ಪುಸ್ತಕದ ಶೀರ್ಷಿಕೆ : ಮಾಧವಿ
ಲೇಖಕರು : ಡಾ. ಅನುಪಮಾ ನಿರಂಜನ
ಪ್ರಕಾಶಕರು : ಡಿ.ವಿ.ಕೆ ಮೂರ್ತಿ ಪ್ರಕಾಶನ
ಮೊದಲನೇ ಮುದ್ರಣ : 1976
ಹದಿನೆಂಟನೇ ಮುದ್ರಣ : 2022 ( ನನ್ನ ಓದಿಗೆ ಸಿಕ್ಕಿದ್ದು )
ಪುಟಗಳು : 190
ಬೆಲೆ : 170 ರೂ.
ಮಾಧವಿ ಅನುಪಮಾ ನಿರಂಜನ ಅವರು ಬರೆದಿರುವ ಏಕೈಕ ಪೌರಾಣಿಕ ಕಾದಂಬರಿ. ಒಂದು ಕಾದಂಬರಿಯನ್ನು ಪೌರಾಣಿಕವಾಗಿ ವಿಶ್ಲೇಷಿಸುವುದು ಸುಲಭವಲ್ಲ. ಅದರಲ್ಲೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಣೆ ಮಾಡುವುದು ಸುಲಭವಂತೂ ಅಲ್ಲವೇ ಅಲ್ಲ. ಅದರಲ್ಲೂ.. ಜನರ ಮನಸ್ಸಿನಲ್ಲಿ ಪೌರಾಣಿಕ ಪಾತ್ರಗಳು ಹೀಗೆಯೇ ಎಂದು ಅಚ್ಚಾಗಿರುವಾಗ ಅದನ್ನು ಸ್ವೀಕರಿಸುವ ಮನಸ್ಥಿತಿ ಕಡಿಮೆಯೇ. ಆದರೆ, ಈ ಮಾಧವಿ ಹಲವಾರು ಪ್ರಶ್ನೆಗಳನ್ನು ಮೂಡಿಸುವುದಂತೂ ಸತ್ಯ. ಇದು ಪೌರಾಣಿಕ ಕಾದಂಬರಿಯೇ ಆದರೂ.. ಇಲ್ಲಿ ಅತಿರೇಕದ ಸಂಗತಿಗಳಿಲ್ಲ. ರಾಜ್ಯದ, ರಾಜ ಮನೆತನದ ಕತೆಯಂತೆ ಚಿತ್ರಿತವಾಗಿದೆ.
ಗಂಗಾ ಯುಮುನಾ ನದಿಯ ಸಂಗಮ ಸ್ಥಳದ ಪ್ರತಿಷ್ಠಾನ ನಗರದ ರಾಜ ಯಯಾತಿ. ಯಯಾತಿಯ ಮಗಳೇ ಮಾಧವಿ. ರಾಜಕುಮಾರಿಯಾದರೂ ರಾಜನ ತಾತ್ಸಾರದ ಕೂಸು. ಹುಟ್ಟಿದಾಗಲೇ ತೀರಿಕೊಂಡ ತಾಯಿ, ನೋಡಲೇ ಬಾರದ ಅಪ್ಪ. ಅಪ್ಪನಿಗೋ ಅಂತಃಪುರದಲ್ಲಿ ಬೇರೆ ರಾಣಿಯರು. ದೇವಯಾನಿಯಂತಹಾ ಮಹಾರಾಣಿ ಇದ್ದಾಗ ಯಯಾತಿಯಾದರೂ ತಿರುಗಿ ನೋಡಿಯಾನಾ..?? ಇಂತಹಾ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾಧವಿ ಬೆಳೆದದ್ದು 'ಅವ್ವೆ'ಯ ಸೆರಗು ಹಿಡಿದು. ಸಖಿ ಚಾರುನೇತ್ರೆಯ ಒಡನಾಟದಲ್ಲಿ.
ಸ್ವಯಂವರದ ಕನಸು ಕಾಣುತ್ತಿದ್ದವಳ ಪಾಲಿಗೆ ಮುಳ್ಳಾಗಿ ಬಂದದ್ದು. ಮುನಿಶ್ರೇಷ್ಠ ಗಾಲವ. ವಿಶ್ವಾಮಿತ್ರರ ಶಿಷ್ಯ. ವಿಶ್ವಾಮಿತ್ರರಂತಹಾ ಹಠವಾದಿಗೆ ಗುರುದಕ್ಷಿಣೆಯನ್ನು ಸಲ್ಲಿಸಲೇ ಬೇಕೆಂದು ಹಠ ಹಿಡಿದನು ಗಾಲವ. ಶಕ್ತಿ ಇದ್ದವನು ಮಾತ್ರ ಗುರುದಕ್ಷಿಣೆ ಸಲ್ಲಿಸುವುದು ಎಂದು ಹೇಳಿದರೂ ಕೇಳದೆ ಪಟ್ಟು ಹಿಡಿದವನಿಗೆ ಬುದ್ಧಿ ಕಲಿಸಬೇಕೆಂದು ಮೈಯೆಲ್ಲಾ ಬೆಳ್ಳಗಿರುವ, ಒಂದೇ ಕಿವಿ ಕಪ್ಪಾಗಿರುವ 800 ನೂರು ಕುದುರೆಗಳನ್ನು ಕೇಳುತ್ತಾನೆ. ಗುರುವಿನಷ್ಟೇ ಹಠವಾದಿಯಾದ ಶಿಷ್ಯನೂ ಹೊರಡುತ್ತಾನೆ. ಆದರೆ, ಇವರಿಬ್ಬರ ಈ ಹಠದಲ್ಲಿ ನಲುಗಿದ್ದು ಮಾಧವಿ. ಯಯಾತಿಯ ಮುಂದೆ ಯಾಚಕನಾಗಿ ನಿಲ್ಲುವ ಗಾಲವನಿಗೆ ಸಿಕ್ಕಿದ್ದು ಕುದುರೆಗಳಲ್ಲ. ಬದಲಾಗಿ, ಬೊಕ್ಕಸವೂ ಖಾಲಿಯಾಗಿದ್ದ ರಾಜ ತನಗೆ ಬೇಡದ ಮಗಳಿಗೆ ಸ್ವಯಂವರಕ್ಕೂ ಹಣವಿಲ್ಲದ ರಾಜ ಅವಳನ್ನೇ ಕೊಟ್ಟು ಬಿಡುತ್ತಾನೆ. ಮಗಳನ್ನು ಅಂತಹಾ ಕುದುರೆಯಿರುವ ಮಹಾರಾಜನಿಗೆ ಮದುವೆ ಮಾಡಿಕೊಟ್ಟು ಕನ್ಯಾಶುಲ್ಕವಾಗಿ ಕುದುರೆ ಪಡೆಯಿರಿ ಎನ್ನುವ ಕುಟಿಲೋಪಾಯವನ್ನೂ ಹೇಳುತ್ತಾನೆ.
ಮಾಧವಿಯ ಕಷ್ಟ ಪರಂಪರೆ ಅಲ್ಲಿಂದಲೇ ಆರಂಭ.
ಅಯೋಧ್ಯೆಯ ಐವತ್ತು ವರ್ಷದ ರಾಜ ಹರ್ಯಶ್ವನಿಗೆ ಮಾಧವಿಯ ಕುರಿತು ಮೋಹವಿದ್ದರೂ.. ಕನ್ಯಾಶುಲ್ಕವಾಗಿ ಕೊಡಲು ಇದ್ದದ್ದು ಕೇವಲ 200 ಕುದುರೆಗಳು. ಒಂದು ವರ್ಷ ಅರಮನೆಯಲ್ಲಿದ್ದು ವಸುಮಂತನೆಂಬ ಮಗನನ್ನು ಹೆತ್ತು ಸಖಿಯಾಗಿದ್ದ ಕನಕಾಂಬರಿ ಕೈಯ್ಯಲ್ಲಿತ್ತು, ಮಹಾರಾಣಿಗೂ ಹೇಳಿ ಮುಂದಿನ ಪಯಣಕ್ಕೆ ಸಿದ್ಧಳಾದಳು.
ನಂತರ, ಮಹಾರಾಜ ದಿವೋದಾಸನ ಬಳಿಗೆ. ಮಹಾರಾಣಿ ಸತ್ಯವತಿ ಸೇರಿದಂತೆ ಯಾವ ರಾಣಿಯರಿಗೂ ಮಕ್ಕಳಿಲ್ಲದ ಕಾರಣ ಅಶ್ವಮೇಧ ಯಾಗಕ್ಕೆ ಮುಂದಾಗಿದ್ದ. ಅಂತಹಾ ಸಂಧರ್ಭದಲ್ಲಿ ಮಾಧವಿಯನ್ನು ಸಂತಾನಕ್ಕಾಗಿ ವಿವಾಹವಾದ. ಯಜ್ಞದಲ್ಲಿ ಮುನಿಗಳು ಕೊಟ್ಟ ಪಾಯಸವನ್ನು ಮಹಾರಾಣಿ ಸತ್ಯವತಿ ಮುಕ್ಕಾಲು ಪಾಲು ಕುಡಿದರೂ ಮಕ್ಕಳಾಗದೇ ಇದ್ದಾಗ ಮಾಧವಿಗೆ ಮಗುವಾಗುತ್ತದೆ. ದಾಸಿ ಮೇಖಲೆ ಕೂಡಾ ಚಾರುನೇತ್ರೆಯ ನೆನಪು ತಂದರೂ ಮಗು ಪ್ರತರ್ದನನನ್ನು ಸತ್ಯವತಿಯೇ ಪೋಷಿಸುತ್ತಾಳೆ. ಇಲ್ಲಿಯೂ ಒಂದೇ ವರ್ಷ. ಕಾರಣ, ದಿವೋದಾಸನ ಬಳಿ ಇದ್ದದ್ದೂ 200 ಕುದುರೆಗಳಷ್ಟೇ..
ನಂತರ ಉಶೀನರ ರಾಜನ ಜೊತೆಗೆ ಒಂದು ವರ್ಷ. ಇಲ್ಲಿ ರಾಜ ಅವಳನ್ನು ಭೋಗಕ್ಕಾಗಿ ಮಾತ್ರ ಬಳಸಿಕೊಂಡನು. ಶಿಬಿ ಹುಟ್ಟಿದಾಗ ಅವನಿಗೆ ಹಿಗ್ಗೂ ಇಲ್ಲ, ಕುಗ್ಗೂ ಇಲ್ಲ. ಮಕ್ಕಳಿರುವ ಉಶೀನರನ ರಾಣಿಗೂ ಇವಳನ್ನು ಕಂಡರೆ ತಾತ್ಸಾರ. ಒಂದು ವರ್ಷದ ನಂತರ ಗಾಲವನ ಜೊತೆಗೆ ಹೊರಡುತ್ತಾಳೆ.ಉಶೀನರನ ಬಳಿಯೂ ಸಿಕ್ಕಿದ್ದು 200 ಕುದುರೆಗಳಷ್ಟೇ..
ನಂತರ, ವಿಶ್ವಾಮಿತ್ರರ ಜೊತೆಗೆ ಒಂದು ವರ್ಷ. ಕಾರಣ, ಗಾಲವ ಇನ್ನುಳಿದ 200 ಕುದುರೆಗಳ ಬದಲಾಗಿ ಮಾಧವಿಯನ್ನೇ ವಿಶ್ವಾಮಿತ್ರರಿಗೆ ಒಪ್ಪಿಸಿ ಮುನ್ನಡೆಯುತ್ತಾನೆ. 600 ಕುದುರೆಗಳ ಬದಲಾಗಿ ಮಾಧವಿಯನ್ನೇ ತನಗೊಪ್ಪಿಸಿದ್ದರೆ ಎಂದು ವಿಶ್ವಾಮಿತ್ರ ಆಡುವ ಮಾತು ಅವನ ವ್ಯಕ್ತಿತ್ವಕ್ಕೆ ಶೋಭೆ ತರಲಿಲ್ಲವೆಂಬುದು ನನ್ನ ಅನಿಸಿಕೆ. ಅಷ್ಟೇ ಅಲ್ಲ.. "ಕಾಮವನ್ನು ಬೇಕಾದ ಹಾಗೆ ಸವಿದವಳು ನೀನು. ಅದಕ್ಕೇ ನಿನಗೆ ಬಯಕೆಯಿಲ್ಲ. ಆದರೆ, ನನಗೆ ಇರೋ ಹಸಿವು ಹಲವು ವರ್ಷಗಳದ್ದು. ಅದನ್ನು ತಣಿಸದೇ ಹೋದರೆ ಹುಚ್ಚನಾಗ್ತಿನಿ" ಎನ್ನುವ ಮಾತಿನಲ್ಲಿ ಕಂಡದ್ದು ಅವನ ಕುರಿತ ಆಲೋಚನೆಯಷ್ಟೇ.. ಮಾಧವಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದವರ ಪಟ್ಟಿಯಲ್ಲಿ ಅವನೂ ಸೇರಿ ಹೋಗುತ್ತಾನೆ. ಅವಳಿಂದ ಅಷ್ಟಕನನ್ನು ಪಡೆದು ಗಾಲವನಿಗೆ ಹಿಂತಿರುಗಿಸಿ ಬಿಡುತ್ತಾನೆ.
ಮಗುವನ್ನು ಪಡೆದು ಸಾಕುವ ಅಧಿಕಾರ ಮಾಧವಿಗಿಲ್ಲ. ಅದನ್ನೇ ವಿಶ್ವಾಮಿತ್ರರ ಮಾತಲ್ಲಿ ಕೇಳುವುದಾದರೆ "ನೀನು ಬರೀ ಪಾತ್ರವಾಗಿದ್ದೋಳು. ಜೀವಕ್ಕೆ ಬೇರು ಮುಖ್ಯ. ಬೇರು ಬೆಳೆಯೋವರ್ಗೂ ಮಣ್ಣು ಬೇಕು. ಆಮೇಲೆ ಒಂದು ಮಣ್ಣಿನಿಂದ ಇನ್ನೊಂದಕ್ಕೆ ಬದಲಾಯಿಸಿದರೂ ಬೇರು ಜೀವಂತವಾಗೇ ಇರುತ್ತದೆ. ನೀನು ಬರೀ ಮಣ್ಣು. ಮಣ್ಣಿಗೆ ಚಿಗುರಿನ ಮೇಲೆ ಅಧಿಕಾರವಿಲ್ಲ..!"
ಎಂತಹಾ ನ್ಯಾಯ ವಿಶ್ವಾಮಿತ್ರನದ್ದು ಎಂದರೆ.. ಹೆರುವುದಷ್ಟೇ ಹೆಣ್ಣಿನ ಕರ್ತವ್ಯ ಎಂದು ಹೇಳಿದ ಹಾಗೆ. ಹಾಗಿದ್ದರೆ ಹೆಂಡತಿಯೇ ಹೆರಲು ಯಾಕೆ ಬೇಕು ಎನ್ನುವ ಪ್ರಶ್ನೆಯೂ ಮೂಡದೇ ಇರುವುದಿಲ್ಲ.
ಐದು ವರ್ಷಗಳ ಬಳಿಕ ನಾಲ್ಕು ಮಕ್ಕಳ ತಾಯಿ ಗಾಲವನೊಡನೆ ಮತ್ತೆ ಅರಮನೆಗೆ ಮರಳುತ್ತಾಳೆ.
ಅವ್ವೆ, ಚಾರುನೇತ್ರೆಯರು "ನೀನು ಏನೇನು ಬದಲಾಗಿಲ್ಲ, ಇದ್ದ ಹಾಗೆಯೇ ಇದ್ದೀಯ" ಎಂದಾಗ ಅವಳು ಹೇಳುವುದು "ಒಳಗೆ ಛಿದ್ರ - ಛಿದ್ರವಾಗಿದ್ದೇನೆ" ಎಂದು. ಅವಳ ಎದೆಯಾಳದ ಸಂಕಟವನ್ನು ಅರ್ಥ ಮಾಡಿಕೊಳ್ಳಲು ಇದೊಂದು ಮಾತು ಸಾಕು. ಪಶ್ಚಾತ್ತಾಪದಿಂದ ನೊಂದ ರಾಜ ಸ್ವಯಂವರವನ್ನು ಏರ್ಪಡಿಸುತ್ತಾನೆ. ಆದರೆ, ಮಾಧವಿಯ ತೀರ್ಮಾನ ..??
ಮಾಧವಿಯ ಅಂತಿಮ ತೀರ್ಮಾನವನ್ನು, ಅವಳನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಏಕೆಂದರೆ, ಅಷ್ಟು ನೈತಿಕ ಸ್ಥೈರ್ಯ ಯಾರಲ್ಲೂ ಉಳಿದಿರಲೇ ಇಲ್ಲ.
ಮಾಧವಿಯ ಪೌರಾಣಿಕ ಕತೆಗೆ ಬೇರೆ ಬೇರೆ ಅಂತ್ಯಗಳಿವೆ. ಪೌರಾಣಿಕ ಕತೆಗಳು ಹಾಗೆಯೇ ಅಲ್ಲವಾ..?? ಆದರೆ, ನ್ಯಾಯಯುತ ಎನ್ನಿಸಿದ ಅಂತ್ಯ ಇದೇ ಎಂಬುದು ನನ್ನ ಅನಿಸಿಕೆ.
ಮಾಧವಿ ನತದೃಷ್ಟೆಯಾ..?? ಅಸಹಾಯಕಳಾ..??
ಅಲ್ಲಿನ ಹೆಚ್ಚಿನ ಹೆಣ್ಣುಗಳು ಇದ್ದದ್ದೇ ಹಾಗಲ್ಲವಾ.. ತಾತ್ಸಾರದಲ್ಲೇ ಬೆಳೆದ ಮಗಳಾಗಿ, ಸೌಂದರ್ಯದಿಂದ ಮಹಾರಾಣಿಗೂ ಕಣ್ಣು ಕಿಸುರಾಗಿ ಇದ್ದವಳು ಬೆಳೆದದ್ದು ಅರಮನೆಯಲ್ಲೇ ಆದರೂ.. ದಾಸಿಯ ಮೇಲ್ವಿಚಾರಣೆಯಲ್ಲಿ. ಆದರೆ, ಅವಳ ಅಂತಃಕರಣ ಹೇಗಿತ್ತು ಎಂದರೆ.. ಚಾರುನೇತ್ರೆ ತನ್ನ ಜೊತೆಗೆ ಬರುತ್ತೇನೆ ಎಂದಾಗ ನಿರಾಕರಿಸಿ ಕಷ್ಟ ನನ್ನ ಪಾಲಿಗೆ ಮಾತ್ರವಿರಲಿ, ಸುಖವಿದ್ದಿದ್ದರೆ ಕರೆದೊಯ್ಯುತ್ತಿದ್ದೆ ಎಂದು ಹೇಳುವ ಅವಳ ಧೀಮಂತಿಕೆ ಮೆಚ್ಚುವಂತಹದ್ದು.
ಏಕಪತ್ನಿ ವ್ರತಸ್ಥ ರಾಜಕುಮಾರನನ್ನು ಬಯಸುವವಳಿಗೆ ಸಿಕ್ಕಿದ್ದು ಅಪ್ಪನ ವಯಸ್ಸಿನ ರಾಜರೇ. ಅವಳಿಗೆ ಅವರಲ್ಲೆಲ್ಲಾ ಕಂಡದ್ದು ಕಾಮ, ಮೋಹಗಳೇ ಹೊರತು ಪ್ರೀತಿಯ ಭಾವನೆಯಲ್ಲ.
ದಾಸಿ ಮೇಖಲೆ ನೂರು ವರಹಕ್ಕೆ ಮಾರಾಟವಾದರೆ, ರಾಜನ ಹೆಂಡತಿಯಾಗಿ ಈಕೆ ಮಾರಾಟವಾದದ್ದು 200 ಕುದುರೆಗಳಿಗಾಗಿ. ದಾಸಿಗೂ, ರಾಣಿಗೂ ಏನಿತ್ತು ವ್ಯತ್ಯಾಸ ? ಅಂತಸ್ತಿನ ಹೊರತಾಗಿ.
ಗಾಲವನೇನೋ ಯಯಾತಿಯ ಬಳಿ ಕುದುರೆ ಕೇಳಿದ. ಮಗಳನ್ನು ಹೇಗೂ ಸ್ವಯಂವರಕ್ಕೆ ತಯಾರು ಮಾಡುತ್ತಿದ್ದವನು ತಾನೇ ಮಗಳ ಪರವಾಗಿ ಅವಳ ಮದುವೆಯ ತಯಾರಿ ನಡೆಸಿ ಕುದುರೆಗಳನ್ನು ಕನ್ಯಾಶುಲ್ಕವಾಗಿ ಪಡೆದು ದಾನ ನೀಡದಾದನು ಏಕೆ ? ಸ್ವಯಂವರದ ಹಣ ಉಳಿಸುವ ಹುನ್ನಾರವೇ ? ಮಹಾರಾಣಿ ದೇವಯಾನಿ ಏನೇ ಹೇಳಿದರೂ ರಾಜನಾಗಿ ಎನ್ನುವುದಕ್ಕಿಂತ ಅಪ್ಪನಾಗಿ ಮಗಳ ಕುರಿತು ಆಲೋಚಿಸಬೇಕಿತ್ತು. ಅಲ್ಲವಾ..?? ಮತ್ತೆ ಅವಳು ಎದುರಿಗೆ ಬಂದಾಗ ಸ್ವಯಂವರ ಏರ್ಪಡಿಸಿದ್ದು ಮಗಳ ಮೇಲಿನ ಮಮತೆಗೆ ಎಂಬುದಕ್ಕಿಂತ ಹೆಚ್ಚಾಗಿ ಕಂಡದ್ದು ಅವಳನ್ನು ತವರಿನಿಂದ ಕಳುಹಿಸಲು ಹಾಗೂ ತಾನು ಪಾಪಪ್ರಜ್ಞೆಯಿಂದ ಮುಕ್ತನಾಗಲು.
ಯಯಾತಿಯನ್ನು ಬೇಡಲು ಬಂದಂತೆ ಬರಿಗೈಯಲ್ಲೇ ಉಳಿದ ರಾಜರನ್ನೂ ಗಾಲವ ಬೇಡಿದಿದ್ದರೆ ಅವರು ಕುದುರೆಗಳನ್ನು ಕೊಡದೇ ಉಳಿಯುತ್ತಿದ್ದರಾ..?? ತನ್ನ ಬಳಿ ಮಾಧವಿ ಇದ್ದುದಕ್ಕೇ ಅವಳನ್ನು ಸ್ವಾರ್ಥಕ್ಕೆ ಬಳಸಿಕೊಂಡನಾ ಗಾಲವ..?? ಎಂಬ ಪ್ರಶ್ನೆಯೂ ಮೂಡಿತು.
ಅಕಸ್ಮಾತ್, ಮಾಧವಿಯ ಅಮ್ಮ ಬದುಕಿದ್ದಿದ್ದರೆ ಇಂತಹಾ ಅನರ್ಥ ಸಂಭವಿಸುತ್ತಿತ್ತೇ..?? ಬಹುಶಃ ಅವಳಿಗೂ ತಡೆಯುವ ಹಕ್ಕು ಇರುತ್ತಿರಲಿಲ್ಲವೋ ಏನೋ..
ಮೊದಲ ಸಂತಾನದ ನಂತರ ಬಾಣಂತಿಯಾಗಿ ಸರಿಯಾದ ಆರೈಕೆ ಸಿಗದೆ ಮಾಧವಿ ಸತ್ತಿದ್ದರೆ ಮತ್ತೊಂದು ಹೆಣ್ಣಿಗೆ ಆ ಸ್ಥಿತಿ ಬಂದೊದಗುತ್ತಿತ್ತೇ..?
ಒಮ್ಮೆ ದಾನವಾಗಿ ಕೊಟ್ಟ ವಸ್ತುವನ್ನು ಮತ್ತೆ ಕೊಟ್ಟವರಿಗೇ ಮರಳಿಸಬಹುದಾ..?? ಅಥವಾ, ಅನುಕೂಲ ಪಡೆದುಕೊಂಡ ನಂತರ ಈ ವಸ್ತು ಉಪಯೋಗವಿಲ್ಲ ಎಂಬುದಕ್ಕೆ ಮತ್ತೆ ಮರಳಿಸುತ್ತಿದ್ದೇನೆ ಎಂಬ ಅರ್ಥವಾ..?
ವಿಶ್ವಾಮಿತ್ರರು ಹಾಗೂ ಗಾಲವನಿಗೂ ಹೋಲಿಸಿದರೆ ಗಾಲವನೇ ವಿಶ್ವಾಮಿತ್ರರಿಗಿಂತ ಪರವಾಗಿಲ್ಲ ಎನ್ನಿಸಿಬಿಡುತ್ತಾರೆ. ಕಾರಣವೆಂದರೆ, ಮಾಧವಿಯ ಮೇಲೆ ಮೋಹವಿದ್ದರೂ ತನ್ನ ಕಾಮನೆಗಳನ್ನು ತಣಿಸಿಕೊಂಡ ಗಾಲವನಿಗೂ ಕಾಮದಾಹವನ್ನು ತೀರಿಸಿಕೊಂಡ ವಿಶ್ವಾಮಿತ್ರರಿಗೂ ವ್ಯತ್ಯಾಸವಿದೆ. ಆದರೆ, ಮಾಧವಿಯ ಎಷ್ಟೋ ಪ್ರಶ್ನೆಗಳಿಗೆ ಇವರಿಬ್ಬರ ಬಳಿ ಉತ್ತರವಿರುವುದು ಅಸಾಧ್ಯ.
ನಾಲ್ಕು ಮಕ್ಕಳಿಗೆ ಜನ್ಮ ನೀಡುವ ನಿನ್ನ ಈ ಕಾರ್ಯಕ್ಕೆ ಪರಲೋಕದಲ್ಲಿ ಸದ್ಗತಿ ಸಿಗುತ್ತದೆ ಎನ್ನುವ ಗಾಲವನ ಮಾತಿಗೆ ಇಹಲೋಕದಲ್ಲಿ ಸಿಗದ ಸುಖ ಪರಲೋಕದಲ್ಲಿ ಸಿಕ್ಕು ಪ್ರಯೋಜನವಾದರೂ ಏನು ?
ಇನ್ನು ಯದು ಎನ್ನುವ ವಿಶ್ವಾಮಿತ್ರರ ಶಿಷ್ಯ ಕೇಳುವ "ಬ್ರಾಹ್ಮಣ ಅಥವಾ ಋಷಿ ಕಾಮವನ್ನು ಸಂಪೂರ್ಣವಾಗಿ ಬಿಟ್ಟು ಬದುಕುವುದು ಹೇಗೆ ? ಸೃಷ್ಟಿಯ ಮೂಲ ಕಾಮವಲ್ಲವಾ " ಎನ್ನುವ ಪ್ರಶ್ನೆಗೆ ಸಿಟ್ಟಾಗುವ ವಿಶ್ವಾಮಿತ್ರರು ಮಾಧವಿಗೆ ಉತ್ತರಿಸುವಾಗ ತನಗೆ ಬೇಕಾದಂತೆ ತಿರುಚಿದ ಉತ್ತರ ಹೇಳುತ್ತಾರೆ.
ಗಂಡಿನಲ್ಲಿ ಕಾಮ ಭಾವನೆಯನ್ನು ಅರಳಿಸಲು ಸಾಧ್ಯವಾದ ಮಾಧವಿಯ ರೂಪ ಪ್ರೇಮ ಭಾವನೆಯನ್ನು ಅರಳಿಸಲು ವಿಫಲವಾಗುವುದೇಕೆ ? ಗಂಡಿಗೆ ವಯಸ್ಸಾದರೂ ಕಡಿಮೆಯಾಗದ ಕಾಮ ಮಾಧವಿಗೆ ಇನ್ನೂ ಚಿಕ್ಕ ವಯಸ್ಸಿಗೇ ಬೇಸರ ತಂದು ಜಿಗುಪ್ಸೆ ಹುಟ್ಟಿಸಿತಾದರೂ.. ಅಕಸ್ಮಾತ್ ತಾರುಣ್ಯದ ಒಂದೇ ಗಂಡು ಸಿಕ್ಕಿ ಕನ್ಯಾಶುಲ್ಕವಾಗಿ ಒಂದೇ ಸಲಕ್ಕೆ 800 ಕುದುರೆ ಸಿಕ್ಕಿದ್ದರೆ ಅವಳ ಮನಸ್ಥಿತಿ ಹೀಗೆಯೇ ಇರುತ್ತಿತ್ತಾ..??
ಗಾಲವ ಮಾಧವಿಯನ್ನೂ, ಕುದುರೆಗಳನ್ನೂ ವಿಶ್ವಾಮಿತ್ರರಿಗೆ ಒಪ್ಪಿಸಿದ ನಂತರ ಕುದುರೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಮಾಧವಿ ತನ್ನ ಕರ್ತವ್ಯ ಮುಗಿದ ನಂತರವೂ ಮಕ್ಕಳ ಕುರಿತು ಆಲೋಚಿಸದೇ ಇರಲು ಸಾಧ್ಯವೇ..?? ಇದು ಗಂಡು ಹಾಗೂ ಹೆಣ್ಣಿನ ಆಲೋಚನೆಯ ರೀತಿಯೇ ಅಥವಾ ಕರುಳು ಸಂಬಂಧ ಹಾಗೂ ತಪಸ್ವಿಗಳ ಬದುಕಿನ ರೀತಿಯೇ..??
ಕೊನೆಯ ಸ್ವಯಂವರದಲ್ಲಿ ಎಲ್ಲರೂ ಮಾಧವಿಯನ್ನು ಅರ್ಥೈಸಿಕೊಂಡ ರೀತಿಯೇ ಬೇರೆ. ಆಕೆ ಕನ್ಯೆಯಲ್ಲ ಎಂಬುದು ತಿಳಿದರೂ ಬರುತ್ತಿದ್ದರಾ..??
ಯುದ್ಧ, ರಾಜ್ಯದಾಹ, ಪುತ್ರದಾಹ, ಕಾಮ, ಮತ್ಸರ, ತಾತ್ಸಾರ, ಅಸಹಾಯಕತೆಗಳು ಅವಳನ್ನು ಕೊನೆಯ ನಿರ್ಧಾರ ತಳೆಯುವಂತೆ ಮಾಡಿದವೋ ಅಥವಾ ವಿಶ್ವಾಮಿತ್ರರ ಆಶ್ರಮವಾಸವೋ ಎನ್ನಿಸಿದರೂ.. ಅವಳ ಬದುಕಿನಲ್ಲಿ ನಡೆದ ಪ್ರತಿಯೊಂದು ಸಣ್ಣ ಪುಟ್ಟ ಬದಲಾವಣೆಗಳು ಐದು ವರ್ಷದಲ್ಲಿಯೇ ಅದೆಂತಹಾ ಪ್ರಬುದ್ದೆಯನ್ನಾಗಿ ಮಾಡಿಬಿಟ್ಟವು. ಜೊತೆಗೆ ಅವಳನ್ನು ಹಣ್ಣು ಮಾಡಿ ಬಿಟ್ಟವು.
ಮಾಧವಿಯ ಪರಿಸ್ಥಿತಿಗೆ ಕಾರಣ ಯಾರು ? ಎಂದು ನೋಡಲು ಹೊರಟರೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತಪ್ಪಿತಸ್ಥರ ಸ್ಥಾನದಲ್ಲಿ ಕಾಣುತ್ತಾರೆ.
ಇಂದಿಗೂ ಇಂತಹಾ ಮಾಧವಿಯರು ಬೇರೆ ಬೇರೆ ರೂಪದಲ್ಲಿ ಕಾಣಬಹುದು. ಇಡಿಯಾಗಿ ಅಲ್ಲವಾದರೂ.. ಅಂತಹಾ ಕೆಲವು ಅಂಶಗಳಿಂದ. ಅಸಹಾಯಕತೆಗೆ ವೇಶ್ಯಾ ವೃತ್ತಿಗೆ ಮನೆಯವರಿಂದ ಅಥವಾ ಹತ್ತಿರದವರಿಂದಲೇ ದೂಡಲ್ಪಟ್ಟವರಲ್ಲಿ... ಲಿವಿಂಗ್ ರಿಲೇಶನ್ ಎಂಬ ಹೆಸರಿನಲ್ಲಿ ಬೇರೆ ಬೇರೆಯವರ ಜೊತೆಗೆ ಬಾಳುವವರಲ್ಲಿ.. ಬಾಡಿಗೆ ತಾಯಿ ಎಂಬ ಹಣೆ ಪಟ್ಟಿ ಹೊತ್ತು ಮಕ್ಕಳನ್ನು ಹೆತ್ತು ಕೊಟ್ಟು ಸಂಬಂಧವೇ ಇರದಂತೆ ಬಾಳುವವರಲ್ಲಿ...
ಕೇವಲ ಹೆಣ್ಣಿನ ದೃಷ್ಟಿಯಿಂದ ಮಾತ್ರ ನೋಡಿದಂತಿದೆ ಈ ಕಾದಂಬರಿ ಎಂದುಕೊಂಡರೂ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಥ ಬರಬೇಕಾದರೆ ನಲುಗಿ ಹೋದ ಸ್ತ್ರೀಯರ ದೃಷ್ಟಿಕೋನದಿಂದ ನೋಡುವುದು ಅತ್ಯವಶ್ಯಕ. ಅಂತ್ಯದ ಮಾಧವಿಯ ದಿಟ್ಟತನ ಮೊದಲೇ ಬಂದಿದ್ದರೆ..?? ಬಹುಶಃ, ಅಂತಹಾ ನಿರ್ಧಾರಕ್ಕೆ ಪ್ರಬುದ್ಧತೆ ಹಾಗೂ ಕಾಲ ಕೂಡಿ ಬರಬೇಕೇನೋ..'ಮಾಧವಿ'ಯನ್ನು ಮಾಧವಿಯ ದೃಷ್ಟಿಯಿಂದ ನೋಡಿ ಅರಿವಾಗಿಸಿಕೊಳ್ಳಬೇಕಾದರೆ ಈ ಪುಸ್ತಕ ಮಸ್ಟ್ ರೀಡ್ ಎಂಬುದು ನನ್ನ ಅಭಿಪ್ರಾಯ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ