ಪುಸ್ತಕದ ಶೀರ್ಷಿಕೆ : ಮೃಗತೃಷ್ಣಾ
ಲೇಖಕರು : ಅಶ್ವಿನಿ
ಮೊದಲನೇ ಮುದ್ರಣ :1976
ಪುಟಗಳು : 240
ಚಲನಚಿತ್ರದ ಶೀರ್ಷಿಕೆ : ಕಾಮನಬಿಲ್ಲು
ನಿರ್ದೇಶಕರು : ಚಿ. ದತ್ತರಾಜ್
ಬಿಡುಗಡೆಯಾದ ವರ್ಷ : 1984
ಮುಖ್ಯ ತಾರಾಗಣದಲ್ಲಿ : ಡಾ|| ರಾಜ್ ಕುಮಾರ್, ಸರಿತಾ, ಅನಂತನಾಗ್
ಸಾಹಿತ್ಯ ಕ್ಷೇತ್ರದಲ್ಲಿ ಅಶ್ವಿನಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿರುವ ಕನಕಮ್ಮನವರ ಮೃಗತೃಷ್ಣಾ ಎಂಬ ಕಾದಂಬರಿಯನ್ನು ಆಧರಿಸಿರುವ ಚಲನಚಿತ್ರ ಕಾಮನಬಿಲ್ಲು.
ಮೊದಲಿಗೆ ಕಾದಂಬರಿಯ ಕುರಿತ ಪರಿಚಯ ಮಾಡುತ್ತೇನೆ.
ಮೃಗತೃಷ್ಣ ಎಂಬ ಶೀರ್ಷಿಕೆಯು ಮರೀಚಿಕೆ ಅಥವಾ ಮೃಗ ಜಲ ಎನ್ನುವ ಅರ್ಥ ನೀಡುತ್ತದೆ. ತೃಷೆ ಎಂದರೆ ಬಾಯಾರಿಕೆ, ಬಾಯಾರಿಕೆಯಾದಾಗ ದಾಹ ತೀರಿಸಿಕೊಳ್ಳಲು ನೀರಿನ ಹುಡುಕಾಟಲ್ಲಿರುವಾಗ ಮೃಗಕ್ಕೆ ದೂರದಲ್ಲಿ ನೀರಿರುವಂತೆ ಭಾಸವಾಗುತ್ತದೆ. ಆದರೆ, ಅಲ್ಲಿ ಹೋದಾಗ ನೀರಿರುವುದಿಲ್ಲ. ಇದು ಕೇವಲ ಮೃಗಗಳಿಗೆ ಮಾತ್ರವಲ್ಲವಾದರೂ.. ಇಲ್ಲಿ ನುಡಿಗಟ್ಟಿನ ಆಯಾಮದಲ್ಲಿ ಈ ಶೀರ್ಷಿಕೆಯ ಹೆಸರನ್ನು ಬಳಸಿಕೊಳ್ಳಲಾಗಿದೆ. ಈ ಕಾದಂಬರಿ ಮೊದಲು ಸುಧಾದಲ್ಲಿ ಪ್ರಕಟವಾಗಿತ್ತು.
ಈ ಕಾದಂಬರಿಯ ಮುಖ್ಯ ಪಾತ್ರ ಸೂರ್ಯನಾರಾಯಣ. ಸೂರಪ್ಪ ಹಳ್ಳಿಯಲ್ಲಿ ಎಲ್ಲರಿಗೂ ಬೇಕಾದವನು. ಅವನೆಂದರೆ, ಪ್ರತಿಯೊಬ್ಬರೂ ಆಧರಿಸುವವರೇ.. ಆತನ ತಾಯಿ ಆನಂದಿ ಹಾಗೂ ತಂದೆ ಶೇಷಪ್ಪ. ವೃತ್ತಿಯಲ್ಲಿ ಪುರೋಹಿತರು. ಹೆಚ್ಚಿನ ಸಂಪಾದನೆಯಿಲ್ಲದೆ, ಇದ್ದುದರಲ್ಲೇ ಸಂಭಾಳಿಸಿಕೊಂಡು ಹೋಗುವ ಕುಟುಂಬ. ಸೂರಪ್ಪ 10ನೇ ತರಗತಿಯನ್ನು ಮುಗಿಸಿರದಿದ್ದರೂ ಅವನ ಜ್ಞಾನ ಯಾರಿಗಿಂತ ಏನೂ ಕಡಿಮೆ ಇರಲಿಲ್ಲ. ಆತ ಸಕಲಕಲಾವಲ್ಲಭ ಎಂದರೂ ತಪ್ಪಾಗಲಾರದು. ಕಾದಂಬರಿ ಶುರುವಾಗುವುದು ಸೂರಪ್ಪ ಒಂದು ನಾಟಕದ ತಾಲೀಮು ನಡೆಸಿ ಮನೆಗೆ ಬಂದಾಗ ಆತನ ತಾಯಿ ಆಡಿದ ಒಂದು ಮಾತನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೆ.. ಅದನ್ನು ಅಪಾರ್ಥ ಮಾಡಿಕೊಂಡು ದುರ್ದಾನ ತೆಗೆದುಕೊಂಡವನಂತೆ ಅಲ್ಲಿಂದ ಹೊರಡುವುದರಿಂದ..
ಅವನು ಅಲ್ಲಿಂದ ಹೊರಟದ್ದು ಊರ ಹೊರಗಿನ ಗುಡ್ಡಕ್ಕೆ. ಆ ಗುಡ್ಡಕ್ಕೆ ಹೆಸರಿಲ್ಲದಿದ್ದರೂ.. ಸೂರ್ಯನಾರಾಯಣನ ದೆಸೆಯಿಂದ ಅದು ಸೂರಿ ಗುಡ್ಡ, ಸೂರಪ್ಪನ ಗುಡ್ಡವೆಂದೇ ಹೆಸರಾಗಿತ್ತು. ಸೂರಪ್ಪನಿಗೆ ಅದು ಮತ್ತೊಂದು ಮನೆ ಎಂದರೂ ತಪ್ಪಾಗಲಾರದು. ಅನ್ಯಮನಸ್ಕತೆಯಿಂದ ಹೋಗುತ್ತಿದ್ದ ಆತ... ದಿನನಿತ್ಯ ಚುಟುಕಾದರೂ ಕಾಫಿ ಕುಡಿದು ಹೋಗುತ್ತಿದ್ದ ಅಂಬಮ್ಮನವರ ಮನೆಗೂ ಹೋಗಲಿಲ್ಲ. ಪ್ರತಿದಿನ ಶೆಟ್ಟರಿಗೆ ಸೂರ್ಯನ ಉದಯವಾಗುತ್ತಿದ್ದದ್ದು.. ಸೂರಿ ಬಂದು ತಮ್ಮ ಕೈಯಿಂದ ಏನಾದರೂ ತಿಂಡಿ ತೆಗೆದುಕೊಂಡಾಗಲೇ.. ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡ ಮಗನನ್ನು ಅವನ ರೂಪದಲ್ಲಿ ನೋಡುತ್ತಿದ್ದರು. ಕುರಿಗೌಡನೆಂದೇ ಖ್ಯಾತಿಯಾಗಿದ್ದ ನೂರಾರು ಕುರಿಗಳನ್ನು ಸಲಹುತ್ತಿದ್ದವನ ಪಾಲಿಗೆ ಸೂರಪ್ಪ ವೈದ್ಯನೇ ಸರಿ. ಆತನಿಗೆ ಓದಿನ ಜ್ಞಾನವಿಲ್ಲದಿದ್ದರೂ ಸಾಹಿತ್ಯದಲ್ಲಿ ಅಭಿರುಚಿಯಿತ್ತು. ಅಲ್ಲದೆ, ಗಿಡಮೂಲಿಕೆಗಳ ಜ್ಞಾನವಿತ್ತು. ಆತನ ಜ್ಞಾನ ಭಂಡಾರ ಈ ರೀತಿಯಲ್ಲಿ ವಿಸ್ತಾರವಾಗಿ ಪರೋಪಕಾರಕ್ಕೆ ಉಪಯೋಗವಾಗುತ್ತಿತ್ತು.
ಹಾಗೆ.. ಗುಡ್ಡಕ್ಕೆ ಹೋಗುವಾಗ ಹೊಳೆ ದಾಟಬೇಕಾಗಿತ್ತು ಅದೇ ಸಮಯಕ್ಕೆ ಬರುವ ಗಾಡಿಗೆ, ಉಕ್ಕಿ ಹರಿಯುತ್ತಿದ್ದ ಹೊಳೆ ದಾಟಲು ಸಹಾಯ ಮಾಡಿ ಆತ ಅಲ್ಲಿಂದ ಹೊರಡುತ್ತಾನೆ. ಆತನ ಮನಸ್ಸು ತಿಳಿಯಾಗಿದ್ದು ಚಂದ್ರನಿಂದ. ಸೂರ್ಯ - ಚಂದ್ರ ಇಬ್ಬರೂ ಅಣ್ಣ-ತಮ್ಮಂದಿರಂತೆ ಎಂದರೆ ಅತಿಶಯೋಕ್ತಿಯೇನಿಲ್ಲ. ತಾನು ಏನೂ ಕೆಲಸ ಮಾಡದೆ.. ಕೆಲಸಕ್ಕೆ ಬಾರದವನಾಗಿದ್ದೇನೆ ಎಂದೆನ್ನುವ ಸೂರ್ಯನ ಸಮಸ್ಯೆಗೆ ಪರಿಹಾರ ಕೊಟ್ಟವನೇ ಚಂದ್ರ. ಆತನಿಗಿದ್ದ ಎರಡು ಎಕರೆ ಹೊಲದಲ್ಲಿ ತಾನೇ ನಿಂತು ವ್ಯವಸಾಯ ಮಾಡಿಸುತ್ತಾನೆ. ನಂತರದ ಬೆಳೆ ನೀನು ಬೆಳೆಸು ಎಂದು ಧೈರ್ಯ ತುಂಬುತ್ತಾ ವ್ಯವಸಾಯಕ್ಕೆಳೆದವನು.
ಚಂದ್ರ ಹಾಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಸಹಾ.. ಒಂದು ರೂಪಾಯಿಯನ್ನೂ ಸೂರ್ಯನಿಂದ ತೆಗೆದುಕೊಳ್ಳದೆ, ಮೊದಲ ವರ್ಷ ವ್ಯವಸಾಯ ಮಾಡಿಸಿ ಕೋಸು ಹಾಗೂ ತೊಗರಿಯನ್ನು ಬೆಳೆದು ಅದರಲ್ಲಿ ಲಾಭಕ್ಕೆ ಕಾರಣನಾದ. ಜೊತೆಗೆ, ಹೊಲದ ಅಂಚಿಗೆಲ್ಲಾ ತೆಂಗನ್ನು ನೆಡಿಸಿಯಾಗಿತ್ತು.
ಸೂರ್ಯ ಚೇತನಹಳ್ಳಿಯವನಾದರೆ ಚಂದ್ರ ಮೇಲೂರಿನವನು. ಚಂದ್ರನಿಗೆ ಈಗಾಗಲೇ ಮದುವೆಯಾಗಿದ್ದು.. ಹೆಂಡತಿ ಸತ್ತಿದ್ದಳು. ಒಂದು ಪುಟ್ಟ ಮಗುವಿತ್ತು. ಆತ ಮರುಮದುವೆಗೆ ಒಪ್ಪುತ್ತಿರಲಿಲ್ಲ. ಆತನ ತಾಯಿ ಬೆಟ್ಟವ್ವನಿಗೆ ಅದೇ ಚಿಂತೆ. ಆ ಚಿಂತೆಗೆ ಪರಿಹಾರದಂತೆ ಕಂಡದ್ದು ಆ ಗಾಡಿಯಲ್ಲಿ ಬಂದಿದ್ದ ಹುಡುಗಿ ಗಿರಿಜ. ಗಿರಿಜ ಚೇತನಹಳ್ಳಿಯ ಹಿರೇಗೌಡರ ಮೊಮ್ಮಗಳು.
ಚೇತನಹಳ್ಳಿಯ ಹಿರಿ ಜೀವವೆಂದರೆ ಹಿರೇಗೌಡರು. ಅವರು ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ ಗೌರವದಲ್ಲಿ, ಸ್ಥಾನಮಾನದಲ್ಲಿ, ಸಹೃದಯತೆ ಹೀಗೆ ಎಲ್ಲದರಲ್ಲೂ ಹಿರಿಯವರೇ. ಅವರ ತಮ್ಮ ಕಿರಿಗೌಡರು. ವಯಸ್ಸಿನಿಂದಲ್ಲ.. ಆಲೋಚನೆಯಿಂದಲೂ ಆತನ ಮನಸ್ಸು ಕಿರಿಯದ್ದೇ. ಸೂರಿಯ ಪಾಲಿಗೆ ಹಿರಿಗೌಡರೇ ಗೌಡಜ್ಜ. ಮೊದಲು ಒಂದು ಬಾರಿ ಹಳ್ಳಿಗೆ ಬಂದು ಹೋದ ಗಿರಿಜ ಹಿರೇಗೌಡರ ಮಗಳು ಕೆಂಪಮ್ಮನ ಮಗಳು. ಹಿರೇಗೌಡರ ಮಗ ವಿದೇಶ ಸೇರಿದ್ದ. ಮತ್ತೊಬ್ಬ ಮಗಳು ಈಗಾಗಲೇ ತೀರಿಕೊಂಡಿದ್ದರು. ಉಳಿದವರು ಕೆಂಪಮ್ಮ. ಆದರೆ, ಆಕೆಗೆ ಹಳ್ಳಿಗೆ ಬರುವುದರಲ್ಲಿ ಯಾವುದೇ ಅಸ್ಥೆ ಇರಲಿಲ್ಲ. ಹಿರೇಗೌಡರು ತನ್ನ ಹೊಲವನ್ನೆಲ್ಲಾ ಸೂರ್ಯನಾರಾಯಣನ ಹೆಸರಿಗೆ ಮಾಡಬೇಕು ಎನ್ನುವಷ್ಟರಲ್ಲಿ ಗಿರಿಜಾ ತಂದೆ-ತಾಯಿಯರ ವಿರೋಧದ ನಡುವೆಯೂ ಕೃಷಿ ಪದವಿ ಮುಗಿಸಿ ಈಗ ಹಳ್ಳಿಗೆ ಕಾಲಿಟ್ಟಿದ್ದಳು. ಕಿರಿಗೌಡನಿಗೆ ದಾಯಾದಿ ಮತ್ಸರ ಇದ್ದದ್ದೇ..
ಇತ್ತ ಅಂಬಮ್ಮನಿಗೆ ಮೂವರು ಮಕ್ಕಳು. ಜಲಜ, ಪದ್ಮಜ ಹಾಗೂ ಪಂಕಜ. ಪಂಕಜ ಇನ್ನೂ ಕಿರಿಯವಳು. ಹಿರಿಯ ಮಗಳು ಜಲಜಾಳನ್ನು ಸೂರ್ಯನಾರಾಯಣನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆ ಆ ತಾಯಿ ಹೃದಯದ್ದು. ಪತಿ ರಾಘಣ್ಣನವರ ಒಪ್ಪಿಗೆಯೂ ಇದ್ದಿತು. ಸ್ವಂತ ತಮ್ಮನಂತೆ ಭಾವಿಸುವ ಸೂರ್ಯನ ಬಳಿ ಪ್ರಸ್ತಾಪಿಸಿದಾಗ ಜಾತಿಯ ಅಡ್ಡಿ ಇಲ್ಲದ್ದರಿಂದ.. ಆಕೆ ಒಪ್ಪಿದರೆ ಆಗಬಹುದು ಎಂದು ಹೇಳಿದ್ದ. ಆದರೆ ಜಲಜಾಳಿಗೆ ಅದು ಕೊಂಚವೂ ಇಷ್ಟವಿರಲಿಲ್ಲ. ಆತ ಕಪ್ಪು, ಹಳ್ಳಿಯವನು ಎಂದು ಆತನನ್ನು ಯಾವಾಗಲೂ ಜರಿಯುತ್ತಿದ್ದಳು. ಆದರೆ ಆಕೆಯ ತಂಗಿ ಪದ್ಮಜಳಿಗೆ ಸೂರ್ಯನ ಮೇಲೆ ಅಜ್ಞಾತವಾದ ಅಗಾಧ ಒಲವಿತ್ತು.
ಕಾಲಕ್ರಮೇಣ ಎಲ್ಲವೂ ಬದಲಾಗುತ್ತಾ ಹೋಯಿತು. ಊರಿನಲ್ಲಿ ಎಷ್ಟೋ ಬದಲಾವಣೆಗಳಾದವು. ಹರಿಜನರ ಕೇರಿ ಸ್ವಚ್ಛವಾಗಿತ್ತು. ಅಲ್ಲಿ ಜಾತಿ ಮತಗಳ ಭೇದವಿರಲಿಲ್ಲ. ಆದರೆ, ಎಲ್ಲಾ ಬದಲಾವಣೆಗಳಿಗೂ ಸೂರ್ಯ ಶ್ರಮ ಕಡಿಮೆಯೇನಿರಲಿಲ್ಲ. ಆ ಎಲ್ಲ ಬದಲಾವಣೆಗಳನ್ನು ಹಾಗೂ ಕಾದಂಬರಿಯ ಮಧ್ಯಭಾಗದ ಸ್ವಾರಸ್ಯದ ಸವಿಯನ್ನು ನೀವೇ ಓದಿ ಸವಿಯಿರಿ.
ಕಾದಂಬರಿಯ ಕಡೆಯಲ್ಲಿ ಜಲಜ ಇಷ್ಟ ಪಟ್ಟವನ ಬಳಿ ಆಕೆಯ ಮದುವೆ ಮಾಡಿಸಿದ ಸೂರಿ. ತಾನು ಪದ್ಮಜಾಳನ್ನು ಮದುವೆಯಾಗಲು ಒಪ್ಪುತ್ತಾನೆ. ಗಿರಿಜಾ ಹಾಗೂ ಸೂರ್ಯನ ನಡುವೆ ಇರುವ ಪ್ರೇಮ ಹೇಳಿಕೊಳ್ಳದಿದ್ದರೂ ಪರಸ್ಪರರಿಗೆ ಅರಿವಿರುತ್ತದೆ. ಆ ಪ್ರೇಮವು ಫಲಿಸುವುದಿಲ್ಲ. ಆಕೆ ಸೂರ್ಯನ ಮಾತಿಗೆ ಬೆಲೇಕೊಟ್ಟು ಚಂದ್ರನನ್ನು ಮದುವೆಯಾಗುತ್ತಾಳೆ. ಗಿರಿಜೆಯ ಪಾಲಿಗೆ ಸೂರ್ಯ ಮೃಗತೃಷ್ಣಾ ಎನಿಸಿಕೊಳ್ಳುತ್ತಾನೆ.
ಇಲ್ಲಿನ ಕಾದಂಬರಿಯಲ್ಲಿ ಗಂಗಿ ಎನ್ನುವ ಪಾತ್ರ ಬರುತ್ತದೆ ಆಕೆ ಹಿರೇಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಾದನ ಮಗಳು. ಒಮ್ಮೆ ಆಕೆ ಸೋಪಿಗಾಗಿ ನದಿಗೆ ಬಿದ್ದು ಸೆಳೆತದಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಆಕೆಯನ್ನು ಕಾಪಾಡಿದವನೇ ಸೂರ್ಯನಾರಾಯಣ. ಅಂದಿನಿಂದ ಆಕೆಯ ಪಾಲಿಗೆ ಆತ ಆರಾಧ್ಯದೈವ. ಅದೊಂದು ನಿರ್ವಾಜ್ಯ ಪ್ರೀತಿ ಆರಾಧನೆಯ ಭಾವದಲ್ಲಿತ್ತು. ಈ ರೀತಿಯ ಆರಾಧನಾ ಭಾವದ ಪ್ರೀತಿ ಎಂದಿಗೂ ಮೃಗತೃಷ್ಣವಾಗುವುದಿಲ್ಲ ಎಂಬುದನ್ನು ಈ ಪಾತ್ರದ ಮೂಲಕ ಲೇಖಕಿ ಹೇಳುತ್ತಿದ್ದಾರೇನೋ ಎನ್ನಿಸಿತು.
ಇಲ್ಲಿ ಸೂರ್ಯನ ಈ ಎಲ್ಲಾ ಬದಲಾವಣೆಗೂ ಬೆಂಬಲವಾಗಿ ನಿಲ್ಲುವುದು ತಾಯಿ ಆನಂದಿ. ಮಗ ಮಾಡುವ ಪ್ರತಿ ಕಾರ್ಯವು ತಾಯಿ ಮನಸ್ಸಿಗೆ ಒಳ್ಳೆಯದಂತೆಯೇ ತೋರುತ್ತದೆ. ಅಲ್ಲದೆ ಆತನ ಪ್ರತಿ ಕಾರ್ಯಕ್ಕೂ ಜೊತೆಯಾಗಿಯೋ.. ಇಲ್ಲ ಮೌನವಾಗಿಯೋ ಆತನನ್ನು ಬೆಂಬಲಿಸುತ್ತಾಳೆ. ತಂದೆ ಮೊದಲಿಗೆ ಆತನನ್ನು ಜರಿದರೂ.. ಅಪ್ರಯೋಜಕ ಎಂದುಕೊಂಡಿದ್ದರೂ.. ಆತನ ಸಾಧನೆ ಕಂಡು ಹರ್ಷಿಸುತ್ತಾರೆ. ಇನ್ನು ಗೆಳೆಯ ಚಂದ್ರನನ್ನಂತೂ ಕೇಳುವುದೇ ಬೇಡ. ಇದ್ದರೆ, ಇಂತಹಾ ಗೆಳೆತನವಿರಬೇಕು ಎನ್ನುವಷ್ಟು ಅನ್ಯೋನ್ಯ ಗೆಳೆತನ.
ಗಿರಿಜಾ ಹಾಗೂ ಸೂರ್ಯನ ನಡುವಿನ ಸಂಬಂಧವು ಒಳಗೊಳಗೆ ಪ್ರೀತಿ, ಆರಾಧನೆ ಇದ್ದರೂ ಗಿರಿಜಾ ಮೊದಮೊದಲು ಆತನನ್ನು ತನ್ನ ಪ್ರತಿಸ್ಪರ್ಧಿಯಂತೆಯೇ ಭಾವಿಸುತ್ತಾಳೆ. ಇಬ್ಬರ ನಡುವಿನ ಜಾತಿಯ ಅಂತರವೂ ಗೊತ್ತಿರುತ್ತದೆ. ಎಲ್ಲವನ್ನೂ ಮೀರಿ ಕ್ರಾಂತಿಕಾರಿ ಬದಲಾವಣೆಯಾಗಬಹುದಾಗಿದ್ದರೂ.. ಇಲ್ಲಿನ ತ್ಯಾಗ ಅಂತ್ಯವನ್ನು ತೀರಾ ದುಃಖಾಂತ್ಯವನ್ನೇನಾಗಿಸುವುದಿಲ್ಲ. ನಾವು ಪ್ರೀತಿಸುವವರಿಗಿಂತ ನಮ್ಮನ್ನು ಪ್ರೀತಿಸುವವರು ದೊರೆತಾಗ ಬಾಳು ಸುಂದರ ಎಂಬ ರೀತಿಯ ಅಂತ್ಯವಿದೆ.
ಅಶ್ವಿನಿಯವರು ಕೃಷಿ ವಿಶ್ವವಿದ್ಯಾಲಯದಲ್ಲಿಯೇ ಕೆಲಸ ಮಾಡಿದವರಾದ ಕಾರಣ ಹಳ್ಳಿಯ ಪರಿಸರದ ಒಂದು ಸುಂದರ ಮುಖವನ್ನು, ಕೃಷಿ, ಬೆಳೆಗಳ ವಿಧಾನ , ಗ್ರಾಮ ನೈರ್ಮಲ್ಯದ ಕುರಿತಾದ ಪರಿಕಲ್ಪನೆಯನ್ನು ವಿಸ್ಕೃತವಾಗಿ ತೆರೆದಿಟ್ಟಿದ್ದಾರೆ.
ಇದಿಷ್ಟು ಕಾದಂಬರಿಯ ವಿಚಾರವಾದರೆ.. ಚಲನಚಿತ್ರದಲ್ಲಿ ಸೂರ್ಯನಾರಾಯಣನ ಪಾತ್ರದಲ್ಲಿ ಡಾ|| ರಾಜ್ ಕುಮಾರ್, ಗಿರಿಜಾ ಪಾತ್ರದಲ್ಲಿ ಸರಿತಾ ಹಾಗೂ ಚಂದ್ರನ ಪಾತ್ರದಲ್ಲಿ ಅನಂತ್ ನಾಗ್ ಮನಸೂರೆಗೊಳ್ಳುತ್ತಾರೆ. ರಾಜ್ ಕುಮಾರ್ ಹಾಗೂ ಅನಂತ್ ನಾಗ್ ರವರ ಜೋಡಿಯ ಗೆಳೆತನದ ಮೋಡಿ ಮಾಡಿದೆ ಎಂದರು ತಪ್ಪಾಗಲಾರದು. ಇನ್ನು ಡಾ|| ರಾಜಕುಮಾರ್ ಅಭಿನಯದ ಕುರಿತಾಗಿ ಮಾತನಾಡುವಂತೆಯೇ ಇಲ್ಲ. ಪೋಷಕ ಪಾತ್ರದಲ್ಲಿ ನಟಿಸಿರುವ ನಟರಾದ ಬಾಲಕೃಷ್ಣರವರು, ತೂಗುದೀಪ ಶ್ರೀನಿವಾಸ್ , ಕೆ. ಎಸ್ ಅಶ್ವಥ್ ಹೀಗೆ ಪ್ರತಿಯೊಬ್ಬ ನಟ, ನಟಿಯರೂ ಕಾಮನಬಿಲ್ಲಿನಷ್ಟೇ ರಂಗಾಗಿಸಿದ್ದಾರೆ ಚಿತ್ರವನ್ನು.
ಕಾದಂಬರಿಗೂ.. ಚಲನಚಿತ್ರಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲದಿದ್ದರೂ.. ಕಾದಂಬರಿಯ ಹರವು ಹೇಗೆ ವಿಸ್ಕೃತವಾಗಿದೆ ಎಂದರೆ ಸಿಂಹಾವಲೋಕನ ಕ್ರಮದಲ್ಲಿ ಅಂದರೆ ಘಟನೆಗಳನ್ನು ನೆನಪು ಮಾಡಿಕೊಂಡು.. ಇಂದಿನ ಪರಿಸ್ಥಿಯ ಮೂಲಕ ಅದರ ಚಿತ್ರಣವನ್ನೆಲ್ಲ ತೆರೆದಿಟ್ಟರೆ.. ಚಲನಚಿತ್ರದಲ್ಲಿ ಅದು ಹಿಂದಿನ ನೆನಪಿನಂತಿಲ್ಲದೆ.. ಅದು ನೇರವಾಗಿ ಚಿತ್ರಿತವಾಗಿದೆ.
ಇಲ್ಲಿ ಸೂರ್ಯನಾರಾಯಣ ತಾಯಿ ಆನಂದಿಯವರ ಪಾತ್ರ ಅಷ್ಟಿಲ್ಲ. ತಂದೆಯ ಪಾತ್ರ ಸ್ವಲ್ಪ ವಿಸ್ಕೃತವಾಗಿದೆ. ಕಾದಂಬರಿಯಲ್ಲಿ ಕಿರಿಗೌಡರಿಗೆ ಮೂವರು ಮಕ್ಕಳು. ಮಗ ಶಾಲೆಗೆ ಹೋಗುತ್ತಿದ್ದು, ಒಬ್ಬ ಮಗಳು ಮಾನಸಿಕ ಅಸ್ವಸ್ಥಳು ಹಾಗೂ ಮತ್ತೊಬ್ಬಳು ಅಂಗವಿಕಲೆ. ಇಲ್ಲಿ ಕಿರಿಗೌಡರಿಗಿರುವುದು ಏಕ ಮಾತ್ರ ಪುತ್ರ. ಆದರೆ, ಆತ ತಂದೆಯಂತೆಯೇ ಕುತ್ಸಿತ ಬುದ್ಧಿಯುಳ್ಳವನು. ಕಿರಿಗೌಡರ ಪಾತ್ರವನ್ನು ಸಿನಿಮಾದಲ್ಲಿ ವಿಲನ್ ಆಗಿ ಚಿತ್ರಿಸಲಾಗಿದ್ದು.. ಕೆಲವು ದ್ವೇಷಪೂರಿತ ಸನ್ನಿವೇಶಗಳಿದ್ದು.. ಹೊಡೆದಾಟ-ಬಡಿದಾಟದ ನಂತರ ಅವರ ಮನಃ ಪರಿವರ್ತನೆಯಾಗುವಂತೆ ಚಿತ್ರಿಸಲಾಗಿದೆ. ಕಾದಂಬರಿಯಲ್ಲಿ ದ್ವೇಷವಿಲ್ಲ. ಬದಲಿಗೆ ತನ್ನ ಚಾಲಾಕಿತನದಿಂದ ಸನ್ನಿವೇಶವನ್ನು ನಿಭಾಯಿಸುತ್ತಾನೆ ಸೂರ್ಯ.
ಜಾತಿ ವೈಷಮ್ಯಗಳನ್ನು ಸರಿ ಮಾಡುವ ಎಷ್ಟೋ ಘಟನೆಗಳು, ಗ್ರಾಮ ನೈರ್ಮಲ್ಯ ಜೊತೆಗೆ ಮಾದರಿ ಗ್ರಾಮವಾದ ಚೇತನಹಳ್ಳಿಯ ಕುರಿತು ಇಲ್ಲಿ ಅಷ್ಟೊಂದು ಚಿತ್ರಿತವಾಗಿಲ್ಲ. ಒಂದೆರಡು ಘಟನೆಗಳಷ್ಟೇ ಇವೇ. ಸೂರಿಯ ನಾಟಕದ ತಾಲೀಮು, ತಯಾರಿ ಹಾಗೂ ನಾಟಕದ ಪಾತ್ರಗಳ ಕುರಿತಾಗಿ ಕಾದಂಬರಿಯಲ್ಲಿರುವ ಉಲ್ಲೇಖ ಇಲ್ಲೆಲ್ಲೂ ಕಂಡು ಬರಲಿಲ್ಲ. ಬದಲಾಗಿ ಯೋಗಾಸನ ಹಾಗೂ ಅದರಿಂದ ಉಂಟಾಗುವ ಸಂಯಮ, ಮಾನಸಿಕ ಸ್ವಸ್ಥತೆಯ, ಮಹತ್ವದಿಂದ ವ್ಯಾಯಾಮ ಹಾಗೂ ಯೋಗಾಸನದ ಕುರಿತಾದ ಕಾಳಜಿ ಮೂಡಿಸಿದ್ದಾರೆ ಸಿನಿಮಾದಲ್ಲಿ.
ಕಾದಂಬರಿಯಲ್ಲಿ ಶಂಭು ಎನ್ನುವ ಮತ್ತೊಂದು ಪಾತ್ರ ಸೂರ್ಯನಾರಾಯಣನ ಸಮಕಾಲೀನನಂತೆಯೇ ಚಿತ್ರತವಾಗಿದ್ದು.. ಆತನಿಗೆ ಕೃಷಿಯ ವಿಚಾರದಲ್ಲಿ ಸಲಹೆ ನೀಡುತ್ತಾ.. ಆತನಿಗೆ ಸಹಕಾರಿಯಾಗಿರುವಂತಿದೆ. ಸಿನಿಮಾದಲ್ಲಿ ಶಂಭುವಿನ ಪಾತ್ರ ಅಷ್ಟಿಲ್ಲ. ಇದ್ದರೂ ಆತ ಸೂರಿಯನಿಗಿಂತ ಹಿರಿಯ ಅನುಭವಿ.
ಕಾದಂಬರಿಯಲ್ಲಿನ ಗಂಗೆ ಸೂರ್ಯನಾರಾಯಣನನ್ನು ಆರಾಧಿಸುತ್ತಿರುತ್ತಾಳಾದರೂ.. ಮುನಿಸಾಮಿಯ ಜೊತೆ ಮದುವೆಯಾಗಿರುತ್ತದೆ. ಆದರೆ, ಇಲ್ಲಿ ಕಿರಿಗೌಡನ ಮಗ ಆಕೆಯ ಮೇಲೆ ಅತ್ಯಾಚಾರ ನಡೆಸಿರುತ್ತಾನೆ. ಆಕೆಯನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಬೇಕಾದರೆ ಎನ್ನುವ ಶರತ್ತಿನ ಮೂಲಕ ಸೂರಿಯ ವಿರುದ್ಧ ಸಂಚು ರೂಪಿಸಿ, ಆಕೆಯ ತಂದೆಯನ್ನು ಬಳಸಿಕೊಳ್ಳುತ್ತಾನೆ.
ಇನ್ನು ಅಂಬಮ್ಮನಿಗಿದ್ದ ಮೂವರು ಮಕ್ಕಳ ಪಾತ್ರ ಇಲ್ಲಿಲ್ಲ. ಕೇವಲ ಪದ್ಮಜಾ ಪಾತ್ರ ಮಾತ್ರವಿದೆ. ಪದ್ಮಜಾ ಇಲ್ಲಿ ಅಂಗವಿಕಲೆ. ಕುಂಟಿಯಾಗಿರುವ ಆಕೆಗೆ ಬಾಳು ನೀಡುವ ಸೂರಿ ತನ್ನ ಉದಾತ್ತತೆಯನ್ನು ಮೆರೆಯುವ ಮೂಲಕ ಗಿರಿಜೆಯ ಪಾಲಿಗೆ ಕಾಮನಬಿಲ್ಲಾಗುವಂತೆಯೂ.. ಹಾಗೂ ಆತ ಎತ್ತರದಲ್ಲಿರುವಂತೆಯೂ ಚಿತ್ರಿಸಲಾಗಿದೆ.
ಕಾದಂಬರಿ ಹಾಗೂ ಕಾದಂಬರಿ ಆಧಾರಿತ ಚಲನಚಿತ್ರವೆಂದರೆ ಯಾವತ್ತಿಗೂ ನನ್ನ ಮೊದಲ ಆಯ್ಕೆ ಕಾದಂಬರಿಯೇ.. ಏಕೆಂದರೆ, ದೃಶ್ಯಮಾಧ್ಯಮದಲ್ಲಿ ಕಾಣುವಷ್ಟು ಭಾವಗಳು ಮಾತ್ರ ತಲುಪಿದರೆ, ಅಕ್ಷರ ಮಾಧ್ಯಮದಲ್ಲಿ ಹೆಚ್ಚು ತಲುಪುತ್ತದೆ. ಅಲ್ಲದೆ ಎಷ್ಟೋ ಸಂಭಾಷಣೆಗಳು ಮನಮುಟ್ಟುವಂತಿರುತ್ತವೆ. ಇಲ್ಲಿನ ಚಲನಚಿತ್ರ ಕಾದಂಬರಿಯ ಬಹುಪಾಲನ್ನು ದೃಶ್ಯಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಮೂಡಿಸುವಲ್ಲಿ ಸಫಲವಾಗಿದೆ. ಜೊತೆಗೆ, ಯುವಕರ ಮೇಲೆ ಸೃಜನಾತ್ಮಕ ಕೆಲಸ ಹಾಗೂ ಕೃಷಿಯ ಕುರಿತು ಸಕಾರಾತ್ಮಕ ಪರಿಣಾಮ ಬೀರುವಂತಿದೆ. ಎಲ್ಲಾ ಹಾಡುಗಳನ್ನೂ ಮತ್ತೆ ಗುನುಗುನಿಸುವಂತಾಗುತ್ತದೆ. ಓದುವ ಹವ್ಯಾಸವಿದ್ದವರು ಕಾದಂಬರಿ ಓದಿ ಕಾದಂಬರಿ ಆಧಾರಿತ ಚಲನಚಿತ್ರ ನೋಡಿದರೆ ಉತ್ತಮವೆನ್ನುವ ಭಾವನೆ ನನ್ನದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ