ಪುಸ್ತಕದ ಶೀರ್ಷಿಕೆ : ದೌರ್ಗಂಧಿಕಾಪಹರಣ
ಲೇಖಕರು : ಡಾ. ಬಿ.ಜಿ.ಎಲ್ ಸ್ವಾಮಿ
ಪ್ರಕಾಶಕರು : ವಸಂತ ಪ್ರಕಾಶನ
ಮೊದಲನೇ ಮುದ್ರಣ : 1975
ದ್ವಿತೀಯ ಮುದ್ರಣ : 2019 ( ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 80
ಬೆಲೆ : 50 ರೂ.
"ಜನಸಾಮಾನ್ಯರನ್ನು ಗುರಿಯಾಗಿಟ್ಟುಕೊಂಡು ವಿಜ್ಞಾನ ವಿಷಯಗಳನ್ನು ಪ್ರಸ್ತಾಪಿಸುವ ಬರವಣಿಗೆ ರೀತಿಯಲ್ಲಿ ಇದೊಂದು ಪ್ರಾಯೋಗಿಕ ಪ್ರಯತ್ನ. ಜನ ಒಪ್ಪಿಕೊಂಡರೆ ಇನ್ನಷ್ಟು ಬರೆಯಲು ಪ್ರೇರಣೆಯಾಗುತ್ತದೆ" ಎಂದು ಮುನ್ನುಡಿಯಲ್ಲಿ ಲೇಖಕರು ಹೇಳಿದ್ದಾರೆ. ನಿಜಕ್ಕೂ ಅವರ ಪ್ರಯತ್ನ ಫಲಿಸಿದೆ ಎಂದೇ ಅರ್ಥ.
ಇದು ನಾನು ಓದಿದ ಡಾ. ಬಿ.ಜಿ.ಎಲ್ ಸ್ವಾಮಿಯವರ ಮೊದಲ ಪುಸ್ತಕ. ಇವರ ಪುಸ್ತಕಗಳ ಕುರಿತು, ಬರವಣಿಗೆಯ ಕುರಿತು ಕೇಳಿದ್ದೇನಾದರೂ.. ಪುಸ್ತಕ ಕೈಗೆತ್ತಿಕೊಳ್ಳುವಲ್ಲಿ ತಡ ಮಾಡಿದೆ ಎನ್ನಿಸಿತು. ಇವರ 'ಸಸ್ಯ ಸಗ್ಗ' ಓದಲೇ ಬೇಕಾದ ಕೃತಿ ಎನ್ನುತ್ತಾರೆ ಹಲವರು. ಇದನ್ನು ಓದಿದ ನಂತರ ಲೇಖಕರ ಬರವಣಿಗೆಯ ಶೈಲಿ ಇಷ್ಟವಾಯಿತು. ತಿಳಿ ಹಾಸ್ಯದೊಂದಿಗೆ ಎಂತಹಾ ಕ್ಲಿಷ್ಟ ವಿಚಾರವನ್ನೂ ಮನಮುಟ್ಟುವಂತೆ ಹೇಳಬಲ್ಲರು. ಬರವಣಿಗೆಯ ಶೈಲಿಗೇ ನಡೆಯುತ್ತಿದ್ದ ವಿಚಾರಗಳು ಕಣ್ಮುಂದೆ ಬಂದಂತಾದರೂ.. ಈ ಪುಸ್ತಕದ ಮತ್ತೊಂದು ವಿಶೇಷತೆ ಎಂದರೆ ವ್ಯಂಗ್ಯ ಚಿತ್ರಗಳು. ಇದನ್ನೂ ಸಹಾ ಲೇಖಕರೇ ಬಿಡಿಸಿದ್ದಾರೆ. ಮನಮುಟ್ಟುವ ಶೈಲಿಯ ವಿಭಿನ್ನ ವಾಕ್ಯಗಳನ್ನು ಆಯ್ದು ಅದಕ್ಕೆ ತಕ್ಕಂತೆ ಬರೆದಿರುವ ಈ ಚಿತ್ರಗಳೂ ಇಷ್ಟವಾಗುತ್ತವೆ. ಜೊತೆ, ಜೊತೆಗೆ ಶ್ಲೋಕಗಳಂತೆ ಬರುವ ಹಾಸ್ಯೋಕ್ತಿಗಳೂ ವಿಭಿನ್ನವಾಗಿ ಸೆಳೆಯುವಂತಿವೆ.
ಇಲ್ಲಿನ ದೌರ್ಗಂಧಿಕಾಪಹರಣದಲ್ಲಿ ಮೂರು ವಿಭಿನ್ನ ಪ್ರಸಂಗಗಳಿವೆ.
ಮೊದಲನೆಯದ್ದು ಅವರು ಸಸ್ಯಶಾಸ್ತ್ರದ ವ್ಯಾಸಂಗ ಮಾಡುವಾಗಿನ ಸಂಧರ್ಭ. ಅವರೊಡನೆ ಮತ್ತೈದು ಜನರೂ ವ್ಯಾಸಂಗ ಮಾಡುತ್ತಿರುತ್ತಾರೆ. ಅವರ ಹೆಸರುಗಳನ್ನು ಹೇಳುವಾಗಿನ ವಿಶಿಷ್ಟತೆಯೂ ಸೊಗಸಾಗಿದೆ. ಪುರಾಣದ ಹೆಸರುಗಳನ್ನು ರಾಮಾಯಣ ಅಥವಾ ಮಹಾಭಾರತದಿಂದ ಆಯ್ದು ಇಟ್ಟ ಹೆಸರುಗಳು. ಹೆಸರುಗಳನ್ನು ನೆನಪಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗುತ್ತದೆ ಕೆಲವೊಮ್ಮೆ. ಆದರೆ, ಇಲ್ಲಿ ಹಾಗಿಲ್ಲ. ಕಾಡು - ಮೇಡು ಅಲೆಯುತ್ತಾ ವನವಾಸ ಮಾಡುತ್ತಿದ್ದವರಿಗೆ ಸಿಗುವುದು ಹಲಸಿನ ಹಣ್ಣು. ಸುವಾಸನೆ ಬೀರುವ ಹಲಸಿನಹಣ್ಣು ಕೂಡಾ ಈಗೊಂದು ದುರ್ಗಂಧಕ್ಕೆ ಕಾರಣವಾಗಬಲ್ಲದು ಎನ್ನುವ ಆ ಸಂಧರ್ಭದ ಸಾರ ಓದಿಯೇ ತಿಳಿಯಿರಿ.
ಎರಡನೇ ಪ್ರಸಂಗ ಮಲಯ ದೇಶದ ಕಾಡುಗಳಲ್ಲಿ ಕಂಡು ಬರುವ 'ಡೂರಿಯೋ ಸಿಬೆತಿನುಸ್' ಎಂದು ಕರೆಯಲಾಗುವ ಡೂರಿಯನ್ ಎಂಬ ಮರದ್ದು. ಈ ಹಣ್ಣಿನ ರುಚಿಯೇನೋ ಸಿಹಿ ಆದರೆ, ತಿಂದ ನಂತರದ ರುಚಿ - ವಾಸನೆ ರಾಳದ್ದು ಎನ್ನುತ್ತಾರೆ. ಸಮಸ್ಯೆ ಅಲ್ಲಿಯದ್ದೂ ಅಲ್ಲ. ಹಣ್ಣು ಕೊಳೆತಾಗ ಹೊಮ್ಮುವ ದುರ್ನಾತದ್ದು.. ಉಪಾಧ್ಯಾಯರು ವಿದ್ಯಾರ್ಥಿಗಳನ್ನು ಅಂತಹಾ ಸ್ಥಳಕ್ಕೆ ಕರೆದೊಯ್ಯುವುದು, ಅಲ್ಲಿ ಅವರಿಂದಾಗುವ ಅವಘಡಗಳು, ಶಿಕ್ಷೆ ಇವೆಲ್ಲವೂ ಡೂರಿಯನ್ ಹಿಂದೆ ಅಲ್ಲಲ್ಲ ದುರ್ಗಂಧದ ಸುತ್ತಲೂ ಸುತ್ತುವಂತಹದ್ದು.. ಮೊದಲನೆಯದ್ದಕ್ಕಿಂತ ಪ್ರೌಢವೂ ಗಾಢವೂ ಆದ ದುರ್ಗಂಧ ಇದು.
ಮೂರನೆಯ ಘಟನೆ ಲೇಖಕರೇ ಉಪಾಧ್ಯಾಯರಾದಾಗ ಅವರ ವಿದ್ಯಾರ್ಥಿಗಳನ್ನು ಕೇರಳದ ಪೊನ್ಮುಡಿ ಕಾಡಿಗೆ ಕರೆದೊಯ್ಯುತ್ತಾರೆ. ಅವೆರಡರ ಮಿಶ್ರಿತವೋ ಅಥವಾ ಅವೆರಡಕ್ಕಿಂತಲೂ ಗಾಢವೂ ಆದ ದುರ್ಗಂಧ ಕಂಡು ಬಂದ ಕತೆ ಇಲ್ಲಿದೆ.
ತಿಳುವಳಿಕೆಯ ಜೊತೆಗೆ ಪರಿಸರದ ಜ್ಞಾನವನ್ನೂ ನೀಡುತ್ತಾ.. ಶೈಕ್ಷಣಿಕ ಪ್ರವಾಸದ ಮಜವಾದ ಜೊತೆಗೆ ದುರ್ಗಂಧ ಹರಡಿದ ಅನುಭವದಿಂದ ನಮಗೂ ಆ ವಾಸನೆಯನ್ನು ಹರಡಿಸುತ್ತಾ ಹೋಗುತ್ತಾರೆ. ಒಂದು ದುರ್ಗಂಧ ಕೂಡಾ ಹೇಗೆಲ್ಲಾ ತನ್ನ ಖ್ಯಾತಿ ಪಡೆಯಿತು ಎನ್ನುವುದರ ಅಚ್ಚರಿ ಇಲ್ಲಿದೆ. ಹಾಸ್ಯವೆಂದರೆ ಇತ್ತೀಚೆಗೆ ಅಶ್ಲೀಲತೆ ಇಲ್ಲದೇ ನಿರೂಪಿಸುವುದೇ ಕಷ್ಟ ಎನ್ನುವಂತಾಗಿರುವ ಸಂಧರ್ಭದಲ್ಲಿ ಆರೋಗ್ಯಕರ ತಿಳಿಹಾಸ್ಯದಿಂದ ಸೆಳೆಯುತ್ತದೆ ಈ ಪುಸ್ತಕ. ಪುಟ್ಟ ಪುಸ್ತಕ ಬೇಗ ಓದಿಸಿಕೊಂಡು ಹೋಗುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ