ಪುಸ್ತಕದ ಶೀರ್ಷಿಕೆ : ರಂಗನಾಯಕಿ
ಲೇಖಕರು : ಅಶ್ವತ್ಥ
ಪ್ರಕಾಶಕರು : ಶಾರದ ಪ್ರಕಾಶನ
ಮೊದಲನೇ ಮುದ್ರಣ : 1953
ಪುಟಗಳು : 251
ಚಲನಚಿತ್ರ : ರಂಗನಾಯಕಿ
ನಿರ್ದೇಶಕರು : ಪುಟ್ಟಣ್ಣ ಕಣಗಾಲ್
ತಾರಾಗಣ : ಆರತಿ, ಅಂಬರೀಶ್, ರಾಮಕೃಷ್ಣ, ಅಶೋಕ್, ರಾಜಾನಂದ್ ಮುಂತಾದವರು
ನವೋದಯದ ಸಾಹಿತ್ಯಕಾರರಲ್ಲಿ ಅಶ್ವತ್ಥ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆದರೆ, ಅವರು ಎಂದಿಗೂ ಪ್ರಸಿದ್ಧಿಯ ಹಿಂದೆ ಹೋದವರಲ್ಲ. ಇವರು ಚಿಕ್ಕಮಗಳೂರಿನ ಕೂದುವಳ್ಳಿಯವರು. ತಮ್ಮ ಪಾಡಿಗೆ ತಾವು ಬರೆಯುತ್ತಾ ಉಳಿದವರು. ಇವರು ಸಾಕಷ್ಟು ಕಥೆ, ಕಾದಂಬರಿ ,ಪ್ರಬಂಧಗಳನ್ನು ರಚಿಸಿದ್ದಾರೆ. ಇವರ ಮುನಿಯನ ಮಾದರಿ, ಮರ್ಯಾದಾ ಮಹಲ್ ಹಾಗೂ ರಂಗನಾಯಕಿ ಕಾದಂಬರಿಗಳು ಚಲನಚಿತ್ರವಾಗಿವೆ.
ಅಶ್ವತ್ಥ ಅವರ ರಂಗನಾಯಕಿ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರವಾಗಿದೆ. ಆದರೆ, ಚಲನಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕಥೆಯ ಎಳೆ ಅದೇ ಇದ್ದರು ಬಹಳಷ್ಟನ್ನು ಮಾರ್ಪಡಿಸಲಾಗಿದೆ. ಮೊದಲಿಗೆ ಕಾದಂಬರಿಯ ಕುರಿತ ಪರಿಚಯ ಮಾಡಿಕೊಡುತ್ತೇನೆ.
ಪ್ರತಿಯೊಬ್ಬ ನಟಿಯ ಬದುಕಿನಲ್ಲಿಯೂ ಒಂದೊಂದು ಆಸೆ ಇರಬಹುದು.. ಹಾಗೆಯೇ ರಂಗನಾಯಕಿಯ ಮನಸ್ಸಿನಲ್ಲಿ ಸುಪ್ತವಾಗಿದ್ದ ಆಸೆ ಗೃಹಿಣಿಯಾಗುವುದು. ತಾಯಿಯಾಗುವುದು.. ಹೀಗೆ ಹೆಣ್ತನವನ್ನು ಸಾರ್ಥಕಗೊಳಿಸಿಕೊಳ್ಳುವ ಸುಪ್ತ ಆಸೆಗಳನ್ನಿಟ್ಟುಕೊಂಡೇ ಆಕೆ ರಂಗಮಂದಿರದಲ್ಲಿ ತನ್ನ ತಂಡದವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಳು. ತಾಯಿ ಇಲ್ಲದ ತಬ್ಬಲಿ. ಸಾಕಿದ್ದು ಶಾಮಣ್ಣನವರು. ಹೀಗೆ ತನ್ನ ತಂಡದವರೊಂದಿಗೆ ತರೀಕೆರೆಗೆ ಬಂದಾಗ ಅಲ್ಲಿನ ರಾಮಸೆಟ್ಟರ ಮಗ ನಾಗರಾಜ ಆಕೆಯನ್ನು ನೋಡಿ ಮೋಹಿತನಾದ. ಆದರೆ, ಅದು ಕೇವಲ ಮೋಹವಲ್ಲ. ಅದು ಪ್ರೀತಿಗೆ ತಿರುಗಿ ಆಕೆಯನ್ನೇ ವಿವಾಹವಾಗುವುದಾಗಿ ನಿಶ್ಚಯಿಸಿ, ಆಕೆಯನ್ನು ಆ ಕುರಿತು ಕೇಳಿದಾಗ.. ಮನಸ್ಸಿನ ಬಯಕೆಗಳು ಗರಿಗೆದರಿ ತಾನು ಗೃಹಿಣಿಯಾಗುವುದೇ ಸೂಕ್ತ ಎಂದು ಒಪ್ಪುತ್ತಾಳೆ. ರಂಗನಾಯಕಿಯೇ ಆ ತಂಡದ ಪ್ರಮುಖ ನಾಯಕಿ. ಅವಳು ಹೋದ ನಂತರ ನಾಟಕಗಳು ಕಳೆಗುಂದುತ್ತವೆ. ಯಾರೇ ಬಂದರೂ ಮೊದಲಿನ ಕಳೆಯೇ ಇರುವುದಿಲ್ಲ.
ಇತ್ತ ನಾಗರಾಜನ ಮನೆಯಲ್ಲಿ ಆತನ ಮದುವೆಗೆ ಅವನ ತಂದೆ ಒಪ್ಪದೇ.. ನಿನಗೆ ಯಾವ ಆಸ್ತಿಯನ್ನು ನೀಡುವುದಿಲ್ಲ ಎಂದು ತೀರ್ಮಾನಿಸಿದಾಗ ಆತ ಬರಿಗೈಯಲ್ಲೇ ಮನೆ ತೊರೆದು ಬಂದ. ಆದರೆ, ಆತನ ತಾಯಿಯದ್ದು ಎಷ್ಟಾದರೂ ತಾಯಿ ಹೃದಯ. ಮಮತೆಯಿಂದ ಆಕೆ.. ತನ್ನ ಮಗ ಯಾರನ್ನೇ ಮದುವೆಯಾದರೂ, ಅವಳನ್ನೇ ಸೊಸೆ ಎಂದು ಒಪ್ಪುತ್ತೇನೆ ಎಂದು ವಂಶಪಾರಂಪರ್ಯವಾಗಿ ಬಂದಿದ್ದ ಒಡವೆಯೊಂದನ್ನು ಕೊಟ್ಟು ಕಳುಹಿಸುತ್ತಾರೆ.
ನಾಗರಾಜ ಹಾಗೂ ರಂಗನಾಯಕಿಯರ ದಾಂಪತ್ಯ ಜೀವನ ಶುರುವಾಗುತ್ತದೆ. ರಂಗನಾಯಕಿಗೆ ಮೊದಲಿನಿಂದಲೂ ಅಡುಗೆ ಮಾಡಿಯೂ ಗೊತ್ತಿಲ್ಲ. ಜೊತೆಗೆ ತೀರಾ ಬಡತನದಲ್ಲಿ.. ಏನೂ ಇಲ್ಲದೆ ಬದುಕು ಸವೆಸಿದವಳೂ ಅಲ್ಲ. ಮನೆಯಿಂದ ತಂದಿದ್ದ ಹಣ, ಕೈಯಲ್ಲಿದ್ದ ಹಣ ಖರ್ಚಾಗುತ್ತದೆ. ಅಡುಗೆ ಗೊತ್ತಿಲ್ಲದ ಅವಳು ಮೊದಲಿಗೆ ಕೈ ಸುಟ್ಟುಕೊಂಡು ಅರೆಬರೆ ಬೇಯಿಸಿಕೊಂಡು.. ಹೇಗೋ ಏನೋ.. ಇಬ್ಬರೂ ದಿನದೂಡುತ್ತಿರುವಾಗಲೇ ನಾಗರಾಜನಿಗೆ ಕೆಲಸ ಸಿಗುತ್ತದೆ. ಸಂಬಳವೇನೋ ಸಿಗುತ್ತದೆ. ಆದರೆ, ಆ ಸಂಬಳ ತೀರಾ ಕಡಿಮೆ. ಬಡತನದಲ್ಲಿಯೇ ದಿನ ದೂಡುತ್ತಿರುವಾಗ ಒಮ್ಮೆ ಶಾಮಣ್ಣನವರು ಬಂದು ಅವಳ ಪರಿಸ್ಥಿತಿ ನೋಡಿ ಅದಕ್ಕಾಗಿ ಮರುಗುತ್ತಾರೆ. ತಮ್ಮ ಕೈಲಾದ ಸಹಾಯವನ್ನೂ ಮಾಡುತ್ತಾರೆ.
ನಾಗರಾಜನ ತಂದೆ ತೀರಿಕೊಂಡ ನಂತರ ಆಸ್ತಿ ಸಿಕ್ಕು ಮೊದಲಿನ ಶ್ರೀಮಂತ ಬದುಕಿಗೆ ಬದಲಾಗುತ್ತಾನೆ. ಆದರೂ, ಮೊದಲಿದ್ದ ಊರಿಗೆ ಅವರಿಬ್ಬರೂ ವಾಪಾಸ್ಸಾಗದೇ ಬೆಂಗಳೂರಿನಲ್ಲಿಯೇ ನೆಲೆಸುತ್ತಾರೆ. ರಂಗನಾಯಕಿಗೆ ಮಗುವಾಗುತ್ತದೆ. ಅವನೇ ಚಂದು. ಬಯಸಿ ಬಯಸಿ ಪಡೆದ ಮಗು ಅದು. ನಾಟಕ ರಂಗದಲ್ಲಿದ್ದಾಗ ಮೈ ಕೆಡುತ್ತದೆ ಎಂದು ಔಷಧಿ ತೆಗೆದುಕೊಂಡ ಪರಿಣಾಮ ತಾತ್ಕಾಲಿಕವಾಗಿ ಕೆಲವು ವರ್ಷ ಅವಳಿಗೆ ಮಕ್ಕಳಾಗದೆ, ನಂತರ ಮಗುವಾದ ಅವನನ್ನು ಆಯಾಳ ಕೈಗೂ ಕೊಡದೆ ತಾನೇ ಖುದ್ದಾಗಿ ಸಾಕಿ ಬಹಳ ಮುದ್ದಿನಿಂದ ಬೆಳೆಸುತ್ತಿರುತ್ತಾಳೆ.
ಹೀಗಿರುವಾಗ ಶ್ರೀಮಂತ ಬದುಕಿನಲ್ಲಿ ಮತ್ತೊಮ್ಮೆ ಶಾಮಣ್ಣನವರ ಪ್ರವೇಶವಾಗುತ್ತದೆ. ಆಗ ಅವರ ನಾಟಕದ ತಂಡ ಅಲ್ಲಿಯೇ ಬಂದಿರುತ್ತದೆ. ಪ್ರದರ್ಶನಕ್ಕಾಗಿ ಅವರನ್ನು ಆಹ್ವಾನಿಸುತ್ತಾರೆ. ಹಿಂದಿನಂತೆಯೇ ಈ ಬಾರಿಯೂ ಅಲ್ಲಿಗೆ ಹೋಗಿ ಬಂದ ರಂಗನಾಯಕಿಗೆ ಹಳೆಯದ್ದೇ ಗುನುಗು. ಅವಳಿಗೆ, ತಾನು ನಾಟಕ ರಂಗದಿಂದ ದೂರ ಬಂದುದು ಅಷ್ಟು ಸಹ್ಯವಾಗಿರುವುದಿಲ್ಲ. ಯಾವಾಗಲೂ ನಾಟಕ ,ಪಾತ್ರ ,ಬಣ್ಣ ಹೀಗೆಯೇ ಆಲೋಚಿಸುತ್ತಿರುತ್ತಾಳೆ. ನಾಟಕ ರಂಗದ ಸೆಳೆತ ಹೆಚ್ಚಾಗುತ್ತದೆ. ಒಂದು ದಿನ ನಾಯಕಿ ಬರೆದಿದ್ದಾಗ ತಾನೇ ನಾಯಕಿಯಾಗಿ ನಟಿಸಲು ಒಪ್ಪುತ್ತಾಳೆ. ಆದರೆ, ಅದೇ ದೊಡ್ಡ ಸುದ್ದಿಯಾಗಿ ನಾಗರಾಜನನ್ನು ತಲುಪುತ್ತದೆ.
ಆತನಿಗೆ ತನ್ನ ಹೆಂಡತಿ ಮತ್ತೆ ನಾಟಕ ರಂಗದಲ್ಲಿ ಭಾಗವಹಿಸಬಾರದೆಂಬ ಇಚ್ಛೆ ಇರುತ್ತದೆ. ಇದರ ಕುರಿತು ಆತ ಮೊದಲೇ ಎಚ್ಚರಿಸಿರುತ್ತಾನೆ. ಯಾವುದು ಬೇಡವೆನ್ನುತ್ತಾನೋ.. ಅದೇ ಆದಾಗ, ಇಬ್ಬರ ಬದುಕಿನ ದಾರಿಗಳೂ ಬೇರೆಯಾಗುತ್ತವೆ. ರಂಗನಾಯಕಿ ತನ್ನ ಗಂಡ ಹಾಗೂ ಮಗುವಿನ ಸುಂದರ ಜೀವನಕ್ಕಾಗಿ ತ್ಯಾಗ ಮಾಡಿ ಮಗುವನ್ನು ತಂದೆಯೊಡನೆ ಬಿಟ್ಟು ನಾಟಕ ರಂಗಕ್ಕೆ ಮರಳಿ ಬರುತ್ತಾಳೆ.
ನಾಗರಾಜನ ತಾಯಿಯೂ ಇದೇ ಸಂದರ್ಭದಲ್ಲಿ ತೀರಿ ಹೋಗುತ್ತಾರೆ. ಇಲ್ಲಿಂದ ಮುಂಬೈಗೆ ಹೋದರೆ ಅಲ್ಲಿ ಹೆಚ್ಚಿನ ಅವಕಾಶಗಳಿರುತ್ತವೆ ಎಂದು ಕಪೂರ್ ಚಂದ್ ಸೇಟ್ ಹೇಳಿದಾಗ ಆಕೆ ಒಪ್ಪುವುದಿಲ್ಲ. ಅದಕ್ಕೆ ಕಾರಣವಿಷ್ಟೇ.. ಇಲ್ಲಿದ್ದರೆ ತನ್ನ ಮಗನನ್ನು ದಿನಾ ನೋಡಬಹುದು ಎಂದು. ಆದರೆ, ನಾಗರಾಜ ಅವಳ ಆಸೆಯನ್ನು ಮಣ್ಣು ಮಾಡಿ ಮಗನನ್ನು ಕರೆದುಕೊಂಡು ಎಲ್ಲಿಯೋ ಅಜ್ಞಾತ ಸ್ಥಳಕ್ಕೆ ಹೋಗಿರುತ್ತಾನೆ. ರಂಗನಾಯಕಿಗಾಗಿ ತನ್ನ ಬದುಕಿನಲ್ಲಿ ಯಾವಾಗಲೂ ಜಾಗವಿದೆ ಎಂದೂ.. ಆಕೆ ಬರುವುದಾದರೆ ಪೇಪರ್ ನಲ್ಲಿ ಒಂದು ಪ್ರಕಟಣೆ ಕೊಟ್ಟರೆ ತಾನೇ ಕರೆದುಕೊಂಡು ಹೋಗುವೆನೆಂದು ತಿಳಿಸುತ್ತಾನೆ.
ಕಪೂರ್ ಚಂದ್ ಸಲಹೆಯಂತೆ ಮುಂಬೈಗೆ ಹೋಗಿ ಅಲ್ಲಿ ಅವರ ಸಂಬಂಧಿಗಳಾದ ಧನಚಂದ್ ಅವರ ಸಹಾಯದಿಂದ ದೊಡ್ಡ ನಟಿಯಾಗುತ್ತಾಳೆ. ಆದರೆ, ಇಲ್ಲಿನ ನಾಟಕಗಳಲ್ಲಿ ನಟಿಸುವಾಗ ಅವಳ ಹೆಸರು ರಂಗನಾಯಕಿಯ ಬದಲಾಗಿ 'ಮಾಲಾ' ಎಂದು ಬದಲಾಗುತ್ತದೆ. ಮಾಲಾಳ ಪ್ರಸಿದ್ದಿ ದಿನೇ ದಿನೇ ಬೆಳೆಯುತ್ತದೆ. ಅದು ಎಷ್ಟೆಂದು ಒಂದು ನಿದರ್ಶನ ಕೊಡುತ್ತಾರೆ. ಎಲ್ಲಾ ಕಡೆಯಲ್ಲಿಯೂ ಮಾಲಾ ಎಂಬ ಹೆಸರು ಜನಜನಿತವಾಗಿ ಜಯ, ಪದ್ಮ ಈ ರೀತಿಯ ಹೆಸರುಗಳಿಗೆ ಮುಂದೆ ಪದ್ಮಮಾಲಾ, ಜಯಮಾಲಾ ಎನ್ನುವ ಹೆಸರು ಸೇರಿಕೊಳ್ಳುತ್ತದೆ. ಫ್ಯಾಷನ್ ಗಳು ,ಹೋಟೆಲ್ ಗಳು ಈ ರೀತಿಯ ಹೊಸ ಅಂಗಡಿ, ಕಟ್ಟಡಗಳಿಗೆಲ್ಲಾ ಮಾಲಾಳ ಹೆಸರು ಬರುತ್ತದೆ.
ಈ ರೀತಿ ಪ್ರಸಿದ್ಧಿಯಾದ ಮಾಲಾಳಿಗೆ ತನಗೆ ವಯಸ್ಸಾಗಿದೆ ಎಂಬುದೇ ಗೊತ್ತಾಗದಂತೆ ತನ್ನ ಸೌಂದರ್ಯವನ್ನು ನಿಭಾಯಿಸುತ್ತಿರುತ್ತಾಳೆ. ರಾವ್ ಬಹದ್ದೂರ್ ಎಂಬ ನಟನ ಜೊತೆ ಕೊಂಚ ರಗಳೆಯಾದರೂ.. ಧನಚಂದ್ ಪ್ರಭಾವದಿಂದ ಅದರಲ್ಲೂ ಜಯಿಸುತ್ತಾಳೆ. ಧನಚಂದ್ ರು ಆಕೆಯನ್ನು ಮದುವೆಯಾಗುವ ಆಸಕ್ತಿ ವ್ಯಕ್ತಪಡಿಸಿದಾಗ ಮಗನಿಗಾಗಿ ತಿರಸ್ಕರಿಸುತ್ತಾಳೆ.
ನಂತರ, ತನ್ನ ಮನೆಗೆ ಬರುವ ಚಿತ್ರ ಕಲಾವಿದನೊಬ್ಬನ ಬಳಿ ಮಗ ಎನ್ನುವ ಮಮತೆಯಿಂದಲೇ ನಡೆದುಕೊಂಡರೂ.. ಆತ ಅವಳೆಡೆಗೆ ಪ್ರೇಮವನ್ನು ತೋರಿಸುತ್ತಾನೆ. ಅದು ಬೇರಾರೂ ಅಲ್ಲದೆ.. ಆಕೆಯ ಮಗನೇ. ಆತನ ಗುರುತು, ಹೆಸರು ಬದಲಾಗಿದ್ದರೂ..ಪ್ರೇಮದ ಕಾಣಿಕೆಯಾಗಿ ತನ್ನ ಅತ್ತೆ ಕೊಟ್ಟ ವಂಶಪಾರಂಪರ್ಯವಾದ ಒಡವೆಯನ್ನು ಆತ ಮಾಲಾಳಿಗೆ ನೀಡಿದಾಗ ಆಕೆಗೆ ಸತ್ಯ ಅರಿವಾಗುತ್ತದೆ. ಅದನ್ನು ತಿರಸ್ಕರಿಸಿದರೂ, ಮಗನಿಗೆ ಸತ್ಯ ತಿಳಿಸುವುದಿಲ್ಲ. ಬದಲಾಗಿ ವಿಳಾಸ ತೆಗೆದುಕೊಂಡು ತನ್ನ ಗಂಡ ನಾಗರಾಜನಿಗೆ ಆ ವಿಚಾರ ತಿಳಿಸಿದಾಗ.. ಈಗಲೂ ಆ ನಾಟಕ ರಂಗದಿಂದ ದೂರವಾದರೆ ತಾವು ಒಪ್ಪುತ್ತೇವೆ ಎನ್ನುವ ಪ್ರತ್ಯುತ್ತರ ಸಿಗುತ್ತದೆ. ಇದಾದ ನಂತರ ರಂಗನಾಯಕಿ ಸಂಪೂರ್ಣವಾಗಿ ಎಲ್ಲದರಿಂದಲೂ ದೂರವಾಗಿಬಿಡುತ್ತಾಳೆ. ಹೆಚ್ಚಾದ ನಿದ್ದೆ ಮಾತ್ರೆಯ ಪ್ರಭಾವದಿಂದ ಆಕೆ ಸಾವನ್ನಪ್ಪುತ್ತಾಳೆ.
ಚಲನಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಾಗೆ ನೋಡಿಕೊಂಡರೆ, ಸಾಹಿತ್ಯಕವಾಗಿ ಮಾರ್ಮಿಕವಾಗಿ ಬರೆಯಲಾಗಿರುವ ಕಾದಂಬರಿಗಿಂತ ಹೆಚ್ಚಿನವರಿಗೆ ಚಲನಚಿತ್ರವೇ ಇಷ್ಟವಾಗಬಹುದು. ಏಕೆಂದರೆ, ಆಗಾಗ ಬರುವ ನಾಟಕದ ಸಂಭಾಷಣೆಗಳು ನಿಜ ಜೀವನಕ್ಕೂ ತಾಳೆಯಾಗುತ್ತವೆ.
ಚಲನಚಿತ್ರದ ರಂಗನಾಯಕಿಗೆ ಶಾಮಣ್ಣನವರು ಸಾಕು ತಂದೆ. ಅಲ್ಲದೇ, ಅವರ ಮಗನಾದ ರಾಮಣ್ಣ ಆಕೆಗೆ ಅಣ್ಣನಂತೆ. ಚಲನಚಿತ್ರದಲ್ಲಿ ರಾಮಣ್ಣನ ಪಾತ್ರ ಒಂದು ರೀತಿಯ ತ್ಯಾಗಮಯಿಯ ಪಾತ್ರವೆಂದರೂ ತಪ್ಪಾಗಲಾರದು. ಮೊದಲಿಗೆ ಆಕೆಯ ಮೇಲೆ ಪ್ರೀತಿ ಇದ್ದರೂ.. ಆಕೆ ತನ್ನನ್ನು ಅಣ್ಣನಂತೆ ಕಂಡಾಗ ,ಅವಳನ್ನು ರಕ್ಷಿಸಿ ಬೆನ್ನಿಗೆ ನಿಂತು ಅವಳ ಪ್ರತಿ ಕಷ್ಟದ ಸಂದರ್ಭದಲ್ಲಿಯೂ.. ತಾನು ಅವಳ ರಕ್ಷಾ ಕವಚದಂತಿರುತ್ತಾನೆ. ಕಾದಂಬರಿಯ ರಾಮಣ್ಣನದ್ದು ಒಂದೆರಡು ಸಂಭಾಷಣೆಯಿರಬಹುದೇನೋ ಅಷ್ಟೇ..
ನಾಗರಾಜ ಹಾಗೂ ರಂಗನಾಯಕಿಯ ವಿವಾಹದ ನಂತರ ಕಷ್ಟಕಾರ್ಪಣ್ಯಗಳ ದೃಶ್ಯಗಳೇನೂ ಅಷ್ಟಿಲ್ಲ. ಅಲ್ಲದೆ, ನಾಗರಾಜನೇ ಶಾಮಣ್ಣ ಹಾಗೂ ರಾಮಣ್ಣನಿಗೆ ಕಾಗದ ಬರೆಯಬೇಡಿ ಎಂದು ಅವರನ್ನು ದೂರವಿಡುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿ ತೋರಿಸಿದ್ದಾರೆ. ಇಲ್ಲಿ ಆಕೆಯೇ ತನ್ನ ಗಂಡ ಹಾಗೂ ಮಗುವಿನಿಂದ ಬೇರೆಯಾಗುವುದಿಲ್ಲ. ಬದಲಾಗಿ ನಟಿ ಬಂದಿಲ್ಲವೆಂದ ಕಾರಣಕ್ಕಾಗಿ ರಂಗದಲ್ಲಿ ನಟಿಸಿದಾಗ ಮಗುವನ್ನು ಕರೆದುಕೊಂಡು ಆತನೇ ದೂರಕ್ಕೆ ಹೊರಟುಬಿಡುತ್ತಾನೆ.
ಕಾದಂಬರಿಯಲ್ಲಿ ಬೆಂಗಳೂರಿನ ನಾಟಕರಂಗದಿಂದ ಮುಂಬೈ ನಾಟಕ ರಂಗಕ್ಕೆ ಬಂದ ರಂಗನಾಯಕಿಯ ಚಿತ್ರಣವಿದ್ದರೆ ಇಲ್ಲಿ ನಾಟಕ ರಂಗದಿಂದ ಸಿನಿಮಾಕ್ಕೆ ಹೋಗುವ ರಂಗನಾಯಕಿಯ ಚಿತ್ರಣವಿದೆ. ಅಲ್ಲದೆ, ಅವಳದ್ದೊಂದು ಉದಾತ್ತ ಆಲೋಚನೆಯೂ ಇಲ್ಲಿದೆ. ತನ್ನ ಸಾಕು ತಂದೆ ಶಾಮಣ್ಣನವರ ಹೆಸರಿನಲ್ಲಿ ಒಂದು ರಂಗಮಂಟಪವನ್ನು ಕಟ್ಟಿಸಬೇಕೆನ್ನುವ ಆಸೆ. ಅದಕ್ಕೆ ಬೇಕಾಗಿರುವ ಹಣಕ್ಕಾಗಿ, ಸಿನಿಮಾದಲ್ಲಿ ನಟಿಸುವ ಆಮಂತ್ರಣಕ್ಕೆ ಒಪ್ಪಿಗೆ ನೀಡುತ್ತಾಳೆ. ಕಾದಂಬರಿಯಲ್ಲಿ ರಾವ್ ಬಹದ್ದೂರ್ ಜೊತೆ ಜಗಳವಾಗುವ ಸಂದರ್ಭದಲ್ಲಿ ಸೇಠ್ ಕಾಪಾಡಿದರೆ.. ಇಲ್ಲಿ ನಾಯಕನಟನೊಬ್ಬನ ಜೊತೆ ಯಾವುದೋ ಒಂದು ವಿಚಾರಕ್ಕೆ ಸಣ್ಣ ಜಗಳವಾಗಿ ಎಷ್ಟೋ ಅವಕಾಶಗಳು ಕೈತಪ್ಪಿ ಹೋಗಿ ಮತ್ತೆ ಆಕೆ ನಾಟಕರಂಗಕ್ಕೆ ಮರಳುವ ಸನ್ನಿವೇಶವಿದೆ.
ಈ ಚಲನಚಿತ್ರದ ಕೊನೆಯ ಭಾಗದಲ್ಲಿ ಹೆಚ್ಚಿನ ಭಾಗ ತೋರಿಸಿರುವುದು ಶೇಖರ್ ಹಾಗೂ ಮಾಲಾಳ ಕುರಿತು. ಶೇಖರ್ ಮತ್ತಾರೂ ಆಗಿರದೆ ಮಾಲಾ ಅಂದರೆ ರಂಗನಾಯಕಿಯ ಮಗನೇ ಆಗಿರುತ್ತಾನೆ. ಆತನಿಗೆ ಆಕೆಗೆ ತನಗಿಂತ ವಯಸ್ಸಾಗಿದೆ ಎಂದು ತಿಳಿದಿದ್ದರೂ.. ಆಕೆಯನ್ನು ಪ್ರೇಮಿಸುತ್ತಿರುತ್ತಾನೆ. ಕಾರಣ, ಆತನಿಗೆ ನಿಜ ವಿಚಾರ ಗೊತ್ತಿರುವುದಿಲ್ಲ. ನಾಗರಾಜ ಮತ್ತೊಂದು ಮದುವೆಯಾಗಿ ಆಕೆಯನ್ನೇ ತಾಯಿ ಎಂದು ಹೇಳಿರುತ್ತಾನೆ.
ಅಚಾನಕ್ಕಾಗಿ ಮಾಲಾಳಿಗೆ ಸಿಗುವ ನಾಗರಾಜ ಮಗನನ್ನು ತೋರಿಸುವೆನೆಂದು ಒಪ್ಪುತ್ತಾನೆ. ಆದರ, ವಿಧಿಯ ವಂಚನೆಯಿಂದ ಆಕೆಗೆ ತನ್ನ ಮಗ ಯಾರು ಎಂದೇ ಗೊತ್ತಾಗುವುದಿಲ್ಲ. ಮಗನನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಂಡ ಅವಳು ಅತಿಯಾಗಿ ನಿದ್ರೆ ಮಾತ್ರೆ ತೆಗೆದುಕೊಂಡು ಸಾವನ್ನಪ್ಪುತ್ತಾಳೆ. ಆದರೆ, ಮಗನಿಗೆ.. ಆಕೆ ತನ್ನ ತಾಯಿ ಎಂದು ಗೊತ್ತಾಗಿ, ತುಂಬಿ ಮನಸ್ಸಿನಿಂದ ಆಕೆಯನ್ನು ಒಪ್ಪುತ್ತಾನೆ. ಆದರೆ, ಅವನು ಮರಳುವ ಹೊತ್ತಿಗೆ ಆಕೆ ಈ ಲೋಕದಲ್ಲಿಯೇ ಇರುವುದಿಲ್ಲ.
ರಂಗನಾಯಕಿ ನನಗೆ ಕೇವಲ ನಟನೆ ಮಾಡುವ ಹೆಣ್ಣೊಬ್ಬಳ ಜೀವನವಾಗಿ ಮಾತ್ರ ಕಾಣಲಿಲ್ಲ. ಬದಲಾಗಿ ಇಲ್ಲಿ ನಾಟಕ ರಂಗದಲ್ಲಿರುವ ಕಷ್ಟ-ಕಾರ್ಪಣ್ಯಗಳು, ಹೆಣ್ಣಾಗಿ ಆಕೆಯ ಚಾರಿತ್ರ್ಯವನ್ನು ಉಳಿಸಿಕೊಳ್ಳಲು ಹೆಜ್ಜೆ-ಹೆಜ್ಜೆಗೂ ಎದುರಾಗುವ ಅಗ್ನಿ ಪರೀಕ್ಷೆಗಳು, ಅಷ್ಟೇ ಅಲ್ಲದೆ ಚಿತ್ರರಂಗ ಅಥವಾ ನಾಟಕ ರಂಗದಲ್ಲಿ ಆಕೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೆಣಗಾಡುವ ಪರಿ, ತೆರೆಯ ಹಿಂದಿನ ಬಣ್ಣ ಕಳಚಿದ ನಂತರದ ಬದುಕು, ಆ ಜೀವನದಿಂದ ದೂರಾದ ನಂತರ ಆಕೆಯ ಪರಿತಪಿಸುವ ಭಾವನೆಗಳು ಇವೆಲ್ಲವೂ ಕಾಣುತ್ತದೆ.
ತೆರೆಯ ಮೇಲೆ ನಾಯಕಿಯಾಗಿ ಮೆರೆಯುವ ಆಕೆ ನಿಜ ಜೀವನದಲ್ಲಿ ದುರಂತ ನಾಯಕಿ ಎಂದರೂ ತಪ್ಪಾಗಲಾರದು. ಆ ಕಾಲಕ್ಕೆ ಪುಟ್ಟಣ್ಣ ಕಣಗಾಲ್ ರವರು ನೀಡಿದ ಅಂತ್ಯ ವಿಭಿನ್ನವೆನ್ನಿಸಿತ್ತಂತೆ. ಅಲ್ಲದೆ, ಈ ರೀತಿಯ ಅಂತ್ಯ ಹೊಂದಿರುವ ಸಿನಿಮಾಗಳು ಬಂದರೂ.. ಅದು ಪುಟ್ಟಣ್ಣ ಕಣಗಾಲ್ ರವರನ್ನು ಕಾಪಿ ಮಾಡಿದಂತೆಯೇ ಎನ್ನುವ ಮಾತು ಜನಜನಿತವಾಗಿತ್ತು ಎನ್ನುತ್ತಾರೆ. ಆದರೆ, ಕಾದಂಬರಿಯ ಅಂತ್ಯ ಕೂಡಾ ಹೀಗೆಯೇ ಇದೆ.
ಈ ಚಿತ್ರದಲ್ಲಿ ಎಲ್ಲ ರೀತಿಯ ನಟನೆಗಳನ್ನು.. ಪೌರಾಣಿಕವಾಗಿ, ಸಾಮಾಜಿಕವಾಗಿ ಅಭಿನಯಿಸುವ ಎಲ್ಲ ಪಾತ್ರಗಳನ್ನು ಕೊಂಚ-ಕೊಂಚವಾಗಿ ಚಲನಚಿತ್ರದಲ್ಲಿಯೇ ಮಾಡಿದ್ದಾರೆ. ಕೊನೆಗೆ ಮಗನನ್ನು ಮೋಹಿಸುವ ತಾಯಿಯಾಗಿಯೂ ಅಭಿನಯಿಸಿದ್ದಾರೆ.
ತನ್ನ ನಟನೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು.. ದುಃಖದಿಂದ ಕಣ್ಣರೆಸಿಕೊಳ್ಳುವಂತೆ ಮಾಡುವ ನಟನೆ ಆರತಿಯವರದ್ದು.
ರಾಮಣ್ಣನಾಗಿ ಆಕೆಯ ಬೆನ್ನಿಗೆ ನಿಂತು ಸದಾ ರಕ್ಷಕನಂತೆ ಕಾಪಾಡುವ ಪಾತ್ರದಲ್ಲಿ ಅಂಬರೀಶ್ ರವರು ಸೌಮ್ಯರೂಪಿ ಹಾಗೂ ಉಗ್ರ ರೂಪಿಯ ನಟನೆಗಳೆರಡನ್ನೂ ನಟಿಸಿದ್ದಾರೆ. ರಂಗನಾಯಕಿಯ ಪತಿಯಾಗಿ, ಗರ್ವದಿಂದ ಹಾಗೂ ಆಕೆಯನ್ನು ಕೇವಲ ತನ್ನವಳನ್ನಾಗಿ, ಗೃಹಿಣಿಯನ್ನಾಗಿ ಮಾತ್ರ ನೋಡುವ ಆಸೆ, ಸ್ವಾರ್ಥದಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಶೋಕ್ ರವರು. ಮಗನಾಗಿ ಚಂದು / ಶೇಖರ್ ಆಗಿ ನಟಿಸಿರುವ ರಾಮಕೃಷ್ಣರದ್ದಂತೂ.. ತುಂಟಾಟ ಹಾಗೂ ಹುಡುಗಾಟದ ನಟನೆಯ ಜೊತೆಗೆ ಭಾವುಕತೆಯನ್ನು ನೋಡುಗರಿಗೆ ದಾಟಿಸುತ್ತದೆ.
ವಿಜಯ ನಾರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿಗಳು, ಎಂ.ಎನ್ ವ್ಯಾಸರಾವ್ ಹಾಗೂ ದೊಡ್ಡರಂಗೇಗೌಡರು ಬರೆದಿರುವ ಗೀತೆಗಳನ್ನು ಈ ಚಲನಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅದರಲ್ಲೂ "ಕನ್ನಡ ನಾಡಿನ ರಸಿಕರ ಮನವ.. ಸೂರೆಗೊಂಡ ನಾಯಕಿ.. ರಂಗನಾಯಕಿ" ಎನ್ನುವ ಹಾಡು ಚಲನಚಿತ್ರಕ್ಕೆ ಬಹಳ ಹೊಂದಿಕೊಳ್ಳುವಂತಿದೆ.
ಕೆಲವೇ ಚಲನಚಿತ್ರಗಳು ಕಾದಂಬರಿಗಿಂತಲೂ ಒಂದು ಕೈ ಮುಂದೆ ಎನಿಸುವಂತೆ ಚಿತ್ರತವಾಗುತ್ತವೆ. ಈ ಚಲನಚಿತ್ರವನ್ನು ಕೂಡಾ ಅದೇ ಗುಂಪಿಗೆ ಸೇರಿಸಬಹುದು. ಆದರೆ, ಕಾದಂಬರಿಯ ಓದು ಬಹಳ ವಿಭಿನ್ನ ಅನುಭವವನ್ನು ಕೊಡುತ್ತದೆ.
ರಂಗನಾಯಕಿ ಕಾದಂಬರಿಯೂ ಸಾಹಿತ್ಯದ ದೃಷ್ಟಿಯಿಂದ ಬಹಳ ಅಮೂಲ್ಯವಾದದ್ದು. ಅಲ್ಲದೆ, ಮಾರ್ಮಿಕವಾದ ಘಟನೆಗಳನ್ನು ಹೇಗೆ ತಲುಪಿಸಬಹುದು ಹಾಗೂ ಅಶ್ಲೀಲದ ಎಳೆ ಇಲ್ಲದೆ, ಅತಿಶಯೋಕ್ತಿ ಇಲ್ಲದೆ ಹೇಗೆ ಒಂದು ಕಾದಂಬರಿಯ ಕಥೆಯನ್ನು ಓದುಗರಿಗೆ ದಾಟಿಸಬಹುದು ಎಂಬುದನ್ನು ತೋರಿಸುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ