ಮಂಗಳವಾರ, ಏಪ್ರಿಲ್ 7, 2026

ಮನೀಷೆ (ಪುಸ್ತಕ ಯಾನ - 79)

ಪುಸ್ತಕದ ಶೀರ್ಷಿಕೆ : ಮನೀಷೆ

ಲೇಖಕರು : ವಸುಧೇಂದ್ರ

ಪ್ರಕಾಶಕರು : ಛಂದ ಪುಸ್ತಕ

ಮೊದಲನೇ ಮುದ್ರಣ : 1998

ಏಳನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 92

ಬೆಲೆ : 100 ರೂ.


ಮನೀಷೆ ಕಥಾ ಸಂಕಲನ ವಸುಧೇಂದ್ರ ಅವರ ಮೊದಲ ಕಥಾ ಸಂಕಲನ. ಇವರ ಇನ್ನಿತರ ಪುಸ್ತಕಗಳನ್ನು ಓದಿದ ನಂತರ ಈ ಪುಸ್ತಕವನ್ನು ಓದಿದ್ದು.. ಆದರ,  ಈ ಕಥೆಗಳಾವುವೂ ಅವರ ಮೊದಲು ಬರೆದ ಕಥೆಗಳು ಎಂಬ ಭಾವವನ್ನು ಹುಟ್ಟಿಸುವುದಿಲ್ಲ. ಹೆಚ್ಚಿನ ಕಥೆಗಳು ಮಡಿ ಅದರಲ್ಲೂ ಮಡಿ ಹೆಂಗಸರ ಜೀವನಶೈಲಿಯದ್ದಾಗಿದೆ. ಈ ಜೀವನಶೈಲಿ ಇತ್ತೀಚಿಗೆ ತೀರಾ ಕಡಿಮೆ ಎಂದು ಹೇಳಬಹುದು. ಇಲ್ಲಿನ ಕಥೆಗಳಲ್ಲಿ ಕಥೆಗಾರರ ಊರು ಬಳ್ಳಾರಿ ಹಾಗೂ ಸಂಡೂರಿನ ಭಾಗದ ಕಥೆಗಳ ಚಿತ್ರಣಗಳಿವೆ. ಈಗ ಅಲ್ಲಿನ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ.. ಆದರೆ, ಬಹುತೇಕ ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಈ ಕ್ರಮ ಈಗ ನಾನೆಲ್ಲೂ ಕಂಡಿಲ್ಲ.


 ಪುಸ್ತಕದ ಅರ್ಪಣೆ ವಿಭಿನ್ನವಾಗಿದೆ. "ಸಮಾಜದ ಮೌಢ್ಯಕ್ಕೆ ಬದುಕನ್ನು ಬಲಿಕೊಟ್ಟ ಎಲ್ಲಾ ಮಡಿ ಹೆಂಗಸರಿಗೆ" ಎನ್ನುವುದು ಅವರಲ್ಲಿರುವ ಸೂಕ್ಷ್ಮ ಆಲೋಚನೆ ಹಾಗೂ ಅವರಿಗಾಗಿ ಮಿಡಿಯುವ ಮನಸ್ಸನ್ನು ತೋರಿಸುತ್ತದೆ.


ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ. 


ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೊಳ್ರೋ : 

ಕಮಲಕ್ಕ ಗೋಪಣ್ಣನ ಮನೆಗೆ ಹೊರಟಾಗ ಮಗ ವಾಜಿ ತುಂಬಿದ ಬಸ್ಸಿನಲ್ಲಿಯೂ ಸೀಟು ಹಿಡಿದದ್ದು ಹೆಮ್ಮೆ ಎನಿಸಿತು. ಮಗ ಕೈಗೆ ಬಂದ ಎನ್ನುವ ತೃಪ್ತಿ ಅವಳಿಗೆ ಅವಳಲ್ಲಿ ಕಂಡಿತು. ಆದರೆ, ಗೋಪಣ್ಣನ ಮನೆಗೆ ಬರುವಾಗ ಇದ್ದ ತೃಪ್ತಿ ಹೋಗುವಾಗಲೂ ಉಳಿದಿತ್ತಾ..??

ಕಮಲಕ್ಕ ಮಡಿ ಹೆಂಗಸು. ಗಂಡನನ್ನು ಕಳೆದುಕೊಂಡಿದ್ದ ಆಕೆಗೆ ಇದ್ದೊಬ್ಬ ಮಗನೇ ಸರ್ವಸ್ವ. ಆದರೆ, ಅವನ ಮುಖದ ಮೇಲೆ ಕಾಣಿಸಿಕೊಂಡ ಬಿಳಿ ಚುಕ್ಕೆಯೊಂದು ಅವನ ಬದುಕಿಗೆ ಒಂದು ಕಪ್ಪು ಚುಕ್ಕಿಯನ್ನು ಅಂಟಿಸಿಬಿಟ್ಟಿತು. ಅದು ತೊನ್ನು ಎಂದೇ ತಿಳಿದ ಇತರರಿಗೂ ಹಾಗೂ ಮಗನ ಕಲೆ ತೊನ್ನು ಅಲ್ಲವೆಂಬ ಕಮಲಕ್ಕನ ವಾದ ಹಾಗೂ ನಂಬಿಕೆಗೂ ಇರುವ ಘರ್ಷಣೆ ಇಲ್ಲಿದೆ. ತೊನ್ನು ಇರುವವರನ್ನು ಆ ಕಾಲದಲ್ಲಿ ಕಾಣುತ್ತಿದ್ದ ರೀತಿ ಚಿತ್ರಿತವಾಗಿದೆ. 


ಮನೀಷೆ

ಈ ಪುಸ್ತಕ ಕೊಳ್ಳುವುದಕ್ಕೂ ಮೊದಲು ಶೀರ್ಷಿಕೆ ವಿಭಿನ್ನವಾಗಿದ್ದುದರಿಂದ ಈ ಶೀರ್ಷಿಕೆಯ ಅರ್ಥ ಹುಡುಕಿದ್ದೆ. ವಿವಿಧ ಅರ್ಥಗಳಿದ್ದರೂ... ಕಥೆಯನ್ನು ಓದಿದ ನಂತರ ಇದಕ್ಕೆ ಸೂಕ್ತ ಅನ್ನಿಸಿದ ಅರ್ಥವೆಂದರೆ.. ಜ್ಞಾನ, ತಿಳುವಳಿಕೆ, ನಂಬಿಕೆ, ಅನುಭವ ಇವುಗಳ ಆಧಾರದ ಮೇಲೆ ಮತ್ತೊಬ್ಬರನ್ನು ಹೀಗೆ ಎಂದು ನಿರ್ಧರಿಸುವುದು ಅಥವಾ ಒಂದು ಉದ್ದೇಶ.

ಸುಬ್ಬುವನ್ನು ಆತ ಹೀಗೆಯೇ ಎಂದು ನಿರ್ಧರಿಸುವಲ್ಲಿ ಎಡವಿದನಾ.. ಅಥವಾ ತನ್ನನ್ನು ತಾನು ಆತನಿಗೆ ಹೋಲಿಸಿಕೊಂಡು, ಬೇರೆಯದ್ದೇ ರೀತಿಯ ಭಾವ ಅನುಭವಿಸಿದನಾ..?? 

ಸುಬ್ಬುವಿನ ಬದುಕು ಹಾಗೂ ತನ್ನ ಬದುಕಿಗೂ ಇರುವ ಸಾಮ್ಯತೆಗಳನ್ನು ಹೋಲಿಸಿಕೊಂಡಾಗ, ಆತನನ್ನು ಆತ ಕಂಡುಕೊಳ್ಳುವ ಪರಿಗೂ.. ಜವರಯ್ಯನ ದೃಷ್ಟಿಯಲ್ಲಿ ಸುಬ್ಬು ಕಂಡ ಪರಿಗೂ ವ್ಯತ್ಯಾಸವಿದೆ. ಅಷ್ಟಕ್ಕೂ.. ಆತನಿಗೆ ಆತ ಕಳೆದುಕೊಂಡದ್ದೇನು ಎನ್ನುವುದು ಗೊತ್ತಾಯಿತೇ..?? ಆತ ಕಳೆದುಕೊಂಡದ್ದು ಆತನಿಗೆ ಸಿಕ್ಕಿತೇ..?? ಕೊಂಚ ಮಾರ್ಮಿಕವೆನಿಸುವ ಕಥೆ ಇದು.


ಹುಲಿಯ ಬೆನ್ನೇರಿ 

ಕಾಶವ್ವನಿಗೊಂದು ಕನಸು ಬಿದ್ದಿತು. ಹಾಗೆ ಬಿದ್ದ ಕನಸು ಆಕೆಯನ್ನು ತಳಮಳಗೊಳ್ಳುವಂತೆ ಮಾಡಿತ್ತು. ಅಷ್ಟಕ್ಕೂ.. ಕನಸುಗಳಿಗೆ ಅರ್ಥವಿದೆಯಾ..?? ಹೀಗೆ ನೋಡಿದರೆ ಹೆಚ್ಚಿನ ಕನಸುಗಳು ನಮ್ಮ ಮನಸ್ಸಿನ ಆಲೋಚನೆಯ ಪ್ರತಿಬಿಂಬದಂತೆಯೇ ಎನಿಸುತ್ತದೆ. ಕೆಲವು ಕನಸುಗಳು ಏನನ್ನೋ ಸೂಚಿಸುವಂತಿರುತ್ತವೆ. ಕಾಶವ್ವ ಹಾಗೆ ಕಂಡ ಕನಸಿನ ಅರ್ಥವೇನು..?? ಆಕೆಗೆ ಸಿಕ್ಕ ಸೂಚನೆ ಏನು..??

ಗಂಡನನ್ನು ಒಲಿಸಿಕೊಳ್ಳಬೇಕೆಂದು ಕಲಿತ ಒಂದು ವಿದ್ಯೆ ಕಾಶವ್ವನನ್ನು ಬಿಡಲೊಲ್ಲದು. ಈ ಕನಸಿನ ನಂತರವಾದರೂ.. ಕಾಶವ್ವ ಅದರಿಂದ ಪಾರಾದಳೇ..?? ಹುಲಿಯ ಬೆನ್ನೇರಿದವರು ಇಳಿಯುವುದೆಂತು..??


ಬಾಗಿಲಿಂದಾಚೆ, ಪೋಗದಿರಲೋ ರಂಗ 

ಮನೆಯಲ್ಲಿ ಮಕ್ಕಳಿದ್ದರೆ.. ಅದರಲ್ಲೂ ಒಬ್ಬರೇ ಮಕ್ಕಳಾಗಿದ್ದರಂತೂ ತಂದೆ-ತಾಯಿಯರ ಅತಿ ಕಾಳಜಿ,ಪ್ರೀತಿ ಕೆಲವೊಮ್ಮೆ ಅವರಿಗೆ ಉಸಿರು ಕಟ್ಟಿಸುವಂತಾಗಿಬಿಡುತ್ತದೆ. ಪುಟ್ಟನ ಅಮ್ಮ ಕೂಡ ಅದೇ ರೀತಿ ಪುಟ್ಟನನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದಳು. ಆದರೆ, ಪುಟ್ಟನಿಗೆ ಅಮ್ಮನ ಪ್ರೀತಿ ಅವನ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವಂತೆ ಅನ್ನಿಸುತ್ತಿತ್ತು. ಆದರೆ, ತೀರಾ ಅಪರೂಪಕ್ಕೆ ಅಜ್ಜಿಯ ಮನೆಗೆ ಹೋದ ಪುಟ್ಟ, ಅಲ್ಲಿ ತಾಯಣ್ಣನನ್ನು ಭೇಟಿ ಮಾಡಿದ. ತಾಯಣ್ಣನ ಜೊತೆ ಸೇರುತ್ತಾ ಸೇರುತ್ತಾ ಅವನಿಗೇ ಗೊತ್ತಿಲ್ಲದಂತೆ ಒಂದು ರೀತಿಯ ಗಾಢ ಗೆಳೆತನ ಬೆಳೆದುಬಿಟ್ಟಿತ್ತು. ಒಂದು ದಿನದ ಈ ಗೆಳೆತನ ಮತ್ತೆ ಮುಂದುವರಿಯಿತೇ..?? ಅಮ್ಮ ಪುಟ್ಟನನ್ನು ಅಷ್ಟು ಸುಲಭವಾಗಿ ಬಿಟ್ಟಿರಲು ಸಿದ್ಧವಾದಳೇ..??

ಈ ಕಥಾ ಸಂಕಲನದಲ್ಲಿ ಈ ಕಥೆ ಬಹಳ ಇಷ್ಟವಾದ ಮತ್ತೊಂದು ಕಥೆ


ಮೌಢ್ಯೋಪಾಸನೆ

ಆಗಿನ ಕಾಲದಲ್ಲಿ ಮಡಿ ಹಾಗೂ ಮೈಲಿಗೆಗೆ ಬಹಳ ಮಹತ್ವ ಕೊಡುತ್ತಿದ್ದರು. ಅದರಲ್ಲೂ ಮಡಿ ಹೆಂಗಸರಾಗಿದ್ದವರು ತಮ್ಮ ಮನೆಯ ಅವ್ವ ಹಾಗೂ ಅಮ್ಮ ಗಳಿಕೆಗಾಗಿ ಮಡಿ ಅಡಿಗೆಯನ್ನೇ ನೆಚ್ಚಿಕೊಂಡಿದ್ದವರು. ಆದರೆ, ಅಮ್ಮ ಅಚಾನಕ್ಕಾಗಿ ಕ್ಯಾನ್ಸರ್ ಪತ್ತೆಯಾಗಿ ಆಸ್ಪತ್ರೆಗೆ ಹೋದಾಗ.. ತನ್ನ ಮಡಿಯನ್ನು ಅನಿವಾರ್ಯವಾಗಿ ತ್ಯಜಿಸಬೇಕಾದಾಗ ಆಕೆಯ ನಿರ್ಧಾರವೇನಾಯಿತು..?? ಆಕೆಗೆ ಗುಣವಾಯಿತೇ..??

ಅದೇ ಆಕೆಯ ಅಮ್ಮ ಅಂದರೆ ಅವ್ವ ಮಡಿಯನ್ನೇ ಹಾಸಿ ಹೊದ್ದು ಬದುಕಿದ್ದವಳು. ಆವಳಿಗೂ ಮಗಳಂತೆಯೇ ಕ್ಯಾನ್ಸರ್ ಬಂದಿತು. ಆಕೆ ತನ್ನ ಮೈಲಿಗೆಯನ್ನು ಒಪ್ಪಿಕೊಂಡರೇ..??

ಇದು ಅತ್ಯಂತ ಸೂಕ್ಷ್ಮವಾದ ಕಥೆ ಎನಿಸಿತು. ನಂಬಿಕೆಗಳನ್ನು ತ್ಯಜಿಸಿ ಬದುಕುವುದು ದೊಡ್ಡದಲ್ಲ.. ಆದರೆ ಸಮಾಜ ಅವರನ್ನು ಕಾಣುವ ರೀತಿ ಹಾಗೂ ಅದನ್ನೆಲ್ಲ ಒಪ್ಪಿ, ಅಪ್ಪಿ ಬದುಕುವ ರೀತಿಗೆ ಬಹಳ ಧೈರ್ಯ ಬೇಕು. ಅಂತಹಾ ಧೈರ್ಯ ಕಾಣಲು ತಲೆಮಾರುಗಳೇ ಬೇಕಾಗುತ್ತವೆ ಎನ್ನುವುದು ಸುಳ್ಳಲ್ಲ. 


ಹುಲಿಗೆವ್ವ 

ಹೊಸ ಪ್ರಾಜೆಕ್ಟ್ ಎಂದು ಬಂದ ಆಕೆಯ ಹೆಸರಿನ ಕುರಿತೇ ಅಲ್ಲೊಂದು ಚರ್ಚೆ ಸೃಷ್ಟಿಯಾಗಿತ್ತು. ಏಕೆಂದರೆ, ಅವಳ ಹೆಸರು ಹುಲಿಗೆವ್ವ. ಆದರೆ, ಹಯವದನನಿಗೆ ಆಕೆ ಬಂದ ನಂತರವೇ ಗೊತ್ತಾಗಿದ್ದು.. ಆಕೆ ತನ್ನ ಊರಿನ ಕುರುಡ ದಾಸಪ್ಪನ ಮಗಳು. ಹೆಚ್ಚು ಕಡಿಮೆ 15 ವರ್ಷದ ನಂತರ ಆಕೆಯನ್ನು ಕಂಡಿದ್ದವನಿಗೆ.. ಅದರಲ್ಲೂ ತನಗಿಂತ ಹೆಚ್ಚೇ ಪ್ರಸಿದ್ಧಳಾಗಿದ್ದ ಅವಳನ್ನು ಕಂಡಿದಕ್ಕೆ ಅಚ್ಚರಿಯಾಗಿತ್ತು. ಜಾತಿ, ಮತವನ್ನೆಲ್ಲ ಮೀರಿ ಬುದ್ದಿವಂತಿಕೆಯಿಂದ ಮೇಲಿದ್ದಾಳೆನ್ನುವುದಷ್ಟೇ ಮೇಲ್ನೋಟಕ್ಕಿತ್ತು. ಆದರೆ, ಆಕೆ ಅದಕ್ಕೆ ಬಲಿ ಕೊಟ್ಟದ್ದು ಬೇಕಾದಷ್ಟಿತ್ತು.

ಆದರೂ.. ಆಕೆಗೆ ತನ್ನ ಹೆಸರಿನ ಕುರಿತಾಗಲಿ, ಜಾತಿಯ ಕುರಿತಾಗಲಿ ಕೇಳಿರಿಮೆ ಇರಲಿಲ್ಲ. ಹಾಗೆಯೇ.. ತಾನು ಒಂದು ಹೆಣ್ಣು ಎನ್ನುವ ಕುರಿತು ಸಹಾ..  ಹುಲಿಗೆಮ್ಮನ ಬದುಕು ಕೆಲವರಿಗೆ ಕಾನ್ಫಿಡೆನ್ಸ್ ನೀಡುತ್ತದೆ. ಆದರೂ, ಹುಲಿಗೆಮ್ಮನ ಬದುಕಿನ ರೀತಿಯನ್ನು ಒಪ್ಪಿಕೊಳ್ಳುವುದು ಸಹ ಅಷ್ಟು ಸುಲಭವೆನಿಸುವುದಿಲ್ಲ.


ಪ್ರತಿಯೊಂದು ಕಥೆಗಳೂ ಮನಸ್ಸಿನಲ್ಲಿ ಆಳವಾಗಿ ಬೇರೂರುವಂತಹಾ ಕಥೆಗಳು. ಏಕೆಂದರೆ, ಇಲ್ಲಿ ಬರೀ ಮಾಡಿ ಮೌಢ್ಯತೆ, ಜಾತಿ, ಮಡಿ, ಮೈಲಿಗೆ ಇಷ್ಟೇ ಇಲ್ಲ.. ಹೆಸರಿಗೆ ಹೀಗೆ ಕಂಡರೂ.. ಅವರು ಅನುಭವಿಸಿರಬಹುದಾದ ಮಾನಸಿಕ ತುಮುಲಗಳು, ವೇದನೆಗಳು, ಅದನ್ನು ಮೀರಿದ ಬಗೆ ಹಾಗೂ ಅದನ್ನು ಮೀರಲಾಗದ ಚೌಕಟ್ಟುಗಳು. ಇದೆಲ್ಲಕ್ಕಿಂತ ಹೆಚ್ಚಾಗಿ ಕಂಡದ್ದು ಮಾನವೀಯತೆಯ ಒರತೆ.. ಸೂಕ್ಷ್ಮವಾದ ರೂಪಕಗಳು ಕಥೆಗೆ ಮತ್ತಷ್ಟು ಬಲ ತಂದುಕೊಟ್ಟಿವೆ ಎಂದೆನಿಸಿತು  ಇದರಲ್ಲಿ, ನಮ್ಮ ವಾಜೀನೂ ಆಟಕ್ಕೆ ಸೇರಿಸ್ಕೊಳ್ರೋ ಎನ್ನುವುದು ಬಹಳ ಕಾಡಿದ ಕಥೆ. ಸದ್ಯಕ್ಕಂತೂ ಈ ಕಥೆ ಮನಃಪಟಲದಿಂದ ಮರೆಯಾಗುವುದು ಕಷ್ಟವೇ. 


ಈ ಕಥಾ ಸಂಕಲನದ ಕುರಿತು ವಸುಧೇಂದ್ರ ಅವರು ಬರೆದಿದ್ದನ್ನು ಓದಿದ್ದೆ. ಈ ಕಥೆಗಳಾವುವೂ ಪತ್ರಿಕೆಯಲ್ಲಿ ಪ್ರಕಟವಾದವಲ್ಲ ಹಾಗೂ ಯಾವುದೇ ಕಥೆಯ ಕಥಾ ಸ್ಪರ್ಧೆಯ ತೀರ್ಪುಗಾರರಿಂದ ಮೆಚ್ಚುಗೆ ಪಡೆದವಲ್ಲ. ತಿರಸ್ಕೃತವಾದವು.. ಕೆಲವು ಕಥೆಗಳಂತೂ ಕಟು ವಿಮರ್ಶೆಗೆ ಒಳಗಾದಂತವು. ಬಹುಶಃ, ಆ ಕಾಲಘಟ್ಟಕ್ಕೆ ವಿಮರ್ಶಕರಿಗೆ ಹಾಗೆನ್ನಿಸಿರಬಹುದೇನೋ.. ಏಳನೆಯ ಮುದ್ರಣ ಕಂಡಿರುವ ಈ ಪುಸ್ತಕ.. ವಿಮರ್ಶಕರು ಹಾಗೂ ಓದುಗರ ನಡುವಿನ ಹಾಗೂ ಬದಲಾದ ಕಾಲಘಟ್ಟಗಳ ಗ್ರಹಿಕೆಯ ವ್ಯತ್ಯಾಸವನ್ನಂತೂ ತೆರೆದಿಡುತ್ತದೆ. ಓದುವ ಹಪಾಹಪಿ ಇರುವವರು.. ಯಾರಾದರೂ ಇನ್ನೂ ಈ ಪುಸ್ತಕವನ್ನು ಓದಿಲ್ಲದಿದ್ದರೆ ಒಮ್ಮೆ ಓದಿ ನೋಡಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ