ಪುಸ್ತಕದ ಶೀರ್ಷಿಕೆ : ಹಸ್ತಿನಾವತಿ
ಲೇಖಕರು : ಜೋಗಿ
ಪ್ರಕಾಶಕರು : ಅಂಕಿತ ಪುಸ್ತಕ
ಮೊದಲನೇ ಮುದ್ರಣ : 2023
ಪುಟಗಳು : 408
ಬೆಲೆ : 450 ರೂ.
ಜೋಗಿಯವರ 20 ನೇ ಕಾದಂಬರಿ ಇದು. ಹಸ್ತಿನಾವತಿ , ಇದು ಭಾರತದ ಕಥೆ ಎಂದಾಗ ಮಹಾಭಾರತದ ಕಥೆಯಲ್ಲ ಎಂಬ ಕ್ಲಾರಿಟಿ ಇದ್ದರೂ.. ಯಾವ ರೀತಿಯ ಪುಸ್ತಕ ಇರಬಹುದು ಎಂಬ ಕುತೂಹಲವಂತೂ ಇತ್ತು. ಪೊಲಿಟಿಕಲ್ ಥ್ರಿಲ್ಲರ್ ಎಂದು ಹೇಳಬಹುದಾದರೂ.. ಅದಷ್ಟೆಯಾ..?? ಎಂದರೆ ಅದರಾಚೆಗೂ ಮತ್ತೇನೋ ಹೇಳಲು ಹೊರಡುವ ಪುಸ್ತಕ ಎಂದೇ ಅನ್ನಿಸುತ್ತದೆ. ರಾಜಕೀಯ ಕುರಿತು ಒಂದು ರೀತಿ ದೂರವೇ ಉಳಿಯುವ ನನಗನ್ನಿಸಿದ ಪ್ರಾಮಾಣಿಕ ಅನಿಸಿಕೆ ಎಂದರೆ ಈ ಪೊಲಿಟಿಕಲ್ ನಡೆಗಳು, ಪೊಲಿಟಿಕಲ್ ಸ್ಟ್ರಾಟಜಿಗಳನ್ನು ನೋಡಿದರೆ ಇದೆಲ್ಲವೂ ವಾಸ್ತವದಲ್ಲಿ ಆಗಬಹುದಾದಂತಹವೇ.. ಇಲ್ಲಿನ ಯಾವ ಸ್ಟ್ರಾಟಜಿಗಳಲ್ಲಿಯೂ ಉತ್ಪ್ರೇಕ್ಷೆ ಇಲ್ಲ. ಆದರೆ, ನಮ್ಮ ಸುತ್ತಮುತ್ತ ನಡೆಯುವ ರಾಜಕೀಯ ನಡೆಗಳನ್ನು ಚಿಲ್ರೆ ಎನ್ನಿಸುವಂತೆ ಮಾಡಿತು. ಇತಿಹಾಸ , ಪುರಾಣಗಳನ್ನು ಲಿಂಕ್ ಮಾಡಿದ ವರ್ತಮಾನದ ವಿಭಿನ್ನ ಕಾದಂಬರಿ ಎನ್ನಿಸಿತು.
ಭಾರತದಲ್ಲಿ ಸಹದೇವ ಉಪಾಧ್ಯಾಯನಂತಹಾ ಪೊಲಿಟಿಕಲ್ ಸ್ಟ್ರ್ಯಾಟಜಿಸ್ಟ್ ಇರಬಹುದಾ..? ಅಥವಾ ಬರಬಹುದಾ..?? ರಾಜಕೀಯ ರಂಗ ವಿದ್ಯಾವಂತರಿಂದಲೇ ಮುನ್ನಡೆದರೆ ಕಾಣುವಂತಹಾ ಭಾರತದ ದರ್ಶನವೂ ಆಯಿತು. ಮುಂದಿನ ನಡೆಯೇನು ? ಮುಂದೇನಾಗಬಹುದು ? ಎಂದು ಓದುತ್ತಾ ಹೋದಂತೆ ನಾನಂದುಕೊಂಡದ್ದಕ್ಕಿಂತ, ಊಹಿಸಿದ್ದಕ್ಕಿಂತ ಹೆಚ್ಚಿನ ತಿರುವುಗಳಿದ್ದವು. ಮಹಾಭಾರತ ಕೂಡಾ ಹೀಗೆಯೇ ಅಲ್ಲವಾ..?? ಎನ್ನಿಸಿತು.
ಮಹಾಭಾರತಕ್ಕೂ ಇಲ್ಲಿನ ಹಸ್ತಿನಾವತಿಗೂ ಸಂಬಂಧಗಳಿವೆಯಾ..?? ಈ ಪ್ರಶ್ನೆ ಹುಟ್ಟಿದ್ದೇ ಆದರೆ.. ಪ್ರತಿಯೊಂದು ನಡೆ, ಪ್ರತಿಯೊಂದು ಅಧ್ಯಾಯವೂ ಮಹಾಭಾರತದ ಎಳೆಗಳನ್ನು ನೆನಪಿಸುತ್ತಾ ಹೋಗುತ್ತದೆ. ಮಹಾಭಾರತದ ಸಹದೇವ ಭವಿಷ್ಯವನ್ನು ಕಾಣಬಲ್ಲವನು. ಆದರೆ, ಎಂದಿಗೂ ಅದನ್ನು ಅರಿತು ಕಾರ್ಯತಂತ್ರ ರೂಪಿಸಿದವನಲ್ಲ. ಆದರೆ, ಇಲ್ಲಿಯ ಸಹದೇವ ಮಹಾಭಾರತದ ಕೃಷ್ಣನಂತೆ. ರಾಜಕೀಯ ರಂಗದ ಆಗು - ಹೋಗುಗಳನ್ನು ಗಮನಿಸುತ್ತಾ.. ಗಮನಿಸುತ್ತಾ.. ಪಕ್ಷದ ವರ್ಚಸ್ಸು ಕುಂದದಂತೆ ಪಕ್ಷಕ್ಕಾಗಿ ದುಡಿಯುವವನು. ಕೇವಲ ಪಕ್ಷದ ಮೇಲೆ ಮಾತ್ರ ಈತನಿಗೆ ಪ್ರೀತಿಯಾ..?? ಇಲ್ಲಿ ನನಗೆ ಅದಕ್ಕಿಂತ ಹೆಚ್ಚು ಕಂಡದ್ದು ಪ್ರಧಾನಮಂತ್ರಿಗಳಾಗಿದ್ದ ಸಂಜಯ್ ಸರ್ಕಾರ್ (ಸಂಸ) ಕುರಿತು ಇದ್ದ ಗೌರವ ಭಾವನೆ ಹಾಗೂ ಅವರ ಮೇಲಿನ ಅಕ್ಕರೆ.
ಎರಡು ರಾಜಕೀಯ ಪಕ್ಷಗಳು. ನ್ಯಾಷನಲ್ ಪಾರ್ಟಿ ಹಾಗೂ ಮಾತೃಭೂಮಿ. ಮಾತೃಭೂಮಿಯ ನಾಯಕರು ಸಂಸರಾಗಿದ್ದರೆ ಪಕ್ಷದ ನಾಯಕರು ಚಿದಾನಂದ ಪಾಂಡೆ (ಚೀಫ್). ಚೀಫ್ ಹಾಗೂ ಸಂಸರಿಗೂ ಏಕವಚನದಲ್ಲಿ ಕರೆಯುತ್ತಾ ಮಾತನಾಡುವಷ್ಟು ಗೆಳೆತನವಿದ್ದರೂ.. ಸಂಸ ಇನ್ನು ತಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಮಾತನಾಡಿದಾಗ ಅದನ್ನು ತಪ್ಪಿಸಲು ಚೀಫ್ ಸಹದೇವನಿಗೆ ಹೇಳುತ್ತಾರೆ. ಅದನ್ನು ತಪ್ಪಿಸುವುದಷ್ಟೇ ಚೀಫ್ ದೃಷ್ಟಿಯಿಂದ ಮುಖ್ಯವಾಗಿದ್ದಾಗ ಸಹದೇವ ಅದರ ಹಿಂದಿನ ಕಾರಣಗಳನ್ನು ಕಂಡು ಹಿಡಿಯಲು ಹೊರಡುತ್ತಾನೆ.
ಇಲ್ಲಿ ಒಳ್ಳೆಯತನ ಅಥವಾ ಕೆಟ್ಟತನದ ಪಾತ್ರಗಳಿಗಿಂತ ಕಂಡದ್ದು ಆಯಾ ಪಾತ್ರಗಳ ಗ್ರೇ ಶೇಡ್. ಎಲ್ಲರ ಹಿಂದೆಯೂ ಒಂದೊಂದು ಭೂತವಿದ್ದೇ ಇದೆ. ಭೂತಕಾಲವೇ ಭೂತವಾಗಿ ಕಾಡಿದರೆ..?? ಸಂಸ ಮನೆ, ಮಠ, ಆಸ್ತಿ - ಪಾಸ್ತಿ, ಕುಟುಂಬವನ್ನು ಬದಿಗೊತ್ತಿ ದೇಶದ ಹಿತಕ್ಕೆ ಬದುಕುತ್ತಿರುವಾಗ ಮರೆತೇ ಹೋಗಿದ್ದ ಗತವೊಂದು ಆತನ ರಾಜಕೀಯಕ್ಕೆ ಕುತ್ತಾಗುವ ಹೊತ್ತು. ಕೆಲವರಿಗೆ ತಮ್ಮ ಗೌರವ, ಮರ್ಯಾದೆ ಮಣ್ಣಾಗುವುದಕ್ಕಿಂತ ಜನರ ದೃಷ್ಟಿಯಲ್ಲಿ ಒಳ್ಳೆಯರಾಗಿದ್ದುಕೊಂಡೇ ಹಿಂದೆ ಸರಿಯುವುದೇ ಲೇಸು. ಅದನ್ನೇ ರಾಜಕೀಯ ದೃಷ್ಟಿಯಿಂದ ನೋಡುವುದಾದರೆ ಪಕ್ಷಕ್ಕೆ ಕೆಟ್ಟ ಹೆಸರು ತರುವ ವ್ಯಕ್ತಿಯನ್ನು ಅವನ ಗೌರವವಿನ್ನೂ ಉಳಿದಿದ್ದಂತೆಯೇ ಹಾದಿಯಿಂದ ಬದಿಗೊತ್ತುವುದೇ ಲೇಸು.
ಪಕ್ಷದಿಂದ ನಾಯಕನಿಗೆ ಬೆಲೆ ಬರುತ್ತದೋ..?? ಅಥವಾ ನಾಯಕನಿಂದ ಪಕ್ಷಕ್ಕೋ..?? ಎಂದು ಹೇಳುವುದಾದರೆ ಕಷ್ಟ. ಆದರೆ, ಇಲ್ಲಿ ಸಂಸರಿದ್ದರೆ ಮಾತ್ರ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಪ್ರಧಾನಿಯನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕುಣಿಸಲು ನೋಡಿದ ಪ್ರದ್ಯುಮ್ನ ಜೋಷಿ.. ಚೀಫ್ ತಂಗಿ ಪಂಕಜ ಪಾಂಡೆ ಇದರಲ್ಲಿ ಯಶಸ್ವಿಯಾದರಾ..??
ರಾಜಕೀಯವನ್ನು ಬದಿಗೊತ್ತಿ ನೋಡುವುದಾದರೆ ಸಹದೇವನ ಎಂದಿನ ಅಡ್ಡಾ ಜಿಪ್ಸಿ ಕೆಫೆ. ಈ ಜಿಪ್ಸಿ ಕೆಫೆ ಅದೆಷ್ಟು ಹಿಡಿಸಿತು ಎಂದರೆ ಅಂತಹಾ ಜಿಪ್ಸಿ ಕೆಫೆ ಇಲ್ಲಿಯೇ ಎಲ್ಲಿಯಾದರೂ ಇರಬಾರದಾ ಎನ್ನಿಸಿಬಿಟ್ಟಿತು. ಅಲ್ಲಿಯ ಗಾರ್ಲಿಕ್ ಬ್ರೆಡ್, ಅದನ್ನು ತಂದುಕೊಟ್ಟು ಅಮ್ಮನಂತೆಯೇ ಮಾತನಾಡುವ ಸಂಯುಕ್ತಾ ಪರಾಂಜಪೆ, ಜಾಬಾಲಿಯರು ಕಾಣಬಹುದಾ..?? ಅಲ್ಲಿಯ ಕಲಾ ವಾತಾವರಣ, ಗೋಡೆಯ ಮೇಲೆ ಜಾಬಾಲಿ ಬಿಡಿಸಿಟ್ಟ ಚಿತ್ತಾರ ಎಲ್ಲವೂ.. ಸಂಯುಕ್ತಾ ಪರಾಂಜಪೆಯ ಮಗನಿಗಿಂತ ಆಪ್ತವಾಗಿದ್ದು ಸಾಕು ಮಗಳ ಹಾಗಿದ್ದ ಜಾಬಾಲಿ.
ಇನ್ನು ಸಹದೇವನ ಅಮ್ಮ ಯಶೋದೆ, ಆತ್ಮಸಂಗಾತಿಯಂತಹಾ ಗೆಳತಿ ಚಾರುಲತಾ ಇಬ್ಬರೂ ಎರಡು ಧ್ರುವಗಳಂತೆ ಕಂಡರೂ ಅವರ ನಡುವಿನ ಹೊಂದಾಣಿಕೆಯೇ ಸುಂದರ. ಇನ್ನು ನಿರಂಜನ ಎಂಬ ಸಹದೇವನ ಆಪ್ತ ಗೆಳೆಯ ಕೂಡಾ ಅವನ ಬದುಕಿನ ಭಾಗವೇ..
ಆದಿ ಪರ್ವ, ಸಭಾ ಪರ್ವದವರೆಗೂ ಮಾಮೂಲಿ ಥ್ರಿಲ್ಲರ್ ನಂತೆ ಸಾಗುತ್ತಿದ್ದ ಕತೆಗೆ ಅರಣ್ಯ ಪರ್ವ ಬೇರೆಯದ್ದೇ ಟಚ್ ನೀಡುತ್ತದೆ. ಇಲ್ಲೇ ಜೋಗಿಯವರ ಶೈಲಿಯ ಟ್ವಿಸ್ಟ್ ಸಿಗುವುದು. ಸಂಸರ ಹಳೆಯ ಗೆಳೆಯನಾದ ಸದಾಶಿವ ದೇಸಾಯಿಯ ಮನೆಗೆ ಬಂದಾಗ ಅಲ್ಲಿ ಅವರ ಪತ್ನಿ ವಸುಂಧರಾ ದೇಸಾಯಿಯ ತಾಯಿ ಮನಸ್ಸಿನ ಆತಿಥ್ಯ ಹಾಗೂ ಅಲ್ಲಿನ ವಾಸ ಸಹದೇವನಿಗೆ ಕೊಡುವ ಅನುಭವವೇ ಬೇರೆ. ಜೊತೆಗೆ ದೇವಯಾನಿಯ ಭವ್ಯ ವ್ಯಕ್ತಿತ್ವದ ಪರಿಚಯವಾಗುತ್ತದೆ. ದಾಂಡೇಲಿಯ ಮನೆ ಕೂಡಾ ಸೆಳೆಯುವಂತಹಾ ಸುಂದರ ಅನುಭೂತಿ. ಇಲ್ಲಿನ ಟ್ವಿಸ್ಟ್ ಎಂದರೆ ಮಹಾಭಾರತ ಬರೆದ ಕೃಷ್ಣದ್ವೈಪಾಯನ ವ್ಯಾಸ ಸಿಗುವುದು. ಮೊದಲಿಗೆ ಈ ಟ್ವಿಸ್ಟ್ ಬೇಕಿರಲಿಲ್ಲವೇನೋ ಎನ್ನಿಸಿದರೂ ಕ್ರಮೇಣ ಎಷ್ಟೋ ಗೊತ್ತಿರದ ಮಹಾಭಾರತದ ಉಪ ಕತೆಗಳು ಹಾಗೂ ಸಂಧಿಗ್ಧ ಪ್ರಶ್ನೆಗಳು ಬಂದು ಹೋಗುತ್ತವೆ. ವ್ಯಾಸರ ಭಗವತಿಯ ಪರಿಚಯವಂತೂ ಮಸ್ತ್. ಭಗವತಿಯ ಕುರಿತು ತಿಳಿಯಲು ಹಸ್ತಿನಾವತಿಯನ್ನೇ ಓದಿ.
ದೇವಯಾನಿಯ ಹಳೆಯ ದಿನಗಳು, ಆಕೆಯ ಮಗ ಸತ್ಯಕಾಮ. ಅವಳ ಪುಸ್ತಕದ ಪುಟಗಳ ಕೆಲ ಸಂದರ್ಭಗಳ ಅನಾವರಣ ಚೆನ್ನಾಗಿದೆ. ಸತ್ಯಕಾಮ ಎಂಬ ಹೆಸರು ಕೇಳಿದಾಗ ಯಾಕೋ ಪುರಾಣದ ತಂದೆಯ ಹೆಸರು ಗೊತ್ತಿಲ್ಲದೇ ತಾಯಿಯ ಹೆಸರನ್ನೇ ಹೇಳುವ ಸತ್ಯಕಾಮ ಜಾಬಾಲಿ ನೆನಪಾದ.
ಉದ್ಯೋಗ ಪರ್ವ ಹಾಗೂ ಶಾಂತಿ ಪರ್ವ ಮುಂದಿನ ಕತೆಗಳನ್ನು ಬಿಚ್ಚಿಡುತ್ತಾ ಹೋಗುತ್ತವೆ. ಸಂಸರ ನಿರ್ಧಾರ, ಹೊಸ ಜಿಪ್ಸಿ ಕೆಫೆ, ಸಹದೇವನ ಮುಂದಿನ ಬದುಕು ಎಲ್ಲವನ್ನೂ.
ಸಹದೇವನ ಬುದ್ಧಿವಂತಿಕೆ ಹಿಂದಿನ ಸೋನಾಲಿಕಾ.. ಎಂದರೆ ಸೋನುವಂತೂ ಹಿಡಿಸದಿರಲು ಕಾರಣವೇ ಇಲ್ಲ. ಕಿವಿ ಕೇಳದ, ಮಾತು ಬಾರದ ಅವಳ ಚುರುಕುತನ, ಅರ್ಥ ಮಾಡಿಕೊಳ್ಳುವ ಪರಿ ಮೆಚ್ಚಿಕೊಳ್ಳದವರಿಲ್ಲ. ಆದರೆ, ಆಕೆ ಯೂಟ್ಯೂಬ್ ಅಥವಾ ಭಾಷಣದ ಲಿಂಕ್ ಗಳನ್ನು ಸಹದೇವನಿಗೆ ಕಳುಹಿಸುತ್ತಾಳೆ ಎನ್ನುವ ಒಂದು ಅಂಶ ಯಾಕೋ ಅಷ್ಟು ಕನ್ವಿನ್ಸಿಂಗ್ ಎನ್ನಿಸಲಿಲ್ಲ. ಬಹುಶಃ ತುಟಿಯ ಚಲನೆಯ ಮೂಲಕ ಅವಳು ವಿಡಿಯೋದಲ್ಲಿನ ಮಾತನ್ನು ಅರ್ಥ ಮಾಡಿಕೊಳ್ಳಬಹುದೇನೋ.. ಅಥವಾ, ಸಬ್ ಟೈಟಲ್ಸ್ ಅಥವಾ ಮತ್ಯಾವುದೋ ಟೆಕ್ನಾಲಜಿ ಬಳಸುವ ಸಾಧ್ಯತೆಗಳಿವೆ. ಆದರೆ, ಆ ಕುರಿತು ಎಲ್ಲಿಯೂ ವಿವರ ನನಗೆ ಸಿಗಲಿಲ್ಲ. ಬರಹ ರೂಪದಲ್ಲಿನ ಮಾಹಿತಿಯನ್ನು ಹೆಕ್ಕಿ, ಬರಹದ ಮೂಲಕ ಸಂವಹನ ನಡೆಸುವುದೇನೋ ಸರಿ. ಆದರೆ, ಚಾಟ್ ಜಿಪಿಟಿಯ ಕಾಲವಲ್ಲವಾ.. ಸಾಧ್ಯತೆಗಳಿವೆ. ಸಾಧ್ಯತೆಗಳನ್ನು ಅಲ್ಲಗಳೆಯುತ್ತಿಲ್ಲ. ಆದರೆ, ಸ್ಪಷ್ಟತೆ ಸಿಗಲಿಲ್ಲ ಎಂದಷ್ಟೇ ಹೇಳುತ್ತಿದ್ದೇನೆ.
ಸಹದೇವನನ್ನು ಭೇಟಿಯಾಗಲು ಬಂದಿದ್ದ ಪ್ರದ್ಯುಮ್ನ ಜೋಶಿ ಹಾಗೂ ಪಂಕಜಾ ಪಾಂಡೆಯ ಅಹವಾಲುಗಳನ್ನು ಸಹದೇವ ನೆರವೇರಿಸುವ ಮಾತನಾಡಿದ್ದರೆ..?? ಬಹುಶಃ, ಮುಂದೆ ಯಾವತ್ತೋ.. ಮತ್ತೆ ಯಾರಿಂದಲೋ ಈ ಸಂಧರ್ಭಗಳು ಸೃಷ್ಟಿಯಾಗುತ್ತಿದ್ದವೋ ಏನೋ.. ಇಡೀ ಘಟನೆಗೆ ಕಾರಣ ಹುಡುಕುತ್ತಾ ಹೊರಟರೆ ಎಲ್ಲವೂ ಇಂಟರ್ ಲಿಂಕ್ ಆಗಿವೆ. ಇವರು ಹೀಗೆಯೇ ಎಂದು ನಿರ್ಧರಿಸಲು ಕಷ್ಟವೋ ಹಾಗೆ ಇಂತಹದ್ದೇ ಕಾರಣ ಎಂದು ಹೇಳುವುದೂ ಕಷ್ಟವೇ..
ಹಲವು ಪ್ರಶ್ನೆಗಳ ಉತ್ತರ ಉಪಸಂಹಾರದಲ್ಲಿದೆ. 400 + ಪುಟಗಳ ಓದು ಹೊರೆ ಎನ್ನಿಸಲಿಲ್ಲ. ಸರಾಗವಾಗಿ ಮುಂದೇನು ಮುಂದೇನು ಎನ್ನುತ್ತಾ ಓದಿಸಿಕೊಂಡು ಹೋಗುತ್ತದೆ. ಮರುಕಳಿಸುವ ಮಹಾಭಾರತದ ಕತೆಯ ಪಾತ್ರಗಳು ಹೊಸ ಹೆಸರು, ಹೊಸ ರೂಪದಲ್ಲಿ ಬಂದು ಕಥೆ ಹೇಳುವಂತಿವೆ.
ಇತಿಹಾಸ ಮರುಕಳಿಸುತ್ತದೆ. ಪುರಾಣದ ಪುನರಾವರ್ತನೆಯಾಗುತ್ತದೆ. 'ಸಂಭವಾಮಿ ಯುಗೇ ಯುಗೇ' ಅಂದದ್ದು ಸುಳ್ಳಲ್ಲ. ಅಳಿದದ್ದು ಮತ್ತೆ ನಮ್ಮೊಳಗೇ ಹುಟ್ಟುತ್ತಲೇ ಇರುತ್ತದೆ.
ಮನಸು ಧರ್ಮಕ್ಷೇತ್ರ,
ಮನಸ್ಸು ಕುರುಕ್ಷೇತ್ರ !
ಮನಸ್ಸೇ ಮಹಾಭಾರತ !
ಎನ್ನುವ ಬೆನ್ನುಡಿಯ ಮಾತುಗಳು ಸೆಳೆದವು. ಉಲ್ಲೇಖಿಸಲು ಇಂತಹಾ ಅದೆಷ್ಟು ಮಾತುಗಳಿವೆ. ಸಿಗುತ್ತಲೇ ಇರುವ ಇಂತಹಾ ಹೊಳಹುಗಳನ್ನು ಹುಡುಕುತ್ತಾ ಹೋದರೆ ದಂಡಿಯಾಗಿ ಸಿಗುತ್ತವೆ. ಮರುಕಳಿಸುವ ಮಹಾಭಾರತದ ಎಂದರೆ ಹಸ್ತಿನಾವತಿ ಕಾದಂಬರಿಯನ್ನು ಓದಿಯೇ ಸವಿಯಿರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ