ಮಂಗಳವಾರ, ಏಪ್ರಿಲ್ 7, 2026

ವೈಯ್ಯಾರಿ (ಬೂತಯ್ಯನ ಮಗ ಅಯ್ಯು ) (ಪುಸ್ತಕ ಯಾನ - 91)


ಪುಸ್ತಕದ ಶೀರ್ಷಿಕೆ : ವೈಯ್ಯಾರಿ (ಬೂತಯ್ಯನ ಮಗ ಅಯ್ಯು )

ಲೇಖಕರು : ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪ್ರಕಾಶಕರು :ಮನೋಹರ ಗ್ರಂಥ ಪ್ರಕಾಶನ, ಧಾರವಾಡ

ಮೊದಲನೇ ಮುದ್ರಣ : 1941

ಪುಟಗಳು : 300 ( ಈ ಕತೆ 56 ಪುಟಗಳನ್ನೊಳಗೊಂಡಿದೆ)


ಚಲನಚಿತ್ರ : ಬೂತಯ್ಯನ ಮಗ ಅಯ್ಯು

ನಿರ್ದೇಶಕರು : ಸಿದ್ದಲಿಂಗಯ್ಯ

ತಾರಾಗಣ : ವಿಷ್ಣುವರ್ಧನ್ , ಲೋಕೇಶ್, ಎಲ್.ವಿ.ಶಾರದ, ಎಂ.ಪಿ.ಶಂಕರ್,ದಿನೇಶ್, ಧೀರೇಂದ್ರ ಗೋಪಾಲ್, ಲೋಕನಾಥ್ ಮುಂತಾದವರು


"ಬೂತಯ್ಯನ ಮಗ ಅಯ್ಯು" ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ "ವೈಯ್ಯಾರಿ" ಎಂಬ 12 ಕಥೆಗಳ ಕಥಾಸಂಕಲನದಿಂದ ಆಯ್ದುಕೊಂಡ 56 ಪುಟಗಳ ಕಥೆ. ಅವರು ಇದನ್ನು ಸಣ್ಣ ಕತೆ ಎಂದರೂ.. ನೀಳ್ಗಥೆಯಂತೆಯೇ ತೋರಿತು. ಈ ಕಥೆಯನ್ನು ಚಲನಚಿತ್ರವಾಗಿಸುವಾಗ ಕೆಲವು ಹೆಚ್ಚಿನ ಪಾತ್ರಗಳನ್ನು ಸೇರಿಸಿ ಕೆಲವು ಸನ್ನಿವೇಶಗಳನ್ನು ಹೆಚ್ಚಿಸಲಾಗಿದೆ. ಮೂಲ ಕಥೆ ಹೆಚ್ಚು-ಕಡಿಮೆ ಹಾಗೆಯೇ ಇದೆ. ಮೊದಲಿಗೆ ನಿರ್ದೇಶಕರು ತಮಗೆ ಈ ಕತೆಯ ಕಾಪಿ ರೈಟ್ ನೀಡಬೇಕೆಂದು ಕೇಳಿದಾಗ ಗೊರೂರರು ಒಪ್ಪಿರಲಿಲ್ಲವಂತೆ. ಇಷ್ಟು ಚಿಕ್ಕ ಕಥೆಯನ್ನು ಚಲನಚಿತ್ರವನ್ನಾಗಿಸಲಾಗದು ಎಂಬುದು ಅವರ ಮನದಲ್ಲಿ ಇದ್ದದ್ದು. ಆದರೆ, ಛಲ ಬಿಡದೆ ಸಿದ್ದಲಿಂಗಯ್ಯನವರು ಮತ್ತೆ ಮತ್ತೆ ಕೇಳಿ ಒಪ್ಪಿಸಿದರು. ಗೊರೂರರ ನಿರೀಕ್ಷೆಯೇ ಸುಳ್ಳಾಗುವಂತೆ ಆ ಕಥೆ ಚಲನಚಿತ್ರವಾಯಿತು.  


ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವರು ಗೊರೂರು ಎಂದೇ ಚಿರಪರಿಚಿತರು. ಇವರು ಹಾಸನದ ಗೊರೂರಿನವರು. 87 ವರ್ಷಗಳ ಕಾಲ ಬದುಕಿದ್ದ ಇವರು ಹಲವಾರು ಕೃತಿಗಳನ್ನು ಹಾಸ್ಯ ಮತ್ತು ವಿಡಂಬನೆಯ ರೀತಿಯಲ್ಲಿ ಸಾಮಾಜಿಕ ಸಂದೇಶಗಳನ್ನು ನೀಡುವಂತೆ ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳು ಎಂದರೆ ನಮ್ಮ ಊರಿನ ರಸಿಕರು, ಬೂತಯ್ಯನ ಮಗ ಅಯ್ಯು, ಅಮೇರಿಕಾದಲ್ಲಿ ಗೊರೂರು ಇನ್ನು ಮುಂತಾದವು. 


ಮೊದಲಿಗೆ ಬೂತಯ್ಯನ ಮಗ ಅಯ್ಯು ಕಾದಂಬರಿಯ ಕುರಿತು ಹೇಳುತ್ತೇನೆ. 


ಜಾಲಹಳ್ಳಿಯಲ್ಲಿ ಇದ್ದದ್ದು ಒಂದೇ ಬ್ರಾಹ್ಮಣರ ಮನೆ ಅದು ಬೂತಯ್ಯನವರದ್ದು. ಇನ್ನುಳಿದವರು ಒಕ್ಕಲಿಗರು ಹಾಗೂ ತಿಗಳರು. ಬೂತಯ್ಯನವರ ಹೆಂಡತಿ ಈಗಾಗಲೇ ತೀರಿಕೊಂಡಿದ್ದು.. ಮಗ ಅಯ್ಯುವಿಗೆ ವಿವಾಹವಾಗಿತ್ತು. ಬೂತಯ್ಯನನ್ನು ಯಾರಾದರೂ ಕಂಡರೆ ಬಡವರೇನೋ ಎಂದುಕೊಳ್ಳಬಹುದಾದರೂ ಆತ ಆ ಕಾಲಕ್ಕೆ ತ್ರಾಣಿ. ತ್ರಾಣಿ ಎಂದರೆ 10,000 ಬರಹಗಳನ್ನು ಹೊಂದಿರುವವರು ಎಂದರ್ಥ. ಸುತ್ತಮುತ್ತಲ ಪ್ರಾಂತ್ಯದಲ್ಲಿಯೇ ಭೂತಯ್ಯನಂತೆ ಯಾರೂ ಇರಲಿಲ್ಲ. ಇದರರ್ಥ ಹಣಕಾಸಿನ ವಿಚಾರದಲ್ಲಿಯೂ ಹೌದು, ಜಿಪುಣತನದಲ್ಲಿಯೂ ಹೌದು. 


ಬೂತಯ್ಯನ ಬಳಿ ಅಷ್ಟು ಹಣವಿದ್ದರೂ.. ಆತನ ಬಟ್ಟೆಯಂತೂ ಜೀರ್ಣಾವಸ್ತೆಯಲ್ಲಿರುತ್ತಿತ್ತು. ಎಷ್ಟು ದಿನವಾಯಿತೋ ನೀರು ಕಾಣಿಸಿ ಎಂಬಂತೆ.. ಇನ್ನು ಎರಡು ಹೊತ್ತಿನ ಊಟ ಸೇರಿ ಒಂದೇ ಹೊತ್ತುರ್ಗಾಗುವಂತೆ ಊಟ ಮಾಡುತ್ತಿದ್ದದ್ದು. ಅದಕ್ಕೆ ಹೆಚ್ಚಿನ ಬಾರಿ ತರಕಾರಿ ಎಂದರೆ ಹಳ್ಳಿಯಲ್ಲಿ ಸುಲಭವಾಗಿ ಸಿಗುವ ಹಲಸಿನಕಾಯಿ. ಮನೆಗೂ ಅಷ್ಟೇ ಯಾರನ್ನೂ ಸೇರಿಸುತ್ತದೆ ಇರಲಿಲ್ಲ. ನಮ್ಮಿಂದ ಅವರಿಗೆ ಏನೋ ಕೆಲಸವಾಗಬೇಕು ಹಾಗಾಗಿಯೇ ಬರುತ್ತಾರೆ ಎಂಬ ಭಾವನೆಯಿತ್ತು. ಒಟ್ಟಿನಲ್ಲಿ ಸುತ್ತ ಮುತ್ತಲಿನವರಿಗೆ ಒಂದು ಕಿಲುಬು ಕಾಸನ್ನೂ ಕೊಡುತ್ತಿರಲಿಲ್ಲ. ಅಷ್ಟೇ ಅಲ್ಲ.. ಮೋಸ ಮಾಡಿ ಜನರಿಂದ ಹಣ ಪಡೆಯುತ್ತಿದ್ದದ್ದು ಹೌದು. ಅಕಸ್ಮಾತ್, ಭೂತಯ್ಯನ ಬಳಿ ಯಾರಾದರೂ ಸಾಲಕ್ಕೆ ಬಂದರೆ ಅವರ ಸಾಲ ಆ ಜನ್ಮದಲ್ಲಿ ಮುಗಿಯುವಂತೆ ಇರಲಿಲ್ಲ. ಹೆಚ್ಚಿನ ಬಾರಿ ಅವರು ಸತ್ತ ನಂತರ ಅವರ ಮನೆಯವರ ಬಳಿ ಹೋಗಿ ಪತ್ರವನ್ನು ತೋರಿಸಿ ಹಣ ವಸೂಲಿಗೆ ನಿಲ್ಲುತ್ತಿದ್ದ. ಕಡಿಮೆ ಎಂದರೂ 300 ಹಸುಗಳನ್ನು ಕದ್ದು ಮಾರಿದ್ದ. ಮೋಸ-ದಗಾದಲ್ಲಿ ಎತ್ತಿದ ಕೈ. 


ಲಂಕೆಯಲ್ಲಿರುವವರೆಲ್ಲಾ ರಾವಣರೇ.. ಎಂಬಂತೆ ಬೂತಯ್ಯ ಸತ್ತ ಮೇಲೆ ಅಯ್ಯುವೂ ಹಾಗೆಯೇ ಇದ್ದ. ಇದಕ್ಕೆ ಮೊದಲ ಕಾರಣ ಆತನ ತಂದೆ. ಬಗ್ಗಿದರೆ ತುಳಿದುಬಿಡುತ್ತಾರೆ ಹುಷಾರಾಗಿರು.. ಇಲ್ಲಿ ಯಾರು ಒಳ್ಳೆಯವರಿಲ್ಲ ಎನ್ನುವ ರೀತಿ ಪಾಠ ಮಾಡಿದ್ದ. ಕೊನೆಗಾಲದಲ್ಲಿ ಹಾಸಿಗೆ ಹಿಡಿದಾಗಲೂ ಇದೇ ಬೋಧನೆ. ಸುತ್ತಮುತ್ತಲಿನ ರೈತರು ಅಯ್ಯುವನ್ನು ಭೂತಯ್ಯನ ರೀತಿಯೇ ನೋಡುತ್ತಿದ್ದರು.. ಆತ ಸ್ವಲ್ಪ ಕರುಣೆ ತೋರಿದರೂ.. ಈತನಿಂದ ಆತನ ತಂದೆಯ ಆಸ್ತಿಯಲ್ಲವೂ ನೀರು ಪಾಲಾಗುತ್ತಿದೆ ಎನ್ನುವ ಕುಹಕವಾಡುತ್ತಿದ್ದರು. ಇದೆಲ್ಲವೂ ಅಯ್ಯುವನ್ನು ಮತ್ತಷ್ಟು ಕಟುಕನನ್ನಾಗಿಸಿತು. 


ಜಾಲಹಳ್ಳಿಯಲ್ಲಿ ಆಯ್ಯುವಿನ ಸಮವಯಸ್ಕನೊಬ್ಬನಿದ್ದ ಆತನೇ ಗುಳ್ಳ. ಬೂತಯ್ಯ ರಾವಣನಂತಿದ್ದರೆ.. ಈತ ಕೀಚಕನಂತೆ ಎಂಬ ಮಾತು ಅಲ್ಲೆಲ್ಲ ಜನಜನಿತವಾಗಿತ್ತು. ಬುಳ್ಳನೂ ಕಡಿಮೆಯೇನಿರಲಿಲ್ಲ. ಎಲ್ಲರ ಬಳಿ ಜಗಳಕ್ಕೆ ಹೋಗುತ್ತಿದ್ದರೂ.. ಬೂತಯ್ಯನ ಜೊತೆಗೆ ಮಾತ್ರ ಜಗಳಕ್ಕೆ ನಿಂತಿರಲಿಲ್ಲ. 


ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕರಿಯ ಹಾವು ಕಚ್ಚಿ ಸತ್ತಾಗ ಆತ ತೆಗೆದುಕೊಂಡಿದ್ದ ಸಾಲವನ್ನು ಮನ್ನಾ ಮಾಡಿ ಆತನ ಕುಟುಂಬಕ್ಕೆ ದಯೆ ತೋರಿಸಿದ್ದನು ಅಯ್ಯು. ಆಗ ಎಲ್ಲರ ಬಾಯಲ್ಲೂ ಇದು ಅಯ್ಯುವಿನ ಕರುಣೆ ಎಂಬ ಮಾತು ಹುಟ್ಟಲಿಲ್ಲ.. ಬದಲಾಗಿ ಈ ರೀತಿ ಮಾಡಿದರೆ ಈತ ಇದ್ದು ಬದ್ದುದಲ್ಲವನ್ನು ಮಾರಿಕೊಂಡು ಹೋಗಬೇಕಾಗುತ್ತದೆ ಎಂದರು. 


ಬೂತಯ್ಯನ ಕಾಲದಲ್ಲಿ ಗುಳ್ಳನ ತಂದೆ ಬೂತಯ್ಯನ ಹುಲ್ಲುಗಾವಲನ್ನು ಮಾಡಿಕೊಂಡಿದ್ದರು. ಅದಕ್ಕಾಗಿ ಅವರು ತಿಂಗಳಿಗೆ ಒಂದು ರೂಪಾಯಿಯಂತೆ ಹಣ ಕೊಡಬೇಕಿತ್ತು. ಈಗ ಕರಿಯನ ವಿಚಾರವನ್ನು ಕಂಡ ಗುಳ್ಳ.. "ಅಯ್ಯುವಿಗೆ ಹಣ ಕೊಟ್ಟರೆ ಕೊಡುತ್ತೇನೆ, ನಾನು ಕೊಟ್ಟಾಗ ತೆಗೆದುಕೊಳ್ಳಬೇಕು, ಹಣ ಕೊಡಲಾರೆ" ಎಂಬರ್ಥದ ಮಾತು ಹೇಳಿದ್ದು ಅಯ್ಯುವಿನ ಕಿವಿಗೆ ಬಿದ್ದು.. ಕೇಳಲು ಹೋದಾಗ, ಮಾತಿಗೆ ಮಾತು ಬೆಳೆದು ಇಬ್ಬರಲ್ಲೂ ಜಟಾಪಟಿ ನಡೆದು ಈ ವಿಚಾರ ಪೊಲೀಸರವರೆಗೂ ಹೋಯಿತು. ನಂತರ, ಕೋರ್ಟಿಗೆ. 


ಗುಳ್ಳ ಇದ್ದ್ದೆದಲ್ಲವನ್ನು ವಕೀಲರಿಗೆ ಕೊಟ್ಟು, ಅಡವಿಟ್ಟು ಬರಿಗೈ ಆದ. ಗುಳ್ಳ ಅಯ್ಯುವಿನಂತೆ ಹಣ ಉಳ್ಳವನಲ್ಲ. ಹಳ್ಳಿಯಲ್ಲಿ ಇದು ಯಾರಿಗೂ ಅಂತಹ ತಲೆಕೆಡಿಸಿಕೊಳ್ಳುವ ವಿಚಾರವಾಗಲಿಲ್ಲ. ಅಹಿರಾವಣ - ಮಹಿರಾವಣರಿಗೆ ಸರಿಯಾಗಿಯೇ ಆಗುತ್ತಿದೆ ಎಂದುಕೊಂಡರು. 


ಅಯ್ಯು ತಾನೇ ಮುಂದಾಗಿ ಅವನ ತಪ್ಪನ್ನು ಮನ್ನಿಸಿ, ರಾಜಿ ಮಾಡಿಕೊಳ್ಳಲು ಒಪ್ಪಿದ್ದರೂ.. ಗುಳ್ಳ ಅದಕ್ಕೆ ಒಪ್ಪುತ್ತಿರಲಿಲ್ಲ. ರೋಷದಲ್ಲಿ ಅವನು ಕುರುಡಾಗಿದ್ದ. ಗುಳ್ಳನ ಮನೆ ಹರಾಜಿಗೆ ಬಂದಾಗ ಅಯ್ಯುವೇ ಹಣ ಕೊಟ್ಟು ಅದನ್ನು ಖರೀದಿಸಿ, ಅವನು ಜೈಲು ಪಾಲಾಗುವುದನ್ನು ತಪ್ಪಿಸಿ ತನ್ನ ಹೊಲದಲ್ಲಿಯೇ ಕೆಲಸ ಮಾಡಿಕೊಂಡಿರಲು ಹೇಳಿದ. ಕೆಲಸದಲ್ಲಿ ಯಾವತ್ತೂ ಮುಂದೆಯೇ ಗುಳ್ಳ. ಹತ್ತು ವರ್ಷ ದುಡಿದು ಸಾಲವನ್ನೆಲ್ಲ ತೀರಿಸಿ ಅವನ ಋಣಮುಕ್ತನಾದ. ಆದರೆ, ದ್ವೇಷ ಹೋಗಿರಲಿಲ್ಲ. 


ಒಮ್ಮೆ ಕುಡಿದು ಅಯ್ಯುವನ್ನು ಸಾಯಿಸುವ ಮಾತಾಡುತ್ತಿದ್ದಾಗ ಆತನ ಹೆಂಡತಿ ಭಯ ಬಿದ್ದು ಅಯ್ಯುವಿನ ಬಳಿ ಹೋಗಿ ನಿಮ್ಮನ್ನು ಸಾಯಿಸುತ್ತಾನೆ ಎಂದಳು. ಅಯ್ಯುವಿಗೆ ಗುಳ್ಳನ ಹೆಂಡತಿಯ ಮೇಲು ನಂಬಿಕೆ ಬರಲಿಲ್ಲ. ಇದೇ ಕೊರಗಿನಲ್ಲಿ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ.. ಗರ್ಭಿಣಿಯಾಗಿದ್ದ ಅವಳನ್ನು ಬದುಕಿಸಿದ್ದು ಅಯ್ಯುವೇ.. 


ಇಷ್ಟಕ್ಕೆ ನಿಂತಿದ್ದರೆ ಆಗುತ್ತಿತ್ತೇನೋ.. ಆದರೆ ಇಷ್ಟಕ್ಕೇ ನಿಲ್ಲಲಿಲ್ಲ. ಊರಿನಲ್ಲಿ ಎಲ್ಲರೂ ಊರ ದೇವಿಯ ಜಾತ್ರೆ ಮಾಡಲು ಕೋಣ ಕಡಿಯಲು ಹೊರಡುವಾಗ, ಅಯ್ಯು ಅದಕ್ಕೆ ತಡೆಯಾಗಿ ನಿಂತ. ಪ್ರಾಣಿಬಲಿ ಬೇಡವೆಂದು ಅವರಲ್ಲಿ ಒಮ್ಮತ ಮೂಡಿಸಲು ಪ್ರಯತ್ನಿಸಿದ. ಆದರೆ, ಯಾರೂ ಅವನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅದರ ಬದಲಾಗಿ ಊರಿಗೆ ಕೆಟ್ಟದು ಮಾಡಲು ಅವನು ಹೀಗೆ ಮಾಡುತ್ತಿದ್ದಾನೆ ಎಂದು ತಪ್ಪು ತಿಳಿದು ಅವನ ಮನೆಗೆ ದಾಳಿ ಮಾಡಲು ಬಂದರು. ಆಗಲೂ ಸುಮ್ಮನಿದ್ದ ಅಯ್ಯು. ಮನೆಯಲ್ಲಿ ಇದ್ದಬದ್ದುದನ್ನೆಲ್ಲಾ ದೋಚಿ ಹೊರಟರು. ಆದರೆ, ಅಕಸ್ಮಾತ್ತಾಗಿ, ಕೊಟ್ಟಿಗೆಯಲ್ಲಿ ದನ ಬಿಚ್ಚುವಾಗ, ಲಾಂದ್ರ ಬಿದ್ದು ಹೊತ್ತಿಕೊಂಡ ಬೆಂಕಿ ಆತನ ಇಡೀ ಮನೆಯನ್ನು ಆವರಿಸಿತು. ಮರುದಿನ ಪೊಲೀಸ್ ಬಂದಾಗ ಅಯ್ಯು ತನ್ನ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದದ್ದು ಎಂದು ಊರವರನ್ನೆಲ್ಲಾ ಕಾಪಾಡುತ್ತಾನೆ. ಎಲ್ಲರಿಗೂ ಮೊಟ್ಟ ಮೊದಲ ಬಾರಿ ಅಯ್ಯುವಿನ ಒಳ್ಳೆಯತನದ ಅರಿವಾಗುತ್ತದೆ. 


ಅಯ್ಯುವಿನ ಚಿಕ್ಕಮ್ಮನಿಗೆ ಅನಾರೋಗ್ಯ ಎಂಬ ಕಾರಣಕ್ಕೆ, ಆತ ದೂರದ ಸ್ಥಳಕ್ಕೆ ಹೊರಟು ನಿಂತಾಗ.. ಆತನ ಬಾಮೈದ ಶಿಂಗ್ಲಾಚಾರಿ ಅಂದರೆ ಬುಂಡೆಕ್ಯಾತನನ್ನು, ಹೆಂಡತಿ-ಮಕ್ಕಳ ಜೊತೆಗೆ ಊರ ಹೊರಗಿನ ಮನೆಯಲ್ಲಿರಿಸುತ್ತಾನೆ. ಊರ ಹೊರಗಿನ ಮನೆ ಎಂದರೆ ಅದು ಅಣೆಕಟ್ಟಿಗೆ ಅಡ್ಡಲಾಗಿ ನಿರ್ಮಿಸಿದ ಜಾಗ. ಹೆಚ್ಚು ಕಡಿಮೆ 50 ವರ್ಷದಿಂದ ಅಲ್ಲಿ ಕಟ್ಟೆಯೊಡದಿರಲಿಲ್ಲ. ಅಷ್ಟು ಮಳೆಯೂ ಆಗಿರಲಿಲ್ಲ. ಆತ ಹೊರಡುವಾಗ ಮಳೆಗಾಲದ ಸಂದರ್ಭ. ಅಯ್ಯುವಿನ ಒಳ್ಳೆಯತನದ ಪ್ರತಿಫಲವಾಗಿ.. ಕಟ್ಟೊಯೊಡೆದಾಗ ಊರಿನ ಜನರು ಸೇರಿ ಆತನ ಹೆಂಡತಿ ಮಕ್ಕಳನ್ನು ರಕ್ಷಿಸುತ್ತಾರೆ. ತಾವಾಗಿಯೇ ಅವನ ಮನೆಯಿಂದ ಕದ್ದು ತಂದಿದ್ದ ತಮ್ಮ ಸಾಲ ಪತ್ರಗಳನ್ನು ಹಿಂದಕ್ಕೆ ಕೊಡುತ್ತಾರೆ. ಒಳ್ಳೆಯವರಿಗೆ ಒಳ್ಳೆಯತನಕ್ಕೆ ಎಂದಿಗೂ ಬೆಲೆ ಇದೆ ಎನ್ನುವ ಜೊತೆಗೆ, ಕೆಟ್ಟವರು ಕೂಡಾ ಒಳ್ಳೆಯ ಹಾದಿ ಹಿಡಿಯಬಹುದು.. ಜೊತೆಯಲ್ಲಿದ್ದವರನ್ನು ತಮ್ಮ ಒಳ್ಳೆಯತನದಿಂದಲೇ ಒಳ್ಳೆಯದರ ಕಡೆಗೆ ನಡೆಸಬಹುದು ಎಂಬುದನ್ನು ಹೇಳುತ್ತದೆ ಈ ಕಾದಂಬರಿ. 


ಚಲನಚಿತ್ರಕ್ಕೆ ಬಂದಾಗ ಕೆಲವೊಂದು ಬದಲಾವಣೆಗಳಾಗಿವೆ. ಚಿಕ್ಕ ಪುಟ್ಟ ಪಾತ್ರಗಳು ಹಾಸ್ಯದಿಂದ ಕಚಗುಳಿ ಇಡುತ್ತವೆ. ಇಲ್ಲಿ ಅಯ್ಯುವಿಗೆ ಜ್ಞಾನೋದಯವಾಗಿದ್ದು ಬೇರೆಯ ಸಂದರ್ಭದಲ್ಲಿ. ಗುಳ್ಳನ ತಂದೆಯ ಹೆಸರು ದೇವಯ್ಯ. ಬೂತಯ್ಯ ಸತ್ತಾಗ ಆತನ ಅಂತ್ಯ ಸಂಸ್ಕಾರಕ್ಕೆ ಒಬ್ಬರೂ ಬರುವುದಿಲ್ಲ. ಆದರೆ, ದೇವಯ್ಯ ಇಡೀ ಊರಿಗೆ ಪರೋಪಕಾರಿಯಾಗಿದ್ದವನು. ಆತನ ಅಂತ್ಯಸಂಸ್ಕಾರಕ್ಕೆ ಊರಿಗೆ ಊರೇ ಬಂದು ಕಣ್ಣೀರು ಮಿಡಿಯುತ್ತದೆ. 


ಯಾರದ್ದೋ ಸಾವಾದಾಗ ಭೂತಯ್ಯ ಆತನ ಹೆಣವನ್ನೂ ಎತ್ತಲು ಬಿಡದೆ, ಹಣ ನೀಡಿ ಎನ್ನುವ ಮಾತನಾಡುವಾಗ ದೇವಯ್ಯ ತಾನು ಜಾಮೀನಾಗಿ ನಿಲ್ಲುತ್ತಾನೆ. ಅಲ್ಲಿಯವರೆಗೂ ದೇವಯ್ಯನ ಹೆಸರಲ್ಲಿ ಯಾವ ಸಾಲ ಪತ್ರವೂ ಇರುವುದಿಲ್ಲ. ಹಾಗೆಂದು, ತಕ್ಷಣಕ್ಕೆ ದೇವಯ್ಯ ಹಣ ಕೊಡುವಂತಹಾ ಪರಿಸ್ಥಿತಿಯಲ್ಲಿಯೂ ಇರುವುದಿಲ್ಲ. ನಂತರ ಇದೇ ವಿಚಾರವಾಗಿ ಹಣ ಕೇಳಲು ಅಯ್ಯು ಹೋದಾಗ ಬುಳ್ಳನಿಗೂ, ಆತನಿಗೂ ಜಗಳವಾಗಿ ಹೊಡೆದಾಟವಾಗಿ ಪೋಲಿಸ್ ಠಾಣೆ, ಕೋರ್ಟು ಮೆಟ್ಟಿಲೇರುವಂತಾಗುತ್ತದೆ. 


ಇಲ್ಲಿ ಬುಂಡೆಕ್ಯಾತನ ಪಾತ್ರವಿದೆ. ಆದರೆ, ಬಾಮೈದನಲ್ಲ. ಬದಲಾಗಿ ಅಯ್ಯುವಿನ ಮಾವ ಆತ. ಮಹಾಭಾರತದ ಶಕುನಿಯಂತಹಾ ಪಾತ್ರ. ಕೊನೆಗೆ, ಆ ಮುಳುಗುವಂತಿರುವ ಮನೆಯಲ್ಲಿ ಆತ ಇರುವುದಿಲ್ಲ. ಕಾದಂಬರಿಯಲ್ಲಿ, ಊರಿನಲ್ಲಿದ್ದ ನಾಲ್ಕು ಜನರನ್ನು ಹೊತ್ತು ಬುಳ್ಳನ ಮುಂದಾಳತ್ವದಲ್ಲಿ ಆ ತೆಪ್ಪ ಹೊರಡುತ್ತದೆ. ಆದರೆ, ಚಲನಚಿತ್ರದಲ್ಲಿ ತೆಪ್ಪವನ್ನು ನಡೆಸುವವನು ಬುಳ್ಳ ಮಾತ್ರ. 


ಅಯ್ಯುವಿನ ಹೆಂಡತಿಯ ಪಾತ್ರವೂ ಇಲ್ಲಿ ಸದಾ ಮಾನವೀಯತೆಯನ್ನು ಬೋಧಿಸುತ್ತಾ, ಹೊಂದಿಬಾಳುವಂತೆ, ಒಳ್ಳೆಯದನ್ನು ಮಾಡುವಂತೆ ಪ್ರೇರೇಪಿಸುವ ಪಾತ್ರ. ಅಲ್ಲದೇ, ಬುಳ್ಳನ ಹೆಂಡತಿ ಆಕೆಯ ಊರಿನವಳೇ.. ಮೊದಲೇ ಪರಿಚಯ. 


ಬೂತಯ್ಯನ ಪಾತ್ರವನ್ನು ಕಾದಂಬರಿಯಲ್ಲಿ ಓದುವಾಗ ಅಯ್ಯೋ ಇಂತಹ ಭೀಕರ, ಕಡುಜಿಪುಣ, ಕ್ರೂರಿ ಇರುತ್ತಾನಾ ಎಂಬಂತಿದೆ. ಚಲನಚಿತ್ರದಲ್ಲಿ ಇದು ತೀರಾ ಅಷ್ಟರಮಟ್ಟಿಗೆ ಬಿಂಬಿತವಾಗಿಲ್ಲ. ಕಾದಂಬರಿಯ ಪಾತ್ರದಂತೆ ಚಲನಚಿತ್ರದ ಬುಳ್ಳ ಅಷ್ಟು ಕೆಟ್ಟವನೇನೂ ಅಲ್ಲ. ಬದಲಿಗೆ ಪರೋಪಕಾರಿಯಾಗಿದ್ದು, ಜನರ ನಡುವೆ ಇದ್ದವನು. ಒಂದು ರೀತಿಯ ಕ್ರಾಂತಿಕಾರಿಯ ಪಾತ್ರ ಎಂದರೂ ತಪ್ಪಾಗಲಾರದು. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಚಲನಚಿತ್ರ ನೀಡುವ ಸಂದೇಶ.


ಗುಳ್ಳನಾಗಿ ವಿಷ್ಣುವರ್ಧನ್ ಹಾಗೂ ಅಯ್ಯುವಾಗಿ ಲೋಕೇಶ್ ಇಬ್ಬರೂ ಪರಸ್ಪರ ಪೈಪೋಟಿ ಕೊಡುವಂತೆ ನಟಿಸಿದ್ದಾರೆ. ಬೂತಯ್ಯನಾಗಿ ಎಂ.ಪಿ ಶಂಕರಂತೂ ಅದ್ಭುತವಾಗಿ ನಟಿಸಿದ್ದಾರೆ. ಇದಕ್ಕೆ ಪೂರಕವಾಗಿರುವ ಎಲ್ಲಾ ಪಾತ್ರಗಳು ಈ ಚಲನಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿವೆ. ಕೊನೆಯ ದೃಶ್ಯ ಹಾಗೂ ಉಪ್ಪಿನಕಾಯಿಯ ದೃಶ್ಯ ತಟ್ಟನೆ ನೆನಪಾಗುತ್ತವೆ.


ಚಿ.ಉದಯಶಂಕರ್, ವಿಜಯ ನರಸಿಂಹ, ಆರ್.ಎನ್ ಜಯಗೋಪಾಲ್ ಅವರು ಬರೆದಿರುವ ನಾಲ್ಕು ಗೀತೆಗಳು ಚಲನಚಿತ್ರಕ್ಕೆ ಸಂದರ್ಭಕ್ಕೆ ಹೊಂದಿಕೊಂಡು ಗುನುಗುನಿಸುವಂತಿವೆ. 'ವಿರಸವೆಂಬ ವಿಷಕೆ' ಎನ್ನುವ ಗೀತೆ ಒಂದು ನೀತಿ ಪಾಠದಂತಿದೆ. 


ಈ ನೀಳ್ಗತೆಯನ್ನು ಚಲನಚಿತ್ರವನ್ನಾಗಿಸಿದ ಕುರಿತಾಗಿ ಇನ್ನೊಂದು ಮಾತು ಹೇಳಬೇಕಿದ. ಅದೇನೆಂದರೆ, ಒಂದು ನೀಳ್ಗತೆಯನ್ನು ಚಲನಚಿತ್ರವಾಗಿಸುವುದು ಸುಲಭವಲ್ಲ. ಏಕೆಂದರೆ, ಅದಕ್ಕೆ ಸತ್ವಯುತವಾದ ಕಥೆ ಬೇಕು. ಅಂತಹಾ ಸತ್ವಯುತವಾದ ಕಥೆಯನ್ನು ಅಷ್ಟು ಕಡಿಮೆ ಪದಗಳಲ್ಲಿ ಬರೆಯುವ ಸತ್ವವಿದ್ದ ಗೊರೂರರಿಗೆ ನಮನಗಳು. ಈ ಕಥಾ ಸಂಕಲನದ ಮೊದಲ ಕಥೆಯನ್ನು ಓದಿದ ನಂತರ ಉಳಿದ 11 ಕಥೆಗಳನ್ನು ಓದಬೇಕೆನಿಸಿದೆ. ಮುಂದಿನ ದಿನಗಳಲ್ಲಿ ಆ ಕಥೆಗಳನ್ನು ಓದಿ ಪರಿಚಯಿಸುವೆ.


ಕಾದಂಬರಿ ಹಾಗೂ ಚಲನಚಿತ್ರಗಳು ಎರಡೂ ಸಹ ಇಷ್ಟವಾದವು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ