ಮಂಗಳವಾರ, ಏಪ್ರಿಲ್ 7, 2026

ನಂಜಾದ ನೆನಪು (ಪುಸ್ತಕ ಯಾನ - 72)


ಪುಸ್ತಕದ ಶೀರ್ಷಿಕೆ : ನಂಜಾದ ನೆನಪು 

ಲೇಖಕರು : ಚಿತ್ರಲೇಖ 

ಪ್ರಕಾಶಕರು : ಸುಧಾ ಶಿಶು ಸಾಹಿತ್ಯ ಮಾಲೆ 

ಮೊದಲನೇ ಮುದ್ರಣ : 1987

ದ್ವಿತೀಯ ಮುದ್ರಣ : 2009 ( ನನ್ನ ಓದಿಗೆ ಸಿಕ್ಕಿದ್ದು )

ಪುಟಗಳು : 208

ಬೆಲೆ : 80 ರೂ.


ನಂಬಿಕೆ ಎನ್ನುವುದೇ ಹಾಗೆ ಅಲ್ಲವಾ.. ಮನುಷ್ಯ ತನ್ನ ಮೇಲೆ ತಾನು ನಂಬಿಕೆ ಇಡುವುದಕ್ಕಿಂತ ದೇವರ ಮೇಲೆ ಹೆಚ್ಚಿನ ನಂಬಿಕೆ ಇಡುತ್ತಾನೆ. ಹಾಗಾಗಿ ಮನುಷ್ಯರನ್ನ ನಂಬುವುದಕ್ಕಿಂತಲೂ ಹೆಚ್ಚಾಗಿ ದೇವರನ್ನು ನಂಬುತ್ತಾನೆ. ಇವತ್ತಿಗೂ ಹಳ್ಳಿಗಳಲ್ಲಿ ಈ ವರ್ತನೆಯನ್ನು ಕಾಣಬಹುದು ಯಾರಿಗಾದರೂ ಹುಷಾರಿಲ್ಲ ಅಂದರೆ ಅಥವಾ ಅವರಿಗೆ ಮೈ ಸರಿ ಇಲ್ಲ ಅಥವಾ ಮಾನಸಿಕ ಕಾಯಿಲೆ ಇತ್ತು ಅಂತ ಅಂದರೂ ಸಹ ಅವರನ್ನ ವೈದ್ಯರ ಬಳಿ ಕರೆದುಕೊಂಡು ಹೋಗುವುದಕ್ಕಿಂತ ಮೊದಲು ದೇವರ ಬಳಿ ಅಥವಾ ದೇವಸ್ಥಾನಕ್ಕೆ ಹರಕೆ ಹೊರುತ್ತಾರೆ. ನಂಬಿಕೆಗಳೇ ಮನುಷ್ಯನನ್ನು ಗುಣಪಡಿಸುವುದು. ಕೆಲವೊಮ್ಮೆ ಈ ನಂಬಿಕೆಗಳಿಂದ ವೈದ್ಯರಿಂದಲೂ ಗುಣವಾಗದ ಕಾಯಿಲೆಗಳು ಅವರ ನಂಬಿಕೆಗಳಿಂದಲೇ ಗುಣವಾಗುತ್ತದೆ. ಇದು ಕಾಕತಾಳೀಯವೋ ಅಥವಾ ನಂಬಿಕೆಗೆ ಅಂತಹ ಶಕ್ತಿ ಇದೆಯೋ ಗೊತ್ತಿಲ್ಲ. ಆದರೆ, ಗುಣವಾದಾಗ ಹರಕೆ ಹೊತ್ತವರಿಗೆ ದೇವರ ಮೇಲಿನ ನಂಬಿಕೆ ಮತ್ತಷ್ಟು ಮಗದಷ್ಟು ಹೆಚ್ಚುತ್ತಾ ಹೋಗುತ್ತದೆ.  ಕೆಲವೊಮ್ಮೆ ಅದು ಭೀತಿಯೂ ಆಗಬಹುದು. ಆದರೆ, ಇಂತಹ ನಂಬಿಕೆಗಳೇ ಒಂದು ಮಾನಸಿಕ ಕಾಯಿಲೆಗೆ ಗುರಿ ಮಾಡಿದರೆ ಅವರ ಪರಿಸ್ಥಿತಿ ಹೇಗಿರಬಹುದು ?? ಚಿತ್ರಲೇಖ ಮೇಡಂ ಅವರ ನಂಜಾದ ನೆನಪು ಇದೇ ಕಥಾಹಂದರವನ್ನು ಹೊಂದಿದಂತಹ ಒಂದು ಮನೋವೈಜ್ಞಾನಿಕ ಕಾದಂಬರಿ. 


ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಸಹ ಅಷ್ಟೇ ಮುಖ್ಯ. ಆದರೆ ಮನುಷ್ಯ ದೈಹಿಕ ಆರೋಗ್ಯಕ್ಕೆ ಕೊಡುವಷ್ಟು ಕಾಳಜಿ ಹಾಗೂ ಸಮಯವನ್ನು ಕೊಡದೆ ಮನಸ್ಸಿನ ಆರೋಗ್ಯವನ್ನು ಕಡೆಗಣಿಸಿಬಿಡುತ್ತಾನೆ. ಎಲ್ಲೋ ಕೆಲವರಷ್ಟೇ, ಮನಸ್ಸಿನ ಸಮಸ್ಯೆಗಳಿಗೂ ಮನೋವೈದ್ಯರ ಬಳಿ ಪರಿಹಾರವಿದೆ ಎನ್ನುತ್ತಾ ಸೈಕಿಯಾಟಿಸ್ಟ್ ಗಳ ಬಳಿ ತೋರಿಸುತ್ತಾ ಅವರ ಮಾರ್ಗದರ್ಶನದಂತೆಯೇ ನಡೆಯುತ್ತಾರೆ. ಈಗಲೂ ಈ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ. ಆದರೆ 1987ರಲ್ಲಿ ಬಂದ ಈ ಕಥಾವಸ್ತು ಆ ಕಾಲದ ಮನಸ್ಥಿತಿಗಳಿಗೆ ಹಿಡಿದ ಕನ್ನಡಿ ಹಾಗೂ ಪರಿಹಾರ ತೋರುವ ದಾರಿದೀಪದಂತಿದೆ. 


ಕಥೆ ಶುರುವಾಗುವುದು ಸುಭಾಷ್ ಹಾಗೂ ಧಾರಿಣಿಯರಿಂದ. ಸುಭಾಷ್ ನ್ಯೂರೋ ಸೆಂಟರ್ ನಲ್ಲಿದ್ದ ತನ್ನ ಪತ್ನಿ ಧಾರಿಣಿಯನ್ನು ನೋಡಲು ಹೊರಡುತ್ತಾನೆ. ಧಾರಿಣಿ ಹಾಗೂ ಸುಭಾಷರದ್ದು ಪ್ರೇಮ ವಿವಾಹ ಹಾಗೂ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳುವ ಅನ್ಯೋನ್ಯವಾದ ದಾಂಪತ್ಯ. ಆದರೆ, ಈಗ ಧಾರಿಣಿ ಗರ್ಭಿಣಿ. ಮೊದಲ ಎರಡು ಮಕ್ಕಳನ್ನು ಕಳೆದುಕೊಂಡ ಆಕೆ ಈಗ ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾಳೆ. ಆದರೆ, ಅವಳಿಗಿರುವ ಸಮಸ್ಯೆ ಎಂದರೆ ಈ ಮೂರನೇ ಬಸಿರಿನಲ್ಲಿ ಮೂರು ತಿಂಗಳು ತುಂಬಿದ ನಂತರ ಕೆಲವೊಮ್ಮೆ ಹಾಗೆಯೆ ಮೂರ್ಛೆ ಹೋಗಿ ಬಿಡುವುದು. ದೈಹಿಕವಾದ ಯಾವ ಸಮಸ್ಯೆಯೂ ಇಲ್ಲದ ಧಾರಿಣಿ ಸುಭಾಷ್ ನಿಗೆ ಒಂದು ಒಗಟಿನಂತಾಗುತ್ತಾಳೆ. ಸುಭಾಷ್ ಎಷ್ಟೇ ಎಚ್ಚರಿಕೆಯಿಂದ ನೋಡಿಕೊಂಡರೂ ಸಹಾ ಸಮಸ್ಯೆ ಬಗೆಹರಿಯುವುದಿಲ್ಲ. ಆಗ ಸ್ನೇಹಿತರೋರ್ವರ ಸಲಹೆಯ ಮೇರೆಗೆ ನ್ಯೂರೋ ಸರ್ಜನ್ ಆದ ಡಾಕ್ಟರ್ ರಾಜಾರಾಮ್ ಅವರ ಬಳಿ ಕರೆದೊಯ್ಯುತ್ತಾನೆ. ಆದರೆ, ಅಲ್ಲಿಯೂ ಧಾರಿಣಿಯ ಸಮಸ್ಯೆ ಅರ್ಥವಾಗದಾದಾಗ ಅವರ ಸಲಹೆಯ ಮೇರೆಗೆ ಮಾನಸಿಕ ತಜ್ಞರಾದ ಡಾಕ್ಟರ್ ರಾಯ್ ಅವರ ಬಳಿ ಕರೆದೊಯ್ಯುತ್ತಾನೆ. 


ಡಾ|| ರಾಯ್ ಅವರು ಸಮಸ್ಯೆಯ ಮೂಲ ಹುಡುಕುತ್ತಿದ್ದಾಗ ಧಾರಿಣಿಯ ಬಾಲ್ಯದ ಕುರಿತು ತಿಳಿದು ಬರುತ್ತದೆ. ಈಶ್ವರಪ್ಪ ಹಾಗೂ ರಾಜಮ್ಮ ದಂಪತಿಗಳಿಗೆ ಮಕ್ಕಳಾಗದೇ ಮಧ್ಯ ವಯಸ್ಸಿನಲ್ಲಿ ಹುಟ್ಟಿದ ಮೂರು ಮಕ್ಕಳಲ್ಲಿ ಧಾರಿಣಿ ಎರಡನೆಯವಳು. ಧಾರಿಣಿ ಉಳಿದ ಇಬ್ಬರಿಗಿಂತ ಚುರುಕು ಹಾಗೂ ಬುದ್ಧಿವಂತೆ. ನೋಡುವುದಕ್ಕೆ ಕೂಡ ಸೌಂದರ್ಯವತಿ. ಹೀಗಿದ್ದ ಧಾರಿಣಿಗೆ ಚಿಕ್ಕಂದಿನಲ್ಲಿ ಒಮ್ಮೆ ಮಳೆಯಲ್ಲಿ ನೆನೆದಿದ್ದೇ ನೆಪವಾಗಿ ಶೀತ ಹಾಗೂ ಜ್ವರ ಬರುತ್ತದೆ. ಯಾವ ವೈದ್ಯರಿಗೂ ಜಗ್ಗದ ಅನಾರೋಗ್ಯ ದಿನೇ ದಿನೇ ಉಲ್ಬಣವಾಗುತ್ತಿದ್ದಾಗ ಅವರ ಮನೆಯ ಹತ್ತಿರದಲ್ಲೇ ಇದ್ದ ಆತ್ಮೀಯರಾದ ಪೀಟರ್ ಹಾಗೂ ಆಕೆಯ ಹೆಂಡತಿ ಸಗಾಯ ಮೇರಿ ಮತ್ತು ಆಕೆಯ ತಾಯಿ ರೋಸಿಯಮ್ಮನ ಸಲಹೆಯ ಮೇರೆಗೆ ಮದ್ರಾಸ್ ನ ಅಂದರೆ ಈಗಿನ ಚೆನ್ನೈ ಬಳಿಯ ನಾಗಪಟ್ಟನದ ಹತ್ತಿರ ಇದ್ದ ಮೇರಿ ಮಾದ ಕೋಯಿಲ್ (ದೇವಾಲಯ ) ಅಂದರೆ ಅಲ್ಲಿರುವ ವೇಳಾಂಗನ್ನಿ ಎನ್ನುವ ದೇವರಿಗೆ ಹರಕೆ ಹೊರುತ್ತಾರೆ. ಮೊದಮೊದಲಿಗೆ ರಾಜಮ್ಮ ಇದಕ್ಕೆ ಒಪ್ಪದಿದ್ದರೂ.. ಮಗುವಿನ ಪ್ರಾಣಕ್ಕಿಂತ ಈ ಹರಕೆ ದೊಡ್ಡದಲ್ಲ, ಈ ಧರ್ಮ ದೊಡ್ಡದಲ್ಲ, ಭೇದ- ಭಾವ ಸಲ್ಲದು ಎಂದು ಆ ದೇವರಿಗೆ ಮೊರೆ ಹೋಗುತ್ತಾರೆ.


 ಪ್ರಾರ್ಥನೆಯ ಫಲವೋ, ದೇವರ ಅನುಗ್ರಹವೋ ಅಥವಾ ಕಾಕತಾಳೀಯವೋ ಅಂತೂ ಧಾರಿಣಿ ಹುಷಾರಾಗುತ್ತಾಳೆ. ಆ ಹರಕೆಯ ಪ್ರಕಾರ ಆಕೆ ಕ್ರೈಸ್ತ ಧರ್ಮದ ನನ್ ಅಂದರೆ ಸನ್ಯಾಸಿನಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಆ ದೀಕ್ಷೆಗೆ ಇನ್ನೂ ಆಕೆಗೆ 18 ವರ್ಷದವರೆಗೂ ಸಮಯವಿರುತ್ತದೆ. ಆದರೆ, ಅವಳ ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು ಅವಳ ಬದುಕನ್ನೇ ಬದಲಾಯಿಸಿಬಿಡುತ್ತವೆ. 


ಇದೆಲ್ಲವೂ ಸುಭಾಷ್ ನನ್ನು ಧಾರಿಣಿ ಮದುವೆಯಾದ ನಂತರ ಅವಳಿಗೆ ಮರೆತೇ ಹೋದಂತಾದ ಸತ್ಯಗಳು. ಈ ನೆನಪುಗಳ ಸರಮಾಲೆಯಲ್ಲಿ ಡಾಕ್ಟರ್ ರಾಯ್ ಅವಳ ಸಮಸ್ಯೆಗೆ ಕಾರಣವನ್ನು ಕಂಡುಹಿಡಿದು ಆಕೆಗೆ ಸರಿಯಾದ ಚಿಕಿತ್ಸೆ ನೀಡುತ್ತಾರಾ..?? ಅಥವಾ ಆಕೆಗೆ ಬೇರೆ ಏನಾದರೂ ಸಮಸ್ಯೆ ಇದ್ದಿತೇ..?? ಧಾರಿಣಿಯ ಮನಸ್ಥಿತಿ ಹೇಗಿತ್ತು..?? ಧಾರಿಣಿಗೆ ಬೀಳುತ್ತಿದ್ದ ಆ ವಿಚಿತ್ರ ಕನಸಾದರೂ ಏನು..?? ಧಾರಿಣಿಯ ಮದುವೆ ಹೇಗಾಯಿತು ಸುಭಾಷ್ ಹಾಗೂ ಅವಳ ಜೀವನದ ಕಥೆಯಲ್ಲಿ ಅವರವರ ಮನೆಯವರು ಎಲ್ಲಿದ್ದಾರೆ..?? ಇದೆಲ್ಲದರ ನಡುವಿನ ಧರ್ಮಗಳ ನಡುವಿನ ನಂಬಿಕೆ ಹಾಗೂ ಅದಕ್ಕೆ ಕಾರಣರಾದವರ ಪಾಲು ಎಷ್ಟು..? ಧಾರಿಣಿಗೆ ಈ ಮಗುವಾದರೂ ದಕ್ಕುವುದೇ ?? ಇದೆಲ್ಲವನ್ನು ತಿಳಿಯಲು ನಂಜಾದ ನೆನಪು ಕಾದಂಬರಿಯನ್ನು ಓದಿ ನೋಡಿ.


ಇಲ್ಲಿ ಸುಭಾಷ್ ಪಾತ್ರ ಅತ್ಯಂತ ಪ್ರಬುದ್ಧವಾದ ಪಾತ್ರ ಎಂದೆನಿಸಿತು. ಇದಕ್ಕೆ ಕಾರಣ ಆತ ತನ್ನ ಹೆಂಡತಿಗೆ ಆರೋಗ್ಯದ ಸಮಸ್ಯೆಯಾದಾಗ ತೋರುವ ಕಾಳಜಿ, ಪ್ರೀತಿ ಹಾಗೂ ಅದನ್ನು ಬಗೆಹರಿಸಲು ಅವನು ತೆಗೆದುಕೊಳ್ಳುವ ನಿರ್ಧಾರ ಇದೆಲ್ಲವೂ ನಿಜಕ್ಕೂ ಆದರಣೀಯ ಹಾಗೂ ಅನುಕರಣೀಯ. ತನ್ನ ಹೆಂಡತಿಗೆ ಹೀಗಾಯಿತು ಎಂದು ಆಕೆಯನ್ನು ನಡು ನೀರಿನಲ್ಲಿ ಕೈಬಿಡದೆ ಆಕೆಯ ಆರೋಗ್ಯದ ಕುರಿತು ಕಾಳಜಿ ತೆಗೆದುಕೊಂಡು ಆಕೆಯನ್ನು ಆಸ್ಪತ್ರೆಗೆ ಅದರಲ್ಲೂ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲು ಮಾಡುವ ಧೈರ್ಯದ ನಿರ್ಧಾರ ಇಲ್ಲಿ ಪ್ರಮುಖ ಘಟ್ಟ. ಅಷ್ಟೇ ಅಲ್ಲ, ಆತನಿಗೆ ಆತನ ಸಹೋದ್ಯೋಗಿಯೊಬ್ಬರು ಹೇಳುವ ಒಂದು ಸಲಹೆ ಎಂದರೆ 'ಇದು ಆರೋಗ್ಯದ ಸಮಸ್ಯೆ ಆಗಿರಲಾರದು ನೀವು ಯಾವುದಾದರೂ ದೇವರಿಗೆ ಹರಸಿಕೊಳ್ಳಿ' ಎನ್ನುವ ಮಾತು. ಆತನೂ ಸಹಾ ವಿದ್ಯಾವಂತನೆ.. ಆದರೆ, ಸುಭಾಷ್ ತನ್ನ ಪ್ರೌಢ ನಿರ್ಧಾರವನ್ನು ಬದಲಾಯಿಸುವುದಿಲ್ಲ.


 ಧಾರಿಣಿ ವಿದ್ಯಾವಂತೆ ಹಾಗೂ ಸೂಕ್ಷ್ಮ ಮನಸ್ಸಿನ ಹುಡುಗಿ. ಆದರೂ ಸಹ ಅವಳಲ್ಲಿ ಇರುವ ಮಾನಸಿಕ ಚಿಕಿತ್ಸಾ ಕೇಂದ್ರ, ಆ ಆಸ್ಪತ್ರೆಯಲ್ಲಿರುವವರ ಕುರಿತು ಹಾಗೂ ಅಲ್ಲಿನ ಚಿಕಿತ್ಸಾ ಕ್ರಮದ ಕುರಿತು ಇರುವ ತಪ್ಪು ತಿಳುವಳಿಕೆಗಳು ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಳ್ಳುವಂತಹ ತಪ್ಪು ತಿಳುವಳಿಕೆಗಳು. ಆದರೆ, ಅದನ್ನು ಹೋಗಲಾಡಿಸಿ ಧೈರ್ಯ ತುಂಬುವ ಕೆಲಸ ಈ ಕಾದಂಬರಿಯಲ್ಲಿದೆ. ಧಾರಿಣಿಯ ಮನದ ತುಮುಲಗಳಂತೂ ಬಹಳ ಸೂಕ್ಷ್ಮವಾಗಿ ಚಿತ್ರತವಾಗಿದೆ. 


 ಕಥಾ ಹಂದರ ಬೆಳೆಯುವ ಪರಿ ಊಹಿಸಲು ಅಸಾಧ್ಯ. ಕನಸಿಗೆ ನೀಡುವ ಅರ್ಥೈಸುವಿಕೆ ನನಗೆ ಬಹಳ ಇಷ್ಟವಾಯಿತು. ಆ ಕಗ್ಗಂಟನ್ನು ಬಿಡಿಸುವಿಕೆಯ ಕೆಲಸ ಮೆದುಳಿಗೆ ಮೇವಿನಂತಿದೆ. ಪಾತ್ರಗಳಿಗೆ ಬಳಸಿಕೊಂಡಿರುವ ಪ್ರದೇಶಗಳು, ಪಾತ್ರಗಳು, ಭಾಷೆ ಅಲ್ಲಲ್ಲಿನ ಸ್ಥಳೀಯ ಪರಿಸರವನ್ನು ಬಿಂಬಿಸುವಂತಿದೆ. ಇದು ಎರಡು ಧರ್ಮಗಳ ನಡುವಿನ ಕಥೆಯಾದರೂ ಎಲ್ಲಿಯೂ ಯಾವ ಧರ್ಮಕ್ಕೂ ಅಥವಾ ಧಾರ್ಮಿಕ ನಂಬಿಕೆಗಳಿಗೂ ಕುಂದು ಬರದಂತೆ ಅಥವಾ ದ್ವೇಷ ಬರದಂತೆ ಸಮತೋಲಿತವಾಗಿದೆ. ಅಲ್ಲದೆ, ತಪ್ಪು ತಿಳುವಳಿಕೆ ನೀಡುವವರ ಕುರಿತು ಎಚ್ಚರಿಕೆಯ ಪಾಠದಂತಿದೆ. ಒಂದು ಧಾರ್ಮಿಕ ನಂಬಿಕೆಯನ್ನು ಜನರು ಅರ್ಥೈಸಿಕೊಳ್ಳುವ ಪರಿ ಹಾಗೂ ಅದರ ನೈಜತೆ ಎರಡರ ನಡುವಿನ ವ್ಯತ್ಯಾಸವನ್ನು ಸಹ ನಾವು ಇಲ್ಲಿ ಕಾಣಬಹುದು.


ತಮ್ಮ ಮನಸ್ಸನ್ನು ಗೊಂದಲಪಡಿಸಿಕೊಂಡು ಹಿಂದಿನ ಯಾವುದೋ ಅಹಿತಕರ ಘಟನೆಯಿಂದ ನರಳುವವರಿಗೆ ನೆನಪು ಹೇಗೆ ನಂಜಾಗಬಲ್ಲದು ಎಂಬುದನ್ನು ಹೇಳಿರುವ ಮನೋವೈಜ್ಞಾನಿಕ ಕಾದಂಬರಿ ಇದು. ಇಲ್ಲಿ ಕೇವಲ ಸಮಸ್ಯೆ ಮಾತ್ರ ಇಲ್ಲ.. ಅದಕ್ಕೆ ಸರಿಯಾದ ಪರಿಹಾರದ ಹಾದಿಯೂ ಇದೆ. ಇದು ಕೇವಲ ಮನೋರಂಜನೆಯ ನಿಟ್ಟಿನಲ್ಲಿ ಮಾತ್ರ ಚಿತ್ರಿತವಾದ ಕಾದಂಬರಿಯಲ್ಲ, ಸಾಮಾಜಿಕ ಸಂದೇಶ ಸಾರುತ್ತಾ ಜನರನ್ನು ಎಚ್ಚರಗೊಳಿಸುವ ಪರಿಯೂ ಹೌದು. ಚಿತ್ರಲೇಖ ಮೇಡಂ ಅವರ ನಂಜಾದ ನೆನಪು ಕಾದಂಬರಿ ಮನಸ್ಸಿನ ಹಾಗೂ ಸಮಾಜದ ನಂಜಿಗೆ ಚಿಕಿತ್ಸಕವೂ ಹೌದು.


 ~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ