ಮಂಗಳವಾರ, ಏಪ್ರಿಲ್ 7, 2026

ಕಥಾಭರಣ (ಪುಸ್ತಕ ಯಾನ - 67)


ಪುಸ್ತಕದ ಶೀರ್ಷಿಕೆ : ಕಥಾಭರಣ

ಲೇಖಕರು : 28 ಲೇಖಕರು

ಸಂಪಾದಕರು : ಡಾ. ಅಜಿತ್ ಹರೀಶಿ, ವಿಠಲ್ ಶೆಣೈ

ಪ್ರಕಾಶಕರು : ಲಕ್ಷ್ಮೀ ಮುದ್ರಣಾಲಯ

ಮೊದಲನೇ ಮುದ್ರಣ : 2022

ಪುಟಗಳು : 236

ಬೆಲೆ : 290 ರೂ.


28 ವಿಭಿನ್ನ ಕಥೆಗಾರರ ವಿಭಿನ್ನ ಕಥೆಗಳ ಸಂಕಲನ ಕಥಾಭರಣ ಹೆಸರಿಗೆ ತಕ್ಕಂತೆ ಕತೆಗಳ ಆಭರಣವೇ ಸರಿ. ಏಕೆಂದರೆ, ಇಲ್ಲಿಯ ಕಥೆಗಳ ಶೈಲಿ ವಿಭಿನ್ನ. ಒಂದನ್ನೊಂದಕ್ಕೆ ಹೋಲಿಸಲಾಗದು. ಎಲ್ಲದಕ್ಕೂ ಅದರದ್ದೇ ಮೌಲ್ಯವಿದೆ. ಹಳೆಯ ಘಟನಾವಳಿಗಳು ಹೊಸ ಕಾಲಕ್ಕೆ ತಕ್ಕಂತೆ, ಹೊಸತನದ ನಿರೂಪಣೆಗೆ ತಕ್ಕಂತೆ ಬದಲಾಗಿದ್ದರೆ, ಕೆಲವು ಕತೆಗಳ ಕಥಾವಸ್ತು ವಿಭಿನ್ನವೆನಿಸುತ್ತದೆ. ಕೌಟುಂಬಿಕ, ಪತ್ತೇದಾರಿ, ವೈಜ್ಞಾನಿಕ, ಪ್ರೀತಿ- ಪ್ರೇಮ, ಸಾಮಾಜಿಕ ಹೀಗೆ ಎಲ್ಲ ಕತೆಗಳೂ ಮಿಳಿತಗೊಂಡಿವೆ. ಒಂದು ಆಭರಣದಲ್ಲಿ ವಜ್ರ, ಚಿನ್ನ, ಪಚ್ಚೆ, ಮುತ್ತು, ರತ್ನ, ಹವಳಗಳ ಮಿಶ್ರಣವಿರುವಂತೆ. 


ಉಪರಿ - ಡಾ. ಅಜಿತ್ ಹರೀಶಿ


ಶೀರ್ಷಿಕೆಯಿಂದ ವಿಭಿನ್ನವಾಗಿ ಗಮನ ಸೆಳೆದ ಕಥೆ. ಉಪರಿ ಎಂದರೆ ಓವರ್ ಲ್ಯಾಪ್ ಎನ್ನುವರ್ಥ ಬರುತ್ತದೆ. ಹುಣ್ಣಿಮೆಯ ಉಪರಿಯ ದಿನ ಹುಚ್ಚು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಕೆಲವೆಡೆ. ಆ ಹುಚ್ಚ ಹೇಳಿದ್ದೋ ಅಥವಾ ಇವರ ಮನದ ಮಾತುಗಳೇ ಹುಚ್ಚನಿಂದ ಬಂದದ್ದು ಎನ್ನಿಸುವುದೋ ಅಯೋಮಯ. 

ಕೆಲವು ನೋವುಗಳು ಮನುಷ್ಯನನ್ನು ಹಣ್ಣು ಮಾಡಿಬಿಡುತ್ತವೆ. ಆದರೆ, ಅದರ ಮೂಲ ಕೆದಕುತ್ತಾ ಹೊರಟರೆ ಅದು ದೈಹಿಕ ನೋವಾ ಅಥವಾ ಮಾನಸಿಕ ನೋವಾ ಎಂದು ತಿಳಿಯುವುದಕ್ಕೆ ಸಮಯ ಹಿಡಿಯುತ್ತದೆ. ತಲೆಮಾರುಗಳಿಂದಲೂ ವಂಶಪಾರಂಪರ್ಯವಾಗಿ ಬರುವ ಬಳುವಳಿಯೋ, ಅವನೇ ತಂದುಕೊಂಡ ಪರಿಸ್ಥಿತಿಯೋ ಒಟ್ಟಿನಲ್ಲಿ ಅಯೋಮಯ. ಮನೋವೈಜ್ಞಾನಿಕ ಕತೆಯಾದರೂ.. ಹುಚ್ಚಿನ, ಮಂಪರಿನ ಪರಿಸ್ಥಿತಿ ಇದ್ದರೂ ಅದೊಂದು ಕಾಯುವಿಕೆಯ ನಿರೀಕ್ಷೆ ಕಟು ವಾಸ್ತವವನ್ನು ತೆರೆದಿಡುತ್ತದೆ. 


ಮಾರಿಜಾತ್ರೆಯ ದೋಣಿ - ಅಂಜನಾ ಹೆಗಡೆ


ಎಷ್ಟೇ ದೊಡ್ಡವರಾದರೂ ಕೌತುಕಗಳನ್ನು ಕಾಣಲು ಮಗುವಿನ ಮನಸ್ಸಿರಬೇಕು. ಅದರಲ್ಲೂ ಜಗತ್ತನ್ನೇ ಮರೆತು, ಕುತೂಹಲದ ಕಣ್ಣುಗಳಿಗೆ ತಾನು ಕುರುಡಾಗಿಸಿಕೊಂಡು ತನ್ನಲ್ಲಿಯೇ ತನ್ನ ಲೋಕವನ್ನು ಸೃಷ್ಟಿಸಿಕೊಳ್ಳುವ ತಾದ್ಯಾತ್ಮತೆಯನ್ನು ತೋರಿಸಿಕೊಟ್ಟ ಕತೆ 'ಮಾರಿ ಜಾತ್ರೆಯ ದೋಣಿ'. 

ಊರಿನ ಜಾತ್ರೆಯ ಕಲಾತ್ಮಕ ನೋಟ, ವ್ಯಾಪಾರ, ಚೌಕಾಸಿ, ಜಾತ್ರೆಯ ವಾತಾವರಣ ಎಲ್ಲವನ್ನೂ ದೇವಿಯ ದೃಷ್ಟಿಯಿಂದ ನೋಡುವಾಗ ದೇವರಾದ ದೇವಿಗೂ ಹೀಗೆಯೇ ಕಂಡಿರಬಹುದಾ ಎನ್ನಿಸಿತು. ಬೆಳ್ಳಕ್ಕಿಯಾಗುವ ಭ್ರಮೆಯ ದೇವಿಗೆ ಅರ್ಥವಾದದ್ದು ಸಂಭ್ರಮವೂ ಈ ಕ್ಷಣ ಎದುರಿಗಿದ್ದು ಮರುಗಳಿಯೇ ಬೆಳ್ಳಕ್ಕಿಯಂತೆಯೇ ಎನ್ನುವ ಸತ್ಯ ಅವಳನ್ನು ಅದೆಷ್ಟು ಪ್ರೌಢವಾಗಿಸಿತು. ಮುಗ್ಧತೆಯಿಂದ ಪ್ರೌಢತೆಯ ಕತೆ ಎಂದರೂ ತಪ್ಪಾಗಲಾರದು.


ಟಚ್ ಸ್ಕ್ರೀನ್ - ಗಣೇಶ್ ಪ್ರಸಾದ್


ಈಗ ಕಾಲ ಬದಲಾಗಿದೆ. ಎಲ್ಲವೂ ಡಿಜಿಟಲ್ ಮಯ. ಅಂತೆಯೇ.. ಮೋಸಗಳು, ಸ್ಕ್ಯಾಮ್ ಗಳೂ ಹೆಚ್ಚಾಗಿವೆ. ಇದನ್ನು ಮಾಡುವವರೂ ನಮ್ಮಂತೆಯೇ ಡಿಜಿಟಲ್ ಯುಗದಲ್ಲಿ ಇರುವವರೇ.. 

"ಕದ್ದವರು ಯಾರು ? ಅಂದರೆ ಮಾಸಿದ ಸೀರೆಯವರು" ಎನ್ನುವ ಗಾದೆಯಂತೆ ಹಿರಿಯರ ಬಳಿ ಅವರಿಗೆ ಬಳಸಲು ಬಾರದ ದುಬಾರಿ ಟಚ್ ಸ್ಕ್ರೀನ್ ಕಂಡು ಸಂಶಯ ಪಡುವ, ಪತ್ತೇದಾರಿಕೆಗೆ ಹೊರಡುವ ಹುಡುಗಿ ಅವಳಿಗಿಂತ ಹೆಚ್ಚು ಆಲೋಚನೆ ಮಾಡುವವರಿಂದ ಟ್ರ್ಯಾಪ್ ಆದದ್ದು ಹೇಗೆ ? ಎನ್ನುವುದರ ಜೊತೆಗೆ ಅತಿ ಬುದ್ಧಿವಂತಿಕೆಯ ಇಂದಿನ ಜನರೇಷನ್ ನ ಚಿತ್ರಣವಿದೆ. 


ಬೆಳಕಿನ ಮರ - ಗೋಪ ಕುಮಾರ್


ದೇವರು ಭೇದ - ಭಾವ ಮಾಡುವುದಿಲ್ಲ. ಆದರೆ, ದೇವಾಲಯಗಳಲ್ಲಿ ಭೇದ - ಭಾವ ನಡೆಯುತ್ತದೆ. ಅಂತಹದ್ದೇ ಜಾತಿ ಪದ್ಧತಿಯ ಭೇಧ - ಭಾವವನ್ನು ನಿವಾರಿಸಿದ್ದು ಒಂದು ಮರ. ಬೆಳಕಿನ ಮರವೆಲ್ಲಿಯಾದರೂ ಕಾಣಸಿಗಬಹುದಾ..?? ಅಂತಹದ್ದೇ ಬೆಳಕಿನ ಮರ ಜಾತಿ ಪದ್ದತಿಯನ್ನು ಸುಟ್ಟ ಬೆಂಕಿಯೂ ಆಯಿತು. ಆದರೆ, ಇದರಿಂದ ನೋವಾಗಲಿಲ್ಲ, ಜಗಳವಾಗಲಿಲ್ಲ. ಆದರೆ , ಎಲ್ಲರಿಗೂ ದಾರಿದೀಪವಾಯಿತು. ಸೂಕ್ಷ್ಮವಾದ ವಿಚಾರವನ್ನು ಯಾರ ನಂಬಿಕೆ ಹಾಗು ಧಾರ್ಮಿಕ ವಿಚಾರಗಳಿಗೂ ಧಕ್ಕೆಯಾಗದಂತೆ ಸೂಕ್ಷ್ಮವಾಗಿ ಕಟ್ಟಿ ಕೊಟ್ಟಿದ್ದಾರೆ.


ಯಾರವರು ? - ಗುರುಪಾದ ಬೇಲೂರು


ಅಲೆಕ್ಷ್ಯಾನ್ಡ್ರೋ ಅಮೆನಾಬರ್ ರವರ ಸ್ಪಾನಿಷ್ ಕಥೆಯ ಪ್ರೇರಣೆಯಿಂದ ಬರೆದ ಕತೆ ಎಂದು ಲೇಖಕರು ಉಲ್ಲೇಖಿಸಿದ್ದನ್ನು ನಾನು ಗಮನಿಸಿದ್ದು ಒಂದೇ ಸಮನೆ ಓದಿಸಿಕೊಂಡು ಹೋದ ಕತೆಯ ಕೊನೆಯಲ್ಲಿಯೇ.. ಕೋವಿಡ್ ಕಾಲದ ಕಥನ ಎಂದೆನಿಸುವಂತಿರುವ ಕತೆ ಹಾರರ್ ಆಗಿ ಬದಲಾದದ್ದು, ಕೊನೆಯವರೆಗೂ ಗುಟ್ಟು ಬಿಟ್ಟು ಕೊಡದೆ ಓದಿಸಿಕೊಂಡು ಹೋಗುತ್ತದೆ. ಬದಲಿಸಲಾರದ ಒಂದು ತಪ್ಪು ಹೆಜ್ಜೆಯಿಂದ ಒಂದು ಸಂಸಾರದ ಕತೆಯೇ ಬದಲಾಗುವ ಚಿತ್ರಣವಿದೆ. ಇದನ್ನು ಓದಿದ ನಂತರ ಮನುಷ್ಯರು ದೆವ್ವಕ್ಕೆ ಕಾಟ ಕೊಡುತ್ತಾರೋ ಅಥವಾ ದೆವ್ವಗಳು ಮನುಷ್ಯರಿಗೆ ಕಾಟ ಕೊಡುತ್ತಾರೋ ಎಂದು ನಿರ್ಧರಿಸುವುದು ಓದುಗರಿಗೇ ಬಿಟ್ಟದ್ದು.


ಫ್ಲಾಟ್ ನಂಬರ್ 606 - ಹರಿಕಿರಣ್ ಹೆಚ್.


ತಮಾಷೆಯಿಂದ ಶುರುವಾಗುವ ಕಥೆಯೊಂದು ಗಂಭೀರತೆ ತಾಳಿ ಇನ್ನೇನು ಅಚಾತುರ್ಯ ನಡೆದೇ ಹೋಯಿತು ಎನ್ನುವಷ್ಟರಲ್ಲಿ ನಿರಾಳವಾಗಿಸುವ ಕಥೆ. ಗೊತ್ತಿಲ್ಲದ ನಂಬರ್ ಒಂದಕ್ಕೆ, ಮೆಸೇಜ್ ಮಾಡಿ ಕರೆ ಮಾಡಿ ಅಲ್ಲಿಂದ ಅಪರಿಚತರು ಪರಿಚಯವಾಗುವ ಕತೆ ಬೇರೆಯದ್ದೊಂದು ಸಂದೇಶವನ್ನೂ ನೀಡುವಂತಿದೆ. ಟೀನ್ ಏಜ್ ಹುಡುಗರ ನಡುವೆ ನಡುವೆಯ ಮಾತುಕತೆ, ಭಾಷೆ ಎಲ್ಲವೂ ಅಂತೆಯೇ ಮೂಡಿಬಂದಿದೆ.


ಮಂದಾಕಿನಿ - ಮಂಜುನಾಥ ರಘುಪತಿ


ಗಂಡ ಸತ್ತ ನಂತರ ಮಂದಾಕಿನಿಗೆ ಸಿಗುವ ಸಿಮ್ ಒಂದು ಅವಳಿಗೇ ಅರಿವಿಲ್ಲದಂತೆ ಅವಳ ಜೀವನದ ದಿಕ್ಕನ್ನು ಬದಲಾಯಿಸಿ, ಅವಳ ಬದುಕಿನಲ್ಲಿ ನಡೆದಿದ್ದ ಸತ್ಯವೊಂದನ್ನು ತಿಳಿಸಿಕೊಡುವ ಕಥೆಯಲ್ಲಿ ಮಂದಾಕಿನಿಗೆ ಇರುವ ಕುತೂಹಲವೇ ನಮಗೂ ಮೂಡುವಂತೆ ಮಾಡುತ್ತಾ ಕುತೂಹಲದಿಂದ ಓದಿಸಿಕೊಂಡು ಹೋಗುವ ಕಥೆ. ಎಷ್ಟೋ ಸಾರಿ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ನಾವು ಮಾಡಲಾಗದ್ದನ್ನು.. ಹೇಳಲಾಗದೇ ಅನುಭವಿಸುತ್ತಾ ಇರುವಾಗ ಒಮ್ಮೆ ಅದರಿಂದ ಹೊರಬರುವ ಮಾರ್ಗ ಸಿಕ್ಕಿದಾಗ ಆಗುವ ಆನಂದ, ನಿರಾಳತೆ ಪದಗಳಿಗೆ ದಕ್ಕದ್ದು. ಇಲ್ಲಿನ ಅಂತ್ಯವೂ ಹೀಗೆಯೇ ಇದೆ.

'ಇಲ್ಲ' ಎಂದು ಹೇಳುವುದಕ್ಕೂ ಯಾವುದೇ ಮಂತ್ರದಷ್ಟೇ ಶಕ್ತಿಇರುವಂಥದ್ದೆಂದು ಮಂದಾಕಿನಿಗೆ ಅನ್ನಿಸತೊಡಗಿತು !


ಇಲ್ಲಿನ ಮಂದಾಕಿನಿಯ ಸ್ವಾಭಿಮಾನ, ಗೊತ್ತಾದ ಸತ್ಯವನ್ನು ಅರಗಿಸಿಕೊಂಡು ಮುನ್ನಡೆಯುವ ರೀತಿ ಒಂದು ರೀತಿಯ ಪಾಸಿಟಿವಿಟಿ ನೀಡುತ್ತದೆ.


ಕಗ್ಗಂಟು - ನಾಗೇಶ್ ಕುಮಾರ್ ಸಿ. ಎಸ್


ಪತ್ತೇದಾರಿ ಕತೆಗಳನ್ನು ಬರೆಯುವುದು ಕೊಂಚ ರಿಸ್ಕ್ ನ ಕೆಲಸ. ಇತ್ತೀಚಿನ ವೆಬ್ ಸೀರೀಸ್, ಮೂವಿ, ಇದುವರೆಗೂ ಬಂದ ಕತೆಗಳ ಹೆಚ್ಚಿನಂಶವನ್ನು ಓದಿರುವ ಓದುಗರಿಗೆ ಹೊಸತನ್ನು ಕತೆಯಲ್ಲಿ ಕಟ್ಟಿ ಕೊಡುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಕತೆಯ ಜಾಡು ಊಹಿಸುವಂತಿಲ್ಲದೆ ಅಥವಾ ಊಹೆಗಿಂತ ಬೇರೆಯ ರೀತಿಯ ಕತೆ ಬರೆದಾಗ ಅದಕ್ಕೆ ಲಾಜಿಕ್ ಕೂಡಾ ಒಪ್ಪುವಂತಿರಬೇಕು. ಅಂತಹಾ ಕಥನ ಕಲೆ ಈ ಕತೆಯಲ್ಲಿ ಕಾಣುತ್ತದೆ. 

'ನೋ ನಥಿಂಗ್' ಎಂಬುದಕ್ಕೆ ಹೀಗೂ ಇರಬಹುದಾ ಎನ್ನಿಸುತ್ತಲೇ.. ಕಗ್ಗಂಟಿನ ರಹಸ್ಯ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಗುಪ್ತಚರ ಇಲಾಖೆಯ ಮೂಲಕ ನಡೆಯುವ ಒಂದು ಆಪರೇಷನ್ ನ ಕತೆ. ಕಗ್ಗಂಟಿನ ರಹಸ್ಯ ಹೀಗಿತ್ತಾ.. ಎನ್ನಿಸುವುದರ ಜೊತೆಗೆ ಹೀಗೂ ಇರಬಹುದಾ ಎನ್ನಿಸುವಂತೆ ಮಾಡುತ್ತದೆ ಈ ಕತೆ.


ಭಾಗೀರಥಿ - ನವೀನ್ ಶಾಂಡಿಲ್ಯ


ಕನಸು, ನಂಬಿಕೆ, ವಾಸ್ತವ, ಸತ್ಯ - ಮಿಥ್ಯ ಇವೆಲ್ಲದರ ಎರಕ ಹೊಯ್ದ ಕತೆಯಂತಿದೆ. ಈ ಕತೆಯನ್ನು ಓದಿದಾಗ ಯಾವುದೋ ಸಿನಿಮಾ ನೋಡಿದ ಅಭಿಪ್ರಾಯ ಬಂದಿತು. ಸಾವು ಹತ್ತಿರ ಬಂದಾಗಲೇ ಅಲ್ಲವಾ ಮನುಷ್ಯನ ಅಂತಃಪ್ರಜ್ಞೆ ಎಚ್ಚರವಾಗಿ ಸಾವಿನಿಂದ ಹೆದರಿ, ನಂಬಲಾರದ ವಿಷಯಗಳನ್ನು ನಂಬುತ್ತಾ.. ತಪ್ಪುಗಳಿಗೆ ಕ್ಷಮೆ ಬೇಡುತ್ತಾ ಒಳ್ಳೆಯತನವನ್ನು ಹೊದ್ದುಕೊಳ್ಳುವುದು. ಆದರೆ, ಇಲ್ಲಿ ವಾಸ್ತವ, ಭ್ರಮೆಗಳ ಜೊತೆಗೆ ಒಂದು ಪ್ರೇಮ ಕಥನ, ಗೊತ್ತಿಲ್ಲದ ಮಾಯೆ ಮಿಳಿತವಾದಂತಿದೆ. ಒಬ್ಬರ ನಂಬಿಕೆಯನ್ನು ನಂಬದೇ, ಸ್ಥಳ ಪುರಾಣಕ್ಕೆ ಬೆಲೆ ಕೊಡದೆ ಎಲ್ಲವನ್ನೂ ವೈಜ್ಞಾನಿಕ ನೆಲೆಗಟ್ಟಿನಿಂದ ನೋಡಲು ಹೊರಟರೆ ಅದು ಸಾಧ್ಯವಾ ? ಎಂಬ ಪ್ರಶ್ನೆಯೂ ಮೂಡುತ್ತದೆ. 

ತುಳಸಿಕೆರೆ ದಂಡೆಯ ಮೇಲೆ ನಿಂತ ಸಾಗರಿ ಅಲ್ಲಲ್ಲ.. ಭಾಗೀರಥಿ ಕಣ್ಣೆದುರಿಗೆ ಬಂದಂತಾಯಿತು.


ಒಂದು ಕೊನೆಯ ಕತೆ - ರಾಜು ಹೆಗಡೆ


ಮನುಷ್ಯನ ಅಂತ್ಯ ಬಂದಾಗ.. ಅದರಲ್ಲೂ ಕೈಲಾಗದಿದ್ದಾಗ, ಅವರ ವೇದನೆ ಹೇಗಿರಬಹುದು. ಮೊದಲ ಮಗನ ಮನೆಯೇ ಜೀವನಾಧಾರ ಎಂಬಂತೆ ಬದುಕಿದ ತಾಯಿಯೊಬ್ಬಳ ಅಂತ್ಯ ಅಷ್ಟೇನೂ ಸಲೀಸಾಗಿರಲಿಲ್ಲ. ಹೆಣ್ಣು ಮಕ್ಕಳು ಹಾಗೂ ಮತ್ತೊಬ್ಬ ಗಂಡುಮಗ ಇದ್ದರೂ ಹಾಸಿಗೆ ಹಿಡಿದ ಸೂಕ್ಷ್ಮ ಮನಸ್ಸಿನ ವೃದ್ಧೆಯ ಕೊನೆಯ ಕತೆಯ ನಿರೂಪಣೆ ಇಲ್ಲಿ ಚಿಕ್ಕ ಮಗನ ಬಾಯಿಯಿಂದ ಬಂದಿದೆ. ಕಾರಣಗಳನ್ನು ಪರಾಮರ್ಶಿಸಿದರೂ.. ಅತ್ತಿಗೆ ಹಾಗೂ ಅಮ್ಮನ ಕುರಿತು ಹೇಳುವಾಗ ಯಾವುದೇ ಪೂರ್ವಾಗ್ರಹವಿಲ್ಲದ ಚಿತ್ರಣದಂತೆ ಕತೆ ಮೂಡಿಬಂದಿದ್ದರೂ ಕೊಂಚ ಅಮ್ಮನ ಕಡೆಗೇ ಹೆಚ್ಚು ಸಹಾನುಭೂತಿ ವಾಲಿರುವ ಸಹಜ ಭಾವನೆಯಂತಿದೆ. 


ಅಜ್ಜ ಇಲ್ಲ - ಪ್ರದೀಪ್ ಬೇಲೂರು


ಮಕ್ಕಳ ಮನಸ್ಸು ಅದೆಷ್ಟು ಮುಗ್ಧ. ಅಲ್ಲಿ ಅವರ ಲೋಕದಲ್ಲಿ ಅವರದ್ದೇ ಕನಸುಗಳು, ಅವರದ್ದೇ ಆಸೆಗಳು. ಅಜ್ಜನಿಲ್ಲದ ದಿನಗಳಲ್ಲಿ ಮೊಮ್ಮಗ ಪಾರ್ಥನ ಭಾವನೆಗಳ ಕತೆ ಇದು. 

ಸಾಮಾನ್ಯವಾಗಿ ಮಕ್ಕಳಿಗೆ ಸಾವಿನ ಕುರಿತು ಅರಿವಿರುವುದಿಲ್ಲ. ಅಥವಾ ದೊಡ್ಡವರಾದ ನಾವುಗಳು ಅದನ್ನು ಹೇಳಿರುವುದಿಲ್ಲ. ಆ ಸಂದರ್ಭ ಬಂದಿರುವುದಿಲ್ಲವೋ ಅಥವಾ ವಿವರಿಸಲು ಅಶಕ್ಯವೋ ಗೊತ್ತಿಲ್ಲ. ಆದರೆ, ಮಕ್ಕಳು ಅವರ ಅನುಪಸ್ಥಿತಿಯಲ್ಲಿ ಅನುಭವಿಸುವ ಆ ಭಾವನೆಗಳನ್ನು ಹೇಳುವುದು ಕಷ್ಟ. ಪ್ರಾಣ ಪ್ರಿಯನಾದ ಅಪ್ಪನೋ, ಸದಾ ಜೊತೆಯಲ್ಲಿರುತ್ತಿದ್ದ, ಅಜ್ಜ ಅಜ್ಜಿಯೋ ತೀರಿ ಹೋದಾಗ ಆ ತಪ್ಪಿ ಹೋದ ಅವಲಂಬನೆಯನ್ನು ಅವರು ಬೇರೊಬ್ಬರ ಜೊತೆಗೆ ಹೋಮಡಿಸಿಕೊಳ್ಳಲಾರರು. ಅದರ ಕುರಿತ ಸೂಕ್ಷ್ಮ ಚಿತ್ರಣ ಇದು. ಆದರೂ, ಪಾರ್ಥನ ಪಾಲಿಗೆ ಉಳಿದ ಸತ್ಯ ಒಂದೇ.. "ಅಜ್ಜ ಇಲ್ಲ".


ಸಿಕ್ಕಿದ ಕೀ ಗೊಂಚಲು - ರವಿರಾಜ ಬೈಕಂಪಾಡಿ


ಕಳೆದು ಹೋದದ್ದನ್ನು ಹುಡುಕುವಷ್ಟೇ ಚಾಕಚಕ್ಯತೆ ಕಳೆದು ಹೋಗಿಸಲು  ಸಹಾ ಬೇಕು. ಏಕೆಂದರೆ, ಇದೊಂದು ಪತ್ತೇದಾರಿ ಕತೆ. ಕಳ್ಳರು ಅವರಾ.. ಇವರಾ.. ಇವರೇ ಇರಬೇಕು ಎಂದು ತೀರ್ಮಾನಿಸುವಲ್ಲಿ ಮತ್ತೊಂದು ಟ್ವಿಸ್ಟ್. ಚಿಕ್ಕ ಪುಟ್ಟ ಸಾಧ್ಯಾಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಳೆದು ಹೋದ ಕೀ ಗೊಂಚಲನ್ನು ಹುಡುಕುವ ಪ್ರಕರಣ ಇದು. ಕೀ ಗೊಂಚಲು ಸಿಕ್ಕಿತಾದರೂ ಹೇಗೆ ಎಂಬುದನ್ನು ಕಂಡು ಹಿಡಿಯುವಾಗ ಮೆದುಳಿಗೆ ಕಸರತ್ತು ನೀಡುವಂತಿದೆ.


ಮುಗಿಲ ದುಃಖ - ಸದಾಶಿವ ಸೊರಟೂರು


ಒಳ್ಳೆಯವರು ಸತ್ತಾಗ ಮುಗಿಲು ಭೋರ್ಗರೆದು ಅಳುತ್ತದಂತೆ.. ಹೀಗೆನ್ನುವ ಮಾತು ಹಳ್ಳಿಯ ಕಡೆ ಪ್ರಚಲಿತದಲ್ಲಿದೆ. ಅಷ್ಟೇ ಅಲ್ಲ.. ಕೆಲವರ ಅದರಲ್ಲೂ ಮನಸ್ಸಿಗೆ ಹತ್ತಿರವಾಗಿದ್ದವರ ಸಾವು ಅದಕ್ಕೂ ಮುನ್ನ ಯಾವುದೋ ರೀತಿಯಲ್ಲಿ ಸೂಚನೆ ನೀಡಿ ನಮ್ಮನ್ನು ತಳಮಳಗೊಳಿಸುತ್ತದೆ. ಅಚಾನಕ್ಕಾಗಿ ಮನೆಗೆ ಬಂದ ದೊಡ್ಡಪ್ಪ ಅವನ ಪಾಲಿಗೆ ಬಿಡಿಸಲಾರದ ಒಗಟಾಗಿ ಉಳಿದು ಹೋದರು. ಅಪ್ಪ - ಅಮ್ಮನನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡವನಿಗೆ ಆಸರೆಯಾಗಿ ಮಗನಂತೆಯೇ ಸಾಕಿದ್ದ ದೊಡ್ಡಪ್ಪ ಹಾಗೆ ಬಂದು ಹೀಗೆ ಹೋದರು. ಆದರೆ, ಆ ದುಃಖ.. ಕೇವಲ ಅದು ಅವನ ದುಃಖವಾಗಿರಲಿಲ್ಲ. ಮುಗಿಲಿನದ್ದೂ.. ಮಳೆಯ, ಮುಗಿಲಿನ ಹಿನ್ನೆಲೆಯನ್ನು ರಚಿಸಲಾದ ಒಂದು ಭಾವನಾತ್ಮಕ ಕತೆ.


ಅಪ್ಪ - ವಾಣಿ ಕಾಮತ್


ಅಪ್ಪ ಎಂಬ ವ್ಯಕ್ತಿ ಒಂದು ರೀತಿಯಲ್ಲಿ ನಿಗೂಢತೆಯನ್ನೇ ಹೊದ್ದಂತೆ ಬದುಕುವವನು. ನಿಖಿಲ್ ನ ದೃಷ್ಟಿಯಲ್ಲಿ ನಿಕೃಷ್ಟನಾಗಿ ಕಾಣುವ ಅಪ್ಪ ಕೊನೆಯಲ್ಲಿ ಬದಲಾಗಿ ಬಿಡುತ್ತಾನೆ. ಅಪ್ಪನನ್ನು ನೋಡಿಯೋ.. ಊಹಿಸಿಯೋ.. ಒಂದು ರೀತಿಯಲ್ಲಿ ಅಂತರ್ಮುಖಿಯಾಗಿಯೇ ಬೆಳೆಯುವ ಮಗ, ಸದಾ ತನ್ನನ್ನು ಹೋಲಿಸುತ್ತಿದ್ದ ಅಣ್ಣನಿಂದಲೂ ದೂರ ಉಳಿದವನು ಬದಲಾದದ್ದಕ್ಕೆ ಕಾರಣ ಅಪ್ಪನಾ..

ಅಪ್ಪನೆಂಬ ನಿಲುಕಲಾರದ ವ್ಯಕ್ತಿತ್ವವನ್ನು ಬಿಡಿಸಿಡುವ ಕಥೆ ಇದು.


ಚಿಕಿತ್ಸೆ - ವಿನಾಯಕ ಅರಳಸುರಳಿ


"ಆಹಾರ - ಆರೋಗ್ಯ ಹಾಗೂ ಶಿಕ್ಷಣ - ಈ ಮೂರು ವಿಷಯಗಳಲ್ಲಿ ಮನುಷ್ಯ ಚೌಕಾಶಿ ಮಾಡಲಾರ. ಅದಕ್ಕೇ ಐಟಿ, ಆಟೋಮೊಬೈಲ್, ಹಣಕಾಸು.. ಅಷ್ಟೇ ಯಾಕೆ, ಕೊನೆಗೆ ಕೃಷಿಗೂ ಬಡಿಯುವ ನಷ್ಟವೆಂಬ ಸಿಡಿಲು ಈ ಮೂರರ ಮೇಲೆ ಸುಮ್ಮನೆ ನೆರಳನ್ನಷ್ಟೇ ಸೋಕಿಸಿ ಹಾದು ಹೋಗುತ್ತದೆ. ಇದೇ.. ಇದೇ ನಮ್ಮ ಬಂಡವಾಳವಾಗಬೇಕಾಗಿರುವುದು!" ಎಂಬ ಮಾತು ಬರುವುದು 'ಚಿಕಿತ್ಸೆ' ಕತೆಯಲ್ಲಿ. ಹೌದಲ್ಲವಾ.. ಇದು ವಾಸ್ತವವನ್ನು ಕನ್ನಡಿಯಂತೆ ತೋರುವ ವಿಷಯ. ಆದರೆ, ಆರೋಗ್ಯಕ್ಕಾಗಿ ಮನುಷ್ಯ ಅದೇನು ಬೇಕಾದರೂ ಮಾಡಬಲ್ಲ.. ಅದೆಷ್ಟೇ ಅಹಂಕಾರವನ್ನೂ ತೊರೆಯಬಲ್ಲ..  ಮನುಷ್ಯನನ್ನು ಮತ್ತೆ ಮನುಷ್ಯನನ್ನಾಗಿಸುವುದು ಪ್ರಕೃತಿಯ ಪಾಠವೇ.. ಸಾವಿನ ಹೊಸ್ತಿಲಲ್ಲಿ ನಿಂತಾಗ ಉಂಟಾಗುವ ಜ್ಞಾನೋದಯ ಅವನ ಮನಸ್ಸಿಗೆ ಉಂಟಾದ ಚಿಕಿತ್ಸೆಯ ಪರಿಣಾಮ. 'ಕೇರ್ ಫಾರ್ ಹೆಲ್ತ್'ನಿಂದ ಹಳ್ಳಿಯ ಪುಟ್ಟ ಹೆಂಚಿನ ಮನೆಯ ಚಿಕಿತ್ಸೆಗೆ ಬಂದ ಸುಧಾಕರ್ ಗೆ ಸಿಕ್ಕ ಚಿಕಿತ್ಸೆಯ ಕತೆ. 


ಭುವನ ಸುಂದರಿ - ವಿಷ್ಣುಭಟ್ ಹೊಸ್ಮನೆ


ಅಪ್ಪ ಹಾಗೂ ಅಮ್ಮ ಇಬ್ಬರ ಕುರಿತೂ ಚಿಕ್ಕಂದಿನಲ್ಲಿ ಕಂಡ ವಿಚಾರಗಳು ಎಳೆಯ ಮನಸ್ಸಿನ ಮೇಲೆ ಅದ್ಯಾವ ಪರಿ ಅಚ್ಚೊತ್ತಿ ನಿಂತು ಬಿಡುತ್ತದೆಂದರೆ.. ಅಮ್ಮ ಕಾಣೆಯದದ್ದಕ್ಕೆ ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಮಗ.. ಕಾಲೇಜಿನಲ್ಲಿ ಮತ್ತ್ಯಾರೋ 'ಭುವನ ಸುಂದರಿ'ಯ ಮಗನೆಂದು ಕರೆದಾಗ ಆಗದ ಆಘಾತ ಮಗನಿಗಾದದ್ದು ಸತ್ಯ ತಿಳಿದಾಗ. ತಪ್ಪು ತಿಳುವಳಿಕೆ ತಪ್ಪು ಎಂದು ಅರಿವಾಯಿತಾದರೂ..  ಅದು ಸರಿಯಾಯಿತಾ..?? 

ಹೆತ್ತವರ ನಡವಳಿಕೆಗೆ, ತಪ್ಪಿಗೆ ಮಕ್ಕಳು ಅನುಭವಿಸುವ ಪರಿಸ್ಥಿತಿಯ ಕತೆ. ಇಂತಹವರ ಮಗ ಅಥವಾ ಮಗಳು ಎಂದು ಗುರುತಿಸುವಾಗ ಕೇವಲ ಅಪ್ಪ/ ಅಮ್ಮನ ಹೆಸರಷ್ಟೇ ಜೊತೆಗಿರದು. ಅವರ ವ್ಯಕ್ತಿತ್ವ ಕೂಡಾ ಜೊತೆಗೇ ಇರುತ್ತದೆ.


ಮುಗಿಲೆತ್ತರದಲಿ ಸೆಲ್ಫಿ - ವಿಠಲ್ ಶೆಣೈ


ಅಪ್ಪ ಮಗಳಿಗೋಸ್ಕರ ಏನೆಲ್ಲಾ ಮಾಡಬಲ್ಲ.. ತಾನು ಕಷ್ಟದಲ್ಲಿದ್ದರೂ ಮಗಳ ಆಸೆಯನ್ನು ಪೂರೈಸಲು ಹೆಣಗಾಡುವ.. ಆದರೆ, ಅದನ್ನು ಪ್ರೀತಿಯಿಂದ ಮಾಡುವ ಅಪ್ಪನ ಕತೆ. ಆದರೆ, ಅಪ್ಪ ಹಾಗೆ ಮಾಡಿದ ಕಾರಣ ತಿಳಿದು ಕಣ್ಣಂಚಲ್ಲಿ ನೀರು ನಿಲ್ಲುತ್ತದೆ. ದೊಡ್ಡವರ ದೊಡ್ಡತನವನ್ನು ಸಹಾ ಪರಿಚಯಿಸುವ ಕತೆ ಇದು. ಮುಗಿಲಿನಷ್ಟೇ ಎತ್ತರದ ಅಪ್ಪ ಹಾಗೂ ಮಗಳ ಭಾವನಾತ್ಮಕ ಕತೆ. ಜೊತೆಗೆ, ಪಾಸಿಟಿವಿಟಿ ತುಂಬುವ ಕತೆ. 


ಪ್ರಕ್ಷೋಭೆ - ವಿದ್ಯಾ ಭರತನಹಳ್ಳಿ


ಗಂಡ - ಹೆಂಡತಿಯರಲ್ಲಿ ಯಾರಾದರೂ ಒಬ್ಬರು ಅಂತರ್ಮುಖಿಗಳಾದಾಗ ಅವರಾಗಿಯೇ ಅವರ ಮನಸ್ಸಿನ ಮಾತನ್ನು ಹೇಳಿಕೊಳ್ಳುವವರೆಗೂ ಮತ್ತೊಬ್ಬರಿಗೆ ಅದು ತಿಳಿಯಲಾರದು. ಅವರವರ ಮನಸ್ಸಿನ ತಳಮಳಗಳು ಅವರನ್ನು ಡಿಸ್ಟರ್ಬ್ ಮಾಡಿಬಿಡುತ್ತವೆ. ನಿಜಗುಣನ ಅಂತರ್ಮುಖತೆಯನ್ನು ವೈಶಾಲಿಯೊಡನೆ ತೆರೆದಿಟ್ಟ ನಂತರ ಆತನಿಗೆ ದಕ್ಕಿದ ಮನಸ್ಥಿತಿ ಅವನನ್ನು ಶಾಂತಗೊಳಿಸಿತಾದರೂ.. ಇಲ್ಲಿ ನನಗೆ ಹೊಳೆದ ಇನ್ನೊಂದು ಹೊಳಹು, ನಿಜವಾದ ಗುರು ತನ್ನ ಮಮಕಾರವನ್ನು ತೊರೆದರಷ್ಟೇ ನಿಜವಾದ ಶಿಷ್ಯ ಸಿಗಬಹುದು. ಮನಸ್ಸಿನ ಒಳಗೆ ಬಚ್ಚಿಟ್ಟು ಹಣ್ಣಾದ ಮನೋವೇದನೆಯ ಕತೆಯಾದರೂ ಅದರಿಂದ ಹೊರ ಬಂದ ಪರಿ ಅನುಕರಣೀಯವೆನಿಸಿತು.


ನದಿ - ಪಾತ್ರ - ಆಶಾ ಜಗದೀಶ್


ಉಕ್ಕಿ ಹರಿಯುತ್ತಿದ್ದ ನದಿಗಳು ಈಗ ಬದಲಾಗಿವೆ. ಮೊದಲಿನಂತಿಲ್ಲದೆ ಬಡವಾದಾಗ ಕಂಡ ಜಾಗವನ್ನು ವಸತಿಗೋ, ಇತರ ಬಳಕೆಗೋ ಬಳಸಿಕೊಂಡಿರುವವರೇ ಹೆಚ್ಚು. ಬದಲಾಗುತ್ತಿರುವ ಮಳೆ ಮತ್ತೆ ನದಿಯನ್ನು ಮೊದಲಿನಂತಾಗಿಸುತ್ತಿದೆ. ಅಂತಹದ್ದೇ ನದಿಯಾದ ಪಿನಾಕಿನಿ ನದಿ ಬಡವಾದಾಗ ಜೀವರಾಶಿಗಳಿಗೆ ಆಸರೆಯಾಗಿದ್ದವಳು ಮತ್ತೆ ಮಳೆಗಾಲದಲ್ಲಿ ತನ್ನ ಅಸಲೀ ಪಾತ್ರಕ್ಕೆ ಬರುತ್ತಾಳೆ. ಅಲ್ಲಿರುವ ಎಲ್ಲರದ್ದೂ ಹೆಚ್ಚು- ಕಡಿಮೆ ಎಲ್ಲರದ್ದೂ ಇದೇ ತರಹದ ಕತೆಯಾದರೂ ರಮೇಶ ಅವರೆಲ್ಲರ ಪ್ರತಿನಿಧಿಯಂತೆ ಕಾಣತೊಡಗುತ್ತಾನೆ. ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಮರದಂತಿದೆ ಈ ಕತೆ.


ನಾನು ನನ್ನ ಕನಸು ! - ಪ್ರಶಾಂತ ರಾಮಸ್ವಾಮಿ


ಕನಸಿಗೂ ವಾಸ್ತವಕ್ಕೂ ಅದೆಷ್ಟು ವ್ಯತ್ಯಾಸವೆಂದು ತಿಳಿದಿದ್ದರೂ ನಾವು ಕನಸು ಕಾಣುವುದನ್ನು ಬಿಡುವುದಿಲ್ಲ. ಮನಸ್ಸಿನ ಸುಪ್ತ ಆಸೆಗಳೇ ಕನಸುಗಳ ರೂಪದಲ್ಲಿ ಬರುತ್ತವೆ ಎಂಬ ಮಾತಿದೆ. ಪ್ರಶಾಂತ್ ಅವರ ಮಳೆ, ಮಲೆನಾಡು ಹಾಗೂ ನವಿರಾದ ಭಾವಗಳ ಗೋಲ್ಡನ್ ಕನಸಿನ ಕತೆ ಇದು. ಆದರೆ, ಶೀರ್ಷಿಕೆಯಲ್ಲಿಯೇ ಕನಸು ಎಂದು ಹೇಳಿರುವುದರಿಂದ ಅದೇ ಭಾವದಲ್ಲಿಯೇ ಓದಿಸಿಕೊಂಡು ಹೋಗುತ್ತದೆ. ಕನಸಿನಿಂದ ವಾಸ್ತವಕ್ಕೆ ಬರಲೇಬೇಕಲ್ಲ.. ಅವರೂ ಎಚ್ಚೆತ್ತ ನಂತರ ನಾವೂ ಕತೆಯಿಂದ ಹೊರ ಬಂದಿರುತ್ತೇವೆ.


ದೂರವಿಡುವ ಬೇರು - ಸಿಂಧುಚಂದ್ರ ಹೆಗಡೆ ಶಿರಸಿ


ಹಳ್ಳಿಯ ಕಡೆ ಎಲ್ಲದಕ್ಕೂ ಔಷಧಿ ಕೊಡುವವರಿರುತ್ತಾರೆ. ಆದರೆ, ಅದು ವಾರದಲ್ಲಿ ಒಂದು ದಿನ ಅಥವಾ ತಿಂಗಳಲ್ಲಿ ಇಂತಹಾ ದಿನ ಎಂಬ ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ಆದರೆ, ಇಂತಹಾ ಔಷಧಿಗಳು ಮನುಷ್ಯನನ್ನು ಗುಣ ಪಡಿಸುತ್ತವೆಯಾ ಅಥವಾ ನಂಬಿಕೆಗಳಾ ಎಂದು ಎಷ್ಟೋ ಬಾರಿ ಅನ್ನಿಸಿದರೂ.. ಗೊತ್ತಿಲ್ಲದೇ ನೀಡಿದ ಔಷಧಿಗಳು ಅವರ ಮೇಲೆ ಪರಿಣಾಮ ಬೀರಿದಾಗ ಅದು ಔಷಧೀಯ ಫಲವೆಂದು ತಿಳಿಯುತ್ತದೆ. ಇಲ್ಲಿ ಕುಸುಮಜ್ಜಿ ಎಲ್ಲಕ್ಕೂ ಔಷಧಿ ನೀಡುವವಳು. ಪಾರ್ವತಿ ಕುಸುಮಜ್ಜಿಯ ಬಳಿ ಬಂದದ್ದು ಗಂಡನನ್ನು ದೂರವಿಡುವ ಬೇರಿಗಾಗಿ. 

'ಸಾಸಿವೆ ಕಾಳು ಪುನಃ ಕೆಂಡಕ್ಕೆ ಬಿದ್ದಿದೆ. ಮನಸ್ಸು ಚಿಟಿಪಿಟಿ ಚಿಟಿಪಿಟಿ' ಎನ್ನುವ ಕುಸುಮಜ್ಜಿಯ ಆಲೋಚನೆಯಲ್ಲೇ ಉತ್ತರವಿದೆ. ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹೀಗಾದರೂ ನಿಲ್ಲಬಹುದಾ..?? ವಿಭಿನ್ನವಾಗಿ ಕಾಡಿದ ಕತೆ ಇದು.


ಕಂಡೀಷನ್ - ಪೂರ್ಣಿಮಾ ಮಾಳಗಿಮನಿ


ರೂಢಿ ಇಲ್ಲದ್ದನ್ನು ರೂಢಿಸಿಕೊಳ್ಳುತ್ತಾ ಹೋದರೆ.. ಅದೂ ಮತ್ತೊಬ್ಬರ ಬಲವಂತಕ್ಕೆ ಅಥವಾ ಬೇಸರವಾಗದಿರಲಿ ಎಂದು. ಅರವಿಂದನ ಮನೆಯಲ್ಲಿ ಇಂತಹದ್ದೇ ಒಂದು ಕಂಡೀಷನ್. ಅದು ಅರವಿಂದ ಜೀವಿಸುವ ಒಂದು ಭಾಗದಂತೆಯೇ ಆಗಿ ಹೋಗಿದ್ದರೂ.. ಆದರೆ, ಒಂದು ದಿನ ಎಲ್ಲವೂ ಅವನ ವಿರುದ್ದ ನಡೆದಂತೆ ಕಂಡಾಗ ಅದನ್ನು ಸರಿಪಡಿಸಲು ಇರುವ ಏಕೈಕ ದಾರಿ ಎಂದರೆ ಆ ಕಂಡೀಷನ್ ಅನ್ನು ತೆಗೆದುಬಿಡುವುದು. ಹೊಂದಾಣಿಕೆ ಹಾಗೂ ಹೊಂದಾಣಿಕೆ ಇಲ್ಲದವರ, ಹೊಂದಾಣಿಕೆ ಮಾಡಿಕೊಳ್ಳಬಯಸುವವರ ಕತೆ ಇದು. ಕ್ಷುಲ್ಲಕ ಕಾರಣದಂತೆ ಅನ್ನಿಸಿದರೂ ಅನುಭವಿಸುವವರ ಮನಸ್ಥಿತಿ ವಿಭಿನ್ನವೇ..


ಮಾದ್ರಿ - ವಾಸುದೇವ ನಾಡಿಗ್


ತಾನು ಅಪ್ಪನಂತೆ ಅಥವಾ ಅಮ್ಮನಂತೆ ಎಂದು ಹೋಲಿಸಿಕೊಂಡು ಖುಷಿ ಪಡುವವರ ನಡುವಲ್ಲಿ ವಿಭಿನ್ನಳಾಗಿ ಕಂಡವಳು ಮಾದ್ರಿ. ಹೆಣ್ಣಾಗಿ ತನ್ನ ಮುಖ ಅಪ್ಪನಂತೆ ಕಾಣುವುದರ ಹಿಂದೆ ಏನಿರಬಹುದು ಎಂದು ಹುಡುಕುತ್ತಾ ಹೊರಟಾಗ ಅಪ್ಪನ ನಡವಳಿಕೆಗಳು ಕೂಡಾ ಅನುಮಾನ ತರಿಸುತ್ತವೆ. ಕೆಲವೊಮ್ಮೆ ಸತ್ಯವನ್ನು ಅರಸಿ ನಡೆಯಬಾರದು. ನಡೆದರೂ ತಡೆದುಕೊಳ್ಳುವ ಸಾಮರ್ಥ್ಯವಿರಬೇಕೆನಿಸಿತು. 

ಕತೆಯ ಮೊದಲಿಗೆ ಯು. ಆರ್. ಅನಂತಮೂರ್ತಿಯವರು ಅನುವಾದಿಸಿರುವ ಸಾಲೊಂದನ್ನು ಉಲ್ಲೇಖಿಸಿದ್ದು ಅರ್ಥಪೂರ್ಣವೆನ್ನಿಸಿತು. ಆ ಸಾಲು 'ನಿನ್ನನ್ನು ನೀನೇ ಕಾಪಾಡಿಕೊಳ್ಳದಿದ್ದರೆ ಕುಸಿದೇ ಹೋಗುವೆ. ನಿನಗಿದು ಗೊತ್ತೇ ಇದೆ.'


ಮಿಯೋ - ಕವಿತಾ ಹೆಗಡೆ ಅಭಯಂ


ಕತೆಯ ನಿರೂಪಣೆಯಿಂದ ಈ ಕತೆ ವಿಭಿನ್ನವೆನ್ನಿಸಿತು. ಮಿಯೋ ಯಾರು ಎಂಬ ಕುತೂಹಲದಿಂದ ಓದುತ್ತಿದ್ದರೂ.. ಒಮ್ಮೆ ಮಿಯೋ ಕುರಿತು ಅನುಮಾನ ಬಂದರೂ.. ಬಹುಶಃ ವಿದೇಶದ ಜೀವನ ಶೈಲಿಯ ಕತೆ ಇದಾಗಿರಬಹುದಾ ಎನ್ನಿಸಿತು. ನಂತರದಲ್ಲಿ ಮಿಯೋ ನಿಜ ಸ್ವರೂಪ ತಿಳಿಯಿತು. ಮಕ್ಕಳು ಎಂಬ ಕರುಳ ಬಳ್ಳಿಯ ಸಂಬಂಧ ಸುಲಭವಾಗಿ ಬಿಟ್ಟು ಹೋಗಲಾರದ್ದು.. ಅದು ಮನುಷ್ಯರಿಗೂ ಹೌದು ಮಿಯೋಗೂ ಹೌದು. ಮನೆಯ ಸದಸ್ಯಳಾದ ಮಿಯೋ ಆಪ್ತವೆನಿಸುವಂತಹಾ ನಿರೂಪಣೆ. 


ಬುಧೋ - ಅಕ್ಷತಾ ಕೃಷ್ಣಮೂರ್ತಿ


ಬುಧೋ ಕಥೆಯಲ್ಲಿ ಮನಸೆಳೆದದ್ದು ಹಾಗೂ ನಿಗೂಢವೆನಿಸಿದ್ದು ಅಣಶಿ ಎನ್ನುವ ಪ್ರದೇಶ. ಕೇವಲ ಪ್ರದೇಶದಲ್ಲಿ ಮಾತ್ರ ನಿಗೂಢತೆ ಇಲ್ಲ.. ಕತೆಯಲ್ಲಿಯೂ ನಿಗೂಢತೆ ಇದೆ. ನಿಜಕ್ಕೂ ಅಲ್ಲಿನ ಮನಸ್ಥಿತಿಗಳು ವಿಚಿತ್ರ ಎನ್ನಿಸಿತು. ಬುಧೋ ಯಾರಿಗೆ ಬೇಕಾದವನು.. ಯಾರಿಗೆ ಬೇಡವಾದವನು ಎನ್ನುವುದಕ್ಕಿಂತ ಬುಧೋ ಇದ್ದಾಗ ಅವನ ಅಸ್ತಿತ್ವಕ್ಕೆ ಬೆಲೆ ಕೊಡುತ್ತಿದ್ದವರು ನಂತರದಲ್ಲಿ ನಡೆದುಕೊಂಡದ್ದು ಸರಿಯಾ ಎಂಬ ಪ್ರಶ್ನೆ ಮೂಡಿತು. ಇಲ್ಲಿ ಬುಧೋ ಕಥಾನಾಯಕನಾ ಅಥವಾ ಯಾದವನಾ ತಿಳಿಯಲಿಲ್ಲ. ಆದರೆ, ನಾಯಕತ್ವದ ಹಂಗೇ ಇಲ್ಲದಂತೆ ಬುಧೋ ನಿಗೂಢವಾಗಿಯೇ ಆವರಿಸುತ್ತಾನೆ.


ಶುಗರ್ ಬೇಬಿ - ನಾಗರೇಖಾ ಗಾಂವ್ಕರ್ 


ಆಧುನಿಕ ಜಗತ್ತಿನಲ್ಲಿ ಸಂಬಂಧಗಳು.. ಅದರಲ್ಲೂ ನೈತಿಕವಾಗಿ ಹೆಸರಿಸಲಾಗದ, ಜಗತ್ತಿನೆದುರು ನಿರಾತಂಕವಾಗಿ ಬರಲಾಗದ, ತೋರ್ಪಡಿಸಲಾಗದ ಸಂಬಂಧಗಳು ಹೊಸ ಹೊಸ ರೂಪದಲ್ಲಿ ಪ್ರತ್ಯಕ್ಷವಾಗುತ್ತವೆ. ಅಂತಹಾ ಸಂಬಂಧವೇ ಶುಗರ್ ಬೇಬಿ ಹಾಗೂ ಶುಗರ್ ಡ್ಯಾಡಿ. ಇದನ್ನು ನೋಡಿ ತಕ್ಷಣವೇ ಇಂಥಹ ಸಂಬಂಧ ಇದೆಯಾ ಎಂದು ಗೂಗಲ್ ನಲ್ಲಿ ಜಾಲಾಡಿದೆ. ಲಿವಿಂಗ್ ಟುಗೆಧರ್ ನಂತಹಾ ಸಂಬಂಧವಾದರೂ ವಯಸ್ಸಿನ ಅಂತರ ಬಹಳ. ಅಜ್ಜಿ-ತಾತನ ಕಾಲದಲ್ಲಿ ಇರುತ್ತಿತ್ತಲ್ಲಾ ಹಾಗೆ.. ಇಬ್ಬರ ನಡುವೆ 20 ರಿಂದ 40 ವಯಸ್ಸಿನ ಅಂತರ. ನಿತ್ಯ ಮನೆಯ ನಿರ್ವಹಣೆಯ ಅನಿವಾರ್ಯತೆ ಇದ್ದರೂ.. ತನ್ನ ಸುಪ್ತ ಮನದ ಬಯಕಗಳಿಗೆ ಶೋಭರಾಜ್ ರೊಂದಿಗೆ ಇಂತಹಾ ಸಂಬಂಧಕ್ಕೆ ಸಿಲುಕುತ್ತಾಳೆ. ಆದರೆ, ಹೊರ ಬರುವುದಕ್ಕೆ ದಾರಿ ಇಲ್ಲ. 

ತಂಗಿಯ ಸಂಸಾರ ಕಂಡು, ಅವಳು ಮಗಳಿಗೆ ಹೇಳುವ 'ಬೇಬಿ.. ಶುಗರ್ ಬೇಡ ಬೇಬಿ' ಎನ್ನುವುದೇ ಅವಳ ಮನಸ್ಸಿನಲ್ಲುಳಿಯುವುದು. ಅಂತ್ಯ ಹಾಗೂ ನಿತ್ಯ ಪರಿಸ್ಥಿತಿ ಮನಕಲಕುವಂತಿದೆ.


ಬಾರ್ಬಿ ಬ್ಯಾಗು ಮತ್ತು ಸೋನು ಪುಟ್ಟಿ - ನಂದಿನಿ ಹೆದ್ದುರ್ಗ


ಉಡುಗೊರೆ ಎನ್ನುವ ಹೆಸರಲ್ಲಿ ಬೇಡದ್ದನ್ನು ಮತ್ತೊಬ್ಬರಿಗೆ ತಲುಪಿಸಿ ತಾನೇನೋ ದೊಡ್ಡ ಉಪಕಾರ ಮಾಡಿದೆ ಎನ್ನುವಂತೆ ಬೀಗುವ ಜನರಿಗೇನೂ ಕಡಿಮೆಯಿಲ್ಲ. ಅದರಲ್ಲೂ ಉಡುಗೊರೆ ನೀಡುವವರ ಪರಿಸ್ಥಿತಿ ಅಸಹಾಯಕವಾಗಿದ್ದರಂತೂ ಕೇಳುವಂತೆಯೇ ಇಲ್ಲ. ಚಿಕ್ಕ ಮಗುವಾದ ಸೋನು ಪುಟ್ಟಿಗೆ ಬಂದ ಬಾರ್ಬಿ ಬ್ಯಾಗು ಅಂತಹದ್ದೇ.. ಅಮ್ಮನಿಗೆ, ಅಣ್ಣನಿಗೆ ಅರ್ಥವಾಗುವಷ್ಟು ಅವಳಿಗೆ ಅರ್ಥವಾಗಲಾರದು. ಅಪ್ಪನ ಬೇಜವಾಬ್ದಾರಿತನ, ಅಮ್ಮನ ಸ್ವಾಭಿಮಾನ, ಛಲ ಸೋನು ಪುಟ್ಟಿಗೆ ನಿಲುಕದು. ಪುಟ್ಟು ಸಣ್ಣವನಾದರೂ ದೊಡ್ಡವನಾದಂತೆ ವರ್ತಿಸುವ, ಸೋನು ಪುಟ್ಟಿ ಇನ್ನೂ ತನ್ನ ಮುಗ್ಧ ಬಾಲ್ಯದಲ್ಲೇ ಇರುವ ಕತೆ ಹಲವಾರು ಭಾವಗಳನ್ನು ದಾಟಿಸುತ್ತದೆ.


ಪ್ರಕೃತಿಯೆಂಬ ಮಾಯೆ.. - ಅಶೋಕ ಹಾಸ್ಯಗಾರ


ಶಿವರಾಮ ಭಟ್ಟರನ್ನು ಅರಸಿಕೊಂಡು ಹೋಗುವ ಜನರಿಂದ ಶುರುವಾಗುವ ಕಾಡಿನ ಪರಿಸರದ ನವಿರಾದ ಚಿತ್ರಣ ಪ್ರಕೃತಿಯನ್ನು, ಪ್ರಾಣಿಗಳನ್ನೂ ಪ್ರೀತಿಸುತ್ತಾ.. ಅರ್ಥ ಮಾಡಿಕೊಂಡಿದ್ದ, ಹೊಂದಿಕೊಂಡಿದ್ದ ಶಿವರಾಮ ಭಟ್ಟರ ಪರಿಚಯವನ್ನು ನಿಧಾನವಾಗಿ ಮಾಡಿಸುತ್ತಾ ಹೋಗುತ್ತದೆ. ಅವರ ಅನುಪಸ್ಥಿತಿಯಲ್ಲಿ ಕೂಡಾ ಪ್ರಕೃತಿ ಇದ್ದರೂ ಅದರ ಲವಲವಿಕೆ ಬೇರೆಯದ್ದೇ ರೀತಿಯಂತೆ ಕಾಣುತ್ತದೆ. ಕಳಾಹೀನವಾದಂತಿದ್ದ ಪ್ರಕೃತಿ ಮೆಲ್ಲಮೆಲ್ಲನೆ ಮೊದಲಿನ ಸ್ಥಿತಿಗೆ ಬರುತ್ತಾ ಮಾಯೆಯಂತೆ ಆವರಿಸುವ ಚಿತ್ರಣವಿದೆ. ಪ್ರಕೃತಿಯ ಚೆಂದದ ಚಿತ್ರಣದ ಜೊತೆಗೆ ಪ್ರಕೃತಿಯ ಕೆಲವು ಪಾಠಗಳೂ ದಕ್ಕುತ್ತವೆ.


ತಮ್ಮ ಮನಸ್ಸಿನ ಭಾವನೆಗಳನ್ನು ಮತ್ತೊಬ್ಬರಿಗೆ ದಾಟಿಸುವುದು ಸುಲಭದ ಕೆಲಸವೇನಲ್ಲ. 28 ಕಥೆಗಾರರೂ ತಮ್ಮ ತಮ್ಮ ಕತೆಗಳನ್ನು ದಾಟಿಸಿದ್ದಾರೆ. ಹೊಸ, ಹಳೆಯ, ಪಳಗಿದ, ಪ್ರಯೋಗಾತ್ಮಕ ಕತೆಗಳನ್ನು ಬರೆಯುವವರು ಇಲ್ಲಿದ್ದಾರೆ. ಮಕ್ಕಳ ಮನಸ್ಸಿನ ಕತೆಗಳು, ಭಾವ ಲೋಕದ, ಮನೋ ವೈಜ್ಞಾನಿಕ, ಸಾಮಾಜಿಕ, ಪತ್ತೇದಾರಿ ಕತೆಗಳಲ್ಲಿ ಕೆಲವು ನಿರೂಪಣೆಗಳು ಇಷ್ಟವಾದರೆ, ಕೆಲವು ಕಥಾವಸ್ತುಗಳು, ಕೆಲವು ಅಂತ್ಯಗಳು, ಕೆಲವು ಪ್ರತಿಮೆಗಳು, ಕೆಲವು ಪ್ರಯೋಗಗಳು, ಕೆಲವು ಕತೆಗಳ ಭಾಷೆ, ಕೆಲವು ಶೀರ್ಷಿಕೆಗಳು.. ಹೇಳುತ್ತಾ ಹೋದರೆ ಒಂದೊಂದಕ್ಕೂ ಅದರದ್ದೇ ಆದ ವಿಭಿನ್ನತೆಯಿದೆ. ಮತ್ತಷ್ಟು ವಿಭಿನ್ನ ಕತೆಗಳು ಮೂಡಿ ಬರಲಿ ಎಂಬ ಹಾರೈಕೆಯಷ್ಟೇ ನನ್ನದು. 


28 ಕಥೆಗಾರರ ಕತೆಗಳು ಹೀಗಿದೆ, ಹೀಗಿಲ್ಲ.. ಹೀಗಿರಬೇಕಿತ್ತು ಎನ್ನುವುದಕ್ಕಿಂತ ನನಗೆ ದಕ್ಕಿದ ಪರಿ ಹೀಗೆ ಎಂದು ಹೇಳಿದ್ದೇನೆ. ಪ್ರತಿಯೊಬ್ಬರ ಕಥೆಯೂ ವಿಭಿನ್ನ, ವಿಶಿಷ್ಟ. ಇದಿಷ್ಟನ್ನೂ ಚೆಂದವಾಗಿ ಕೈಗಿಟ್ಟಿರುವ ಸಂಪಾದಕರಾದ ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರಿಗೆ ಹಾಗೂ ಸಾಹಿತ್ಯ ಲೋಕ ಪಬ್ಲಿಕೇಶನ್ಸ್ ಗೆ ಹಾರ್ದಿಕ ಅಭಿನಂದನೆಗಳು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ