನ ಜೊತೆಗೆ ಊರೂರು ತಿರುಗುತ್ತಾ , ಚಿಕ್ಕಮ್ಮನ ಕಾಟದಿಂದ ತಪ್ಪಿಸಿಕೊಂಡಳಾದರೂ.. ಅವಳ ಪರಿಸ್ಥಿತಿಗೆ ಪಾಪ ಎನ್ನಿಸಿದರೂ ಭುಜಂಗಯ್ಯನ ಸಂಸಾರವನ್ನು ಹಾಳು ಮಾಡಿದಳು ಎನ್ನುವ ಸಿಟ್ಟು ಇತ್ತು. ಆದರೆ, ಸುಶೀಲ ನಂತರದಲ್ಲಿ ತನ್ನ ಗುಣ, ನಡತೆಯಿಂದ ಮನಸ್ಸು ಗೆದ್ದವಳು. ಗಂಡನನ್ನು ಮಗುವಿನಂತೆ ಜೋಪಾನ ಮಾಡಿದವಳು, ಭುಜಂಗಯ್ಯನಿಗೆ ಯಾಕಾಗಿ ಒಲಿದಳು ಎನ್ನುವುದಕ್ಕಿಂತ ಒಲಿದ ನಂತರ ಮತ್ತೆ ವಿಚಲಿತಳಾಗಲಿಲ್ಲ. ತನ್ನ ದೌರ್ಭಾಗ್ಯಕ್ಕೆ ಹಳಿದುಕೊಳ್ಳಲಿಲ್ಲ. ಹಣಕ್ಕೆ ಆಸೆ ಪಡದೆ ಇದ್ದುದರಲ್ಲಿಯೇ ಅಚ್ಚುಕಟ್ಟಾಗಿ ಬದುಕು ನಡೆಸಿದವಳು. ತೂ ಎಂದವರೇ ಸೈ ಎನ್ನುವಂತೆ ಬದುಕಿದವಳು. ಒಂದು ಕ್ಷಣ ಜಾರಿದ ಮನಸ್ಸಿಗೆ ಶಪಿಸಿಕೊಂಡವಳು. ಸುಶೀಲ ಭುಜಂಗಯ್ಯನ ಬದುಕಿನ ಆದರ್ಶ ಎಂದರೂ ತಪ್ಪಾಗಲಾರದು.


ಕಾಳವ್ವ, ಪುಟ್ಟವ್ವ, ಮಲ್ಲವ್ವ ದೊಡ್ಡ ಮನಸ್ಸಿನ ಹೆಣ್ಣು ಮಕ್ಕಳು. ತನ್ನ ಹೆಸರು ಕರೆದರೆ ಪುಳಕಗೊಳ್ಳುತ್ತಿದ್ದ ಪುಂಡ್ರಿ ನವಿರಾದ ಲವಲವಿಕೆಯಿಂದ, ಶಿವ ತನ್ನ ನಿಷ್ಠೆಯಿಂದ, ರಾಜ ತನ್ನ ವಯಸ್ಸಿಗೆ ಮೀರಿದ ಬುದ್ಧಿವಂತಿಕೆ, ಗಟ್ಟಿತನದಿಂದ ಬಹಳ ಇಷ್ಟವಾದ ಪಾತ್ರಗಳು. 


ಅಕಸ್ಮಾತ್ ಸುಶೀಲಳ ಮಗು ಬದುಕಿದ್ದರೆ.. ಪಾರ್ವತಿ ಸುಶೀಲಳನ್ನು ಒಪ್ಪಿದ್ದರೆ, ಭುಜಂಗಯ್ಯನಿಗೆ ಇಬ್ಬರೂ ಹೆಗಲಾಗಿ ನಿಂತಿದ್ದರೆ ಬಹುಶಃ ಆತನ ಬದುಕೇ ಬದಲಾಗುತ್ತಿತ್ತೋ ಏನೋ.. ಆದರೆ, ಭುಜಂಗಯ್ಯನ ಕೆಟ್ಟ, ತಪ್ಪು ಕೆಲಸಗಳಿಗೆ ಆ ಜನ್ಮದಲ್ಲಿಯೇ ಶಿಕ್ಷೆ ಸಿಕ್ಕಿತು ಎಂದರೂ ತಪ್ಪಾಗಲಾರದು. ದಶಾವತಾರಗಳು ಅದೆಷ್ಟು ಪಾಠಗಳನ್ನು ಹೇಳುತ್ತವೆ. ಒಂದೊಳ್ಳೆ ಕಾದಂಬರಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ