ಮಂಗಳವಾರ, ಏಪ್ರಿಲ್ 7, 2026

ಹನಿ ಮಳೆಯ ಮಣ್ಣ ಕಂಪು (ಪುಸ್ತಕ ಯಾನ - 71)


ಪುಸ್ತಕದ ಶೀರ್ಷಿಕೆ : ಹನಿ ಮಳೆಯ ಮಣ್ಣ ಕಂಪು

ಲೇಖಕರು : ಅನನ್ಯ ತುಷಿರಾ

ಪ್ರಕಾಶಕರು : ಸಪ್ನ ಬುಕ್ ಹೌಸ್

ಮೊದಲನೇ ಮುದ್ರಣ : 2022, ನವೆಂಬರ್

ಪುಟಗಳು : 85

ಬೆಲೆ : 95 ರೂ


ಸವಿತಾ ಆರ್. ಇನಾಮದಾರ ಅವರು ಅನನ್ಯ ತುಷಿರಾ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದು.. ಇದು ಅವರ ಎರಡನೇ ಕಥಾ ಸಂಕಲನ. ಅರ್ಧ ನೆನಪು, ಅರ್ಧ ಕನಸು ಇವರ ಮೊದಲ ಕಥಾ ಸಂಕಲನ. ಅನನ್ಯ ನಿನಾದ ಇವರ ಕವನ ಸಂಕಲನ. 


ಈ ಕಥಾ ಸಂಕಲನದಲ್ಲಿ 12 ಕಥೆಗಳಿವೆ. ನೋಡಿದ, ಕೇಳಿದ ಕತೆಗಳನ್ನು ತೆರೆದಿಟ್ಟಿರುವ ಈ ಕಥೆಗಳಲ್ಲಿ ಲೇಖಕಿಯ ಊರಿನ ಅಂದರೆ ಬಿಜಾಪುರ ಶೈಲಿಯ ಕತೆಗಳನ್ನು ಹೆಚ್ಚು ಕಾಣಬಹುದು. ಕೆಲವು ಕತೆಗಳು ಪಟ್ಟಣದಲ್ಲಿದ್ದಾಗ ಬರುವ ಮಣ್ಣಿನ ಕಂಪು ಊರಿನ ಸೊಗಡಿನ ನೆನಪು ತರುವಂತಿದೆ. ಊರಿನ ಹಾಗೂ ಪಟ್ಟಣದ ಕತೆಗಳ ಮೇಳೈಸುವಿಕೆ ಇಲ್ಲಿದೆ. ಒಂದು ರೀತಿಯ ನಾಸ್ಟಾಲ್ಜಿಯಾ ಕಣ್ಮುಂದೆ ಬಂದಂತಾಗುತ್ತದೆ. 


ಎಂಟು ಸಾಲಿನ ಪತ್ರ ಮತ್ತು ಪೋಸ್ಟ್ ಮಾಸ್ತರು : ಪೋಸ್ಟ್ ಮ್ಯಾನ್ ಶೆಣೈ ಉಡುಪಿಯ ಮೂಲದವರಾಗಿದ್ದರೂ ಕಡು ಬಿಸಿಲಿನ ಊರಿಗೆ ಬಂದು ಒಗ್ಗಿಕೊಂಡಿದ್ದವರು. ಎಲ್ಲರನ್ನೂ ಮಾತನಾಡಿಸಿಕೊಂಡು, ಊರಿಗೇ ಬೇಕಾಗಿದ್ದವರು. ಆದರೆ, ಅಲ್ಲಿದ್ದ ಪೋಸ್ಟ್ ಮಾಸ್ತರರು ಶೆಣೈಗೆ ಪೂರ್ತಿ ತದ್ವಿರುದ್ಧ. ಜನರೇ ಒಗ್ಗದ ಹಾಗಿದ್ದವರು. ಶೆಣೈ ಎರಡು ದಿನಕ್ಕೆಂದು ರಜಾ ಹಾಕಿ ಹೋದವನು ಐದು ದಿನವಾದರೂ ಪತ್ತೆಯೇ ಇಲ್ಲ. ಇಂತಹಾ ಸಂಧರ್ಭದಲ್ಲಿ ಪೋಸ್ಟು ಮಾಸ್ತರರು ಮೆತ್ತಗಾಗಿದ್ದರು. ಕಚೇರಿಯಲ್ಲಿ ಇಟ್ಟಿದ್ದ ಒಂದಷ್ಟು ಹಣ ಕೂಡಾ ನಾಪತ್ತೆಯಾಗಿತ್ತು. ಆದರೆ, ಅದಕ್ಕೆಲ್ಲಾ ಉತ್ತರವಿದ್ದದ್ದು ಗೌಡರ ಹೆಸರಿಗೆ ಆ ಎಂಟು ಸಾಲಿನ ಪತ್ರದಲ್ಲಿ.. ಮಾನವೀಯತೆ ಕೇವಲ ಮಾತುಗಳಲ್ಲಿಲ್ಲ.. ನಡೆಯಲ್ಲಿರುತ್ತದೆ ಎಂಬುದನ್ನು ಅರ್ಥ ಮಾಡಿಸುವ ಕಥೆ. ಊರಿನವರ ಒಗ್ಗಟ್ಟನ್ನು ತೋರುವ ಕಥೆ.


ನಿಮಿತ್ತ : ಎಷ್ಟೋ ಚರ್ಯೆಗಳು ನಡೆಯುತ್ತಿರುತ್ತವೆ. ಅದಕ್ಕೆ ನಿಮಿತ್ತ ಮಾತ್ರ ನಾವಾಗಿರುತ್ತೇವೆ. ಆದರೆ, ಅದರ ಅರಿವಿಲ್ಲದೇ ಅಹಂಕಾರ ತೋರುತ್ತಿರುತ್ತೇವೆ. ಜಯತೀರ್ಥ ವರ್ಕ್ ಫ್ರಮ್ ಹೋಮ್ ಎಂದು ಮನೆಗೆ ಬಂದಾಗ ಅಮ್ಮನಲ್ಲಿ ಮತ್ತೆ ಉತ್ಸಾಹ ತುಂಬಿತ್ತು. ಅಪ್ಪನ ಸಂತಸವೂ ಹೆಚ್ಚಾಗಿತ್ತು. ಕಳೆದೇ ಹೋದಂತಿದ್ದ ಮಾತುಗಳು ಮತ್ತೆ ಮರಳಿದ್ದವು. ಜೀವಂತಿಕೆ ತುಂಬುತ್ತಿತ್ತು. ಆದರೆ, ಜಯತೀರ್ಥ ಹಿಡಿದ ದಾರಿ ದಿಗ್ಭ್ರಮೆಗೊಳಿಸಿತ್ತು. ಅದಕ್ಕೆ ನಿಮಿತ್ತರಾಗಿದ್ದವರು ಯಾರು ಎಂಬುದನ್ನು ತಿಳಿಯಲು ಕತೆ ಓದಿ.


ಇಬ್ಬರ ನಡುವೆ : ಕಥೆಗಾರರ ಎಷ್ಟೋ ಕಲ್ಪನೆಗಳ ಕಥೆಗಳು ವಾಸ್ತವದಲ್ಲಿ ತಾವು ಮಾಡಲಾಗದ್ದನ್ನು ಕಥೆಯ ಮೂಲಕ ಮಾಡಿಸಿದಂತಿರುತ್ತವೆ. ವೆಂಕಟನಾಥ ಬಿಜ್ಜೂರರ ಕತೆ ಕೂಡಾ ಇಂತಹದ್ದೇ.. ವೆಂಕಟೇಶನಿಂದ, ವೆಂಕಟನಾಥನಾಗಿದ್ದು.. ಅಲ್ಲಿಂದ ಲಕ್ಷ್ಮೀಕಾಂತ ಎನ್ನುವ ಕಾವ್ಯನಾಮದಲ್ಲಿ ಬರವಣಿಗೆಗೆ ತೊಡಗಿಸಿಕೊಂಡದ್ದರ ಜೊತೆಗೆ ಈಗ ಬರೆಯುತ್ತಿದ್ದ ಕಥೆಯ ಅಂತ್ಯವನ್ನು ಆಲೋಚಿಸುತ್ತಾ ಕತೆ ಕಟ್ಟಿಕೊಡುತ್ತಾರೆ. ಬರಹಗಾರರ ಬದುಕಿಗೆ ಹತ್ತಿರವೆನಿಸುವಂತಹಾ ವಾಸ್ತವದ ಕಥೆ ಇದು. ಪಾರ್ಕಿನಲ್ಲಿ ಕಂಡ ಆ ಇಬ್ಬರ ನಡುವಿನ ಸಂಬಂಧದ ಕತೆ ಇದು. 


ಮುಟ್ಟಿದ ಹುಳ : 'ಮುಟ್ಟಿದ ಹುಳದ ಸಿಟ್ಟು ಬಾಳ ಅಂತಾರ' ಎನ್ನುತ್ತಾ ಹೇಳಿದ ಅಮ್ಮನ ಮಾತು ಸೂರ್ಯಾನಂದನ ಮನಸ್ಸಿನಲ್ಲಿ ಅಚ್ಚಾಗಿತ್ತು. ಚಿಕ್ಕಂದಿನಲ್ಲಿ ನಡೆದ ಒಂದು ಘಟನೆ ಅವನ ಮನದಲ್ಲಿ.. ಬದುಕಲ್ಲಿ ಇನ್ನೂ ಹಸಿರಾಗಿತ್ತು. ನಂಬಿಕೆ, ಭ್ರಮೆಗಳು ಕೂಡಿದರೆ ನಡೆಯುವಂತಹಾ ಕತೆ. ಅಮ್ಮನ ಮುಗ್ಧ ನಂಬಿಕೆ, ಮಗನ ವಾಸ್ತವದ ಭ್ರಮೆ ಸೇರಿ ಬೆಳೆದಿರುವ ಕತೆ ಇದು. ಒಂದು ರೀತಿಯ ಸೈಕೋಲಾಜಿಕಲ್ ಮನಸ್ಥಿತಿಯಿಂದಲೂ ವಿಮರ್ಶಿಸಬಹುದಾದ ಕತೆ.


ಕೆಂಪು ಮೂಗುಬೊಟ್ಟು : ಹಳ್ಳಿಯ ಕಡೆಯಲ್ಲಿ ಒಂದು ಪದ್ದತಿ ಇದೆ. ಹೆಣ್ಣಿನ ಮೈಮೇಲೆ ಬಿಡುವ ಚಿನ್ನ ಎಂದರೆ ಅವಳು ಹಾಕಿದ್ದ ಮೂಗುನತ್ತಿನ ಬಂಗಾರ ಮಾತ್ರವೇ..

ಪಂಚಮ್ಮನ ಮನೆಯಲ್ಲಿ ಒಂದು ಸಂದಿಗ್ಧ ಪರಿಸ್ಥಿತಿ. ಮಗ, ಸೊಸೆ ಇಲ್ಲದ ಸಂಧರ್ಭದಲ್ಲಿ ಮೊಮ್ಮಗ ಮಾತ್ರ ಇದ್ದಾಗ ಪಂಚಮ್ಮ ತೀರಿಕೊಳ್ಳುತ್ತಾಳೆ. ಆದರೆ, ಹೆಣ ವಾಸನೆ ಎನ್ನುತ್ತಾ ಆದಷ್ಟು ಬೇಗ ಮಣ್ಣಿಗೆಳೆಯುವ ಧಾವಂತ. ಆ ಕ್ರಿಯೆಗಾಗಿ ಬಂದವರು ಅಂತಿಮ ಸಂಸ್ಕಾರಕ್ಕೆ ತಯಾರಿ ಮಾಡುತ್ತಿರುವಾಗ ಕಿವಿಯ ಓಲೆ ಒಂದೇ ಒಂದಿರುತ್ತದೆ. ಅದಕ್ಕೂ ಕಾರಣವಿತ್ತು. ಮೊಮ್ಮಗನ ಧನದಾಹ. ಇಂತಹಾ ಸಂಧರ್ಭದಲ್ಲಿ ಪಂಚಮ್ಮನ ಬದುಕಿನ ದಂತಕತೆಯೇ ಆದಂತಿದ್ದ ಕೆಂಪು ಮೂಗುಬೊಟ್ಟಿನ ಪರಿಸ್ಥಿತಿ ಏನಾಯಿತು ? ಓದಿ ನೋಡಿ.


ಸಾವು ಸಾಯುವುದಿಲ್ಲ : ಯಾರೋ ನಮ್ಮ ಬದುಕಲ್ಲಿ ಅಚಾನಕ್ಕಾಗಿ ಬಂದು ಎಷ್ಟೋ ವರ್ಷದ ಬಂಧ ಎಂಬಂತೆ ಹಾಸುಹೊಕ್ಕಾಗಿಬಿಟ್ಟಿರುತ್ತಾರೆ. ಅಂತಹವರ ಜೊತೆ ನಡೆಯುವ ಸಂಭಾಷಣೆಗಳು ಮನಸ್ಸಿಗೆ ಅದೆಷ್ಟು ಮುದ ಕೊಡುತ್ತವೋ, ಅವರೊಟ್ಟಿಗಿನ ಮನಸ್ತಾಪಗಳು ಅಷ್ಟೇ ನೋವು ಕೊಡುತ್ತವೆ. ಅಂತಹದ್ದೇ ಸೂಕ್ಷ್ಮ ಮನಸ್ಸಿನ ಹುಡುಗಿಯೊಬ್ಬಳ ಒಡನಾಟದ ಪಯಣದ ಕೊನೆಯ ಹಂತ, ಮಾನಸಿಕ ತುಮುಲಗಳು ವ್ಯಕ್ತವಾಗಿರುವ ಕತೆ ಇದು. 


ಎರಡು ಕೂದಲ ಅವಳು : ಅವನು ಅವಳನ್ನು ಯಾವತ್ತೂ ಅವ್ವ ಅಂದಿರಲೇ ಇಲ್ಲ. ಎಲ್ಲರೂ ಕರೆದಂತೆ ಅವನಿಗೂ ಆಕೆ ತಂಗ್ಯಕ್ಕನೇ.. ವಿರೂಪಾಕ್ಷಿಯ ತಂಗ್ಯಕ್ಕನಿಗೆ ಮಾತ್ರ ಮಗ 'ಈರಣ್ಣ'. ತಂಗ್ಯಕ್ಕನಿಗೆ ಎರಡು ಕಡೆಯಲ್ಲಿಯೂ ಕೊಂಚ ಕೂದಲು ಅಷ್ಟೇ.. ಅದನ್ನೇ ಒಪ್ಪ ಮಾಡಿ ಶಿಸ್ತಿನಿಂದ ಗಂಟು ಕಟ್ಟಿಕೊಳ್ಳುತ್ತಿದ್ದಳು. ಎಲ್ಲದಕ್ಕೂ ಅವಳದ್ದು ತಲೆಕೆಡಿಸಿಕೊಳ್ಳದ ಪ್ರಕ್ರಿಯೆ. ಮಗ ಒಬ್ಬ ಹುಡುಗಿಯನ್ನು ಪ್ರೀತಿಸಿದಾಗಲೂ.. ಅವಳದ್ದು ಪಾಸಿಟಿವ್ ಪ್ರತಿಕ್ರಿಯೆ. ಇನ್ನೇನು ಅವನು ಅವ್ವನನ್ನು ಅವ್ವ ಎಂದು ಕರೆಯಬೇಕು ಎನ್ನುವಷ್ಟರಲ್ಲಿ ನಡೆಯುವ ಘಟನೆಗಳು, ತೆಗೆದುಕೊಳ್ಳುವ ನಿರ್ಧಾರಗಳು ಎರಡೂ ವಿರೂಪಾಕ್ಷಿಯ ದಿಕ್ಕನ್ನೇ ಬದಲಿಸಿ ನಿಜವಾದ ಎರಡು ಕೂದಲ ಅವಳನ್ನು ಹಾಗೂ ಅವಳ ಹಿರಿಮೆಯನ್ನು ಪರಿಚಯಿಸಿಕೊಡುತ್ತವೆ.


ಮಣ್ಣಿನ ಕಂಪು : ರೋಹಿತ್ ದೇಶದಿಂದ, ಅಪ್ಪ - ಅಮ್ಮನಿಂದ ದೂರ ಉಳಿದಾಗ ಸತ್ಯಾ ಆಂಟಿ ಹಾಗೂ ಶ್ರೀಧರ್ ಅಂಕಲ್ ಮನೆಯವರಂತೆಯೇ ಆಗಿ ಹೋಗಿದ್ದರು ಸಂದೀಪನಿಗೆ. ಮೊದಮೊದಲು ರೋಹಿತ್ ಈ ಬದಲಾವಣೆಗೆ ಸಂತಸ ಪಟ್ಟನಾದರೂ ನಂತರ ಒಂದು ರೀತಿಯ ಹೊಟ್ಟೆ ಕಿಚ್ಚಿನ ಪ್ರತಿಕ್ರಿಯೆ. ಅಂತಹಾ ಸಂಧರ್ಭದಲ್ಲಿ ಸತ್ಯಾ ಆಂಟಿ ತೀರಿ ಹೋಗುತ್ತಾರೆ. ಆ ಸಂಧರ್ಭದಲ್ಲಿ ಬರುವ ಮೊಮ್ಮಗಳ ಮಾತು ಬೇರೆಯದ್ದೇ ಬಗೆಯನ್ನು ಅರ್ಥ ಮಾಡಿಸುವಂತಿರುತ್ತದೆ. ಬೇರೆ ಎಲ್ಲಿಯೇ ಉಳಿದರೂ ಮಣ್ಣಿನ ಕಂಪು ತಲುಪುವಂತೆಯೇ ಇರಬೇಕು ಎಂದೆನಿಸುವಂತೆ ಮಾಡಿದರೂ ಅವರವರ ಮನವನ್ನೂ ತೆರೆದಿಡುತ್ತದೆ. ಜನರೇಷನ್ ಗ್ಯಾಪ್ ಹಾಗೂ ಅರ್ಥೈಸಿಕೊಳ್ಳುವಿಕೆಯ ಗ್ಯಾಪ್ ಅನ್ನು ಅರ್ಥೈಸಿಕೊಳ್ಳುವಂತೆ ಮಾಡುವ ಕತೆ ಇಷ್ಟವಾಯಿತು. 


ಉದ್ದೀರಯ್ಯನ ಎತ್ತರ : ಹೆಸರಿಗೆ ವೈರುಧ್ಯದಂತಿದ್ದ ಈರಯ್ಯ ಗಿಡ್ಡ. ಅದಕ್ಕೇ ಆತನ ಕೆಲಸವೂ ಹೋಗುತ್ತದೆ. ಮಗಳು ತನ್ನಂತೆ ಆಗಬಾರದು ಎಂದು ಅವಳನ್ನು ಎತ್ತರವಾಗುವಂತೆ ಮಾಡಿರುತ್ತಾನೆ. ಆದರೆ, ಒಂದು ದಿನ ಅವನ ಅನುಭವಗಳು ಎತ್ತರದ ಸಂತಸವನ್ನು ಹಾಗೂ ಆ ಎತ್ತರದಿಂದ ಉಂಟಾಗುವ ಭಯವನ್ನೂ ತೆರೆದಿಡುತ್ತವೆ. ಅದನ್ನೇ ಜೀವಂತಿಕೆಯಿಂದ ಕಟ್ಟಿಕೊಟ್ಟಿರುವ ಕತೆ ಇದು.


ಎಲ್ಲರೊಳಗೊಂದು : ಊರು ಹಾಗೂ ಪಟ್ಟಣ ಎಂಬ ಆಯ್ಕೆ ಬಂದಾಗ ಶಿಕ್ಷಣ ಹಾಗೂ ಸಂಪಾದನೆಗೆ ಪಟ್ಟಣವನ್ನು ಆಯ್ದುಕೊಳ್ಳುವ ಯುವ ಜನಾಂಗ, ಅನಾರೋಗ್ಯದಿಂದ ಸುಧಾರಿಸಿಕೊಂಡು ನೆಮ್ಮದಿಯಾಗಿ ಬದುಕಲು ಅರಸುವುದು ಹುಟ್ಟೂರನ್ನು. ಅಂತಹಾ ಒಂದು ಸಂಧರ್ಭ, ಸೆಳೆತ, ಎರಡು ಜನರೇಷನ್ ಗಳ, ಆಲೋಚನೆ, ಭವಿಷ್ಯ ಎಲ್ಲದರ ಚಿತ್ರಣ ಇಲ್ಲಿದೆ. ವಾಸ್ತವ ದರ್ಶನದ ಕತೆ ಇದು.


ಬೇವಿನ ಮರದ ಬುತ್ತಿ ಗಂಟು : ಒಬ್ಬ ಮನುಷ್ಯ ಸದಾ ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ಅಲ್ಲಿನ ಕಾಂಪೌಂಡ್ ಸ್ವಚ್ಛ ಮಾಡಿ..ಊಟಕ್ಕೆ ಕುಳಿತಾಗ ಆತನನ್ನೇ ಗಮನಿಸುತ್ತಿದ್ದವನಿಗೆ ಅವರ ಮೇಲೆ ಗೌರವ ಭಾವನೆ. ಅಪ್ಪನ ಬದುಕಿನ ಮಜಲುಗಳನ್ನು ಕಟ್ಟಿಕೊಡುತ್ತಾ ಹೋಗುತ್ತಿದ್ದವನಿಗೆ ಸಿಕ್ಕ ಚಿತ್ರಣ ನಮಗೂ ಸಿಗುತ್ತದೆ. ಬುತ್ತಿಗಂಟಿಗೂ ಹಾಗೂ ಬೇವಿನ ಮರಕ್ಕೂ ಇರುವ ನಂಟಿಗೂ ಇರುವ ಕಥೆ ವಿಭಿನ್ನವೆನಿಸಿತು.


ಗುಲ್ ಮೊಹರ್ ಗಿಡವೂ.. ಆ ಬೆಳಕೂ.. : ಗುಲ್ ಮೊಹರ್ ರಾಗರಂಜಿತ. ಈಗ ಕಾಲ ಬದಲಾಗಿದೆ. ಕೆಂಪು ದೀಪದ ಕೆಳಗೆ ನಿಲ್ಲುವವರು ಬೇರೆಯದ್ದೇ ತಾಣ ಹುಡುಕಿರಬಹುದು.ಎಂತಹಾ ಗುಲ್ ಮೊಹರ್ ಗಿಡದ ಕೆಳಗೆ ನಿಂತ ಹುಡುಗಿಯೊಬ್ಬಳ ಕುರಿತು ತೋರುವ ಕುತೂಹಲ, ಅಪ್ಯಾಯಮಾನ ಭಾವವನ್ನು ಬೇರೆಯದ್ದೇ ರೀತಿ ನೋಡುವ ಸುತ್ತಮುತ್ತಲಿನವರ ರೀತಿ ಚಿತ್ರಿತವಾಗಿದೆ. ಮಾರ್ಮಿಕವೆನಿಸುವಂತಹಾ ಕತೆಗಳು.


ತುಂಬಾ ಎಳೆಯದೆ, ಕಡಿಮೆ ಪದಗಳಲ್ಲಿಯೇ ಸಮರ್ಥವಾಗಿ ಕಥಾ ಪರಿಸರವನ್ನು ಕಟ್ಟಿಕೊಟ್ಟ ಪರಿ ಇಷ್ಟವಾಯಿತು. ಕತೆಗಳಲ್ಲಿನ ಮಾರ್ಮಿಕತೆ, ಕಥಾ ವಸ್ತುವಿಗೆ ಬೇರೆಯದ್ದೇ ಬಣ್ಣ ತಂದುಕೊಟ್ಟಿದೆ. ಕತೆಯ ಕಂಪು ಹೀಗೆಯೇ.. ಇನ್ನಷ್ಟು ಪಸರಿಸುತ್ತಿರಲಿ. 


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ