ಪುಸ್ತಕದ ಶೀರ್ಷಿಕೆ : ಬೊಗಸೆ ಬೆಳದಿಂಗಳು
ಲೇಖಕರು : ವೈ.ಕೆ. ಸಂಧ್ಯಾ ಶರ್ಮ
ಪ್ರಕಾಶಕರು : ಭಾರತಿ ಪ್ರಕಾಶನ
ಮೊದಲನೇ ಮುದ್ರಣ : 1999
ದ್ವಿತೀಯ ಮುದ್ರಣ : 2022
ಪುಟಗಳು : 220
ಬೆಲೆ : 200 ರೂ
ಬೊಗಸೆ ಬೆಳದಿಂಗಳು ಕಾದಂಬರಿಯಲ್ಲಿ ಬರುವ ಪಾತ್ರಗಳು ಹೆಣ್ಣು ಹೇಗಿರಬೇಕು ಹಾಗೂ ಹೇಗಿರಬಾರದು ಎನ್ನುವುದನ್ನು ತಿಳಿಸುತ್ತವೆ. ಕಲೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟವರೂ ಇರುತ್ತಾರೆ ಹಾಗೂ ಕಲೆಯಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಂಡವರೂ ಇರುತ್ತಾರೆ. ಬೊಗಸೆ ಬೆಳದಿಂಗಳು ಕಾದಂಬರಿಯಲ್ಲಿ.. ಕಲೆಗಾಗಿ ಏನನ್ನು ಮಾಡಲೂ ಸಿದ್ಧಳಾಗಿರುವ ಹೆಣ್ಣು, ಬಯಸಿದ ಬದುಕು ಆಕೆಗೆ ಸಿಗುತ್ತದೆಯೇ ಎಂಬುದರ ವಿಚಾರವನ್ನು ಕುತೂಹಲಕಾರಿಯಾಗಿ ಹೆಣೆದಿದ್ದಾರೆ.
ಕಾಂಚನ ತುಂಬಿದ ಕುಟುಂಬದಿಂದ ಬಂದವಳು. ಆರು ಜನ ಅಕ್ಕತಂಗಿಯರು ಹಾಗೂ ಮೂರು ಜನ ಅಣ್ಣತಮ್ಮಂದಿರ ಕೂಡು ಕುಟುಂಬದಲ್ಲಿ ಆಸೆ-ಆಕಾಂಕ್ಷೆಗಳನ್ನು ಕಟ್ಟಿಟ್ಟು ಬೆಳೆದವಳು. ತಂದೆ ಸೀತಾರಾಮರಾಯರು ಪ್ರೈಮರಿ ಸ್ಕೂಲ್ ಮಾಸ್ತರರಾಗಿದ್ದರು. ಎಲ್ಲಾ ಹೆಣ್ಣು ಮಕ್ಕಳಿಗೂ ರೂಪ ಚೆನ್ನಾಗಿದ್ದುದರಿಂದ ಅವರೆಲ್ಲರ ಮದುವೆ ಸಾಂಗವಾಗಿ ಆಗಿತ್ತು. ಹಾಗೆಯೇ, ವಿದ್ಯಾವಂತ ಹಾಗೂ ಉತ್ತಮ ಸಂಸ್ಕಾರವಿರುವ ಅಳಿಯಂದಿರೇ ಸಿಕ್ಕಿದರು. ಅವರು ಯಾರಿಗೂ ಓದುವ ಆಸಕ್ತಿ ಅಷ್ಟಾಗಿ ಇಲ್ಲವಾದ್ದರಿಂದ ದಾಂಪತ್ಯ ಜೀವನದಲ್ಲಿ ಸುಖವಾಗಿದ್ದರು. ಆದರೆ, ಕಾಂಚನಳ ಆಸೆಯೇ ಬೇರೆ. ಆಕೆಗೆ ಓದಬೇಕೆನ್ನುವ ಆಸೆ ಇತ್ತು. ಅಲ್ಲದೇ.. ಚಿತ್ರಕಲಾ ಹವ್ಯಾಸವೂ ಇದ್ದಿತು. ಆದರೆ, ತಂದೆಯ ಮಾತಿಗೆ ಬೆಲೆಕೊಟ್ಟು ಆಕೆ ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಗಿರೀಶನನ್ನು ವಿವಾಹವಾದಳು.
ಗಿರೀಶನನ್ನು ಮದುವೆಯಾದಾಗ ಆತನ ಮನೆಯಲ್ಲಿದ್ದು ಆತನ ತಾಯಿ ಬಿಟ್ಟರೆ ಅವಿವಾಹಿತ ತಮ್ಮ-ತಂಗಿ. ಅವನ ಇಬ್ಬರು ಅಕ್ಕಂದಿರಿಗೆ ಈಗಾಗಲೇ ಮದುವೆಯಾಗಿತ್ತು. ಕಾಂಚನಳ ಅತ್ತೆ ಸಾಧು ಸ್ವಭಾವದವರು. ಆಕೆ ಯಾವುದೇ ಕೆಲಸವಿದ್ದರೂ ಕಾಂಚನಳಿಗೆ ತೊಂದರೆ ಕೊಡದಂತೆ ತನ್ನ ಮಗಳು ಸುಮಾಳನ್ನೇ ಹೆಚ್ಚು ಕರೆಯುತ್ತಿದ್ದಳು. ಕಾಂಚನ ಅತ್ತೆಯ ಮನೆಯಲ್ಲಿ ಹೆಚ್ಚು ಕೆಲಸವನ್ನು ಮೈಗಚ್ಚಿಕೊಳ್ಳದೇ ತನಗೆ ಇಷ್ಟವಾಗಿದ್ದ ಹವ್ಯಾಸವಾದ ಚಿತ್ರಕಲೆಯನ್ನು ಮುಂದುವರಿಸಿದಳು. ಇದಕ್ಕೆ ಮೈದುನನೂ ಸಹಾಯ ಮಾಡುತ್ತಿದ್ದ.
ಅತ್ತೆಯದ್ದಂತೂ ಯಾವುದೇ ತಕರಾರಿರಲಿಲ್ಲ. ಅಷ್ಟೇ ಅಲ್ಲ, ಆಕೆ ಅರ್ಧಕ್ಕೆ ನಿಂತಿದ್ದ ಓದು ಮುಂದುವರೆಯಿತು. ಬಿ.ಎ ಮುಗಿಸಿ ಎಂ.ಎ ಮುಗಿಸುವಷ್ಟರಲ್ಲಿ ಮಗ ಕಾರ್ತಿಕ ಹುಟ್ಟಿಯಾಗಿತ್ತು. ಕಾಂಚನ ಗಂಡನ ಮನೆಗೆ ಯಾವುದೇ ರೀತಿಯ ಸಹಾಯವನ್ನೂ ಮಾಡದೆ.. ಆಕೆಯ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಿದ್ದಳು. ಈಗ ಗಿರೀಶನ ತಾಯಿಗೂ ಈ ಪರಿಸ್ಥಿತಿ ತನ್ನ ಹೆಣ್ಣು ಮಕ್ಕಳಿಂದ ಅರ್ಥವಾಗಿತ್ತು. ಹಾಗೆಯೇ, ಮುಂದುವರಿದರೆ ತನ್ನ ಮಗಳಿಗೆ ಮದುವೆಯಾಗುವುದು ಕಷ್ಟವಾಗಬಹುದೆಂಬ ಸಂಗತಿಯೂ ಗೊತ್ತಿತ್ತು.
ಅವಿವಾಹಿತ ತಮ್ಮ ತಂಗಿ ಹಾಗೂ ಮಾತನಾಡದೆ ಉಳಿಯುವ ತಾಯಿ ಹಾಗೂ ಆಗಾಗ ಬಂದು ತಿಂಗಳಾನುಗಟ್ಟಲೆ ಇಲ್ಲಿಯೇ ಉಳಿಯುತ್ತಿದ್ದ ಅಕ್ಕಂದಿರ ಸಂಸಾರದಿಂದ ಕಿರಿಕಿರಿ ಅನುಭವಿಸುತ್ತಿದ್ದ ಗಿರೀಶ ಅದೇ ಸಮಯಕ್ಕೆ ಬೆಂಗಳೂರಿಗೆ ವರ್ಗಾವಣೆ ಆಗುವಾಗ ವಿರೋಧಿಸದೆ ಒಪ್ಪಿಕೊಂಡ. ಹೆಂಡತಿ ಮಗನೊಟ್ಟಿಗೆ ಹೊರಟು ನಿಂತ. ತನ್ನ ಅಮ್ಮನ, ತಮ್ಮ-ತಂಗಿಯರ ಭವಿಷ್ಯವನ್ನು ಲೆಕ್ಕಿಸದೇ ಹೊರಟನಾದರೂ.. ತನ್ನ ಮನೆಯವರಿಗೆ ಹಣವನ್ನು ಕಳುಹಿಸುತ್ತಿದ್ದ. ನಂತರ, ಇದಕ್ಕೂ ಕಷ್ಟವಾಯಿತು. ಹೆಂಡತಿಯ ಅತಿ ಆಸೆ-ಆಕಾಂಕ್ಷೆಗಳು ಆತನನ್ನು ದಿನೇ ದಿನೇ ಹಣ್ಣಾಗಿಸಿದವು. ಸೀರೆ, ಒಡವೆ, ಮನೆಗೆ ಅಲಂಕಾರಿಕ ವಸ್ತುಗಳು ಹೀಗೆ ಮುಗಿಯದಷ್ಟೂ ಪಟ್ಟಿ ಬೆಳೆಯುತ್ತಲೇ ಹೋಯಿತು.
ಕಾಂಚನ ತನಗೀಗ ಮನೆಯಲ್ಲಿ ಬೇಸರವಾಗುತ್ತದೆ ಎಂದು ಲೇಡೀಸ್ ಕ್ಲಬ್ ಗೆ ಸೇರಿದಳು. ಅಲ್ಲಿ ಆಕೆಯ ಆಪ್ತ ಗೆಳತಿಯರಾಗಿ ಪರಿಚಯವಾಗಿದ್ದು.. ವಸುಂಧರಾ. ಆಕೆ ವಿಧವೆ ಹಾಗೂ ಎರಡು ಹೆಣ್ಣು ಮಕ್ಕಳ ತಾಯಿ. ಮತ್ತೊಬ್ಬಳು ಸಹನ, ವಯಸ್ಸು ಹೆಚ್ಚಾಗಿದ್ದರೂ ಇನ್ನೂ ಅವಿವಾಹಿತೆ. ವಸುಂಧರಾ ಶ್ರೀಮಂತೆ. ಸಹನಾ ದುಡಿಯುತ್ತಿದ್ದ ಹೆಣ್ಣು. ಇವರಿಬ್ಬರ ಪ್ರಭಾವವೂ ಕಾಂಚನ ಮೇಲಾಯಿತು.
ಮನೆಯಲ್ಲಿ ಗಂಡ ಮಗನ ಮೇಲಿನ ಕಾಳಜಿಗಿಂತ.. ಸ್ನೇಹಿತೆಯ ಒಡನಾಟವೇ ಹೆಚ್ಚಾಗಿತ್ತು. ಅಷ್ಟೇ ಅಲ್ಲದೆ, ಆಕೆ ಕೆಲಸಕ್ಕೆ ಸೇರುವ ನಿರ್ಧಾರ ತೆಗೆದುಕೊಂಡು.. ವಸುಂಧರಾಳ ಸಹಾಯದಿಂದ ಆಕೆಯ ಪತಿಯ ಸ್ನೇಹಿತರಾಗಿದ್ದ ನರೇಂದ್ರನಾಥ್ ಅವರ ಬಳಿ ಕೆಲಸಕ್ಕೂ ಸೇರಿದಳು. ಜಾಹೀರಾತಿಗೆ ಸಂಬಂಧಿಸಿದ ಕೆಲಸವಾದರಿಂದ ಆಕೆಗೆ ಇಷ್ಟವಾಗಿದ್ದ, ಚಿತ್ರಕಲೆಗೆ ಸಂಬಂಧಿಸಿದ ಕೆಲಸ ದೊರೆಯಿತು. ಆದರೆ, ಆಕೆ ತನಗೆ ವಿವಾಹವಾಗಿದೆ ಎಂಬ ಸುಳಿವನ್ನೇ ಬಿಟ್ಟುಕೊಡದಿದ್ದಾಗ ನರೇಂದ್ರನ ಮನಸ್ಸು ಕಾಂಚನಳಿಗಾಗಿ ಹಾತೊರೆಯಿತು. ಈ ಸಂಬಂಧ ಬಹಳವೇ ಮುಂದುವರೆದಿತ್ತು. ಪತಿಗೆ ಮೋಸ ಮಾಡುತ್ತಿದ್ದರೂ.. ಆಕೆಗೆ ಇದರ ಕುರಿತಾಗಿ ಮೊದಮೊದಲು ಭಯವಿದ್ದರೂ ನಂತರ ಯಾವುದಕ್ಕೂ ಭಯಪಡದೆ ಇದ್ದಳು. ಪಶ್ಚಾತ್ತಾಪದ ಸೆಲೆಯೂ ಇರಲಿಲ್ಲ.
ಗಿರೀಶನಿಗೆ ಕಾಂಚನ ಕೆಲಸಕ್ಕೆ ಸೇರುವುದು ಕೊಂಚವೂ ಇಷ್ಟವಿರಲಿಲ್ಲ. ಅಲ್ಲದೆ, ಮಗ ಕಾರ್ತಿಕನ ಕುರಿತು ಕಾಳಜಿ ತೋರುವವರು ಕೂಡ ಯಾರೂ ಇರಲಿಲ್ಲ. ಈ ವಿಚಾರಕ್ಕೆ ಜಗಳವಾದಾಗ ಆಕೆ ಮನೆ ಕೆಲಸಕ್ಕೆ ಒಬ್ಬರನ್ನು ನೇಮಿಸಿದಳು. ನಂತರ ಕಾಂಚನಾಳಿಗೆ ಚಿತ್ರಕಲೆಯ ಬಗ್ಗೆ ಇದ್ದ ಹುಚ್ಚು ಹೆಚ್ಚಾಯಿತು. ಹಾಗೆಯೇ.. ಹಣ ಹಾಗೂ ಪ್ರಸಿದ್ಧಿಯ ಆಸೆಯೂ ಬಲಿಯಿತು.
ಚಿತ್ರಕಲೆಯಲ್ಲಿ ಏಕ ವ್ಯಕ್ತಿ ಪ್ರದರ್ಶನದ ಆಸೆ ಇದ್ದದ್ದು ಸ್ನೇಹಿತೆಯರ ಮಾತು ಕೇಳಿ ಹೆಚ್ಚಾಯಿತು. ಆಗ ನರೇಂದ್ರನ ಸಹಾಯದಿಂದ ಪರಿಚಯವಾದವರೇ ಚಿತ್ರಕಲಾ ಅಕಾಡೆಮಿಯ ಅಧ್ಯಕ್ಷರಾದ ಸದಾಶಿವ. ಈಕೆಯ ಚಿತ್ರಕಲೆಗಾಗಿ ಆತ ಸಹಾಯ ಮಾಡಿದರೂ.. ಈಕೆಯನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಂಡರು. ನರೇಂದ್ರನಿಂದ ಪಡೆದ ಹಣವೆಲ್ಲಾ ಈಗ ಸದಾಶಿವನ ಪಾಲಾಗುತ್ತಿತ್ತು.
ಗಂಡನಿಂದ ಈ ಕುರಿತು ಅನುಮಾನ ವ್ಯಕ್ತವಾದಾಗಲೂ ತಲೆಕೆಡಿಸಿಕೊಳ್ಳದಿದ್ದವಳು.. ತನಗೆ ಮೋಸವಾಗುತ್ತಿದೆ ಎಂದು ಅರಿವಾದಾಗ ಹಾಗೂ ಅವಮಾನವಾದಾಗ ಅವರಿಬ್ಬರ ಸಂಘವನ್ನು ತೊರೆದಳ. ಕೆಲಸವನ್ನು ಬಿಟ್ಟು ಇನ್ನು ಮನೆಯಲ್ಲಿಯೇ ಇರಬೇಕೆಂದು ತೀರ್ಮಾನಿಸಿದಳು. ಆದರೆ, ಅವಳ ಹಿಂದಿನ ದಿನಗಳು ಹಾಗೂ ಆಸೆಪೂರಿತ ಮನಸ್ಸು ಅದಕ್ಕೆ ಒಡಂಬಡಲಿಲ್ಲ. ನಂತರ, ಸಹನಾಳ ಮೂಲಕ ಪರಿಚಯವಾಗಿದ್ದು ಸುರೇಂದ್ರನಾಥ್ ಆತ ಶ್ರೀಮಂತ ಉದ್ಯಮಿ. ಈಕೆಯ ಕಲೆಯ ಕುರಿತು ಉತ್ಸಾಹ ತೋರಿಸಿದ.
ಕಾಂಚನಾಳ ಮುಂದಿನ ಬದುಕು ಏನಾಗುತ್ತದೆ..?? ಆಕೆಯ ಕಲಾ ಪ್ರೀತಿ ಇನ್ನು ಹೆಚ್ಚುತ್ತದೆಯೇ ಅಥವಾ ಸುರೇಂದ್ರನಿಂದಲೂ ಅವಳಿಗೆ ಕಹಿ ಅನುಭವವಾಗುತ್ತದೆಯೇ..?? ಗಿರೀಶನ ಅನುಮಾನಗಳೇನು..?? ಆತನಿಗೆ ನಿಜ ವಿಚಾರ ತಿಳಿಯುತ್ತದೆಯೇ..?? ಮಗ ಕಾರ್ತಿಕನ ಭವಿಷ್ಯದ ಪಾಡೇನು ..??
ಕಾಂಚನ ಕಂಡೂ ಕಂಡೂ.. ಹಗಲು ಕಂಡ ಬಾವಿಗೆ ರಾತ್ರಿ ಬಿದ್ದದ್ದು ಏಕೆ..?? ಸಂಸಾರದ ಸುಖ, ಹಣ ಹಾಗೂ ಕೀರ್ತಿ ಇವೆರಡರಲ್ಲಿ ಮನುಷ್ಯನಿಗೆ ಯಾವುದು ಹೆಚ್ಚು..?? ಅದರಲ್ಲೂ ಹೆಣ್ಣಾಗಿದ್ದಾಗ ಯಾವ ರೀತಿ ನಡೆದುಕೊಳ್ಳಬೇಕು..??
ಹೆಣ್ಣಿಗೆ ಆಯ್ಕೆಗಳು ಕಡಿಮೆ ಎನ್ನುತ್ತಾರೆ ಆದರೆ ಇಲ್ಲಿನ ಕಾಂಚನಾಳ ಬದುಕು ಹಾಗಿರಲಿಲ್ಲ. ಸ್ವಾತಂತ್ರ್ಯವನ್ನು ಸ್ವೇಚ್ಛೆ ಎಂದು ತಪ್ಪಾಗಿ ಅರ್ಥೈಸಿಕೊಂಡವಳು ಅವಳು.
ಈ ಕಾದಂಬರಿಯಲ್ಲಿ ಕಲೆ ಎಂಬ ಹೆಸರಿನಲ್ಲಿ ಆಗುವ ಮೋಸದ ಮುಖವಾಡ ತೆರೆದಿಟ್ಟಿದ್ದರೆ.. ಮದುವೆಯಾಗದ ಹೆಣ್ಣು, ಮದುವೆಯಾದ ನಂತರ ಹಾಗೂ ವಿಧವೆಯಾದ ಹೆಣ್ಣು ಈ ಮೂವರ ಚಿತ್ರಣವು ಇಲ್ಲಿದ್ದರೂ.. ಹೆಚ್ಚಾಗಿ ಪಾತ್ರ ಕೇಂದ್ರೀಕೃತವಾಗಿರುವುದು ಮದುವೆಯಾಗಿ ಗಂಡನಿರುವ ಹೆಣ್ಣು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಹಾಗೂ ಅವಳ ಆಯ್ಕೆ ಏನಾಗಿರಬೇಕು ಎಂಬುದಾಗಿ..
ಹೆಚ್ಚಿನ ಕಾದಂಬರಿಗಳೆಲ್ಲವೂ ಗಂಡಿನ ಮನಸ್ಸು ಜಾರುವ ರೀತಿಯನ್ನು ತೆರೆದಿಟ್ಟಿದ್ದರೆ.. ಈ ಕಾದಂಬರಿಯ ಕಥಾವಸ್ತು ವಿಭಿನ್ನವಾಗಿದೆ. ಸಡಾ ತಪ್ಪು ಮಾಡುವವನು ಗಂಡೇ ಎನ್ನುವ ಮನೋಭಾವ ಹೊಂದಿರುವವರು ಅವಶ್ಯವಾಗಿ ಓದಲೇಬೇಕಾದ ಕಾದಂಬರಿ ಎನಿಸಿತು. ಮಕ್ಕಳ ಮನಸ್ಸಿನ ಮೇಲೆ ಆಗುವ ಪರಿಣಾಮ ಇಲ್ಲಿನ ಮತ್ತೊಂದು ಹೆಣ್ಣಿನ ಪಾತ್ರ ಮಾಲಾ ಪ್ರದೀಪ್ ಮಗನ ಮೇಲೆ ಆಗುವ ಪರಿಣಾಮದ ಮೂಲಕ ತೆರೆದಿಟ್ಟಿದ್ದಾರೆ ಲೇಖಕಿ. ಈ ಕಾದಂಬರಿಯಲ್ಲಿ ನನಗೆ ಎಲ್ಲಿಯೂ ಉತ್ಪ್ರೇಕ್ಷೆ ಕಾಣಲಿಲ್ಲ. ಕಂಡ ಬದುಕನ್ನು ತೆರೆದಿಟ್ಟಿರುವ ಪರಿ ಗೋಚರವಾಯಿತು.ಲೇಖಕಿಯೇ ಹೇಳಿರುವಂತೆ ಇದು ಸತ್ಯವಾಗಿ ಕಂಡ ಒಬ್ಬಳು ಹೆಣ್ಣಿನ ಬದುಕಿನ ಪ್ರೇರಿತ ಕಾದಂಬರಿ.
ಯಾವುದೇ ವಿಷಯವಾದರೂ ಅತಿಯಾದರೆ ಅದು ವಿಷವೇ ಎನ್ನುವುದನ್ನು ಸೂಕ್ಷ್ಮವಾಗಿ ತೆರೆದಿಟ್ಟಿದೆ. ಅಷ್ಟೇ ಅಲ್ಲ.. ಆಕಾಶಕ್ಕೆ ಕೈ ಚಾಚುವುದು ತಪ್ಪಲ್ಲ.. ಆದರೆ, ಬೊಗಸೆ ಬೆಳದಿಂಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿಯಲೇಬೇಕು ಎಂಬ ಮೂರ್ಖತನದಿಂದ ಇಡೀ ಬದುಕನ್ನೇ ಕತ್ತಲು ಮಾಡಿಕೊಳ್ಳುವುದು ಮೂರ್ಖತನ. ಶೀರ್ಷಿಕೆಗೆ ತಕ್ಕಂತಹ ಸರಳ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ