ಮಂಗಳವಾರ, ಏಪ್ರಿಲ್ 7, 2026

ಚಂದನದ ಗೊಂಬೆ (ಪುಸ್ತಕ ಯಾನ - 92)


ಪುಸ್ತಕದ ಶೀರ್ಷಿಕೆ : ಚಂದನದ ಗೊಂಬೆ

ಲೇಖಕರು : ತ.ರಾ.ಸು

ಪ್ರಕಾಶಕರು : ನವ್ಯ ಸಾಹಿತ್ಯ ಪ್ರಕಾಶನ

ಮೊದಲನೇ ಮುದ್ರಣ : 1954

ಪುಟಗಳು : 317


ಚಲನಚಿತ್ರ : ಚಂದನದ ಗೊಂಬೆ

ನಿರ್ದೇಶಕರು : ದೊರೈ - ಭಗವಾನ್

ತಾರಾಗಣ : ಅನಂತ್ ನಾಗ್, ಲಕ್ಷ್ಮೀ, ಲೋಕೇಶ್, ಸುಂದರ್ ರಾಜ್,  ಕೆ.ಎಸ್.ಅಶ್ವಥ್, ಅದವಾನಿ ಲಕ್ಷ್ಮೀದೇವಿ, ಮೈಸೂರು ಲೋಕೇಶ್,  ಮುಂತಾದವರು


ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಇವರು ತ.ರಾ.ಸು ಎಂದೇ ಚಿರಪರಿಚಿತರು. ಇವರ ದುರ್ಗಾಸ್ತಮಾನ ಹಾಗೂ ಚಿತ್ರದುರ್ಗದ ಕುರಿತ ಪುಸ್ತಕಗಳು ಅತ್ಯಂತ ಖ್ಯಾತ ಪುಸ್ತಕಗಳು. ಚಂದವಳ್ಳಿಯ ತೋಟ, ಮಸಣದ ಹೂ, ಹಂಸಗೀತೆ ಇವರ ಇನ್ನುಳಿದ ಕಾದಂಬರಿ ಆಧಾರಿತ ಚಲನಚಿತ್ರಗಳು.  


ತ.ರಾ.ಸು ಅವರ ಕಾದಂಬರಿಯೇ ಚಂದನದ ಗೊಂಬೆ. ಈ ಕಾದಂಬರಿಯ ಶೀರ್ಷಿಕೆಗೆ ಕಾರಣವೇನು ಎಂಬುದನ್ನು ಈ ಕಾದಂಬರಿಯ ಕುರಿತ ಪುಟ್ಟ ಪರಿಚಯವಾದ ನಂತರ ತಿಳಿಸುತ್ತೇನೆ. 


ಈ ಕಾದಂಬರಿಯನ್ನು ಅವರು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಮೊದಲನೆಯ ವಿಭಾಗಕ್ಕೆ ಏನು ಹೆಸರಿಡದಿದ್ದರೂ ಎರಡನೆಯದನ್ನು ಉಸರವಳ್ಳಿ ಎಂದು, ಮೂರನೆಯದನ್ನು ಸೂತ್ರ ಕಿತ್ತ ಪಟ ಎಂದು ಹೆಸರಿಸಿದ್ದಾರೆ.


ಕಾದಂಬರಿ ಮೊದಲು ಶುರುವಾಗುವುದು ಸೀತಾರಾಮಯ್ಯನ ಸಾವಿನಿಂದ. ಸೀತಾರಾಮಯ್ಯನೆಂದರೆ.. ಸೋಮನಹಳ್ಳಿಯ ಎಲ್ಲರಿಗೂ ಬೇಕಾದವನು. ಈತನ ಕುರಿತು ಒಂದು ಮಾತು ಜನಜನಿತವಾಗಿತ್ತು. ಅದೇನೆಂದರೆ.. ಸೀತಾರಾಮಯ್ಯನೆಂದರೆ ನೀರಿದ್ದ ಹಾಗೆ. ಆತ ಯಾವ ಪಾತ್ರೆಗೆ ಹಾಕಿದರೂ.. ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾನೆ. ಪಾಯಸದಲ್ಲಿ ಯಾಲಕ್ಕಿಯ ಘಮದಂತೆ, ಸಾರಿನಲ್ಲಿ ಒಗ್ಗರಣೆಯಂತೆ ಎಂದು. 


ಮಳೆಯಲ್ಲಿ ನೆನೆದು ವಿಷಮ ಶೀತ ಜ್ವರ ಬಂದುದೇ ಕಾರಣವಾಗಿ ಸೀತಾರಾಮಯ್ಯ ಪ್ರಾಣ ತೆತ್ತಿದ್ದ. ಈಗ ಸೀತಾರಾಮಯ್ಯನ ಹೆಂಡತಿ ರತ್ನಮ್ಮನಿಗೆ ಏನು ಮಾಡಲು ದಿಕ್ಕು ತೋಚುತ್ತಿರಲಿಲ್ಲ . ಆಕೆ ಒಬ್ಬಳೇ ಅಲ್ಲ.. ಅವಳ ಜೊತೆಗೆ ಪುಟ್ಟ ನಾಲ್ಕು ವರ್ಷದ ಮಗು ನಾರಾಯಣನೂ ಇದ್ದನು. ಹಾಗೆಂದು ಅವರ ಸಹಾಯಕ್ಕೆ ಯಾರೂ ಇರಲಿಲ್ಲವೆಂದಲ್ಲ.


ಶಾನುಭೋಗರಾಗಿದ್ದ ನಾರಣಪ್ಪ ಸತ್ತ ಮೇಲೆ ಆತನ ಹೆಂಡತಿಯೂ ಹೆಚ್ಚು ದಿನ ಬದುಕಲಿಲ್ಲವಾದ್ದರಿಂದ ಅವರ ಒಬ್ಬನೇ ಮಗನಾಗಿದ್ದ ಸೀತಾರಾಮಯ್ಯ, ಶ್ರೀನಿವಾಸರಾಯರು ಹಾಗೂ ಕಮಲಮ್ಮನವರ ಸಾಕು ಮಗನಾಗಿಯೇ ಬೆಳೆದ. ಅವರ ಮಗನಾದ ರಾಘವೇಂದ್ರರಾಯನಿಗಿಂತಲೂ ಸೀತಾರಾಮಯ್ಯನೇ ಅಚ್ಚುಮೆಚ್ಚು. 


ರಾಘವೇಂದ್ರರಾಯ ತನ್ನ ಗೆಳೆಯರಾದ ಚಿನ್ನೋಬಾ, ಗಂಗಯ್ಯ ಮುಂತಾದವರೊಡನೆ ಆಟವಾಡುತ್ತಾ ಕುಳಿತಿದ್ದ. ಆ ಇಸ್ಪೀಟು ಆಟದಲ್ಲಿ ರಾಣಿಗೆ ಅವರೆಲ್ಲಾ ಅಡ್ಡ ಹೆಸರು ಕರೆಯುತ್ತಿದ್ದದ್ದು ಚಂದನದ ಗೊಂಬೆ ಎಂದು. ಆ ಕುಶಾಲಿನ ಹೆಸರಿಗೆ ಕಾರಣನಾಗಿದ್ದು ಸೀತಾರಾಮಯ್ಯ. ಏಕೆಂದರೆ, ಆತ ಹಾಸ್ಯ ಪ್ರವೃತ್ತಿ ಉಳ್ಳವನು ಹಾಗೂ ಲವಲವಿಕೆಯುಳ್ಳವನು. ಈಗ ಆತನ ಸಾವಿನಿಂದ ಎಲ್ಲರಿಗೂ ಗರಬಡಿದಂತಾಗಿತ್ತು. 


ಕೆರೆಸಂತೆ ಹಳ್ಳಿಯ ಲಕ್ಷ್ಮಣರಾಯರು ಶಿಕ್ಷಕರು. ಅವರ ಪತ್ನಿ ಸೀತಮ್ಮ. ಇವರಿಗೆ ಇದ್ದದ್ದು ಒಬ್ಬಳೇ ಮಗಳು. ಅವಳೇ ರತ್ನಮ್ಮ. ಮೂಲ ನಕ್ಷತ್ರವಾದುದರಿಂದ ಆಕೆಗೆ ಯಾವ ಗಂಡು ಸಿಗದೇ ಅಲೆಯುತ್ತಿದ್ದಾಗ.. ಶ್ರೀನಿವಾಸರಾಯರು ಹಾಗೂ ಕಮಲಮ್ಮನ ಆಸೆಯಂತೆ, ಸೀತಾರಾಮಯ್ಯನ ಮದುವೆಯಾಗಿತ್ತು. ಊರ ಜನರೆಲ್ಲರೂ ತಮ್ಮ ಮನೆಯ ಮದುವೆ ಎಂದೇ ತಿಳಿದು ಮಾಡಿದ್ದ ಮದುವೆ. ಏಕೆಂದರೆ, ಶಾನುಭೋಗನಾಗಿದ್ದ ಸೀತಾರಾಮಯ್ಯ ಎಲ್ಲರಿಗೂ ಅಷ್ಟು ಪರೋಪಕಾರ ಮಾಡಿ ಹೆಸರಾಗಿದ್ದವನು. ಮದುವೆಯಾದ ನಂತರವೂ.. ಆತನ ಕೊಡುಗೈ ದಾನ ನಿಂತಿರಲಿಲ್ಲ. ಆತನ ಬಿಚ್ಚುಗೈ ದಾನಕ್ಕೆ ರತ್ನಮ್ಮಳೆಂದೂ ಅಡ್ಡಿಪಡಿಸಿರಲಿಲ್ಲ. ಬದಲಾಗಿ, ಆತನಿಗೆ ಸಹಕಾರವಾಗಿ ಜೊತೆಯಲ್ಲೇ ನಿಂತಿದ್ದಳು. ಇದಕ್ಕೆ ಯಾವಾಗಲೂ ಕಮಲಮ್ಮನವರ ಆಕ್ಷೇಪಣೆ ಇದ್ದೇ ಇತ್ತು.


ಈ ಸಾವಿನ ಸಂದರ್ಭದಲ್ಲಿಯೇ ಅವನ ನಿಜವಾದ ಪರಿಸ್ಥಿತಿ ರಾಘವೇಂದ್ರನಿಗೆ ತಿಳಿದದ್ದು. ಆತನ ಅಂತ್ಯಸಂಸ್ಕಾರಕ್ಕೂ ಹಣ ಹೊಂದಿಸಲು ಕಷ್ಟವಾಗಿತ್ತು. ಆತನ ಹೊಲವೆಲ್ಲವೂ ಆಗಲೇ ಅಡವಿಟ್ಟಾಗಿತ್ತು. ಅಲ್ಲದೆ ಮೈ ಮೇಲೆಯೂ ಸಾಲವಿತ್ತು. ಕಂದಾಯ ಕಟ್ಟದ ರೈತರ ಸಾಲವನ್ನೆಲ್ಲಾ ತಾನೇ ಕಟ್ಟಿ ತೀರಿಸಿದ್ದ. ಆದರೆ, ಯಾರೂ ಇನ್ನೂ ಅವನಿಗೆ ಅವನ ಹಣ ನೀಡಿರಲಿಲ್ಲ. ಅಂತೂ.. ಇಂತೂ.. ಅಂತ್ಯಸಂಸ್ಕಾರ ಮುಗಿದಿತ್ತು. 


ಲಕ್ಷ್ಮಣರಾಯರು ತಮ್ಮ ಮಗಳು ರತ್ನಮ್ಮನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಅದಕ್ಕಾಗಿ ಇಲ್ಲಿನ ಹೊಲ, ಮನೆ ಎಲ್ಲವನ್ನು ಮಾರಿ ಸೀತಾರಾಮಯ್ಯ ಮಾಡಿದ ಸಾಲ ತೀರಿಸಿ ಎಂದಾಗ ರತ್ನಮ್ಮ ಒಪ್ಪಲಿಲ್ಲ. ಬದಲಾಗಿ, ತನ್ನ ಮಗ ನಾರಾಯಣನನ್ನೇ ಆಸ್ತಿಯನ್ನಾಗಿ ಬಿಟ್ಟು ಹೋಗಿದ್ದಾರೆ .ಆತ ತೀರಿಸುತ್ತಾನೆ. ಅಲ್ಲದೇ, ಅಣ್ಣನಂತಿರುವ ರಾಘಣ್ಣ ಜೊತೆಯಾಗಿ ನಿಲ್ಲುತ್ತೇನೆ ಎನ್ನುವ ಧೈರ್ಯದ ಮಾತುಗಳನ್ನಾಡಿದ್ದರಿಂದ ಎಲ್ಲರಿಗೂ ಒಪ್ಪಿಗೆಯಾಗಿ ಆಕೆ ಅಲ್ಲಿಯೇ ನೆಲೆ ನಿಂತಿದ್ದಳು.


ಉಸರವಳ್ಳಿ


ಇದು ಇಷ್ಟಕ್ಕೇ ನಿಂತಿದ್ದರೆ ಶ್ರೀನಿವಾಸರಾಯರು,ಕಮಲಮ್ಮ ,ರಾಘಣ್ಣನ ದೆಸೆಯಿಂದ ಅವಳ ಬದುಕು ಯಾವುದೇ ಕಷ್ಟವಿಲ್ಲದೆ ಸುಖವಾಗಿ ನಡೆಯುತ್ತಿತ್ತು. ಆದರೆ, ಸೀತಾರಾಮಯ್ಯ ಮಾಡಿದ್ದ ಸಾಲವನ್ನು ಕೇಳಲು ಬಂದದ್ದು ಈರಮ್ಮ. ಬಡ್ಡಿ ವ್ಯವಹಾರದ ಈರಮ್ಮನಿಗೆ ಗಂಡ ಸತ್ತು ಈಗ ವಿಟ್ಟೋಬನ ಜೊತೆಯಲ್ಲಿದ್ದಳು. ಕೆಲಸಕಳ್ಳನಾಗಿದ್ದ ವಿಟ್ಟೋಬನಿಗೆ ಶಾನುಭೋಗಿಕೆಯ ಮೇಲೆ ಕಣ್ಣು ಬಿದ್ದಿತ್ತು. ಆ ಸಾಲ ತಕ್ಷಣವೇ ತೀರಿಸಬೇಕು. ಇಲ್ಲವೇ, ಶಾನುಭೋಗಿಕೆಯಲ್ಲಿ ಬರುವ ಅರ್ಧ ಭಾಗದಿಂದ ವಿಟ್ಟೋಬ ತನ್ನ ಸಾಲ ತೀರಿಸುತ್ತಾನೆ ಎಂದು ನಯವಾದ ಮಾತಿನಲ್ಲಿ ಹೇಳಿದಳು ಈರಮ್ಮ. 


ಮೊದಲಿಗೆ, ರತ್ನಮ್ಮ ಒಪ್ಪಲಿಲ್ಲ. ರಾಘಣ್ಣನನ್ನು ಕೇಳಿಯೇ ಮುಂದಿನ ಹೆಜ್ಜೆ ಇಡುತ್ತೇನೆ ಎಂದಳು. ಈ ಮಾತಿಗೆ ರಾಘಣ್ಣ ಕಿಡಿಕಿಡಿಯಾದ. ಮೊದಲೇ ಮುಂಗೋಪಿಯಾಗಿದ್ದ ರಾಘಣ್ಣ ಅವನನ್ನು ಹೋಗಿ ಜೋರು ಮಾಡಿದಾಗ.. ಅದಕ್ಕೊಂದಿಷ್ಟು ಸೇರಿಸಿ ಆತ ಈರಮ್ಮನಿಗೆ ಹೇಳಿದ. ಈರಮ್ಮನಿಗೂ ರೋಷ ಉಕ್ಕಿತು. ಅದಾದ ನಂತರ ಈರಮ್ಮ ಹಾಗೂ ರಾಘಣ್ಣರಿಗೆ ಮಾತಿನ ಚಕಮಕಿಯಾಯಿತು. ಊರಿನಲ್ಲೆಲ್ಲಾ ಇದು ಹೊಡೆದಾಟವಾಯಿತು ಎಂದೇ ಗಾಳಿ ಸುದ್ದಿಯಾಯಿತು.


ಇದಕ್ಕೆ ಮಧ್ಯಪ್ರವೇಶಿಸಿದ್ದು ಚಿನ್ನೋಬ. ಈತನ ಆಸೆಯ ಕುರಿತಾಗಿ ಬೇರೆಯದ್ದೇ ಸುದ್ದಿಯಿತ್ತು. ಹೆಂಗಸರ ವಿಚಾರದಲ್ಲಿ ಆತ ಕೊಂಚ ಆಚೀಚೆ ಎಂದು. ಈಗ ಆತ ಈರಮ್ಮನ ಬಳಿಗೆ ಬಂದದ್ದು ಒಂದು ಸ್ವಾರ್ಥದಿಂದಲೇ.. ರಾಘಣ್ಣನ ಮೇಲೆ ಕೋಪವಿದ್ದರೂ, ಈರಮ್ಮನಿಗೆ ರತ್ನಮ್ಮನ ಮೇಲೆ ಯಾವುದೇ ಕೋಪವಿರಲಿಲ್ಲ. ಆದರೆ ವಿಟ್ಟೋಬ ಹಾಗು ಚಿನ್ನೋಬನ ಮಾತು ಕೇಳಿ.. ಪಂಚಾಯಿತಿಗೂ ಸಹಾ ಅವಳು ಒಪ್ಪಿರಲಿಲ್ಲ. ಹಾಗಾಗಿ, ಚಿನ್ನೋಬಾ ತಾನೇ ಇದಕ್ಕೆ ಒಂದು ಪರಿಹಾರ ಕಂಡುಹಿಡಿಯುತ್ತೇನೆ. ಆದರೆ, ಆಕೆಯ ಮನೆಯಲ್ಲಿರುವ ಚಿಕ್ಕರುದ್ರಿ ತನಗೆ ಬೇಕು ಎಂದಾಗ.. ಈರಮ್ಮ ಒಪ್ಪಿದಳು.


ರಾಘಣ್ಣ ಇಲ್ಲದ ಸಮಯದಲ್ಲಿ ಸೀತಾರಾಮಯ್ಯನ ಮನೆಗೆ ಹೋಗಿ, ನಯವಾದ ಮಾತಿನಲ್ಲಿಯೇ ಚಿನ್ನೋಬ ತಾನೇ ಹಣ ನೀಡಿ ಶಾನುಭೋಗಿಕೆಯನ್ನು ಅವರಿಗೆ ಬಿಟ್ಟುಕೊಡುವ ಅವಶ್ಯಕತೆಯಿಲ್ಲವೆಂದು, ರತ್ನಮ್ಮನ ವಿಶ್ವಾಸ ಗಳಿಸಿಕೊಂಡ. ಇದನ್ನು ತಿಳಿದ ರಾಘಣ್ಣನಿಗೆ ಕೆಂಡದಂತಹ ಕೋಪ ಬಂದಿತ್ತು. 


ಸೂತ್ರ ಕಿತ್ತ ಪಟ : 


ರಾಘಣ್ಣ ಅಂದು ನಾರಾಯಣನನ್ನು ತನ್ನ ಮನೆಯಲ್ಲಿ ಊಟ ಮಾಡಿಸಿ, ತನ್ನ ಮನೆಯಲ್ಲಿ ಇದೇ ಕಡೆಯ ಊಟ ಎಂದು ಹೇಳಿ ಅಲ್ಲಿಂದ ಮನೆಗೆ ಕಳುಹಿಸಿ.. ನನ್ನ ನಿನ್ನ ಸಂಬಂಧ ಮುಕ್ತಾಯವಾಯಿತು ಎಂದು ರತ್ನಕ್ಕನಿಗೆ ಹೇಳಿ ಬಂದಿದ್ದ. ಅಭಿಮಾನಿಯಾದ ರಾಘಣ್ಣ ಹಾಗೂ ರತ್ನಮ್ಮ ಇಬ್ಬರೂ ಬಗ್ಗದೆ, ಅವರ ನಡುವಿನ ಸಂಬಂಧ ಹಳಸಿತ್ತು. ಇತ್ತ ಚಿನ್ನೋಬ, ರತ್ನಮ್ಮನ ಮನೆಗೆ ಬರುವುದು ಹೆಚ್ಚಾಗಿತ್ತು. ಜನರ ನಾಲಿಗೆಗೆ ಇಷ್ಟೇ ಸಾಕಾಗಿತ್ತು.


ಚಿನ್ನೋಬನಿಗೂ ಹಾಗೂ ರತ್ನಮ್ಮನಿಗೂ ಏನೋ ಸಂಬಂಧವಿದೆ ಎಂದು ಊರಲೆಲ್ಲಾ ಮಾತು ಹರಡಿತು. ಆದರೆ, ಈ ಮಾತು ನಿಜವಾಗಿರಲಿಲ್ಲ. ರಾಘಣ್ಣ ಹಾಗೂ ರತ್ನಮ್ಮನಿಗೆ ಪರಸ್ಪರರಿಗೂ ಮಾತುಕತೆಯಿಲ್ಲದಿದ್ದರೂ.. ಪರಸ್ಪರರ ಮೇಲೆ ಅಪಾರ ನಂಬಿಕೆ. ರಾಘಣ್ಣ ತಾಯಿಯ ಮಾತು ಕೇಳಿ, ನೊಂದು ರತ್ನಮ್ಮನ ಬಳಿಗೆ ಬಂದು ಇದನ್ನೆಲ್ಲಾ ಬಿಟ್ಟು ಬಿಡುವಂತೆ ಹೇಳುತ್ತಾನೆ. ತಾನು ಆ ರೀತಿ ಮಾಡಿದರೆ ತಾನೆ ಅಪರಾಧಿನಿಯಾಗುತ್ತೇನೆಂದು ಆಕೆ ಅದಕ್ಕೆ ಒಪ್ಪುವುದಿಲ್ಲ. ಅದಾದ ನಂತರ, ಚಿನ್ನೋಬ ರತ್ನಮ್ಮನ ಮೇಲೆ ಇಟ್ಟಿದ್ದ ಆಸೆಯನ್ನು ಅವಳ ಒಳ್ಳೆತನವೇ ನಾಶಪಡಿಸಿತು. ಅವರಿಬ್ಬರೂ ಅಣ್ಣ-ತಂಗಿಯರಂತೆ ಇದ್ದರು. ತಾವಿಬ್ಬರೂ ಒಳ್ಳೆಯ ರೀತಿಯಲ್ಲೇ ಇರುವುದಾದರಿಂದ.. ಬೇರೆ ಯಾರ ಮಾತಿಗೂ ತಲೆಕೆಡಿಸಿಕೊಳ್ಳಬೇಕಿಲ್ಲವೆಂದು ಸುಮ್ಮನಾದರು.


ಬೇರೆ ದಾರಿ ಕಾಣದೆ, ಶ್ರೀನಿವಾಸರಾಯರು ಲಕ್ಷ್ಮಣರಾಯರಿಗೆ ಪತ್ರ ಬರೆದು ರತ್ನಮ್ಮನನ್ನು ಕರೆದುಕೊಂಡು ಹೋಗುವಂತೆ ಹೇಳಿದರು. ಆದರೆ, ರತ್ನಮ್ಮ ಯಾವುದಕ್ಕೂ ಜಗ್ಗಲಿಲ್ಲ. ನಂತರ, ಚಿನ್ನೋಬ ನಾರಾಯಣನನ್ನು ಬಿಟ್ಟು ಹೋಗಲು ಮನೆಗೆ ಬಂದಾಗ, ಅಂದು ಅವರಿಗೂ ಚಿನ್ನೋಬನಿಗೂ ಜಗಳವಾಗಿ.. ನಾರಾಯಣನನ್ನು ರಾಘಣ್ಣಮ ಮನೆಗೆ ಎತ್ತಿಕೊಂಡು ಹೋದರು. ಅಲ್ಲಿ, ಚಿನ್ನೋಬ ರಾಘಣ್ಣನಿಂದ ಹೊಡೆತ ತಿಂದು, ರಕ್ತ ಸುರಿಸಿಕೊಂಡು ಅಂಗಳದಲ್ಲಿ ಬಿದ್ದಿದ್ದ. ಅವನು ಸತ್ತು ಹೋಗಿದ್ದನೆಂದು ತಿಳಿದು.. ಇದಕ್ಕೆಲ್ಲಾ ತಾನೇ ಕಾರಣಳೆಂದು ತಿಳಿದು ರತ್ನಮ್ಮ ಆತ್ಮಹತ್ಯೆ ಮಾಡಿಕೊಂಡಳು. ಚಿನ್ನೋಬ ಹಾಗೂ ರಾಘಣ್ಣನಿಗೆ ತಮ್ಮ ತಪ್ಪಿನ ಅರಿವಾಗಿ, ನಾರಾಯಣನನ್ನು ಇಬ್ಬರು ಸೇರಿ ಸಾಕುವುದಾಗಿ ನಿಶ್ಚಯಿಸಿಕೊಳ್ಳುತ್ತಾರೆ.


ಚಿಂನೋಬನ ಮನಸ್ಸಿನಲ್ಲಿದ್ದ ಬಯಕೆಯನ್ನು ತಿಳಿದಾಗ, ರತ್ನಮ್ಮ ಒಂದು ಮಾತು ಹೇಳುತ್ತಾಳೆ. "ಅವರು ಸತ್ತಾಗಲೇ ತನ್ನ ಹೆಣ್ತನವೂ ಸತ್ತುಹೋಗಿದೆ. ಈಗ ಉಳಿದಿರುವುದು ಕೇವಲ ಗೊಂಬೆ ಮಾತ್ರ." ಎಂದು. 


ಇನ್ನು ರತ್ನಮ್ಮನ ಆತ್ಮಹತ್ಯೆಯ ವಿಚಾರವಾಗಿ ಒಂದು ಸಾಲು ಬರುತ್ತದೆ. ಅದು, ಆ ಸಾವಿನ ಭೀಕರತೆಯನ್ನು ತೋರಿಸುತ್ತದೆ. ನೀವೇ ಓದಿ ತಿಳಿಯಿರಿ.


ತ.ರಾ.ಸು ಅವರು "ಚಂದನದ ಗೊಂಬೆ" ಎಂಬ ಶೀರ್ಷಿಕೆ ಕೊಟ್ಟಿರುವುದರ ಕಾರಣ ಇಂತಿದೆ. ಚಂದನದ ಗೊಂಬೆಯನ್ನು ದಸರಾ ಗೊಂಬೆ ಉತ್ಸವದಲ್ಲಿ ಕೂರಿಸುತ್ತೇವೆ. ಅದನ್ನು ಪಟ್ಟಕೇರಿಸುವುದು ಅಥವಾ ವಿಸರ್ಜಿಸುವುದು ಮನುಷ್ಯನ ಬಯಕೆಯಂತೆಯೇ..

 ಆ ಗೊಂಬೆಗೆ ಯಾವುದೇ ಆಸೆ, ಬಯಕೆಗಳಿರುವುದಿಲ್ಲ. ಇಲ್ಲಿ ರತ್ನಮ್ಮನೂ ಚಂದನದ ಗೊಂಬೆಯಂತೆಯೇ ಆಗಿ ಹೋದಳು. ಜನರ ಮಾತಿನಿಂದ.. ಅವರು ಆಡಿಸಿದಂತೆ, ಅವರ ವರ್ತನೆಯಿಂದ ಆಕೆಯ ವಿಸರ್ಜನೆಯೂ ಆಗಿ ಹೋಯಿತು. 


ಚಲನಚಿತ್ರದಲ್ಲಿ ಹೆಚ್ಚು-ಕಡಿಮೆ ಯಥಾವತ್ತಾದ ಕಾದಂಬರಿಯ ಚಿತ್ರಣವಿದೆ. ಆದರೆ, ಸೀತಾರಾಮಯ್ಯ ಸಾಯುವುದು ಬಾವಿ ತೋಡಿಸಲು ಹೋದಾಗ.. ಬಾವಿಯಲ್ಲಿ ನೀರು ಬಂದಿತೆಂದು ಇಳಿದಾಗ ಮೇಲಿಂದ ಕಲ್ಲುಗಳು ಬಿದ್ದು.


ಕಾದಂಬರಿಯಲ್ಲಿಯ ರಾಘಣ್ಣ ಇಸ್ಪೀಟು ಆಡುತ್ತಿದ್ದರೆ.. ಚಲನಚಿತ್ರದ ರಾಘಣ್ಣ ಸೀತಾರಾಮಯ್ಯನನ್ನು ಯಾವ ಕೆಟ್ಟ ಚಟಗಳಿಗೂ ಬಲಿಯಾಗದಂತೆ ಕಾಪಾಡುವ ಒಳ್ಳೆಯ ಸ್ನೇಹಿತ. 


ಚಲನಚಿತ್ರದಲ್ಲಿ ಚಿನ್ನೋಬನ ಪಾತ್ರ ಕೊಂಚ ಹೆಚ್ಚಿದೆ. ಈರಮ್ಮ ರಾಘವೇಂದ್ರಾಯ ಹಾಗೂ ವಿಟ್ಟೋಬನ ನಡುವಿನ ಜಗಳ, ಜಟಾಪಟಿಗಳು ಅಷ್ಟಾಗಿ ಚಲನಚಿತ್ರದಲ್ಲಿ ಕಂಡುಬರುವುದಿಲ್ಲ. ಇಲ್ಲಿ ಕಾದಂಬರಿಯಲ್ಲಿ.. ಗಾಳಿ ಸುದ್ದಿ ಹಾಗೂ ತಪ್ಪು ಕಲ್ಪನೆಗಳೇ ಹೆಚ್ಚಾಗಿದ್ದು, ಚಲನಚಿತ್ರದಲ್ಲಿ ಅದರ ಬದಲಾಗಿ ನೇರವಾದ ಮಾತುಗಳು, ಜಟಾಪಟಿ, ಹಣಾಹಣಿಗಳೇ ಕಂಡುಬರುತ್ತವೆ. 


ಕಾದಂಬರಿಯಲ್ಲಿ ಚಿನ್ನೋಬ ಹಾಗೂ ರತ್ನಮ್ಮನ ನಡುವಿನ ಸಂಬಂಧ ಗಾಳಿಸುದ್ದಿಯಾಗಿ ಹರಡುತ್ತದೆ. ಆದರೆ, ಚಲನಚಿತ್ರದಲ್ಲಿ ಅದನ್ನು ಈರಮ್ಮ ಹಾಗೂ ವಿಟ್ಟೋಬರೇ ಹರಡುವಂತೆ ಹೆಚ್ಚಿನ ಪಾತ್ರವಹಿಸುತ್ತಾರೆ. ಕಾದಂಬರಿಯಲ್ಲಿನ ಈರಮ್ಮನಿಗೆ ಕೋಪ ಹಾಗೂ ಅಹಂಕಾರಗಳು ಇದ್ದರೂ.. ಇಷ್ಟರಮಟ್ಟಿನ ಕುತಂತ್ರವಿರಲಿಲ್ಲ. ಅಲ್ಲದೆ, ವಿಟ್ಟೋಬ ಬಹಳ ಚಾಲಾಕಿನಿಂದ ನಾಜೂಕಿನಿಂದ ಕೆಲಸ ನಿರ್ವಹಿಸುತ್ತಿದ್ದ. ಇಲ್ಲಿನ ವಿಟ್ಟೋಬ ಕೊಂಚ ಪೆದ್ದನಂತೆ, ಎಲ್ಲ ಪರಿಸ್ಥಿತಿಯಲ್ಲೂ ಮಧ್ಯಕ್ಕೆ ಸಿಕ್ಕಿ ಬಲಿಪಶುಯಾಗುವಂತೆ ಕಾಣುತ್ತಾನೆ.


ಕಾದಂಬರಿಯಲ್ಲಿ ಸೀತಾರಾಮಯ್ಯನ ಪಾತ್ರ ತೀರಾ ಕಡಿಮೆಯಿದ್ದು.. ಚಲನಚಿತ್ರದಲ್ಲಿ ಹೆಚ್ಚು-ಕಡಿಮೆ  ಅರ್ಧ ಭಾಗದಷ್ಟು ಆವರಿಸಿದೆ.  ಒಳ್ಳೆಯತನ, ನವಿರಾದ ಹಾಸ್ಯ, ಲವಲವಿಕೆ ಪರೋಪಕಾರದಲ್ಲಿ ಸೀತಾರಾಮಯ್ಯನ ಪಾತ್ರದಲ್ಲಿ ಅನಂತನಾಗ್ ಎತ್ತಿದ ಕೈ. ಅದಕ್ಕೆ ಪೈಪೋಟಿಯಂತೆ ನಟಿಸಿರುವವರು ನಟ ಲೋಕೇಶ್. ಚಿನ್ನೋಬನ ಪಾತ್ರದಲ್ಲಿ.. ಆಸೆ, ಕಾಮ, ಲೋಭಗಳನ್ನು ಹೊಂದಿರುವ ಮನುಷ್ಯನಾಗಿ. ನಂತರ ಮನಪರಿವರ್ತನೆಯಾಗುವ ಮನುಷ್ಯನ ಜೊತೆಗೆ ದರ್ಪವನ್ನು ಹೊಂದಿರುವ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ.


ರಾಘವೇಂದ್ರರಾಯರಾಗಿ ಸುಂದರ ರಾಜ್.. ಥೇಟ್ ಅಣ್ಣನಂತೆ ಕಾಳಜಿ ತೋರುವ ಹಾಗೂ ಮುಂಗೋಪಿ ಯುವಕನಾಗಿ ಕಂಡು ಬರುತ್ತಾರೆ. ರತ್ನಮ್ಮನ ಪಾತ್ರದಲ್ಲಿ ಲಕ್ಷ್ಮಿ ಅವರು ಮುಗ್ಧತೆ, ಭಂಡ ಧೈರ್ಯ, ಸ್ವಾಭಿಮಾನವುಳ್ಳ ಹೆಣ್ಣಾಗಿ, ನೊಂದು, ಬಳಲುವ ಜೀವವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನಂತ್ ನಾಗ್ ಹಾಗೂ ಲಕ್ಷ್ಮಿಯವರ ಜೋಡಿ ಕಣ್ಣಿಗೆ ಹಬ್ಬ.


ಚಲನಚಿತ್ರದ ಕಥೆಯಲ್ಲಿನ ಅಂತ್ಯ ರತ್ನಮ್ಮನ ಸಾವಿನಲ್ಲಿಯೇ ಕಂಡು ಬಂದರೂ ಕಾದಂಬರಿಯಷ್ಟು ಭೀಕರವಾಗಿಲ್ಲ. ಚಂದನದ ಗೊಂಬೆ ಎನ್ನುವ ಪದಕ್ಕೆ ರತ್ನಮ್ಮನ ಸೌಂದರ್ಯ ಹಾಗೂ ಕೊನೆಯಲ್ಲಿ ಜೀವ ಕಳೆದುಕೊಂಡ ರತ್ನಮ್ಮನನ್ನು ಗೊಂಬೆಯಂತೆಯೂ ಹಾಗೂ ಅವಳು ಜೀವ ಕಳೆದುಕೊಳ್ಳುವಾಗ ಆ ಚಂದನದ ತಟ್ಟೆ ದೇವರ ಮುಂದಿರುವಂತೆಯೂ ಚಿತ್ರಿಸಿ ಇದರ ಅಂತ್ಯ ತೋರಿಸಿದ್ದಾರೆ. 


ಹಳ್ಳಿಯ ಜನರ ಜೀವನ, ಬವಣೆ, ಹೊಲ-ಗದ್ದೆ, ಅಲ್ಲಿನ ಸ್ವರೂಪ, ಮಧ್ಯಮ ಹಾಗೂ ಬಡವರ್ಗದ ಜನರ ಕಷ್ಟಗಳು ಕೂಡ ಕಾದಂಬರಿಯಷ್ಟೇ ಪರಿಣಾಮ ಬೀರುವಂತೆ ಚಿತ್ರತವಾಗಿವೆ.


ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿರುವವರು ಚಿ. ಉದಯ ಶಂಕರ್. ಸಂತೋಷ ಹಾಗೂ ವಿಷಾದದ ಗೀತೆಗಳು ಆಯಾ ಸಂಧರ್ಭಾನುಸಾರ ಇಂದಿಗೂ ಮನಸ್ಸಿನಲ್ಲಿ ಉಳಿಯುವಂತಿವೆ.


ಕಾದಂಬರಿ ಹಾಗೂ ಚಲನಚಿತ್ರಗಳೆರಡೂ ಇಷ್ಟವಾದವು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ