ಪುಸ್ತಕದ ಶೀರ್ಷಿಕೆ : ಮನಸು ಮಂದಾರ
ಲೇಖಕರು : ಸಿ. ಎನ್. ಮುಕ್ತಾ
ಪ್ರಕಾಶಕರು : ರಾಜಲಕ್ಷ್ಮೀ ಪ್ರಕಾಶನ
ಮೊದಲನೇ ಮುದ್ರಣ : ಮಾರ್ಚ್ 1996
ಪುಟಗಳು : 192
ಮಕ್ಕಳು ಇನ್ನೂ ಚಿಕ್ಕವರಿದ್ದಾಗ ಆಗಿದ್ದ ಮದುವೆ ಮಾತುಕತೆ ಕೆಲವೊಮ್ಮೆ ಹಿರಿಯರ ಅತಿಯಾದ ಹಣದ ಆಸೆಯಿಂದಲೋ, ನೀಡಿಕ್ಷೆಯಿಂದಲೋ ಅಥವಾ ಕಿರಿಯರ ಬೇರೆಯ ಪ್ರೇಮದಿಂದಲೋ ಅಥವಾ ಅವರಿಗೆ ಇಷ್ಟವಿಲ್ಲದಿದ್ದರೆ ನಡೆಯುವುದಿಲ್ಲ.
ಇಲ್ಲಿ ಗೋವರ್ಧನರಾಯರು ಹಾಗೂ ಗಾಯಿತ್ರಿ ಅವರ ಏಕ ಮಾತ್ರ ಪುತ್ರ ಪ್ರಮೋದ ಹಾಗೂ ರಾಮಚಂದ್ರ ಶಾಸ್ತ್ರಿಗಳು ಹಾಗೂ ಸೀತಮ್ಮನವರ ಮಗಳು ಪದ್ಮಿನಿಯ ವಿಚಾರ ಕೂಡಾ ಹಾಗೆಯೇ ಆಗಿತ್ತು. ಪ್ರಮೋದ ದೊಡ್ಡವನಾದ ಮೇಲೆ ವಿವಾಹ ಮಾಡಿ ಆಕೆಯನ್ನು ತನ್ನ ಮನೆಯ ಸೊಸೆನ್ನಾಗಿಸಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದರು ಗಾಯತ್ರಿ. ಆದರೆ, ಈಗ ಬದಲಾದ ಮನಸ್ಸು ಶ್ರೀಮಂತಿಕೆಯ ಅತಿ ಆಸೆಯಿಂದ ಪದ್ಮಿನಿಯನ್ನು ತಮ್ಮ ಮನೆಯ ಸೊಸೆಯನ್ನಾಗಿಸಿಕೊಳ್ಳಲು ಇಷ್ಟದಿರಲಿಲ್ಲ.
ಹಾಗೆಂದು, ಗಾಯತ್ರಿಯವರು ಹುಟ್ಟಿನಿಂದ ಶ್ರೀಮಂತಿಕೆಯಲ್ಲಿ ಬೆಳೆದವರಲ್ಲ .ಗೋವರ್ಧನರಾಯರನ್ನು ಪ್ರೇಮ ವಿವಾಹವಾಗಿ ಬಂದ ನಂತರ ಗಾಯತ್ರಿ ಕನ್ಸ್ಟ್ರಕ್ಷನ್ ಎಂದು ಇದ್ದ ಕಂಪೆನಿ, ಮಗ ಹುಟ್ಟಿದ ನಂತರ ಪ್ರಮೋದ್ ಕನ್ಸ್ಟ್ರಕ್ಷನ್ ಆಗಿ ಬದಲಾಗಿ ಅಲ್ಲಿಂದ ಶ್ರೀಮಂತಿಕೆ ಪ್ರಾರಂಭವಾಗಿರುತ್ತದೆ. ಆದರೆ, ಗಾಯಿತ್ರಿಯವರ ಮನೆಯವರು ಇವರ ಪ್ರೇಮ ವಿವಾಹವನ್ನು ಒಪ್ಪದೇ ಇದ್ದಾಗ, ಇಬ್ಬರೂ ಮನೆ ಬಿಟ್ಟು ಬಂದುದ್ದರಿಂದ ಪ್ರಮೋದ ಹುಟ್ಟಿದ ಸಮಯದಲ್ಲಿ ಇವರ ಬಾಣಂತನವನ್ನು ಮಾಡಿದ್ದು ಹಾಗೂ ಹುಷಾರಿಲ್ಲದಾಗ ತೆಗೆದುಕೊಂಡ ಔಷಧಗಳ ಅಡ್ಡ ಪರಿಣಾಮದಿಂದ ದೇಹದ ಬಲಭಾಗ ಸ್ವಾಧೀನವನ್ನು ಕಳೆದುಕೊಂಡಾಗ ಇವರಿಗೆ ಆಸರೆಯಾದವರು ಮನೆಯ ಪಕ್ಕದ ಸೀತಮ್ಮನವರು.
ಹಣ ಬಂದು ಬೇರೆ ಮನೆ ಮಾಡಿದ ನಂತರವೂ.. ಅವರನ್ನು ತಮಗೆ ಆಸರೆಯಾಗಿರಲಿ ಎಂದು ಗೋವರ್ಧನರಾಯರೇ ತಮ್ಮ ಮನೆಯ ಮುಂಭಾಗದಲ್ಲಿ ಒಂದು ಮನೆ ಗೊತ್ತು ಮಾಡಿಕೊಟ್ಟು ಅದಕ್ಕೆ ರೂ. 50 ಬಾಡಿಗೆ ನೀಡುವಂತೆ ಹೇಳಿ ತಮ್ಮ ಮನೆಯ ಒಕ್ಕಲಿಗೆ ಹಾಕಿಸಿಕೊಂಡಿರುತ್ತಾರೆ. ಗೋವರ್ಧನರಾಯರ ಮರಣದ ನಂತರ, ವರಸೆ ಬದಲಾಗುತ್ತದೆ. ಗಾಯಿತ್ರಿಯವರಿಗೆ ಈ ವಿವಾಹವಾಗುವುದು ಸುತಾರಾಂ ಇಷ್ಟವಿಲ್ಲ. ಆದರೆ, ಹಾಗೆಂದು ಇನ್ನೂ ಬಾಯಿ ಬಿಟ್ಟು ಹೇಳದಿದ್ದಾಗಲೇ ಅವರ ವರ್ತನೆಯಿಂದ ಪದ್ಮಿನಿಗೆ ಈ ಕುರಿತು ಅರಿವಿರುತ್ತದೆ.
ಹಿರಿಯರು ಮದುವೆ ನಿಶ್ಚಯ ಮಾಡಿದ್ದು ಮಕ್ಕಳಿಗೆ ಗೊತ್ತಿಲ್ಲದಿದ್ದರೂ ಪ್ರಮೋದ್ ಮನಸ್ಸಿನಲ್ಲಿ ಪದ್ಮಿನಿ ಹಾಗೂ ಪದ್ಮಿನಿಯ ಮನಸ್ಸಿನಲ್ಲಿ ಪ್ರಮೋದ್ ಇಬ್ಬರು ನೆಲೆಯೂರಿರುತ್ತಾರೆ. ಪದ್ಮಿನಿಗೆ ನೇರವಾಗಿಯೇ.. ಒಮ್ಮೆ ಗಾಯಿತ್ರಿಯವರು ಅವಳನ್ನು ತನ್ನ ಮನೆ ಸೊಸೆಯನ್ನಾಗಿಸಿಕೊಳ್ಳಲು ಇಷ್ಟವಿಲ್ಲವೆಂದೂ.. ಪದೇ ಪದೇ ನೀನು ಪ್ರಮೋದನಿಗೆ ಎದುರಾಗಬೇಡ ಎಂದಾಗ ಆಕೆ, "ನಾನಾಗಿಯೇ ನಿಮ್ಮ ಮಗನನ್ನು ವಿವಾಹವಾಗಲು ಕೇಳುವುದಿಲ್ಲ. ಆದರೆ, ಆತನಾಗಿಯೇ ವಿವಾಹ ಪ್ರಸ್ತಾಪ ಮಾಡಿದರೆ ನಿಮ್ಮ ಒಪ್ಪಿಗೆ ಪಡೆದೆ ಈ ಮದುವೆ ಆಗುತ್ತೇನೆ" ಎಂದು ಹೇಳುತ್ತಾಳೆ. ಪ್ರಮೋದನನ್ನು ದೂರವಿಡಲು ಮಾಡಿದ ಪ್ರಯತ್ನವೂ ನಿಷ್ಪಲವಾಗಿ ಪ್ರೇಮ ಗಾಢವಾಗುತ್ತದೆ.
ಪ್ರಮೋದ್ ತನ್ನ ಇಂಜಿನಿಯರಿಂಗ್ ಓದು ಮುಗಿದ ನಂತರ ಆತನ ತನ್ನ ತಂದೆಯ ಕಂಪನಿಯನ್ನೇ ನೋಡಿಕೊಳ್ಳುವನೆಂದು ನಿರ್ಧಾರವಾಗುತ್ತದೆ. ಅಲ್ಲಿಯವರೆಗೂ.. ಗಾಯತ್ರಿಯವರ ತಮ್ಮನಾದ ಭಗವಾನ್ ರವರೆ ಈ ಕಂಪನಿಯ ಉಸ್ತುವಾರಿ ನೋಡಿಕೊಳ್ಳುತ್ತಿರುತ್ತಾರೆ.
ಪ್ರಮೋದ್ ಕಂಪೆನಿಗೆ ಮೇಲ್ವಿಚಾರಣೆ ಮಾಡುವ ಮುನ್ನ ಬಾಂಬೆಗೆ ಹೋಗಿ, ಅಲ್ಲಿ ತಮ್ಮ ಗೆಳೆಯರೊಬ್ಬರ ಮನೆಯಲ್ಲಿ ತಂಗಿದ್ದು.. ಅಲ್ಲಿನ ಅವರ ಕಂಪನಿಯ ವಾತಾವರಣದಲ್ಲಿ ಕೊಂಚ ದಿನ ಕಾಲಕಳೆದರೆ ಈತನಿಗೆ ತನ್ನ ಬ್ಯುಸಿನೆಸ್ ನಲ್ಲಿ ಮುಂದೆ ಸಹಾಯವಾಗುತ್ತದೆ ಎಂದು ಗಾಯಿತ್ರಿಯವರು ಉಪಾಯದಿಂದ ತಮ್ಮ ಮಗನನ್ನು ಪದ್ಮಿನಿಯಿಂದ ದೂರವಿಡಲು.. ಹಾಗೂ, ಅಲ್ಲಿಯೇ ಇದ್ದ ಹುಡುಗಿ ಒಬ್ಬಳನ್ನು ವಿವಾಹ ಮಾಡಲು ಚಿತಾವಣೆ ನಡೆಸುತ್ತಾರೆ.
ಆದರೆ, ಅಲ್ಲಿ ಪರಿಚಯವಾದ ಸ್ನೇಹಿತ ಸರ್ವೋತ್ತಮ್ ತನಗೆಂದು ತನ್ನ ತಾಯಿ ತೋರಿಸಲಿದ್ದ ಹುಡುಗಿ ಅದಿತಿಯನ್ನು ಈಗಾಗಲೇ ಪ್ರೀತಿಸುತ್ತಾನೆ. ಇದು ಪ್ರಮೋದನಿಗೆ ತಿಳಿದು ಸಂತೋಷವೂ ಆಗುತ್ತದೆ. ಅವರಿಬ್ಬರ ಮನೆಯಲ್ಲಿ ಒಪ್ಪದಿದ್ದಾಗ ಮುಂದೆ ಪ್ರಮೋದ್ ಸಹಾಯದಿಂದಲೇ ಮದುವೆಯಾಗುವ ಪ್ರಸಂಗವೂ ಬರುತ್ತದೆ. ಪ್ರಮೋದ್ ಬಾಂಬೆಯಲ್ಲಿದ್ದಾಗ ಗಾಯತ್ರಿ ಅವರು ಬೇರೆಯ ಉಪಾಯವನ್ನೇ ಮಾಡಿರುತ್ತಾರೆ.
ಪದ್ಮಿನಿಯಂತಹಾ ಸ್ವಾಭಿಮಾನವುಳ್ಳ ಹುಡುಗಿ ಹಾಗೂ ಈಗಾಗಲೇ ಹೊಕ್ಕು ಬಳಕೆ ಇದ್ದ ಸೀತಮ್ಮನವರ ಕುಟುಂಬದವರು ತಮ್ಮ ಬೀಗರಾದರೆ ತಮಗೆ ಅಲ್ಲಿ ಯಾವ ರೀತಿಯ ಮರ್ಯಾದೆಯೂ ಸಿಗುವುದಿಲ್ಲವೆಂಬ ಕೆಟ್ಟ ಯೋಚನೆ ಅದು ಹೇಗೋ ಗಾಯತ್ರಿ ಅವರ ಮನಸ್ಸನ್ನು ಹೊಕ್ಕಿರುತ್ತದೆ.
ಈ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಂಡು ಪದ್ಮಿನಿಯ ಇಡೀ ಕುಟುಂಬವನ್ನೇ ಅಲ್ಲಿಂದ ಹೋಗುವಂತೆ ಕುಟಿಲೋಪಾಯ ಮಾಡುತ್ತಾರೆ. ಅಲ್ಲದೆ, ಪದ್ಮಿನಿಯ ಚಾರಿತ್ರ್ಯದ ಕುರಿತು ಪ್ರಮೋದನಿಗೆ ಬೇರೆ ರೀತಿಯಲ್ಲಿ ಹೇಳಿ ವಿಷಬೀಜ ಬಿತ್ತುತ್ತಾರಾದರೂ.. ಆತ ಅದನ್ನು ಸುಲಭವಾಗಿ ನಂಬಲು ಸಿದ್ದನಿರುವುದಿಲ್ಲ .
ಆದರೆ ಆತನದ್ದು ನಿಜವಾದ ಪ್ರೀತಿ ಎಂದು ಅರಿತ ಆತನ ಸೋದರ ಮಾವನೇ ಇರುವ ನಿಜ ವಿಚಾರವನ್ನು ಹೇಳಿ, ಅವನ ತಾಯಿಯ ಕುಟಿಲೋಪಾಯವನ್ನು ಅವನಿಗೆ ಅರಿವಾಗಿಸುತ್ತಾನೆ. ಪ್ರಮೋದ್ ಇದನ್ನು ನಂಬುತ್ತಾನೆ ಸಹಾ. ಏಕೆಂದರೆ ,ಈಗಾಗಲೇ ತನ್ನ ತಾಯಿ ಸರ್ವೋತ್ತಮ್ ಹಾಗೂ ಅದಿತಿಯ ವಿಚಾರದಲ್ಲಿ ನಡೆದುಕೊಂಡಿದ್ದ ರೀತಿ ಆತನಿಗೆ ಆಕೆಯ ಬುದ್ಧಿಯನ್ನು ಅರಿವಾಗಿರುತ್ತದೆ.
ಅಲ್ಲಿಂದ ಒಕ್ಕಲೆಬ್ಬಿಸಿ ಟಿ.ನರಸೀಪುರಕ್ಕೆ ಕಳುಹಿಸಿದ್ದ ಅವರನ್ನು ಪ್ರಮೋದ್ ಪತ್ತೆ ಮಾಡಿ ತನ್ನ ಮದುವೆಯ ವಿಚಾರ ಪ್ರಸ್ತಾಪಿಸುತ್ತಾನೆ.
ಸರಳ ವ್ಯಕ್ತಿತ್ವದಿಂದ ಶ್ರೀಮಂತಿಕೆಯ ಗರ್ವವಿಲ್ಲದ ಪ್ರಮೋದ್ ಸೀತಮ್ಮ ಹಾಗೂ ರಾಮಚಂದ್ರ ಶಾಸ್ತ್ರಿಗಳ ಮನಸ್ಸು ಗೆದ್ದಿರುತ್ತಾನೆ. ಹೀಗಾಗಿ ಅವರ ಕಡೆಯಿಂದ ಮದುವೆಗೆ ಯಾವುದೇ ರೀತಿಯ ಅಡ್ಡಿ ಬರುವುದಿಲ್ಲ. ಗಾಯತ್ರಿ ಅವರು ಮನಸ್ಸಿಲ್ಲದ ಮನಸ್ಸಿನಲ್ಲಿಯೇ ಈ ವಿವಾಹಕ್ಕೆ ಒಪ್ಪಿಗೆ ನೀಡುತ್ತಾರೆ.
ವಿವಾಹವೆಂದರೆ ಎಲ್ಲದಕ್ಕೂ ಶುಭಂ ಎಂದೇ ಅರ್ಥವೇ.. ಖಂಡಿತಾ ಇಲ್ಲ. ವಿವಾಹದ ನಂತರ ಪದ್ಮಿನಿಗೆ ಅವಳ ಜೀವನದ ಮತ್ತೊಂದು ಮಜಲಿನ ಪರಿಚಯವಾಗುತ್ತದೆ. ಗಾಯಿತ್ರಿಯವರು ಆಕೆಯನ್ನು ಚುಚ್ಚು ಮಾತಿನ ಮೂಲಕ ಹಿಂಸಿಸಿ ಯಾವುದೇ ದ್ವೇಷ ಸಾಧಿಸದೇ ಇದ್ದರೂ.. ಅವಳ ಜೊತೆ ಮಾತನಾಡದೆ ಅಥವಾ ನಿರ್ಲಕ್ಷಿಸಿ ಆಕೆಯನ್ನು ಬೇರೆಯದ್ದೇ ರೀತಿಯಲ್ಲಿ ಮಾನಸಿಕ ಹಿಂಸೆ ಪಡುವಂತೆ ಮಾಡುತ್ತಾರೆ. ಇದು ಪದ್ಮಿನಿಗೆ ಉಗುಳಲೂ ಆಗದ ನುಂಗಲೂ ಆಗದ ತುತ್ತಿನಂತೆ ಭಾಸವಾಗುತ್ತದೆ. ಆದರೆ, ಆಕೆಗೆ ಇದನ್ನೆಲ್ಲಾ ಸಹಿಸಿಕೊಳ್ಳದೆ ಬೇರೆ ವಿಧಿ ಇರುವುದಿಲ್ಲ. ತಾಯಿ ಹಾಗೂ ಹೆಂಡತಿ ತನಗೆ ಪರಸ್ಪರರ ವಿರುದ್ಧ ದೂರು ನೀಡಬಾರದೆಂದು ಪ್ರಮೋದ್ ಮೊದಲೇ ಎಚ್ಚರಿಸಿರುತ್ತಾನೆ. ಹಾಗಾ,ಗಿ ಅತ್ತೆ ಸೊಸೆಯರ ಮನಸ್ಥಾಪಗಳು ಈತನವರೆಗೆ ಮುಟ್ಟುತ್ತಿದ್ದದೇ ಕಮ್ಮಿ. ಆದರೆ, ಇಬ್ಬರ ಜಾಣ್ಮೆಯ ಮುಸುಕಿನ ಗದ್ದಾಟದಲ್ಲಿ ಯಾರೇನೂ ಕಡಿಮೆ ಇರಲಿಲ್ಲ.
ಸ್ವಾಭಿಮಾನಿಯಾದ ಪದ್ಮಿನಿ ಈ ಎಲ್ಲಾ ಮನಸ್ತಾಪಗಳನ್ನು ಸಹಿಸಿ ಅತ್ತೆಯ ಮನಸ್ಸು ಗೆಲ್ಲುತ್ತಾಳಾ..?? ಅಥವಾ ಈ ಪ್ರೇಮ ವಿವಾಹ ಹಾಗೂ ಪ್ರಮೋದನ ಕೆಲ ಬಾರಿಯ ಕಟುವರ್ತನೆಗಳಿಂದ ಮನಸ್ಸನ್ನು ಹಿಂಸಿಕೊಳ್ಳುತ್ತಾಳಾ..?? ಅಥವಾ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ಳುತ್ತಾಳಾ..??
ದಾಂಪತ್ಯದ ಮುಂದುವರಿದ ಭಾಗವೆಂದರೆ ಮಕ್ಕಳು. ಆದರೆ, ಇವರಿಬ್ಬರಿಗೂ ಮಕ್ಕಳಾಗದಾಗ.. ಮನೆಯ ವಾತಾವರಣ ಹದಗೆಟ್ಟಾಗ, ಇವರಿಬ್ಬರ ಮುಂದಿನ ನಡೆಯೇನು..?? ಮಗು ಜೀವನಕ್ಕೆ ಅವಶ್ಯವೆಂದಾದರೂ. ... ಅದು ತಾವು ಹೆತ್ತ ಮಕ್ಕಳು ಮಾತ್ರ ಎಂದು ಕೆಲವರ ಅಭಿಪ್ರಾಯ ಕೆಲವರದ್ದು, ದತ್ತು ಮಕ್ಕಳು ಸಹಾ ಆಗುತ್ತದೆ ಎನ್ನುವವರು ಕೆಲವರು.
ಪ್ರಮೋದ್ ಹಾಗೂ ಪದ್ಮಿನಿಗೆ ಮಕ್ಕಳಾಗದಿದ್ದದ್ದು ಯಾರ ಸಮಸ್ಯೆಯಿಂದ..? ಇದಕ್ಕಾಗಿ, ಮಗುವನ್ನು ದತ್ತು ಪಡೆಯಲು ಓಪ್ಪುತ್ತಾರಾ..?? ಮುಂದೆ ಏನಾಗುತ್ತದೆ ಎಂಬುದನ್ನು ತಿಳಿಯಲು ಓದಿ ಮನಸ್ಸು ಮಂದಾರ ಕಾದಂಬರಿಯನ್ನು.
ಮನಸ್ಸು ಮನಸ್ಸುಗಳು ಬೆರೆತಾಗಲೇ ಪ್ರೀತಿ. ಆ ಪ್ರೀತಿ ಕೇವಲ ವಿವಾಹದಿಂದ ಮಾತ್ರವಲ್ಲ.. ವಿವಾಹದ ನಂತರವೂ ಅದೇ ನಂಬಿಕೆಯಿಂದ ಮುಂದುವರಿಯುತ್ತಾ ಹೋಗಬೇಕು. ಇಲ್ಲವಾದರೆ, ಬದುಕು ದುಸ್ತರವಾಗುತ್ತದೆ. ಅದೇ ಮನಸ್ಸುಗಳು ಒಂದಾಗಿ ಪರಸ್ಪರರು ಒಪ್ಪಿ ಪ್ರೀತಿಯಿಂದ ಸಹಬಾಳ್ವೆ ನಡೆಸಿದರೆ.. ಮನಸ್ಸುಗಳ ಸಮಾಗಮವಾದರೆ ಮನಸ್ಸು ಮಂದಾರದಂತೆ ಅರಳುತ್ತದೆ. ಇಲ್ಲಿ ಅರಳಿದ ಮಂದಾರ ಪುಷ್ಪ ಬಾಡಿತೇ..?? ಅಥವಾ ಬಾಡುವಂತಿರುವ ಮನಸ್ಸು ಅರಳಿತೇ..??
ಪ್ರೇಮ ವಿವಾಹ ಹಾಗೂ ಮಕ್ಕಲಿಲ್ಲದವರ ಸಮಸ್ಯೆಯ ಮೇಲೆ, ಹೆಣ್ಣಿನ ಮೇಲೆ ನಡೆಯುವ ಟೀಕೆ ಹಾಗೂ ಹಿಂಸೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಅದರಲ್ಲಿಯೂ ಬಂಜೆಯರ ಕುರಿತು ಬರುವ ಕೆಲ ಮಾತುಗಳು ಹಾಗೂ ಪ್ರತ್ಯುತ್ತರಗಳು ಸಮಾಜ ಬದಲಾಗುತ್ತಿರುವ ಪರಿಯನ್ನು ಬಿಂಬಿಸುವಂತಿದೆ. ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳು, ಮನಸ್ಸಿನ ತಾಕಲಾಟಗಳು ಹಾಗೂ ಕುಟುಂಬ ವ್ಯವಸ್ಥೆ ಮತ್ತು ಸಂಸಾರ ಮಕ್ಕಳು ಇವೆಲ್ಲದರ ಮೇಲೆ ಬೆಳಕು ಬೀರುತ್ತಾ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಈ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ