ಪುಸ್ತಕದ ಶೀರ್ಷಿಕೆ : ದ್ವೀಪ
ಲೇಖಕರು : ಡಾ || ನಾ. ಡಿಸೋಜ
ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು
ಪರಿಷತ್ತಿನಿಂದ ಮೊದಲನೇ ಮುದ್ರಣ : 2014
ಪುಟಗಳು : 82
ಬೆಲೆ : 75 ರೂ.
ರೋಹಿಣಿ, ಮೃಗಶಿರಾ, ಅರಿದ್ರಾ..
ಮೊಗ್ಗೆ... ಉಬ್ಬೆ... ಉತ್ತರೆ... ಹಸ್ತ... ಚಿತ್ತ...
"ಆದ್ರೆ ಮಳೆ ಹೋದ್ರೆ ಬೆಳೆ ಎನ್ನುವುದು" ಗಾದೆಯೇ ಆದರೂ.. ಮಳೆ, ಪ್ರಕೃತಿ ಸೇರಿದರೆ ಯಾರ ಜೀವನವಾದರೂ ಬೇರೆಯದ್ದೇ ದಿಕ್ಕಿಗೆ ಬದಲಾಗುತ್ತದೆ. ಬರೀ ಮಳೆ ಎಂದಲ್ಲ.. ನೀರು. ನೀರಿಗಾಗಿ ಅಣೆಕಟ್ಟು ಕಟ್ಟುವಾಗ ಎಷ್ಟೋ ಜನರಿಗೆ ಉಪಕಾರವಾಗುತ್ತದಾದರೂ.. ಮುಳುಗಡೆಯಾಗುವ ಊರುಗಳ ಜನರ ವ್ಯಥೆ ಬೇರೆಯದ್ದೇ ಇರುತ್ತದೆ. ಶರಾವತಿ ನದಿಗೆ ಆಣೆಕಟ್ಟು ಕಟ್ಟಿದಾಗ ಹೊಸಮನೆ ಹಳ್ಳಿಯಲ್ಲಿ ನಡೆದ ಕೆಲ ದಿನಗಳ ಕತೆ ಕಿರು ಕಾದಂಬರಿಯಾಗಿದೆ. ಅದೇ ನಾ. ಡಿಸೋಜ ಅವರ ದ್ವೀಪ. ಚಲನಚಿತ್ರವಾಗಿದೆಯಾದರೂ.. ಬಹಳಷ್ಟು ಬದಲಾವಣೆಗಳಿವೆ. ಇಲ್ಲಿ ಕೇವಲ ಪುಸ್ತಕವಾಗಿ ಪ್ರಕಟವಾದ ಕತೆಯನ್ನಷ್ಟೇ ಪರಿಚಯಿಸುತ್ತಿದ್ದೇನೆ.
ಹೊಸಮನೆ ಹಳ್ಳಿಯಲ್ಲಿ ಇದ್ದದ್ದೇ ಐದು ಮನೆ. ಪರಮೇಶ್ವರಯ್ಯ, ಹೇರಂಭ ಹಾಗೂ ಗಣಪಯ್ಯನವರ ಮೂರು ಕುಟುಂಬಗಳು ಪ್ರಮಖವಾದವು. ಇನ್ನೆರಡು ಪರಮೇಶ್ವರಯ್ಯ ಹಾಗೂ ಹೇರಂಭನ ಮನೆಯ ಕೆಲಸಕ್ಕೆ ಒಕ್ಕಲಾಗಿದ್ದ ಹಸಲರ ಕುಟುಂಬಗಳು. ಹಿಂಭಾಗದಲ್ಲೇ ಸೀತಾ ಪರ್ವತ. ಪರ್ವತವೆಂದರೆ ಈಗ ಉಳಿದದ್ದು ಗುಡ್ಡ ಮಾತ್ರ. ಅಲ್ಲೇ ಹಿಡಿಂಬಾವನ ಕೂಡಾ ಇದ್ದಿತು. ಕಾಡು ಈಗಲೂ ಕಾಡೇ.. ಕ್ರೂರ ಮೃಗಗಳ ವಾಸ ಅಲ್ಲಿಯೇ.. ಆದರೆ, ಮನೆಗಳ ಬಳಿ ಬರುತ್ತಿದ್ದದ್ದು ಕಡಿಮೆಯೇ..
ಡ್ಯಾಂ ಪೂರ್ತಿಯಾದ ಬಳಿಕ ಹೊಸಮನೆ ಹಳ್ಳಿ ಕೂಡಾ ಮುಳುಗಡೆಯಾಗುವ ಪ್ರದೇಶ ಎಂದು ಪರಿಗಣಿಸಿ ಅಲ್ಲಿನ ಕುಟುಂಬಗಳಿಗೆ ಸಲ್ಲಬೇಕಾದ ಪರಿಹಾರವನ್ನೂ, ಸ್ಥಳವನ್ನೂ ನೀಡಿ ಸ್ಥಳಾಂತರಿಸ ಹೊರಡುತ್ತಾರೆ. ಆದರೆ, ಸ್ಥಿತಿವಂತರಾಗಿದ್ದ ಪರಮೇಶ್ವರಯ್ಯ ಹಾಗೂ ಹೇರಂಭನಿಗೆ ದೊರೆತಷ್ಟು ಸುಲಭವಾಗಿ ಗಣಪಯ್ಯನಿಗೆ ಪರಿಹಾರ ಸಿಗುವುದಿಲ್ಲ. ಅವನು ಲಂಚ ನೀಡಿದರೂ ಒಂದಲ್ಲಾ ಒಂದು ನೆಪ ಹೇಳಿ ಆತನಿಗೆ ಸಿಗಬೇಕಾದ ಸೌಲಭ್ಯ ನೀಡಿರುವುದಿಲ್ಲ. ಹಿರಿಯ ಅಧಿಕಾರಿಯ ದೆಸೆಯಿಂದ ಅದು ಸಿಗುವ ಭರವಸೆ ಸಿಕ್ಕರೂ.. ಗಣಪಯ್ಯನಿಗೆ ಅದು ದೊರೆಯುತ್ತಿದ್ದದ್ದು ಮಳೆಗಾಲ ಮುಗಿದ ನಂತರವೇ..
ಗಣಪಯ್ಯ ಆ ಜಾಗವನ್ನು ಬಿಟ್ಟು ಹೊರಟರೆ ತಮಗೆ ಸಿಗುವ ಸೌಲಭ್ಯವೂ ಸಿಗಲಾರದು ಎಂದೆಣಿಸಿ ಅಲ್ಲಿಯೇ ಉಳಿಯುವ ತೀರ್ಮಾನ ಮಾಡುತ್ತಾನೆ. ವಯಸ್ಸಾದ ಅಪ್ಪನೂ ಅವರಿಷ್ಟದ ಸ್ಥಳ ಬಿಟ್ಟು ಹೋಗಲಾರದೆ ಮಗನಿಗೆ ಬೆಂಬಲ ನೀಡುತ್ತಾರೆ. ಆದರೆ, ಇಷ್ಟವಿಲ್ಲದಿದ್ದರೂ ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಗಣಪಯ್ಯನ ಹೆಂಡತಿ ನಾಗವೇಣಿಗೆ. ಅವಳ ಅಪ್ಪನ ಮನೆಗೆ ಹೋಗಲು ಗಣಪಯ್ಯ ಒಪ್ಪುವುದಿಲ್ಲ. ಹೇರಂಭನ ಜಮೀನು, ತೋಟ ಕೂಡಾ ಅವನ ಅನುಮತಿ ಪಡೆದು ಗಣಪಯ್ಯನೇ ನೋಡಿಕೊಳ್ಳಲು ಇಚ್ಛಿಸಿದಾಗ ಉದ್ಭವವಾಗುವುದೇ ಆಳುಗಳ ಸಮಸ್ಯೆ. ಮಾಮೂಲು ಮಳೆಗಾಲದಲ್ಲಿಯೇ ಎಲ್ಲಿಯೂ ಹೊರ ಹೋಗಲಾರದಂತೆ ನಾಲ್ಕು ತಿಂಗಳು ದ್ವೀಪವಾಗುವ ಹೊಸಮನೆ ಹಳ್ಳಿ ಈಗ ಮುಳುಗಿಯೇ ಹೋಗುತ್ತದೆ ಎನ್ನುವಾಗ ಯಾರು ತಾನೇ ಬರಲು ಇಚ್ಛಿಸುತ್ತಾರೆ.
ಆಗ, ಇವರ ಮನೆಗೆ ನಾಗವೇಣಿಯ ತಂದೆ ಮನೆ ಅರಳಗೋಡಿನಿಂದ ಬರುವ ಕೃಷ್ಣಯ್ಯ. ನಾಗವೇಣಿಗೆ ಒಡ ಹುಟ್ಟಿದವನಂತೆ.. ಗಣಪಯ್ಯನನ್ನು ಭಾವಯ್ಯಾ ಎಂದು ಕರೆಯುವ ಕೃಷ್ಣಯ್ಯ. ಎಲ್ಲವೂ ಸರಿಯಾಯಿತು ಎನ್ನುವಾಗ ಬಂದ ಮಳೆ ಆ ಪ್ರದೇಶವನ್ನು ದ್ವೀಪವನ್ನಾಗಿಸುತ್ತದೆ. ಮನುಷ್ಯ ಒಂಟಿಯಾಗಿ ಆಲೋಚನೆ ಸುತ್ತುವರಿದಂತೆ ಮನಸ್ಸಿನಲ್ಲಿ ಬೇಡದ ಚಿಂತೆಗಳು. ಗಣಪಯ್ಯನ ತಂದೆ ತೀರಿ ಹೋದ ಮೇಲಂತೂ ಇರುವವರು ಮೂವರೇ..
ಗಣಪಯ್ಯ ಒಂದು ರೀತಿ ಲಹರಿಯಲ್ಲಿರುವ ಮನುಷ್ಯ. ಬೇಕೆಂದಾಗ ಮಾತು ಇಲ್ಲವೇ ಮೌನ. ನಾಗವೇಣಿಗೆ ಈಗ ಸಲುಗೆ ಇರುವ ಕೃಷ್ಣಯ್ಯ ಬಂದ ಮೇಲೆ ಅವನದ್ದೇ ಧ್ಯಾನ. ಅವಳ ಮನಸ್ಸಿನಲ್ಲಿ ಮೊದಲಿಗೆ ಬೇರೆ ಭಾವನೆಗಳಿರದಿದ್ದರೂ ಚಿಕ್ಕಂದಿನಿಂದಲೂ ತನ್ನ ಮನೆಯಲ್ಲಿದ್ದ ಆಳು ಎನ್ನುವ ಸಲುಗೆಯಂತೂ ಇದ್ದೇ ಇತ್ತು. ಆದರೆ, ಗಣಪಯ್ಯನಿಗೆ ಅವಳ ಆ ನಡೆ ತನ್ನ ಕುರಿತ ನಿರ್ಲಕ್ಷ್ಯ ಎಂಬಂತೆ ಭಾಸವಾಗುತ್ತದೆ. ಇದನ್ನರಿತ ಕೃಷ್ಣಯ್ಯ ಅಲ್ಲಿಂದ ಹೋಗುವ ಮಾತನಾಡಿದರೂ ಗಣಪಯ್ಯನೇ ತಡೆದು ನಿಲ್ಲಿಸಿರುತ್ತಾನೆ. ಆದರೆ, ಕೃಷ್ಣಯ್ಯನನ್ನು ತಡೆದು ನಿಲ್ಲುವಂತೆ ಮಾಡಿದ್ದು ಪರೋಕ್ಷವಾಗಿ ನಾಗವೇಣಿ. ಮೂವರ ಮನದ ಹಿಂದಣ ಭಾವಗಳೂ ಬೇರೆ. ನೀರು ಏರಿದಂತೆಲ್ಲಾ ಶುರುವಾಗುವ ಪ್ರಾಣಿಗಳ ಹಾವಳಿ, ಬೆಳ್ಳಿ ದನದ ಸ್ಥಿತಿಯಂತೂ ಕಣ್ಮುಂದೆ ಬಂದಂತಾಗುತ್ತದೆ.
ಪ್ರಕೃತಿಯ ಆಟಾಟೋಪ ವಿಕೋಪಕ್ಕೆ ಹೋದಂತೆ ಸಂಸಾರದ ಪರಿಸ್ಥಿತಿಯಲ್ಲಿಯೂ ಅಲ್ಲೋಲ ಕಲ್ಲೋಲ. ಈ ಸಂಸಾರದ ಪರಿಸ್ಥಿತಿ ಶಾಂತವಾಯಿತೇ ಅಥವಾ ಮುಳುಗಿ ಹೋಯಿತೇ ಎಂಬುದನ್ನು ಓದಿ ನೋಡಿ.
ಇಲ್ಲಿನ ಪ್ರಕೃತಿ ಹಾಗೂ ಮನುಷ್ಯನ ನಡತೆಗಳ ಸಾಮ್ಯತೆಗಾಗಿ ನೀಡಿರುವ ರೂಪಕಗಳು ಬಹಳಷ್ಟಿವೆ. ಪ್ರಕೃತಿಯ ಯಾವ ಭಾವನೆಗಳೂ ಸುಪ್ತವಾಗಿ ಉಳಿಯುವುದಿಲ್ಲವಾದರೂ.. ಮನುಷ್ಯನ ನಡೆಗಳಲ್ಲಿ ಸುಪ್ತವಾಗಿ ಅಡಗಿರುವ ಭಾವನೆಗಳು ಏನೆಂದು ಹೇಳಲು ಬರುವುದೇ ಇಲ್ಲ. ಕೃಷ್ಣಯ್ಯನ ಮೇಲೆ ನಾಗವೇಣಿಗೆ ಬೇರೆ ರೀತಿಯ ಭಾವನೆ ಮೂಡಲು ಕಾರಣ ಪರೋಕ್ಷವಾಗಿ ಗಣಪಯ್ಯನೇ ಆಗಿ ಹೋದನಾ ಎಂದೂ ಅನ್ನಿಸುತ್ತದೆ. ಹಿಂಸಿಸಿದಷ್ಟೂ ಹಠಮಾರಿಯಾಗುತ್ತಾ ಹೋಗುವ ಅವಳ ಆ ಮನಸ್ಥಿತಿ ಒಂಟಿತನದ ಕಾರಣವೂ ಹೌದು. ಯಾವುದೇ ಮನರಂಜನೆಗಳಿಲ್ಲದೆ, ಹೆಚ್ಚಿನ ಕೆಲಸವೂ ಇಲ್ಲದೆ ಮನುಷ್ಯ ಕುಳಿತಾಗ ಅವನನ್ನು ಬೇಡದ ಆಲೋಚನೆಗಳು ಮುತ್ತುವುದೇ ಹೆಚ್ಚು. ಇಲ್ಲಿ ಆಗಿದ್ದೂ ಅದೇ ಪರಿಸ್ಥಿತಿಯಾ..?
ದ್ವೀಪದ ನಟ್ಟ ನಡುವಲ್ಲಿ ಸಿಕ್ಕಿ ಬಿದ್ದ ಗಣಪಯ್ಯನ ಮನೆಯ ಸ್ಥಿತಿಗೆ ಕಾರಣ ಯಾರು ? ಪರಿಹಾರ ನೀಡದ ಸರ್ಕಾರದ ಅಧಿಕಾರಿಗಳಾ..?? ಡ್ಯಾಂ ಕಟ್ಟಿದವರಾ..?? ಆತನ ನಿರ್ಧಾರವಾ..?? ತಂದೆಯ ಬೆಂಬಲವಾ..?? ಹೆಂಡತಿಯ ನಡೆಯಾ..?? ಕೃಷ್ಣಯ್ಯನಾ..?? ಮಳೆಯಾ..?? ಪ್ರಕೃತಿಯಾ..?? ಹುಚ್ಚೆದ್ದ ಭಾವನೆಗಳಾ..??
ಒಂದೊಂದು ದಿಕ್ಕಿನಲ್ಲಿ ಆಲೋಚಿಸಿದರೆ ಒಂದೊಂದು ರೀತಿಯ ಸಾಧ್ಯತೆಗಳು ಕಾಣುತ್ತವೆ.
ಸಣ್ಣ ಪುಟ್ಟ ಪರಿಸ್ಥಿತಿಗೂ ಡಿಪ್ರೆಷನ್ ಎಂದು ಕೊರಗುವ ಇಂದಿನ ಜನತೆಗೆ ಸರಿಯಾದ ಮಾರ್ಗದರ್ಶನ ಸಿಕ್ಕು ಅದರಿಂದ ಪಾರಾಗುತ್ತಾರೆ. ಆದರೆ, ಇಂತಹಾ ಪರಿಸ್ಥಿತಿಯಲ್ಲಿ ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ನಡೆದ ಘಟನಾವಳಿಗೆ ಕಾರಣ ಮನೋ ವೈಕಲ್ಯವಾ ಎಂದೂ ಆಲೋಚಿಸುವಂತಾಗುತ್ತದೆ. ಅಕಸ್ಮಾತ್, ಕೃಷ್ಣಯ್ಯ ಅಲ್ಲಿಂದ ಮೊದಲೇ ಹೊರಟು ಇವರಿಬ್ಬರೇ ದ್ವೀಪದಲ್ಲಿ ಉಳಿಯುವಂತಾಗಿದ್ದರೂ ನಾಗವೇಣಿ ಅನುಮಾನದ ಅಗ್ನಿದಿವ್ಯವನ್ನು ದಿನವೂ ಹಾಯಬೇಕಾಗುತ್ತಿತ್ತಾ..?? ಏನೆಲ್ಲ ಸಾಧ್ಯತೆಗಳಿದ್ದರೂ ನಿಸ್ಸಹಾಯಕ ಪರಿಸ್ಥಿತಿ ಏನೆಲ್ಲವನ್ನೂ ಮಾಡಿಸಿಬಿಡುತ್ತದೆ ಎನ್ನಿಸಿತು.
ಈ ಕಿರು ಕಾದಂಬರಿ ಅಲ್ಲಿನ ನೀರು ಹೊಸಮನೆ ಹಳ್ಳಿಯನ್ನು ಆವರಿಸಿದಂತೆ ನಮ್ಮನ್ನೂ ಆವರಿಸುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ