ಮಂಗಳವಾರ, ಏಪ್ರಿಲ್ 7, 2026

ಮನೆಯಂಗಳ (ಪುಸ್ತಕ ಯಾನ - 87)






ಪುಸ್ತಕದ ಶೀರ್ಷಿಕೆ : ಮನೆಯಂಗಳ

ಲೇಖಕರು : ರಜನಿ ನರಹಳ್ಳಿ & ಕುಟುಂಬದವರು

ಸಂಪಾದಕರು : ಪಿ. ಚಂದ್ರಿಕಾ

ಮೊದಲನೇ ಮುದ್ರಣ : 2020

ಪುಟಗಳು : 104

ಬೆಲೆ : 75 ರೂ.


ಲೇಖಕಿಯಾದ ರಜನಿ ನರಹಳ್ಳಿಯವರಿಗೆ 60 ವರ್ಷದ ಸಂದರ್ಭದಲ್ಲಿ ವಿಶೇಷವಾಗಿ ಬಿಡುಗಡೆಯಾದ ಪುಸ್ತಕ 'ಮನೆಯಂಗಳ'. ಈ ಕೃತಿಯ ಸಂಪಾದಕರು ಪಿ.ಚಂದ್ರಿಕಾ.


ರಜನಿ ನರಹಳ್ಳಿಯವರು ಕೊಡಗು ಜಿಲ್ಲೆಯ ಸೋಮವಾರಪೇಟೆಯವರು .ಇವರ ವಿವಾಹವಾಗಿದ್ದು ಖ್ಯಾತ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಮಣ್ಯ ಅವರ ಜೊತೆಗೆ. ಇವರಿಗೆ ಇಬ್ಬರು ಮಕ್ಕಳು. ಸಹನಾ ಹಾಗೂ ಸ್ನೇಹ. ಮೊದಲ ಮಗಳು ಸಹನಾ ಅವರಿಗೆ ಈಗಾಗಲೇ ಗುರುಪ್ರಸಾದ್ ರವರ ಜೊತೆ ಮದುವೆಯಾಗಿ ಯು.ಎಸ್.ಎ ನಲ್ಲಿ ನೆಲೆಸಿದ್ದಾರೆ. ಇವರ ಮಕ್ಕಳು ಆದ್ಯ ಹಾಗೂ ಅವನಿ. ಎರಡನೆಯ ಮಗಳು ಸ್ನೇಹ ಅಮೆರಿಕಾದ ಪ್ರತಿಷ್ಠಿತ ಕಾರ್ನೆಗಿ ಮೆಲನ್ ಯೂನಿವರ್ಸಿಟಿಯಲ್ಲಿ ಎಂ.ಎಸ್ ಮಾಡಿ ವಾಲ್ಮಾರ್ಟ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.  ಅಮ್ಮಮ್ಮ ಹೇಳಿದ ಕಥೆಗಳು, ನನ್ನ ಅಜ್ಜಿಯ ಜಗತ್ತು ಹಾಗೂ ಆತ್ಮವೃತ್ತಾಂತ ರಜನಿಯವರು ಬರೆದಿರುವ ಪುಸ್ತಕಗಳು. 


ಗಂಡಸರಿಗೆ 60 ವರ್ಷವಾದರೆ ಷಷ್ಠಿ ಪೂರ್ತಿ ಸಂಭ್ರಮ. ಆದರೆ ಹೆಣ್ಣು ಮಕ್ಕಳಿಗೆ ಈ ರೀತೀಯ ಆಚರಣೆಯಿಲ್ಲ. ರಜನಿಯವರ 60 ನೇ ಹುಟ್ಟುಹಬ್ಬದ ವಿಭಿನ್ನವಾಗಿರಬೇಕು. ಅದಕ್ಕೆಂದು, ಈ ವಿಶೇಷವಾದ ಪುಸ್ತಕ. ಅವರನ್ನು ಅವರ ಕಣ್ಣಿನಿಂದ ಹಾಗೂ ಅವರ ಪತಿ ,ಮಕ್ಕಳು, ಮೊಮ್ಮಕ್ಕಳ ಕಣ್ಣಿನಿಂದಲೂ ನೋಡುವಂತಾಗುತ್ತದೆ. ಇದು ಒಂದು ರೀತಿಯ ಪುಟ್ಟ ಆತ್ಮ ಚರಿತ್ರೆಯೂ ಹೌದು, ಹಾಗೂ ಸಂಕ್ಷಿಪ್ತ ಜೀವನ ಚರಿತ್ರೆಯೂ ಹೌದು.


ಕನ್ನಡ ಸಾಹಿತ್ಯ ಲೋಕಕ್ಕೆ ರಜನಿ ನರಹಳ್ಳಿಯವರು ಕಾಲಿರಿಸಿದ್ದು ಕೊಂಚ ತಡವಾಗಿಯೇ.. ಆದರೆ, ಅವರ ಮೊಮ್ಮಗಳು ಬಹಳ ಬೇಗ ಕಾಲಿಸಿದ್ದಾಳೆ. 5 ವರ್ಷಕ್ಕೆ "ಇನ್ ಸರ್ಚ್ ಆಫ್ ಎ ಫ್ರೆಂಡ್" ಎನ್ನುವ ಒಂದು ಮಕ್ಕಳ ಕಥೆ ಪುಸ್ತಕವನ್ನು ಬರೆದಿದ್ದಾಳೆ. ಆ ಮಗು ಹೇಳಿದ ಕಥೆಯನ್ನು ರೆಕಾರ್ಡ್ ಮಾಡಿಕೊಂಡು ಅಕ್ಷರ ರೂಪಕ್ಕೆ ಕೊಟ್ಟು ಈ ಕಥಾ ಪುಸ್ತಕವನ್ನು ಹೊರತರಲಾಗಿದೆ.


ನರಹಳ್ಳಿ ಬಾಲಸುಬ್ರಹ್ಮಣ್ಯ ಇವರ ಅಭಿನಂದನಾ ಪುಸ್ತಕ ವಿಮರ್ಶಾ-ವಿವೇಕಕ್ಕೆ ರಜನಿಯವರ ಬಳಿ ಒಂದು ಲೇಖನವನ್ನು ಕೇಳಿದಾಗ ಇವರು ತನ್ನಿಂದ ಆಗದು ಎಂದೇ ಭಾವಿಸಿದ್ದರು.ಅಲ್ಲದೆ, ಅವರು ಬರವಣಿಗೆ ಶುರು ಮಾಡಲು ಪಟ್ಟ ಆತಂಕ, ಶ್ರಮವನ್ನು ಕೂಡ ಅವರ ಮಾತುಗಳಲ್ಲಿ ಹೇಳುತ್ತಾರೆ. ಆದರೆ, ಮೊದಲು ಬರೆದ ಆ ಲೇಖನವೇ ಇವರ ಪ್ರತಿಭೆಯನ್ನು ಎಲ್ಲರೆದುರಿಗೆ ಅನಾವರಣಗೊಳಿಸುತ್ತದೆ. ಅಲ್ಲದೇ ಹೆಚ್ಚಿನ ಜನರು ಹಾಗೂ ಸಾಹಿತಿಗಳು ಮೆಚ್ಚಿಕೊಳ್ಳುತ್ತಾರೆ. ನಂತರ, ಪತಿ ಹಾಗೂ ಮಕ್ಕಳು ನೀಡಿದ ಪ್ರೋತ್ಸಾಹದಿಂದ ಅಜ್ಜಿಯ ಕುರಿತಾಗಿ ಬರೆಯುತ್ತಾರೆ. ಅಜ್ಜಿಗೆ ಒಂದು ರೀತಿಯ ಅಕ್ಷರ ನಮನ ಸಲ್ಲಿಸಲು.. "ನನ್ನ ಅಜ್ಜಿಯ ಜಗತ್ತು" ಎನ್ನುವ ಪುಸ್ತಕ ಬರೆಯುತ್ತಾರೆ.


"ಕೇವಲ ಒಂದು ಪುಸ್ತಕವನ್ನು ಮಾತ್ರ ಬರೆದರೆ ಏನೋ ಆಕಸ್ಮಿಕವಾಗಿ ಪುಸ್ತಕ ಬರೆದಿದ್ದಾಳೆ ಎಂದುಕೊಳ್ಳುತ್ತಾರೆ. ನೀವೊಬ್ಬರು ಲೇಖಕಿ ಎಂದು ಸಮರ್ಥಿಸಿಕೊಳ್ಳಬೇಕಾದರೆ.. ಮತ್ತೊಂದು ಪುಸ್ತಕ ಅವಶ್ಯಕವಾಗಿ ಬರಲೇಬೇಕು." ಎನ್ನುವ ಗಂಡನ ಪ್ರೋತ್ಸಾಹಕ ನುಡಿಗಳಿಂದ ಸ್ಫೂರ್ತಿಗೊಂಡು ಮತ್ತೊಂದು ಪುಸ್ತಕ ಬರೆಯುತ್ತಾರೆ. ಅದೇ ತನ್ನ ಮನೆಯ ಸದಸ್ಯರಂತೆಯೇ ಇದ್ದ ನಾಯಿ ಲಿಯೋ ಕುರಿತು.. ಅದರ ಹೆಸರೇ "ಆತ್ಮ ವೃತ್ತಾಂತ". 


ಮೊಮ್ಮಗಳು ಆದ್ಯ ಹಾಗೂ ಎರಡನೇ ಮೊಮ್ಮಗಳು 'ಅವನಿ'ಗಾಗಿ ಕಥೆಗಳನ್ನು ಹೇಳುತ್ತಾ.. ಹೇಳುತ್ತಾ.. ತಮ್ಮ ಕಥೆಗಳ  ಭಂಡಾರದಿಂದ ಆಯ್ದ "ಅಮ್ಮಮ್ಮ ಹೇಳಿದ ಕಥೆಗಳು" ಎನ್ನುವ ಪುಸ್ತಕವನ್ನು ಮಕ್ಕಳಿಗಾಗಿಯೇ ವಿಶೇಷವಾಗಿ ಹೊರತಂದಿದ್ದಾರೆ. 


ರಜನಿ ನರಹಳ್ಳಿಯವರು ಗೃಹಿಣಿಯಾಗಿದ್ದವರು. ಅವರಿಗೆ ಸರ್ಕಾರಿ ಉದ್ಯೋಗ ಸಿಕ್ಕಾಗ, ಅವರ ತಾಯಿ ಉದ್ಯೋಗಕ್ಕೆ ಹೋಗುವುದು ಬೇಡವೆಂದು ಹೇಳಿದ್ದರು. ನಂತರ, ಅಕಸ್ಮಾತ್ತಾಗಿ ನೋಡಲು ಹೋದ ನರಹಳ್ಳಿ ಬಾಲಸುಬ್ರಮಣ್ಯ ಅವರು ಇವರನ್ನು ಮೆಚ್ಚಿದಾಗ.. ಹೆಚ್ಚಿನ ನಿರೀಕ್ಷೆಯಿಲ್ಲದೆ, ಕನ್ನಡ ಲೆಕ್ಚರರ್ ಅನ್ನು ಮದುವೆಯಾದರು. ಇಬ್ಬರಲ್ಲಿಯೂ ಇದ್ದ ಭಿನ್ನತೆಗಳನ್ನೆಲ್ಲ ಮೀರಿ ಹೊಂದಿಕೊಂಡ ಬಗ್ಗೆ ಹೇಳಿದ ಪರಿ ಇಷ್ಟವಾಯಿತು. 


ಕೆಲವರಿರುತ್ತಾರೆ.. ಗೃಹಿಣಿಯರು ಎಂದರೆ ತಮ್ಮ ಬಗೆಗೆ ತಾತ್ಸಾರ ಮಾಡಿಕೊಳ್ಳುವವರು. ಇಲ್ಲವೇ.. ತಾವೇನೂ ಸಾಧಿಸಿಯೇ ಇಲ್ಲವೆಂಬ ಮನೋಭಾವದವರು. ಇತ್ತೀಚಿನ ಜನರೇಶನ್ ಗಳಲ್ಲಿ ಗೃಹಿಣಿಯರನ್ನು ಬಹಳ ನಿಕೃಷ್ಟವಾಗಿ ಕಾಣುವವರೂ ಇರುತ್ತಾರೆ. ಆದರೆ, ರಜನಿಯವರು ತಾವು ಗೃಹಿಣಿಯಾಗಿರುವುದರ ಬಗೆಗೆ ಕಿಂಚಿತ್ತು ಬೇಸರವಿಲ್ಲದೆ ಹೇಳಿದ ಮಾತುಗಳು ಇಷ್ಟವಾಯಿತು. "ಸರ್ಕಾರದ ಕೆಲಸಕ್ಕೆ ಹೋಗುತ್ತಿದ್ದರೆ.. ನಿವೃತ್ತಿ ಹೊಂದಿದ ದಿನ ಬೀಳ್ಕೊಡುಗೆಯ ಹಾರ, ತುರಾಯಿ, ಸಣ್ಣದೊಂದು ಟೀ ಪಾರ್ಟಿ ಸಿಗುತ್ತಿತ್ತು. ಸಹೋದ್ಯೋಗಿಗಳನ್ನು ಹಾಗೂ ಸಂಸ್ಥೆಯನ್ನು ಬಿಟ್ಟು ಹೋಗುವ ಖೇದವೂ ಇರುತ್ತಿತ್ತು.. ಆದರೆ, ನನಗೀಗ ಅದಾವುದೂ ಇಲ್ಲವೆನ್ನುತ್ತಾ.." ಗಂಡ ಮಕ್ಕಳ ಸೀಮಿತ ಜಗತ್ತಿನಲ್ಲಿ ಅವರು ಕಂಡ ನೆಮ್ಮದಿಯ ಬದುಕಿನ ಕುರಿತು ಹೆಮ್ಮೆಯಿಂದ ಹೇಳುತ್ತಾರೆ. 


ಹಾಗೆಂದು, ಅವರ ಬದುಕು ಬಹಳ ನೆಮ್ಮದಿಯಿಂದ ಕೂಡಿತ್ತು ಎಂದು ಹೇಳಲಾಗದು. ಆದರೆ, ಅವರು ತಮ್ಮ ಬದುಕನ್ನು ನೆಮ್ಮದಿಯನ್ನಾಗಿಸಿಕೊಂಡ ಪರಿ ನಿಜಕ್ಕೂ ಸ್ಫೂರ್ತಿದಾಯಕ. ಹೆಚ್ಚು ಸಂಪ್ರದಾಯ ಪಾಲಿಸುವ ಅತ್ತೆ, ಮಲೆನಾಡಿನಿಂದ ಬಯಲು ಸೀಮೆಗೆ ಬಂದ ರಜನಿಯವರು ಕುಟುಂಬಕ್ಕೆ ಹೊಂದಿಕೊಂಡದ್ದು, ಪತಿಯ ವಿದ್ಯಾರ್ಥಿಗಳು ಮನೆಗೆ ಬರುತ್ತಿದ್ದಾಗ ಹಾಗೂ ನೆಂಟರು ಬಂದಾಗ ಆದರಿಸುತ್ತಿದ್ದ ರೀತಿ, ತಂದೆ ಇಲ್ಲದ ಮನೆಯಲ್ಲಿ ಪತಿ ತಮ್ಮ ಇಬ್ಬರು ತಮ್ಮಂದಿರ ಹೊಣೆ ಹೊತ್ತಾಗ ಅದಕ್ಕೆ ಸಹಕರಿಸಿದ ಪರಿ, ರಜನಿಯವರ ಸರಳತೆ.. ಅದನ್ನು ಅವರ ಪತಿಯ ಮಾತುಗಳಲ್ಲಿ ಕೇಳುವಾಗ ರಜನಿಯವರ ಕುರಿತ ಗೌರವ ಇಮ್ಮಡಿಸುತ್ತದೆ.


ಹೆಣ್ಣು ಏನೇ ಸಾಧನೆ ಮಾಡಲು ಮನೆಯವರ ಪ್ರೋತ್ಸಾಹ ಬಹಳವೇ ಮುಖ್ಯ. ರಜನಿಯವರಿಗೆ ಇದು ದೊರೆತಿತ್ತು. ಅಲ್ಲದೆ, ಅವರು ಉಲ್ಲೇಖಿಸಿದ ಒಂದು ಘಟನೆ ನನಗೆ ಬಹಳ ಹಿಡಿಸಿತು.

'ಹೊರ ರಾಜ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭ ಸೆಮಿನಾರ್ ಗಳಿಗೆ ಸಂಕೋಚವಿಲ್ಲದೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು' ಎಂದಿದ್ದಾರೆ. ಇಲ್ಲಿ 'ಸಂಕೋಚವಿಲ್ಲದೆ' ಎಂದು ಒತ್ತಿ ಹೇಳುತ್ತಾರೆ. ಏಕೆಂದರೆ, ಹೆಚ್ಚಿನ ಸಾಹಿತಿಗಳ ಪತ್ನಿಯರನ್ನು ಅವರು ಸಭೆಯಲ್ಲಿ ಕಾಣುತ್ತಿರಲಿಲ್ಲ. ಒಮ್ಮೆ ಅವರ ಪತಿಯ ಸ್ನೇಹಿತರು "ಇನ್ನೂ ನಿನ್ನ ಹೆಂಡತಿಯನ್ನು ಕರೆದುಕೊಂಡು ಬರುತ್ತಿದ್ದಿಯೇನೋ..?" ಎಂದು ಕೇಳಿದರು. ಆಗ ರಜನಿಯವರು ಅವರಿಗೆ ಮಾತಿನಲ್ಲೇ ಕೊಟ್ಟ ಉತ್ತರ ನಿಜಕ್ಕೂ ದಂಗುಬಡಿಸಿತು. "ಹಾಗಾದರೆ, ನಿಮ್ಮ ಹೆಂಡತಿ ಯಾರೊಂದಿಗೆ ಹೋಗಿದ್ದಾರೆ..??" ಎಂದು ಪ್ರಶ್ನಿಸುತ್ತಾರೆ. 


ಎಷ್ಟೋ ಮಂದಿ ಹೀಗೆ ಹೇಳುವವರನ್ನು ಕಂಡಿದ್ದೇನೆ. ಹೆಂಡತಿ ಮಾತು ಕೇಳುತ್ತಾನೆ, ಹೆಂಡತಿಯನ್ನು ಜೊತೆಯಲ್ಲೇ ಕರೆದುಕೊಂಡು ಬರುತ್ತಾನೆ. ಎಂದೆಲ್ಲಾ ಹೇಳುತ್ತಾರೆ. ಆಗ ಅಂತಹವರಿಗೆ ನೀಡಬಹುದಾದ ಸರಿಯಾದ ಉತ್ತರ ಇದೇ ಎಂದೆನಿಸಿತು. ರಾಜನಿಯವರ ಧೈರ್ಯ, ದಿಟ್ಟತನದ ಜೊತೆಗೆ ಪತಿ-ಪತ್ನಿಯರಲ್ಲಿದ್ದ ಅರ್ಥೈಸುವಿಕೆ ಹಾಗೂ ಸಾಮರಸ್ಯದ ಕುರಿತು ಇಲ್ಲಿ ಅರ್ಥವಾಗುತ್ತದೆ.


ಮಕ್ಕಳಿಬ್ಬರಿಗೂ ಅಮ್ಮ ಎಂದರೆ ಶಕ್ತಿ, ಧೈರ್ಯ. ಅವರ ನಡೆಗಳು ಪ್ರೇರಣಾದಾಯಕ. ಅಲ್ಲದೇ, ಸಾಧ್ಯವಾದುದಷ್ಟನ್ನೂ ಅವರ ಮಕ್ಕಳು ತಾವೂ ಕೂಡ ಅನುಸರಿಸುವುದರ ಕುರಿತು ಹೇಳಿಕೊಂಡಿದ್ದಾರೆ. ಮೊಮ್ಮಗಳು ಆದ್ಯಾ ಪಾಲಿಗಂತೂ ಅಮ್ಮಮ್ಮ ಎಂದರೆ ಸೂಪರ್ ವುಮೆನ್. ಅಜ್ಜಿಯನ್ನೇ ಸೂಪರ್ ವುಮೆನ್ ಆಗಿ ಮಾಡಿಕೊಂಡಿರುವ, ಅವಳ ಕಲ್ಪನಾ ಶಕ್ತಿಯಲ್ಲಿ ಮೂಡಿ ಬಂದಿರುವ ಕಥೆಯೊಂದನ್ನು ಓದುತ್ತಿದ್ದರೆ.. ಒಳ್ಳೆಯ ಫ್ಯಾಂಟಸಿ ಲೋಕದಲ್ಲಿ ವಿಹರಿಸಿದಂತೆನಿಸಿತು. 


ಹೊರಗಿನ ದೃಷ್ಟಿಯಲ್ಲಿ ದೊಡ್ಡವರಾಗುವುದಕ್ಕೂ.. ಮನೆಯವರ ದೃಷ್ಟಿಯಲ್ಲಿಯೂ ಒಳ್ಳೆಯವರಾಗುವುದಕ್ಕೂ ವ್ಯತ್ಯಾಸವಿದೆ. ಎರಡನ್ನೂ ಸಂಭಾಳಿಸಿಕೊಂಡು ಬಂದಿರುವ ರಜನಿಯವರ ಕುರಿತ ಗೌರವ ಇಮ್ಮಡಿಸುತ್ತದೆ. ಅವರ ಮನೆಂಗಳದ ಹಲವಾರು ಘಟನೆಗಳನ್ನು ಕೇಳಿದಾಗ.. ನಮ್ಮ ಕಣ್ಮುಂದೆಯೇ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಅವರ ಧೈರ್ಯ, ಸರಳತೆ ,ಹೊಂದಿಕೊಳ್ಳುವ ಪರಿ, ಅವರ ವ್ಯಕ್ತಿತ್ವ..  ಕೇವಲ ಅವರನ್ನು ಲೇಖಕಿಯನ್ನಾಗಿ ನೋಡುವ ನಮಗೆ ಎಲ್ಲ ರೀತಿಯ ನೋಟಗಳನ್ನು ಕಟ್ಟಿಕೊಟ್ಟಿತು ಈ ಪುಸ್ತಕ. ಲೇಖಕಿಯ ಇತರ ಕೃತಿಗಳನ್ನೂ ಓದುವ ಹಂಬಲವಾಗಿದೆ. ಆಸಕ್ತಿಕರವಾಗಿರುವ ಈ ಪುಸ್ತಕ ಇಂತಹಾ ಎಷ್ಟೋ ಸುಂದರ ಘಟನೆಗಳನ್ನು ತನ್ನೊಳಗೆ ಅವಿಸಿಟ್ಟುಕೊಂಡಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ