ಮಂಗಳವಾರ, ಏಪ್ರಿಲ್ 7, 2026

ಕನಕ ಮುಸುಕು (ಪುಸ್ತಕ ಯಾನ - 88)

 


ಪುಸ್ತಕದ ಶೀರ್ಷಿಕೆ : ಕನಕ ಮುಸುಕು

ಲೇಖಕರು : ಡಾ. ಕೆ. ಎನ್. ಗಣೇಶಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಮೊದಲನೇ ಮುದ್ರಣ :2007

ಏಳನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 224

ಬೆಲೆ : 195 ರೂ.


ಡಾ. ಕೆ.ಎನ್. ಗಣೇಶಯ್ಯನವರ ಮೊದಲ ಕಾದಂಬರಿ ಕನಕ ಮುಸುಕು. ಕನಕ ಮುಸುಕು ಎಂದಾಕ್ಷಣ ಇದು ಯಾವುದೋ ನಿಧಿ ಅಥವಾ ನಿಧಿ ಶೋಧನೆಗೆ ಗೆ ಸಂಬಂಧಿಸಿದ ಪುಸ್ತಕವಿರಬಹುದಾ ಎನ್ನುವ ಸಣ್ಣ ಕುತೂಹಲ ಒಂದು ಪುಸ್ತಕ ಹಿಡಿಯುವ ಮುನ್ನವೇ ಹುಟ್ಟಿತ್ತು. ಕನಕ ಎಂದರೆ ಚಿನ್ನ ಇದನ್ನು ಮುಚ್ಚಿಟ್ಟ ಯಾವುದಾದರೂ ಮುಸುಕನ್ನು ತೆರೆಯಬಹುದಾ ಎಂದಷ್ಟೇ ತಲೆಯಲ್ಲಿತ್ತು, ಆದರೆ, ಈ ಪುಸ್ತಕ ಊಹೆಯನ್ನು ಮೀರಿ ಹೆಚ್ಚಿನ ವಿಚಾರಗಳನ್ನು ಹೇಳುತ್ತಾ ನಮ್ಮ ಬುದ್ಧಿಗೂ ಕೆಲಸ ಕೊಡುತ್ತದೆ. 


ಕೆ. ಎನ್. ಗಣೇಶಯ್ಯನವರ ಇತರ ಕಾದಂಬರಿಗಳಂತೆ ವಾಸ್ತವಿಕ ಹಾಗೂ ಚಾರಿತ್ರಿಕ ನೆಲೆಗಟ್ಟಿನ ನಡುವೆ ನೈಜವೋ ಅಥವಾ ಕಾಲ್ಪನಿಕವೋ ಎಂಬಂತೆ ಚಿತ್ರಿತವಾಗಿರುವ ಕಾದಂಬರಿ ಇದು. ನನ್ನ ಜಿಲ್ಲೆ ಅಂದರೆ ಹಾಸನದ ಶ್ರವಣಬೆಳಗೊಳ, ಸೋಮನಾಥಪುರ, ಕಂಬದಹಳ್ಳಿಯ ಕುರಿತ ಚಿತ್ರಣವನ್ನು ತೆರೆದಿಟ್ಟಿರುವುದರಿಂದ ಈ ಪುಸ್ತಕ ನನ್ನನ್ನು ಕೊಂಚ ಹೆಚ್ಚೇ ಹಿಡಿದಿಟ್ಟಿತು ಎನ್ನಲಡ್ಡಿಯಿಲ್ಲ. 


ಬ್ಯಾಂಕಾಕ್ ನಲ್ಲಿ ಬಲದೇವ್ ಹಾಗೂ ಅವರ ಪತ್ನಿ ಮಾಧವಿ ಸತ್ತು ಬಿದ್ದಿದ್ದರೂ.. ಅದು ಸಹಜ ಸಾವಾಗಿರಲಿಲ್ಲ. ಅದು ನಿಯೋಜಿತ ಕೊಲೆಯಾಗಿತ್ತು. ಅವರ ತಂದೆಗೆ ಈ ಸುದ್ದಿಯ ಜೊತೆಗೆ ಫ್ಯಾಕ್ಸ್ ನಲ್ಲಿ ಒಂದು ಎಚ್ಚರಿಕೆಯೂ ಬಂದಿತ್ತು. ಈ ಕನಕ ಮುಸುಕು ಕಾದಂಬರಿ ಶುರುವಾಗುವುದು ಹೀಗೆ. ಇದರ ಕಾರಣೀಕರ್ತರು, ಇವರು ಯಾರು, ಕೊಲೆ ಏಕಾಯಿತು, ಆ ಎಚ್ಚರಿಕೆ ಏನಾಗಿತ್ತು ಎಂದು ತಿಳಿಯುವುದು ಕಾದಂಬರಿಯ ಕೊನೆಗೆ.


ಸೋಮನಾಥಪುರ ಹಾಗು ಕೆಲವು ದೇವಾಲಯಗಳಲ್ಲಿ ಮುಸುಕಿನ ಜೋಳದಂತಹ ಕೆತ್ತನೆ ಇದೆ. ಆದರೆ, ಈ ಮುಸುಕಿನ ಜೋಳ ಮೂಲತಃ ಅಮೆರಿಕಾ ಖಂಡದ ಬೆಳೆ.  ಮೆಕ್ಸಿಕನ್ನರು ಬೆಳೆಯುತ್ತಿದ್ದ ಬೆಳೆ. ಕ್ರಿಸ್ತಶಕ 1492ರಲ್ಲಿ ಕ್ರಿಸ್ಟೋಫರ್ ಕೊಲಂಬಸ್ ಅಮೆರಿಕಾದ ಮಣ್ಣನ್ನು ಮೆಟ್ಟಿದಾಗಲೇ ಅಮೆರಿಕೇತರರಿಗೆ ಈ ಬೆಳೆಯ ಪರಿಚಯವಾದುದು. ಅಲ್ಲಿಂದ ಯುರೋಪು ಹಾಗೂ ಇತರ ಖಂಡಗಳಲ್ಲಿ ಮುಸುಕಿನ ಜೋಳ ಬೆಳೆದದ್ದು. ಇತಿಹಾಸದ ದಾಖಲೆಗಳ ಪ್ರಕಾರ ಕ್ರಿಸ್ತಶಕ 1500ರ ನಂತರ ಭಾರತಕ್ಕೆ ಈ ಬೆಳೆ ಬಂದದ್ದು. ಆದರೆ, ಸೋಮನಾಥಪುರ ದೇವಸ್ಥಾನವನ್ನು ಕಟ್ಟಿದ್ದು ಕ್ರಿಸ್ತಶಕ 1268ರಲ್ಲಿ. ಹಾಗಾದರೆ, ಈ ಬೆಳೆ ಮೊದಲೇ ಇತ್ತೇ..?? ಅಥವಾ ಇದು ಮುಸುಕಿನ ಜೋಳಕ್ಕೂ ಹೊರತಾದ ಬೇರೆಯೇ ಬೆಳೆಯೇ..?? ಅಥವಾ ಮತ್ತೆ ಇದರಲ್ಲಿ ಏನಾದರೂ ರಹಸ್ಯ ಅಡಗಿದೆಯೇ..?? ಕಾಲ್ಪನಿಕ ಕೆತ್ತನೆಯೇ..??


ಪೂಜಾ ಹಾಗೂ ಡಾಕ್ಟರ್ ರಾವ್ ಇಬ್ಬರೂ ಈ ಕುರಿತು ಸಂಶೋಧನೆ ನಡೆಸುತ್ತಿದ್ದರು. ಪೂಜಾ ಡಾ. ರಾವ್ ಅವರ ವಿದ್ಯಾರ್ಥಿನಿ. ಜೊತೆಗೆ ಡಾಕ್ಟರ್ ರಾವ್ ಅವರು ಜೈನ ಭೂಸಿರಿವಲಯಗಳ ಕುರಿತಾಗಿಯೂ ಸಂಶೋಧನೆ ನಡೆಸುತ್ತಿದ್ದರು. ಪೂಜಾ ಕೂಡಾ ಈ ಕುರಿತಾಗಿಯೇ ಸಂಶೋಧನೆ ನಡೆಸುತ್ತಿದ್ದರೂ ಡಾಕ್ಟರ್ ರಾವ್ ಅವರಿಗೆ ಈ ಕುರಿತಾದ ಸಂಪೂರ್ಣ ಮಾಹಿತಿ ಇರಲಿಲ್ಲ. ಆಕೆ ತನ್ನ ಸಂಶೋಧನೆಗಾಗಿ ಎಡಿನ್ ಬರೋ ರಾಯಲ್ ಮ್ಯೂಸಿಯಂ ನ ಭವ್ಯವಾದ ಕಟ್ಟಡದಲ್ಲಿ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯ ಹಾಗೂ ಅಲ್ಲಿನ ಗ್ರಂಥಾಲಯಗಳಲ್ಲಿ ಏನನ್ನೋ ಹುಡುಕುತ್ತಿದ್ದಳು. ಅವಳು ಕೂಡಾ ಈ ಕುರಿತಾಗಿಯೇ ಸಂಶೋಧನೆ ನಡೆಸುತ್ತಿದ್ದಾಳೆಂದು ಅವರಿಗೆ ತಿಳಿದದ್ದು ತಾವು ಅಧ್ಯಯನಕ್ಕಾಗಿ ತೆಗೆದುಕೊಂಡ ಪುಸ್ತಕದಿಂದ. 


ಪೂಜಾಳಿಗೆ ಗೊತ್ತಿಲ್ಲದೆಯೇ ಅವಳನ್ನು ಯಾರೋ ಟ್ರ್ಯಾಕ್ ಮಾಡುತ್ತಿದ್ದರು. ಅದು ಎರಡು ತಂಡಗಳು. ಒಂದು ತಂಡ ಪ್ರಸಿದ್ಧ ಉದ್ಯಮಿಯಾದ ಬ್ರಹ್ಮ ಪ್ರಕಾಶ್ ಅಂದರೆ ಬಿ.ಪಿ ಅವರದ್ದು. ಮತ್ತೊಂದು ಕಳ್ಳರ ಗುಂಪು. ಹಾಗಾದರೆ, ಪೂಜಾಳ ರಹಸ್ಯವಾದ ಆ ಕಾರ್ಯಾಚರಣೆ ಏನು..?? ಬ್ರಹ್ಮಪ್ರಕಾಶ್ ರವರು ಅವಳಿಗೆ ಸಹಾಯ ಮಾಡುತ್ತಿದ್ದರೇ..?? ಅಥವಾ ಅವಳನ್ನು ತಡೆಯುತ್ತಿದ್ದರೇ..?? ಅವರಿಗೂ ಇದಕ್ಕೂ ಯಾವ ರೀತಿಯ ಸಂಬಂಧ..??


ಪೂಜಾ ಅತ್ತ ಎಡಿನ್ ಬರೋದಲ್ಲಿ.. ತನ್ನ ಸಂಶೋಧನೆಗಾಗಿ ವಿಷಯ ಸಂಗ್ರಹಣೆ ಮಾಡುತ್ತಿದ್ದರೆ, ಇತ್ತ ರಾವ್ ಅವರು ಶ್ರವಣಬೆಳಗೊಳದಲ್ಲಿ ತಮ್ಮ ಸಂಶೋಧನೆಗಾಗಿ ವಿಷಯಗಳನ್ನು ಹುಡುಕುತ್ತಿದ್ದರು. ಒಬ್ಬರಿಗೊಬ್ಬರು ಗೊತ್ತಿಲ್ಲದೆಯೇ ಹಲವಾರು ವಿಷಯಗಳನ್ನು ಒಂದೇ ಚುಕ್ಕಿಯಲ್ಲಿ ಸೇರಿಸಿದ್ದರು. ಪೂಜಾ ತನ್ನನ್ನು ಯಾರೋ ಹಿಂಬಾಲಿಸುತ್ತಿರುವ ವಿಚಾರ ತಿಳಿದು ತನಗೆ ಅಪಾಯವಾಗಬಹುದೆಂಬ ಮುಂದಾಲೋಚನೆಯಿಂದ ತನ್ನ ಪತಿ ವಿನೋದ್ ನನ್ನು ಸಹಾ ಅಲ್ಲಿಗೆ ಕರೆಸಿಕೊಂಡು, ರಾಯಭಾರಿ ಕಛೇರಿಯವರಿಗೂ ತಿಳಿಸಿ ಭಾರತಕ್ಕೆ ಹಿಂದಿರುಗುತ್ತಾಳೆ. ಕೊನೆಗೆ, ಎಲ್ಲರೂ ಒಂದಾದದ್ದು ಬ್ರಹ್ಮ ಪ್ರಕಾಶ್ ಅವರ ದೆಸೆಯಿಂದ. ಪೂಜಾ ಹಾಗೂ ರಾವ್ ಒಬ್ಬರಿಗೊಬ್ಬರು ಸಹಕಾರ ನೀಡಿದರೇ..??


ಇಲ್ಲಿ ಸೋಮನಾಥಪುರ ಶ್ರವಣಬೆಳಗೊಳ ಹಾಗೂ ಕಂಬದಹಳ್ಳಿಯ ವಿಚಾರಗಳು ಬಹಳ ಪ್ರಮುಖ ಜಾಗಗಳಾಗಿ ಕಂಡುಬರುತ್ತವೆ. ಅಲ್ಲದೇ, ನನಗೆ ಈ ಕಾದಂಬರಿಯಲ್ಲಿ ಒಂದು ಬೇರೆಯದ್ದೆ ಹೊಳವುಗಳು  ಸಿಕ್ಕಿದವು.  


ಶಾಂತಲೆ ಹಾಗೂ ವಿಷ್ಣುವರ್ಧನರ ಕುರಿತಾಗಿ ಕೆ.ವಿ. ಅಯ್ಯರ್ ಅವರ ಶಾಂತಲಾ ಕೃತಿ ಓದಿ, ಅದೇ ಶಾಂತಲಾ- ವಿಷ್ಣುವರ್ಧನ -ಲಕ್ಷ್ಮಿಯರೇ ನನ್ನ ತಲೆಯೊಳಗೆ ತುಂಬಿಕೊಂಡಿರುವುದಂತೂ ಹೌದು. ಆದರೆ, ಇಲ್ಲಿನ ಕಥೆ ಬೇರೆಯದ್ದೇ ಕಥೆ ಹೇಳುತ್ತದೆ. ಶಾಂತಲೆ ಹಾಗೂ ವಿಷ್ಣುವರ್ಧನರ ಕುರಿತ ಧಾರ್ಮಿಕ ವಿಭಿನ್ನತೆಯ ಕುರಿತಾಗಿ ಹೇಳುತ್ತಾರೆ. ಜೊತೆಗೆ, ಶಾಂತಲೆ ಶಿವಗಂಗೆ ಬೆಟ್ಟಕ್ಕೆ ಹೋದದ್ದೇಕೆ..?? ಅವಳ ಸಾವಿನ ಕುರಿತ ನಿಗೂಢತೆ ಹಾಗೂ ಹಲವಾರು ದೃಷ್ಟಿಕೋನಗಳು ಕಾಣುತ್ತವೆ. ಕೆ.ವಿ. ಅಯ್ಯರ್ ಅವರ ಶಾಂತಲೆಗೂ.. ಇಲ್ಲಿನ ಶಾಂತಲೆಗೂ ಬಹಳಷ್ಟು ವ್ಯತ್ಯಾಸ ಕಾಣಿಸಿತು.


ಚಂದ್ರಗುಪ್ತ ಮೌರ್ಯ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದದ್ದು, ಅವನ ಜೊತೆಗೆ 12000 ಮುನಿಗಳೂ ಬಂದದ್ದು.. ಚಂದ್ರಗುಪ್ತ ಮೌರ್ಯ ಶ್ರವಣ ಬೆಳೆಗೊಳದ ಚಂದ್ರಗಿರಿ ಬೆಟ್ಟದಲ್ಲಿ ಸಲ್ಲೇಖನ ವ್ರತ ಕೈಗೊಂಡದ್ದು.. ಇದೆಲ್ಲದಕ್ಕೂ ಇಲ್ಲಿ ಮತ್ತೊಂದು ಆಯಾಮವಿದೆ. 


ಇಲ್ಲಿನ ಕಥೆಯ ಶೀರ್ಷಿಕೆ, ಕನಕ ಮುಸುಕು ಈ ಮುಸುಕಿಗೂ.. ಮುಸುಕಿನ ಜೋಳಕ್ಕೂ ಏನಾದರೂ ಸಂಬಂಧವಿದೆಯೇ..?? ಅಥವಾ ನಿಜಕ್ಕೂ ಇದು ನಿಧಿಶೋಧನೆಯ ಕಾದಂಬರಿಯೇ..?? 


ಲೇಖಕರೇ ಉಲ್ಲೇಖಿಸಿರುವಂತೆ.. ಇಲ್ಲಿ ಡಾನ್ ಬ್ರೌನ್ ನ 'ಡಾವಿಂಚಿ ಕೋಡ್' ನಂತೆಯೇ ಸಾಮ್ಯತೆಗಳು ಕಂಡುಬರುತ್ತವೆ. ಇತಿಹಾಸ,ಕಲ್ಪನೆ, ವಾಸ್ತವ ಇದೆಲ್ಲದರ ಎಳೆ ಹಿಡಿದು.. ರೋಚಕವಾಗಿ, ನಿಗೂಢತೆಯಿಂದ  ಓದಿಸಿಕೊಂಡು ಹೋಗುವ ಒಂದು ಒಂದೊಳ್ಳ ಕಾದಂಬರಿಯ ಓದು ಕನಕ ಮುಸುಕು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ