ಪುಸ್ತಕದ ಶೀರ್ಷಿಕೆ : ತ್ರಿಕೋನ
ಲೇಖಕರು : ಡಾ || ನಾ. ಡಿಸೋಜ
ಪ್ರಕಾಶಕರು : ರವೀಂದ್ರ ಪುಸ್ತಕಾಲಯ
ಮೊದಲನೇ ಮುದ್ರಣ : 1968
ಎರಡನೇ ಮುದ್ರಣ : 2013 ( ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 136
ಬೆಲೆ : 90 ರೂ.
1968 ರಲ್ಲಿ 'ಕೆಂಪು ತ್ರಿಕೋನ' ಎಂಬ ಹೆಸರಿನಿಂದ ಪ್ರಕಟವಾಗಿದ್ದ ಕಾದಂಬರಿ ಈಗ 'ತ್ರಿಕೋನ' ಆಗಿ ಲಭ್ಯವಿದೆ. 1968 ರ ಸಮಯದಲ್ಲಿ ಕೆಂಪು ತ್ರಿಕೋನ ಎನ್ನುವುದು ಕುಟುಂಬ ಯೋಜನೆಯನ್ನು ತಲುಪಿಸಲು ಬಳಸುವ ಸಂಕೇತವಾಗಿತ್ತು.
ಇಂದಿನ ದಿನಗಳಲ್ಲಿ ಕುಟುಂಬ ಯೋಜನೆ ಎಲ್ಲರಿಗೂ ಚಿರಪರಿಚಿತ. ಆದರೂ, ಇಲ್ಲಿನ ಕತೆಗಳಲ್ಲಿ ಬರುವ ಕೆಲ ವ್ಯಕ್ತಿಗಳ ಹಾಗೆ ಅರಿವಿದ್ದರೂ ಅದನ್ನು ಪಾಲಿಸದ ಎಷ್ಟೋ ಮಂದಿ ಇಂದಿಗೂ ಇದ್ದಾರೆ. ನಮ್ಮ ಸಂಸಾರ, ನಮ್ಮ ಮಕ್ಕಳು ಎಂದು ವಾದಿಸುತ್ತಾ ಮಹಿಳೆಯನ್ನು ಹೆರುವ ಯಂತ್ರವನ್ನಾಗಿಸಿ ಅವಳ ಆರೋಗ್ಯದ ಬಗ್ಗೆ ಕನಿಷ್ಠ ನಿಗಾ ಕೂಡಾ ವಹಿಸದೆ ಸಾವಿನ ದವಡೆಗೆ ತಳ್ಳುವವರೂ ಇದ್ದಾರೆ. ಮಕ್ಕಳು ಎಂಬುದು ಅವರ ವೈಯಕ್ತಿಕ ವಿಚಾರವಾಗಿ , ವೈಯಕ್ತಿಕ ತೀರ್ಮಾನವಾಗಿದ್ದಾಗ ಕುಟುಂಬದ ಸದಸ್ಯರೇ ಸಲಹೆ ನೀಡಿದರೆ ತಪ್ಪು ಎನ್ನುವ ಸಂಧರ್ಭ ಇರುವಾಗ ಇಲ್ಲಿ ಆಸ್ಪತ್ರೆ/ ಆರೋಗ್ಯ ಇಲಾಖೆಯಿಂದ ಈ ಕುರಿತು ಅವರಿಗೆ ಆದೇಶ ನೀಡಿದರೆ ಅಥವಾ ತಿಳುವಳಿಕೆ ನೀಡಿದರೆ ಎಷ್ಟು ಜನ ತಿದ್ದಿಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತಾರೆ..? ಈ ಕಾದಂಬರಿ ಗಂಡು- ಹೆಣ್ಣಿನ ಸ್ನೇಹ- ಸಂಬಂಧದ ಜೊತೆಗೆ ಮಕ್ಕಳ ಕುರಿತು ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಂತಹಾ ಕಾದಂಬರಿಯೂ ಹೌದು. ಇಲ್ಲಿ ಎಲ್ಲಿಯೂ ನನಗೆ ಅಶ್ಲೀಲತೆ ಕಾಣಲಿಲ್ಲ. ಬದಲಾಗಿ ಜನಜಾಗೃತಿಯ ಸಂದೇಶ ಕಂಡಿತು. ಆ ದಿನಗಳಲ್ಲಿ ಈ ಕಾದಂಬರಿಯನ್ನು ತೆರೆದ ಮನಸ್ಸಿನಿಂದ ಒಪ್ಪಿದವರು ಕಡಿಮೆಯೇನೋ ಎನ್ನಿಸಿತು.
ತ್ರಿಕೋನ ಎಂಬ ಹೆಸರಿಗೆ ತಕ್ಕದಾದ ಹಾಗೆ ಮೂರು ನಿರೂಪಣೆಗಳು ಮೂಡಿ ಬಂದಿದ್ದು ಮೂರು ಜನರ ದೃಷ್ಟಿಕೋನದಿಂದ ಕತೆಯನ್ನು ಹೆಣೆದಿರುವಂತೆ ಕಾಣುತ್ತದೆ.
ಮೊದಲನೇ ಕೋನ - ಡಾಕ್ಟರ್ ಮಾಲತಿಯದ್ದು
ಡಾಕ್ಟರ್ ಮಾಲತಿ ಮೆಡಿಕಲ್ ಓದುತ್ತಿರುವಾಗ ಇದ್ದ ಹಾಸ್ಟೆಲ್ ನ ಪಕ್ಕದ ಕೋಣೆಯಲ್ಲಿ ಇದ್ದದ್ದು ನಿರ್ಮಲ. ಆಕೆ, ಎಂಟು ವರ್ಷಗಳಿಂದ ಮೆಡಿಕಲ್ ಓದುತ್ತಿದ್ದರೂ ಇನ್ನೂ ಆಕೆಯ ಓದು ಇದ್ದೇ ಇತ್ತು. ನಿರ್ಮಲಾ ತಂದೆ ಕಡೂರಿನಲ್ಲಿ ದೊಡ್ಡ ವ್ಯಾಪಾರಿಯಾಗಿದ್ದವರು. ಮಗಳು ಡಾಕ್ಟರ್ ಆಗಬೇಕೆಂಬುದು ಅವರ ಆಸೆ. ಒಂದೆರಡು ವರ್ಷ ಲೇಟಾದರೂ ತಡವಿಲ್ಲ ಎಂಬ ಮನಸ್ಥಿತಿಯವರು. ಆದರೆ, ನಿರ್ಮಲ ಒಂದೆರಡಲ್ಲ.. ಮೂರ್ನಾಲ್ಕು ವರ್ಷ ಹೆಚ್ಚಾದರೂ ತೊಂದರೆಯಿಲ್ಲ ಎನ್ನುವ ಮನಸ್ಥಿತಿಯವಳು. ಮಾಲತಿ ನಿರ್ಮಲಾ ಕುರಿತು ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದರೂ.. ಒಂದು ದಿನ ನಿರ್ಮಲಾಳ ಮೇಲೆ ನಡೆದ ಅತ್ಯಾಚಾರ ಅವಳನ್ನು ತಲ್ಲಣವಾಗುವಂತೆ ಮಾಡಿಬಿಡುತ್ತದೆ.
ಅತ್ಯಾಚಾರ ನಡೆದ ನಿರ್ಮಲಾ ಅಷ್ಟು ತಲೆ ಕೆಡಿಸಿಕೊಳ್ಳದಿದ್ದರೂ.. ಅವಳ ಸ್ಥಿತಿ ಮಾಲತಿ ಕಣ್ಣಲ್ಲಿ ಹಾಗೆಯೇ ಉಳಿದು ಬಿಡುತ್ತದೆ. ಡಾಕ್ಟರ್ ಆಗುವವರಿಗೆ ದೇಹದ ಭಾಗಗಳು ಅಥವಾ ಇಂತಹಾ ಘಟನೆಗಳು ಹೊಸತಲ್ಲವಾದರೂ.. ಒಂದು ರೀತಿಯ ಅಸಹ್ಯ ಮೂಡಿದ್ದಂತೂ ಹೌದೇ.. ಈ ಕಾರಣಕ್ಕೆ ಮದುವೆಗೆ ಹಿಂಜರಿದರೂ ಮುಂದೆ ಆ ಆಲೋಚನೆ ಬದಲಾಗುವ ದಿನಗಳೂ ಬರುತ್ತವೆ.
ಚಂದ್ರನಮನೆ ಶಾಮರಾಯರು ಮಾಲಾಳ ತಂದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಮಾಣಿಕವಾಗಿ ಹೋರಾಡಿ ಜೀವ ತೇಯ್ದವರಲ್ಲಿ ಅವರೂ ಒಬ್ಬರು. ಆದರೆ, ಸ್ವಾತಂತ್ರ್ಯ ಸಿಕ್ಕ ನಂತರ ಭ್ರಮ ನಿರಸನವಾಗಿತ್ತು. ಇತ್ತ ಅದೇ ಕಾರಣಕ್ಕೆ ಹೆಂಡತಿ ಸೀತಾಗೆ ಮನೆಯ ಜವಾಬ್ದಾರಿ ಹೇರಿ ಹೋಗಿದ್ದರು. ಆದರೆ, ಮಗಳು ಹುಟ್ಟಿದ ನಂತರ ಹೆಂಡತಿ ತೀರಿ ಹೋಗಿದ್ದರು. ಈಗ ಮಗಳ ಮೂಲಕ ಜನಸೇವೆ ಮಾಡಿಸುವ ಆಸೆ ಅವರದ್ದು. ಹೀಗೆ ಮಾಲಾ ತಂದೆಯ ಆಶಯದಂತೆ ಡಾಕ್ಟರ್ ಮಾಲಾ ಆದಳು. ಸರಳ, ಸೌಜನ್ಯಯುತ ವ್ಯಕ್ತಿತ್ವದ ಮಾಲ ತಂದೆಗೆ ತಕ್ಕ ಮಗಳು. ಮಗಳು ಡಾಕ್ಟರ್ ಆದ ನಂತರ ತಂದೆಗೆ ಅವಳ ಮದುವೆಯ ಆಲೋಚನೆ. ಅವರು ಕೆಲಸ ಮಾಡುತ್ತಿದ್ದ ಪ್ರೆಸ್ ನ ಮಾಲೀಕರಾದ ಗೋಪಾಲರಾಯರು ತಮ್ಮ ಮಗ ಡಾಕ್ಟರ್ ಚಂದ್ರು ಕುರಿತು ಹೇಳಿದಾಗ ಅದನ್ನು ಮಗಳ ಕಿವಿಗೆ ಹಾಕಿದರು.
ನಿರ್ಮಲಾಳ ವಿಚಾರದಿಂದ ಮದುವೆಯ ಕುರಿತು ಅಷ್ಟಾಗಿ ಆಸಕ್ತಿ ತೋರದ ಮಾಲ ಚಂದ್ರುವಿನ ಜೊತೆಗೆ ಮೊದಲು ಒರಟಾಗಿ ನಡೆದುಕೊಂಡರೂ ನಂತರದಲ್ಲಿ ಮೃದುವಾದಳು. ಅವಳ ಮನಸ್ಸಲ್ಲಿ ಪ್ರೀತಿಯ ವಸಂತ ಅರಳಿತ್ತು. ಇನ್ನೇನು ಮದುವೆಯ ತೀರ್ಮಾನವೂ ಆಯಿತು ಎನ್ನುವಷ್ಟರಲ್ಲಿ ಅವಳು ಚಂದ್ರುವನ್ನು ಮದುವೆಯಾಗಲಿಲ್ಲ. ಕಾರಣ ನೀವೇ ಓದಿ ತಿಳಿಯಿರಿ.
ಆಸ್ಪತ್ರೆಯಲ್ಲಿ ಕೆಲಸದ ಸಮಯದಲ್ಲಿ ಒಡನಾಡಿದ ಸಿಸ್ಟರ್ ತೆರೇಜಾ ಇನ್ನೊಂದು ರೀತಿಯಲ್ಲಿ ಮಾಲಾಳ ಮೇಲೆ ಪರಿಣಾಮ ಬೀರಿದ್ದಳು. ಮದುವೆಯಾಗದೇ ಉಳಿದು ಜನಸೇವೆ ಮಾಡುತ್ತಿದ್ದ ನಿಸ್ವಾರ್ಥತೆಯಿಂದ. ಧರ್ಮಗಳ ಆಚೆಗೂ ಆಲೋಚನೆ, ಪರಿಸ್ಥಿತಿ ಇಬ್ಬರನ್ನೂ ಸ್ನೇಹ ಸಂಕೋಲೆಯಲ್ಲಿ ಬೆಸೆದಿತ್ತು.
ಎರಡನೇ ಕೋನ : ಕಾಂಪೌಂಡರ್ ಅಂತೋನಿಯದ್ದು
ಮೈಸೂರಿನಲ್ಲಿ ಹೌಸ್ ಸರ್ಜನ್ ಆಗಿದ್ದ ಮಾಲ ಅಪ್ಪನ ಜೊತೆಗೆ ಇರುವ ಹಾಗೂ ಹುಟ್ಟೂರಿನಲ್ಲಿನಲ್ಲಿ ಸೇವೆ ಸಲ್ಲಿಸುವ ಆಸೆಯಿಂದ ಊರಿಗೆ ಬಂದಳು. ಅಲ್ಲಿಯ ಆಸ್ಪತ್ರೆಗೆ ಕಾಂಪೌಂಡರ್ ಅಂತೋನಿ. ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದಾಗ ರಹೀಮನ ಜೊತೆ ಸೇರಿ ಔಷಧಿ ಕೊಡುತ್ತಿದ್ದ. ಅಂತೋನಿಯ ಹೆಂಡತಿ ಜೆಲ್ಲಿಬಾಯಿ ಈಗ ಎಂಟನೇ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು. ಆಸ್ಪತ್ರೆಯ ಕಾಂಪೌಂಡರ್ ಆಗಿದ್ದವನ ಮನೆಯಲ್ಲಿಯೇ ಈ ಪರಿಸ್ಥಿತಿ ಎಂದರೆ ಆಗಿನ ಕಾಲದ ಉಳಿದವರ ಪರಿಸ್ಥಿತಿ ಹಾಗೂ ಕುಟುಂಬ ಯೋಜನೆ ಹೇಗಿತ್ತು ಎಂಬುದರ ಊಹೆ ನಮಗೆ ಸಿಗುತ್ತದೆ. ಕಾಂಪೌಂಡರ್ ಅಂತೋನಿ ಅಷ್ಟು ಮುಖ್ಯ ಪಾತ್ರವಾ.. ಅವನ ಕೋನದಿಂದ ಕತೆ ಹೇಳಿದರೆ.. ಎಂದು ಆಲೋಚಿಸುತ್ತಲೇ ಕತೆಯನ್ನು ಓದುತ್ತಾ ಓದೆ. ಆದರೆ, ಕಾಂಪೌಂಡರ್ ಅಂತೋನಿಯ ಕೋನವೂ ಯಾಕಿಷ್ಟು ಮುಖ್ಯ ಎಂದು ಅರಿವಾಯಿತು.
ಊರಿಗೆ ಬಂದು ಕೆಲಸಕ್ಕೆ ಸೇರಿದ ಮಾಲಳಿಗೆ ಮೊದಮೊದಲು ಉಂಟಾದದ್ದು ಅನಾನುಕೂಲವೇ. ಸ್ನೋ - ಸೆಂಟು ಮೆತ್ತಿಕೊಳ್ಳದ, ಬಂಗಾರದ ಆಡಂಬರವಿಲ್ಲದ, ಅಗ್ಗದ ಸೀರೆಯ ಡಾಕ್ಟರ್ ಕುರಿತು ತಾತ್ಸಾರದಿಂದ ಇದ್ದವರು ಬದಲಾದದ್ದು ಆಕೆಯ ಸೇವೆ ನೋಡಿ. ಡಾಕ್ಟರ್ ನಂಜುಂಡಯ್ಯ, ನರ್ಸ್ ಪಾರ್ವತಿ, ಕಾಂಪೌಂಡರ್ ಅಂತೋನಿ, ಆತನ ಅಸಿಸ್ಟೆಂಟ್ ರಹೀಮ ಇದ್ದರೂ ಜನರು ಇಲ್ಲಿಗೆ ಬರುತ್ತಿದ್ದದ್ದು ಸಣ್ಣ ಪುಟ್ಟ ಖಾಯಿಲೆಗೆ ಅಷ್ಟೇ.. ಪ್ರೈವೇಟ್ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದವು. ಕಾಂಪೌಂಡರ್ ಅಂತೋನಿ ಕೊಡುತ್ತಿದ್ದ ಔಷಧಿಯಿಂದ ಮೇಲು ಸಂಪಾದನೆಯಾಗಿ ತೃಪ್ತಿಯಿಂದಿದ್ದ. ಆಸ್ಪತ್ರೆಯ ಅರ್ಧ ಸಮಯ ಮನೆಯಲ್ಲೇ ಇರುತ್ತಿದ್ದ. ಈಗ ಎಲ್ಲವೂ ಬದಲಾಗಿತ್ತು. ತುಂಬಿ ತುಳುಕುತ್ತಿದ್ದ ಆಸ್ಪತ್ರೆ, ಮಾಲತಿ ಮನೆಗೆ ಹೋಗುತ್ತಿದ್ದದ್ದೂ ಲೇಟಾಗಿ.
ಜೆಲ್ಲಿಬಾಯಿಯ ಎಂಟನೇ ಹೆರಿಗೆಯಾದದ್ದು ಮಾಲ ಕೃಪೆಯಿಂದ. ಮಗು ಸತ್ತು ಅವಳು ಮತ್ತೆ ಹುಟ್ಟಿ ಬಂದಂತಾಗಿತ್ತು. ಅವಳಿಗೆ ಹಾಗೂ ಅಂತೋನಿಗೆ ಕುಟುಂಬ ಯೋಜನೆ ಕುರಿತು ಮಾಲ ತಿಳಿ ಹೇಳಿದ್ದಳು. ಆದರೆ, ಮಕ್ಕಳ ವಿಚಾರದಲ್ಲಿ ಮತ್ತೊಬ್ಬರ ಕೈ ಹಾಕುವಿಕೆ ಸಹ್ಯವಾ.. ಆರೋಗ್ಯ ಇಲಾಖೆಯಲ್ಲಿದ್ದರೂ.. ಅಷ್ಟು ಬುದ್ಧಿಮಾತು ಅಂತೋನಿಗೆ ಸಹ್ಯವಾಗದ್ದು ಯಾಕೆ ? ಬಹುಶಃ, ಅವನ ಜಾಗದಲ್ಲಿ ಬೇರೆ ಧರ್ಮದವರಿದ್ದಿದ್ದರೆ ಎಂಬ ಆಲೋಚನೆ ಬಂದಿತಾದರೂ.. ಮನುಷ್ಯನ ನಡವಳಿಕೆಗಳಿಗೆ ಧರ್ಮವನ್ನು ಗುರಾಣಿ ಮಾಡಿಕೊಳ್ಳುತ್ತಾರೆ ಅಷ್ಟೇ.. ಎಂದೂ ಅನ್ನಿಸಿತು. ಕಾಂಪೌಂಡರ್ ಅಂತೋನಿ ಅದಕ್ಕೆ ಒಪ್ಪಿದನೇ ? ಜೆಲ್ಲಿಬಾಯಿಯ ಪ್ರತಿಕ್ರಿಯೆ ಏನಿತ್ತು ? ಅಂತೋನಿಯ ಕೋನ ಓದಿ ತಿಳಿಯಿರಿ.
ಮೂರನೇ ಕೋನ : ಡಾಕ್ಟರ್ ವಿನೋದ್ ರದ್ದು
ಸಮಯ ಸರಿದಂತೆ ನಂಜುಂಡಯ್ಯನ ಜಾಗಕ್ಕೆ ಮಾಲತಿ ಬಂದಿದ್ದಳು. ಈಗ ಅವಳ ಜಾಗ ತುಂಬಿದ್ದು ಡಾಕ್ಟರ್ ವಿನೋದ್. ನಂಜುಂಡಯ್ಯನಿಗೆ ಮಾಲತಿಯ ಬಳಿಗೆ ಬರುವ ರೋಗಿಗಳು ಹಾಗೂ ಅವಳ ಪ್ರಖ್ಯಾತಿ ಕಂಡು ಈರ್ಷೆ ಮೂಡಿದ್ದರೆ, ವಿನೋದ್ ಬಂದ ಹೊಸತರಲ್ಲಿ ಹೆಂಗಸಿನ ಕೈ ಕೆಳಗೆ ಕೆಲಸ ಮಾಡಬೇಕಲ್ಲ ಎನ್ನುವ ಮನೋಭಾವವಿತ್ತು. ಆದರೆ, ನಂತರದ ದಿನಗಳಲ್ಲಿ ಅದು ಬದಲಾಯಿತು. ಮಾಲ ತಂದೆ ಅದಾಗಲೇ ತೀರಿ ಹೋಗಿದ್ದರು. ವಿನೋದ್ ಗೆ ಮೊದಮೊದಲು ತನ್ನ ಬಳಿ ರೋಗಿಗಳು ಬರದ್ದನ್ನು ಕಂಡು ಪಿಚ್ಚೆನಿಸಿದರೂ.. ಮಾಲತಿಯಂತೆಯೇ ಸೇವಾ ಮನೋಭಾವ ರೂಢಿಸಿಕೊಂಡನು. ಆತನ ಹೆಂಡತಿ ರಾಣಿ ಹಾಗೂ ಒಂದು ವರ್ಷದ ಮಗು ಕೂಡಾ ಬಂದ ನಂತರ ಮಾಲ ಪಕ್ಕದ ಕ್ವಾರ್ಟಸ್ ನಲ್ಲಿಯೇ ನೆಲೆಯದರು. ಉತ್ತಮ ನೆರೆಯವರೂ ಆದರು.
ವಿನೋದ್ ಬಳಿಗೂ ರೋಗಿಗಳು ಹೋಗತೊಡಗಿದಾಗ ಮಾಲಳಿಗೆ ಕೊಂಚ ವಿರಾಮ ದೊರೆತು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಯಿತು. ಕುಟುಂಬ ಯೋಜನೆ ಕುರಿತು ಸೆಮಿನಾರುಗಳಲ್ಲಿ ಭಾಗವಹಿಸಿದಳು. ಜನ ಜಾಗೃತಿ ಮೂಡಿಸತೊಡಗಿದಳು. ಆದರೆ, ಸೆಮಿನಾರಿನಲ್ಲಿ ಅವಳಿಗೆ ತಿಳಿದು ಬಂದದ್ದು ಅದೆಷ್ಟು ತಪ್ಪು ಅಂಕಿ- ಅಂಶಗಳನ್ನು ತೋರಿಸಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತೆ ಮಾಡುತ್ತಾರೆ ಎನ್ನುವುದು.
ಇಲ್ಲಿ ಬರುವ ನರ್ಸ್ ಸಾವಿತ್ರಿಯ ಸಮಸ್ಯೆ ಎಲ್ಲಕ್ಕಿಂತಲೂ ಭಿನ್ನವಾಗಿ ಕಂಡಿತು. ಮದುವೆಯಾಗಬೇಕಾದರೆ ಕೆಲಸ ಬಿಡಬೇಕೆಂಬ ಷರತ್ತು ಹಾಕಿದ್ದ ನಟರಾಜ. ಅವನನ್ನು ಮದುವೆಯಾದ ನಂತರ ಇಲ್ಲದ ಅನುಮಾನಗಳು, ಇಲ್ಲದ ವರ್ತನೆಗಳು ಅವಳನ್ನು ಅದೆಷ್ಟು ಹಣ್ಣು ಮಾಡಿದವು. ಮಕ್ಕಳೇ ಬೇಡವೆಂಬ ಅವನ ವರ್ತನೆಗೆ ನೀಡುವ ಕಾರಣವಂತೂ ಅವನ ಕುರಿತು ಅಸಹ್ಯ ಹುಟ್ಟಿಸುವಂತಿದೆ. ಸಾವಿತ್ರಿಯ ನಡೆ ಏನು ? ಆದರೂ, ಸಾವಿತ್ರಿಯ ನಡೆ ಹೆಣ್ಣು ಮಕ್ಕಳಿಗೆ ಮಾದರಿ ಎನ್ನಿಸಿತು.
ಈ ನಡುವೆ ನಿರ್ಮಲಾ ಸಿಕ್ಕಿದ್ದಳು. ಸಂಪೂರ್ಣ ಬದಲಾದ ಅವಳ ಬದುಕು ಕಂಡಾಗ.. ವಿನೋದ್ ಸಂಸಾರ ಕಂಡಾಗ .. ಅದರಲ್ಲೂ ಮಗುವನ್ನು ಕಂಡಾಗ ಮಾಲತಿಯ ಮನದಲ್ಲೂ ಸಂಸಾರಿಯಾಗುವ ಸುಪ್ತ ಆಸೆ ಗರಿಗೆದರಿತ್ತು. ಅವಳ ಮದುವೆಗೆ ವಯಸ್ಸು ಮೀರಿರಲಿಲ್ಲ. ಅದರ ಹೊಣೆ ಹೊರುವವರು ಯಾರೂ ಇರಲಿಲ್ಲ. ಅದೇ ಸಮಯದಲ್ಲಿ ವಿನೋದ್ ಗೆಳೆಯ ಸುಕುಮಾರ್ ಪರಿಚಯವಾಗುತ್ತದೆ. ಸುಕುಮಾರನ ಮದುವೆಯಾಗದ ಕಾರಣ ತಿಳಿದು ಮಾಲಾಳ ಪ್ರತಿಕ್ರಿಯೆ ಏನಿತ್ತು ? ಓದಿ ನೋಡಿ.
ಇದು ನಾನು ಓದಿದ ನಾ. ಡಿಸೋಜರ ಎರಡನೇ ಕಾದಂಬರಿ. ಮೊದಲನೆಯದ್ದು 'ದ್ವೀಪ'. ನನಗನ್ನಿಸಿದ್ದು.. ಈ ಕಾದಂಬರಿಗಳು ದೀರ್ಘ ಕಥಾನಕ ಎಂದೇನೂ ಅನ್ನಿಸದಿದ್ದರೂ... ಹೇಳುವುದನ್ನು ಚುಟುಕಾಗಿ ಹೇಳುವಂತಹಾ ಶೈಲಿ. ಅಂತ್ಯವನ್ನು ಇನ್ನೂ ಮುಂದುವರಿಸುವ ಸಾಧ್ಯತೆಯಿದ್ದರೂ.. ಬೇರೆಯದ್ದೇ ಶೈಲಿಯ ಅಂತ್ಯ ಓದುಗರನ್ನು ಮತ್ತಷ್ಟು ಆಲೋಚನೆಯ ಒರೆಗೆ ಹಚ್ಚುತ್ತದೇನೋ ಎನ್ನಿಸಿತು.
ಇಲ್ಲಿ ಆರೋಗ್ಯ ಇಲಾಖೆಯ ಅದರಲ್ಲೂ ಸರ್ಕಾರಿ ಆಸ್ಪತ್ರೆಯ ಚಿತ್ರಣವಿದೆ. ಆಗಿನ ಕಾಲದಲ್ಲಿ ನಡೆದಿರುವ, ಈಗಿನ ಕೆಲವರ ಲೂಸ್ ಟಾಕ್ ಗಳ ಹಾಗೆ ಡಾಕ್ಟರ್ ಹಾಗೂ ನರ್ಸ್ ಗಳ ಚಿತ್ರಣವಿದೆ. ಅದಕ್ಕೆ ಅಪವಾದ ಎನ್ನಿಸುವಂತಹಾ ಜನರೂ ಇದ್ದಾರೆ. ಸಿಸ್ಟರ್ ತೆರೇಜಾ ಹಾಗೂ ಸಿಸ್ಟರ್ ವೆರೋನಿಕಾ ಪಾತ್ರಗಳು ವೈರುಧ್ಯವೆನ್ನಿಸಿದರೂ ಅವರವರ ನಡುವಿನ ಸ್ಪಷ್ಟ ವ್ಯತ್ಯಾಸ ತಿಳಿಯುತ್ತದೆ. ಪ್ರಾಮಾಣಿಕತೆ, ಸ್ವಾತಂತ್ರ್ಯದ ಜೊತೆಗೆ ಬದಲಾವಣೆ ಕೂಡಾ ಇದೆ. ಬದಲಾವಣೆಯ ಗಾಳಿಯಲ್ಲಿ ಬದಲಾಯಿಸಲೇ ಬೇಕೆಂಬ ಹಠ ತೊಡದೆ ತನ್ನ ಕಾರ್ಯವನ್ನು ಮಾತ್ರ ಮಾಡಿಕೊಂಡು ಹೋಗುವ ಡಾಕ್ಟರ್ ಮಾಲತಿ ಬೇರೆಯದ್ದೇ ಸಾಲಿನಲ್ಲಿ ನಿಲ್ಲುತ್ತಾಳೆ.
ಮಕ್ಕಳು ಬದುಕಿನಲ್ಲಿ ಎಷ್ಟು ಮುಖ್ಯ ಎಂಬಂತೆ, ಎಷ್ಟು ಮಕ್ಕಳು ಮುಖ್ಯ ಎಂಬುದೂ ಒಂದು ಕುಟುಂಬದ ಮುಖ್ಯ ನಿರ್ಧಾರವಾಗಬೇಕು. ಮಗುವಿಗೆ ಉತ್ತಮ ಭವಿಷ್ಯ ನೀಡುವಲ್ಲಿ ಕೇವಲ ಕುಟುಂಬ ಮಾತ್ರವಲ್ಲ ಸಮಾಜದ ಪಾತ್ರವೂ ಇರುತ್ತದೆ. ಹಾಗಾದಾಗ, ಕುಟುಂಬದ ವಿಷಯದಲ್ಲಿ ಆರೋಗ್ಯ ಇಲಾಖೆಯ ಸಲಹೆ ತಪ್ಪೆನ್ನಿಸುವುದಿಲ್ಲ. ಅಲ್ಲದೇ, ದಾರಿ ತಪ್ಪಿಸುವವರ ನಡುವೆ ದಾರಿ ತೋರುವವರು ಕೂಡಾ ಮುಖ್ಯ. ಯಾರು ಯಾವ ಪಾತ್ರ ವಹಿಸುತ್ತಿದ್ದಾರೆ ಎನ್ನುವ ಅಂಶವನ್ನು ಬೆಳಕಿಗೆ ತಂದಂತಹಾ ಚಿತ್ರಣ ಇಲ್ಲಿದೆ. ಇಂತಹಾ ಕಾದಂಬರಿ ಹೇಳಬೇಕಾದದ್ದನ್ನು ಸುಸ್ಪಷ್ಟವಾಗಿ ತಲುಪಿಸುತ್ತದೆ. ಅಷ್ಟೇ ಅಲ್ಲದೆ, ಸ್ವೇಚ್ಛೆ, ಸ್ವಾತಂತ್ರ್ಯದ ನಡುವೆ ಸಂಸಾರದ ಮಹತ್ವವನ್ನೂ ಹೇಳುವಂತಿದೆ. ಸರಾಗ ಓದು ಆದರೆ ಆಲೋಚನೆ ಮೂಡಿಸುವ ವಿಚಾರ ಸರಳವಂತೂ ಅಲ್ಲವೇ ಅಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ