ಪುಸ್ತಕದ ಶೀರ್ಷಿಕೆ : ಈ ದಾರಿ - ಆ ದಾರಿ
ಲೇಖಕರು : ಅ. ನ. ಕೃ
ಪ್ರಕಾಶಕರು : ಶಾರದಾ ಪ್ರಕಟನಾಲಯ
ಮೊದಲನೇ ಮುದ್ರಣ :ಮೇ 1960
ಪುಟಗಳು : 180
ಕಾದಂಬರಿ ಪಿತಾಮಹ ಎಂದೆ ಖ್ಯಾತರಾದ ಅ.ನ.ಕೃ ಅವರ ಕಾದಂಬರಿಯೇ ಈ ದಾರಿ - ಆ ದಾರಿ. ಸಮಾಜದಲ್ಲಿ ಬದುಕುವರಲ್ಲಿ ಒಬ್ಬರ ದಾರಿಯೂ ಒಂದೊಂದು ರೀತಿ.. ನಾವು ಯಾವ ದಾರಿಯನ್ನು ಆಯ್ದು ಬದುಕುತ್ತೇವೆ ಎಂಬುದು ನಮ್ಮ ನಮ್ಮ ಆಯ್ಕೆಗೆ ಬಿಟ್ಟದ್ದು. ನಾವು ಆಯ್ದುಕೊಳ್ಳುವ ಆ ದಾರಿ ಸಮಾಜಕ್ಕೆ ಕಂಟಕವಾಗದೆ, ನಮ್ಮ ಬದುಕಿಗೆ ಹಿತವಾಗಿ ಇರಬೇಕು.
ಒಡ ಹುಟ್ಟಿದವರೇ ಆದರೂ.. ಎಷ್ಟೇ ಆತ್ಮೀಯರೇ ಆದರೂ.. ಆಯ್ದುಕೊಳ್ಳುವ ದಾರಿಗಳು ಬೇರೆ ಬೇರೆ.. ಸಂಬಂಧದಲ್ಲಿ ಮಾತ್ರವಲ್ಲ ವೃತ್ತಿ ಬದುಕಿನಲ್ಲಿಯೂ ಸಹ ಹೀಗೆಯೇ.. ಪ್ರತಿಯೊಬ್ಬರ ಜೀವನ ಪಯಣವು ಅಂತ್ಯವಾಗುವುದು ಸಾವಿನಲ್ಲಿಯೇ ಆದರೂ.. ಜನರು ಅವರನ್ನು ನೆನಪಿಟ್ಟುಕೊಳ್ಳುವುದು ಅವರು ಯಾವ ದಾರಿಯನ್ನು ಆಯ್ದುಕೊಂಡಿದ್ದಾರೆ ಎಂಬುದರ ಮೇಲೆಯೇ. ಖ್ಯಾತ ಹಾಗೂ ಕುಖ್ಯಾತರಾಗುವುದು ಅವರವರ ಆಯ್ಕೆಯೇ.. ತಪ್ಪು ಹಾದಿಯನ್ನು ತುಳಿದಿದ್ದವರು, ನಂತರ ತಮಗೆ ತಮ್ಮ ತಪ್ಪು ಅರಿವಾದ ಮೇಲೆ ಸರಿ ದಾರಿಗೆ ಬಂದು ಜೀವನ ಸಾಗಿಸುವ ಮತ್ತೊಂದು ಬಗೆಯ ಜನರು ಇಲ್ಲದಿಲ್ಲ. ಈ ಎಲ್ಲರ ಸಮಗ್ರ ಚಿತ್ರಣವನ್ನು ಕಟ್ಟಿ ಕೊಡುವಂತಿದೆ ಈ ಕಾದಂಬರಿ.
ಈ ಕಾದಂಬರಿಯ ಕಾಲಘಟ್ಟ ಸ್ವಾತಂತ್ರ್ಯಾ ನಂತರದ್ದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆಯೂ ಹಲವಾರು ಸಮಸ್ಯೆಗಳು ಜನರನ್ನು ಕಾಡಿದ್ದಿದೆ. ಅದರಲ್ಲಿ ಪುಢಾರಿಗಳ ಸಮಸ್ಯೆ ಕೂಡ ಒಂದು. ಅಂತಹಾ ಜನರು.. ಜನರ ಮಧ್ಯೆ ಇದ್ದುಕೊಂಡು ಅವರಿಗೆ ತೊಂದರೆಯನ್ನು ನೀಡುತ್ತಾ.. ಸಾಮಾಜಿಕವಾಗಿ, ರಾಜಕೀಯವಾಗಿ ಎಲ್ಲರಿಗೂ ಕಂಟಕವಾಗುತ್ತಿದ್ದ ಸಮಯ.
ವೆಂಕಣ್ಣನವರು ರೆವೆನ್ಯೂ ಹೆಡ್ ಮುನಿಷಿಯಾಗಿದ್ದವರು. ಅವರ ಪತ್ನಿ ಅಂಬಮ್ಮ. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಮೊದಲ ಮಗು ಮಗಳು ಸುಭದ್ರ ಎರಡನೆಯವನು ರಂಗಣ್ಣ. ಸೋಲೂರು ಇವರ ವಾಸಸ್ಥಾನ. ಸೋಲೂರಿನಲ್ಲಿ ಸಾಮಾಜಿಕವಾಗಿ ಅಂತಹ ಸಮಸ್ಯೆಗಳೇನೂ ಇರಲಿಲ್ಲ. ಇದ್ದ ಒಂದೇ ಸಮಸ್ಯೆ ಎಂದರೆ ಅದು 'ಭರಮೇ ಗೌಡ'. ಸೋಲೂರಿನಿಂದ ಸ್ವಲ್ಪ ದೂರದಲ್ಲಿ ಮನೆ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರೂ.. ಸೋಲೂರಿಗೆ ತಾನೇ ಪಾಳೆಯಗಾರ ಎನ್ನುವ ಹಾಗೆ ವರ್ತಿಸುತ್ತಿದ್ದ. ಈತನಿಗೆ ಮೂರು ಜನ ಹೆಂಡತಿಯರು. ಆದರೆ, ಮೊದಲ ಹೆಂಡತಿ ಸತ್ತಿದ್ದಳು. ಎರಡನೇ ಹೆಂಡತಿ ಜವನಿಗೆ ಇನ್ನೂ ಮಕ್ಕಳಾಗದ ಕಾರಣ ಮೂರನೆಯವಳಾಗಿ ಚೆನ್ನಿಯನ್ನು ಮದುವೆ ಮಾಡಿಕೊಂಡಿದ್ದ. ಆದರೂ, ಇವನ ಅತ್ಯಾಚಾರಗಳಿಗೆ ಕಡಿಮೆ ಏನೂ ಇರಲಿಲ್ಲ.
"ಊರಿನ ಹೆಣ್ಣು ಮಕ್ಕಳಲ್ಲಿ ಯಾರಾದರೂ ಋತುಮತಿಯರಾದರೆ, ಶಾಸ್ತ್ರ ನಡೆದ ನಂತರ ಆ ಹೆಣ್ಣು ಮಕ್ಕಳನ್ನು ಒಂದು ದಿನದ ಮಟ್ಟಿಗೆ ಭರಮೇಗೌಡನ ಬಳಿ ಬಿಡಬೇಕು" ಎಂಬುದು ಅವನ ಆಜ್ಞೆ ಆಗಿತ್ತು. ಸೋಲೂರಿನ ಜನ ಭರಮೇಗೌಡನಿಗೆ ಹೆದರುತ್ತಿದ್ದರು.. ಅಷ್ಟೇ ಅಲ್ಲ.. ಪೊಲೀಸ್ ಅಧಿಕಾರಿಗಳು ಮತ್ತು ಬೇರೆಯ ಸರ್ಕಾರಿ ಅಧಿಕಾರಿಗಳನ್ನು ಸಹಾ ಅವನು ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದ. ಅಷ್ಟೇ ಅಲ್ಲದೆ, ಜೂಜಿನ ಅಡ್ಡೆಗಳನ್ನು ನಡೆಸುತ್ತಿದ್ದ. ತನ್ನದೇ ಆದ ಪೈಲ್ವಾನ್ ಪಡೆಯನ್ನೂ ಕಟ್ಟಿದ್ದ.
ಈಗ ಊರಿನ ಪಟೇಲರಾದ ನಂಜೇಗೌಡರಿಗೆ ಅವನ ಆಜ್ಞೆ ಕುತ್ತಿಗೆಗೆ ಬಂದಿತ್ತು. ಅವರ ಮಗಳು ನರಸಿ ಋತುಮತಿಯಾಗಿದ್ದರೂ ಯಾವ ಶಾಸ್ತ್ರವನ್ನು ಮಾಡದೇ ಅದನ್ನು ಮುಚ್ಚಿಟ್ಟಿದ್ದರು. ವೆಂಕಣ್ಣನವರ ಬಳಿ ಈ ಸಮಸ್ಯೆಗೆ ಪರಿಹಾರಕ್ಕಾಗಿ ಬಂದಾಗ ವೆಂಕಣ್ಣನವರಿಗೆ ಸಮಸ್ಯೆಯ ಆಳ ಅರಿವಾಗಿತ್ತು. ನರಸಿ ಹಾಗೂ ಸುಭದ್ರ ಒಂದೇ ವಯಸ್ಸಿನವರು. ಇದಕ್ಕೊಂದು ಪರಿಹಾರವನ್ನು ಕಂಡುಹಿಡಿಯಲೇಬೇಕೆಂದು ಬೆಂಗಳೂರಿನಲ್ಲಿದ್ದ ತಮ್ಮ ಪೊಲೀಸ್ ಗೆಳೆಯ ಎ.ಎಸ್.ಪಿ ಸುಬ್ಬರಾಯಪ್ಪನವರಿಗೆ ಒಂದು ಪತ್ರವನ್ನು ಬರೆದುಕೊಟ್ಟರು.
ಪ್ರಾಮಾಣಿಕರಾಗಿದ್ದ ಸುಬ್ಬರಾಯಪ್ಪನವರು ಇದಕ್ಕೊಂದು ಪರಿಹಾರ ಹುಡುಕಿಯೇ ಹುಡುಕುತ್ತಾರೆ ಎಂಬ ಭರವಸೆ ನೀಡಿ ನಂಜೇಗೌಡನನ್ನು ಅವರಲ್ಲಿಗೆ ಕಳುಹಿಸಿದ್ದರು. ಇದರ ಫಲವಾಗಿ ಮೈಲಾರಯ್ಯ ಸೋಲೂರಿಗೆ ಬಂದರು. ಮೊದಲು ಮಾರು ವೇಷದಲ್ಲಿ ಬಂದು ಎಲ್ಲವನ್ನು ಅರಿತ ನಂತರ, ಅವರಿಗೆ ಅಲ್ಲಿಯೇ ಪೋಸ್ಟಿಂಗ್ ಆಯಿತು.
ಇದಕ್ಕಿಂತ ಕೊಂಚ ಮುಂಚೆ ಭರಮೇಗೌಡನ ಎರಡನೇ ಹೆಂಡತಿ ಜವನಿಯ ಸಾವಾಗಿತ್ತು. ಇದನ್ನು ಕಣ್ಣಾರೆ ಕಂಡಿದ್ದು ಆತನ ಹೆಂಡತಿಯೇ ಚೆನ್ನಿ . ಈಡಿಗರ ಪಾಪಣ್ಣನಿಗೂ ಈ ಕೊಲೆಯ ಕುರಿತ ತಿಳಿದಿತ್ತು. ಈ ವಿಚಾರವನ್ನು ಅರಿತ ಮೈಲಾರಯ್ಯ ತಾನು ಪೊಲೀಸ್ ಆದ ಕೆಲ ದಿನಗಳ ನಂತರ ಇಬ್ಬರಿಗೂ ಹತ್ತಿರವಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಾಕ್ಷಿಯನ್ನು ಸಂಗ್ರಹಿಸಿ, ಭರಮೇಗೌಡನ ಇತರ ಅನ್ಯಾಯ, ಅಕ್ರಮಗಳನ್ನು ಸಾಕ್ಷಿ ಸಮೇತ ವಿಜು ಮಾತು ಮಾಡಿ ಜೈಲಿಗೆ ಅಟ್ಟಿದನು. ಸದ್ಯಕ್ಕೆ ಸೋಲೂರು ಭರಮೇಗೌಡನ ಪಾಶವೀ ಹಸ್ತದಿಂದ ಬಿಡಿಸಿಕೊಂಡಿತ್ತು. ಬಹಳ ಕಷ್ಟವಿದ್ದ ಕೆಲಸವನ್ನು ಉಪಾಯವಾಗಿ ಭೇದಿಸಿದ್ದ ಮೈಲಾರಯ್ಯನವರಿಗೆ ಡಿ.ಜಿ.ಪಿಯವರು ರಾಷ್ಟ್ರಪತಿ ಪದಕಕ್ಕೆ ಶಿಫಾರಸು ಮಾಡಿದರು.
ಇದೆಲ್ಲದಕ್ಕೂ ಮೂಲ ಕಾರಣರಾಗಿದ್ದ ವೆಂಕಣ್ಣನವರ ಜೊತೆ ಮೈಲಾರಯ್ಯನವರ ಸಂಬಂಧವು ಹತ್ತಿರವಾಗುತ್ತಿತ್ತು. ಅವರ ಮನೆಯ ಸಮೀಪವೇ ಮೈಲಾರಯ್ಯನವರು ತಮ್ಮ ಪತ್ನಿ ಜಾನಕಿಯೊಂದಿಗೆ ಸಂಸಾರ ಹೂಡಿದರು. ಅಂಬಮ್ಮನವರಿಗಂತೂ ಜಾನಕಿ ಥೇಟ್ ಮಗಳಂತೆಯೇ.. ಈ ಸಂಬಂಧ ಇನ್ನೂ ಹತ್ತಿರವಾಗುವುದರಲ್ಲಿತ್ತು. ಮೈಲಾರಯ್ಯನವರ ತಮ್ಮ ಶಾಮ ಆಗಷ್ಟೇ ಓದು ಮುಗಿಸುತ್ತಿದ್ದ. ಇನ್ನೇನು ಓದು ಮುಗಿಸಿ ಕೆಲಸ ಹಿಡಿಯುವ ಹೊತ್ತಲ್ಲಿ ವೆಂಕಣ್ಣನವರ ಮಗಳು ಸುಭದ್ರ ಜೊತೆಗೆ ವಿವಾಹ ನಿಶ್ಚಯವಾಯಿತು. ಓದಿಲ್ಲದ ಹಳ್ಳಿಯ ಹುಡುಗಿ ಎಂದು ಮೊದಮೊದಲಿಗೆ ಹಿಂದೇಟು ಹಾಕಿದರೂ, ತನ್ನನ್ನು ಸ್ವಂತ ಮಗನಂತೆಯೇ ಸಾಕಿ ಬೆಳೆಸಿದ ಅಣ್ಣ - ಅತ್ತಿಗೆಯರ ಮಾತಿಗೆ ಎದುರಾಡದೆ ಶಾಮ ಸುಭದ್ರೆಯನ್ನು ವಿವಾಹವಾಗಿದ್ದ.
ಮೈಲಾರಯ್ಯನವರು ಸೋಲೂರಿನಲ್ಲಿ ಭರಮೇಗೌಡನ ಪ್ರಕರಣ ಭೇದಿಸಿದ ರೀತಿಯನ್ನು ಕಂಡು ಅಲ್ಲಿಯೇ ಇದ್ದ ಕಾನಕಾನ ಹಳ್ಳಿ ಎಂಬ ಊರಿನಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣವನ್ನು ಭೇದಿಸಲು ಅಲ್ಲಿಗೆ ವರ್ಗ ಮಾಡಿದರು. ಅಲ್ಲಿದ್ದದ್ದು ಭರಮೇಗೌಡನಂತೆ ಅತ್ಯಾಚಾರಿಗಳಲ್ಲ.. ಬದಲಾಗಿ , ರಾಜಕೀಯವನ್ನು ಜೈಲಿನಲ್ಲಿ ಹೊದ್ದು ಬಂದಿದ್ದ ದೊಡ್ಡೇ ಗೌಡ ಹಾಗೂ ಅವನ ಬಲಗೈ ಬಂಟ ಲಾಯರ್ ಲಿಂಗಣ್ಣ. ಇವರ ಅನ್ಯಾಯ ಅಕ್ರಮಗಳು ಬೇರೆಯದ್ದೇ ರೀತಿ..
ಇವರನ್ನು ಮಣಿಸುವ ಸಂದರ್ಭ ತಾನಾಗಿಯೇ ಒದಗಿ ಬಂದಿತ್ತು. ಇವರು ಅಕ್ರಮವಾಗಿ ಸಾಗಿಸುತ್ತಿದ್ದ.. ನಿಷೇಧಿತ ಸರಕು ಇದ್ದ ಲಾರಿಯೊಂದನ್ನು ಮೈಲಾರಯ್ಯ ತನ್ನ ತಂಡದೊಡನೆ ಸೇರಿ ಹಿಡಿದಿದ್ದರು. ಆದರೆ, ಮೈಲಾರಯ್ಯನವರ ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ ರಾಜಕೀಯದ ದೊಡ್ಡ ಶಕ್ತಿಯ ಎದುರಿಗೆ ಸೋತ ಮೊದಲ ಸಂದರ್ಭ ಇದು. ಜಪ್ತಿ ಮಾಡಿದ್ದ ಲಾರಿಯನ್ನು ಬಿಟ್ಟು ಬಿಡಲು ಸುಬ್ಬರಾಯಪ್ಪನವರೇ ಸ್ವತಃ ಫೋನ್ ಮಾಡಿ ತಿಳಿಸಿದಾಗ, ಮೇಲಾಧಿಕಾರಿಯ ಮಾತಿಗೆ ಎದುರಾಡಲು ಸಾಧ್ಯವಾಗದೆ ಮೈಲಾರಪ್ಪ ಅದನ್ನು ಬಿಟ್ಟು ಬಿಟ್ಟ. ಆದರೆ, ಇದನ್ನು ತನ್ನ ವೃತ್ತಿ ಜೀವನದ ಸೋಲು ಎಂದೇ ತಿಳಿದುಕೊಂಡು ಅಲ್ಲಿಂದ ಬೇರೆ ಕಡೆಗೆ ವರ್ಗ ಕೇಳಿದರು.
ಅಷ್ಟರಲ್ಲಿ ಶಾಮ ಹಾಗೂ ಸುಭದ್ರೆಯರಿಗೆ ಮೊದಲ ಮಗು ಮನೋರಮಾ ಜನಿಸಿದ್ದಳು. ಆ ಸಮಯದಲ್ಲಿ ಸೋಲೂರಿಗೆ ಪುನಃ ವರ್ಗವಾಗಿತ್ತು. ಮೈಲಾರಯ್ಯನವರಿಗೆ ರಾಷ್ಟ್ರಪತಿ ಪದಕವೂ ದೊರೆಯಿತು.ಶ್ಯಾಮನ ಸಾಂಸಾರಿಕ ಬದುಕು ಹೆಂಡತಿ ಮಗಳೊಂದಿಗೆ ಬೆಂಗಳೂರಿನಲ್ಲಿ ಶುರುವಾಯಿತು. ಅದೇ ಸಂದರ್ಭದಲ್ಲಿ, ವೆಂಕಣ್ಣಯ್ಯನವರು ಹಾಗೂ ಅಂಬಮ್ಮನವರು ಕಾಲವಾದರು. ಅದೇ ವರ್ಷ ರಂಗಣ್ಣನಿಗೂ ವಿವಾಹವಾಯಿತು. ಮೈಲಾರಯ್ಯನವರಿಗೆ ಶಿವಮೊಗ್ಗಕ್ಕೆ ವರ್ಗವಾಯಿತು.
ಈಗ ಎಲ್ಲರ ಬದುಕಿನ ದಾರಿಗಳು ಬೇರೆ ಬೇರೆಯಾಗಿದ್ದವು. ಅಣ್ಣ ತಮ್ಮಂದಿರೇ ಆದರೂ ಮೈಲಾರಯ್ಯ ಹಾಗೂ ಶಾಮನಲ್ಲಿ ವಿಭಿನ್ನ ರೀತಿಯ ನಡವಳಿಕೆ. ಮೈಲಾರಯ್ಯನವರ ವಿರುದ್ಧ ಸ್ವಭಾವದ ಶ್ಯಾಮ ತನ್ನ ಹೆಂಡತಿಯನ್ನು ಹೇಗೆ ನೋಡಿಕೊಂಡ ? ವಿವಾಹದ ಮುನ್ನ ಇದ್ದ ಕಹಿ ಮನಸ್ಸು ಸರಿಯಾಯಿತೇ..? ಚೆನ್ನಿ ತನ್ನ ಗಂಡನ ವಿರುದ್ಧವೇ ನಡೆದುದ್ದೇಕೆ ? ಕೆಲಸದ ವಿಷಯದಲ್ಲಿ ಅಷ್ಟು ಪ್ರಾಮಾಣಿಕರಾಗಿದ್ದ ಮೈಲಾರಯ್ಯ ಸಾಂಸಾರಿಕ ವಿಷಯದಲ್ಲಿ ಕೊಂಚ ದಾರಿ ತಪ್ಪಿದ್ದು ಏಕೆ ? ಮೈಲಾರಯ್ಯನ ದೆಸೆಯಿಂದ ಮೂರು ವರ್ಷ ಜೈಲುವಾಸ ಮುಗಿಸಿ ಬಂದ ಭರಮೇಗೌಡ ಸುಮ್ಮನಿದ್ದನೇ..?? ಅಪ್ಪ - ಅಮ್ಮನ ಮಾರ್ಗದರ್ಶನವಿಲ್ಲದೆ ರಂಗಣ್ಣ ತನ್ನ ಬದುಕನ್ನು ಕಟ್ಟಿಕೊಂಡದ್ದು ಹೇಗೆ ? ಅಪ್ಪನ ಕಣ್ಗೊಂಬೆಯಾಗಿದ್ದ ಸುಭದ್ರ ತನ್ನದೇ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ಮುನ್ನಡೆದದ್ದು ಏಕೆ ? ಮನೋರಮಾ, ಜಗನ್ನಾಥ, ವನಮಾಲಿಯರ ಭವಿಷ್ಯ ಹೇಗಿತ್ತು ? ಈ ಎಲ್ಲವನ್ನೂ ತಿಳಿಯಲು ಈ ದಾರಿ - ಆ ದಾರಿ ಕಾದಂಬರಿಯನ್ನು ಓದಿ.
ತುಳಿದದ್ದು ಯಾವುದೇ ದಾರಿಯಾದರೂ ಎಲ್ಲರೂ ಸ್ವ-ಇಚ್ಛೆಯಿಂದಲೇ ತಮ್ಮ-ತಮ್ಮ ಬದುಕುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಲೌಕಿಕದಿಂದ ಆಧ್ಯಾತ್ಮದೆಡೆಗೆ ಸಾಗುವ ಮೈಲಾರಯ್ಯನ ಹಾದಿಯು ಭಗವದ್ಗೀತೆ, ಉಪನಿಷತ್ತುಗಳ ಉಲ್ಲೇಖದ ಉದಾಹರಣೆಗಳೊಂದಿಗೆ ದಾರಿದೀಪದಂತಿದೆ. ಇಲ್ಲಿನ ಕಾದಂಬರಿಯಲ್ಲಿ ಎಲ್ಲಿಯೂ ಆ ದಾರಿ ಸರಿ.. ಈ ದಾರಿ ತಪ್ಪು.. ಎನ್ನುವ ಪಕ್ಷಪಾತವಿಲ್ಲದಿದ್ದರೂ ನಮಗೆ ಯಾವುದು ತಪ್ಪು ಎಂಬುದರ ಅರಿವಾಗುತ್ತದೆ. ಕೌಟುಂಬಿಕ ಸಮಸ್ಯೆಗಳು ಕುಟುಂಬದ ಮಟ್ಟಿಗೆ ಬಗೆಹರಿಯದೆ ಹೋದಾಗ, ಅವು ಹೇಗೆ ಸಮಾಜದಲ್ಲಿನ ಸಮಸ್ಯೆಗಳೂ ಆಗಬಲ್ಲವು ಎನ್ನುವ ನಿದರ್ಶನವಿದೆ. ಪ್ರಾಮಾಣಿಕತೆಗೆ ಎಲ್ಲಿ ಅಡ್ಡಿ ಉಂಟಾಗುತ್ತದೆ ಹಾಗೂ ಇಂತಹಾ ಪ್ರಾಮಾಣಿಕತೆಯು ಎಲ್ಲಿ, ಹೇಗೆ ಗೆಲ್ಲುತ್ತದೆ ಎಂಬುದು ಸಹಾ ಈ ಕಾದಂಬರಿಯಲ್ಲಿದೆ. ಇಂದಿನ ಸಾಮಾಜಿಕ ಸಮಸ್ಯೆಗಳು ಕೂಡಾ ಇದಕ್ಕಿಂತ ವಿಭಿನ್ನವಾಗೇನಿಲ್ಲ.. ಆದರೆ, ಇದಕ್ಕಿಂತ ವಿರಾಟ್ ಸ್ವರೂಪದಲ್ಲಿವೆ ಎಂಬುದನ್ನು ಮಾತ್ರ ಹೇಳಬಲ್ಲೆ. ಈ ಕಾಲಕ್ಕೂ ಪ್ರಸ್ತುತವೆನಿಸುವ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ