ಪುಸ್ತಕದ ಶೀರ್ಷಿಕೆ : ವಕ್ರರೇಖೆ
ಲೇಖಕರು : ಎ.ಪಿ ಮಾಲತಿ
ಪ್ರಕಾಶಕರು : ಗೀತಾ ಬುಕ್ ಹೌಸ್
ಮೊದಲನೇ ಮುದ್ರಣ : 1993
ಪುಟಗಳು : 116
ಎ.ಪಿ ಮಾಲತಿಯವರ ವಕ್ರರೇಖೆ ಎಂಬ ಕಾದಂಬರಿ 1991ರಲ್ಲಿ ವನಿತಾ ಮಾಸಪತ್ರಿಕೆಯವರು ಏರ್ಪಡಿಸಿದ್ದ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ನಂತರ ಪುಸ್ತಕವಾಗಿ ಪ್ರಕಟವಾಗಿದೆ.
ವಕ್ರರೇಖೆ ಇದು ಮಧ್ಯಮವರ್ಗದ ಕುಟುಂಬಕ್ಕೆ ಸಂಬಂಧಿಸಿದ ಕಥೆ ಎನಿಸಿದರೂ ಇಲ್ಲಿನ ಜನರ ಜೀವನ ಅಷ್ಟೊಂದು ಸರಳವಾಗಿಲ್ಲ. ವಕ್ರರೇಖೆಯಲ್ಲಿ ಬದುಕುತ್ತಿರುವವರ ಬದುಕನ್ನು ಸರಿಪಡಿಸುವುದು ಅದು ಅಷ್ಟು ಸರಳವಲ್ಲ ಎನ್ನುವ ಸಂದೇಶವನ್ನು ನೀಡುತ್ತಿದೆ ಈ ಕಾದಂಬರಿ. ಹಣ, ಅಂತಸ್ತಿನ ದುರಾಸೆಗೆ ಬಿದ್ದ ತಾಯಿ ಮಕ್ಕಳ ಭವಿಷ್ಯವನ್ನೇ ವಕ್ರ ಮಾಡಿದಳು. ಆದರೆ, ಮತ್ತೆ ಅದನ್ನು ನೇರಗೊಳಿಸುವುದು ಸಾಧ್ಯವೇ..??
ಮಂಜುನಾಥ ಶಿರಡಿ ಸಾಯಿಬಾಬಾ ದರ್ಶನಕ್ಕೆ ಮುಂಬೈಯಿಂದ ಬಂದಿದ್ದವನು ಮತ್ತೆ ಮುಂಬೈಗೆ ವಾಪಸ್ಸು ಹೋಗಲು ಮನ್ ಮಾಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ. ಆದರೆ, ಮುಂಬೈಗೆ ಹೋಗಬೇಕಾದ ರೈಲು ಇನ್ನೂ 10 ನಿಮಿಷ ತಡವಾಗಿ ಬರುತ್ತದೆ ಎನ್ನುವ ಪ್ರಕಟಣೆ ಕೇಳಿ ಬಂತು. ಹಾಗೆ ಕಾಯುತ್ತಿದ್ದಾಗಲೇ.. ಆತನಿಗೆ ಅಲ್ಲೆಲ್ಲ ಎದ್ದಿದ್ದ ಗುಲ್ಲು ಕೇಳಿಸಿತು. ಅದೇನೆಂದರೆ, ಪ್ಲ್ಯಾಟ್ಫಾರ್ಮ್ ಮೇಲೆ ಯಾರೋ ಒಬ್ಬ ವ್ಯಕ್ತಿ ಹೃದಯಾಘಾತದಿಂದ ಸತ್ತು ಬಿದ್ದಿದ್ದ. ಅವನು ಯಾರೇಂಬ ಸಹಜ ಕುತೂಹಲದಿಂದ ಹೋಗಿ ನೋಡಿದ ಮಂಜುನಾಥನಿಗೆ ಅರಿವಾದದ್ದು ಆರು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ತನ್ನ ತಂದೆಯೇ ಅಲ್ಲಿ ಹೆಣವಾಗಿರುವವನು ಎಂದು. ಈಗಾಗಲೇ ತನ್ನ ತಂದೆ ಸತ್ತಿರಬಹುದು ಎಂದು.. ತನ್ನ ತಂದೆಯ ಅಂತ್ಯಕ್ರಿಯೆ ಮಾಡಿದ್ದಕ್ಕೆ ದುಃಖಿಸಿದನು. ಮೊದಮೊದಲಿಗೆ ಅಲ್ಲಿನ ರೈಲ್ವೆ ಪೊಲೀಸರು ಅದನ್ನು ನಂಬಲಿಲ್ಲ. ಹಣಕ್ಕಾಗಿ ಈ ರೀತಿ ಹೇಳುತ್ತಿರುವವನೆಂದು ಅನುಮಾನಿಸಿದರು. ನಂತರ, ಅವನ ತಂದೆ ಶೇಖರನ ಜೇಬಿನಲ್ಲಿದ್ದ ಡೈರಿ ಹಾಗೂ ಫೋಟೋವನ್ನು ನೋಡಿದ ನಂತರ, ಜೊತೆಗೆ ಅಲ್ಲಿಯ ಇದ್ದ ಕನ್ನಡದ ಒಬ್ಬರು ಸ್ಟೇಷನ್ ಮಾಸ್ಟರ್ ವಾಮನ ಹೆಗಡೆ ಅವರ ದೆಸೆಯಿಂದ ಅದು ಮಂಜುನಾಥನ ತಂದೆ ಶೇಖರನೇ ಎಂಬುದು ಸ್ಪಷ್ಟವಾಯಿತು.
ವಾಮನ ಹೆಗಡೆಯವರ ಹಾಗೂ ಅವರ ಮನೆಯವರ ಸಹಾಯದಿಂದ ಆತ ತನ್ನ ತಂದೆಯ ಅಂತ್ಯಸಂಸ್ಕಾರಗಳನ್ನೆಲ್ಲಾ ಮುಗಿಸಿ ತನ್ನ ಮನೆಯವರಿಗೆ ಈ ವಿಚಾರ ತಿಳಿಸಲು ಹೊರಟ. ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲ. ಆತನು ತನ್ನ ಕುಟುಂಬದವರ ಬಂಧಗಳನ್ನು ಕಳಚಿಕೊಂಡು ಒಂದೆರಡು ವರ್ಷವೇ ಆಗಿತ್ತು. ಆತನ ತಾಯಿಯ ಹೆಸರು ಭವಾನಿ. ಶೇಖರ ಹಾಗೂ ಭವಾನಿ ದಂಪತಿಗಳಿಗೆ ನಾಲ್ಕು ಜನ ಮಕ್ಕಳು. ಮೊದಲನೆಯವಳು ಜಯ. ಎರಡನೆಯವನು ಮಂಜುನಾಥ. ಮೂರನೆಯವಳು ಶೀಲ ಹಾಗೂ ಕೊನೆಯವಳು ಸುಮನ.
ಬೆಂಗಳೂರಿನಲ್ಲಿದ್ದ ಆತನ ಮನೆ 'ಮೃತ್ಯುಂಜಯ'ಕ್ಕೆ ಹೋಗಲು ನಿರ್ಧರಿಸಿ ಆಟ ಬೆಂಗಳೂರಿನ ದಾರಿ ಹಿಡಿದ. ವಾಮನ ಹೆಗಡೆಯವರು ಹಾಗೂ ಅವರ ಮಗಳು ಭಾಗ್ಯಳಿಗೂ ಅದೇ ವಿಳಾಸ ತಿಳಿಸಿದ್ದ. ಆದರೆ, ಅಲ್ಲಿ ಹೋಗಿ ನೋಡಿದರೆ ಆ ಮನೆಯಲ್ಲಿ ಅವನ ಕುಟುಂಬದವರಾರೂ ಇರಲಿಲ್ಲ .
ಅದು ಅವರ ಸ್ವಂತ ಮನೆಯಾಗಿತ್ತು. ಶೇಖರನ ಸಂಪಾದನೆಯಲ್ಲಿ ತೆಗೆದುಕೊಂಡಿದ್ದ ಸೈಟು ನಂತರ ಭವಾನಿಯ ಹಠದಿಂದ ಅವಳ ಹೆಸರಿಗೆ ಸೈಟು ಹಾಗೂ ಮನೆಯಾಗಿ ರಿಜಿಸ್ಟರ್ ಆಗಿತ್ತು. ಆದರೆ, ಈಗ ಅವರು ಸಾಲ ತೀರಿಸಲು ಅದೆಲ್ಲವನ್ನು ಮಾರಿ ಎಲ್ಲಿಯೋ ಹೋಗಿಬಿಟ್ಟಿದ್ದರು.
ಅವರ ಕುರಿತ ವಿಚಾರ ತಿಳಿದುಕೊಳ್ಳಲು ತನ್ನ ತಂಗಿ ಶೀಲ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಹೋಟೆಲ್ ಗೆ ಹೋಗಿ ಕೇಳಿದರೆ, ಅವರು ಶೃಂಗೇರಿಗೆ ಹೋಗಿದ್ದಾರೆ ಎನ್ನುವ ಉತ್ತರ ಬಂದಿತು. ತನ್ನ ನಂತರ ತನ್ನ ದೊಡ್ಡ ಮಾವ ಹಾಗೂ ಸಣ್ಣ ಮಾವನನ್ನು ವಿಚಾರಿಸಿದರೆ ಅಲ್ಲಿಯೂ ಒಂದು ರೀತಿಯ ವ್ಯಂಗ್ಯದ ನೋಟ ಹಾಗೂ ಕುಹಕದ ಮಾತುಗಳೇ ಕೇಳಿ ಬಂದವು. ನಂತರ ಅಕ್ಕ ಜಯಾಳ ಮನೆಗಾದರೂ ಹೋಗಿರಬಹುದು ಎಂದು ಅಲ್ಲಿಗೆ ಹೋಗಿ ನೋಡಿದರೆ ಅಲ್ಲಿಯೂ ಅವರಿರಲಿಲ್ಲ.
ಜಯ ಅಷ್ಟು ಬುದ್ಧಿವಂತೆಯಲ್ಲ. ಒಂದು ರೀತಿಯ ಮಂಕುಬುದ್ಧಿಯವಳು. ಆಕೆಯನ್ನು ಮದುವೆಯಾಗಿದ್ದ ಸದಾನಂದ ಆ ಹಳ್ಳಿಯಲ್ಲಿ ಶ್ರೀಮಂತನು ಎಂದು ಹೇಳಬಹುದಾದರೂ.. ಆತ ಮಂಜುನಾಥನಿಗೆ ಏಕೋ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಅಲ್ಲದೆ, ಅವನ ದಾಕ್ಷಿಣ್ಯದಲ್ಲಿ ಇನ್ನೂ ಇರಲು ಇಷ್ಟವಾಗದೆ, ಅಲ್ಲಿಂದ ಹೊರಟ. ಆದರೆ, ಹೊರಡುವ ಮುನ್ನ ಜಯಾಳ ಬದುಕು ಹೇಗಿತ್ತು ಎಂಬುದನ್ನು ಒಮ್ಮೆ ನೋಡಿದ. ಅದು ಕೂಡ ತನ್ನ ತಾಯಿ ಮಾಡಿದ್ದ ವಕ್ರ ಬುದ್ಧಿಯ ಕೆಲಸದ ಫಲವೇ ಎಂಬುದು ಅವನಿಗೆ ಗೊತ್ತಿತ್ತು. ಆದರೆ, ಸರಿಯೋ-ತಪ್ಪೋ, ಕಷ್ಟವೋ-ಸುಖವೋ ಜಯ ಅಲ್ಲಿಗೆ ಹೊಂದಿಕೊಂಡು ಬಾಳಲೇ ಬೇಕಿತ್ತು .
ಪುನಃ ಬೆಂಗಳೂರಿಗೆ ಬಂದು ಶೀಲಾಳನ್ನು ಸಂಪರ್ಕಿಸಲು ಪ್ರಯತ್ನಿಸಿದ. ಈ ಬಾರಿ ಶೀಲ ಸಿಕ್ಕಳು. ಆದರೆ, ಮೊದಲು ಚೆಲ್ಲುಚೆಲ್ಲು ಎಂಬಂತಿದ್ದ ಹುಡುಗಿಯ ಬದುಕು ಈಗ ಅದೆಷ್ಟು ಬದಲಾಗಿದೆ ಎನ್ನಿಸಿತು ಮಂಜುನಾಥನಿಗೆ. ಅದರ ಅರಿವಾದ ಅವನು ತನ್ನ ತಾಯಿಯ ಬುದ್ಧಿಗೆ ಶಪಿಸಿದ. ಶೀಲ ಮೊದಲಿಗೆ ಹೋಟೆಲ್ ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡಲು ತಂದೆ ಒಪ್ಪಿಗೆ ನೀಡದಿದ್ದರೂ.. ತಾಯಿಯ ಕುಮ್ಮಕ್ಕಿನಿಂದ ಅವಳು ಅಲ್ಲಿಗೆ ಸೇರುವಂತಾಗಿತ್ತು. ಆದರೆ, ಅಂದಿನಿಂದ ಅವಳ ಬದುಕಿನ ದಿಕ್ಕು ಬದಲಾಗಿತ್ತು. ಒಬ್ಬರು ಒಂದೊಂದು ರೀತಿಯಲ್ಲಿ ಮಾತನಾಡಲು ಶುರು ಮಾಡಿದ್ದರು. ಇದರಿಂದ ಅವಳ ತಂಗಿ ಸುಮನಾಳ ಬದುಕು ಸಹಾ ಕಷ್ಟವೇ ಆಯಿತು. ಆದರೆ, ತಾಯಿ ಹಾಗೂ ತಂಗಿ ಸುಮನ ಕೂಡ ಈಗ ಅವಳ ಬಳಿ ಇರಲಿಲ್ಲ. ತಂದೆಯ ವಿಚಾರ ತಿಳಿಸಿದವನೇ ತಂಗಿ ಸುಮನ ಹಾಗೂ ತಾಯಿ ಇರುವಲ್ಲಿಗೆ ಹೊರಟ.
ತನ್ನ ಮುದ್ದಿನ ತಂಗಿ ಸುಮನಾಳ ಪರಿಸ್ಥಿತಿಯನ್ನು ನೋಡಿದ ಮೇಲೆ ಅವನಿಗೆ ಎದೆ ಒಡೆದು ಹೋದಂತಾಯಿತು. ಸುಮನಾಳ ಪರಿಸ್ಥಿತಿ ಅಷ್ಟು ಘೋರವಾಗಿದ್ದಕ್ಕೆ ಕಾರಣ ಅವರ ತಾಯಿ ಭವಾನಿಯೇ ಎಂದು ಯೋಚಿಸಿದ.
ಆದರೆ, ನಿಜಕ್ಕೂ ಇದೆಲ್ಲದಕ್ಕೂ ಕಾರಣರು ಯಾರು..? ಹೆಂಡತಿಯನ್ನು ಹದ್ದುಬಸ್ತಿನಲ್ಲಿಡದೆ ಅವಳಿಷ್ಟಕ್ಕೆ ತಕ್ಕಂತೆ ಬಿಟ್ಟ ಗಂಡ ಶೇಖರನೇ..?? ಅಥವಾ ತಾಯಿಯಾಗಿ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಭವಾನಿಯೇ..?? ಅಥವಾ ಇದೆಲ್ಲದರಿಂದ ದೂರವೇ ನಿಂತು ತನ್ನ ಪಾಡಿಗೆ ತಾನಿದ್ದ ಮಂಜುನಾಥನೇ..?? ಅಥವಾ ಸುಮನಾಳೇ..?? ಶೀಲಳೇ..? ಅಷ್ಟಕ್ಕೂ.. ಜಯ ಹಾಗೂ ಸದಾನಂದನ ದಾಂಪತ್ಯ ಹೇಗಿತ್ತು..?? ಅಂದು ಮಂಜುನಾಥನಿಗೆ ತಿಳಿದ ರಹಸ್ಯವೇನು..?? ಶೀಲ, ಸುಮನಾ ಹಾಗೂ ಭವಾನಿ ಒಟ್ಟಿಗೆ ಇಲ್ಲದ ಕಾರಣವೇನು..?? ಮಂಜುನಾಥ ಮನೆ ಬಿಟ್ಟು ಹೋದುದೇಕೆ..?? ಸುಮನಾಳಿಗೆ ಆ ಘೋರಸ್ಥಿತಿ ಬಂದದ್ದೇಕೆ..? ಶೇಖರ ಆರು ವರ್ಷದ ಹಿಂದೆಯೇ ಮನೆ ಬಿಟ್ಟು ಹೋದದ್ದೇಕೆ..??
ಇದು ಮನಸ್ಸು ಹಾಗೂ ಸಂಬಂಧಗಳ ಸಂಕೀರ್ಣತೆಯನ್ನು ಬಳಸಿ ಕಟ್ಟಿಕೊಟ್ಟಿರುವ ಕಥೆ. ಇಲ್ಲಿ ಯಾರ ಬದುಕು ಸರಳ ರೇಖೆಯಲ್ಲಿತ್ತು ಹಾಗೂ ಯಾರದ್ದು ವಕ್ರರೇಖೆಯಲ್ಲಿತ್ತು ಓದಿ ನಿರ್ಧರಿಸಿ.
ಈ ಕಿರು ಕಾದಂಬರಿಯ ಅಂತ್ಯ ಒಂದು ರೀತಿಯ ಓಪನ್ ಎಂಡೆಡ್ ಮಾದರಿಯಲ್ಲಿದೆ. ಮುಂದಿನ ಯಾವುದಾದರೂ ಕಾದಂಬರಿ ಎಳೆಯಿಂದ ಶುರುವಾಗಿರಬಹುದೇನೋ.. ನನಗೆ ಮಾಹಿತಿ ಇಲ್ಲ. ಏಕೆಂದರೆ, ಈ ಅಂತ್ಯಗಳಿಂದಲೇ ಮತ್ತೊಂದು ಕಿರು ಕಾದಂಬರಿ ರೂಪುಗೊಳ್ಳಬಹುದು. ಈ ರೀತಿಯ ಓಪನ್ ಎಂಡೆಡ್ ಅಂತ್ಯ ಕೊಡುವುದು ವಿರಳವಾದ ಕತೆಗಾರರು. ಎಲ್ಲದಕ್ಕೂ ತಾರ್ಕಿಕ ಅಂತ್ಯ ಸಿಗುವುದಕ್ಕಿಂತ ಓದುಗನ ಆಲೋಚನೆಗೆ ಬಿಡುವುದು ಕೂಡ ಕಥೆಗಾರರ ಬರವಣಿಗೆಯ ಶೈಲಿಯಲ್ಲಿ ವಿಭಿನ್ನತೆಯನ್ನು ತೋರಿಸುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ